ಎಷ್ಟೋ ಸಲ ಅನ್ನಿಸುತ್ತದೆ, ಶಾಲೆಯ ಅಧ್ಯಾಪಕರ ಆಸಕ್ತಿ, ಅನುಭವ ಮತ್ತು ಪ್ರಜ್ಞೆಗಳ ಗಾಢತೆಯನ್ನು ಹೊಂದಿಕೊಂಡು ಮಕ್ಕಳ ಬದುಕು ವಿಕಾಸವಾಗುತ್ತದೆ. ಅಧ್ಯಾಪಕರು ಪಠ್ಯೇತರವಾಗಿ ನಿರ್ಲಿಪ್ತರಾದರೆ ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗುತ್ತಾರೆ. ಅಂಕಪಟ್ಟಿಯಲ್ಲಿ ನೂರಕ್ಕೆ ನೂರು ಅಂಕ ಸಿಕ್ಕಿರಬಹುದು. ವಿದ್ಯಾರ್ಥಿಯ ಬೌದ್ಧಿಕ ಗಟ್ಟಿತನಕ್ಕೆ ಇದು ಮಾನದಂಡವಲ್ಲ.
ಶೈಕ್ಷಣಿಕ ವಿಚಾರ ಬಂದಾಗ ಎಲ್ಲವೂ ನಗರ ಕೇಂದ್ರಿತ ವ್ಯವಸ್ಥೆ. ಆ ವ್ಯವಸ್ಥೆಯ ಕೂಪದೊಳಗೆ ಎಲ್ಲಾ ಶೈಕ್ಷಣಿಕ ವಿಚಾರಗಳನ್ನು ಕೂಡುವ ಯತ್ನ. ಹಾಗಾಗಿಯೇ ನೋಡಿ, ಅಧ್ಯಾಪಕರು ಪಾಠ ಮಾಡದಿದ್ದರೂ ಚಿಂತೆಯಿಲ್ಲ, ಬಿಸಿಯೂಟದ ಲೆಕ್ಕ ಮಾತ್ರ ಬರೆದಿಡಲೇ ಬೇಕು, ಸೈಕಲ್ಗಳ ಬ್ಯಾಲೆನ್ಸ್ಶೀಟ್ ತಯಾರಿಸಲೇಬೇಕು!
ಸುಳ್ಯಪದವು ಸರ್ವೋದಯ ಪೌಢ ಶಾಲೆಯ ವಿದ್ಯಾರ್ಥಿಗಳು 'ಗದ್ದೆಯಲ್ಲೊಂದು ದಿನ' ಎನ್ನುವ ವಿಶಿಷ್ಟವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಾಗ, 'ಪುರುಸೊತ್ತಿಲ್ಲ, ಯಾರಿಗೆ ಬೇಕು' ಎನ್ನುವ ನನ್ನ ಅಧ್ಯಾಪಕ ಸ್ನೇಹಿತರ ಗೊಣಗಾಟದ ಮಾತುಗಳು ನೆನಪಾದುವು. ಎಲ್ಲಾ ಅಧ್ಯಾಪಕರಂತೆ ಸುಳ್ಯಪದವು ಶಾಲೆಯ ಅಧ್ಯಾಪಕರಿದ್ದಾರೆ. ಅವರಿಗೂ ಮೀಟಿಂಗ್, ಬಿಸಿಯೂಟ.. ಗಳ ಲೆಕ್ಕಾಚಾರಗಳಿವೆ. ಆದರೆ ಪಠ್ಯೇತರವಾಗಿ ಹೆಚ್ಚು ತೊಡಗಿಸಿಕೊಂಡು, ವಿದ್ಯಾರ್ಥಿಗಳನ್ನೂ ಬೌದ್ಧಿಕವಾಗಿ ಗಟ್ಟಿಮಾಡುವ ಪುರುಸೊತ್ತು ಅವರಿಗೆ ಹೇಗೆ ಬಂತು?
ಹಳ್ಳಿ, ಕೃಷಿ, ಗ್ರಾಮೀಣ ವಿಚಾರಗಳು ಮಾತಿನ ವಸ್ತುವಾಗಿದೆಯಷ್ಟೇ. ರಾಜಕೀಯ ಕ್ಷೇತ್ರದಲ್ಲಿ ಕೃಷಿ ಒಂದು ಐಕಾನ್ ಅಷ್ಟೇ. ಗ್ರಾಮೀಣಾಭಿವೃದ್ಧಿಯ ನೈಜ ಕಾಳಜಿ ಬೇಕಾಗಿಲ್ಲ. ಆದರೆ ಮಣ್ಣಿನಲ್ಲೇ ಬೆರೆತು, ಕೃಷಿ ಸಂಸ್ಕೃತಿಯನ್ನು ರೂಢಿಸಿಕೊಂಡ ಅಧ್ಯಾಪಕರು ತಮ್ಮ ವಿದ್ಯಾರ್ಥಿಗಳಲ್ಲೂ ಅಂತಹ ಸಂಸ್ಕೃತಿಯನ್ನು ಕಾಣುತ್ತಾರೆ. ಹಾಗಾಗಿಯೇ ನೋಡಿ, ಕೆಲವೊಂದು ಖಾಸಗಿ, ಸರಕಾರಿ ಶಾಲೆಗಳಲ್ಲೂ ಕೃಷಿ, ಗ್ರಾಮೀಣ ಪಾಠಗಳು ಜೀವಂತವಾಗಿರುತ್ತದೆ. ಈ ಶಾಲೆಯ ವಿದ್ಯಾರ್ಥಿಗಳಿಗೆ ಗೊತ್ತು, 'ಅಡಿಕೆಯು ಮರದಲ್ಲಿ ಆಗುತ್ತದೆ, ಶುಂಠಿ ಮಣ್ಣಿನೊಳಗೆ ಬೆಳೆಯುತ್ತದೆ..'!
ಸುಳ್ಯಪದವು ಶಾಲೆಯ ವಿದ್ಯಾರ್ಥಿಗಳು 'ಗದ್ದೆಯಲ್ಲೊಂದು ದಿನ'ದಲ್ಲಿ ಕೆಸರಿಗಿಳಿದರು, ಆಟವಾಡಿದರು, ಬಿದ್ದರು, ಹೊರಳಾಡಿದರು, ಕೇಕೇ ಹಾಕಿ ಮನದಣೀಯ ಖುಷಿ ಪಟ್ಟರು. ಖುಷಿ, ನೆಮ್ಮದಿಗಳನ್ನು ಹುಡುಕುವ ನಮಗೆ ಮನದಣೀಯ ನಗಲು, ಬಾಯಿ ತುಂಬಾ ಮಾತನಾಡಲು ಪುರುಸೊತ್ತಿಲ್ಲ. ಮಕ್ಕಳ ಖುಷಿಗೆ ಶೈಕ್ಷಣಿಕ ವ್ಯವಸ್ಥೆಗಳು ಅಡ್ಡಿಯಾಗಿವೆ. ಪಠ್ಯಗಳು ಬದುಕಿಗೆ ಬೇಕಾದುದನ್ನು ಹೇಳಿಕೊಡುತ್ತಿಲ್ಲ. ಪಠ್ಯಗಳಲ್ಲಿ ಕೃಷಿ, ಗ್ರಾಮೀಣ ವಿಚಾರಗಳ ಸೊಲ್ಲಿಲ್ಲ. ಗದ್ದೆ ಯಾವುದು, ನೇಜಿ ಯಾವುದು, ಭತ್ತ ಯಾವುದರಿಂದ ಬೆಳೆಯುತ್ತಾರೆ ಮೊದಲಾದ ಪ್ರಶ್ನೆಗಳಿಗೆ ವಿದ್ಯಾರ್ಥಿಗಳದು ಮೌನವೇ ಉತ್ತರ.
ಸರ್ವೋದಯ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಇಂದಾಜೆ-ಪೈರುಪುಣಿ ನಾರಾಯಣ ಭಟ್ಟರ ಗದ್ದೆಯಲ್ಲಂದು ಕೆಸರು ಗದ್ದೆಗೆ ಇಳಿದರು. ಭತ್ತದ ನೇಜಿ ನೆಟ್ಟರು. ವಿದ್ಯಾರ್ಥಿಗಳಿಗೆ ಹಿರಿಯರಿಂದ ನೇರ ಪಾಠ. ಶಾಲೆಯು ಮೂರು ವರುಷಗಳಿಂದ ಇಂತಹ ಶಿಕ್ಷಣವನ್ನು ಮಕ್ಕಳಿಗೆ ಕಲಿಸುತ್ತದೆ. ಇಲ್ಲಿ ಕಲಿತವರು ಮುಂದಿನ ವಿದ್ಯಾಭ್ಯಾಸಕ್ಕಾಗಿ ನಗರ ಸೇರುತ್ತಾರೆ. ನಗರ ಸಂಸ್ಕೃತಿಯು ಅವರನ್ನು ನುಂಗಿ ಬಿಡುವ ಮೊದಲೇ ಹಳ್ಳಿ ಸಂಸ್ಕೃತಿ ಮಕ್ಕಳಿಗೆ ಮನದಟ್ಟಾಗಬೇಕು ಎನ್ನುವ ಉದ್ದೇಶ ಎನ್ನುತ್ತಾರೆ ಶಾಲೆಯ ಮುಖ್ಯ ಗುರು ಶಿವರಾಮ ಹೆಚ್.ಡಿ. ಮೂಲತಃ ಇವರು ಕೃಷಿಕರು. ಹಾಗಾಗಿಯೇ ನೋಡಿ, ವಿದ್ಯಾರ್ಥಿಗಳಿಗೂ ಕೃಷಿ, ಗ್ರಾಮೀಣ ವಿಚಾರಗಳು ತಿಳಿಯಬೇಕೆನ್ನುವ ದೂರದೃಷ್ಟಿ.
ಮಂಗಳೂರಿನ ವಿಜಯ ಗ್ರಾಮೀಣ ಪ್ರತಿಷ್ಠಾನ, ಈಶ್ವರಮಂಗಲ ವಿಜಯಾ ಬ್ಯಾಂಕ್, ಗ್ರಾಮಾಭಿವೃದ್ಧಿ ಸಮಿತಿಯ ಆಯೋಜನೆ. ನೇಜಿ ನೆಟ್ಟಾಯಿತು, ಪೈರನ್ನು ಕಟಾವ್ ಮಾಡುವ ವಿಧಾನ ಮಕ್ಕಳಿಗೆ ಕಲಿಸುವ ಯೋಚನೆ ಶಾಲೆಗಿದೆ. ಕಟಾವ್ ಆಗುವ ಹೊತ್ತಿಗೆ ವಿದ್ಯಾಥರ್ಿಗಳಿಗೆ ಪರೀಕ್ಷಾ ಒತ್ತಡ. ಆದರೂ ಈ ಶಿಕ್ಷಣದಿಂದ ಮಕ್ಕಳನ್ನು ವಂಚಿತರನ್ನಾಗಿ ಮಾಡುವುದಿಲ್ಲ ಎನ್ನುತ್ತಾರೆ ಶಾಲೆಯ ವರಿಷ್ಠ ಹಾಗೂ ಗ್ರಾಮಾಭಿವೃದ್ಧಿ ಸಮಿತಿಯ ಮುಖ್ಯಸ್ಥ ಗೋವಿಂದ ಭಟ್. ಎರಡು ವರುಷದ ಹಿಂದೆ ಸುಳ್ಯ ಸನಿಹದ ಪೆರಾಜೆ ಕುಂಬಳಚೇರಿ ಸರಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಭತ್ತದ ಬೇಸಾಯದ ಶಿಕ್ಷಣ ನಡೆದಿತ್ತು. ಭತ್ತ ಕಟಾವ್, ನೇಜಿಯನ್ನು ಕಟ್ಟ (ಸೂಡಿ) ಕಟ್ಟುವ ರೀತಿ, ಭತ್ತವನ್ನು ಬೇರ್ಪಡಿಸುವುದು, ಕುಟ್ಟುವುದು.. ಹೀಗೆ ಕಲಾಪ ನಡೆದಿತ್ತು. ಅಲ್ಲೋ ಇಲ್ಲೋ ಕೆಲವು ಶಾಲೆಗಳಲ್ಲಿ ಇಂತಹ ನೇರ ಶಿಕ್ಷಣದ ಯತ್ನ ಆಗುತ್ತಿದೆ.
ಸ್ಕೂಲ್ ಡೇ, ಕ್ರೀಡೆ, ಪ್ರವಾಸ.. ಮೊದಲಾದ ವಿಚಾರಗಳಿಗೆ ಎಷ್ಟೊಂದು ಸಮಯ ವಿನಿಯೋಗವಾಗುವುದಿಲ್ಲ? ಇದರ ಜತೆಗೆ ಕೃಷಿ, ಗ್ರಾಮೀಣ ವಿಚಾರಗಳ ಪಠ್ಯೇತರ ಚಟುವಟಿಕೆಗಳಿಗೂ ಸಮಯ ಮೀಸಲಿಡುವ ಪರಿಪಾಠ ರೂಢಿಸಿಕೊಳ್ಳಬೇಕು. ಇದೆಲ್ಲಾ ಸರಕಾರಿ ಕಾನೂನುಗಳಿಂದ ಆಗುವಂತಹುದಲ್ಲ. ವಾರಕ್ಕೊಮ್ಮೆ ಒಂದು ಅವಧಿಯು ಕೃಷಿ ವಿಚಾರಗಳಿಗೆ ಸೀಮಿತವಾಗಿರಲಿ. ಸಂಪನ್ಮೂಲ ವ್ಯಕ್ತಿಗಳಿಂದ ವಿದ್ಯಾರ್ಥಿಗಳಿಗೆ ಕೃಷಿ ಅನುಭವ, ವಿಚಾರಗಳನ್ನು ಹೇಳುವ ವ್ಯವಸ್ಥೆ ಮಾಡಿಕೊಳ್ಳಬಹುದು. ಕೃಷಿ ಕ್ಷೇತ್ರಗಳಿಗೆ ಪ್ರವಾಸಗಳನ್ನು ಹಮ್ಮಿಕೊಳ್ಳಬಹುದು. ಅನುಭವಿ ಕೃಷಿಕರೊಂದಿಗೆ ಸಂದರ್ಶನ ಮಾಡಿಸಬಹುದು. ಈಗಾಗಲೇ ಬಂಟ್ವಾಳ ತಾಲೂಕಿನ ಕಲ್ಲಂಗಳ ಸರಕಾರಿ ಶಾಲೆಯು ಈ ದಿಸೆಯಲ್ಲಿ ಸಕ್ರಿಯವಾಗಿರುವುದು ಗುರುತರ.
'ಅವನು ಬಸವ, ಇವಳು ಕಮಲ..' ಎನ್ನುವ ಪಠ್ಯದಲ್ಲಿ ಬೆಳೆದ ವಿದ್ಯಾರ್ಥಿಗಳು ಸದೃಢವಾದ ಬದುಕನ್ನು ಹೊಂದಿರುವುದನ್ನು ಕಾಣುತ್ತೇವೆ. ಆದರೆ ಆಧುನಿಕ ಭಾರತಕ್ಕೆ ಈ ಪಠ್ಯ ಢಾಳಾಗಿ ಕಂಡಿರುವುದು ಕಾಲದ ದೋಷವಲ್ಲ, ಅದನ್ನು ಕಾಣುವ ಕಣ್ಣಿನ, ಮನಸ್ಸಿನ ದೋಷ, ಎಲ್ಲವನ್ನೂ ಮತೀಯ, ರಾಜಕೀಯ ನೋಟದಿಂದಲೇ ನೋಡುವ ಮನಸ್ಸುಗಳನ್ನು ರೂಪುಗೊಳಿಸುವ ಅಜ್ಞಾತ ವ್ಯವಸ್ಥೆ ಎಲ್ಲಿಯವರೆಗೂ ನಮ್ಮಲ್ಲಿರುತ್ತದೋ, ಅಲ್ಲಿಯ ವರೆಗೆ ಬೌದ್ಧಿಕ ಗಟ್ಟಿತನಕ್ಕೆ ಸಹಕಾರಿಯಾಗುವ ಯಾವುದೇ ಪಠ್ಯ ರಚನೆಯಾಗುವುದಿಲ್ಲ!
0 comments:
Post a Comment