ಸೊಳ್ಳೆ ಬತ್ತಿಯ ರಾಸಾಯನಿಕ ಅಪಾಯಗಳ ಅರಿವಿದ್ದೂ ಬಳಸುತ್ತಿದ್ದೇವೆ! ಅದರಲ್ಲಿರುವ ಆರ್ಗಾನೋಕ್ಲೋರಿನ್ ವರ್ಗದ ವಿಷ ಅಪಾಯಕಾರಿ. ವಸತಿಗೃಹದಿಂದ ಆಸ್ಪತ್ರೆವರೆಗೆ ಸೊಳ್ಳೆ ಓಡಿಸಲು ಅಲ್ಲ, ಸಾಯಿಸಲು ಸೊಳ್ಳೆ ಬತ್ತಿಗೆ ಬಹು ಬೇಡಿಕೆ. ಸೊಳ್ಳೆ ಸಾಯುತ್ತದೋ ಇಲ್ವೋ ನೋಡಿದವರಾರು?
ದಕ್ಷಿಣ ಕನ್ನಡ ಜಿಲ್ಲೆಯ ಮುಂಡಾಜೆಯ ಕೃಷಿಕ ದಯಾನಂದ ಪಟವರ್ಧನ್ ಅಡಿಕೆಯಿಂದ ಸೊಳ್ಳೆ ಬತ್ತಿ ತಯಾರಿಸಿದ್ದಾರೆ. ಪ್ರಾಯೋಗಿಕವಾಗಿ ಹೊರ ಬಂದ 'ಮೋಸ್ ಕ್ವಿಟ್' ಉತ್ಪನ್ನಕ್ಕೆ ಗ್ರಾಹಕ ಸ್ವೀಕೃತಿ ಆಶಾದಾಯಕ.
ನಾವು ವೀಳ್ಯ ತಿನ್ನುತ್ತೇವೆ. ಜತೆಗೆ ಅಡಿಕೆ ಜಗಿದರೆ ಕೆಲವರಿಗೆ ತಲೆ ತಿರುಗಿದ ಅನುಭವ ಆಗುತ್ತದೆ. ಅಡಿಕೆ ಸಿಪ್ಪೆಯನ್ನು ಉರಿಸಿದಾಗ ಹೊಗೆ ಏಳುತ್ತದೆ. ಆ ಹೊಗೆಗೆ ಅಮಲಿನ ಗುಣವಿದೆ. ಮನುಷ್ಯರಿಗೆ ಈ ರೀತಿಯ ಅನುಭವ ಆಗುವುದಾದರೆ ಸೊಳ್ಳೆಗಳಿಗೂ ಅಮಲು ಬರಬೇಕಲ್ವಾ, ಈ ಪ್ರಶ್ನೆಗಳು, ಆ ಬಳಿಕದ ಯೋಚನೆಗಳು ದಯಾನಂದರಿಗೆ ಸೊಳ್ಳೆ ಬತ್ತಿ ತಯಾರಿಸಲು ಉತ್ತೇಜನ ನೀಡಿವೆ.
ಅಡಿಕೆಯಲ್ಲಿರುವ ಆಲ್ಕೊಲಾಯ್ಡ್ ಅಂಶ ಸೊಳ್ಳೆಗಳಿಗೆ ಅಮಲು ಬರಿಸುತ್ತದೆ. ಇದರ ಹೊಗೆಯಲ್ಲಿ ಅಡ್ಡ ಪರಿಣಾಮಗಳಿಲ್ಲ. ಇದಕ್ಕೆ ವೈದ್ಯರ ಶಿಫಾರಸ್ಸಿದೆ. ಬತ್ತಿಯ ಉದ್ದ ಐದು ಇಂಚು. ಐದು ಗ್ರಾಮ್ ತೂಕ. ಎರಡು ಗಂಟೆ ಉರಿಯುವ ಸಾಮಥ್ರ್ಯ. ಆರು ಗಂಟೆಗಳ ಕಾಲ ಸೊಳ್ಳೆಗಳಿಗೆ ಅಮಲು! 'ಸೊಳ್ಳೆ ಬತ್ತಿಯ ಹೊಗೆಯಿಂದ ಸೊಳ್ಳೆಗಳು ಸಾಯುವುದಿಲ್ಲ. ನಿಷ್ಕ್ರಿಯವಾಗುತ್ತವೆ' ಎನ್ನುತ್ತಾರೆ.
ಈ ಉತ್ಪನ್ನಕ್ಕೆ ಚಾಲಿ ಅಡಿಕೆ ಬಳಕೆ. ಅದಕ್ಕೆ ಬೆರಣಿ ಹುಡಿ ಮತ್ತು ಗಂಜಲದ ಮಿಶ್ರಣ. ಪಾಕ ಅಂಟು ಬರಲು ಸ್ವಲ್ಪ ಮೆಂತೆ. ಇವೆಲ್ಲಾ ಪುಡಿ ಯಂತ್ರದಲ್ಲಿ ಮಿಶ್ರವಾಗುತ್ತದೆ. ಈ ಪಾಕವನ್ನು ಹೈಡ್ರಾಲಿಕ್ ಯಂತ್ರದ ಮೂಲಕ ಒತ್ತುತ್ತಾರೆ. ಪಾಕವು ಹೊರಬರುವ ಬತ್ತಿಗಳನ್ನು ತುಂಡರಿಸಿ ಡ್ರೈಯರಿನಲ್ಲಿ ಬಿಸಿ ಸ್ನಾನ.
ಮೊದಲಿಗೆ ಬೆರಣಿಯ ಬದಲಿಗೆ ಸೆಗಣಿ ಬಳಸಿದರು. ಅದು ಡ್ರೈಯರಿನಲ್ಲಿ ಒಣಗುವಾಗ ಕರಟಿದ ವಾಸನೆ ಬಂತು. ಬತ್ತಿಯ ಬಣ್ಣವೂ ಬದಲಾಯಿತು. ಹೊರ ಬರುವಾಗ ಕಡ್ಡಿಗಳಲ್ಲಿ ಹೆಚ್ಚಿನವು ಬಿರಿದಿತ್ತು.
ನಾಲ್ಕು ದಶಕದ ಹಿಂದೆ ಬೆಂಗಳೂರಿನ ಕಂಪೆನಿಯೊಂದರ ವರ್ಕ್ ಶಾಪಿನಲ್ಲಿ ದುಡಿದಿದ್ದರು. ಯಂತ್ರಗಳ ಸೂಕ್ಷ್ಮ ವಿಚಾರಗಳ ಬಗ್ಗೆ ಅನುಭವ ಗಳಿಸಿದ್ದರು. ಇವರ ಕೆಲಸಕ್ಕೆ ಬೇಕಾದ ನಿರ್ದಿಷ್ಟ ಯಂತ್ರದ ಮಾದರಿ ನಕ್ಷೆ ಸಿದ್ಧವಾದಾಗ ದಶಕ ಸಂದಿತ್ತು. ಕೊಯಂಬತ್ತೂರಿನಲ್ಲಿ ಯಂತ್ರ ತಯಾರಿ.
ಅಡಿಕೆಯಿಂದ ಸೊಳ್ಳೆ ಬತ್ತಿ ಪಟವರ್ಧನರ ದೀರ್ಘ ಕಾಲದ ಕನಸು. ಹತ್ತು ವರುಷ ಯಂತ್ರ ಮತ್ತು ಬತ್ತಿಯ ತಾಂತ್ರಿಕ ಮಾಹಿತಿಗಾಗಿ ಜಾಲತಾಣ ಜಾಲಾಟ. ವಿವಿಧ ವಿನ್ಯಾಸಗಳಲ್ಲಿ ಬತ್ತಿ ತಯಾರಿ. ಆಪ್ತ ವಲಯದಲ್ಲಿ ಹಂಚಿ ಹಿಮ್ಮಾಹಿತಿ ಪಡೆದರು. ಈ ಯತ್ನಗಳಿಗೆ ಒತ್ತಾಸೆಯಾಗಿ ನಿಂತದ್ದು ಸ್ನೇಹಿತ ಗಜಾನನ ವಝೆ.
ಬೇಡಿಕೆಗನುಸಾರ ಉತ್ಪಾದನೆ. ವಾರದೊಳಗೆ ಸರಬರಾಜು. ನಾಲ್ಕು ಮಂದಿ ಸಹಾಯಕರು. ಮಧ್ಯವರ್ತಿಗಳಿಲ್ಲದ ವ್ಯವಹಾರ. ತಿಂಗಳಿಗೆ ಸುಮಾರು ಒಂದೂವರೆ ಲಕ್ಷದಷ್ಟು ಬತ್ತಿ ತಯಾರಿ. ಬೇಡಿಕೆ ಬಂದ ಹಾಗೆ ಉತ್ಪಾದನೆ. ಒಮ್ಮೆ ಬಳಸಿ ನೋಡಿದ ನಗರ ಗ್ರಾಹಕರು ಪುನಃ ಖರೀದಿಸುತ್ತಿದ್ದಾರಂತೆ. ಲಾಡ್ಜಿಂಗ್, ರೆಸಾರ್ ಮತ್ತು ಆಸ್ಪತ್ರೆಗಳಲ್ಲಿ ಈ ರಾಸಾಯನಿಕರಹಿತ ಸೊಳ್ಳೆಬತ್ತಿಗೆ ಬೇಡಿಕೆ ಕುದುರಬಹುದು.
ಈ ವರೆಗಿನ ಯಂತ್ರಾಭಿವೃದ್ಧಿಗಾಗಿ ಮತ್ತು ಸಂಶೋಧನೆಗೆ ದಯಾನಂದ್ ಕಿಸೆಯಿಂದ ಸಾಕಷ್ಟೂ ವ್ಯಯಿಸಿದ್ದಾರೆ. ಇನ್ನಷ್ಟು ಯಾಂತ್ರಿಕ ಮತ್ತು ಉತ್ಪನ್ನದ ಸುಧಾರಣೆ ಮನದಲ್ಲಿದೆ. ಸಂಘಸಂಸ್ಥೆಗಳು ಆಥರ್ಿಕ ನೆರವಿತ್ತರೆ ಇನ್ನಷ್ಟು ಅಭಿವೃದ್ಧಿಪಡಿಸಬಲ್ಲೆ ಎನ್ನುವ ವಿಶ್ವಾಸ ಅವರಿಗಿದೆ.
(99643 52524)
1 comments:
ಅಡಕೆ ಬೆಳೆಗಾರರಿಗೂ ಹಾಗೂ ಜನಗಳ ಆರೋಗ್ಯಕ್ಕೊ ತುಂಬಾ ಉಪಯೋಗಕಾರಿ.
Post a Comment