Tuesday, November 5, 2013

ವರ್ಷಕ್ಕೆ ನಾಲ್ಕು ತಿಂಗಳು 'ಅಕ್ಕಿಖರೀದಿ'ಗೆ ರಜೆ!




             ನಾವು ಬೆಳೆದ ಅಕ್ಕಿಯ ಅನ್ನವನ್ನು ಉಣ್ಣುವುದು ಅಭಿಮಾನ. ಅಕ್ಕಿಯ ಕ್ರಯ ಏರುತ್ತಿದೆ. ಅವನವನ ಮನೆವೆಚ್ಚಕ್ಕೆ ಭತ್ತದ ಬೇಸಾಯ ಮಾಡುವುದು ಮುಂದಿನ ದಿನಗಳಲ್ಲಿ ಅಗತ್ಯ, ಎನ್ನುವ ರಾಮಣ್ಣ ಗೌಡರು ತಾವು ಅಂಗಳದಲ್ಲಿ ಬೆಳೆದ ಭತ್ತದ ಕೃಷಿಯನ್ನು ತೋರಿಸುತ್ತಾ, ಬೆಳಿಗ್ಗೆ ಎದ್ದಾಕ್ಷಣ ಅಂಗಳ ನೋಡಿದರೆ ಸಾಕು, ಮನಸ್ಸು ತುಂಬಿ ಬರುತ್ತದೆ, ಹಗುರವಾಗುತ್ತದೆ, ಎಂದರು.

               ಪುತ್ತೂರು ತಾಲೂಕು ಮಾಡಾವು 'ಜ್ಯೋತಿ ನಿಲಯ'ದ ರಾಮಣ್ಣ ಗೌಡರ ಮುಖ್ಯ ಕೃಷಿ ಅಡಿಕೆ. ಮೂರು ವರುಷದ ಹಿಂದೆ ಕೃಷಿ ಇಲಾಖೆಯ ನಿದರ್ೇಶನದಲ್ಲಿ ಮನೆಯಂಗಳದಲ್ಲಿ ಕೃಷಿ ಮಾಹಿತಿ ಕಾರ್ಯಕ್ರಮ ನಡೆದಿತ್ತು. ಅಂದು ಭತ್ತದ ಬೇಸಾಯದ ಕುರಿತು ಅನುಭವಿಗಳು ನೀಡಿದ ಮಾಹಿತಿಯು ಭತ್ತದ ಕೃಷಿಯತ್ತ ಒಲವನ್ನು ಮೂಡಿಸಿತು.

                 ಪ್ರತ್ಯೇಕವಾಗಿ ಬೇಸಾಯ ಮಾಡಲು ಜಾಗದ ಅಭಾವ. ಅಡಿಕೆ ಒಣಗಿಸುವ ಅಂಗಳದಲ್ಲೇ ಭತ್ತದ ಕೃಷಿ ಶುರು. ಸುಮಾರು ನಲವತ್ತು ಸೆಂಟ್ಸ್ ಆವರಿಸುವ ಜಾಗ ಭತ್ತದ ಬೇಸಾಯಕ್ಕೆ ಮೀಸಲು. ಈ ವರುಷದಿಂದ ಶ್ರೀ ಪದ್ಧತಿ ಕ್ರಮದಲ್ಲಿ ಕೃಷಿ. ಉಳುಮೆ ಬೇಡ. ಅಂಗಳವನ್ನು ಗದ್ದೆಯನ್ನಾಗಿ ಮಾರ್ಪಡಿಸಬೇಕಾಗಿಲ್ಲ. ನೀರು ನಿಲ್ಲಿಸಬೇಕಾಗಿಲ್ಲ.

                 ರಾಮಣ್ಣ ಗೌಡರು ಶ್ರೀಪದ್ಧತಿಯಲ್ಲಿ ಕೃಷಿ ಮಾಡಿದ ಕೃಷಿಕರ ಅನುಭವ ಪಡೆದರು. ಇಲಾಖೆಯು ಮಾಹಿತಿ ನೀಡಿತು. ನೋಡಿ. ಒಂದೊಂದು ಬುಡದಲ್ಲಿ ಎರಡು ಸಸಿ ನೆಟ್ಟಿದ್ದೆ. ಅವುಗಳೆಲ್ಲಾ ಇಪ್ಪತ್ತೈದಕ್ಕೂ ಮಿಕ್ಕಿ ಪಿಳ್ಳೆ ಬಿಟ್ಟಿರೋದು,' ಎನ್ನುವಾಗ ಖುಷಿಯ ನೆರಿಗೆ ಮುಖದಲ್ಲಿ ಮೂಡಿತು. ಸ್ಲರಿ ಸಿಂಪಡಣೆ ಹೊರತು ಪಡಿಸಿ ಮಿಕ್ಕ ಯಾವುದೇ ಗೊಬ್ಬರ ಉಣಿಸಿಲ್ಲ.

                    ಅಂಗಳಲ್ಲಿ ಮತ್ತು ಅಂಗಳದಿಂದ ಅನತಿ ದೂರದಲ್ಲಿ - ಹಿಗೆ ಎರಡು ಪ್ಲಾಟ್ ಮಾಡಿಕೊಂಡಿದ್ದಾರೆ. ಒಂದು ಪ್ಲಾಟಿಗೆ ಬೆಂಕಿ ರೋಗ ವಕ್ಕರಿಸಿತು. 'ಇದೆಲ್ಲಾ ಮಾಮೂಲಿ. ಎಲ್ಲಾ ಕಡೆ ಇದೆ' ಎಂದಿತು ಇಲಾಖೆ. 'ಪೊಟಾಶ್ ಹೆಚ್ಚೇ ಉಣಿಸಿದರೆ ಕಂಟ್ರೋಲ್ ಬರಬಹುದು' ಎಂದರು. ಸೆಗಣಿ ನೀರು ಮತ್ತು ಬೂದಿಯನ್ನು ಮಿಶ್ರಮಾಡಿ ಉಣಿಸಿದರು. 'ಹೇಳುವಂತಹ ಫಲಿತಾಂಶವಿಲ್ಲ. ನಾವು ತಿನ್ನುವ ಆಹಾರವಲ್ವಾ. ರಾಸಾಯನಿಕ ಸಿಂಪಡಣೆ ಮಾಡಲು ಮನಸ್ಸು ಬರಲಿಲ್ಲ' ಎನ್ನುತ್ತಾರೆ.

                    ಕಳೆದ ವರುಷ ಸುಮಾರು ಮೂರು ಕ್ವಿಂಟಾಲ್ ಭತ್ತದ ಇಳುವರಿ. ಈ ವರುಷ ನಾಲ್ಕು ಕ್ವಿಂಟಾಲಿನತ್ತ ಲಕ್ಷ್ಯ. ರಾಮಣ್ಣ ಗೌಡರದು ಹನ್ನೆರಡು ಮಂದಿ ಸದಸ್ಯರ ಕೂಡು ಕುಟುಂಬ. 'ವರ್ಷದಲ್ಲಿ ನಾಲ್ಕು ತಿಂಗಳು ನಾವು ಬೆಳೆದ ಅಕ್ಕಿಯನ್ನು ಉಣ್ಣುತ್ತೇವೆ. ಮುಂದಿನ ಸಲದಿಂದ ಇನ್ನೂ ವಿಸ್ತಾರ ಮಾಡಬೇಕೆಂದಿದೆ', ಹೊಸ ಸುಳಿವು ನೀಡಿದರು. ನೀರು ನಿಲ್ಲಿಸದೆ ಕೃಷಿ ಮಾಡುವುದರಿಂದ ಇಲಿ ಕಾಟ ಜಾಸ್ತಿ.

                     ಹೈನುಗಾರಿಕೆಯು ಬದುಕಿನೊಂದಿಗೆ ಹೊಸೆದ ವೃತ್ತಿ. ಎಂಟು ಹಸುಗಳಿವೆ. ಐದು ಕರೆವಿನದು. ಮನೆಮಂದಿಯ ನಿರ್ವಹಣೆ. ಇವರಿಗೆ ಪುತ್ತೂರಿನಲ್ಲಿ 'ಸಂಗೀತ ಕ್ಯಾಂಟಿನ್' ಹೋಟೇಲಿದೆ. ದಿವಸಕ್ಕೆ ಸುಮಾರು 50-60 ಲೀಟರ್ ಲಭ್ಯ. ಇದರಲ್ಲರ್ಧ ಹೋಟೇಲಿಗೆ ಒಯ್ದರೆ, ಮಿಕ್ಕುಳಿದುದು ಡೈರಿಗೆ. ಕೆ.ಎಂ.ಎಫ್.ನಿಂದ ಕೆಯ್ಯೂರು ಗ್ರಾಮದಲ್ಲಿ ಅತಿ ಹೆಚ್ಚು ಹಾಲು ಹಾಕುವ ಹೈನುಗಾರನೆಂಬ ಪುರಸ್ಕಾರ ಪ್ರಾಪ್ತಿ.

                     ಸ್ಲರಿ, ಕಾಂಪೋಸ್ಟ್ ಅಡಿಕೆ ಕೃಷಿಗೆ ಒಳಸುರಿ. 'ಅಡಿಕೆ ತೋಟವಿದ್ದವರು ಹೈನುಗಾರಿಕೆ ಮಾಡಲೇಬೇಕು' ಎನ್ನುವ ನಿಲುವು. ಪಶುಆಹಾರಕ್ಕೆ ಬೇಕಾದ ಕಚ್ಚಾವಸ್ತುಗಳನ್ನು ತಂದು, ತಾವೇ ಪಾಕ ಮಾಡಿಕೊಳ್ಳುತ್ತಾರೆ. ಇವರಿಗೆ ಹೈನುಗಾರಿಕೆ ಎಂದೂ ಕಿರಿಕಿರಿ ಆದುದಿಲ್ಲ ಎನ್ನುವುದು ಗಮನಾರ್ಹ. ಅಝೋಲಾ ಬೆಳೆದು ಮಿತವಾಗಿ ಹಸುಗಳಿಗೆ ತಿನ್ನಿಸುತ್ತಾರೆ.

                     ಸುಮಾರು ನಾಲ್ಕು ದಶಕದಿಂದ ಪುತ್ತೂರಿನ ಬೈಪಾಸಿನಲ್ಲಿರುವ ಇವರ 'ಸಂಗೀತ ಕ್ಯಾಂಟಿನ್' ಕುರಿತು ಎರಡು ಮಾತು ಹೇಳಲೇಬೇಕು. ಇವರ ಸಹೋದರ ರಾಮಚಂದ್ರ ಗೌಡರ ಕೈರುಚಿಯನ್ನು ಉಣ್ಣುವುದಕ್ಕೆ ಬರುವ ಗ್ರಾಹಕರ ಗಡಣ ದೊಡ್ಡದು. ಗೊಣಗಾಟವಿಲ್ಲದೆ ಗ್ರಾಹಕರನ್ನು ಸಂತೃಪ್ತಿಪಡಿಸುವ ಅಣ್ಣ-ತಮ್ಮ ಇವರಿಬ್ಬರು ರಾಮ ಲಕ್ಷ್ಮಣರಿದ್ದಂತೆ ಎಂದರೆ ಅತಿಶಯೋಕ್ತಿಯಲ್ಲ. ವಾರದಲ್ಲಿ ಬಹುಪಾಲು ಇವರ ತೋಟದ ಉತ್ಪನ್ನಗಳು ಹೋಟೆಲಿನಲ್ಲಿ ಖಾದ್ಯವಾಗಿ ಉದರ ಸೇರುತ್ತವೆ.

                      ನಿಮ್ಮ ಹೋಟೆಲನ್ನು ಹುಡುಕಿ ಬರುವ ಗ್ರಾಹಕರಿದ್ದಾರೆ, ಇದರ ಮರ್ಮ ಏನು ಎಂದು ಪ್ರಶ್ನಿಸಿದೆ. ರಾಮಣ್ಣ-ರಾಮಚಂದ್ರ ಹೇಳುತ್ತಾರೆ, ಇದು ಗ್ಯಾಸ್ ಯುಗ. ನಾವು ಕಟ್ಟಿಗೆಯಲ್ಲೇ ಅಡುಗೆ ಮಾಡುತ್ತೇವೆ. ಹಾಗಾಗಿ ಖಾದ್ಯಕ್ಕೆ ರುಚಿ ಹೆಚ್ಚು. ಕಳೆದ ಮೂವತ್ತೆಂಟು ವರುಷದಿಂದ ಹೋಟೆಲಿನ ಅಡುಗೆ ಮನೆಗೆ ಗ್ಯಾಸ್ ಸಿಲಿಂಡರ್ ಬಂದಿಲ್ಲ. ಮುಖ್ಯವಾಗಿ ನಮ್ಮಲ್ಲಿಗೆ ಬರುವ ಗ್ರಾಹಕರು ಮನೆಗೆ ಬಂದ ನೆಂಟರಂತೆ. ಬಹುಶಃ ಈ ಪ್ರೀತಿ ಇರಬಹುದೇನೋ. ನಮ್ಮಲ್ಲಿ ಉಂಡವರು ಹರಸಿ ಹೋಗುತ್ತಾರೆ!.
                    
             ಹೋಟೇಲಿನಲ್ಲಿ ಉಳಿಯುವ ಅಡುಗೆ ತ್ಯಾಜ್ಯ, ಉಂಡ ಬಾಳೆಎಲೆಯನ್ನು ಸಂಗ್ರಹಿಸುತ್ತಾರೆ. ಮನೆಯ ಹಟ್ಟಿ ಪಕ್ಕ ಇರುವ ಕಾಂಪೋಸ್ಟ್ ಹೊಂಡಕ್ಕೆ ಸೇರಿಸುತ್ತಾರೆ. 'ಕೃಷಿಯಲ್ಲಿ ಯಾವುದೂ ವ್ಯರ್ಥವಲ್ಲ. ಜಾಣ್ಮೆಯಿಂದ ಕೃಷಿ ಮತ್ತು ಬದುಕನ್ನು ಸಮತೋಲನಗೊಳಿಸಿದರೆ ವಿಮುಖತೆ ಬಾರದು' ಎನ್ನುವ ಸಂದೇಶ ಅವರ ಬದುಕಿನಲ್ಲಿ ಕಂಡೆ. ಕೃಷಿ, ಹೈನುಗಾರಿಕೆ, ಹೋಟೆಲ್ ಉದ್ಯಮವನ್ನು ಜತೆಜತೆಯಾಗಿ ನಿಭಾಯಿಸುವ ರಾಮಣ್ಣ ಗೌಡರ ಕುಟುಂಬವು ಒಂದು ದಿವಸವೂ 'ನಮಗೆ ಕೃಷಿ ಸಾಕಪ್ಪಾ' ಎಂದು ಹೇಳಿಲ್ಲ. ಇವರು ಕೃಷಿಯ ವಿದ್ಯಮಾನಗಳತ್ತ ನಿತ್ಯ ಕುತೂಹಲಿ. (9480016812)


0 comments:

Post a Comment