Tuesday, November 5, 2013

'ಕೃಷಿಕನ ಸಮಯಕ್ಕೂ ಬೆಲೆಯಿದೆ'

  
                ಕೃಷಿಕ ಪೈಲೂರು ಶ್ರೀನಿವಾಸ ರಾವ್ (70) ಕೃಷಿ ಚಿಂತಕ. ಸುಳ್ಯ ಸನಿಹದ ಕುಕ್ಕುಜಡ್ಕದ ಹಳ್ಳಿಯಲ್ಲಿದ್ದು ಕೃಷಿ ಮಾಡುತ್ತಾ ಕೃಷಿಯನ್ನೂ ಓದುತ್ತಾರೆ! ಓದಿದ ಅನುಭವವನ್ನು ಕೇಳುವ ಮನಸ್ಥಿತಿಯವರೊಂದಿಗೆ ಹಂಚಿಕೊಳ್ಳುತ್ತಾರೆ. ಕೃಷಿ ಪಲ್ಲಟಗಳ ಕಾಲಮಾನದಲ್ಲೂ ರಾಯರು ಅಧೀರಾಗದೆ, 'ಬಂದುದನ್ನು ಬಂದ ಹಾಗೆ ಸ್ವೀಕರಿಸಬೇಕು' ಎಂಬ ಮನೋಬಲವನ್ನು ಗಟ್ಟಿಮಾಡಿಕೊಂಡವರು. ಪೈಲೂರು ಅವರೊಂದಿಗೆ ಮಾತುಕತೆಯ ಸಂದರ್ಭದಲ್ಲಿ ಹಾದು ಹೋದ ಕೃಷಿಬದುಕಿನ ಒಳನೋಟಗಳಲ್ಲಿ ಭೂತಕಾಲದ ಖುಷಿಯಿದೆ. ವರ್ತಮಾನದ ಸಂಕಟವಿದೆ. ಭವಿಷ್ಯದ ನಿರೀಕ್ಷೆಯಿದೆ, ಆಶಾಭಾವನೆಯಿದೆ. 

          ಕೃಷಿಕನಿಗೆ ತನ್ನ ಕೃಷಿ ಉತ್ಪನ್ನವನ್ನು ಮಾರುಕಟ್ಟೆ ಮಾಡಲು ಆಸಕ್ತಿಯಿರುವುದು ಸಹಜ. ಆದರೆ ತಾನು ಬೆಳೆದುದನ್ನು ತಾನು, ತನ್ನ ಕುಟುಂಬ ತಿನ್ನುವಲ್ಲಿ ಮೊದಲಿಗೆ ಆಸ್ಥೆ ವಹಿಸಬೇಕು. ಮನೆಯಲ್ಲಿ ಬೆಳೆದುದು ಎಲ್ಲವನ್ನೂ ಮಾರುವ ಚಾಳಿ ಯಾಕೆ?  ಸ್ವಲ್ಪ ಸ್ನೇಹಿತರಿಗೂ ಹಂಚಿದರೆ ಏನು?  ಅಗ ಪ್ರೀತಿ ವಿಶ್ವಾಸ ಬೆಳೆಯುತ್ತದೆ. ಅದು ದುಡ್ಡು ಕೊಟ್ರೆ ಸಿಗುವುದಿಲ್ಲ. 

          ಸಾಲವೆಂಬುದು ಬಾಳಿನ ಶೂಲ. ಸಾಲ ನೀಡಲು ಹಣಕಾಸು ಸಂಸ್ಥೆಗಳು ಪೈಪೋಟಿಯಲ್ಲಿವೆ. ಸುಲಭದಲ್ಲಿ ಸಿಗುತ್ತೆಂದು ಮಾರು ಹೋಗುವವರೇ ಹೆಚ್ಚು. ಪಡಕ್ಕೊಂಡ ಸಾಲ ಕೃಷಿ ಕೆಲಸಗಳಿಗೆ ವಿನಿಯೋಗವಾದರೆ ಸರಿ. ಆದರೆ ಹೆಚ್ಚಿನ ಸಾಲಗಳು ಕೃಷಿಯೇತರ ಉದ್ದೇಶಗಳಿಗಾಗಿ ವೆಚ್ಚವಾಗುವ ಸಂಗತಿ ಸರ್ವವೇದ್ಯ. ಸಾಲವನ್ನು ಕಟ್ಟಲಾಗದೆ ಕೊನೆಗೆ ಆತ್ಮಹತ್ಯೆಯ ದಾರಿ ಹಿಡಿಯವ ಎಷ್ಟು ಮಂದಿ ಬೇಕು? ಹಾಗಾಗಿ ಹಾಸಿಗೆ ಇದ್ದಷ್ಟೇ ಕಾಲು ಚಾಚಲು ಬಲವಂತದಿಂದ ರೂಢಿಸಿಕೊಳ್ಳಬೇಕು. 

          ಕೃಷಿಕನಾದವನಿಗೆ ಸ್ವತಃ ದುಡಿತದ ಅಭ್ಯಾಸದೊಂದಿಗೆ, ಕೆಲಸವನ್ನು ಮಾಡಿಸಲೂ ತಿಳಿದಿರಬೇಕು. ನಾವು ಒಂದು ಗಂಟೆಯಲ್ಲಿ ಮುಗಿಸುವ ಕೆಲಸಕ್ಕೆ ಸಹಾಯಕರಿಗೆ ಒಂದು ದಿನ ಬೇಕು. ಕೆಲಸ ಮಾಡಿಸುವಾಗಲೇ ಯೋಚನೆ, ಯೋಜನೆಯನ್ನು ಹಾಕಿಕೊಂಡರೆ ಸುಲಭವ. ಯಾವ ಕೆಲಸಕ್ಕೆ ಎಷ್ಟು ಸಮಯ ಬೇಕು? ವಿಪರೀತ ಬಿಸಿಲು ಇದ್ದಾಗ, ನೆರಳು ಇದ್ದಾಗ ಯಾವ ಕೆಲಸ? ನಾಲ್ಕು ಮಂದಿ ಇದ್ದರೆ  ಯಾವ ಕೆಲಸವನ್ನು ಹಂಚಬೇಕು? ಒಬ್ಬನೇ ಬಂದಾಗ ಹೇಗೆ ದುಡಿಸಿಕೊಳ್ಳಬೇಕು? ವೇತನ ಎಷ್ಟು ಕೊಡಬಹುದು? ಕನಿಷ್ಠ ಜ್ಞಾನವನ್ನು ಹೊಂದಿಲ್ಲದಿದ್ದರೆ ಕೃಷಿಯಲ್ಲಿ ಯಶಸ್ಸಾಗುವುದು ಕಷ್ಟ. ನೂರು ರೂಪಾಯಿ ಖರ್ಚು ಮಾಡಿ, ಹತ್ತು ರೂಪಾಯಿ ಉತ್ಪನ್ನ ಲಭ್ಯವಾದರೆ ಏನು ಪ್ರಯೋಜನ?

          ಅಧಿಕ ಉತ್ಪನ್ನವನ್ನು ಸುಲಭವಾಗಿ ಪಡೆಯಲು ರಾಸಾಯನಿಕ, ಕೀಟನಾಶಕಗಳ ಬಳಕೆ ಈಚೀಚೆ ಹೆಚ್ಚುತ್ತಿದೆ. ಇದರಿಂದಾಗಿ ಮಣ್ಣಿನ ಫಲವತ್ತತೆ, ಎರೆಹುಳ, ಅಣುಜೀವಿಗಳ ನಾಶ. ಜತೆಗೆ ಪರಿಸರ ನಾಶ. ಕೊನೆಗೆ ಬದುಕೂ ನಾಶ. ಈ ವರ್ತುಲದಿಂದ ಹೊರಬರಲು ಯತ್ನಿಸಲೇ ಬೇಕು. ತನ್ನ ತೋಟಕ್ಕೆ ಬೇಕಾಗುವಷ್ಟು ಗೊಬ್ಬರವನ್ನು ತಯಾರಿಸುವ ಜಾಣ್ಮೆ ಕಲಿತುಕೊಳ್ಳಬೇಕು. ಕೃಷಿಯ ಖರ್ಚು ವೆಚ್ಚಗಳ ಕುರಿತು ನಿಯಂತ್ರಣ ಅಗತ್ಯ. ಈ ವರುಷ ನಮ್ಮ ಜಮೀನಿನಲ್ಲಿ ಒಟ್ಟು ಎಷ್ಟು ಉತ್ಪನ್ನವಾಗಬಹುದು? ಕನಿಷ್ಠ ಧಾರಣೆ ಎಷ್ಟು ಸಿಗಬಹುದು? ಎಂಬ ಲೆಕ್ಕಾಚಾರವನ್ನು ಹಾಕಿಟ್ಟುಕೊಳ್ಳಬೇಕು. ಸಿಕ್ಕ ಲಾಭಾಂಶದಲ್ಲಿ ಮೂರನೇ ಒಂದಂಶ ಕೃಷಿಗೆ ಬಳಸಿ. ನಂತರದ ಮೂರನೇ ಒಂದಂಶ ಜೀವನ ನಿರ್ವಹಣೆಗೆ ಮತ್ತು ಮಿಕ್ಕ ಮೂರನೇ ಒಂದನ್ನು ಉಳಿತಾಯ ಮಾಡಿ. ಕೃಷಿಕ ತನ್ನ ಲೆಕ್ಕವನ್ನು ತಾನು ಬರೆಯಬೇಕು. ಅಗ ಎಲ್ಲೆಲ್ಲಿ ಖಚರ್ು ಕಡಿಮೆ ಮಾಡಬಹುದೆನ್ನುವ ಪ್ಲಾನ್ ಮಾಡಿಕೊಳ್ಳಲು ಅನುಕೂಲ.

          ಕೃಷಿಕನ ಸಮಯಕ್ಕೂ ಬೆಲೆಯಿದೆ. ಹಳ್ಳಿಯಲ್ಲೇ ಸರಿದೂಗಿಸಬಹುದಾದ ಸಣ್ಣ ಪುಟ್ಟ ಕೆಲಸಗಳಿಗೂ ನಗರಕ್ಕೆ ಓಡುವುದರಿಂದ ಸಮಯವೂ ಹಾಳು, ಕೃಷಿಯೂ ಹಾಳು. ಕರೆ ಬಂತೆಂದು ಎಲ್ಲಾ ಸಮಾರಂಭಗಳಿಗೂ ಹೋಗುತ್ತಾ ಇದ್ದರೆ ಅದೇ ಕೆಲಸ ಮಾಡಬೇಕಷ್ಟೇ. ಅಗತ್ಯಬಿದ್ದರೆ ಮಾತ್ರ ಭಾಗವಹಿಸೋಣ. ಇನ್ನೊಬ್ಬರನ್ನು ತೃಪ್ತಿಪಡಿಸಲು, ಉದ್ಧಾರ ಮಾಡಲು ನಿಮ್ಮ ಅಮೂಲ್ಯ ಸಮಯ ಹಾಳುಮಾಡಬೇಡಿ. 

          ಬೇರೆ ತೋಟಗಳ ವೀಕ್ಷಣೆ, ಅಲ್ಲಿನ ಕೃಷಿಕರೊಂದಿಗೆ ಮುಖಾಮುಖಿಯಾದಾಗ ಕಷ್ಟ-ಸುಖಗಳ ವಿನಿಮಯವಾಗುವುದು. ಜ್ಞಾನ ಹೆಚ್ಚುವುದು. ಕೃಷಿ ಪತ್ರಿಕೆಯನ್ನು ಓದುವ ಅಭ್ಯಾಸವಿಟ್ಟುಕೊಂಡರೆ ಬೌದ್ಧಿಕ ಸಂಪತ್ತು ಅಪ್ಡೆಟ್ ಆಗುತ್ತಿರುತ್ತದೆ. ವಾಹಿನಿಗಳ ಕೃಷಿ ಕಾರ್ಯಕ್ರಮಗಳನ್ನು ನೋಡುತ್ತಿದ್ದರೆ ದೇಶಮಟ್ಟದಲ್ಲಿ ಏನೇನೂ ಬದಲಾವಣೆಗಳಾಗುತ್ತಿವೆ ಎಂಬ ಅರಿವು ಉಂಟಾಗುತ್ತದೆ. ಆಕಾಶವಾಣಿಯ ಕೃಷಿ ಕಾರ್ಯಕ್ರಮಗಳನ್ನು ಆಲಿಸುವ ಹವ್ಯಾಸವಿಟ್ಟುಕೊಳ್ಳಿ.
ನಾನು ಬೆಳ್ಳಂಬೆಳಿಗ್ಗೆ ಏಳುತ್ತೇನೆ. ಮನೆ, ಹಿತ್ತಿಲು ಶುಚಿಯಾಗಿಡುವುದು ಬದುಕಿಗಂಟಿದ ಶಿಸ್ತು. ನಿತ್ಯ ತೋಟಕ್ಕೆ ಎರಡು ಸಲ ಪಯಣ. ವಾರಕ್ಕೆ ಎರಡು ಸಲ ಅಂಚೆ ತರಲು ಹತ್ತಿರದ ಪೇಟೆಗೆ ಸವಾರಿ. ಹಲವು ವರುಷದಿಂದ ಸ್ಕೂಟರೊಂದು ನನ್ನ ಸಂಗಾತಿ. ನಾನು ಸಮಾಜದಲ್ಲಿ ನೋಡುತ್ತಾ ಇರುತ್ತೇನೆ, ಲಕ್ಷಗಟ್ಟಲೆ ಖರ್ಚು ಮಾಡಿದ ತಂಪುಕಾರಿನಲ್ಲಿ ಒಬ್ಬನೇ ಪಯಣಿಸುವುದು ಇದೆಯಲ್ಲಾ ನಿಜಕ್ಕೂ ಅದು ರಾಷ್ಟ್ರೀಯ ನಷ್ಟ! 

.. ಹೀಗೆ ಹಲವಾರು ವಿಚಾರಗಳನ್ನು ಪೈಲೂರು ಶ್ರೀನಿವಾಸ ರಾಯರು ಮಾತನಾಡುತ್ತಿದ್ದಂತೆ ಚೇರ್ಕಾಡಿ ರಾಮಚಂದ್ರ ರಾಯರು ನೆನಪಾದರು. ಯಾಕೆಂದರೆ ಚೇರ್ಕಾಡಿಯವರು ಏನು ಹೇಳ್ತಾರೋ, ಅದನ್ನೇ ಮಾಡಿ ತೋರಿಸಿದ್ದರು.

0 comments:

Post a Comment