Wednesday, November 6, 2013

ಕೃಷಿ ಸಂಸ್ಕೃತಿಯಿಂದ ಸಂಪತ್ತಿನ ಸೃಷ್ಟಿ









                ಪುತ್ತೂರಿನಲ್ಲಿ ೨೭-೧೦-೨೦೧೩ ಭಾನುವಾರ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ 'ಕೃಷಿ ಹಬ್ಬ' ಜರುಗಿತು. ಭಾರತೀಯ ಕಿಸಾನ್ ಸಂಘದ ಸಾರಥ್ಯ. ಜರುಗಿದ ನಾಲ್ಕು ಕೃಷಿ ಮಾತುಕತೆಗಳು ಸಂದುಹೋದ ಕೃಷಿ ಬದುಕಿನತ್ತ ತಿರುಗಿ ನೋಡುವಂತೆ ಮಾಡಿತು. ಇವುಗಳನ್ನು ಸಂಕ್ಷಿಪ್ತವಾಗಿ 'ಅವಿಲಿ'ನಲ್ಲಿ (ಉದಯವಾಣಿ ಸುದಿನದಲ್ಲಿ ಕಾಲಂ) ದಾಖಲಿಸುತ್ತಿದ್ದೇನೆ. ಮೊದಲನೇ ಕಂತು ಉಪನ್ಯಾಸಕ, ಕೃಷಿಕ ಅವಿನಾಶ್ ಕೊಡೆಂಕಿರಿ ಪ್ರಸ್ತುತಪಡಿಸಿದ 'ಕೃಷಿ ಸಂಸ್ಕೃತಿ'ಯತ್ತ ಚಿತ್ತ. 

               ಕೃಷಿಯು ಭಾರತದ ಜೀವನಾಡಿ. ಕೃಷಿ ಸಂಸ್ಕೃತಿಯು ತಾಯಿಬೇರು. ಬದುಕನ್ನು ಸಮೃದ್ಧವಾಗಿ ಕಟ್ಟಿಕೊಟ್ಟ ಕೃಷಿ ಸಂಸ್ಕೃತಿಯ ಉಸಿರನ್ನು ಉಳಿಸಬೇಕಾದ ದಿನಮಾನದಲ್ಲಿದ್ದೇವೆ. ಕ್ಷಣಕ್ಷಣಕ್ಕೆ ಬದಲಾಗುತ್ತಿರುವ ತಂತ್ರಜ್ಞಾನಗಳು ಸಂಸ್ಕ್ರತಿಯನ್ನು ಓವರ್ಟೇಕ್ ಮಾಡಿ ಬೀಸುಹೆಜ್ಜೆ ಹಾಕುತ್ತಿವೆ. ಪರಿಣಾಮವಾಗಿ ಜೀವನಾಧಾರವಾಗಿರುವ ಹಲವಾರು ಸಂಗತಿಗಳು ನಿತ್ಯ ಜೀವನದಿಂದ ಮರೆಯಾಗಿವೆ.

                ಇದು ಲೆಕ್ಕಾಚಾರದ ಕಾಲ. ಗಣಕಯಂತ್ರದಿಂದ ತೊಡಗಿ ಕಂಪ್ಯೂತನಕ ಪಕ್ಕಾ ಲೆಕ್ಕ. ಕೃಷಿಯಲ್ಲಿ ಲೆಕ್ಕಾಚಾರ ಬೇಕು, ನಿಜ. ಆದರೆ ಲೆಕ್ಕಾಚಾರವೇ ಕೃಷಿಯಲ್ಲ. ಅದು ಬದುಕನ್ನು ಆಧರಿಸದು. ಯಾಕೆ ಹೇಳಿ, ಕಂಪ್ಯೂಗೆ ಮೀರಿದ ಲೆಕ್ಕಾಚಾರ ಭೂಒಡಲಿನಲ್ಲಿದೆ! ಮಾರುಕಟ್ಟೆ ಆಧಾರಿತ ಕೃಷಿಯ ಒಲವಿನಿಂದ ಲೆಕ್ಕಾಚಾರದ ಕೃಷಿ ಮಾಡುತ್ತಾ ಹೋದರೆ ಸಂಸ್ಕೃತಿಯು ಲೆಕ್ಕಕ್ಕೆ ಸಿಗುವುದಿಲ್ಲ! ಹಣಕಾಸಿನಿಂದ ಅಳೆಯಲು ಸಿಗದು ಮತ್ತು ಸಾಧ್ಯವಿಲ್ಲ.  

               ಭಾರತೀಯ ಭಾಷೆಗಳಿಗೆ ಸಮೃದ್ಧಿ ತಂದ ಗರಿಮೆ ಕೃಷಿ ಸಂಸ್ಕೃತಿಯದ್ದು. ಭತ್ತದ ಬೇಸಾಯದಲ್ಲಿ ಎಷ್ಟೊಂದು ಶಬ್ದ ಭಂಡಾರಗಳು? ಅದನ್ನೀಗ ಮಾತನಾಡುತ್ತಾ ಇಲ್ಲ. ನಮ್ಮೆದುರೇ ಬಿಕ್ಕಳಿಸುತ್ತಾ ಇದ್ದರೂ ಆಕಳಿಸುತ್ತಾ ಕಣ್ಣುಜ್ಜಿಕೊಳ್ಳುತ್ತಿದ್ದೇವೆ. ಸಂಪತ್ತನ್ನು ಸೃಷ್ಟಿ ಮಾಡುವ ತಾಕತ್ತು ಕೃಷಿ ಸಂಸ್ಕೃತಿಗಿದೆ. ಕಾಲದ ಧಾವಂತದಲ್ಲಿ ಕೊಚ್ಚಿಹೋಗುತ್ತಿರುವ ಇದಕ್ಕೆ ಮತ್ತೊಮ್ಮೆ ಮರುಜೀವ ನೀಡಲೇ ಬೇಕು. 

              ಕೃಷಿ ಸಂಸ್ಕ್ಕೃತಿಯಲ್ಲಿ ಜೀವಪರವಾದ ದೃಷ್ಟಿಕೋನವಿದೆ. ಭಾವನಾತ್ಮಕವಾದ ಸಂಬಂಧವಿದೆ. ಭಾರತೀಯರು ಭಾವಜೀವಿಗಳಾಗುವುದಕ್ಕೆ ಒಳಸುರಿಯನ್ನು ಸಂಸ್ಕೃತಿ ನೀಡಿದೆ. ಹಾಗಾಗಿಯೇ ಭಾರತೀಯರಿಗೆ ಭೂಮಿಯೆಂದರೆ ಮಾತೃತ್ವದ ಪ್ರತೀಕ. ದನ, ಪ್ರಾಣಿ, ಪಕ್ಷಿ, ಗಿಡ, ಮರ..ಗಳಲ್ಲಿ ಪೂಜ್ಯ ಭಾವನೆ. ಭೂಮಿ ನಿತ್ಯ ಒಡನಾಟದ ಸ್ನೇಹಿತ. ಭೂಮಿಯನ್ನು ಅಗೆಯಲು, ಕೊರೆಯಲು ಉತ್ತಮ ತಿಥಿ, ವಾರಗಳನ್ನು ಗೊತ್ತುಮಾಡುತ್ತಾನೆ. ಯಾವ ದಿವಸ ಭೂಮಿಯನ್ನು ಅಗೆಯಬಾರದೆನ್ನುವುದು ಗೊತ್ತಿದೆ. ಉತ್ತಮ ದಿನಗಳನ್ನು ನೆನಪಿಟ್ಟುಕೊಳ್ಳುತ್ತಾನೆ. ಪೃಕೃತಿಯಿಂದ ಸಿಗುವ ವಸ್ತು ವೈವಿಧ್ಯಗಳನ್ನು ದೇವತಾಭಾವನೆಯಿಂದ ನೋಡುತ್ತಾನೆ. ಜೀವಪರವಾದ ದೃಷ್ಟಿಕೋನ ಅಂಕುರಿಸುತ್ತದೆ. ಕೃಷಿಯನ್ನು ಬಿಟ್ಟು ಹೊರಪ್ರಪಂಚಕ್ಕೆ ಬಂದಾಗ ವ್ಯವಹಾರಿಕ ಪ್ರಜ್ಞೆ ತಕ್ಷಣ ತೆರೆದುಕೊಳ್ಳುತ್ತದೆ. 

              ನಮ್ಮ ಮಧ್ಯೆ ಕೃಷಿ ಸಂಸ್ಕೃತಿಯನ್ನು ಬದುಕಿಗಂಟಿಸಿಕೊಂಡೇ ಬಂದಿರುವ ಹಿರಿಯರಿದ್ದಾರೆ. ಅವರನ್ನೊಮ್ಮೆ ಮಾತನಾಡಿಸಿ ನೋಡಿ. ಕೃಷಿಯಲ್ಲೇ ಎಷ್ಟು ಖುಷಿಯಾಗಿದ್ದರು. ನೆಮ್ಮದಿಯಾಗಿದ್ದರು. ಸಂತಸವಾಗಿದ್ದರು. ಅವರು ಬೌದ್ಧಿಕವಾಗಿ ಎಷ್ಟೊಂದು ಗಟ್ಟಿಮಾಡಿದ್ದವು. ವಿರಾಮ ಸಮಯದಲ್ಲಿ  ಗಮಕ, ಯಕ್ಷಗಾನ, ನಾಟಕ, ಪುರಾಣಗಳ ಓದು, ಸಾಹಿತ್ಯಿಕ ಅಧ್ಯಯನಗಳು ಬೌದ್ಧಿಕವಾಗಿ ಎತ್ತರದ ಸ್ಥಾನವನ್ನು ತಂದುಕೊಟ್ಟಿತ್ತು. ಜಾನಪದವಾದ ಅಂಶಗಳತ್ತ ನೋಡಿದರೆ ಕೃಷಿಯಲ್ಲಿ ಅದರ ಮೂಲಬೀಜವಿದೆ. ಜಗತ್ತಿಗೆ ಜಾನಪದದ ಸತ್ವವನ್ನು ನೀಡಿದವರು ನಾವು. ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಜಾನಪದದ ವಿಚಾರಗಳು ಉತ್ಪನ್ನವಾಗುತ್ತಾ ಇರುತ್ತವೆ. ಇವೆಲ್ಲಾ ಕೃಷಿಯಿಂದ ನಿಕಷಿತವಾದವುಗಳು.  

              ಗಿಡ ನೆಟ್ಟು ಪೋಷಿಸಿ ಉತ್ಪನ್ನವನ್ನು ಪಡೆದು ಮಾರುಕಟ್ಟೆ ಮಾಡುವ ವಿಚಾರಗಳನ್ನು ಕೃಷಿ ಸ್ವೀಕರಿಸಿಲ್ಲ. ಸುತ್ತುಮುತ್ತಲಿನ ಪರಿಸರ ಜ್ಞಾನ, ಸಹಜೀವಿಗಳ ನಡವಳಿಕೆ, ಕಾರ್ಯ-ಕಾರಣಗಳ ಅರಿವು, ಮಿತಿಯನ್ನು ಮೀರಿದರೆ ಆಗುವಂತಹ ಗೊಂದಲಗಳ ಅರಿವು, ಅದರಿಂದ ಬಿಡಿಸಿಕೊಳ್ಳಬೇಕಾದ ಜಾಣ್ಮೆಗಳನ್ನು ಬದುಕು ಕಲಿಸಿಕೊಡುತ್ತಿತ್ತು. ಹಾಗಾಗಿ ಕೃಷಿ ಸಂಸ್ಕತಿಯನ್ನು ಸಮಗ್ರವಾಗಿ ನೋಡಬೇಕೇ ವಿನಾ ಕೇವಲ ಆಹಾರವನ್ನು ಬೆಳೆಯುವ ವ್ಯಾಪ್ತಿಯಲ್ಲಲ್ಲ. 

              ಪ್ರಕೃತ ನಮಗೆ ಗೊತ್ತಿಲ್ಲದ ಹಾಗೆ ಕೃಷಿ ಸಂಸ್ಕೃತಿಯ ವಿರುದ್ಧಮುಖವಾಗಿ ಈಜುತ್ತಿದ್ದೇವೆ. ಇದನ್ನು ಉಳಿಸಿಕೊಳ್ಳಬೇಕೇ ಎನ್ನುವ ಪ್ರಶ್ನೆ, ಉಳಿಸಲೇ ಬೇಕು ಎನ್ನುವ ಗೊಂದಲದ ಮಧ್ಯೆ ಸಿಲುಕಿದ್ದೇವೆ. ಇಂದು ನಿದರ್ೇಶಿಸುವ ಕೃಷಿ ತತ್ವಗಳು ಆರ್ಥಿಕತೆಯನ್ನು  ಕ್ರೋಢೀಕರಿಸುವ ಉದ್ದೇಶ ಹೊಂದಿವೆ.  ಬಯಕೆಯನ್ನು ಮತ್ತೆ ಮತ್ತೆ ಹುಟ್ಟು ಹಾಕುವ ತತ್ವಗಳು. ಅದಕ್ಕೆ ಕೊನೆಯಿಲ್ಲ. ಹೊಸ ಉತ್ಪನ್ನ ತಯಾರಿ, ಬೇಡಿಕೆ, ಪೂರೈಕೆ - ಹೀಗೆ  ಲೆಕ್ಕಾಚಾರ. ನಮ್ಮೆಲ್ಲಾ ಬಯಕೆಗಳನ್ನು ಕೃಷಿಯೊಂದೇ ಪೂರೈಕೆ ಮಾಡಬಹುದೇ? ಆಗ ಬಯಕೆಗಳನ್ನು ಪೂರೈಸಲು ಬೇರೆ ದಾರಿ ಹಿಡಿಯುವುದು ಅನಿವಾರ್ಯ. ಆಗ  ಮೂಲಭೂತವಾದ ತೃಪ್ತಿ, ಸಮೃದ್ಧಿ ವಿಚಾರಗಳನ್ನು ಯೋಚಿಸುವ ನೆರವಾದ ಬೌದ್ಧಿಕತೆ ತಟಸ್ಥವಾಗುತ್ತದೆ.

               ಮಾರುಕಟ್ಟೆ ಕೇಂದ್ರಿತ ಹೊಸ ಆರ್ಥಿಕ ನೀತಿಯಿಂದಾಗಿ ಹಳೆ ಬೇರುಗಳು ಶಿಥಿಲವಾಗುತ್ತಿವೆ. ಕ್ಷಣ ತೃಪ್ತಿಯನ್ನು ನೀಡುವ ಅನಿಯಂತ್ರಿಕ ಬಯಕೆಗಳು ಅಟ್ಟಿಸಿಕೊಂಡು ಬರುತ್ತಿವೆ.  ಸಂಸ್ಕೃತಿಯು 'ಹಣ ಮಾಡುವ ದಂಧೆ'ಯಾಗಿರುವುದನ್ನು ಕಾಣುತ್ತಿದ್ದೇವೆ. ನೀರು ಮತ್ತು ನೀರಿಗೆ ಸಂಬಂಧಪಟ್ಟ ಜಾಗೃತಿ ಕೃಷಿಕನಿಗೆ ಇತ್ತು. ಅನ್ನ, ನೀರಿನ ಕುರಿತು ಕೃಷಿಕ ಯೋಚಿಸಿದ್ದ. ಅನ್ನವನ್ನು ದೇವರು ಅಂತ ಭಾವಿಸಿದ್ದ. ಆ ಕುರಿತು ಗೌರವದ, ಪೂಜ್ಯ ಭಾವನೆ ಇಂದಿಗೂ ಉಳಿದುಕೊಂಡಿರುವುದನ್ನು ಕಾಣಬಹುದು. ಒಟ್ಟಿನಲ್ಲಿ ಕೃಷಿ ಸಂಸ್ಕೃತಿಯ ಮರೆವು ಇದೆಯಲ್ಲಾ, ಸಂತೃಪ್ತ ಬದುಕಿನ ಇಳಿಲೆಕ್ಕ. ಬುದ್ಧಿಪೂರ್ವಕವಾಗಿ ನಾವೇ ಸೃಷ್ಟಿಸಿದ ಆತಂಕ. ಒಳಗಿದ್ದುಕೊಂಡೇ ಒದ್ದಾಡುವುದು ಅಥವಾ ಹೊರಗೆ ಬರುವ ದಾರಿಯನ್ನು ಕಂಡುಹಿಡಿಯುವುದು - ಈ ಆಯ್ಕೆಗಳು ನಮ್ಮ ಮುಂದಿವೆ.

0 comments:

Post a Comment