Wednesday, November 6, 2013

ಬಿಸಿಯೂಟದ ರುಚಿಯಾಗಬೇಕಾದರೆ...








            ಶಾಲೆಯ ಬಿಸಿಯೂಟದ ಬಿಸಿಬಿಸಿ ಸುದ್ದಿಗಳು ರಾಜ್ಯವಲ್ಲ, ದೇಶ ಮಟ್ಟದಲ್ಲಿ ರಾಚುತ್ತಿವೆ. ಜತೆಗೆ ರಾಜಕೀಯದ ವಾಸನೆ. ಅದಕ್ಕೊಂದಿಷ್ಟು ಜಾತಿ, ಮತದ ಲೇಪ. ಇಂತಹ ಪತನಸುಖಿಗಳಿಂದಾಗಿ ಚಿಣ್ಣರು ಹೈರಾಣ. ಹೆತ್ತವರು ಕಂಗಾಲು. ದಾರಿಕಾಣದ ಆಧ್ಯಾಪಕರು. ನುಣುಚಿಕೊಳ್ಳುವ ಆಡಳಿತ ವ್ಯವಸ್ಥೆ. ಮಾತು ತಿರುಚುವ ದೊರೆಗಳು.

          ಮಂತ್ರಿಗಳು, ಅದಿಕಾರಿಗಳು, ಹೆತ್ತವರು ಒಮ್ಮೆ ಶಾಲೆಗೆ ಬನ್ನಿ. ಬಿಸಿಯೂಟವನ್ನು ಉಣ್ಣಿ. ಆಗಷ್ಟೇ ಗೊತ್ತಾಗುತ್ತದೆ - ಅದರ ರುಚಿ! ಕಷ್ಟ-ಕೋಟಲೆಗಳು. ಕಾಯಕಷ್ಟಗಳು. ಗುಣಮಟ್ಟಕ್ಕಾಗಿ ಪಡುವ ಪಾಡು. ಸರಕಾರದ ಪೈಸೆ ಲೆಕ್ಕಾಚಾರದ ಒಳಸುರಿಗಳಿಗೆ ಪರದಾಟ. ಶುಚಿ-ರುಚಿಗೆ ಪೇಚಾಟ. ಇಷ್ಟಿದ್ದೂ ಪಾಠದೊಂದಿಗೆ ಬಿಸಿಯೂಟವನ್ನು ಉಣಿಸುವ ಅಧ್ಯಾಪಕರ ತನು ಶ್ರಮ ಎಲ್ಲೂ ದಾಖಲಾಗುವುದಿಲ್ಲ. ಆಡಳಿತಕ್ಕೆ ದಾಖಲಾಗಬೇಕಾಗಿಲ್ಲ. ಅಲ್ಲಿನವರಿಗೆ ಬೇಕಾಗಿಯೂ ಇಲ್ಲ.
ಅಕ್ಕಿಯಿಂದ ತರಕಾರಿ ತನಕ ಗುಣಮಟ್ಟದ ಪದಾರ್ಥಗಳು ಮಾರುಕಟ್ಟೆಯಲ್ಲಿ ಲಭಿಸುತ್ತದೆ ಎನ್ನುವುದರಲ್ಲಿ ವಿಶ್ವಾಸವಿಲ್ಲ. ಸರ್ವತ್ರ ಕಲಬೆರಕೆ. ಎಲ್ಲದಕ್ಕೂ ವಿಷದ ಸ್ನಾನ. ತಾಜಾ ಎನ್ನುವುದು ಮರೀಚಿಕೆ.  ಟೊಮೆಟೋ, ಕ್ಯಾಬೇಜ್, ಹೂಕೋಸು.. ಹೀಗೆ ಎಷ್ಟು ಬೇಕು, ವಿಷದ ಬಂಧುಗಳು! ಬಿಸಿಯೂಟದ ಪದಾರ್ಥದಲ್ಲಿ ಇವೆಲ್ಲಾ ಚಿಣ್ಣರ ಉದರ ಸೇರುತ್ತದೆ.

          ಮನಸ್ಸಿದ್ದರೆ ಮಾರ್ಗವಿದೆ. ಹಳೆಯ ಮಾತಿದು. ನಿತ್ಯ ಪ್ರಸ್ತುತ. ಚಿಣ್ಣರ ಆರೋಗ್ಯ ಕಾಪಾಡಲು ಕಬ್ಬಿಣದಂಶದ ಮಾತ್ರೆಗಳನ್ನು ಈಚೆಗೆ ನುಂಗಿಸಲಾಗಿತ್ತು. ಬೇಕೋ ಬೇಡವೋ ಪ್ರಶ್ನಿಸುವಂತಿಲ್ಲ. ಕೆಲವರಿಗೆ ಏನೂ ಆಗಿಲ್ಲದಿರುವುದು ಪುಣ್ಯ. ಅನಾರೋಗ್ಯಕ್ಕೆ ತುತ್ತಾದವರು ಮರುತ್ತರ ಹೇಳಿಲ್ಲ. ಹೇಳಿದರೂ ಕೇಳುವವರು ಯಾರು? ಇದರ ಬದಲು ಕಬ್ಬಿಣದ ಅಂಶ ಇರುವ ಖಾದ್ಯಗಳನ್ನು ಬಿಸಿಯೂಟಕ್ಕೆ ಯಾಕೆ ಬಡಿಸಬಾರದು. 

          ಈ ಮಾತನ್ನು ಖಾದಿ ದಿರುಸಿನ ಗಣ್ಯರಲ್ಲಿ ಸಾಂದರ್ಭಿಕವಾಗಿ ಪ್ರಸ್ತಾಪಿಸಿದ್ದೆ. 'ಖರ್ಚು ಬರುವುದಿಲ್ವಾ. ಬೊಕ್ಕಸದಲ್ಲಿ ಹಣ ಬೇಡ್ವಾ' ಎಂಬ ಉತ್ತರಕ್ಕೆ ನಗಲೋ, ಅಳಲೋ! ಕೋಟಿ ಕೋಟಿ ಕಾಂಚಾಣವನ್ನು ನುಂಗುವ,  ರೈತರ ಭೂಮಿಯನ್ನೇ ಸದ್ದಿಲ್ಲದ ಸ್ವಾಹಾ ಮಾಡುವ, ಚೂರುಪಾರು ಜಾಗವನ್ನು ಕುಟುಂಬಸ್ಥರ ಹೆಸರಿಗೆ ಬರೆಸಿಕೊಂಡ ಕನ್ನಾಡಿನ ಗಣ್ಯರ ಇತಿಹಾಸ ಜನರ ಬಾಯಲ್ಲೇ ಕುಣಿದಾಡುತ್ತಿದೆ! ಮಕ್ಕಳಿಗೆ ನೀಡುವ ಆಹಾರಕ್ಕೆ ಮಾತ್ರ ಆರ್ಥಿಕ ಕೊರತೆ. ಈಚೆಗೆ ಹಾಲು ಸೇರಿಕೊಂಡಿದೆ. ಶ್ಲಾಘನೀಯ.  

          ಆಹಾರವೇ ಔಷಧ. ಔಷಧೀಯ ಗುಣವುಳ್ಳ ಆಹಾರದ ಸೇವನೆಯ ಬೌದ್ಧಿಕ ಜ್ಞಾನವು ಹಿರಿಯರ ಬಳುವಳಿ. ಋತುಮಾನಕ್ಕನುಸಾರವಾದ ವಿವಿಧ ಖಾದ್ಯಗಳು ಬದುಕಿನಂಗವಾಗಿದ್ದ ದಿನಗಳಿದ್ದುವಲ್ಲಾ. ಹಿತ್ತಿಲಿಗೊಮ್ಮೆ ಸುತ್ತು ಬಂದರೆ ಆಯಿತು, ಕೈತುಂಬಾ ತರಕಾರಿಗಳು, ಕುಡಿಗಳು, ಸೊಪ್ಪುಗಳು. ಅವುಗಳು ಅನ್ನದೊಂದಿಗೆ ಹೊಟ್ಟೆ ಸೇರಿ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟ ಹಿರಿಯರು ಈಗಲೂ ಸಾಕ್ಷಿಯಾಗಿ ಸಿಗುತ್ತಾರೆ. ಅವರೆಂದೂ ಚಿಕ್ಕಪುಟ್ಟ ಶೀತ-ಜ್ವರಕ್ಕೆ ಮೆಡಿಕಲ್ ಶಾಪಿಗೆ ಓಡಿಲ್ಲ, ಆಸ್ಪತ್ರೆಗೆ ದಾಖಲಾಗಿಲ್ಲ. 

              ಈಚೆಗೆ ಹುಬ್ಬಳ್ಳಿಗೆ ಹೋಗಿದ್ದೆ. ಮನೆಯೊಂದರಲ್ಲಿ ಶತಮಾನ ದಾಟಿದ ವೃದ್ಧೆಯೊಬ್ಬರು ಬಾವಿಯಿಂದ ನೀರು ಸೇದುತ್ತಿದ್ದರು! ಹತ್ತಡಿಯ ಬಾವಿಯಲ್ಲ, ಇನ್ನೂರು ಅಡಿ! ಜೀವಿತನ ಗುಟ್ಟೇನು? 'ನಾವೇ ಬೆಳೆದ ರಾಗಿ, ಜೋಳವನ್ನು ತಿಂತೀವಿ. ಹೊಲದಲ್ಲಿ ದುಡಿತೀವಿ. ತಿನ್ನೋಕೆ ಬೇಕಾದವನ್ನೆಲ್ಲಾ  ಬೆಳೀತೀವಿ..', ಆ ಅಜ್ಜಿ ಲಟಲಟನೆ ಮಾತನಾಡುತ್ತಿದ್ದಂತೆ ಅಳಿಕೆ ಮುಳಿಯದ ವೆಂಕಟಕೃಷ್ಣ ಶರ್ಮರು ನೆನಪಾದರು.

          ಶರ್ಮರು ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದಲ್ಲಿ ಅಧ್ಯಾಪಕರು. ನಿರ್ವಿಷವಾದ ಆಹಾರವನ್ನು ಸೇವಿಸುವತ್ತ, ಅದನ್ನೇ ಮಾಹಿತಿ ರೂಪದಲ್ಲಿ ನೀಡುವ ಅಪರೂಪದ ವ್ಯಕ್ತಿ. 'ನಮ್ಮ ಅಡುಗೆ ಮನೆಗೆ ನಮ್ಮದೇ ತರಕಾರಿ' ಎನ್ನುವ ಅವರ ಬದುಕಿನ ಹಿಂದೆ ಭವಿಷ್ಯದ ಕಾಳಜಿಯಿದೆ. ಆರೋಗ್ಯದ ಗುಟ್ಟಿದೆ. ಹಸುರು ಪ್ರೀತಿಯಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಂತಃಕರಣ ಶುದ್ಧವಿದೆ. ಗಂಟಲ ಮೇಲಿನ ಮಾತು ದೂರ. 

          ಶರ್ಮರು ತರಕಾರಿ ಬೆಳೆಯುತ್ತಾರೆ, ತಿನ್ನುತ್ತಾರೆ, ಹಂಚುತ್ತಾರೆ. ಮನೆಗೆ ಬಂದ ಅತಿಥಿಗಳಿಗೆ ಒಯ್ಯಲು ಕಟ್ಟಿ ಕೊಡುತ್ತಾರೆ. ಬೀಜಗಳನ್ನು ನೀಡಿ ತರಕಾರಿ ಬೆಳೆಸುವಂತೆ ಪ್ರೇರೇಪಿಸುತ್ತಾರೆ. ಇವೆಲ್ಲವೂ ಆರ್ಥಿಕ ಲಾಭಕ್ಕಾಗಿ ಅಲ್ಲ! ಸ್ವಂತಕ್ಕಾಗಿ ಬೆಳೆವ ತರಕಾರಿಯಲ್ಲಿ ಬಹುಪಾಲು ಅವರ ಶಾಲೆಯ ಬಿಸಿಯೂಟದ ಪದಾರ್ಥಕ್ಕೆ ಮೀಸಲು. ಬಾಳೆಕಾಯಿ, ಬಾಳೆದಿಂಡು, ಕುಂಡಿಗೆ, ಹಲಸು, ಕಣಿಲೆ, ನೆಲಬಸಳೆ, ಪಪ್ಪಾಯಿ, ಗೆಡ್ಡೆಗಳು, ಕೆಸು.. ನಿತ್ಯ ಬದುಕಿನಲ್ಲಿ ಮರೆಯಾಗುತ್ತಿರುವ ತರಕಾರಿಗಳು ಬಿಸಿಯೂಟದೊಂದಿಗೆ ಮಕ್ಕಳ ಉದರಾಗ್ನಿಯನ್ನು ತಣಿಸುತ್ತದೆ.

          ಚಿಣ್ಣರು ಪಾರಂಪರಿಕ ಖಾದ್ಯಕ್ಕೆ ಒಗ್ಗಿಕೊಂಡಿದ್ದಾರೆ. ಅವರಿಗೆ ಹಲಸು ಹೊಲಸಾಗುವುದಿಲ್ಲ. ಗೆಡ್ಡೆಗಳತ್ತ ತಾತ್ಸಾರವಿಲ್ಲ. ತಂಬುಳಿ, ಚಟ್ನಿ ಮಾಡಿದಾಗ ಗೊಣಗಾಟವಿಲ್ಲ. ತರಕಾರಿ ತುಂಬಿದ ಶರ್ಮರ ದ್ವಿಚಕ್ರ ನಿಂತರೆ ಸಾಕು, ವಿದ್ಯಾರ್ಥಿಗಳು ಅವರನ್ನು ಮುತ್ತಿಕೊಳ್ಳುತ್ತಿರುವ ದೃಶ್ಯದಲ್ಲಿ ಮಾತೃತ್ವ ಎದ್ದುಕಾಣುತ್ತದೆ. ನಿರ್ವಿಷವಾದ ತರಕಾರಿ ಪದಾರ್ಥವನ್ನು ಸವಿಯುವ ಈ ಶಾಲೆಯ ಚಿಣ್ಣರು ಭಾಗ್ಯವಂತರು.

          ಬಿಸಿಯೂಟ ಪದಾರ್ಥದ ಕತೆಯನ್ನು ಆಲಿಸಿದ ಹೆತ್ತವರೂ ಕೂಡಾ ಪಾರಂಪರಿಕ ವ್ಯವಸ್ಥೆಗೆ ಉತ್ಸುಕರಾಗುತ್ತಿದ್ದಾರೆ. ಮಕ್ಕಳ ಒತ್ತಾಯಕ್ಕಾದರೂ ತಿಮರೆ ಚಟ್ನಿ, ತಗತ್ತೆ ಪಲ್ಯ, ಹಲಸಿನ ಸಾಂಬಾರು.. ಮಾಡುತ್ತಾರಂತೆ. ಶರ್ಮರಿಗೆ ಆಹಾರದ ಕುರಿತು ಕಾಳಜಿಯಿದೆ. ಚಿಣ್ಣರಲ್ಲಿ ಪ್ರೀತಿಯಿದೆ. ಅದು ಮಕ್ಕಳ ಆಹಾರದ ಮೂಲಕ ಪ್ರತಿಫಲಿತವಾಗುತ್ತದೆ.

          ಶಾಲೆಯ ಆಡಳಿತ ಮಂಡಳಿ, ಗುರುವೃಂದ, ಬಿಸಿಯೂಟವನ್ನು ತಯಾರಿಸುವ ಸಹಾಯಕರೇ ಆಗಿರಲಿ, ಮಾಡುವ ಕೆಲಸದಲ್ಲಿ ಪ್ರೀತಿ-ವಿಶ್ವಾಸಗಳಿದ್ದರೆ ಬಿಸಿಯೂಟ ರುಚಿಯಾಗುತ್ತದೆ. ಗೊಣಗಾಟ, ಅತೃಪ್ತಿಗಳೇ ವೃತ್ತಿಯಾದಾಗ ಜಿರಳೆ, ಇಲಿ, ಹಲ್ಲಿ.. ಕಾಣಿಸಿಕೊಳ್ಳಬಹುದು! ಭವಿಷ್ಯದ ಉತ್ತರಾಧಿಕಾರಿಗಳಾಗಿ ಶಿಕ್ಷಣವನ್ನು ಪಡೆಯುವ ಮಕ್ಕಳನ್ನು ಆರೋಗ್ಯವಂತರಾಗಿ ಬೆಳೆಸುವ ಹೊಣೆ ನಮ್ಮೆಲ್ಲರದು ತಾನೆ. ಈ ನಿಟ್ಟಿನಲ್ಲಿ ಅಧ್ಯಾಪಕರಿಗೆ ಬಿಸಿಯೂಟದ ನಿರ್ವಹಣೆಯ ಭಾರವನ್ನು ಹಗುರಗೊಳಿಸಬೇಕು.

          ಈಗ ಆಟಿಯ (ಆಷಾಢ) ಹಬ್ಬ. ಗೌಜಿ-ಗದ್ದಲ. ಸಂತೋಷದ ಸಮಯ. ಆಷಾಢ, ಶ್ರಾವಣ.. ಹೀಗೆ ಪ್ರತಿಯೊಂದು ತಿಂಗಳಿಗೂ ಅದರದ್ದೇ ಅದ ಮಹತ್ತು. ಹಿರಿಯರ ಬದುಕಿನಲ್ಲಿ ಇವೆಲ್ಲಾ ಹೊಸೆದುಕೊಂಡಿತ್ತು. ಅದಕ್ಕೆ ಗಮ್ಮತ್ತಿನ ಸ್ಪರ್ಶ ಇರಲಿಲ್ಲ. ಅಡುಗೆ ಮನೆಯು ನಿತ್ಯ ಗಮ್ಮತ್ತಿನ ತಾಣ. ಈಗ ಗೋಬಿ ಮಂಚೂರಿಯನ್ ಕಾಲ. ಹಾಗಾಗಿ ಅಜ್ಜಿಯಿಂದ ಬಂದ ಜ್ಞಾನವನ್ನು ಒಂದು ದಿನದ ಗಮ್ಮತ್ತಿನ ಮೂಲಕವಾದರೂ ಆಚರಿಸುತ್ತೇವಲ್ಲಾ..!

          ಬಂಟ್ವಾಳ ತಾಲೂಕಿನ ಶೈಕ್ಷಣಿಕ ಸಂಸ್ಥೆಗಳು ಆಗಸ್ಟ್ 12ರಂದು ಆಟಿ ಹಬ್ಬವನ್ನು ಆಚರಿಸಿದುವು. ಪಾರಂಪರಿಕವಾದ ಆಹಾರ ಕ್ರಮವನ್ನು ಚಿಣ್ಣರಿಗೆ ಬೋಧಿಸುವುದಲ್ಲದೆ, ಅದರ ಅನುಷ್ಠಾನವನ್ನು ಮಾಡುವ ದೂರದೃಷ್ಟಿ. ಕಳೆದ ವರುಷ ಆಹಾರ ಸನ್ನದು ಎಂಬ ನೂತನ ಪರಿಕಲ್ಪನೆ ಕೆಲೆವೆಡೆ ಯಶವಾಗಿತ್ತು. ಬಹುತೇಕ ಶಾಲೆಗಳು ಆಟಿಯ ಮಹತ್ವನ್ನು ಸಾರುವ ಕಲಾಪಗಳನ್ನು ರೂಢಿಸಿಕೊಂಡಿದ್ದುವು.

          ಆಟಿಯ ಹಬ್ಬಕ್ಕಾಗಿ ಕೇಪು-ಕಲ್ಲಂಗಳ ಸರಕಾರಿ ಪ್ರೌಢ ಶಾಲೆಗೆ ಹೋಗಿದ್ದೆ. ಬಹಳ ಅರ್ಥವತ್ತಾಗಿ ಹಬ್ಬವನ್ನು ಆಚರಿಸಿದ್ದರು. ಮಕ್ಕಳೊಂದಿಗೆ ಹೆತ್ತವರೂ ಭಾಗವಹಿಸಿದ್ದರು. ಪತ್ರೊಡೆ, ಉಪ್ಪುಸೊಳೆ ಖಾದ್ಯ, ಸಿಹಿ ತಿಂಡಿ.. ಹೀಗೆ ಪಾರಂಪರಿಕ ಪಾಕಗಳನ್ನು ಮಾಡಿ ಹೆತ್ತವರು ಮಕ್ಕಳ ಕೈಯಲ್ಲಿ ಕಳುಹಿಸಿದ್ದರು. ಆಟಿಯ ಮಹತ್ವದೊಂದಿಗೆ, ಆರೋಗ್ಯಪೂರ್ಣವಾದ ಆಹಾರವನ್ನು ಮಾಡುವ ಮಾಹಿತಿ ಖುಷಿ ಕೊಟ್ಟ ವಿಚಾರ.

              ಈಚೆಗೆ ಕೇಪು ಶಾಲೆಯು ಮಕ್ಕಳಲ್ಲಿ ಸಾವಯವ ಕೃಷಿಯ ಅರಿವು ಮೂಡಿಸುವಂತಹ ಅಪರೂಪದ ಕೆಲಸ ಮಾಡುತ್ತಿದೆ. ಮುಖ್ಯ ಗುರು ರಮೇಶ್ ಬಾಯಾರು ಅವರ ಕನಸಿನ ಕೆಲಸವಿದು. ತರಕಾರಿ ಬೀಜ ನೀಡಿ, ತರಕಾರಿ ಕೃಷಿಯನ್ನು ಮಾಡುವ ಕುರಿತು ಅನುಭವಿಗಳಿಂದ ತರಬೇತಿ ಕೆಲಸ ಆಗುತ್ತಿದೆ. ಕೃಷಿಕರ ತೋಟಗಳಿಗೆ ಮಕ್ಕಳನ್ನು ಭೇಟಿ ಮಾಡಿಸಿ ಹಸಿರಿನ ಪರಿಚಯ ಮಾಡಲಾಗುತ್ತದೆ. 'ಗ್ರಾಮೀಣ ಭಾಗದ ಮಕ್ಕಳಾದರೂ ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಹಳ್ಳಿಯ ನೈಜ ಬದುಕಿನಿಂದ ಅವರು ಕಳೆದುಹೋಗಬಾರದಲ್ವಾ' ಎನ್ನುವ ಕಾಳಜಿ ರಮೇಶ ಬಾಯಾರು ಅವರದು. 

                 ಕೇಪು ಶಾಲೆಯ ಬಿಸಿಯೂಟ ತಯಾರಿಯ ಕೊಠಡಿಯತ್ತ ಎಲ್ಲಾ ಅಧ್ಯಾಪಕರ ಕಾಳಜಿ. ಅಕ್ಕಿಯನ್ನಿಡಲು ಪ್ರತ್ಯೇಕ ವ್ಯವಸ್ಥೆ. ಪದಾರ್ಥ ತಯಾರಿಸುವಾಗ ಸಹಾಯಕರಿಗೆ ವಿಶೇಷ ನಿಗಾ. ಮನೆಯಲ್ಲಿ ಬೆಳೆದ ತರಕಾರಿಯನ್ನು ಮಕ್ಕಳು ತಂದಾಗ ಪ್ರೋತ್ಸಾಹದ ಮಾತು. ಉಣ್ಣುವ-ತಿನ್ನುವ ವಿಚಾರದಲ್ಲಿ ಜಾಗ್ರತೆ.

                 ಶಾಲಾ ಪಠ್ಯದಲ್ಲಿ ಹಸುರಿಲ್ಲ. ಕೃಷಿಯಿಲ್ಲ. ಕೃಷಿಕನ ಯಶೋಗಾಥೆಗಳಿಲ್ಲ. ಬೌದ್ಧಿಕ ಸಾಮಥ್ರ್ಯವನ್ನು ಗಟ್ಟಿಮಾಡದ ಪಠ್ಯದೊಂದಿಗೆ ಕೃಷಿ, ಪರಿಸರ, ತೋಟದ ಪಾಠ ಮಾಡುವ ಕೇಪು ಶಾಲೆಯ ಅಧ್ಯಾಪಕ ವೃಂದದ ಶ್ರಮ ಶ್ಲಾಘನೀಯ. ಹೇಳುವಂತಹ ದೊಡ್ಡ ಪರಿಣಾಮಗಳನ್ನು ನಿರೀಕ್ಷಿಸಲಾಗದಿದ್ದರೂ, ಎಳೆಯ ಮನಸ್ಸುಗಳ ಹಳ್ಳಿಪ್ರೀತಿಯ ಅಡಿಗಟ್ಟು ಭದ್ರವಾಗುತ್ತದೆ. ಬಿಸಿಯೂಟ ರುಚಿಯಾಗುತ್ತದೆ.

0 comments:

Post a Comment