Monday, November 25, 2013

ನಾಲ್ಕು ಮುಡಿ ಅಕ್ಕಿಗೆ ಒಂದು ಪವನು ಚಿನ್ನ!

             "ಮಂಗಳೂರಿನ ಡೊಂಗರಕೇರಿ ದೇವಸ್ಥಾನದ ಸನಿಹ ಗುತ್ಯಮ್ಮಸ್ಥಾನ ಓಣಿಯ ಕೊನೆಯಲ್ಲಿ ಉಳ್ಳಾಲ ನಾಯಕರೊಬ್ಬರ ಹಿತ್ತಿಲಲ್ಲಿ ಮಾವಿನ ಮರವೊಂದಿತ್ತು. ಮಾವಿನ ಹಣ್ಣು ಉತ್ತಮ ರುಚಿ. ದೊಡ್ಡ ಗಾತ್ರ. ತುಂಬಿದ ಮಾಸು. ಮುಂಡಪ್ಪ ಎಂಬವರು ಬಲಿತ ಕಾಯನ್ನು ಕೊಯಿದು, ಹಣ್ಣು ಮಾಡಿ ರಥಬೀದಿ, ಬಂದರಿನಲ್ಲಿ ಹೊಟ್ಟೆಪಾಡಿಗಾಗಿ ಮಾರುತ್ತಿದ್ದರು. ಹಣ್ಣನ್ನು ತಿಂದವರಿಂದ ಉತ್ತಮ ಪ್ರತಿಕ್ತಿಯೆ. ಮುಂಡಪ್ಪ ಹಣ್ಣು ಮಾರುತ್ತಿದ್ದುದರಿಂದ ಕ್ರಮೇಣ ಹಣ್ಣಿಗೂ ಅವರ ಹೆಸರು ಹೊಸೆಯಿತು, ದಕ್ಷಿಣ ಕನ್ನಡದ ಜನಪ್ರಿಯ ಮಾವಿನ ತಳಿ 'ಮುಂಡಪ್ಪ'ನ ಹಿನ್ನೆಲೆಯನ್ನು ನೆನಪಿಸಿಕೊಂಡರು," ಕಲ್ಲಡ್ಕ-ಕರಿಂಗಾಣದ ಹಿರಿಯ ಕೃಷಿಕ ಡಾ.ಕೆ.ಎಸ್.ಕಾಮತ್.

             ಕಾಮತರೊಂದಿಗೆ ಮಾತಿಗಿಳಿದರೆ ಒಂದು ಕಾಲಘಟ್ಟದ ಕೃಷಿಬದುಕು, ಕೃಷಿ ಸಂಕಟಗಳು, ತಲ್ಲಣಗಳು, ಮಾರುಕಟ್ಟೆ.. ವಿಚಾರಗಳು ಮಿಂಚಿ ಮರೆಯಾಗುತ್ತವೆ. 'ಆ ಕಾಲ ಒಳ್ಳೆಯದಿತ್ತು. ಈಗ ಎಲ್ಲವೂ ಹಾಳಾಗಿದೆ' ಎಂಬ ಗೊಣಗಾಟದ ಬದಲು, 'ಕಾಲಕ್ಕೆ ತಕ್ಕ ಹಾಗೆ ನಾವು ಅಪ್ಡೇಟ್ ಆಗಬೇಕು' ಎನ್ನುವ ಎಪ್ಪತ್ತಾರರ ಕಾಮತರ ನಿಲುವು ನಿತ್ಯ ರಿಂಗಣಿಸುತ್ತಿದೆ.

            ಗುತ್ತಿನ ಮನೆಯ ಹಿರಿಮೆಯ ಅನುಭವ. ಸಿರಿತನ-ಬಡತನಗಳಿಗೆ ಸಮಾನ ಮಣೆ. ಸಾಮಾಜಿಕ ನ್ಯಾಯಕ್ಕೆ ಮನ್ನಣೆ. ಸಮೂಹ ಹಿತದೃಷ್ಟಿಯ ದೃಷ್ಟಿಕೋನ. ಹಳೆಯ ಅನುಭವದ ಮೂಸೆಯಲ್ಲಿ ಹೊಸತನಕ್ಕೆ ತೆರೆದುಕೊಳ್ಳುವ ವಿಶಾಲ ಮನಸ್ಸು. ಕಾಯಕಷ್ಟದ ಕೃಷಿ ಬದುಕಿನ ಸುಭಗತೆ. ಕಿರಿಯರೊಂದಿಗೆ ಕಿರಿಯ, ಹಿರಿಯರೊಂದಿಗೆ ಹಿರಿತನದ ಛಾಪು. ಇಳಿ ವಯಸ್ಸಲ್ಲೂ ಪುಟಿದೇಳುವ ಉತ್ಸಾಹ. ಕಾಮತರ ಬದುಕನ್ನು ಹತ್ತಿರದಿಂದ ನೋಡಿದವರಿಗೆ ಅವರು ಕಾಣುವ ಬಗೆಯಿದು.

            ಆಶ್ಚರ್ಯ ಮೂಡಿಸುವ ನೆನಪು ಶಕ್ತಿ. ಕೃಷಿ ಜೀವನದ ಒಡಲಲ್ಲಿ ಮಾಗಿ ರೂಪುಗೊಂಡ ಬದುಕು. ಕೃಷಿಯ ಎಲ್ಲಾ ಮಗ್ಗುಲುಗಳಲ್ಲಿ 'ಬೇಕು-ಬೇಡ'ದ ನಿಖರತೆ. ಕಾಲಕಾಲಕ್ಕೆ ಬದಲಾಗುತ್ತಿರುವ ಸರಕಾರದ ಕಾನೂನು-ನೀತಿಗಳ ಗ್ರಹಿಕೆ, ವಿಮರ್ಶೆ. ಅಧಿಕಾರಿಗಳ ಅಧಿಕಾರದ ಹೆಜ್ಜೆ, ಇಲಾಖೆಯೊಳಗಿನ ಫೈಲುಗಳ ರೀತಿ-ನೀತಿಗಳು ಗೊತ್ತು. ಹಾಗಾಗಿ ಕಳೆದ ಕಾಲದ ಕಥನಕ್ಕೆ ಕಾಮತರು ತೆರೆದ ಪುಸ್ತಕ. ಪುಟ ಬಿಡಿಸಿದಷ್ಟೂ ಬಿಚ್ಚಿಕೊಳ್ಳುತ್ತದೆ, ಜೀವನ ಗಾಥೆಗಳು. 

                ಪ್ರಾಮಾಣಿಕ ವ್ಯವಹಾರ. ಪ್ರಾಮಾಣಿಕತೆಗೆ ಗೌರವ. ಸೋಗಿಲ್ಲದ ವ್ಯಕ್ತಿತ್ವ. ಮಾತಿನಂತೆ ಕೃತಿ. ಓದಿದ, ನೋಡಿದ ವಿಚಾರವನ್ನು ಹಿಡಿದಿಟ್ಟುಕೊಂಡ ಬೌದ್ಧಿಕ ಗಟ್ಟಿತನ. ಬೇಕಾದಾಗ ಬೇಕಾದಷ್ಟು ಮೊಗೆವ ವೈಚಾರಿಕ ತಾಕತ್ತು. ನಿಜದ ನೇರದ  ಜಾಯಮಾನ.  ಹುರಿದುಂಬಿಸುವ, ತಪ್ಪಿದಾಗ ತಿದ್ದುವ ಹಿರಿಯಣ್ಣ ನಮ್ಮ ಕಾಮತರು.

             ಹೊಸ ತರಕಾರಿಗಳು, ಹಣ್ಣುಗಳ ಪತ್ತೆಯಾದರೆ ಸಾಕು, ಅದರ ಹಿಂದೆ ಓಡುತ್ತಾರೆ. ಮಾಹಿತಿ ಸಂಗ್ರಹಿಸುತ್ತಾರೆ. ಬೀಜ, ಸಸಿ ಪಡೆದ ಬಳಿಕವೇ ವಿಶ್ರಾಂತಿ. ಸಿಕ್ಕ ಬೀಜಗಳನ್ನು ಆಸಕ್ತರಿಗೆ ಹಂಚುತ್ತಾರೆ. ಹಿಮ್ಮಾಹಿತಿ (ಫೀಡ್ಬ್ಯಾಕ್) ಹಂಚಿಕೊಳ್ಳುವುದು ಖುಷಿ. ಪುತ್ತೂರಿನ ಗಿಡಗೆಳೆತನ ಸಂಘ 'ಸಮೃದ್ಧಿ'ಯ ಸ್ಥಾಪಕ ಸದಸ್ಯರಲ್ಲೊಬ್ಬರು. ತಮ್ಮ ಹಿತ್ತಿಲಲ್ಲಿರುವ ಒಂದೊಂದು ಗಿಡಗಳ ಹಿಂದೆ ಸಮೃದ್ಧಿಯ ಹೆಸರು ಹೊಸೆದಿದೆ.

               ಕಾಮತರ ಅಡುಗೆ ಮನೆ ಸಹಜ. ಇವರ ಯೋಜನೆ, ಯೋಚನೆಯ ಪಾಸ್ ವರ್ಡ್ ತಕ್ಷಣ ಗ್ರಹಿಸಿ ಅನುಷ್ಠಾನಿಸುವ ಮನದನ್ನೆ ಸುಗುಣಾ, 'ನಿಮ್ಮ ಕಾಮತರನ್ನು ಮಾತನಾಡಿಸಿದರೆ ಎಷ್ಟೂ ಮಾತನಾಡಿಯಾರು. ಅವರು ಕೃಷಿ ಕಾರ್ಯಕ್ರಮಗಳಿಗೆ ಹೋಗ್ತಾರೆ, ಬರ್ತಾರೆ. ಅಲ್ಲಿನ ವಿಚಾರಗಳನ್ನು ಮನೆಯಲ್ಲಿ ಹೇಳುತ್ತಾರೆ. ಅವರಿಗೆ ಹೇಳಲು ಆಸಕ್ತಿಯಿದೆ. ನನಗೆ ಕೇಳಲು ಕುತೂಹಲವಿದೆ. ಹಾಗಾಗಿ ಬದುಕಿನ ರಥವು ಒಂದೇ ಹಳಿಯಲ್ಲಿ ಸಾಗುತ್ತದೆ,' ಎಂದರು. ಅರ್ಧ ಹೊತ್ತು ಅವರ ನೆನಪಿನ ಬುತ್ತಿಯನ್ನು ಕೆದಕಿದಾಗ ಸಿಕ್ಕ ಮಾಹಿತಿ ಅನುಭವಪೂರ್ಣ. ಭತ್ತ, ತೆಂಗು, ಅಡಿಕೆ ಕೃಷಿಯ ಅನುಭವಗಳ ಒಂದೆಳೆ ಇಲ್ಲಿದೆ.

             "ಬಯಲು ಗದ್ದೆಯಲ್ಲಿ ತೆಂಗಿನ ಕೃಷಿ ಚೆನ್ನಾಗಿ ಬರುವುದಿಲ್ಲ. ಗೆಂದಾಳಿ ತಳಿಯದ್ದಕ್ಕೆ ಹೆಚ್ಚು ದರ ಸಿಗುತ್ತದೆ ಎಂದು ಅದನ್ನೇ ಕೃಷಿ ಮಾಡಬೇಡಿ. ಅದಕ್ಕೆ ಕುರುವಾಯಿ, ಕೆಂಪು ಮೂತಿ ಹುಳ, ಸುಳಿ ಕೊಳೆಯುವ ರೋಗ ಜಾಸ್ತಿ. ಗೆಂದಾಳಿಯಲ್ಲಿ 60-70 ಶೇಕಡಾ ಬದುಕುವ ಪ್ರಮಾಣ.  ಗುಡ್ಡ, ಬೆಟ್ಟುಗದ್ದೆ, ಬದುಗಳಲ್ಲಿ ಮಾಡಬಹುದು.

            ಬಯಲು ಗದ್ದೆಯಲ್ಲಿ ತೆಂಗಿನ ಸಸಿ ನೆಡಲು ಹೊಂಡ ತೆಗೆಯುವಾಗ ಹಳದಿ ಮಣ್ಣು ಸಿಕ್ಕರೆ ಅಲ್ಲಿ ತೆಂಗು ನೆಡಬೇಡಿ. ಅದು ಅಂಟು ಮಣ್ಣು. ಆ ಮಣ್ಣಿಗೆ ಇನ್ಫೆಕ್ಷನ್ ಅಂಟಿದೆ ಎಂದರ್ಥ. ಅದರಲ್ಲಿ ನೀರು ಇಳಿದು ಹೋಗುವುದಿಲ್ಲ. ಸೇಡಿ ಮಣ್ಣು ತೆಂಗಿಗೆ ಒಳ್ಳೆಯದು.

             ಭತ್ತದ ಕೃಷಿ ಕರಾವಳಿಗೆ ಹೇಳಿಸಿದ್ದಲ್ಲ. ಭತ್ತದ ಕಣಜ ಎಂದು ಕರೆಯುತ್ತಿದ್ದ ಕಾಲದಲ್ಲೇ ಹಾಸನ, ಸಕಲೇಶಪುರ ಪ್ರದೇಶದಿಂದ ಭತ್ತ ಬರುತ್ತಿತ್ತು. ಭತ್ತದ ಸಂಪನ್ಮೂಲವಿದ್ದರೂ ವರುಷಕ್ಕೆ ಮೂರ್ನಾಲ್ಕು ತಿಂಗಳು ತತ್ವಾರವಾಗುತ್ತಿತ್ತು. ಈಗದು ಹೆಚ್ಚಾಗಿದೆ. ಅಡಿಕೆ, ತೆಂಗು ಬಿಟ್ಟರೆ ಬೇರೆ ಯಾವ ಕೃಷಿಯೂ ಆಗದಿರುವುದರಿಂದ ಭತ್ತವನ್ನು ಬಲವಂತದಿಂದ ಬೆಳೆದರಷ್ಟೇ. ಮಳೆಗಾಲದಲ್ಲಿ ವಿಪರೀತ ಮಳೆ, ಬೇಸಿಗೆಯಲ್ಲಿ ನೀರಿಲ್ಲದೆ ಮತ್ತು ಬಿಸಿಲಿನ ಝಳದಿಂದಾಗಿ ಇಳುವರಿ ಅಷ್ಟಕ್ಕಷ್ಟೇ. ಸಕಲೇಶಪುರದಿಂದ ಕರಾವಳಿಗೆ ಹುರಿಯಕ್ಕಿ ತಯಾರಿಗಾಗಿ 'ರಾಸ್, ಬಡಾಸ್' ಎಂಬ ತಳಿ ಬರುತ್ತಿತ್ತು. ಇದರ ಹುರಿಯಕ್ಕಿ ರುಚಿ. ತುಂಬಾ ಬೇಡಿಕೆ. ಅದರ ತಳಿ ಸಂಗ್ರಹಕ್ಕೆ ಯತ್ನಿಸಿದೆ. ಫಲಕಾರಿಯಾಗಲಿಲ್ಲ. ಹಿಂದೆ ಇಪ್ಪತ್ತು ಸೆಂಟ್ಸಿನಲ್ಲಿ ಮೂರು ಮುಡಿ ಭತ್ತ ಬೆಳೆಸಿದರೆ ಆತ ಶ್ರೀಮಂತ.
                
            ಅಮ್ಟಾಡಿ, ಅನಂತಾಡಿ, ಕಾಂಪ್ರಬೈಲು.. ಇಲ್ಲೆಲ್ಲಾ ದೊಡ್ಡ ಪ್ರಮಾಣದಲ್ಲಿ ಭತ್ತ ಬೆಳೆಯುತ್ತಿದ್ದರು. 'ಮಸ್ಕತಿ' ಎಂಬ ತಳಿಯ ಅಕ್ಕಿ ಮಸ್ಕತ್ತಿಗೆ ರಫ್ತು ಆಗುತ್ತಿತ್ತು! ಈ ಅಕ್ಕಿಯ ಅನ್ನ ಜೀರ್ಣಹರ. ಕುಟ್ಟಿ ಮಾಡಿದ ಅಕ್ಕಿಯನ್ನು ಮುಡಿ ಕಟ್ಟಿ ಮಾರಾಟ. ಮುಡಿ ಕಟ್ಟುವುದೂ ಜಾಣ್ಮೆಯ ಕೆಲಸ. ಒಂದು ಮುಡಿ ಅಕ್ಕಿ ಅಂದರೆ ಕುಚ್ಚಲಾದರೆ ಮೂವತ್ತೊಂಭತ್ತು ಕಿಲೋ. ಬೆಳ್ತಿಗೆ ನಲವತ್ತು ಕಿಲೋ. ಮಂಗಳೂರಿನ ವ್ಯಾಪಾರಿ ಬಾಬ ಪೈಯವರ ಮೂಲಕ ಅಕ್ಕಿ ರಫ್ತು. 

               ಒಂದು ಮುಡಿ ಬೆಳ್ತಿಗೆ ಅಕ್ಕಿಗೆ ಒಂದು ಮುಡಿ ಉದ್ದು, ಒಂದು ಮುಡಿ ಕುಚ್ಚಲು ಅಕ್ಕಿಗೆ ಒಂದು ಮುಡಿ ಹೆಸರು, ಇಪ್ಪತ್ತು ಮುಡಿ ಅಕ್ಕಿಗೆ ಒಂದು ಖಂಡಿ (260 ಕಿಲೋ) ಗೋಟಡಿಕೆ - ಹೀಗೆ ವಿನಿಮಯ ವ್ಯಾಪಾರ ಎರಡು ಶತಮಾನದಿಂದಲೇ ಇದ್ದುವು.  ಒಂದು ಮುಡಿ ಅಕ್ಕಿಗೆ ಮೂರು ಕಾಲು ರೂಪಾಯಿ. ನಾಲ್ಕು ಮುಡಿ ಅಕ್ಕಿಯನ್ನು ಬಂಟ್ವಾಳದ ವ್ಯಾಪಾರಿಯೋರ್ವರಿಗೆ ಮಾರಿದರೆ ಒಂದು ಪವನು ಚಿನ್ನ ಕೊಡುತ್ತಿದುದು ನೆನಪಿದೆ. ನವರಾತ್ರಿಯ ಮುನ್ನ ಹೊಸಅಕ್ಕಿ ಊಟ ಮತ್ತು ವಿಷು(ಸೌರಮಾನ ಯುಗಾದಿ)ವಿನಂದು ಪವನು ಮನೆಯೊಳಗೆ ಬಂದರೆ ಸಮೃದ್ಧಿ ಎನ್ನುವ ನಂಬಿಕೆಯಿತ್ತು.

              ಪದಾರ್ಥಕ್ಕೆ ತೆಂಗಿನಕಾಯಿ ಬಳಕೆಯಿತ್ತು. ಒಂದು ಪೈಸೆ ನೀಡಿದರೆ ತೆಂಗಿನಕಾಯಿಯ ಸಣ್ಣ ಹೋಳು ಅಂಗಡಿಯಲ್ಲಿ ಸಿಗುತ್ತಿತ್ತು. ಮೂರ್ನಾಲ್ಕು ಹೋಳು ಇದ್ದರೆ ಪದಾರ್ಥಕ್ಕೆ ಸಾಕಾಗುತ್ತಿತ್ತು. ಪೈಸೆ ಪೈಸೆ ಲೆಕ್ಕಾಚಾರದ ಕಾಲದಲ್ಲಿ ನೆಮ್ಮದಿಯ ದಿನಗಳಿದ್ದುವು. ಈಗ ಕೋಟಿ ಲೆಕ್ಕಾಚಾರದಲ್ಲಿದ್ದರೂ ಖುಷಿಯಿಲ್ಲದ ಜೀವನ ನೋಡುತ್ತಾ ಇದ್ದೇವೆ.

              ಸಾರಿಗೆ ತತ್ವಾರದ ದಿನಗಳು. ಪಾಣೆಮಂಗಳೂರಿನಿಂದ ಮಂಗಳೂರಿಗೆ ದೋಣಿಯಲ್ಲಿ ಪ್ರಯಾಣ. 20-30 ಮಂದಿ ಪ್ರಯಾಣಿಕರು. ನಾಲ್ಕಾಣೆ ದರ. ಇಲ್ಲಿಂದ ಹೋಗುವಾಗ ಇಡೀ ರಾತ್ರಿ ಪ್ರಯಾಣ. ಮಧ್ಯೆ ಮಧ್ಯೆ ನಿಲುಗಡೆ. ಬರುವಾಗ ಎರಡೇ ಗಂಟೆಯಲ್ಲಿ ಪಾಣೆಮಂಗಳೂರು ಸೇರುತ್ತಿತ್ತು. '1906ರಲ್ಲಿ ಮೋಟಾರಿಗೆ ಆರಾಣೆ ಕೊಟ್ಟ ಲೆಕ್ಕ  ಅಕೌಂಟು ಪುಸ್ತಕದಲ್ಲಿದೆ'! ಮೂರು ಪೈಸೆಗೆ ನಶ್ಯ ತಂದ ಲೆಕ್ಕವೂ ಇದೆ! ಮಂಗಳೂರಿನಿಂದ ಮೈಸೂರಿಗೆ ಆರು ರೂಪಾಯಿ. ಸಿ.ಪಿ.ಸಿ. ಬಸ್. 1910ರಲ್ಲಿ ಮೋಟಾರು ಚಾಲಿತ ಬಸ್ಸು ಬಂದಿತ್ತು.

                 ಡಾ.ಕೆ.ಎಸ್.ಕಾಮತರು ಸಂದು ಹೋದ ಕಾಲದ ಕಥನವನ್ನು ಹೇಳುತ್ತಾ ಪ್ರಶ್ನಿಸಿದರು, 'ಈಗ ಅಭಿವೃದ್ಧಿ ಎನ್ನುತ್ತಾರಲ್ಲಾ, ನಿಜವಾದ ಅಭಿವೃದ್ಧಿ ಆಗುತ್ತಾ' ಎಂದರು. ಜತೆಯಲ್ಲಿದ್ದ ಸತ್ಯನಾರಾಯಣ ಎಡಂಬಳೆ, ರಘುರಾಮ ಹಾಸನಡ್ಕ ಮುಖಮುಖ ನೋಡಿಕೊಂಡೆವಷ್ಟೇ.

                  'ಭೂಮಸೂದೆ ಬಂದಾಗ ಯಾರಿಗೂ ನೋವು ಮಾಡಿಲ್ಲ. ಒಂದೇ ದಿವಸ ಎಪ್ಪತ್ತು ಪೈಲುಗಳಿಗೆ ಸಹಿ ಮಾಡಿದ್ದೇನೆ' ಎನ್ನುವಾಗ ಕಾಮತರಲ್ಲಿ ವಿಷಾದವಿಲ್ಲ! ಇದು ಸಮಾಜಿಕ ನ್ಯಾಯಕ್ಕೆ, ಕಾನೂನಿಗೆ ಸಲ್ಲಿಸಿದ ಮಾನ-ಸಂಮಾನ.
 

0 comments:

Post a Comment