Tuesday, November 5, 2013

ತರಕಾರಿಯಲ್ಲಿವರು ಪೂರ್ಣ ಸ್ವಾವಲಂಬಿ


              'ನಮ್ಮ ಮನೆಯ ಊಟಕ್ಕೆ ನಮ್ಮದೇ ತರಕಾರಿ. ಅಂಗಡಿಯನ್ನು ಆಶ್ರಯಿಸುವುದಿಲ್ಲ' ಎನ್ನುತ್ತಾ ಕೃಷಿಕ ವರ್ಮುಡಿ ಶಿವಪ್ರಸಾದ್ ತರಕಾರಿ ತೋಟಕ್ಕೆ ಕರೆದೊಯ್ಯುತ್ತಾರೆ. ಅನುಭವವನ್ನು ವಿನಿಮಯ ಮಾಡಿಕೊಳ್ಳುತ್ತಾರೆ. ತಾನು ಮಾಡಿದ ಕೃಷಿ ಉಪಾಯಗಳನ್ನು ಹಂಚಿಕೊಳ್ಳುತ್ತಾರೆ. ವಿಷ ಸಿಂಪಡಿಸದೆ ತರಕಾರಿ ಬೆಳೆಯಲು ಸಾಧ್ಯ ಎಂಬುದನ್ನು ಬೆಳೆದು ತೋರಿದ್ದಾರೆ.

          ತೊಂಡೆಕಾಯಿ ಆಪತ್ತಿನ ಸಹಾಯಿ. ಇತರ ತರಕಾರಿಗಳು ಅಡುಗೆಗೆ ಕೈಕೊಟ್ಟಾಗ ತೊಂಡೆಚಪ್ಪರದಲ್ಲಿ ಹತ್ತಾರು ಕಾಯಿಗಳಾದರೂ ಇದ್ದೇ ಇರುತ್ತದೆ. 'ತೊಂಡೆಕಾಯಿ ಬಳ್ಳಿಗೆ ಎರಡು ವರುಷ ಆಯಸ್ಸು. ಒಮ್ಮೆ ನೆಟ್ಟ ಹೊಂಡದಲ್ಲಿ ಪುನಃ ನೆಡಬಾರದು. ಮಡಿ ಬದಲಿಸಬೇಕು' ಎನ್ನುವುದು ಅನುಭವ. ಸಾಕಷ್ಟು ಬಿಸಿಲು ಬೀಳುವ ಜಾಗದಲ್ಲಿ ನೆಟ್ಟರೆ ಕ್ರಿಮಿಕೀಟ ಕಡಿಮೆ.

          ತೊಂಡೆಕಾಯಿ ಚಪ್ಪರದ ಸುತ್ತಮುತ್ತ ಹೀರೆಕಾಯಿ, ಸೊರೆಕಾಯಿ, ಬದನೆ, ಬೆಂಡೆ, ಹಾಗಲಕಾಯಿ, ಹರಿವೆ. ಮನೆಯಂಗಳದಲ್ಲಿ ಚೀನಿಕಾಯಿ, ಮುಳ್ಳುಸೌತೆ, ಬೀನ್ಸ್, ಅಲಸಂಡೆ, ಬೆಂಡೆ. ಮಳೆಗಾಲದಲ್ಲಿ ಚೀನಿಕಾಯಿ ಯಾ ಗೋವೆಕಾಯಿಗೆ ಕೃತಕ ಪರಾಗಸ್ಪರ್ಶ ಮಾಡುತ್ತಾರೆ. 'ತರಕಾರಿ ತೋಟದ ಮಧ್ಯೆ ಅಲ್ಲಲ್ಲಿ ತುಳಸಿ, ಕಾಮಕಸ್ತೂರಿ ಗಿಡಗಳಿದ್ದರೆ ಕೀಟಗಳ ಧಾಳಿ ಕಡಿಮೆ' ಎನ್ನುವುದನ್ನು ಅನುಭವದಿಂದ ಕಂಡುಕೊಂಡ ಸತ್ಯ.  

          ಎರಡು ದಶಕದಿಂದ ತಮ್ಮದೇ ತರಕಾರಿ ಬೀಜಗಳ ಮರುಬಳಕೆ. ಸಸಿ ತಯಾರಿಸುವಾಗ ಮಾತ್ರ ಸುಡುಮಣ್ಣು. ನಂತರ ಹಟ್ಟಿಗೊಬ್ಬರ, ಸೆಗಣಿ ದ್ರಾವಣ. ಬಳ್ಳಿ ತರಕಾರಿಗಳ ಗಿಡಗಳು ಕ್ಷೀಣವಾದಾಗ ಅವುಗಳಿಗೆ ಕೋಳಿಗೊಬ್ಬರದ ಡೋಸೇಜ್. ಕಡಲೆ ಹಿಂಡಿ, ಸೆಗಣಿಯನ್ನು ಕೊಳೆಯಿಸಿ ಮಾಡಿದ ದ್ರಾವಣವು ಗಿಡಗಳಿಗೆ ಗ್ಲೂಕೋಸ್. ಕಾಸರಕ, ಗೇರು, ಕಹಿಬೇವು.. ಮೊದಲಾದ ಚೊಗರಿನಿಂದ ತಯಾರಿಸಿದ ಕಷಾಯಗಳ ಸಿಂಪಡಣೆಯಿಂದ ಕೀಟಬಾಧೆ ನಿಯಂತ್ರಣ. 'ನಮ್ಮ ತರಕಾರಿ, ಅಡಿಕೆ ತೋಟಗಳಿಗೆ ರಾಸಾಯನಿಕ ಗೊಬ್ಬರದ ಚೀಲಗಳು, ಸಿಂಪಡಣಾ ಶೀಸೆಗಳು ಬರುವುದಿಲ್ಲ' ಎನ್ನುವಲ್ಲಿ ಅಭಿಮಾನ. 

          ತರಕಾರಿಯೊಂದಿಗೆ ಹಲಸಿಗೆ ಮೊದಲ ಮಣೆ. ಹಲಸಿನ ಎಳೆ ಗುಜ್ಜೆಯಿಂದ ಹಣ್ಣಿನ ತನಕ ವಿವಿಧ ವೈವಿಧ್ಯ ಖಾದ್ಯಗಳ ತಯಾರಿ.  ಇವರ ಮನೆಯಲ್ಲಿ ವರುಷದಲ್ಲಿ ನಾಲ್ಕೈದು ಬಾರಿ ಸಮಾರಂಭಗಳು ಜರಗುತ್ತವೆ. ಏನಿಲ್ಲವೆಂದರೂ ನೂರು ಮಂದಿ ಅತಿಥಿಗಳು ಖಚಿತ. ಹೀಗಿದ್ದೂ ಮಾರುಕಟ್ಟೆಯಿಂದ ತರಕಾರಿ ಬರುವುದಿಲ್ಲ. ಹಲಸಿನ ಐಟಂ ಇಲ್ಲದೆ ಸಮಾರಂಭ ಇಲ್ಲ! 'ಇಂದು ಪೆಲಕಾಯಿ (ಹಲಸು) ಉಂಟು' ಎನ್ನುತ್ತಾ ಬರುವ ಹಲಸು ಪ್ರಿಯರೂ ಇದ್ದಾರಂತೆ! 

          ಶಿವಪ್ರಸಾದರ ಅಡುಗೆ ಮನೆ ನಿತ್ಯ ನೂತನ. ಮನೆಯೊಡತಿ ಶೈಲಜಾರಲ್ಲಿ ಹೊಸ ಹೊಸ ಮೆನುಗಳು ರೂಪುಗೊಳ್ಳುತ್ತ, ಅದರ ಅನುಷ್ಠಾನವಾಗುತ್ತಾ ಇರುತ್ತವೆ. ಮನೆಗೆ ನೆಂಟರು ಬಂದರಂತೂ ಖುಷಿಯೋ ಖುಷಿ. ಹೊಸ ಹೊಸ ಖಾದ್ಯಗಳು, ಸಿಹಿಗಳು ತಯಾರಾಗಿ ಬಿಡುತ್ತವೆ. 'ಕೃಷಿಕನಾದವನು ತರಕಾರಿಯಲ್ಲಿ ಶೇ.90ರಷ್ಟು ಸ್ವಾವಲಂಬಿಯಾಗಬೇಕು' ಎನ್ನುವುದು ಅವರ ಬದುಕಿನ ಬದ್ಧತೆ. 

          ಕಾಡು ಮಾವು, ಮಿಡಿ ಮಾವು, ಹಣ್ಣಿಗಿರುವ ಮಾವು.. ಹೀಗೆ ಅವರ ಗುಡ್ಡ ಪೂರ್ತಿ ಮಾವಿನ ಸಂಸಾರ. ಕಾಡು ಮಾವಿಗೆ ಹೆಚ್ಚು ಒಲವು. ಒಂದೊಂದು ಮರದ ಸುತ್ತ ರೋಚಕ ಕತೆಗಳು. 'ಇದು ಅಜ್ಜ ನೆಟ್ಟ ನೀಲಂ ತಳಿ, ಇದು ಚಿತ್ತೂರು ನೀಲಂ..' ಹೀಗೆ ಮಾತಿಗೆಳೆಯುತ್ತಾ, ಅಜ್ಜನ ಮಾವಿನ ಪ್ರೀತಿಯನ್ನು ಜ್ಞಾಪಿಸಿಕೊಳ್ಳುತ್ತಾರೆ:-    
     
            ಅಜ್ಜ ಸುಬ್ಬಯ ಭಟ್ಟರು ಅಡಿಕೆ ವ್ಯಾಪಾರಕ್ಕಾಗಿ ಮಂಗಳೂರಿಗೆ ಹೋಗುತ್ತಿದ್ದರು. ಮಾವು ಸೀಸನ್ನಿನಲ್ಲಿ ಮಂಗಳೂರಿನಿಂದ ಅಜ್ಜಿಗೆ ಕಸಿ ಮಾವಿನ ಹಣ್ಣಿನ ಉಡುಗೊರೆ. ಅಜ್ಜಿಗೆ ಮಾವಿನ ಹಣ್ಣೆಂದರೆ ಪ್ರಾಣ. ಆಗ 'ಹತ್ತು ಮಾವಿನ ಹಣ್ಣು ಖರೀದಿಸಿ ತಂದರೆ ಅದು ಗ್ರೇಟ್. ಅಂತಹವರು ಕಿಂಗ್!' ಎಂಬ ಭಾವನೆ. ಮಾವು ತಮಿಳುನಾಡಿನಿಂದ ಮಂಗಳೂರು ಮಾರುಕಟ್ಟೆಗೆ ಬರುತ್ತಿತ್ತು. 'ನಿನಗೆ ಪ್ರತೀ ವರುಷ ತರುವುದಕ್ಕಿಂತ ನಮ್ಮ ಭೂಮಿಯಲ್ಲಿ ಮಾಡಿದರೆ ಹೇಗೆ?' ಅಜ್ಜನ ದೂರದೃಷ್ಟಿ. ಅಜ್ಜಿಯಿಂದ ಹಸಿರು ನಿಶಾನೆ. 

              ಮಾವು ಮಾರುವವನ ದುಂಬಾಲು ಬಿದ್ದು, ಮೂಲ ನೆಲೆಯ ಪತ್ತೆ. ಐದು ಮಂದಿಯ ತಂಡ ಎತ್ತಿನ ಗಾಡಿಯಲ್ಲಿ ಸೇಲಂಗೆ ಪ್ರಯಾಣ. ಅದರಲ್ಲೊಬ್ಬ ಕಸಿ ಪ್ರವೀಣ. ಸುಂಕದ ಗೇಟ್ನಲ್ಲೆಲ್ಲಾ ನಿಭಾಯಿಸಿಕೊಂಡರು. ಸೇಲಂಗೆ ಹೋಗಿ ಕಸಿ ಕಟ್ಟಿ ಬಂದರು. ಅದರ ನಿರ್ವಹಣೆಗೆ ಸಹಾಯಕರನ್ನು ನೇಮಿಸಿದರು. ಮುಂದಿನ ವರುಷ ಗಿಡಗಳನ್ನು ತರಲು ಪುನಃ ಪ್ರಯಾಣ.  ಹೀಗೆ ಅಭಿವೃದ್ಧಿಯಾದ ಕಸಿ ಮಾವಿನ ಗಿಡಗಳು ವರ್ಮುಡಿಯವರ ತೋಟದಲ್ಲಿ ಅಲ್ಲದೆ, ಕುಟುಂಬಿಕರ ತೋಟದಲ್ಲೂ ಹಣ್ಣು ನೀಡುತ್ತಿದೆ. 
 
                ತರಕಾರಿ ಮಾತ್ರವಲ್ಲ, ತನ್ನೆಲ್ಲಾ ಕೃಷಿಯ ಸುತ್ತ ಬದ್ಧತೆಯ ಕವಚ. ಕೃಷಿಯಲ್ಲಿ ತಾನು ಕಂಡ, ಅನುಭವಿಸಿದ ಸತ್ಯ, ಸಿದ್ಧಾಂತಗಳಲ್ಲಿ ರಾಜಿಯಿಲ್ಲದ ಬದುಕು. ನಿರ್ವಿಷ, ಅಪ್ಪಟ ಸಾವಯವ ಕೃಷಿ.   (09495180307, 04998-225167)

0 comments:

Post a Comment