Tuesday, February 14, 2012

ಅಡುಗೆ ಮನೆಯತ್ತ ಸಾಂಪ್ರದಾಯಿಕ ನಡಿಗೆ

ಆಹಾರಗಳ ಮೂಲಕ ಅವ್ಯಕ್ತವಾಗಿ ಊಟದ ತಟ್ಟೆಗೆ ವಿಷ ಬೀಳುತ್ತಿದೆ! ವಿಷಮುಕ್ತ ಆಹಾರಗಳ ಸೇವನೆಯ ಅನಿವಾರ್ಯಗಳ ಕುರಿತು ಶಾಲಾ ವಿದ್ಯಾರ್ಥಿಗಳಿಗೆ ಪವರ್ ಪಾಯಿಂಟ್ ಮೂಲಕ ಅರಿವನ್ನು ಮೂಡಿಸುವ ತರಗತಿಗಳನ್ನು ಮಾಡುತ್ತಿದ್ದಾಗ ಬಹುತೇಕ ವಿದ್ಯಾರ್ಥಿಗಳಲ್ಲಿ ಮೂಡಿದ ಪ್ರಶ್ನೆ - 'ಹಾಗಿದ್ದರೆ ನಾವು ಏನನ್ನು ಸೇವಿಸಬೇಕು?

ಮನೆಯ ಹಿತ್ತಿಲಿನಲ್ಲಿ, ಸುತ್ತಮುತ್ತಲಿನ ಪರಿಸರದಲ್ಲಿ ಆಹಾರವಾಗಿ ಹೊಟ್ಟೆ ಸೇರಬಹುದಾದ ಎಷ್ಟು ವಸ್ತುಗಳಿಲ್ಲ? ಬಾಳೆಕಾಯಿ, ಕುಂಡಿಗೆ, ಬಾಳೆದಿಂಡು, ಚಿಗುರುಗಳು, ಗೆಡ್ಡೆಗಳು, ಕಾಯಿಗಳು.. ಇವೆಲ್ಲಾ ಊಟದ ಬಟ್ಟಲಿನಿಂದ ದೂರಸರಿದಿವೆ. 'ಸಾರು ಅಂದರೆ ಟೊಮೆಟೋ ಸಾರು, ಸಾಂಬಾರು ಅಂದರೆ ಆಲೂಗೆಡ್ಡೆಯದು, ಪಲ್ಯ ಕ್ಯಾಬೇಜಿನದು'.. ಇಂತಹ ಮೆನುಗಳು ಅಡುಗೆ ಮನೆಗಳಲ್ಲಿ ಸ್ಥಾಪಿತವಾಗಿವೆ.

ತರಕಾರಿ ಅಂಗಡಿಯೊಂದರಲ್ಲಿದ್ದೆ. ಮಗುವಿನೊಂದಿಗೆ ದಂಪತಿ ಖರೀದಿಗೆ ಬಂದಿದ್ದರು. ಶಾಲೆಯೊಂದರ ಪವರ್ಪಾಯಿಂಟ್ ತರಗತಿಯಲ್ಲಿ ಆ ಮಗುವನ್ನು ನೋಡಿದ ನೆನಪು. 'ಸೊಪ್ಪು, ಗೆಡ್ಡೆ ತರಕಾರಿ ಆರೋಗ್ಯಕ್ಕೆ ಒಳ್ಳೆಯದಂತೆ. ಅದನ್ನೇ ತೆಕ್ಕೋ ಅಮ್ಮ..' ಎಂದು ಮಗು ಒತ್ತಾಯಿಸುತ್ತಿತ್ತು. 'ಕರ್ಮ, ಯಾರೋ ಶಾಲೆಗೆ ಬಂದು ನಿನ್ನ ತಲೆ ಹಾಳು ಮಾಡಿರಬೇಕು' ಎಂದು ಬಯ್ಯುತ್ತಲೇ ಮಗುವಿನ ಆಯ್ಕೆಯನ್ನು ಸ್ವೀಕರಿಸಿದರೆನ್ನಿ. ಅಮ್ಮನನ್ನು ಮನಸಾ ಅಭಿನಂದಿಸಿದೆ.

ಮಗು ಆ ತರಕಾರಿಗಳನ್ನೇ ಯಾಕೆ ಆಯ್ಕೆ ಮಾಡಿತು? ಪವರ್ಪಾಯಿಂಟ್ ತರಗತಿಯಲ್ಲಿ ವಿವರಿಸಿದ ಸೊಪ್ಪು, ಗೆಡ್ಡೆ ತರಕಾರಿಗಳ ಆರೋಗ್ಯದಾಯಕ ವಿಚಾರಗಳು ಮಗುವಿನ ಮನಸ್ಸಿಗೆ ಹೊಕ್ಕಿದೆ ಎಂಬುದಕ್ಕೆ ನಿದರ್ಶನ. ಹಾಗೆಂತ ಬೀನ್ಸ್, ಬದನೆ, ಬೆಂಡೆ.. ತರಕಾರಿಗಳು ಅನಾರೋಗ್ಯಕರ ಎಂದರ್ಥವಲ್ಲ. ನಮ್ಮ ನಡುವೆಯೇ ಕೀಟನಾಶಕ ಸಿಂಪಡಿಸದೆ ತಾಜಾ ತರಕಾರಿಗಳನ್ನು ಬೆಳೆಯುವವರು, ಬೆಳೆದು ತಿನ್ನುವವರು ಎಷ್ಟು ಮಂದಿ ಇಲ್ಲ. ವಿಷರಹಿತ ಆಹಾರಗಳನ್ನು ಸ್ವೀಕರಿಸಿದಷ್ಟೂ ಆಸ್ಪತ್ರೆಯಿಂದ ದೂರವಿರಬಹುದು! ತರಕಾರಿ ಮಾತ್ರವಲ್ಲ, ಉದರದೊಳಗೆ ಸೇರುವ ಎಲ್ಲಾ ಪದಾರ್ಥಗಳಲ್ಲೂ 'ಬುದ್ಧಿಪೂರ್ವಕ'ವಾಗಿ ಬೆರೆಸಿದ ಕಲಬೆರಕೆಗಳನ್ನು ಮನತುಂಬಿ ಮನೆ ತುಂಬಿಸಿದ್ದೇವೆ. ಒಪ್ಪಿಕೊಂಡು 'ಅಸಹಾಯಕ'ರು ಎನ್ನುತ್ತಾ ವ್ಯವಸ್ಥೆಯನ್ನು ಅಪ್ಪಿಕೊಂಡಿದ್ದೇವೆ.

ಈಚೆಗೆ ಮಾನ್ಯ ಪ್ರಧಾನಿಗಳು ಮಕ್ಕಳ ಪೌಷ್ಟಿಕ ಆಹಾರದ ಕುರಿತು ಹೇಳಿಕೆ ನೀಡಿದ್ದರಲ್ಲಾ.. ಅಲ್ಲಿಂದ ಶುರುವಾಯಿತು ನೋಡಿ, ಪೌಷ್ಟಿಕ ಆಹಾರಗಳ ಸುತ್ತ ಮಾತುಕತೆ-ಚರ್ಚೆ. ಗ್ರಾಮ್ ಲೆಕ್ಕಾಚಾರದಲ್ಲಿ ಮಗುವಿಗೆ ಆಹಾರವನ್ನು ನೀಡಿದ ಮಾತ್ರಕ್ಕೆ ಪೌಷ್ಟಿಕತೆ ಬಾರದು. ನಿತ್ಯ ಬದುಕಿನ ಆಹಾರದಲ್ಲೂ ಆರೋಗ್ಯಕ್ಕೆ ಸಂಬಂಧಪಟ್ಟಂತೆ ಬೇಕು, 'ಎಚ್ಚರ'.

ಒಂದೆಡೆ ಶಾಲೆಗಳಲ್ಲಿ ನೀಡುತ್ತಿರುವ ಪವರ್ಪಾಯಿಂಟ್ ತರಗತಿ, ಮತ್ತೊಂದೆಡೆ ಅಪೌಷ್ಟಿಕ ಆಹಾರದ ಸುದ್ದಿ. ಈ ಮಧ್ಯೆ ಬಂಟ್ವಾಳ ತಾಲೂಕಿನ ಶಾಲೆಗಳಿಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳಿಂದ ಪ್ರಣೀತವಾದ 'ಆಹಾರ ಸನದು' (ಆಹಾರ ನಿರೂಪ). ಆಹಾರದ ಕುರಿತು ವಿದ್ಯಾರ್ಥಿಗಳಿಗೆ ಅರಿವನ್ನು ಬಿಂಬಿಸಬೇಕೆನ್ನುವ ನನ್ನ ಆಲೋಚನೆಗೆ ಇನ್ನಷ್ಟು ಗರಿಗಳು ಮೂಡಿದುವು.

ಏನಿದು ಆಹಾರ ಸನದು? ಶಾಲಾ ಮಕ್ಕಳ ಆರೋಗ್ಯಕ್ಕಾಗಿ ಸಮತೋಲನ ಆಹಾರವನ್ನು ಒದಗಿಸುವ ಬದ್ಧತೆ. ಸೂಚಿತ ತರಕಾರಿಗಳಲ್ಲಿ ಕೆಲವನ್ನಾದರೂ ಶಾಲೆಯಲ್ಲಿ ನೀಡುವುದಲ್ಲದೆ, ಮನೆಯಲ್ಲೂ ಬಳಸುವ ಮತ್ತು ಬೆಳೆಯುವತ್ತ ಒತ್ತು. ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಕೆ. ಸುಧಾಕರ್ ಅವರ ಮೆದುಳಮರಿಯಿದು. ತನ್ನ ವ್ಯಾಪ್ತಿಯ ಸರಕಾರಿ, ಅನುದಾನಿತ ಶಿಕ್ಷಣ ಸಂಸ್ಥೆಗಳಿಗೆ ನಿರೂಪವನ್ನು ಒದಗಿಸಿ, ಅನುಷ್ಠಾನದ ವರದಿ ಕೊಡುವಂತೆ ವಿನಂತಿಸಿದ್ದಾರೆ.

ಸನದಿನಲ್ಲಿರುವ ತರಕಾರಿಗಳು: ಒಂದೆಲಗ (ತಿಮರೆ), ನುಗ್ಗೆ ಸೊಪ್ಪು, ವಿಟಮಿನ್ಸೊಪ್ಪು, ನೆಲಬಸಳೆ, ಪಪ್ಪಾಯಿ, ಕೆಸುವಿನ ದಂಟು, ಕುಂಬಳಕಾಯಿ, ಬಾಳೆದಿಂಡು, ಕುಂಡಿಗೆ (ಪೂಂಬೆ, ಬಾಳೆಹೂ), ಚಕ್ತೆ ಸೊಪ್ಪು (ಸಜಂಕ್), ಬೇವಿನಸೊಪ್ಪು ಮತ್ತು ಹಲಸಿನ ಬೀಜ.

ಇವುಗಳ ಗುಣಗಳು: ಒಂದೆಲಗದಿಂದ ಬುದ್ಧಿಶಕ್ತಿವರ್ಧನೆ; ನುಗ್ಗೆ ಸೊಪ್ಪಿನಲ್ಲಿ ಹರಿತ್ತು-ಕಬ್ಬಿಣದ ಸತ್ವ ಮತ್ತು ಹಿಮೋಗ್ಲೋಬಿನ್ ಹೆಚ್ಚಳ, ವಿಟಮಿನ್ಸೊಪ್ಪು ಸೇವನೆಯಿಂದ ಶರೀರದ ಎಲ್ಲಾ ಘಟಕಗಳ ಸದೃಢತೆ, ನೆಲಬಸಳೆಯು ಪುಷ್ಟಿಗೆ, ಹಣ್ಣು ಪಪ್ಪಾಯಿಯಿಂದ ಮಲಬದ್ಧತೆ ದೂರ, ರಕ್ತಶುದ್ಧಿಗೆ ಕುಂಬಳಕಾಯಿ, ಬಾಳೆದಿಂಡಿನಲ್ಲಿ ನಾರಿನಂಶವಿರುವುದರಿಂದ ಕರುಳು ಶುದ್ಧಿಗೆ ಸಲೀಸು, ಶರೀರದ ಕ್ರಿಮಿದೋಷಗಳನ್ನು ಚಕ್ತೆಸೊಪ್ಪು ಹೋಗಲಾಡಿಸುತ್ತದೆ. ಜೀರ್ಣಕ್ರಿಯೆ ವೃದ್ಧಿಗೆ ಬೇವಿನಸೊಪ್ಪು. ಕೆಸುವಿನ ದಂಟು ಮತ್ತು ಹಲಸಿನ ಬೀಜ ಸೇರಿಸಿದ ಪದಾರ್ಥ ಊಟಕ್ಕೆ ಒಳ್ಳೆಯ ಕಾಂಬಿನೇಶನ್.

'ಇವೆಲ್ಲವನ್ನೂ ಹಿತವಾಗಿ, ಮಿತವಾಗಿ ಬಳಸಿದರೆ ಮಾತ್ರ ಆರೋಗ್ಯ. ಎಲ್ಲವನ್ನೂ ಎಲ್ಲಾ ದಿವಸ ಬಳಸಬಾರದು' ಎಂದು ಎಚ್ಚರಿಸುತ್ತಾರೆ ಹಿರಿಯ ಮೂಲಿಕಾ ತಜ್ಞೆ ಪಾಣಾಜೆಯ ಜಯಲಕ್ಷ್ಮೀ ವಿ. ದೈತೋಟ.

ಪ್ರತೀ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ, ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿಗಳಿಂದ ಸನದಿನ ಆಶಯವನ್ನು ಅನುಷ್ಠಾಸುವ ಪ್ರತಿಜ್ಞಾ ಸ್ವೀಕಾರದ ಮೂಲಕ ಚಾಲನೆ. ಮಧ್ಯಾಹ್ನದ ಬಿಸಿಯೂಟದಲ್ಲಿ ಬಳಕೆ. ಮನೆಗಳಲ್ಲಿ ಜಾಗೃತಿ. ತಾಲೂಕಿನ ಕೆಲವು ಶಾಲೆಗಳು ಸನದನ್ನು ಅದ್ದೂರಿಯಾಗಿಯೇ ರಂಗಕ್ಕಿಳಿಸಿವೆ! ಜನಪ್ರತಿನಿಧಿಗಳು, ಆಡಳಿತ ಮಂಡಳಿಯ ಉತ್ಸುಕತೆ ಎದ್ದು ಕಾಣುತ್ತದೆ. ಈ ಉತ್ಸಾಹವು ಅನುಷ್ಠಾನದಲ್ಲೂ ಕಂಡರೆ ಯಶಸ್ಸು.

'ಕಳೆದ ವರುಷ ಸಮುದಾಯದತ್ತ ಶಾಲಾ ಕಾರ್ಯಕ್ರಮದಲ್ಲಿ ಇಲಾಖೆಯ ವತಿಯಿಂದ ಆಹಾರ ಪೌಷ್ಟಿಕತೆಯ ಪ್ರಾಮುಖ್ಯತೆಯನ್ನು ತಿಳಿಸಲಾಗಿತ್ತು. ಅದರಂತೆ ಡ್ರಾಯಿಂಗ್, ಚರ್ಚೆ, ಪ್ರಬಂಧಗಳನ್ನು ಶಾಲೆಗಳಲ್ಲಿ ನಡೆಸಲಾಗಿತ್ತು. ಅದರ ಮುಂದುವರಿದ ಭಾಗವೇ ಸನದು' ಎನ್ನುತ್ತಾರೆ ಸುಧಾಕರ್.

ಈಗಾಗಲೇ ಕೆಲವು ಶಾಲೆಗಳಲ್ಲಿ ಸನದಿನಂತೆ ತರಕಾರಿಗಳನ್ನು ಮಕ್ಕಳಿಗೆ ಉಣಿಸಲಾಗುತ್ತದೆ. ಉದಾ: ಅಳಿಕೆ ಸನಿಹದ ಮುಳಿಯ ಶಾಲೆ. ಇಲ್ಲಿನ ಅಧ್ಯಾಪಕ ಮುಳಿಯ ವೆಂಕಟಕೃಷ್ಣ ಶರ್ಮರ ತೋಟದ ತರಕಾರಿಗಳು ವರ್ಷಪೂರ್ತಿ ಬಿಸಿಯೂಟದೊಂದಿಗೆ ಮಕ್ಕಳ ಉದರ ಸೇರುತ್ತಿದೆ. ಅಂಗಡಿಯಿಂದ ತರಕಾರಿ ತಾರದೆ ಎರಡು ವರುಷಗಳೇ ಸಂದವು! ಹಲಸಿನ ಋತುವಿನಲ್ಲಿ ಹಲಸಿನ ಖಾದ್ಯ, ಹಣ್ಣು ಸೇವನೆ, ತರಕಾರಿಗಳು, ಬಾಳೆಯ ಎಲ್ಲಾ ಭಾಗಗಳು, ಗೆಡ್ಡೆಗಳು, ಸೊಪ್ಪುಗಳು.. ಎಲ್ಲವೂ 'ಫ್ಯೂರ್' ಸಾವಯವ. ತನ್ನ ತೋಟದಲ್ಲಿ ಶಾಲೆಗಾಗಿಯೇ ತರಕಾರಿ ಬೆಳೆಯಲು ಒಂದಷ್ಟು ಜಾಗ ಮೀಸಲು. ಇದು ನೂರ ಇಪ್ಪತ್ತೈದು ಮಕ್ಕಳ ಭಾಗ್ಯ, ಏನಂತೀರಿ?

'ನಾನು ತರಕಾರಿ ಕಟ್ಟಿನೊಂದಿಗೆ ಸ್ಕೂಟರಿನಲ್ಲಿ ಶಾಲೆಯಂಗಳದಲ್ಲಿ ಇಳಿದರೆ ಸಾಕು. ಇಂದಿನ ಬಿಸಿಯೂಟಕ್ಕೆ ಯಾವ ತರಕಾರಿ ಅಂತ ಮಕ್ಕಳು ಇಣುಕಿ ನೋಡುತ್ತಾರೆ' ಎನ್ನುತ್ತಾರೆ ಶರ್ಮ. ಮಕ್ಕಳಲ್ಲೂ ಆಸಕ್ತಿ ಕುದುರಿದೆ. ಹಲಸಿನ ಹಣ್ಣನ್ನು ತಂದರಂತೂ ಮಕ್ಕಳ ಬಾಯಿಲ್ಲಿ ಸವಿನೀರು!

ಈಚೆಗೆ ಸನದಿನ ಆರಂಭವನ್ನು ಮುಳಿಯ ಶಾಲೆ ವಿಶಿಷ್ಟವಾಗಿ ಆಚರಿಸಿತು. ಸೂಚಿತ ತರಕಾರಿಗಳನ್ನು ವಿದ್ಯಾರ್ಥಿಗಳೇ ಸಂಗ್ರಹಿಸಿ ಪ್ರದರ್ಶನಕ್ಕಿಟ್ಟಿದ್ದರು. ವರ್ಷವಿಡೀ ತಿಂದು ಸವಿದಿದ್ದ ಮಕ್ಕಳಿಗೆ ಇವನ್ನೆಲ್ಲಾ ಆಯಲು ಕಷ್ಟವಾಗಲೇ ಇಲ್ಲ. ಇಂತಹ ವಾತಾವರಣ ಎಲ್ಲಾ ಶಾಲೆಗಳಲ್ಲಿ ಬಂದುಬಿಟ್ಟರೆ ಸನದಿನ ಅನುಷ್ಠಾನ ಸುಲಭಸಾಧ್ಯ.

ಇಂದು ಶಿಕ್ಷಣದಲ್ಲಿ ಕೃಷಿ ದೂರ. ಸಾಂಸ್ಕೃತಿಕ ಪರಿಕಲ್ಪನೆಗಳು ಇಲ್ಲ. ವಾಹಿನಿಗಳ ರಸಪ್ರಶ್ನೆಗಳಲ್ಲಿ ಬರುವ ಕೃಷಿ ಸಂಬಂಧಿ ಮತ್ತು ಗಿಡ, ಹೂಗಳನ್ನು ಗುರುತಿಸುವ ಪ್ರಶ್ನೆಗಳಲ್ಲಿ ವಿದ್ಯಾರ್ಥಿಗಳು ಗೆಲ್ಲುವುದು ಕಡಿಮೆ. ಆದರೆ ಅಲ್ಲೋ ಇಲ್ಲೋ ಅಧ್ಯಾಪಕರ ಆಸಕ್ತಿಯಂತೆ ವಿದ್ಯಾರ್ಥಿಗಳಿಗೆ ಭತ್ತ, ತರಕಾರಿ ಪಾಠಗಳಾಗುತ್ತಿವೆ. ಪ್ರೌಢ ಶಾಲಾ ಹಂತದ ವರೆಗಾದರೂ ಒಂದು ಅವಧಿ ಕೃಷಿ ಕಲಿಕೆಗೆ ಬೇಕು. ಅದೂ ಥಿಯರಿಗಿಂತ, ಪ್ರಾಕ್ಟಿಕಲ್ಲಿಗೆ ಹೆಚ್ಚು ಒತ್ತು.

ಅಧಿಕಾರಿಗಳ ಸೂಚನೆಯನ್ನು ಶಾಲೆಗಳು ಪಾಲಿಸಿವೆ. ಅದು ಜನಗಣತಿ ದಾಖಲಾತಿಯಂತೆ ಆಗಬಾರದಲ್ವಾ! ಫಾರಂ ಫಿಲ್ ಮಾಡಿದಲ್ಲಿಗೆ ಮುಗಿಯಬಾರದು. ಇಲ್ಲಿ 'ಅನುಷ್ಠಾನ' ಮುಖ್ಯವಾಗುತ್ತದೆ. ಆರೋಗ್ಯದಾಯಕ ಆಹಾರದ ಗಾಢತೆಯ ಬಗ್ಗೆ ಅಧ್ಯಾಪಕರಿಗೆ ಪ್ರತ್ಯೇಕವಾದ ತರಬೇತಿ ಬೇಕಾಗಬಹುದು. ಈಗಾಗಲೇ ಕಾರ್ಯಾಗಾರ, ತರಬೇತಿ, ಸಭೆಗಳ ಭಾರದಿಂದ ಮಾನಸಿಕವಾಗಿ ಕುಗ್ಗಿದ ಅಧ್ಯಾಪಕರಿಗೆ 'ಸನದು' ಭಾರವಾಗದಂತೆ ಪ್ರತ್ಯೇಕ ವ್ಯವಸ್ಥೆ ಬೇಕಾಗಬಹುದು.

'ಬರುವ ಶಿಕ್ಷಣ ವರ್ಷದಿಂದ ಬಿಸಿಯೂಟಕ್ಕೆ ಒಂದು ಚಮಚವಾದರೂ ತಿಮರೆಯ ಚಟ್ನಿ ಮಕ್ಕಳಿಗೆ ಸಿಗಲೇಬೇಕು,' ಸುಧಾಕರ್ ಕನಸು. ಮಕ್ಕಳ ಆರೋಗ್ಯದತ್ತ ಕಾಳಜಿಯುಳ್ಳ, ಕಾಳಜಿಯನ್ನು ಅನುಷ್ಠಾನಗೊಳಿಸುವ ಸುಧಾಕರ್ ಅವರಂತಹ ಶಿಕ್ಷಣಾಧಿಕಾರಿಗಳು ಎಲ್ಲಾ ತಾಲೂಕಿನಲ್ಲೂ ರೂಪುಗೊಳ್ಳಲಿ.

0 comments:

Post a Comment