ಮಂಗಳೂರಿನ ಭಾರತೀಯ ಸ್ಟೇಟ್ ಬ್ಯಾಂಕಿನ ಏಜಿಯೆಂ (ಅಸಿಸ್ಟಾಂಟ್ ಜನರಲ್ ಮ್ಯಾನೇಜರ್, ಸಹಾಯಕ ವ್ಯವಸ್ಥಾಪಕ) ಚೈತನ್ಯ ಎಂ.ತಲ್ಲೂರು. ಎಲ್ಲಾ ಏಜಿಯೆಂಗಳಿಗಿರುವಂತೆ ಸವಲತ್ತಿದೆ. ಸ್ಟೇಟಸ್ ಇದೆ. ಆದರೆ ಇವರೆಂದೂ 'ಮಗುಮ್ಮಾಗಿ'ರುವುದಿಲ್ಲ. ಇವರಿಗೆ 'ಮಾತೇ ಮಾಣಿಕ್ಯ'. ಕೃಷಿಯ ಸುದ್ದಿ ಬಂದಾಗ ಇವರ ಮೈಯೆಲ್ಲಾ ಕಣ್ಣಾಗುತ್ತದೆ!
ವಾಸ್ತವ್ಯದ ಮನೆ? ದುಬಾರಿ ಕ್ರೋಟಾನ್, ಗುಲಾಬಿ, ಲಾನಿನ ಹುಲ್ಲಿನಿಂದ ಅಂದವರ್ಧನೆ. ಇದಕ್ಕೊಬ್ಬ ಮಾಲಿ. ನಿತ್ಯ ನೀರೆರೆಯುವ 'ದೊಡ್ಡ' ಕೆಲಸ. ಗಿಡಗಳು ನೆಲಕಚ್ಚಿದಾಗ ಮತ್ತೆ ಪುನಃ ತಂದು ನೆಡುವುದು. ನೀರು ಹಾಕುವುದು, ಆರೈಕೆ ಮಾಡುವುದು - ಇಷ್ಟು ಕೆಲಸ. ಅನಾವಶ್ಯಕವಾದ ಈ 'ಸಾಂಪ್ರದಾಯಿಕ' ಕೆಲಸಕ್ಕೆ ತಲ್ಲೂರು ತಡೆಯಾಜ್ಞೆ! ಅಲ್ಲೆಲ್ಲಾ ತರಕಾರಿ ಕೃಷಿ. ಮಾಲಿ ಅದಕ್ಕೆ ಹೊಂದಿಕೊಂಡಿದ್ದಾರೆ.
ತಲ್ಲೂರು ತರಕಾರಿ ಬೆಳೆಯಬೇಕಾಗಿಲ್ಲ. ತಿಂಗಳ ಕೊನೆಗೆ ಗರಿಗರಿ ಎಣಿಸುವ ಹುದ್ದೆ. ಎಡಗೈಗೆ, ಬಲಗೈಗೆ ಸಹಾಯಕರು. ಓಡಲು ಕಾರು - ಎಲ್ಲವೂ ಇದೆ. 'ಸಹಜವಾಗಿ ಬದುಕಬೇಕು' ಎನ್ನುವುದು ಜಾಯಮಾನ. 'ವಿಷರಹಿತವಾಗಿ ಒಂದಾರು ತಿಂಗಳಾದರೂ ತರಕಾರಿ ತಿನ್ನಬಹುದಲ್ಲಾ' ಎನ್ನುತ್ತಾರೆ.
ಕಳೆದ ವರುಷ ಮೆಣಸು, ಮೂಲಂಗಿ, ಬದನೆ, ಅಲಸಂಡೆ, ನಾಲ್ಕು ವಿಧದ ಬೀನ್ಸ್ ಬರೋಬ್ಬರಿ. ಈ ವರುಷ ಬದನೆ, ಅಲಸಂಡೆ, ಅವರೆಯ ಸರದಿ. ಟೊಮ್ಯಾಟೋ ಗಿಡಗಳದ್ದೇ ಸಿಂಹಪಾಲು. 'ದಿನಂಪ್ರತಿ ಎಂಟ್ಹತ್ತು ಟೊಮೆಟೋ ಸಿಕ್ಕೇ ಸಿಕ್ತದೆ. ಅದರ ಸಲಾಡ್, ಸಾಸ್ ಇಲ್ಲದೆ ಊಟವಿಲ್ಲ'. ಕುಂಡಗಳಲ್ಲಿ ಬ್ರಾಹ್ಮಿ, ಒಂದೆಲಗ. ಈಗ 'ಯಾಮ್ ಬೀನ್' ಎಂಬ ಗೆಡ್ಡೆತರಕಾರಿ ಅವರ ತೋಟದ ಹೊಸ ಅತಿಥಿ!
ಒಂದು ಕೊತ್ತಂಬರಿ ಸೊಪ್ಪಿನ ಕಟ್ಟು, ಶುಂಠಿಯ ತುಂಡು ಬೇಕೆಂದರೂ, ಬೈಕ್ ಚಾಲೂ ಮಾಡಿ ಮಾರುಕಟ್ಟೆಗೆ ಹೋಗಬೇಕು. ಟ್ರಾಫಿಕ್ ಜಾಂ ಬೇರೆ. ವಾಹನ ನಿಲುಗಡೆಗೆ ಮೊದಲೇ ಸ್ಥಳವಿಲ್ಲ. ಯಾರ್ಯಾರದ್ದೋ ಪಿರಿಪಿರಿ! ಒಂದಷ್ಟು ಮಾಲಿನ್ಯ ಸೇವನೆ. ಜತೆಗೆ ಟೆನ್ಶನ್. ಇದನ್ನೆಲ್ಲಾ ಅನುಭವಿಸಿ ಮನೆ ಸೇರಿದಾಗ ಕೊತ್ತಂಬರಿ ಸೊಪ್ಪು ಬಾಡಿರುತ್ತದೆ! ಪೇಟೆಯ ಜೀವನವನ್ನು ತಲ್ಲೂರು ಕಣ್ಣಿಗೆ ಕಟ್ಟುವಂತೆ ಹೇಳುತ್ತಾರೆ.
ಮಾತನಾಡುತ್ತಿದ್ದಂತೆ - 'ಶುಂಠಿ ನಮ್ಮ ನಿರಖು ಠೇವಣಿ. ಇಷ್ಟದ ದಾಲ್ ತೊವ್ವೆಗೆ ಇದಿಲ್ಲದೆ ರುಚಿಯೇ ಇಲ್ಲ. ಹಿತ್ತಿಲಿನಲ್ಲಿದೆ, ಬೇಕಾದಾಗ ಠೇವಣಿ ಮುರಿದರಾಯಿತು' ಮನೆಯೊಡತಿ ಅನಿತಾ ದನಿಸೇರಿಸಿದರು.
'ಮಂಗಳೂರಿಗೆ ಒಂದು ದಿವಸ ತರಕಾರಿಯ ಲಾರಿ ಬಾರದಿದ್ದರೆ ಇಲ್ಲಿನ ಅಡುಗೆ ಮನೆಗಳಲ್ಲಿ ಸಾಂಬಾರು ಆಗುವುದೇ ಇಲ್ಲ'! ಹತ್ತು ರೂಪಾಯಿಯ ತರಕಾರಿಗೆ ನೂರು ರೂಪಾಯಿ ಆಗುತ್ತದೆ - ವಾಸ್ತವದತ್ತ ಬೆಳಕು ಚೆಲ್ಲುತ್ತಾರೆ.
ನಿತ್ಯ ಬೆಳಿಗ್ಗೆ ಒಂದಷ್ಟು ಹೊತ್ತು ಗಿಡಗಳ ಜತೆ. 'ಇದೆಲ್ಲಾ ಸಹಾಯಕರನ್ನು ನಂಬಿ ಮಾಡುವ ಕೆಲಸವಲ್ಲ. ಸ್ವತಃ ಮಾಡಿದಾಗ ತರಕಾರಿಯ ರುಚಿಯೇ ಬೇರೆ'. 'ತನ್ನ ಮಕ್ಕಳಿಗಿಂತ ಹೆಚ್ಚು ಗಿಡಗಳನ್ನು ಪ್ರೀತಿಸುತ್ತಾರೆ. ಒಂದು ಗಿಡಕ್ಕೆ ಏಟಾದರೂ ಅವರು ಸಹಿಸುವುದಿಲ್ಲ.' ಗಂಡನ ಕೆಲಸಕ್ಕೆ ಅನಿತಾ ಸಹಮತ.
ಸರಿ, ತರಕಾರಿ ಬೆಳೆಯುತ್ತಾರೆ. ಇಬ್ಬರು ಮಕ್ಕಳು ಸೇರಿದಂತೆ ಒಟ್ಟು ನಾಲ್ಕು ಮಂದಿ. ಇಷ್ಟು ಮಂದಿಗೆ ಇಷ್ಟೊಂದು ತರಕಾರಿ ಬೇಕಾ? ಪ್ರಶ್ನೆ ಸಹಜವಾಗಿ ಮೂಡುತ್ತದೆ. 'ಬ್ಯಾಂಕಿನ ಕ್ಯಾಂಟಿನ್ಗೆ ಈ ತರಕಾರಿ. ಸಾಂಬಾರಿಗೂ ಇದೇ. ಬ್ಯಾಂಕಿನಲ್ಲಿ ನನ್ನ ತರಕಾರಿಗೆ ಗಿರಾಕಿಗಳಿದ್ದಾರೆ. ಹಣಕ್ಕಾಗಿ ಅಲ್ಲ. ಇನ್ನೂ ಹೆಚ್ಚು ಉಳಿದರೆ ಗಣಕಯಂತ್ರದಲ್ಲಿ 'ತಾಜಾ ತರಕಾರಿ ಕ್ಯಾಂಟಿನ್ನಲ್ಲಿ ಲಭ್ಯ' ಅಂತ ಬರೆದುಬಿಡುತ್ತೇನೆ. ಪ್ರತೀ ಟೇಬಲ್ಗೂ ಗಣಕಯಂತ್ರವಿದೆ. ತೆರೆದಾಕ್ಷಣ ತರಕಾರಿ ಕತೆ ಬಂದುಬಿಡುತ್ತದೆ'. ನಿರ್ವಿಷ ತರಕಾರಿ ಹಂಚುವ ತಲ್ಲೂರು ತಂತ್ರವಿದು.
ಬಸವರಾಜ್ ಮಾಲಿ. ಜನರೇಟರ್ ಉಸ್ತುವಾರಿಯ ಮಹೇಶ್ - ಇವರಿಬ್ಬರು ತಲ್ಲೂರು ತರಕಾರಿ ಕೃಷಿಯಲ್ಲಿ ಸಹಕರಿಸುವವರು. ಹಗಲುಹೊತ್ತು ಗಿಡಗಳ ಉಸ್ತುವಾರಿ ಇವರದ್ದೇ. 'ಸಾಹೇಬ್ರು ಏನೋ ಮಾಡ್ತಾರೆ' ಅಂತ ಗೊತ್ತಿದೆ. 'ಮೇಲಧಿಕಾರಿ ಅಲ್ವಾ' ಅಂತ ಸ್ಪಂದಿಸುತ್ತಾರೆ. ಈಗಂತೂ ತರಕಾರಿ ಕೃಷಿಯಲ್ಲಿ ಅವರು ಸ್ಪೆಷಲಿಸ್ಟ್
ತರಕಾರಿ ಕೃಷಿಗೆ ಯಾವುದೇ ರಾಸಾಯನಿಕ ಇದುವರೆಗೆ ಬಳಸಿಲ್ಲ. ನೈಸರ್ಗಿಕವಾಗಿ ಬೆಳೆದಾಗ ತರಕಾರಿ ರುಚಿ. ಕೆಲವೊಂದು ಕೀಟಗಳು ಬಾಧೆ ಕೊಡುತ್ತಿವೆ. ವಿಷರಹಿತ ಚಿಕಿತ್ಸೆಯ ಹುಡುಕಾಟದಲ್ಲಿದ್ದಾರೆ.
ತಲ್ಲೂರು ಕೃಷಿಕ ಅಲ್ಲ! ಮೂಡಿಗೆರೆಯಲ್ಲಿ ಬ್ಯಾಂಕಿನ ಕೃಷಿ ವಿಭಾಗದ ಕ್ಷೇತ್ರಾಧಿಕಾರಿಯಾಗಿದ್ದರು. ಕೃಷಿಕರೊಂದಿಗೆ ಬೆರೆಯುವ ಅವಕಾಶ ಪ್ರಾಪ್ತವಾದುದರಿಂದ, 'ನಾನೂ ಕೃಷಿ ಮಾಡಬೇಕು' ಎಂಬು ತುಡಿತ ಶುರುವಾಗಿತ್ತು. ಅದು ಅನುಷ್ಠಾನಕ್ಕೆ ಬಂದುದು ಮಂಗಳೂರಿನಲ್ಲಿ.
ಮನೆಸುತ್ತ ತರಕಾರಿ ಗಿಡಗಳು ತುಂಬಿವೆ. 'ಜಾಗವಿಲ್ಲವಲ್ಲಾ' ಕೊರಗು. ತಾರಸಿಯಲ್ಲಿ ಬೆಳೆಸಿದರೆ ಹೇಗೆ? ಆಲೋಚನೆಯಲ್ಲಿದ್ದಾರೆ ಏಜಿಯಂ. ತಲ್ಲೂರು ದಂಪತಿಗಳ 'ತರಕಾರಿ ಬ್ಯಾಂಕಿಂಗ್'ನಲ್ಲಿ ನೋಡುವಂತಹ, ತಿಳಿದುಕೊಳ್ಳುವಂತಹ ವಿಚಾರ ಇಲ್ಲದಿರಬಹುದು. ಆದರೆ ಕುತೂಹಲ. ಪ್ರಯತ್ನ ಮತ್ತು ಪ್ರಯೋಗ ಸೇರಿದೆ.
Home › Unlabelled › ಹಸಿರು ಪ್ರೀತಿಯ ಏಜಿಯಂ!
0 comments:
Post a Comment