
ಕುರಿಯಾಜೆ ತಿರುಮಲೇಶ್ವರ ಭಟ್ಟರಿಗೆ 'ಕೃಷಿ ಪಂಡಿತ' ಪ್ರಶಸ್ತಿ ಬಂತು. ಯಾವುದೇ 'ಢಾಂಢೂಂ' ಸದ್ದಾಗಲಿಲ್ಲ, ಸದ್ದು ಮಾಡಲೂ ಇಲ್ಲ. ರಾಜಧಾನಿಯಲ್ಲಿ ನೀಡುವ ಪ್ರಶಸ್ತಿ ತಾಲೂಕಿನ ಚಿಕ್ಕ ಕಾರ್ಯಕ್ರಮವೊಂದರಲ್ಲಿ ನೀಡಲಾಗಿತ್ತು. ಆಗಲೂ ನಿರ್ಲಿಪ್ತ ಭಾವ. 'ಪ್ರಶಸ್ತಿ ಬಂತೆಂದು ಉಬ್ಬಿದರೆ ಎರಡು ಕೋಡು ಜಾಸ್ತಿ ಬರುತ್ತದೆ! ತೋಟದ ಕೆಲಸ ಮಾಡುವವರಾರು' ಪ್ರಶ್ನಿಸುತ್ತಾರೆ.
ಸಮಗ್ರ ಕೃಷಿ ಪದ್ದತಿಯ ಅಳವಡಿಕೆಗೆ ಈ ಪ್ರಶಸ್ತಿ. ಭಟ್ಟರ ತೋಟದಲ್ಲಿ ಏಕ ಕೃಷಿಯಿಲ್ಲ. ಐದೆಕ್ರೆ ತುಂಬಾ ಹಲವು ವಿಧದ ಕೃಷಿಗಳು. ತನ್ನದೇ ಆದ ವಿಧಾನಗಳು. 'ಒಂದೇ ಕೃಷಿಯನ್ನು ನೆಚ್ಚಿಕೊಂಡರೆ ಬದುಕು ತಲ್ಲಣ. ಒಂದು ಕೈಕೊಟ್ಟರೆ ಇನ್ನೊಂದು ಆಧರಿಸಬೇಕು' - ಎನ್ನುವ ಕುರಿಯಾಜೆಯವರ ತೋಟ ಒಮ್ಮೆ ಸುತ್ತಾಡಿ ಬನ್ನಿ - ಯಾವುದುಂಟು, ಯಾವುದಿಲ್ಲ! ಪ್ರತೀಯೊಂದರಲ್ಲಿ ತನ್ನದೇ ಆದ ಜಾಣ್ಮೆ.
ಕೃಷಿಯ ಮಾತು ಹಾಗಾಯಿತು, ಕೃಷಿ ಅನುಭವಕ್ಕೆ ಅವರನ್ನೊಮ್ಮೆ ಮಾತನಾಡಿಸಿ. ಪ್ರತೀಯೊಂದು ಕೃಷಿಗೂ ಒಂದೊಂದು ಸಾಪ್ಟ್ವೇರ್! ಇವೆಲ್ಲಾ 'ಕೃಷಿ ತಿರುಗಾಟದಿಂದ ಬಂದ ಅನುಭವ' ಎನ್ನುತ್ತಾರೆ.
ಸಾಮಾನ್ಯವಾಗಿ - 'ಕೃಷಿಕನಿಗೆ ತಿರುಗಾಟ ಹೇಳಿಸಿದ್ದಲ್ಲ' ಅನ್ನುತ್ತೇವೆ. ಕುರಿಯಾಜೆಯವರು ಭಿನ್ನ. ಕೃಷಿ ಮೇಳವಿರಲಿ, ಕಾರ್ಯಾಗಾರವಿರಲಿ, ಕೃಷಿ ಪ್ರವಾಸವಿರಲಿ ಹಾಜರ್. ಹೀಗೆ ಹೋದಾಗ 'ಆಕಳಿಸುತ್ತಾ' ಕೂರುವ ಜಾಯಮಾನದವರಲ್ಲ! ಟೈಂಪಾಸೂ ಅಲ್ಲ!
ಸಮಾರಂಭಗಳಲ್ಲಿ ಭಾಗವಹಿಸಿದಾಗ ಸಿಕ್ಕ ಮಾಹಿತಿ, ಲಭ್ಯ ಗಿಡ-ಬೀಜಗಳತ್ತ ಆಸಕ್ತ. ಅಂತವುಗಳು ತನ್ನ ತೋಟಕ್ಕೆ ಸೂಕ್ತವೇ ಎಂಬ ಚಿಂತನೆ. ಸೂಕ್ತವೆಂದಾದರೆ ಮಾಹಿತಿಯ ಬೆನ್ನೇರುತ್ತಾರೆ. ಎಷ್ಟೇ ಶ್ರಮವಾದರೂ ತೋಟದಲ್ಲಿ ಅನುಷ್ಠಾನವಾದಾಗಲೇ ವಿಶ್ರಾಂತಿ.
'ಕೃಷಿ ತಿರುಗಾಟ ತೋರಿಕೆಗೆ ನಷ್ಟವೆಂದು ಕಂಡರೂ ಎಮ್ಮೆಗೆ ಹಾಕಿದ ಹಿಂಡಿಯಂತೆ. ಕೃಷಿಕ ಒಂದಷ್ಟು ಊರು ಸುತ್ತಬೇಕು. ಅನುಭವಗಳಿಸಿಕೊಳ್ಳಬೇಕು. ಇನ್ನೊಬ್ಬ ಕೃಷಿಕನನ್ನು ಒಪ್ಪುವ ಮನಸ್ಸನ್ನು ರೂಢಿಸಿಕೊಳ್ಳಬೇಕು' ಎನ್ನುವುದು ಅನುಭವದಿಂದ ಕಂಡ ಸತ್ಯ.
ಅವರ ಮನೆಯಾವರಣ ಹೊಕ್ಕಾಗಲೇ 'ತಿರುಗಾಟದ ಫಲ' ಗೋಚರವಾಗುತ್ತದೆ. ಅಂಗಳ ಹೊಕ್ಕಾಗ 'ರೆಸಾರ್' ಅನುಭವ. ಅಲಂಕಾರಿಕ ಗಿಡಗಳು, ವಿವಿಧ ಹೂವಿನ ಗೀಡಗಳು, ಕ್ಯಾಕ್ಟಸ್ಗಳು, ನೀರಿನ ಝರಿಗಳು, ಚಿತ್ತಾಕರ್ಷಕ ಕಲ್ಲುಗಳ ಜೋಡಣೆ' ಮನೆಯ ಅಂದವನ್ನು ಹೆಚ್ಚಿಸಿದೆ. ಎಲ್ಲವೂ ಒಪ್ಪ-ಓರಣ. ಒಂದೊಂದು ಗಿಡದ ಹಿಂದೆ ತಿರುಗಾಟದ ಕಥೆಯಿದೆ.
'ದಿವಸದಲ್ಲಿ ಒಂದು ಗಂಟೆ ಆರೈಕೆಗೆ ಮೀಸಲು. ಇಷ್ಟನ್ನು ಕೊಡಲು ಸಾಧ್ಯವಿಲ್ಲವೇ. ಮನಸ್ಸು ಬೇಕಷ್ಟೇ' ಎನ್ನುತ್ತಾರೆ. 350ಕ್ಕೂ ಮಿಕ್ಕಿದ ಕ್ಯಾಕ್ಟಸ್ ಸಂಸಾರ. ಈ ಹವ್ಯಾಸ ದುಬಾರಿ ವೆಚ್ಚದ್ದಾದರೂ, ವಿನಿಮಯ ರೂಪದ್ದೇ ಸಿಂಹಪಾಲು. ಕೆಲವು ರೊಕ್ಕದವು. ಕರಾವಳಿಯಲ್ಲಿ ಯಾಕೋ ಇದನ್ನು ಉದ್ಯಮವನ್ನಾಗಿ ಮಾಡುತ್ತಿಲ್ಲ! ನಗರದಲ್ಲಿ ಬೇಡಿಕೆಯಿದೆ.
ಹೈನುಗಾರಿಕೆ ಅಂದಾಗೆ 'ಎಷ್ಟು ಹಸುಗಳಿವೆ, ಜರ್ಸಿಯೋ-ನಾಟಿಯೋ, ಹೊತ್ತಿಗೆ ಹಾಲೆಷ್ಟು' ಎಂದು ಸಾಮಾನ್ಯವಾಗಿ ಪ್ರಶ್ನಿಸುತ್ತಾರೆ. ಭಟ್ಟರಲ್ಲಿರುವುದು ನಾಲ್ಕು ಎಮ್ಮೆಗಳು. 'ಎಮ್ಮೆಯಲ್ಲಿ ದನಗಳಿಗಿಂತ ಸೆಗಣಿ ಜಾಸ್ತಿ. ಸ್ಲರಿ ದಪ್ಪ. ಸತ್ವ ಹೆಚ್ಚು. ಅನಿಲದ ಉತ್ಪಾದನಾ ಪ್ರಮಾಣವೂ ಅಧಿಕ' ಎನ್ನುತ್ತಾರೆ.
ಸಂಕರ ತಳಿಯ ದನಗಳಿಗೆ ಹೈಟೆಕ್ ಹಟ್ಟಿ ಬೇಕು. ಶ್ರೀಮಂತ ಸಾಕಣೆ ಬೇಕು. ಎಮ್ಮೆಗಳು ಸರಳ ಹಟ್ಟಿಗೆ ಒಗ್ಗಿಕೊಳ್ಳುತ್ತವೆ. 'ಎಮ್ಮೆಯ ಹಾಲನ್ನು ಕರೆಯಲು ಕಷ್ಟ' ಎಂಬ ಭಾವನೆಯಿದೆ. ಕುರಿಯಾಜೆ ಹೇಳುತ್ತಾರೆ - ಎಮ್ಮೆಗೆ ಮೊದಲು ಆಹಾರ ನೀಡಿ. ಅವುಗಳ ಹೊಟ್ಟೆ ತುಂಬಲಿ. ನಂತರ ಹಾಲು ಕರೆಯಿರಿ'.
ಭಟ್ಟರ ಕುಟುಂಬಕ್ಕೆ ಇಪ್ಪತ್ತೆಕ್ರೆ ಸ್ಥಳ. ಕೌಟುಂಬಿಕ ವ್ಯವಸ್ಥೆಯ ಅನುಕೂಲಕ್ಕಾಗಿ ಬಾಯ್ದೆರೆಯಾಗಿ ಅಣ್ಣ-ತಮ್ಮಂದಿರು ವಿಭಾಗಿಸಿಕೊಂಡಿದ್ದಾರೆ. ತನ್ನ ಪಾಲಿಗೆ ಬಂದ ಐದೆಕ್ರೆ ಜಾಗದಲ್ಲಿನ ಕೃಷಿ ಜಾಣ್ಮೆಗಳನ್ನು ಕುಟುಂಬದವರೆಲ್ಲಾ ಪ್ರೋತ್ಸಾಹಿಸುತ್ತಿರುವುದು ಕೃಷಿಯ ಯಶಸ್ಸಿನ ಗುಟ್ಟು. ಇದರಲ್ಲಿ ಎರಡು ಎಕರೆ ಅಡಿಕೆ ತೋಟ, ಮೂರು ಎಕರೆಯಲ್ಲಿ ರಬ್ಬರ್, ಹಣ್ಣು, ತರಕಾರಿ, ತೆಂಗು. ಹುಲ್ಲು.
ತೋಟಕ್ಕೆ 'ಸ್ಲರಿ' ಮೂಲ ಗೊಬ್ಬರ. 'ಹಟ್ಟಿಗೊಬ್ಬರ' ಅಂತ ಪ್ರತ್ಯೇಕವಿಲ್ಲ! ಸ್ಲರಿಯನ್ನು ಸೋಸಿ ಅಡಿಕೆ ಮರಗಳ ಬುಡಕ್ಕೆ ಸ್ಲರಿ ಹಿಡಿಯುತ್ತಾರೆ. ವರುಷಕ್ಕೊಮ್ಮೆ ಕೋಳಿಗೊಬ್ಬರ. ರಾಸಾಯನಿಕ ಗೊಬ್ಬರಕ್ಕೆ ಕಳೆದೆರಡು ವರುಷಗಳಿಂದ ವಿದಾಯ.
ಒಂದು ಕಾಲಘಟ್ಟದಲ್ಲಿ ವೆನಿಲ್ಲಾದ ಕಾಂಚಾಣ ಝಣಝಣವಾದ ದಿವಸಗಳಿದ್ದುವು. 'ಒಂದು ಮೀಟರ್ ಬಳ್ಳಿಗೆ ಇಂತಿಷ್ಟು' ಲೆಕ್ಕಾಚಾರ. ಮಾಧ್ಯಮಗಳಲ್ಲಿ ರಂಗುರಂಗಿನ ವರದಿ. ಸಮಾರಂಭಗಳಿಗೆ ಹೋದಾಗಲೂ ವೆನಿಲ್ಲಾದ್ದೇ ಮಾತುಕತೆ. ಇಂತಹ ಹೊತ್ತಲ್ಲೂ ಕುರಿಯಾಜೆಯವರನ್ನು ವೆನಿಲ್ಲಾ ಬಳ್ಳಿ ಸುತ್ತಿಲ್ಲ!
'ನಮ್ಮ ಕೃಷಿಕರ ಅವಸ್ಥೆಯೇ ಹೀಗೆ - ರಬ್ಬರ್ಗೆ ದರವಿದೆ ಅಂದಾಗ ಅಡಿಕೆಯನ್ನು ಬದಿಗಿಟ್ಟರು. ರಬ್ಬರಿನ ಹಿಂದೆ ಹೋದರು. ಹಸಿರು ಗುಡ್ಡಗಳೆಲ್ಲಾ ನೆಲಸಮವಾದುವು' ಬೊಟ್ಟು ಮಾಡುತ್ತಾರೆ. ದಶಕಕ್ಕಿಂತಲೂ ಮೊದಲೇ ಭಟ್ಟರು ರಬ್ಬರ್ ಗಿಡ ಹಾಕಿದ್ದರು. ಈಗಿನಂತೆ ರಬ್ಬರ್ ಮಾಹಿತಿಗಳು ಬೆರಳ ತುದಿಯಲ್ಲಿಲ್ಲದ ಸಮಯ. 'ರಬ್ಬರ್ ಅನುಭವ ನನಗಂದು ಕೃಷಿ ತಿರುಗಾಟದಿಂದ ಬಂತು' ಎನ್ನುತ್ತಾರೆ.
'ಹೊಸದು ಯಾವುದು ಗೋಚರವಾದರೂ ಅದು ತನ್ನ ಸ್ಥಳದಲ್ಲಿರಬೇಕೆಂಬ ಹಂಬಲ'. ಭಟ್ಟರ ಎಲ್ಲಾ ಆಸಕ್ತಿಯ ಹಿಂದೆ ಪತ್ನಿ ಪಾವನಾ ಅವರ ಬೆಂಬಲ.
0 comments:
Post a Comment