Monday, January 11, 2010

ಮನೆಗಲ್ಲ, ಅಂತಕನಲ್ಲಿಗೆ!

ಇನ್ನೇನು ರೈಲು ಬರುವ ಹೊತ್ತು. ಗೇಟ್ಮ್ಯಾನ್ ರಂಗಪ್ಪ ಗೇಟ್ ಹಾಕಿ ಐದಾರು ನಿಮಿಷ ಆಯಿತು. ಎರಡೂ ಬದಿಯ ವಾಹನಗಳಿಗೆ ತಡೆ. 'ರೈಲಿನ ಕೂಗು ಕೇಳುತ್ತಿಲ್ಲ. ಇಷ್ಟು ಬೇಗ್ ಗೇಟ್ ಹಾಕಿ ಬಿಟ್ಟವ್ನೆ' ವಾಹನ ಚಾಲಕರು ಹಿಡಿಶಾಪ ಹಾಕುತ್ತಿದ್ದರು.

ರೈಲೇನೋ ಬಂತು - ಆದರದು ಕಣ್ಣಿಗೆ ಕಾಣಿಸುವಷ್ಟು ದೂರದಲ್ಲಿ ಝಂಡಾ ಊರಿತ್ತು. ಜತೆಗಿದ್ದ ಸತೀಶ್ ಹೇಳಿದರು - 'ಮಾಮ.. ರೈಲು ನಿಂತ್ಬುಟ್ಟಿದೆ. ಸ್ವಲ್ಪ ಗೇಟ್ ಮೇಲೆತ್ತು. ನಾವು ಹೋಗ್ಬಿಡ್ತೀವಿ' ಎಂದರು. 'ಅದಾಗೊಲ್ಲ. ಏನ್ರಿ.. ನನಗೋ ವಿದ್ಯೆಯಿಲ್ಲ. ವಿದ್ಯೆ ಇದ್ದ ನೀವೇ ಹೀಗ್ಮಾಡಿದ್ರೆ ಏನ್ಕತೆ. ಏನಾದ್ರೂ ಹೆಚ್ಚೂ-ಕಮ್ಮಿ ಆಗ್ಬುಟ್ರೆ! ನನ್ನ ಅನ್ನ ತೆಗೆಯೋ ಆಸೆ ನಿಮಗಿದ್ಯಾ' ಎಂದರು.

ರಂಗಪ್ಪ ಅವರ ವೃತ್ತಿ ನಿಷ್ಠೆ ಮುಂದೆ ಎಲ್ಲವೂ ಕುಬ್ಜವಾಗಿ ಕಂಡವು! ಸರಿ, ಸ್ವಲ್ಪ ಹೊತ್ತಲ್ಲಿ ರೈಲು ಹಾದು ಹೋಯಿತು. ಗೇಟಿನ ಆಚೀಚೆ ನಿಂತ ವಾಹನಗಳೆಲ್ಲಾ ಚಾಲೂ ಆಗಿ, ಎಕ್ಸಲೇಟರ್ನ 'ಧಾರಣಾ ಶಕ್ತಿ'ಯನ್ನು ಪರೀಕ್ಷೆ ಮಾಡುತ್ತಿದ್ದುವು!. ಇನ್ನೂ ಕೆಲವರು ತಂತಮ್ಮ ವಾಹನಗಳ 'ಹಾರ್ನಗೆ ಎಷ್ಟು ಕರ್ಕಶತೆ ಇದೆ ಅಂತ ಪ್ರಯತ್ನಿಸುತ್ತಿದ್ದರು. ಇಷ್ಟಾದಾಗಲೂ ಗೇಟ್ ತೆರೆಯುವ ಲಕ್ಷಣ ಕಾಣಿಸುತ್ತಿಲ್ಲ.

ಇದ್ಯಾವುದೂ ರಂಗಪ್ಪರಿಗೆ ಕೇಳಿಸುತ್ತಿರಲಿಲ್ಲ. ಯಾಕೆಂದರೆ ಅವರಿಗೆ ಗೊತ್ತಿರೋದು ರೈಲಿನ ಚುಕುಪುಕು ಶಬ್ದ ಮತ್ತು ಅದರ ಕೂಗು! ಇವೇ ಅವರಿಗೆ ಬದುಕು. ಆಗಲೇ ಭರ್ತಿ ಇಪ್ಪತ್ತು ನಿಮಿಷ ರಸ್ತೆ ಬ್ಲಾಕ್ ಆಗಿತ್ತು!

ಪಾಪ, ಸಹಸ್ರನಾಮಗಳ ಸುರಿಮಳೆ. ತಂತಮ್ಮ ಶಬ್ದ ಭಂಡಾರಗಳ ಸ್ವ-ಪರೀಕ್ಷೆ! ಯಾಕೆ ಇಷ್ಟು ತಡವಾಗುತ್ತಿದೆ - ಸತೀಶ್ ಜತೆ ಗೇಟ್ನ ಬಳಿ ಹೋಗಿ ನೋಡಿದಾಗ 59ರ ರಂಗಪ್ಪ ಗೇಟ್ ತೆರೆಯುವ-ಮುಚ್ಚುವ ತಿರುಗಣೆ ಸಾಧನದ ಹಿಡಿಯನ್ನು ತಿರುಗಿಸಲಾಗದೆ ಒದ್ದಾಡುತ್ತಾ ಬೆವರೊರೆಸಿಕೊಳ್ಳುತ್ತಿದ್ದರು. ಒಂದು - ವಯಸ್ಸಿನ ತೊಂದರೆ, ಮತ್ತೊಂದು ಸಾಧನದ ಯಾವುದೋ ಒಂದು ಭಾಗ ಕೆಟ್ಟಿತ್ತು. ಅಂತೂ ಕಷ್ಟದಲ್ಲಿ ಗೇಟ್ ತೆರೆಯಲ್ಪಟ್ಟಿತೆನ್ನಿ.

ಆಗ ನೋಡ್ಬೇಕು. ಎರಡೂ ಕಡೆಯ ವಾಹನಗಳು ಹೋಗುವ ರಭಸ. ರಂಗಪ್ಪರನ್ನು ಕೆಕ್ಕರಿಸಿ ನೋಡುವ ಕಣ್ಣುಗಳು. '.. ಮಗನೆ.. ನಿಂಗಾಕೋ ಈ ಕೆಲ್ಸ. ಬಿಟ್ಟು ಹೋಗ್ಬಾರದಾ' ಎಂದೊದರುವ ಬಿಸಿರಕ್ತದ ಹೊಂತಕಾರಿಗಳು. ಇದೆಲ್ಲವನ್ನೂ ಕೇಳಿಯೂ ಕೇಳದಂತಿರಲು ಅವರಿಗೆ ಬದುಕು ಹೇಳಿಕೊಟ್ಟಿದೆ.

ರಂಗಪ್ಪ ಕಡೂರಿನವರು. ಸಕಲೇಶಪುರ ಸನಿಹದ ಯಡೆಹಳ್ಳಿಗೆ ರೈಲ್ವೇ ಸೇವೆಗೆ ಬಂದು ಹದಿನೈದು ವರುಷವಾಯಿತು. ರೈಲು ಆಚೇಚೆ ಸಂಚರಿಸುವಾಗ ಗೇಟ್ ಹಾಕುವುದು, ಹಸಿರು ನಿಶಾನೆ ತೋರುವುದು, ರೈಲು ಹೋದ ಬಳಿಕ ಹಳಿಗೆ ಅಡ್ಡವಾಗಿ ಕೆಂಪು ವಸ್ತ್ರದ ಪರದೆಯನ್ನು ಹಾಕಿಬಿಟ್ಟರೆ ಆಯಿತು. ರೈಲು ಎಷ್ಟು ಹೊತ್ತಿಗೆ ಬರುತ್ತೆ, ಹೋಗುತ್ತೆ ಎಂಬುದು ಆಯಾಯ ಕ್ಷಣದ ಸೂಚನೆಯನ್ನು ಪಾಲಿಸಬೇಕಾಗುತ್ತದೆ. ಹಾಗಾಗಿ ಇವರಿಗೆ ರಾತ್ರಿಯೂ ಒಂದೇ. ಹಗಲೂ ಒಂದೆ. ಪಾಳಿ ಪ್ರಕಾರ ಡ್ಯೂಟಿ.

'ಸಾಕಾಗಿ ಹೋಯ್ತು ಬದುಕು. ರೈಲು ಸಹವಾಸನೇ ಬೇಡ. ಇನ್ನಾರು ತಿಂಗಳಲ್ಲಿ ನನ್ನ ನಿವೃತ್ತಿ. ಹಾಯಾಗಿ ಊರಲ್ಲಿರ್ತೇನೆ' ಎನ್ನುತ್ತಾರೆ ರಂಗಪ್ಪ. ಗೇಟ್ ಮುಚ್ಚುವ-ತೆರೆಯುವ ಸಾಧನದ ತಿರುಗಣೆ ಹಾಳಾದ ಬಳಿಕ ಇವರ ಕಷ್ಟಕ್ಕೆ ಸ್ಪಂದಿಸುವವರೇ ಇಲ್ಲದಂತಾಗಿದೆ.

'ವರುಷದ ಹಿಂದೆ ರೈಲ್ವೇ ಗೇಟ್ ಇದೇ ರೀತಿ ಹಾಕಿತ್ತು. ಎರಡೂ ಬದಿಗಳಲ್ಲಿ ಬ್ಲಾಕ್. ರೈಲು ಹೋದ ಬಳಿಕ ತಿರುಗಣೆಯನ್ನು ತಿರುಗಿಸಿದಾಗ ಜಾಮ್ ಆಯಿತು. ಏನೇನೂ ಮಾಡಿದರೂ ಜಪ್ಪೆನ್ನಲಿಲ್ಲ. ಒಂದು ಗಂಟೆ ಬ್ಲಾಕ್ ಆಗಿತ್ತು. ನನ್ನ ಅವಸ್ಥೆಯನ್ನು ನೋಡಿ ಊರಿನ ಕೆಲವು ಯುವಕರು ಬಂದು ಸರಿ ಮಾಡಿಕೊಟ್ಟರು. ಅಂದಿನ ಮಟ್ಟಿಗೆ ಗೇಟ್ ತೆರೆದು ನಿರಾಳವಾಯಿತು. ಆದರೆ ಮೊದಲಿನ ಸಲೀಸುತನ ಮತ್ತೆ ಬರಲಿಲ್ಲ. ಅದರ ಒಂದು ಪಾರ್ಟ್ ತುಂಡಾಗಿರಬೇಕು. ನೋಡಿ.. ಈಗ ಒದ್ದಾಟ' ಎನ್ನುವ ರಂಗಪ್ಪ, 'ಎಲ್ಲರ ಬೈಗಳು ಕೇಳುತ್ತೆ. ಅಂತವರಾರೂ ಸಹಾಯಕ್ಕೆ ಬರುತ್ತಿಲ್ಲ.' ಎಂದು ವಿಷಾದಿಸುತ್ತಾ ಕಿರುನಗೆ ಬೀರುತ್ತಾರೆ.

'ರಿಪೇರಿಗೆ ಮನವಿ ಸಲ್ಲಿಸಿ ವರುಷವಾಯಿತು. ಬಂದಾರು' ಎನ್ನುತ್ತಾರೆ. ರಂಗಪ್ಪರಿಗೆ ಕಡೂರಿನಲ್ಲಿ ಜಮೀನಿದೆ, ಕುಟುಂಬವಿದೆ. ಒಂದಿವಸ ರಜಾ ಸಿಕ್ಕಿದರೆ ಸಾಕು, ಬಸ್ಸಲ್ಲಿ ಹಾರಿ ಹೋಗಿಬಿಡುತ್ತಾರೆ! ಹಳಿಗೆ ತಾಗಿಕೊಂಡೇ ಚಿಕ್ಕ ಕೊಠಡಿ. ಅಲ್ಲೊಂದು ಬೆಂಚ್, ಬಿಂದಿಗೆ, ಲೋಟ. ಅನತಿ ದೂರದಲ್ಲಿ ಇಲಾಖೆಯದೇ ವಸತಿಗೃಹ.

ರಂಗಪ್ಪರನ್ನು 'ಮಾಮ' ಅಂತ ಪ್ರೀತಿಯಿಂದ ಸಂಬೋಧಿಸುತ್ತಿದ್ದ ಸತೀಶ್ ಹೇಳುತ್ತಾರೆ - 'ಹದಿನೈದು ವರುಷದಿಂದ ನೋಡುತ್ತಿದ್ದೇನೆ. ಒಂದಿನವೂ ರೇಗಿದವರಲ್ಲ, ಕೋಪ ಬಂದು ಹಳಿದವರಲ್ಲ. ಮಾಮ ಅಂದ್ರೆ ಸಾಕು, ಕೋಪ ಇಳಿದೋಗುತ್ತಿತ್ತು'.

ರಂಗಪ್ಪರ ಪಾಡು ಬಹುತೇಕ ಗೇಟ್ಮ್ಯಾನ್ಗಳ ಪಾಡು. ಹಳಿ ದಾಟಿ ಆಚೀಚೆ ಹೋಗುವ ಪ್ರಯಾಣಿಕರಿಗೆ ಇವರ ಬದುಕಿನ ಹಳಿಯನ್ನು ನೋಡಲು ಪುರುಸೊತ್ತೆಲ್ಲಿದೆ. ಗೇಟ್ ತೆಗೆಯಲು ಒಂದು ಸೆಕೆಂಡ್ ತಡವಾದಾಗ ರಕ್ತದೊತ್ತಡ ಏರುತ್ತದೆ! ಒಂದು ವೇಳೆ ನಮ್ಮ ಒತ್ತಡ ನೋಡಿ ಗೇಟ್ ತೆಗೆದ ಅಂತಿಟ್ಟುಕೊಳ್ಳೋಣ - ಆಗ ನಮ್ಮ ಪ್ರಯಾಣ ಮನೆಗಲ್ಲ, ಅಂತಕನಲ್ಲಿಗೆ!

1 comments:

ಸಾಗರದಾಚೆಯ ಇಂಚರ said...

ತುಂಬಾ ಚೆನ್ನಾಗಿದೆ ಸರ್
ಬಹಳ ಖುಷಿಯಾಯಿತು ನಿಮ್ಮ ಶೈಲಿ ಓದಿ

Post a Comment