ಕೃಷಿಮೇಳಗಳಾಗುತ್ತವೆ, ಕಾರ್ಯಾಗಾರಗಳಾಗುತ್ತವೆ, ವಿಚಾರಗೋಷ್ಠಿಗಳಾಗುತ್ತವೆ. ಆದರೆ ರೈತನ ಮನೆಯಂಗಳದಲ್ಲಿ ಕೃಷಿಯ ಕುರಿತು, ಕೃಷಿ ಬದುಕಿನ ಪೂರ್ವಾಪರಗಳ ಕುರಿತು ಮಾತುಕತೆಗಳಾಗುವುದನ್ನು ಕೇಳಿದ್ದೀರಾ? ಅದೂ ಮಾಧ್ಯಮಗಳ ಮುಂದೆ!
ಮಾಧ್ಯಮ ಎಂದಾಕ್ಷಣ ಮುಖ್ಯವಾಹಿನಿ ಪತ್ರಿಕೆಗಳು, ವಾಹಿನಿಗಳು ಕಣ್ಣಮುಂದೆ ಬರುತ್ತದೆ. ಆದರೆ ಇಲ್ಲಿ ಪ್ರಸ್ತಾಪಿಸಿದ 'ಮಾಧ್ಯಮ'ವು ಬರವಣಿಗೆಯ ತುಡಿತವಿದ್ದ - ಈಗಷ್ಟೇ ಪತ್ರಿಕಾ ಕ್ಷೇತ್ರಕ್ಕೆ ಕಾಲಿಡುತ್ತಿರುವ ಒಂದಷ್ಟು ಮಂದಿ. ಊರಿನ ಸಮಸ್ಯೆಗಳು, ಕೃಷಿ ತಲ್ಲಣಗಳ ಕುರಿತು ಪರಸ್ಪರ ಮಾತುಕತೆಗೊಂದು ವೇದಿಕೆ.
ಶಿರಸಿ ಸನಿಹದ ಬೆಂಗಳಿ ಹಳ್ಳಿಯಲ್ಲಿ ಧಾರವಾಡ ಕೃಷಿ ಮಾಧ್ಯಮ ಕೇಂದ್ರದ ಪತ್ರಿಕೋದ್ಯಮ ತರಬೇತಿ ನಡೆಯಿತು. ಸುಮಾರು ಇಪ್ಪತ್ತೈದಕ್ಕೂ ಮಿಕ್ಕಿ ವಿದ್ಯಾರ್ಥಿಗಳು. ತೋಟದಲ್ಲಿ ಕೆಲಸ ಮಾಡುವ ರೈತರಿಂದ ತೊಡಗಿ, ಕೃಷಿ ಅಧಿಕಾರಿಗಳ ತನಕದ ವಿವಿಧ ವಯೋಮಾನ-ಉದ್ಯೋಗ ಹೊಂದಿದವರಿಲ್ಲಿ ವಿದ್ಯಾರ್ಥಿಗಳು.
ಅಂದು ಸಂಜೆ - ಊರಿನ ಆಯ್ದ ರೈತರೊಂದಿಗೆ ನೇರ ಮಾತುಕತೆ. ಬಹ್ವಂಶ ಸಾವಯವ ಕೃಷಿಕರು. ವಿಷ (ಔಷಧಿ) ಬೇಡುವಂತಹ ಶುಂಠಿಯಂತಹ ಬೆಳೆಗಳನ್ನು ಸಾವಯವದಲ್ಲಿ ಯಾಕೆ ಬೆಳೆಯಬಾರದು? ಎಂಬ ಪ್ರಶ್ನೆಗೆ ಊರವರಿಂದ ಉತ್ತರ - 'ನೀವೆಲ್ಲಾ ಮುಂದೆ ಹಳ್ಳಿ ಕಾಳಜಿಯ ಪತ್ರಕರ್ತರಾಗುವವರು. ಒಂದು ಕಾಲಘಟ್ಟದಲ್ಲಿ ಅಧಿಕ ಇಳುವರಿಗಾಗಿ ಹೈಬ್ರಿಡ್ ಬೀಜಗಳ ಪ್ರಚಾರ ನಡೆಯಿತು. ಅದನ್ನು ಉಳಿಸಿ-ಬೆಳೆಸಲು ವಿಷ ಸಿಂಪಡನೆ ಮಾಡಿ ಎಂದು ಮಾಧ್ಯಮವೂ ಹೇಳಿತು - ಅಧಿಕಾರಿಗಳೂ ಹೇಳಿದರು. ಈಗ ಹೇಳ್ತೀರಿ. ವಿಷ ಬೇಡ, ಸಾವಯವದಲ್ಲಿ ಕೃಷಿ ಮಾಡಿ ಅಂತ.'
ಬೆಂಗಳಿ, ಓಣಿಕೇರಿ ಸುತ್ತಲಿನ ಬಹುತೇಕ ರೈತರು ಸಾವಯವ ಕೃಷಿ ಮಾಡುತ್ತಾರೆ. 'ಯಾವಾಗ ಅನಾನಸು, ಶುಂಠಿ ಕೃಷಿ ಪ್ರವೇಶವಾಯಿತೋ ಅಲ್ಲಿಂದ ವಿಷದ ಸಹವಾಸ. ವಿಷ ಕುಡಿದೇ ಬೆಳೆದ ಗಿಡಕ್ಕೆ ಒಮ್ಮಿಂದೊಮ್ಮೆಲೇ ನಿಲ್ಲಿಸಿಬಿಡಲು ಆಗುತ್ತಾ? ನಿಧಾನಕ್ಕೆ ಸರಿಹೋಗುತ್ತದೆ. ಒಂದು ಗುಂಟೆಗೆ ಹದಿಮೂರು ಕ್ವಿಂಟಾಲ್ ಶುಂಠಿ ತೆಗೆದವರಿದ್ದಾರೆ. ಈ ಹೊತ್ತಲ್ಲಿ ರಾಸಾಯನಿಕ ಸಿಂಪಡಿಸಬೇಡಿ ಅಂದರೆ ಇಳುವರಿಯನ್ನು ಕೃಷಿಕ ಕಳೆದುಕೊಳ್ಳಲು ಅತನೇನು ದಡ್ಡನೇ? ಈ ನಷ್ಟವನ್ನು ತಾಳಿಕೊಳ್ಳಲು ಸ್ವಲ್ಪ ಸಮಯ ಬೆಕು. ದಿಢೀರ್ ಆಗಿ ಸಾವಯವಕ್ಕೆ ಮರಳಲು ಕಷ್ಟ'- ಕೃಷಿ ಕಷ್ಟಗಳನ್ನು ವಿವರಿಸುತ್ತಾರೆ.
ಕೃಷಿಯಲ್ಲಾಗುತ್ತಿರುವ ಬದಲಾವಣೆ, ಶೋಷಣೆಗಳ ಸಂಪೂರ್ಣ ಅರಿವಿದ್ದ ರೈತರು ಭಾವೀ ಪತ್ರಕರ್ತರಿಗೆ ಎಸೆದ ಸವಾಲು ಏನು ಗೊತ್ತೇ? ಇಂದು ಆತ್ಮಹತ್ಯೆಗಳು ನಡೆಯುತ್ತಿವೆ. ಅದನ್ನು 'ರೈತ ಆತ್ಮಹತ್ಯೆ' ಅಂತ ಬಿಂಬಿಸುತ್ತೀರಿ. ನಿಜಕ್ಕೂ ಸರೀನಾ? ಅತ್ಮಹತ್ಯೆ ಮಾಡಿಕೊಂಡವರಲ್ಲಿ ನಿಜವಾದ ರೈತರು ಯಾರು? ಯವ್ಯಾವುದೋ ಕಾರಣದಿಂದ ಸಾವಿಗೆ ಶರಣಾದರೆ ಅದನ್ನು 'ಕೃಷಿಯಲ್ಲಿ ಸೋಲಾಗಿ ಆತ್ಮಹತ್ಯೆಗೆ ಶರಣಾದ' ಅಂತ ಯಾಕೆ ಬರೆಯುತ್ತೀರಿ?' ಈ ಪ್ರಶ್ನೆಯಿಂದ ಒಂದೈದು ನಿಮಿಷ ಗಪ್ಚಿಪ್!
ಚಿಂತನೆ ಮಾಡಬೇಕಾದ ವಿಷಯ. 'ಈ ದೇಶದ ರೈತ ಕೃಷಿಯಲ್ಲಿ ಸೋಲೋದಿಲ್ಲ. ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲಾರ. ಆದರೆ ರೈತನಿಗೆ ಸಿಗುವ ಸಂಪನ್ಮೂಲಗಳನ್ನು ಸಮಯಕ್ಕೆ ಸರಿಯಾಗಿ ಕೊಡಿ. ಯಾರ್ಯಾರೋ ಮಧ್ಯಪ್ರವೇಶಿಸಿ ಆತನ ಬದುಕಿನೊಂದಿಗೆ ಚೆಲ್ಲಾಟವಾಡಬೇಡಿ' ಸಾವಯವ ಪ್ರತಿಪಾದಕ ನಾರಾಯಣ ರೆಡ್ಡಿಯವರು ಸಮಾರಂಭವೊಂದರಲ್ಲಿ ಹೇಳಿದ್ದರು. ಬೆಂಗಳಿಯಂಗಳದಲ್ಲಿ ಮೂಡಿ ಬಂದ ವಿಚಾರಕ್ಕೂ, ರೆಡ್ಡಿಯವರ ವಿಚಾರವನ್ನು ತಾಳೆ ಹಾಕಿದಾಗ ಎಲ್ಲೋ ನಮ್ಮ ವ್ಯವಸ್ಥೆಗಳು ಎಡವುತ್ತಿವೆ ಅನ್ನಿಸುತ್ತದೆ.
'ಭಾರತ ಬಡ ರಾಷ್ಟ್ರ, ರೈತನೇ ದೇಶದ ಬೆನ್ನೆಲುಬು. ಆತ ಅನ್ನದಾತ' ಎಂದು ಹಾಡಿ ಹೊಗಳುವುದು ಚಾಳಿ. ಉಳುವ ರೈತನ ಅಳು ಮುಖ ನಗುವುದಾದರೂ ಎಂದು? ಬೆಂಗಳಿಯ ಕೃಷಿಕ ವೆಂಕಟೇಶ್ ಹೇಳುತ್ತಾರೆ - 'ಹಳ್ಳಿಗಳಿಂದು ಸಮಸ್ಯೆಯೊಂದಿಗೆ ಬದುಕುತ್ತವೆ. ರೈತ ಮುಗ್ಧ. ಆತನಿಗೆ ಹೈಟೆಕ್ ಗೊತ್ತಿಲ್ಲ. ಆದರೆ ತನ್ನದೇ ಮಿತಿಯಲ್ಲಿ ಹೈಟೆಕ್ ಜ್ಞಾನ ಗೊತ್ತು. ಹಾಗೆಂತ ಆತ ಹಳ್ಳಿಯವ, ಅನಕ್ಷರಸ್ಥ್ಥ್ತ ಎನ್ನುತ್ತಾ ಶೋಷಣೆ ಮಾಡಬೇಡಿ'. ಆಡಳಿತ ಯಂತ್ರಕ್ಕೆ ಬೆಂಗಳಿಯ ಹಳ್ಳಿಗರ ಸಲಹೆ.
ಬೆಂಗಳಿಯಲ್ಲಿ ಬದುಕಲು ಬೇಕಾದ ಸಂಪನ್ಮೂಲ ಇದೆ. ಒಗ್ಗಟ್ಟಿದೆ. ಕೂಡಿ ಬಾಳುವ ಗುಣವಿದೆ. ಇಷ್ಟೆಲ್ಲಾ ಉತ್ತಮ ಸರಕುಗಳಿದ್ದರೂ ನಿಮ್ಮೂರಿನ ಯುವ ಜನ ನಗರ ಸೇರುತ್ತಾರಲ್ಲಾ? 'ಕೃಷಿಯಲ್ಲಿ ಗೌರವವಿಲ್ಲ ಅಂತ ನಮ್ಮ ಯುವಕರಿಗೆ ಯಾವಾಗ ಅರಿವಾಯಿತೋ, ಆಗ ಹಳ್ಳಿಯಲ್ಲಿ ಸಿಗದೇ ಇದ್ದ ಗೌರವವನ್ನು ಹುಡುಕಿ ನಗರಕ್ಕೆ ಹೋಗಿದ್ದಾರೆ ವಿನಾ ಹಳ್ಳಿಯ, ಕೃಷಿಯ ಮೇಲಿನ ಅಸಡ್ಡೆಯಿಂದಲ್ಲ'! ಹಿರಿಯರಾದ ಸುಧಾಕರ ಹೇಮಾದ್ರಿಯವರಿಂದ ವಾಸ್ತವದತ್ತ ಬೆಳಕು. 'ಹೀಗಾಗಿ ಕೃಷಿಗೆ ಗೌರವ ತರುವಂತಹ ವ್ಯವಸ್ಥೆಯಾಗಬೇಕು. ಅದಕ್ಕೆ ಮಾಧ್ಯಮವೂ ಸಹಕರಿಸಬೇಕು' ಎನ್ನಲು ಮರೆಯಲಿಲ್ಲ.
ಬೆಂಗಳಿಗೆ ರಾಜಕಾರಣ ಬಂದಿಲ್ಲ! ಹಾಗೆಂತ ವಿಭಿನ್ನ ಪಕ್ಷದವರು ಇದ್ದಾರೆ. ಅದು ಮತ ಹಾಕಲು ಮಾತ್ರ! 'ಇಲ್ಲಿ ಓಟಿಗಾಗಿ ರಾಜಕಾರಣ ನಡೆದಿಲ್ಲ' ಎನ್ನುತ್ತಾರೆ ಪ್ರಸನ್ನ ಹೆಗಡೆ. ಆಂತರಿಕ ಸಂವಹನ ಎಲ್ಲಾ ಕಡೆ ಇಂದು ಅಜ್ಞಾತವಾಗುತ್ತಿದೆ. ಅಂತಹುದಲ್ಲಿ ಬೆಂಗಳಿಯಲ್ಲಿ ಅದು ಜೀವಂತವಾಗಿದೆ.
ಕೃಷಿ ಮಾಧ್ಯಮ ಕೇಂದ್ರವು ಆಯೋಜಿಸಿದ ಈ 'ರೈತ ಮಾತುಕತೆ'ಯು ಹಳ್ಳಿ ಚಿತ್ರವನ್ನು ಅನಾವರಣಗೊಳಿಸಿತು. ಜವಾಬ್ದಾರಿ ಪತ್ರಿಕೋದ್ಯಮದ ಅಗತ್ಯವನ್ನು ಸಾರಿತು.
Home › Unlabelled › ಮನೆಯಂಗಳದಲ್ಲಿ ಕೃಷಿ ಮಾತುಕತೆ
0 comments:
Post a Comment