Monday, September 28, 2009

ಮಾಸಿಕ 'ಆಯುಧ ಪೂಜೆ'


ನವರಾತ್ರಿ ಕೊನೆಗೆ ಆಯುಧಪೂಜೆಯ ಸಡಗರ. ವರುಷಕ್ಕೊಮ್ಮೆ ಬರುವ ಈ ಹಬ್ಬ ನಗರದಿಂದ ಗ್ರಾಮದ ಕೊನೇ ತನಕ ಆಚರಿಸಲ್ಪಡುತ್ತದೆ. ವಾಹನಗಳೆಲ್ಲಾ ಶುಚಿಗೊಂಡು, ಕೆಲವು ಕಾಯಕಲ್ಪಗೊಂಡು, ಶೃಂಗಾರಗೊಳ್ಳುತ್ತವೆ. ಇನ್ನೂ ಕೆಲವಕ್ಕೆ ತಳಿರು-ತೋರಣ. ಆಯುಧಪೂಜೆ ತಿಂಗಳಿಗೊಂದು ಇರುತ್ತಿದ್ದರೆ? ಒಂದಂತೂ ಲಾಭ! ನಮ್ಮ ಸರಕಾರಿ ಬಸ್ಸುಗಳು ಶುಚಿಯಾಗುತ್ತಿದ್ದುವೋ ಏನೋ?
ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ತಿಂಗಳಿಗೊಮ್ಮೆ ವಾಹನಗಳಿಗೆ ಪೂಜೆ ಸಲ್ಲುತ್ತದೆ. ಗದಗಿನ ಕೃಷಿ-ಪತ್ರಕರ್ತ ಮಿತ್ರ ಆರ್.ಎಸ್.ಪಾಟೀಲರ ಮನೆ ಸೇರಿದಾಗ ಬೆಳಗ್ಗಿನ ಎಂಟು ಗಂಟೆಯಾಗಿತ್ತು. ಮನೆಯಲ್ಲಿ ಯಾಕೋ ಸಂಭ್ರಮದ ಛಾಯೆ. ಅರೆ. ಇಂದು ಅಮಾವಾಸ್ಯೆಯಾಗಿಯೂ ಯಾಕೆ ಇಷ್ಟೊಂದು ಲವಲವಿಕೆ! ಬಹುಶಃ ಈ ಭಾಗದಲ್ಲಿ ಇಂತಹ ಪರಂಪರೆ ಇದೆಯೋ ಏನೋ. ಸುಮ್ಮನಾದೆ.
ಪಾಟೀಲರಲ್ಲಿರುವ ಮೂರು ದ್ವಿಚಕ್ರ ವಾಹನಗಳಂದು ಸ್ನಾನಸುಖ ಅನುಭವಿಸುತ್ತಿದ್ದುವು. ಪೂರ್ತಿ ಶುಚಿಯಾದ ನಂತರ ಅಂಗಳದಲ್ಲಿ ಸರತಿ ಸಾಲಿನಲ್ಲಿ ನಿಂತುವು. ಮನೆಯ ಹಿರಿಯರಾದ ಉಮಾಬಾಯಿಯವರು ತಾವೇ ಕೊಯಿದು ಕಟ್ಟಿದ ಮೂರು ಹಾರವನ್ನು ತಂದು ವಾಹನಕ್ಕೆ ಹಾಕಿದರು. ಅದರ ಬೆನ್ನಿಗೆ ಮನೆಯೊಡತಿ ಅರಸಿನ, ಕುಂಕುಮದ ಹರಿವಾಣದೊಂದಿಗೆ ಬಂದರು. ಎಲ್ಲಾ ವಾಹನಗಳಿಗೂ ಪ್ರಸಾದ ಸ್ಪರ್ಸಿಸಿದರು. ಪಾಟೀಲರು ಮೂರೂ ವಾಹನಗಳ ಚಕ್ರದ ಮುಂದೆ ನಿಂಬೆಹಣ್ಣನ್ನಿಟ್ಟು, ವಾಹನವನ್ನು ಮುಂದಕ್ಕೆ ಚಾಲೂ ಮಾಡಿ ನಿಂಬೆಯನ್ನು ಅಪ್ಪಚ್ಚಿ ಮಾಡಿದಲ್ಲಿಗೆ ಪೂಜೆ ಮುಕ್ತಾಯ. ಇದು ಪ್ರತೀ ಅಮವಾಸ್ಯೆಯಂದು ನಡೆಯುವ 'ವಾಹನ ಪೂಜೆ' ಯಾ 'ಆಯುಧ ಪೂಜೆ'.
ಗದಗ, ಧಾರವಾಡ, ಹುಬ್ಬಳ್ಳಿ..ಮೊದಲಾದ ಜಿಲ್ಲೆಗಳಲ್ಲಿ ಅಮವಾಸ್ಯೆಯಂದು ದ್ವಿಚಕ್ರದಿಂದ ತೊಡಗಿ ಚತುಶ್ಚಕ್ರದ ವಾಹನಗಳಿಗೆ ಸುಗ್ಗಿ! ತೀರಾ ಅಗತ್ಯವಿದ್ದರೆ ಮಾತ್ರ ವಾಹನ ಚಾಲೂ. ಸಣ್ಣಪುಟ್ಟ ರಿಪೇರಿ ಕೆಲಸಗಳಿಗೆ ಆ ದಿನ ಶುಭದಿನ. ರಿಪೇರಿ ಕೆಲಸವಾಗುವಾಗ ರಾತ್ರಿಯಾಯಿತು ಎಂದಟ್ಟುಕೊಳ್ಳೋಣ. 'ರಿಪೇರಿಮನೆ'ಯಲ್ಲೇ ಪೂಜೆ ಮುಗಿಸಿ ತರುವುದು ಸಂಪ್ರದಾಯ. ಬದುಕಿನಲ್ಲಿ ಅಂಟಿದ ಆಚರಣೆ.
ಇದು ಆಮದಿತ ಆಚರಣೆ! ಉತ್ತರಪ್ರದೇಶದಲ್ಲಿ ಬಹು ನಂಬಿಕೆಯ ಆರಾಧನೆ. ಪಾಟೀಲರು ಹೇಳುತ್ತಾರೆ - ಉತ್ತರಪ್ರದೇಶದಿಂದ ಸಾಮಗ್ರಿ ತುಂಬಿದ ಲಾರಿಗಳು ಗದಗ ದಾರಿಯಾಗಿ ಸಾಗುತ್ತವೆ. ಅಮವಾಸ್ಯೆಯಂದು ನೀರಿರುವ ಕೆರೆ ಸಮೀಪ ಲಾರಿಗಳನ್ನು ನಿಲ್ಲಿಸುತ್ತಾರೆ. ವಾಹನಗಳನ್ನು ಶುಚಿಗೊಳಿಸುತ್ತಾರೆ. ಹೂಗಳಿಂದ ಅಲಂಕರಿಸುತ್ತಾರೆ. ಹಸಿಮೆಣಸಿನಕಾಯಿ, ನಿಂಬೆಹಣ್ಣು ಮತ್ತು ಪೊರಕೆ ಕಡ್ಡಿಗಳನ್ನು ಪರಸ್ಪರ ಪೋಣಿಸಿ ಲಾರಿಯ ಮುಂಭಾಗಕ್ಕೆ ಬಿಗಿಯುತ್ತಾರೆ. ವಾಹನಕ್ಕೆ ಆರತಿ ಮಾಡ್ತಾರೆ. ಅಂದು ವೃತ್ತಿಗೆ ಬಿಡುವು. ವಾಹನ ಚಾಲೂ ಮಾಡುವುದಿಲ್ಲ. ಮರುದಿವಸ ಪ್ರಯಾಣ ಶುರು.
ವಾಹನದಲ್ಲಿ ದೂರ ಪ್ರಯಾಣ ಮಾಡುವುದರಿಂದ 'ಸುರಕ್ಷತೆ' ದೃಷ್ಟಿಯಿಂದ ಈ ಆಚರಣೆ ಬಂದಿದೆ. ಇದನ್ನು ನೋಡಿ ನಮ್ಮ ಭಾಗದ ಜನ ಅನುಸರಿಸಿದರು. ಎಲ್ಲಿಯವರೆಗೆ ಅಂದರೆ ಅದನ್ನು ಬಿಡಲಾಗದಷ್ಟು ಬದುಕಿನಲ್ಲಿ ಹಾಸುಹೊಕ್ಕಾಗಿದೆ ಎನ್ನುತ್ತಾರೆ ಹಿರಿಯರಾದ ಉಮಾಬಾಯಿಯವರು. ಇದು ವಾಹನದ ಮಾತಾಯಿತು. ಜಾನುವಾರುಗಳ ಸುರಕ್ಷತೆಗೂ ಅಮವಾಸ್ಯೆಯಂದು ಪೂಜೆ ಇಲ್ಲಿ ನಡೆಯುತ್ತದೆ.
ಹಟ್ಟಿಯಲ್ಲಿ ವಿಶೇಷವಾಗಿ ಒಂದು ಕಂಬವನ್ನು ಊರುತ್ತಾರೆ. ಇದು 'ಕರೆವ್ವ' ದೇವತೆಯ ಪ್ರತೀಕ. ಕಂಬಕ್ಕೆ ಅಲಂಕಾರ ಮಾಡಿ, ಪೂಜೆ ಮಾಡುತ್ತಾರೆ. ತೆಂಗಿನಕಾಯಿಯನ್ನು ಒಡೆದು ಸಮರ್ಪಣೆ. ದನಗಳು ಹಾಲು ಕರೆಯಲು ಬಿಡದೇ ಇದ್ದಾಗ, ಆಗಾಗ್ಗೆ ಕರು ಸಾಯುವಿಕೆ, ದನಗಳ ರೋಗಗಳು - ಇಂತಹ ಜಾನುವಾರು ರೋಗಗಳಿಗೆ ಕರೆವ್ವಳ ಆರಾಧನೆ ದಿವ್ಯ ಔಷಧಿ ಎಂಬುದು ನಂಬುಗೆ.
'ಜಾನುವಾರುಗಳಿಗೆ ಈ ರೀತಿಯ ರೋಗಗಳು ಬಂದಾಗ ರೈತ ಗಾಬರಿಯಾಗುತ್ತಾನೆ. ಗೊಂದಲಕ್ಕೀಡಾಗುತ್ತಾನೆ. ಈ ಗಾಬರಿ ಪರಿಹಾರಕ್ಕೆ ಒಂದು ದೇವರು - ಕರೆವ್ವಾ. ಇವಳು ಆಕಳ ದೇವತೆ. ನಮ್ಮ ಮನೆಯಲ್ಲೂ ಈ ಆರಾಧನೆ ಅಮವಾಸ್ಯೆಯನ್ನು ನಡೆಯುತ್ತದೆ. ಈಗಷ್ಟೇ ಮುಗಿಸಿ ಬಂದೆ' ಎನ್ನುವಾಗ ಉಮಾಬಾಯಿಯವರಲ್ಲಿ ಸಂತೃಪ್ತಿ. ಮನುಷ್ಯನ ಸಮಾಧಾನಕ್ಕೆ, ಸುಖಕ್ಕಾಗಿ 'ಕೈಮೀರಿದ ಶಕ್ತಿಗೆ ಶರಣು' ಬರುವುದಕ್ಕೆ ಇವೆಲ್ಲಾ ಉಪಾಧಿಗಳು.
ನಮ್ಮೆಲ್ಲಾ ಆಚರಣೆಗಳ ಹಿಂದಿನ ಆಶಯಗಳೂ ಹೀಗೇನೇ. ಎಪ್ಪತ್ತರ ಹಿರಿಯ ಜೀವ ಉಮಾಬಾಯಿಯವರು 'ಇಂತಹ ಸಂಪ್ರದಾಯಗಳನ್ನು ಬಿಡಬಾರದು. ಅದು ಬದುಕಿನ ಸೂತ್ರ. ಅದನ್ನು ಮೂಢನಂಬಿಕೆಯ ಪಾಶದಲ್ಲಿ ಬಂಧಿಸಬೇಡಿ. ಯಾರೋ ಒಬ್ಬನಿಗೆ ಸುಖ ಸಿಕ್ತದೆ ಅಂತಾದರೆ ಅದನ್ನು ಕಸಿಯುವ ಹಠ ಯಾಕೆ' ಎಂದು ಪ್ರಶ್ನಿಸುತ್ತಾರೆ. ಸರಿ, ಮೂಢನಂಬಿಕೆಯ ಸಾಲಿಗೆ ಬೇಕಾದರೆ ಸೇರಿಸಿ. ಆದರೆ ಅಮವಾಸ್ಯೆಯ ಹೆಸರಿನಲ್ಲಿ ವಾಹನಗಳಾದರೂ ಶುಚಿಯಾಗ್ತದಲ್ಲಾ! ಮನಸ್ಸು ಶುಚಿಯಾಗದಿದ್ದರೂ ತೊಂದರೆಯಿಲ್ಲ - ಆರ್.ಎಸ್.ಪಾಟೀಲರು ದನಿಗೂಡಿಸಿದರು.

2 comments:

dileephs said...

ಕಾರಂತ್ ಸರ್..
ಪ್ರತಿ ಅಮಾವಾಸ್ಯೆಯಂದು ಅಂಗಡಿಗಳಲ್ಲಿ ಪೂಜೆ ಮಾಡೋದನ್ನ ಕೇಳಿದ್ದೆ, ನೋಡಿದ್ದೆ.. ಆದ್ರೆ ಈ ರೀತಿ ವಾಹನಗಳಿಗೆ, ಜಾನುವಾರುಗಳಿಗೆ ಪೂಜೆ ಮಾಡೋ ವಿಷಯ ಗೊತ್ತಿರ್ಲಿಲ್ಲ... ಉತ್ತಮ ಮಾಹಿತಿಗಾಗಿ ಧನ್ಯವಾದಗಳು...

ಕೇಶವ ಪ್ರಸಾದ್.ಬಿ.ಕಿದೂರು said...

ಅಪರೂಪದ ಮಾಹಿತಿ, ಸ್ವಾರಸ್ಯಕರವಾಗಿತ್ತು.

Post a Comment