Tuesday, September 15, 2009

'ಎಂಚಿನ ಸಾವುದ ಬರ್ಸ..'!

ವರುಷ ಜೂನ್ ಪೂರ್ತಿ ಮಳೆ ಮುಷ್ಕರ ಹೂಡಿತ್ತು. 'ಛೇ ಮಳೆ ಬರ್ಲೇ ಇಲ್ಲ. ಎಂತಹ ಅವಸ್ಥೆ ಮಾರಾಯ್ರೆ' - ಸಿಕ್ಕಲ್ಲೆಲ್ಲಾ ಇದೇ ಮಾತು. 'ನಮ್ಮ ಕಾಲದಲ್ಲಿ ಹೀಗೆ ಆಗಿದ್ದಿಲ್ಲ. ಮೇ ಶುರುವಾಗಬೇಕಾದರೆ ಜಡಿಮಳೆ' ಹಿರಿಯರು ದನಿಸೇರಿಸುತ್ತಾರೆ.

ಇತ್ತ ನಮ್ಮ ಜಲಾಶಯಗಳು ಬತ್ತುವ ಆತಂಕ. ವಿದ್ಯುತ್ಗೆ ಕುತ್ತು. 'ಈಗಿರುವ ನೀರು ಒಂದೇ ವಾರಕ್ಕೆ ಸಾಕು' - ಮಂತ್ರಿ ಮಹೋದಯರು ಜನರಲ್ಲಿ ಇನ್ನಷ್ಟು ಆತಂಕದ ಬೀಜ ಬಿತ್ತಿದರು! ಎಲ್ಲೋ ಒಂದೆಡೆ 'ಮೋಡ ಬಿತ್ತನೆ' ಮಾಡಬಹುದೆನ್ನುವ ಸುದ್ದಿ. ಕೃಷಿ ವಲಯ ತತ್ತರ. 'ಮುಂದೇನು' ಪ್ರಶ್ನೆಯೊಂದಿಗೆ ಆಗಸದತ್ತ ದೃಷ್ಟಿ!

ಮಳೆ ಬರಲು ದೇವಾಲಯಗಳಲ್ಲಿ ಪೂಜೆ ಆರಂಭವಾಯಿತು. ಕಪ್ಪೆಗಳಿಗೆ ಮದುವೆಯಾಯಿತು. ಸೀಮಂತ ನಡೆಯಿತು. ಪುತ್ರೋತ್ಸವದ ಸುದ್ದಿ ಬಂದಿಲ್ಲ! ಅಂತೂ ಜುಲಾಯಿಯಲ್ಲಿ ಮಳೆ ಸುರುವಾಯಿತು. ಬಾಕಿಯಿದ್ದ ಎಲ್ಲವನ್ನೂ 'ಬಾಚಿ ಕೊಟ್ಟಂತೆ' ಸುರಿಯಿತು. ಮಧ್ಯದಲ್ಲಿ ಸ್ವಲ್ಪ ಬಿಡುವು ತೆಕ್ಕೊಂಡು ಮತ್ತೆ ಎಂದಿನಂತೆ ತನ್ನ ಪಾಡಿಗೆ ಸುರಿಯುತ್ತಿದೆ. ಜಲಾಶಯಗಳೆಲ್ಲಾ ಭರ್ತಿಯಾದುವು. ಮೊದಲು 'ನೀರು ಇಲ್ಲ' ಎಂಬ ಆತಂಕ. ಈಗ ಭರ್ತಿಯಾಗಿ ಹೆಚ್ಚಿನ ನೀರು ಬಿಟ್ಟರೆ ಕೆಳಗಿನ ಪ್ರದೇಶಕ್ಕೆ ನೀರು ನುಗ್ಗಿ ಒಂದಷ್ಟು ಅನಾಹುತ ಮಾಡಿಬಿಡುತ್ತದೆಂಬ ಆತಂಕ.

ಕಪ್ಪೆಗಳಿಗೆ ಮದುವೆ ಮಾಡಿದವರು 'ನೋಡಿ ಮದುವೆಯ ಪ್ರಭಾವ' ಅಂತ ಬೀಗಿದರೆ, ಸೀಮಂತ ಮಾಡಿದವರಿಗೆ ತಲೆಬಿಸಿ- 'ಛೇ... ಮೊದಲೇ ಮಾಡುತ್ತಿದ್ದರೆ ಬೇಗ ಮಳೆ ಬರುತ್ತಿತ್ತೇನೋ'!ಈ ಮಧ್ಯೆ ಗ್ರಹಣ ಬಂತು. 'ಇದು ದೇಶಕ್ಕೆ ಅನಿಷ್ಟ' ಎಂಬ ಭಾವನೆ ಬರುವಂತಹ ವಾತಾವರಣ ಸೃಷ್ಟಿಯಾಯಿತು. ಹೋಮ ಹವನಾದಿಗಳು ನಡೆದುವು. 'ಗ್ರಹಣದಿಂದ ನಮ್ಮ ಲೈಫಲ್ಲಿ ಏನೋಗುತ್ತೋ ಏನೋ' ಎಂಬ ಆತಂಕದಲ್ಲಿ ಕೆಲವರಿದ್ದರೆ, ಇನ್ನೂ ಕೆಲವರು 'ಛೇ..ಮೋಡ ಬಂದು ಗ್ರಹಣ ನೋಡಲು ಆಗಲೇ ಇಲ್ವಲ್ಲಾ' ಅಂತ ಕೈ ಹಿಚುಕಿಕೊಂಡರು.

ನಿನ್ನೆ ಮೊನ್ನೆ ದಿನವಿಡೀ ಮಳೆ. 'ಎಂಚಿನ ಸಾವುದ ಬರ್ಸಯಾ..ಉಂತುನಲಾ ಉಜ್ಜಿ..ನರಕ್ಕದ..' ಹತ್ತು ಬಾಯಿಗಳಿಂದ ಸಹಸ್ರನಾಮ! ಮಳೆ ಬಂದರೂ ಕಷ್ಟ, ಬಾರದಿದ್ದರೂ ಕಷ್ಟ! ಒಂದಷ್ಟು ನಾಶ-ನಷ್ಟಗಳು. ನಾಡದೊರೆಗಳ ಆಗಮನ. ಅಂತರಿಕ್ಷದಿಂದ ಸಮೀಕ್ಷೆ. ಪರಿಹಾರ ಘೋಷಣೆ ಮುಂತಾದ ಪ್ರಹಸನಗಳ ಸುದ್ದಿ ಕೇಳುವುದೇ ರೋಚಕ!

ಕಳೆದ ವಾರ ನಮ್ಮ ಚೇರ್ಕಾಡಿ ರಾಮಚಂದ್ರ ರಾಯರಲ್ಲಿಗೆ ಹೋಗಿದ್ದೆ. ಅವರಿಗೀಗ ತೊಂಭತ್ತು. ದೇಹ ಮಾಗಿದೆ. ಆದರೆ ಮನಸ್ಸು ಮಾಗಿಲ್ಲ! 'ಮಳೆ ಬರಲಿ. ಅದನ್ನು ಪ್ರಕೃತಿಯೇ ನಿಶ್ಚಯಮಾಡುತ್ತದೆ. ನನ್ನ ಬಾಲ್ಯ ನೆನಪಿದೆ. ಮೇ ತಿಂಗಳಲ್ಲಿ ಮಳೆ ಹೊಯ್ಯಲು ಶುರುಮಾಡಿದರೆ ಆಗಸ್ಟ್-ಸೆಪ್ಟೆಂಬರ್ ತಿಂಗಳ ತನಕವೂ ಹನಿಕಡಿಯುವುದಿಲ್ಲ' ಎಂದು ಜ್ಞಾಪಿಸಿಕೊಂಡರು.

ನಗರದ ಮಧ್ಯೆ ನಿಂತು 'ನಾನು ಮಳೆಯನ್ನು ಅನುಭವಿಸಿದೆ' ಎಂದರೆ ಹಾಸ್ಯಾಸ್ಪದ. ನಿಜಕ್ಕೂ ಹಳ್ಳಿ ಮನೆಯಲ್ಲಿದ್ದು 'ಮಳೆಗಾಲ'ವನ್ನು ಕಳೆಯಬೇಕು. ಏನಾಗುತ್ತೋ ಅಂತ ಕ್ಷಣಕ್ಷಣಕ್ಕೂ ಆತಂಕ, ಭಯ. ನೆರೆಪೀಡಿತ ಪ್ರದೇಶವಾದರಂತೂ

ಮುಗಿಯಿತುಬಹುಶಃ 25-30 ವರುಷಗಳ ಹಿಂದಿನ ಒಂದು ಆಟಿ ತಿಂಗಳು. ನಮ್ಮ ಮನೆ ಪಯಸ್ವಿನೀ ನದಿಯ ತೀರದಲ್ಲಿತ್ತು. ಮನೆಯ ಒಂದು ಪಾರ್ಶ್ವ ಹೊಳೆ, ಮತ್ತೊಂದು ಬದಿ ಗದ್ದೆ-ಬಯಲು. ಆಟಿಯ ಮಳೆಯೆಂದರೆ ಮನೆಯ ಹೊರಗೆ ಕಾಲಿಡಲೂ ಆಗದಂತಹ ಸ್ಥಿತಿ. ಆ ವರುಷ ಸುರಿದ ಮಳೆಗೆ ಹೊಳೆ ತುಂಬಿ ನೆರೆ ಬಯಲನ್ನೂ ಆಕ್ರಮಿಸಿತು. ನಮ್ಮದು ಮುಳಿಮಾಡು, ಮಣ್ಣಿನಗೋಡೆ. ಮನೆ ಆರ್ಧ ನೆರೆನೀರಲ್ಲಿ ಮುಳುಗಿದಾಗ, ನಾವು ಅಟ್ಟವನ್ನೇರಿದ್ದೆವು. ಊರಿನವರು ಬಿದಿರಿನಿಂದ ಮಾಡಿದ 'ಪಿಂಡಿ'ಯನ್ನು ಬಳಸಿ ನಮ್ಮ ಕುಟುಂಬವನ್ನು ರಕ್ಷಿಸಿದ ಅಂದಿನ ಘಟನೆಯನ್ನು ಅಮ್ಮ ಹೇಳಿದಾಗ ರೋಮಾಂಚನವಾಗುತ್ತದೆ. ಬಹುಶಃ ಅಂತಹ ಮಾರಿ ಮತ್ತೆ ನೋಡಿಲ್ಲ!

ಈ ರೀತಿಯ ಅನುಭವ ಹೊಳೆತೀರದಲ್ಲಿ ವಾಸ್ತವ್ಯವಿದ್ದ ಬಹುತೇಕರಿಗೆ ಆದ ಅನುಭವ. 'ಕಳೆದ ವರುಷ ಗುರುಪುರದ ಹತ್ತಿರದ ಒಂದು ಕುದ್ರುವಿಗೆ ಹೋಗಿದ್ದೆ. ಮಳೆಗಾಲದ ನಾಲ್ಕು ತಿಂಗಳು ಪೂರ್ತಿ ದ್ವೀಪ. ದೋಣಿ ಬದುಕು. ಕೃಷಿ ಮಾಡುವಂತಿಲ್ಲ. ಕೂಡಿಟ್ಟದ್ದು ಆಗ ಉಪಯೋಗಕ್ಕೆ ಬರುತ್ತದೆ. ಇಂತಹ ಕುದ್ರುಗಳು ಕರಾವಳಿ ಉದ್ದಗಲಕ್ಕೂ ಬೇಕಾದಷ್ಟಿವೆ. ಇಲ್ಲಿನ ಮಳೆಗಾಲದ ಅನುಭವವೇ ಬೇರೆ. ಇವರು ಎಲ್ಲಾದರೂ 'ಎಂಚಿನ ಸಾವುದ ಬರ್ಸ' ಅಂತ ಹೇಳಿದರೆ ಅದಕ್ಕೊಂದು ಅರ್ಥವಿದೆ!

ಗದ್ದೆಹುಣಿಯಲ್ಲಿ ಜಾರುತ್ತಾ-ಬೀಳುತ್ತಾ, ಹಳ್ಳಕ್ಕೆ ಅಡ್ಡವಾಗಿರುವ 'ಪಾಂಪು' (ಎರಡು ಮರವನ್ನು ಜೋಡಿಸಿ ನಿರ್ಮಿಸಿದ ದೇಸೀ ಸೇತುವೆ) ದಾಟಿ ಶಾಲೆ ಸೇರಿದಾಗ, 'ಕೋಣ..ಯಾಕೆ ತಡ ಮಾಡಿದಿ' ಎಂದು ಗುದ್ದು ಕೊಡುವ ಅಧ್ಯಾಪಕರು! ಅಡುಗೆ ಮನೆಯಲ್ಲಿ ಒದ್ದೆಯಾದ ಉಡುಪನ್ನು ಆರಲು ತೂಗಿಸಿ, ಮರುದಿನ ಅದೇ 'ಹೊಗೆವಾಸನೆ'ಯ ಉಡುಪನ್ನು ತೊಟ್ಟು ಶಾಲೆಗೆ ಹೋಗುವ ಆ ದಿನಗಳು - ನಿಜಕ್ಕೂ 'ಮಳೆಗಾಲದ ಅನುಭವದ' ದಿನಗಳು! 'ಬೇಸಿಗೆಯಲ್ಲಿ ಮಾಡಿಟ್ಟ ಹಪ್ಪಳ, ಸಾಂತಾಣಿಗೆ ರುಚಿ ಬರುವುದು ಆಟಿ ತಿಂಗಳಲ್ಲಿ! ಧೋ ಎಂದು ಮಳೆ ಸುರಿಯುತ್ತಿದ್ದಾಗ, ಒಲೆ ಮುಂದೆ ಬೆಚ್ಚಗೆ ಕುಳಿತು 'ಕಟುಕುಟುಂ' ಅಂತ ಜಗಿಯುತ್ತಿದ್ದಾಗ ಸಿಕ್ಕುವ ಆನಂದ ಬೇರೆಲ್ಲೂ ಸಿಗದು!

ಕಾಲ ಬದಲಾಗಿದೆ. ನಾವು ಬದಲಾಗಿದ್ದೇವೆ. ಅಭಿವೃದ್ಧಿಗೊಂಡಿದ್ದೇವೆ.' ಎಂಬ ಭ್ರಮೆ ನಮ್ಮಲ್ಲಿದೆಯಲ್ಲಾ. ಅಲ್ಲಿನ ತನಕ ಸುರಿವ ಮಳೆಯೂ 'ಎಂಚಿನ ಸಾವುದ ಬರ್ಸ'ವಾಗುತ್ತದೆ. ಬೇಸಿಗೆಯಲ್ಲಿ ನೀರಿಗೆ ಹಾಹಾಕಾರವಾಗುವಾಗ ಮತ್ತೆ 'ನೀರು, ಮಳೆಯ' ನೆನಪಾಗುತ್ತದೆ.

0 comments:

Post a Comment