Saturday, September 5, 2009

ನೀರಿನರಿವಿಗೆ 'ಕಾಡ ನಡಿಗೆ'

ಹೊಸಗುಂದ - ಸಾಗರ ತಾಲೂಕಿನ ಸರಹದ್ದಿನಲ್ಲಿರುವ ಗ್ರಾಮ. ಇಲ್ಲಿನ ಶರಾವತಿ ನದಿ ಕಣಿವೆಯ ಮೇಲ್ಬಾಗದಲ್ಲಿ ಸುಮಾರು ಆರುನೂರು ಎಕರೆ ದಟ್ಟವಾದ ಕಾಡಿದೆ. ಅಂಚಿನಲ್ಲಿ ಪ್ರಾಚೀನ ಉಮಾಮಹೇಶ್ವರ ದೇವಸ್ಥಾನವು ಕಾಯಕಲ್ಪಗೊಳ್ಳುತ್ತಿದೆ. ಹಾಗಾಗಿ ಈ ಕಾಡು ಈಗ 'ದೇವರ ಕಾಡು'.

ಕಳೆದೆರಡು ವರುಷಗಳಿಂದ ಕಾಡಿನಂಚಿನಲ್ಲಿ ಮಳೆಕೊಯ್ಲನ್ನು ಮತ್ತು ನೀರಿನರಿವನ್ನು ಬಿತ್ತುವ 'ನೀರಿನ ಹಬ್ಬ' ನಡೆದಿತ್ತು. ಹಿಂದಿನ ವರುಷಗಳ ನೀರಿನ ಕೆಲಸದ ಫಲಶ್ರುತಿಯನ್ನು ಪ್ರತ್ಯಕ್ಷ ತೋರಿಸುವ ಈ ವರುಷದ 'ನೀರಿನ ಹಬ್ಬ'ವೇ ವಿಶಿಷ್ಟ. ಸಾಗರದ ಸುತ್ತಮುತ್ತಲಿನ ಐದಾರು ಶಾಲೆಗಳ ವಿದ್ಯಾರ್ಥಿಗಳಂದು ನೀರಿನಲ್ಲಿ ತೋಯ್ದರು, ಮಣ್ಣಲ್ಲಿ ಬಿದ್ದೆದ್ದು 'ಮಣ್ಣಿನ ಮಕ್ಕಳಾದರು'! ಕಾಡಿನಲ್ಲೆಲ್ಲಾ ಓಡಾಡಿದರು.

'ನೋಡಿ. ಎರಡು ವರುಷದ ಹಿಂದೆ ಈ ಪುಷ್ಕರಣಿ ಭಣಗುಟ್ಟುತ್ತಿತ್ತು. ಈಗ ಎಷ್ಟು ತುಂಬಿದೆ. ನೀರಿಂಗಿಸಿದ್ದರ ಫಲಶ್ರುತಿ' ಸಿಎಮ್ಮೆನ್ ಶಾಸ್ತ್ರಿಯವರು ವಿವರಿಸುತ್ತಿದ್ದಂತೆ, 'ಅದು ಹೇಗೆ ಸಾಧ್ಯ' ವಿದ್ಯಾರ್ಥಿಗಳಂದ ಚೋದ್ಯಪ್ರಶ್ನೆ.'ಕಾಡಿನಂಚಿನಲ್ಲಿ ನೂರೈವತ್ತು ಇಂಗುಗುಂಡಿಗಳು, ಎಂಟು ಕೆರೆಗಳ ಮೂಲಕ ಮಳೆನೀರು ಇಂಗಿ ಪುಷ್ಕರಣಿ ತುಂಬಿದೆ. ಈ ವರುಷದ ಬೇಸಿಗೆಯಲ್ಲೂ ಬತ್ತಿಲ್ಲ!' - ಕಾತರದ ಕಣ್ಣುಗಳಿಗೆ ಮತ್ತಷ್ಟು ಗೊಂದಲ. ಎಂಟು ಸರಣಿ ಕೆರೆಗಳ ಹತ್ತಿರ ಕರೆದೊಯ್ದು, ವಿವರಿಸಿದಾಗಲೇ ಸಮಾಧಾನ. 'ಮಳೆನೀರು ಎಫ್.ಡಿ.ಇದ್ದಂತೆ, ಅದನ್ನು ನಗದೀಕರಿಸುವುದು ಮಾತ್ರ ಬೇಸಿಗೆಯಲ್ಲಿ' - ಶ್ರೀ ಪಡ್ರೆಯವರಿಂದ ಇನ್ನಷ್ಟು ಮಾಹಿತಿ.

'ಹೊಸ ಕೊಳವೆ ಬಾವಿ ಕೊರೆಯುವುದಕ್ಕಿಂತ ಒಂದೆರಡು ಇಂಗುಗುಂಡಿಯೋ, ಕೆರೆಯನ್ನೋ ತೋಡಿಸಿ. ಹೆಚ್ಚು ವೆಚ್ಚವಾಗದು, ಫಲಿತಾಂಶ ಶೀಘ್ರ' ಹಾಸ್ಯಮಿಶ್ರಿತ ಧ್ವನಿಯಲ್ಲಿ ಹೇಳಿದರು ಸ್ಥಳೀಯ ಷಣ್ಮುಖಪ್ಪ. ಸರಣಿ ಕೆರೆಗಳು ಯಾವಾಗ ತುಂಬಿದುವೋ, ನಮ್ಮ ತೋಟದ ಕೊಳವೆ ಬಾವಿಯೂ ತುಂಬಿತು - ಶಾಸ್ತ್ರಿ ಉವಾಚ. ' ನೋಡಿ, ಕೆಳಗಿನ ಗದ್ದೆಗಳು ಐದು ದಶಕಗಳ ಹಿಂದೆ ವರುಷಕ್ಕೆ ಎರಡು ಬೆಳೆ ನೀಡುತ್ತಿದ್ದುವು. ಕಾಡು ಒಣಗಿತು. ಅಂತರ್ಜಲ ಕುಗ್ಗಿತು. ಬಾವಿಗಳು-ಕೆರೆಗಳು ಭಣಭಣ. ಒಂದು ಬೆಳೆ ಭತ್ತದ ಬೇಸಾಯ ಮಾಡಲೂ ತ್ರಾಸ ಪಡಬೇಕಾಯಿತು' ಎನ್ನುವಾಗ ಪಂಚತಂತ್ರದ ಕಥೆ ಕೇಳುವಂತೆ ಪಿನ್ಡ್ರಾಪ್ ನಿಶ್ಶಬ್ಧ! 'ಇನ್ನೈದು ವರುಷಗಳಲ್ಲಿ ಎರಡು ಬೆಳೆ ಖಂಡಿತಾ ತೆಗಿತೀವಿ' ಊರಿನ ಹಿರಿಯ ಕೋವಿ ಪುಟ್ಟಪ್ಪ ಅನ್ನುವಾಗ ಮಕ್ಕಳಲ್ಲಿ ಎಷ್ಟೊಂದು ಖುಷಿ.

ಇಂತಹ ವಿಚಾರಗಳು ಮಕ್ಕಳಿಗೆ ಎಲ್ಲಿ ಸಿಗುತ್ತೆ ಹೇಳಿ. ಪಠ್ಯದಲ್ಲೋ, ವಾಹಿನಿಯಲ್ಲೋ! ಕೇವಲ 'ಜಲಮರುಪೂರಣ, ಮಳೆಕೊಯ್ಲು' ಎಂದಷ್ಟೇ ಕೇಳಿ ಗೊತ್ತಿರುತ್ತದೆ. ಪ್ರತ್ಯಕ್ಷ ನೋಡಿದ ಅನುಭವವಿರುವುದಿಲ್ಲ. 'ನೀರಿನ ಹಬ್ಬ'ದಲ್ಲಿ ಭಾಗವಹಿಸಿದ ಮಕ್ಕಳಿಗೆ ಪ್ರತ್ಯಕ್ಷ ನೀರಿಂಗಿದುದರ ಪಾಠ ಸಿಕ್ಕಿದಾಗ ಸಾಗರದ ವನಶ್ರೀ ಶಾಲೆಯ ರಂಜಿತಾ ಹೇಳಿದ್ದೇನು ಗೊತ್ತೇ - 'ನಮಗೆ ನೀರಿನ ಬಗ್ಗೆ ಅಲ್ಪಸ್ವಲ್ಪ ಓದಿ ಗೊತ್ತಿತ್ತು. ನೋಡಿದ ಅನುಭವವಿರಲಿಲ್ಲ. ನೀರನ್ನು ದುರ್ಬಳಕೆ ಮಾಡುವುದು ತಪ್ಪು ಅಂತ ಗೊತ್ತಾಯಿತು' ಎಂದಳು.

'ನೋಡಿ. ಇಂಗು ಗುಂಡಿ ಮಾಡುವುದು ಹೀಗೆ' ಎನ್ನುತ್ತಾ ಷಣ್ಮುಖಪ್ಪ ಕಚ್ಚೆ ಬಿಗಿದು, ಹಾರೆ ಹಿಡಿದು ಅಗೆಯಲು ಶುರುಮಾಡಿದಾಗ, ಮಕ್ಕಳು ಗುಂಪು ಸೇರಿ, 'ಇಷ್ಟೆನಾ' ಅನ್ನಬೇಕೇ. 'ಸಣ್ಣ ಸಣ್ಣ ರಚನೆಗಳೇ ನೀರಿಂಗಿಸಲಿರುವ ಉಪಾಧಿಗಳು' ವಿವರವನ್ನಿತ್ತರು ಶ್ರೀಪಡ್ರೆ. ಅಗೆಯುತ್ತಿದ್ದಾಗ ರಾಶಿರಾಶಿ ಎರೆಹುಳಗಳು. ಕೆಲವರು ಕೈಯಲ್ಲಿ ಹಿಡಿದು, ' ಇದೇನಾಎರೆಗೊಬ್ಬರ ಮಾಡುವ ಹುಳುಗಳು' ಆಶ್ಚರ್ಯಪಟ್ಟರು. 'ಪಟ್ಟಣದಲ್ಲಿ ಹುಟ್ಟಿದ್ದೇನೆ. ಹಳ್ಳಿ ನೋಡಿ ಖುಷಿಯಾಯಿತು. ಎರೆಹುಳು ಸ್ಪರ್ಶ ಹೊಸ ಅನುಭವ ನೀಡಿತು' ವಿದ್ಯಾರ್ಥಿನಿ ವರ್ಷಿಣಿಯ ಅಂತರಾಳದ ಮಾತು.

ಪಾಠದೊಂದಿಗೆ ಪ್ರತ್ಯಕ್ಷ ದರ್ಶನ ಮಾಡಿದಾಗ ಮಕ್ಕಳು ಹೇಗೆ ಅದನ್ನು ಸ್ವೀಕರಿಸುತ್ತಾರೆ ಎಂಬುದಕ್ಕೆ ವಿದ್ಯಾರ್ಥಿಗಳಾದ ಜಯಣ್ಣ, ಹಾಲೇಶ್ ದನಿಸೇರಿಸಿದ್ದು ಹೀಗೆ - 'ನಮ್ಮೂರು ಬಳ್ಳಾರಿಯಲ್ಲಿ ಹಸಿರಿಲ್ಲ. ಇಲ್ಲಿನ ನೀರಿನ ಪಾಠ ಖುಷಿಯಾಯಿತು. ಕಡು ಬೇಸಿಗೆಯಲ್ಲಿ ಒಂದು ಕೊಡ ನೀರಿಗೆ ಒಂದೂವರೆ ರೂಪಾಯಿ ಕೊಟ್ಟದು ನೆನಪಿದೆ. ಇಲ್ಲಿ ಎಷ್ಟೊಂದು ನೀರಿನ ಸಮೃದ್ಧತೆ'.

ಕಾಡಿನ ನಡಿಗೆಯಲ್ಲಿ ನೀರಿನ ಪಾಠದೊಂದಿಗೆ ಔಷಧೀಯ ಗಿಡಗಳ ಪರಿಚಯವೂ ಜತೆಜತೆಗೆ ನಡೆಯಿತು. ಫಲದ ಸಂಸ್ಥೆಯ ಉಮೇಶ್ ಅಡಿಗರೊಂದಿಗೆ ಊರಿನ ಹಿರಿಯರೂ ಹೆಜ್ಜೆ ಹಾಕಿದ್ದರು. 'ಸಮಾರಂಭಗಳಲ್ಲಿ ಮಾವಿನ ತೋರಣ ಯಾಕೆ ಕಟ್ಟುತ್ತಾರೆ' ಮಕ್ಕಳಿಗೆ ಅಡಿಗರ ಪ್ರಶ್ನೆ. 'ಅಲಂಕಾರಕ್ಕೆ' ಎಂಬ ಉತ್ತರ. 'ಅಲ್ಲ, ಮಾವಿನ ಎಲೆಯು ಆಲ್ಕೋಲೈಡ್ನ್ನು ಬಿಡುಗಡೆ ಮಾಡುತ್ತದೆ. ಇದು ಖಾಯಿಲೆಯನ್ನು ಹರಡುವ ಸೂಕ್ಷ್ಮಾಣುಜೀವಿಯನ್ನು ನಿಯಂತ್ರಣ ಮಾಡುತ್ತವೆ' ಎಂದರು. ವೀರಭದ್ರ ಬಳ್ಳಿ, ಬಿಳಿಮತ್ತಿ, ಹುಲಿಸೊಪ್ಪು, ಭದ್ರಮುಷ್ಠಿಯಂತಹ ಸಸ್ಯಗಳ ವಿವರಣೆ ದಾರಿಯುದ್ದಕ್ಕೂ ನಡೆದಿತ್ತು.

'ನೋಡಿ ಕೆಲವು ಗಿಡಗಳಿವೆ. ಅವುಗಳನ್ನು ನಾವು ಸ್ಪರ್ಶಿಸಿದರೆ ಸಾಕು, ಕಣ್ಣೀರು ಬರುತ್ತೆ, ಇನ್ನೂ ಕೆಲವಿವೆ, ಅವುಗಳಿಂದ ನಗು ಬರುತ್ತೆ. ಮತ್ತೊಂದು ಗಿಡವಿದೆ - ಅದು ನಮ್ಮ ಕೈಗೆ ತಾಗಿತೋ - ಆರು ತಿಂಗಳ ಕಾಲ ಕೈಮೇಲೆ ಏನೋ ಭಾರವಿದ್ದ ಅನುಭವವಾಗುತ್ತದೆ' ಅಡಿಗರೆಂದಾಗ ಮಕ್ಕಳು ಅಕ್ಕಪಕ್ಕದ ಗಿಡಗಳನ್ನು ನೋಡಿ ಸಂಶಯಪಡಬೇಕೇ!

ಒಟ್ಟಿನಲ್ಲಿ ಕಾಡಿನ ನಡಿಗೆ ಮಕ್ಕಳಲ್ಲಿ ಹೊಸ ಸಂಚಲನವನ್ನುಂಟು ಮಾಡಿದ್ದಂತೂ ಸ್ಪಷ್ಟ. ಹಬ್ಬದಲ್ಲಿ ಸಿಂಗಾಪುರದ ರಘುಪತಿ ಮತ್ತು ಸುಕುಮಾರನ್ ಭಾಗವಹಿಸಿ ತಮ್ಮೂರಿನ ನೀರಿನ ಸಮಸ್ಯೆಯನ್ನು ಮುಂದಿಟ್ಟರು - 'ಸಮುದ್ರ ಮಟ್ಟಕ್ಕೆ ಸಮವಾಗಿರುವ ಸಿಂಗಾಪುರವು ಮಲೇಶ್ಯಾದಿಂದ ಕುಡಿನೀರನ್ನು ಖರೀದಿಸುತ್ತಿದೆ. ಪೈಪ್ ಮೂಲಕ ನೀರಿನ ಸರಬರಾಜು. ಬಳಸಿದ ನೀರನ್ನು ಶುದ್ಧೀಕರಿಸಿ ಪುನರ್ಬಳಕೆ ಮಾಡುವ ಕುರಿತು ಅಲ್ಲಿನ ಸರಕಾರ ಆಲೋಚಿಸುತ್ತಿದೆ. ನೀರಿನ ವಿಚಾರದಲ್ಲಿ ನೀವೇ ಅದೃಷ್ಟವಂತರು' ಎಂದರು.

0 comments:

Post a Comment