Saturday, October 17, 2009

'ಸುರಂಗ'ಗಳಿಂದ ನೀರ ನೆಮ್ಮದಿ!


ಬಂಟ್ವಾಳ ತಾಲೂಕು ಮಾಣಿಲದ ಮಾಣಿಮೂಲೆ ಅಚ್ಯುತ ಭಟ್ಟರ ಭೂಮಿ ಎಲ್ಲರಂತೆ ಸಮತಟ್ಟಲ್ಲ. ತೀರಾ ಗುಡ್ಡ. ಬಾವಿ ತೋಡುವಂತಿಲ್ಲ. ತೋಡಿದರೂ ನೀರು ಸಿಗಬಹುದೆಂಬ ವಿಶ್ವಾಸವಿಲ್ಲ. ಒಸರುವ ಒರತೆ ನೀರನ್ನು ಹಿಡಿದಿಡಬೇಕು. ಅದು ಬಿಟ್ಟರೆ ಬೇರೆ ನೀರಿನ ಮೂಲವಿಲ್ಲ.
ಕೃಷಿ ಜವಾಬ್ದಾರಿ ಹೆಗಲಿಗೆ ಬಂದಾಗ ತಂದೆಯವರು ಕೊರೆಸಿದ್ದ ಸುರಂಗವೊಂದರ ನೀರೇ ಆಧಾರ. ಅದರ ಕಿರು ಬೆರಳು ಗಾತ್ರದ ಹರಿನೀರನ್ನು ಸಂಗ್ರಹಿಸಿ ಬಳಕೆ. ತೀರಾ ಬೆಟ್ಟವಾದುದರಿಂದ ಅಲ್ಲಲ್ಲಿ ಸಮತಟ್ಟು ಮಾಡಿ ಮನೆ, ಕೃಷಿ. ತಟ್ಟು ಮಾಡಿದಲ್ಲೆಲ್ಲಾ ಅಚ್ಯುತ ಭಟ್ ಸುರಂಗ ಕೊರೆದರು ಈಗವರಲ್ಲಿ 22 ಸುರಂಗಗಳಿವೆ. ಅದರ ನೀರೇ ಆರೆಕ್ರೆ ಅಡಿಕೆ ತೋಟಕ್ಕೆ ಆಧಾರ.
ಸುರಂಗ - ನೆಲದಾಳದ ಹೊಂಡವಲ್ಲ. ಗುಡ್ಡದಡ್ಡಕ್ಕೆ ಕೊರೆದು ಮಾಡಿದ ರಚನೆ. ಆರುವರೆ ಅಡಿ ಎತ್ತರ, ಮೂರಡಿ ಅಗಲದಷ್ಟು - ಮನುಷ್ಯ ಹೋಗುವಷ್ಟು - ಗುಡ್ಡವನ್ನು ಅಡ್ಡಕ್ಕೆ ಕೊರೆಯುವುದು. ಕೃಷಿಯಲ್ಲಿ ಬಳಸುವಂತಹುದೇ, ಆದರೆ ಚಿಕ್ಕದಾದ ಪಿಕ್ಕಾಸಿ ಮುಖ್ಯ ಅಸ್ತ್ರ! ಒಬ್ಬ ಅಗೆಯಲು, ಮತ್ತೊಬ್ಬ ಮಣ್ಣು ತುಂಬಿಸಲು, ಇನ್ನೊಬ್ಬ ಮಣ್ಣನ್ನು ಹೊರ ಸಾಗಿಲು - ಹೀಗೆ ಮೂವರು ಬೇಕು.
ಅಚ್ಯುತ ಭಟ್ಟರ ಗುಡ್ಡದ ಮಣ್ಣು - ಜಂಬಿಟ್ಟಿಗೆ (ಮುರ). ಸುರಂಗ ಕೊರೆಯಲು ಸೂಕ್ತ ಮಣ್ಣು. ಜರಿಯುವುದಿಲ್ಲ, ಕುಸಿಯುವುದಿಲ್ಲ. ಸುರಂಗ ಕೊರೆತ ಎಚ್ಚರ ಬೇಡುವ ಕೆಲಸ. ಕೊರೆಯುತ್ತಾ ಮುಂದೆ ಹೋದಷ್ಟೂ ಬೆಳಕಿನ ಅಭಾವ. ಕ್ಯಾಂಡಲ್, ಲ್ಯಾಟನ್ ಬಳಸುತ್ತಾರೆ. ಕೆಲವೊಂದು ಸಲ ಆಮ್ಲಜನಕ ಅಭಾವವಾಗುತ್ತದೆ. ಆಗ ಒಮ್ಮೆ ಹೊರಗೆ ಬಂದು ಸ್ವಲ್ಪ ಹೊತ್ತು ಇದ್ದು ಪುನಃ ಕೆಲಸ ಆರಂಭ. ಮಣ್ಣಿನಲ್ಲಿ ನೀರಿನ ಪಸೆ ದೊರೆತರೆ 'ಮುಂದೆ ನೀರು ಸಿಗುತ್ತದೆ' ಎಂಬ ಸೂಚನೆ. 'ಕೊರೆದಷ್ಟೂ ನೀರಿನ ಪಸೆಯ ಸೂಚನೆ ಸಿಗದಿದ್ದರೆ ಸುರಂಗ ಕೊರೆವ ದಿಕ್ಕನ್ನು ಅಲ್ಲೇ ಸ್ವಲ್ಪ ಬದಲಿಸಿದರೆ ಆಯಿತು. ಅದೆಲ್ಲಾ ಅಲ್ಲಲ್ಲಿನ ನಿರ್ಧಾರ.' ಎನ್ನುತ್ತಾರೆ ಭಟ್.
ನೀರಿನ ಒರತೆ ಸಿಕ್ಕಿದಲ್ಲಿಗೆ ಕೊರೆತ ಬಂದ್. ಒರತೆಯ ಸೆಲೆ ಸಿಕ್ಕಿದಲ್ಲಿ ಮಣ್ಣಿನಿಂದ ಸಣ್ಣ ದಂಡೆ (ಕಟ್ಟ) ಮಾಡಿದರೆ ನೀರು ಅದರಲ್ಲಿ ತುಂಬಲು ಅನುಕೂಲ. ಸುರಂಗದುದ್ದಕ್ಕೂ ಚಿಕ್ಕ ಕಣಿಯನ್ನು ತೆಗದು ನೀರನ್ನು ಹೊರತರಬಹುದು. ಕಣಿಯ ಬದಲಿಗೆ ಅಡಿಕೆಯ ದಂಬೆ ಬಳಕೆ.ಒಳಭಾಗದಿಂದ ನೀರು ಹೊರಬರುವಾಗ, ತಾಪಕ್ಕೆ ನೀರು ಆರಿಹೋಗುತ್ತದೆ. ಇದಕ್ಕಾಗಿ ಪಿವಿಸಿ ಪೈಪನ್ನು ಬಳಸಿದ್ದಾರೆ. ನೀರಿನ ಮೂಲದಿಂದ ಪೈಪ್ ಜೋಡಣೆ. ಪೈಪಿನೊಳಗೆ ಬೇರುಗಳು ಮನೆ ಮಾಡುತ್ತವೆ. ಆಗ ನೀರಿನ ಹರಿವಿಗೆ ತೊಂದರೆ. ವರುಷಕ್ಕೊಮ್ಮೆ ಬೇರು ತೆಗೆದು ಪೈಪನ್ನು ಶುಚಿಗೊಳಿಸುವುದು ಅನಿವಾರ್ಯ.
ಸುರಂಗದೊಳಗೆ ಬಾವಲಿಗಳ ಬಿಡಾರ. ಅವುಗಳ ಹಿಕ್ಕೆಗಳು ನೀರಿನೊಂದಿಗೆ ಟ್ಯಾಂಕಿ ಸೇರುತ್ತವೆ. ತೋಟಕ್ಕೆ ಓಕೆ. ಆದರೆ ಕುಡಿನೀರಿಗೆ? ಒಂದು ಸುರಂಗಕ್ಕೆ ಬಾವಲಿಗಳು ಒಳ ಹೋಗದಂತೆ ಹೊರಮೈಗೆ ಬಲೆ ಹಾಕಿದ್ದಾರೆ. ಇದರ ನೀರು ಮನೆ ಸಮೀಪದಲ್ಲಿರುವ ಕುಡಿ ನೀರಿನ ಟ್ಯಾಂಕಿಯಲ್ಲಿ ಸಂಗ್ರಹವಾಗುತ್ತದೆ.
ಇಪ್ಪತ್ತೆರಡು ಸುರಂಗದಿಂದ ಬರುವ ನೀರು ನಾಲ್ಕು ಟ್ಯಾಂಕಿಗಳಲ್ಲಿ ಸಂಗ್ರಹ. ಒಂದೊಂದು ಟ್ಯಾಂಕಿಗೆ ನಾಲ್ಕೈದು ಸುರಂಗದ ಸಂಪರ್ಕ. ಟ್ಯಾಂಕಿಯಿಂದ ಟ್ಯಾಂಕಿಗೆ ಲಿಂಕ್. ಇಲ್ಲಿಂದ ನೇರ ತೋಟಕ್ಕೆ. ದೇವರ ಪೂಜೆಗೂ ಇದೇ ನೀರು. ಅಡುಗೆ ಮನೆಗೆ ನೇರ ಸಂಪರ್ಕ. ನಲ್ಲಿ ತಿರುತಿಸಿದರೆ ಆಯಿತು.
ಮಾಣಿಲದಲ್ಲಿ ಐನೂರ ಐವತ್ತು ಮನೆಗಳು. ಶೇ.65ರಷ್ಟು ಮನೆಗಳಲ್ಲಿ ಕುಡಿನೀರಿಗೆ 'ಸುರಂಗ'ವೇ ಆಧಾರ. ಅದರಲ್ಲೂ ಮಾಣಿಮೂಲೆಯ ಹದಿನೆಂಟು ಮನೆಗಳ ಬದುಕು - ಸುರಂಗದ ನೀರಿನಲ್ಲಿ! 'ನಮ್ಮೂರಿನಲ್ಲಿ ಸುರಂಗ ಕೊರೆಯಲು ಸ್ಥಳ ಸೂಚಿಸುವುದು ತಂದೆಯವರೇ. ಏನಿಲ್ಲವೆಂದರೂ ನೂರು ಆಗಿರಬಹುದು. ವಿಫಲವಾದುದೇ ಇಲ್ಲ' ಎನ್ನಲು ಗೋವಿಂದ ಭಟ್ಟರಿಗೆ ಹೆಮ್ಮೆ. 'ಇಂತಹ ಜಾಗದಲ್ಲಿ ಸುರಂಗ ಕೊರೆದರೆ ನೀರಿದೆ' ಎಂದು ಅಚ್ಯುತ ಭಟ್ಟರು ಖರಾರುವಾಕ್ಕಾಗಿ ಹೇಳಬಲ್ಲರು.
ಮಾಣಿಮೂಲೆಯಲ್ಲಿ ಸುರಂಗವೊಂದರ ರಚನೆಗೆ ಏನಿಲ್ಲವೆಂದರೂ ಹದಿನೈದರಿಂದ ಇಪ್ಪತ್ತು ಸಾವಿರ ವೆಚ್ಚ. ಒಮ್ಮೆ ಬಂಡವಾಳ ಹಾಕಿದರೆ ಆಯಿತು. ಇಂಧನ, ವಿದ್ಯುತ್, ಡೀಸೆಲ್, ಪೆಟ್ರೋಲ್, ಪಂಪ್..ರಗಳೆಯೇ ಇಲ್ಲ. ಪ್ರತಿ ವರುಷ ನಿರ್ವಹಣೆ ಮಾತ್ರ. ಗುಡ್ಡದಲ್ಲಿ ಗೇರು ಗಿಡಗಳನ್ನು ಬೆಳೆಸಿದ್ದಾರೆ. ಸಹಜವಾಗಿ ಇತರ ಗಿಡಗಳು ಬೆಳೆದಿವೆ. ಇದರಿಂದಾಗಿ ನೀರಿಂಗಲು ಅನುಕೂಲ. 'ಗುಡ್ಡದಲ್ಲಿ ಇಂಗುಗುಂಡಿಗಳನ್ನು ಮಾಡಿದರೆ ಮತ್ತೂ ಒಳ್ಳೆಯದು' ಭಟ್ಟರ ಅಭಿಪ್ರಾಯ

1 comments:

ಕೇಶವ ಪ್ರಸಾದ್.ಬಿ.ಕಿದೂರು said...

ಸುರಂಗದ ನೀರಿನಷ್ಟೇ ಶುಚಿ-ರುಚಿ ಬರಹ

Post a Comment