Saturday, December 15, 2012

ಕಡಲಾಚೆಯಿಂದ ಬಂದರು, ಸುರಂಗ ಹೊಕ್ಕರು!

              ಸುರಂಗ - ನೆಲದಾಳದ ಹೊಂಡವಲ್ಲ. ಭೂಮಿಯನ್ನು ಪಾತಾಳಕ್ಕೆ ಕೊರೆದ ರಚನೆಯಲ್ಲ. ಇದು ಗುಡ್ಡಕ್ಕೆ ಕನ್ನ ಕೊರೆದು ನೀರಿಗಾಗಿ ಮಾಡಿಕೊಂಡ ರಚನೆ. ಅವಕ್ಕೆ ಶತಮಾನಗಳ ಇತಿಹಾಸ. ಬೆಟ್ಟಗಳ ಮಧ್ಯೆ ಮನೆ, ತೋಟ ಮಾಡಿಕೊಂಡವರಿಗೆ ಬಾವಿ, ಕೆರೆಗಳ ಸಂಪನ್ಮೂಲ ತ್ರಾಸ. ಗುಡ್ಡ ಕೊರೆದು ನೀರಿನ ನಿಧಿಯನ್ನು ಹುಡುಕುವುದೊಂದೇ ದಾರಿ.
ಕೊಂಕಣ ರೈಲು ಹಾಗೂ ಮಂಗಳೂರು-ಬೆಂಗಳೂರು ರೈಲಿನಲ್ಲಿ ಹಗಲು ಪ್ರಯಾಣಿಸಿದವರಿಗೆ  ಸುರಂಗ ಗೊತ್ತು! ಗುಡ್ಡವನ್ನು ಕೊರೆದು ಮಾಡಿದ ಮಾರ್ಗದಲ್ಲಿ ರೈಲು ಓಡುವಾಗ ಸಿಗುವ ಅನುಭವ. ಒಂದು ಕಡೆ ಹೊಕ್ಕು ಮತ್ತೊಂದು ಕಡೆ ಹೊರಬರಬಹುದು. ಆದರೆ ನೀರಿಗಾಗಿ ಮಾಡಿದ ಸುರಂಗದಲ್ಲಿ ಹೊಕ್ಕು ಹೊರ ಬರುವ ವ್ಯವಸ್ಥೆಯಿಲ್ಲ. ಹೊಕ್ಕ ದಾರಿಯಲ್ಲಿ ಮರುಪ್ರಯಾಣ!

               ಬಂಟ್ವಾಳ ತಾಲೂಕಿನ ಮಾಣಿಮೂಲೆ ಅಚ್ಯುತ ಭಟ್ಟರ ಭೂಮಿಯಲ್ಲಿ ಇಪ್ಪತ್ತು ಸುರಂಗಗಳಿವೆ. ಇವುಗಳ ನೀರು ಅವರ ಆರೆಕ್ರೆ ಭೂಮಿಗೆ ಜಲನಿಧಿ. ಕರಾವಳಿಯಿಂದ ಕೇರಳ ಕಾಞಂಗಾಡ್ ವರೆಗೆ ಏನಿಲ್ಲವೆಂದರೂ ಆರು ಸಾವಿರಕ್ಕೂ ಮಿಕ್ಕಿ ಸುರಂಗಗಳಿವೆ! ಕುಡಿನೀರು ಮತ್ತು ಕೃಷಿ ಬಳಕೆಗಾಗಿ.

               ಹಿರಿಯರು ನೀರಿಗಾಗಿ ಕಂಡುಕೊಂಡ ಜಾಣ್ಮೆಗಳಿವು. ಆಧುನಿಕ ವ್ಯವಸ್ಥೆಗಳು ಹೆಜ್ಜೆಯಿಡುವ ಮೊದಲೇ ಸುರಂಗಗಳು ಬೆವರಿನ ಶ್ರಮದಿಂದ ರಚನೆಯಾಗಿರುವುದು ಒಂದು ಕಾಲಘಟ್ಟದ ವೃತ್ತಿ ಸುಭಗತನ. ಮಣ್ಣುಮಾಂದಿ ಯಂತ್ರಗಳಿಲ್ಲ, ಹೊಂಡ ತೋಡಲು ಕೊರೆಯಂತ್ರಗಳಿಲ್ಲ. ಎಲ್ಲವೂ ಹಾರೆ, ಪಿಕ್ಕಾಸಿಗಳ ಅಗೆತ. ಕೊರೆಯುತ್ತಾ ಒಳಗೆ ಸರಿದಂತೆ ಮಣ್ಣನ್ನು ಹೊರಗೆ ಹಾಕುವ ಗ್ರಾಮೀಣ ಜಾಣ್ಮೆ. ಹಳೆಯ ಒಂದೊಂದು ಸುರಂಗಗಳ ಮುಂದೆ ನಮ್ಮ ಆಧುನಿಕ ವ್ಯವಸ್ಥೆಯು ನಾಚುತ್ತದೆ!

ಸುರಂಗ ತಪಾಸಣೆ!

          ಇಂಗ್ಲೆಂಡಿನ ಹೇಟ್ಫೋರ್ಡ ಶೈರ್ ಯೂನಿವರ್ಸಿಟಿಯ ಹಿರಿಯ ಉಪನ್ಯಾಸಕ ಡಾ.ಡಾರೆನ್ ಕ್ರೋಕ್ ಹಾಗೂ ಸ್ಕಾಟ್ಲೇಂಡಿನ ಉಪನ್ಯಾಸಕ ರಿಚರ್ಡ್  ಜೋನ್ಸ್ ಸುರಂಗಗಳ ಪರಿಶೀಲನೆಗಾಗಿ ಮಾಣಿಮೂಲೆಗೆ ಬಂದರು. ಒಂದು ವಾರ ಅಧ್ಯಯನ ಮಾಡಿದರು. ಪಡ್ರೆ, ಕರೋಪಾಡಿ, ಪುಣಚ, ಎಣ್ಮಕಜೆ, ಕೇಪು, ಬಾಯಾರು, ಅಳಿಕೆ, ಕಾಸರಗೋಡು, ಕಾಞಂಗಾಡು ಸೇರಿದಂತೆ ಮುನ್ನೂರು ಕೃಷಿಕರ ಕುಟುಂಬಗಳ ಭೂಮಿಯಲ್ಲಿರುವ ಸುರಂಗದ ಒಳಹೊಕ್ಕರು.
         
             ಒಳಗಿರುವ ನೀರು-ಮಣ್ಣಿನ ಗುಣಮಟ್ಟಗಳ ಪರೀಕ್ಷೆ, ಪರಿಸರದ ಮೇಲೆ ಪರಿಣಾಮ, ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಹೇಗೆ ಪಡೆಯಬಹುದು.. ಮುಂತಾದ ಕಾರ್ಯಹೂರಣವನ್ನಿಟ್ಟುಕೊಂಡ ತಂಡವು ಏನಿಲ್ಲವೆಂದರೂ ಒಂದು ಸಾವಿರಕ್ಕೂ ಮಿಕ್ಕಿ ಸುರಂಗಗಳನ್ನು ವೀಕ್ಷಿಸಿದ್ದಾರೆ. ಅಧ್ಯಯನ ಮಾಡಿದ್ದಾರೆ. 'ವಿದೇಶದಲ್ಲಿ ಈ ರೀತಿಯ ಸುರಂಗಗಳಿಲ್ಲ. ಇಲ್ಲಿನ ಸುರಂಗ ಜ್ಞಾನವನ್ನು ದಾಖಲಿಸುವುದೇ ಮುಖ್ಯ ಉದ್ದೇಶ' ಎನ್ನುತ್ತಾರೆ ಡಾ.ಡಾರೆನ್ ಕ್ರೋಕ್.

          ತಂಡವು ಪ್ರವಾಸ ಹೋದೆಡೆ ಹಲವು ದಶಕ ದಾಟಿದ ಸುರಂಗಗಳ ಪತ್ತೆ. ಬಾಯಾರು ಒಂದೆಡೆ ನೂರಡಿಗೂ ಮಿಕ್ಕಿದ ಸುರಂಗಗಳು. ಅದರೊಳಗೆ ಹೋದ ತಂಡಕ್ಕೆ ಗೋಚರವಾದುದು ನೂರು ಮಂದಿ ಕುಳಿತುಕೊಳ್ಳಬಹುದಾದಷ್ಟು ದೊಡ್ಡ ಗುಹೆ! ಆರಿಂಚು ನೀರು. ನೂರಡಿ ಕೊರೆದ ಬಳಿಕ ಸುರಂಗದ ಪಥವನ್ನು ಬದಲಿಸಲು ಗುಹೆಯ ರೀತಿಯಲ್ಲಿ ಹಿರಿಯರು ಕೊರೆದಿರಬಹುದು, ಸುರಂಗದ ರಚನೆಯಲ್ಲಿ ಹೇಳುವಂತಹ ವ್ಯತ್ಯಾಸವಿಲ್ಲ, ಕೆಲವೆಡೆ ಒಳಗೆ ಎರಡು ಮೂರು ಕವಲುಗಳ ಉಪಸುರಂಗಗಳೂ ಪತ್ತೆಯಾದುವು ಎನ್ನುತ್ತಾರೆ ಮಾಣಿಮೂಲೆ ಗೋವಿಂದ ಭಟ್ಟರು.

          ಪೆರ್ಲದ ಸಾಯ ರುಕ್ಮ ನಾಯಕರಲ್ಲಿರುವ ಸುಮಾರು ಮೂವತ್ತು ವರುಷದ ಸುರಂಗದ ನೀರು ಕುಡಿದರೆ ಸಾಕು, ವಾಂತಿ ಆಗುತ್ತದಂತೆ! ಬಹುಶಃ ನೀರಿನಲ್ಲಿ ಯಾವುದೋ ರಾಸಾಯನಿಕ ಅಂಶ ಪ್ರಬಲವಾಗಿರಬಹುದು ಎಂಬ ಊಹೆ. ಅಚ್ಯುತ ಭಟ್ಟರ ಅನುಭವ ನೋಡಿ. 'ಸುರಂಗದ ನೀರಿಗಿಂತ ಶ್ರೇಷ್ಠವಾದ ಮತ್ತು ಶುದ್ಧವಾದ ನೀರು ಬೇರೆಡೆ ಸಿಗಲು ಕಷ್ಟ. ಧೈರ್ಯವಾಗಿ ನೇರವಾಗಿ ಬಳಸಬಹುದು.'

          ಎರಡು ವರುಷದ ಹಿಂದೆ ಹೇಟ್ಫೋಡರ್ ಶೈರ್ ವಿವಿಯ ಎಂ.ಎಸ್. ವಿದ್ಯಾರ್ಥಿ ಸುಧೀರ್ಚಂದ್ರ ತ್ರಿಪಾಠಿ  'ನೀರು ಮತ್ತು ಪರಿಸರ' ಅಧ್ಯಯನಕ್ಕಾಗಿ ಸುರಂಗವನ್ನು ಆಯ್ಕೆ ಮಾಡಿಕೊಂಡಿದ್ದರು. ಇವರು ನೈನಿತಾಲಿನವರು.  ಹಿರಿಯ ಪತ್ರಕರ್ತ ಶ್ರೀ ಪಡ್ರೆಯವರ ಸುರಂಗದ ಬಗ್ಗೆ ಬರೆದ ಲೇಖನಗಳು ಜಾಲತಾಣದಲ್ಲಿ ಪತ್ತೆ. ಇದು ತ್ರಿಪಾಠಿಗೆ ಸ್ಫೂರ್ತಿಯಾಗಿತ್ತು. ಮಾಣಿಮೂಲೆ ಮನೆಯಲ್ಲಿದ್ದುಕೊಂಡು ಹಗಲು ಹೊತ್ತಲ್ಲಿ ಸುರಂಗದೊಳಗಿದ್ದು, ಅಧ್ಯಯನ ಕೈಗೊಂಡು ವರಿಷ್ಠರಿಗೆ ವರದಿ ಸಲ್ಲಿಸಿದ್ದರು.  'ಸುರಂಗದ ನೀರು ಮಿನರಲ್ ವಾಟರಿಗಿಂತಲೂ ವಿಶ್ವಾಸಾರ್ಹ. ಇದನ್ನು ನೇರವಾಗಿ ಬಾಟಲಿಯಲ್ಲಿ ತುಂಬಿ ಮಾರಬಹುದು!' ಎಂದಿದ್ದರು. ಅಧ್ಯಯನ ವರದಿಯ ಸತ್ಯಾಸತ್ಯತೆಗೆ ಉಪನ್ಯಾಸ ತಂಡವು ಕಡಲನ್ನು ಹಾರಿ ಕರಾವಳಿ-ಕೇರಳಕ್ಕೆ ಬರಬೇಕೆ!

          'ಸುರಂಗಗಳು ಒಂದಕ್ಕಿಂತ ಒಂದು ಭಿನ್ನ. ಇತಿಹಾಸವೂ ಕೂಡಾ ಭಿನ್ನವಾಗಿದೆ. ಭಾರತದ ಕೃಷಿ ಪದ್ಧತಿಯಲ್ಲಿ ಸುರಂಗದ ನೀರನ್ನು ಬಳಸುತ್ತಾರೆ ಎನ್ನುವುದು ಇಲ್ಲಿಗೆ ಬಂದ ಮೇಲೆ ಮನದಟ್ಟಾಯಿತು. ಇವೆಲ್ಲವುಗಳ ಕುರಿತು ದಾಖಲಾತಿ ಆಗಬೇಕಾಗಿದೆ. ಭವಿಷ್ಯದ ನೀರಿನ ನೆಮ್ಮದಿಗೆ ಇಂತಹ ದಾಖಲಾತಿಗಳು ಪೂರಕ' ಎನ್ನುವುದು ಡಾ. ಡಾರೆನ್ ಅಭಿಮತ.

ಸುರಂಗ ವಿಜ್ಞಾನಿ

          ಬಂಟ್ವಾಳ ತಾಲೂಕಿನ ಮಾಣಿಲ ಚಿಕ್ಕ ಗ್ರಾಮ. ಐನೂರರ ಆಚೀಚೆ ಮನೆಗಳು. ಶೇ.70ಕ್ಕೂ ಮಿಕ್ಕಿದ ಮನೆಗಳಲ್ಲಿ ಕುಡಿ, ಕೃಷಿಗೆ ಸುರಂಗದ ನೀರೇ ಆಧಾರ. ಅಚ್ಯುತ ಭಟ್ಟರು ಸುರಂಗ ವಿಜ್ಞಾನಿ. ಈಗವರಿಗೆ ಎಂಭತ್ತಮೂರು. ಬಾವಿ, ಕೊಳವೆ ಬಾವಿ ಕೊರೆಯಲು ನಿಗದಿತ ಸ್ಥಳ ಹೇಳುವ ಅನುಭವಿಗಳು ಇದ್ದಾರಲ್ಲಾ, ಹಾಗೆ ಅಚ್ಯುತ ಭಟ್ಟರು ಸುರಂಗ ಕೊರೆಯಲು ಸ್ಥಳವನ್ನು ಗುರುತು ಹಾಕುತ್ತಾರೆ. ಅವರು ಗುರುತು ಹಾಕಿದ ಸ್ಥಳದಲ್ಲಿ ಸುರಂಗ ಕೊರೆದಾಗ ಗಂಗೆ ಸಿಗದೇ ಭಣ ಭಣ ಎಂದ ಉದಾಹರಣೆಯಿಲ್ಲ.

          ಲಕ್ಷ ಸುರಿದು, ಭೂಮಿ ಕೊರೆದು, ಉಕ್ಕುವ ನೀರನ್ನು ನೋಡಿ, ಪಡುವ ಆನಂದ ಸುರಂಗದಲ್ಲಿಲ್ಲ! ಒಂದು ಸುರಂಗ ಕೊರೆಯಲು ಏನಿಲ್ಲವೆಂದರೂ ಕನಿಷ್ಠ ಎರಡು ತಿಂಗಳು ಬೇಕು. ಸಿಕ್ಕ ನೀರು ಕಿರುಬೆರಳಿನ ಗಾತ್ರವಾದರೂ ವರ್ಷಪೂರ್ತಿ ಹರಿವು. ಸುರಂಗ ರಚನೆಗೆ ಒಮ್ಮೆ ಬಂಡವಾಳ ಸಾಕು. ಇಂಧನ, ವಿದ್ಯುತ್, ಡೀಸೆಲ್, ಪೆಟ್ರೋಲ್, ಪಂಪ್..ಗಳ ರಗಳೆಗಳಿಲ್ಲ! ವರುಷವೂ ನಿರ್ವಹಣೆ ಮುಖ್ಯ.

          ಗುಡ್ಡದ ಕೆಳಬದಿಯಲ್ಲಿ ಅಚ್ಯುತ ಭಟ್ಟರ ತೋಟ. ಗುಡ್ಡವನ್ನು ಅಲ್ಲಲ್ಲಿ ಸಮತಟ್ಟು ಮಾಡಿ ಆರು ತಟ್ಟು ಮಾಡಿಕೊಂಡಿದ್ದಾರೆ. ಅಡಿಕೆಯದು ದೊಡ್ಡ ತಟ್ಟು. ತೀರಾ ಕೆಳಗೆ ತೆಂಗುಕೃಷಿ. ಅಲ್ಲಲ್ಲಿನ ಅಗತ್ಯ ನೋಡಿಕೊಂಡು ಹನಿ ನೀರಾವರಿ, ತುಂತುರು ನೀರಾವಾರಿ ವ್ಯವಸ್ಥೆ. ಕೊಡದಲ್ಲಿ ನೀರು ಹೊತ್ತು ಗಿಡಗಳಿಗೆ ಉಣಿಸಿದ ದಿನವಿನ್ನೂ ಅಚ್ಯುತ ಭಟ್ಟರಿಗೆ ಮರೆತಿಲ್ಲ.

          ತೋಟ ಎಬ್ಬಿಸುವಾಗ ನೀರಿನ ಮೂಲದ ಪತ್ತೆ ಮೊದಲಾಯ್ಕೆ. ಮಾಣಿಮೂಲೆಯಲ್ಲಿ ಭಿನ್ನ. ತೋಟಕ್ಕಗಿ ಸಮತಟ್ಟು ಮಾಡಿದ ಬಳಿಕವೇ ಸುರಂಗದ ಕೊರೆತ. ಲಭ್ಯ ನೀರಿಗನುಸಾರ 'ಯಾವ ಕೃಷಿ' ಎಂಬ ನಿರ್ಧಾರ. ಸುರಂಗದಿಂದ ಹರಿದು ಬಂದ ನೀರು ಮಣ್ಣಿನಿಂದ ತಯಾರಿಸಿದ ಟ್ಯಾಂಕಿಗಳಲ್ಲಿ ಸಂಗ್ರಹ. ಅಚ್ಯುತ ಭಟ್ಟರು ಸ್ವತಃ ತಯಾರಿಸಿದ ಟ್ಯಾಂಕಿಗಳಿವು. ಅಲ್ಲಿಂದ ಗುರುತ್ವಾಕರ್ಷಣಾ ಶಕ್ತಿಯ ಮೂಲಕ ಕೃಷಿಗೆ ಹರಿವು.

          ಕೆಲವು ವರುಷಗಳ ಹಿಂದೆ ತೋಟದ ಹಿಂದಿನ ಗುಡ್ಡ ನುಣುಪಾಗಿತ್ತು. ಗೇರು, ಮಾವುಗಳನ್ನು ನೆಟ್ಟರು. ಸಹಜವಾಗಿ ಇತರ ಗಿಡಗಳೂ ಬೆಳೆಯಿತು. ಇದರಿಂದಾಗಿ ನೀರಿಂಗಿತು. ಪರಿಣಾಮ ಹೇಳಬೇಕಾಗಿಲ್ಲ ತಾನೆ. ಎಲ್ಲವೂ ಶ್ರಮ ಬೇಡುವ ಕೆಲಸ. 'ಕಾಯಕವೇ ಕೈಲಾಸ' ಎನ್ನುವ ಬಸವಣ್ಣನವರ ವಚನ ಇಲ್ಲಿ ಸಾಕಾರಗೊಳ್ಳುತ್ತಿದೆ.

          ನೀರು ಪಡೆಯುವ ಅದ್ಭುತ ಪಾರಂಪರಿಕ ಜಾಣ್ಮೆಗಳಲ್ಲೊಂದು - ಸುರಂಗ. ಹನಿ ನೀರಾವರಿಗೆ, ಬಾವಿ ತೋಟಲು, ಕೊಳವೆ ಬಾವಿ ಕೊರೆತಕ್ಕೆ, ತೋಡು-ಹಳ್ಳ ರೂಪಿಸಲು ನಮ್ಮ ಬ್ಯಾಂಕುಗಳಲ್ಲಿ ಸಾಲ ವ್ಯವಸ್ಥೆಗಳಿವೆ. ಆದರೆ ಸುರಂಗ ತೋಡಲು ವ್ಯವಸ್ಥೆಗಳಿಲ್ಲ. ಕಾರಣ, ಅದು ನೈಸರ್ಗಿಕ ಮೂಲ! ಗೋವಿಂದ ಭಟ್ಟರು ವಾಸ್ತವದತ್ತ ಬೆರಳು ತೋರಿದಾಗ ಬಳ್ಳಾರಿಯ ಗಣಿಯ ಧೂಳು ಹಾರಿ ಬಂದು ಕುಳಿತ ಅನುಭವವಾಯಿತು.

          ಸುರಂಗ ವಿಚಾರದಲ್ಲಿ ಸಾಕಷ್ಟು ವಿಚಾರಗಳನ್ನು ಮೊಗೆಯುವ ಅಚ್ಯುತ ಭಟ್ಟರು ನಿಜವಾಗಿಯೂ 'ಜಲನಿಧಿ'. ವಿದೇಶದ ಅಧ್ಯಯನಕಾರರನ್ನು ಮಾಣಿಮೂಲೆ ಸೆಳೆದಿದೆ. ಇದಕ್ಕೆಂದೇ ವಿಮಾನವೇರಿ ಬಂದಿದ್ದಾರೆ. ಅಧ್ಯಯನ ಮಾಡಿದ್ದಾರೆ. ಸುರಂಗ ನೋಡಲೆಂದೇ ಬರುವ ತಂಡಗಳಿಗೆ ಅಚ್ಯುತ ಭಟ್ಟರದು ದಾಸೋಹ ಮನೆ. ಆದರೆ ಕನ್ನಾಡಿನ ಆಡಳಿತ ವ್ಯವಸ್ಥೆಗಳಿಗೆ ಇಂತಹ ಗ್ರಾಮೀಣ ಭಾರತದ ಸದ್ದಿಲ್ಲದ ಕೆಲಸ ಕಾಣದು.  

0 comments:

Post a Comment