Saturday, July 29, 2017

ಪೇಟೆಯಲ್ಲಿ ಊರಿನ ತರಕಾರಿಯ ಹುಡುಕಾಟ


ಉದಯವಾಣಿಯ ಅಂಕಣ 'ನೆಲದ ನಾಡಿ' / 2-2-2017

                 'ಊರಿನ ತರಕಾರಿ ಬಂದಿದೆಯಾ?' ಬಹುತೇಕ ತರಕಾರಿ ಅಂಗಡಿಗಳಲ್ಲಿ ಗ್ರಾಹಕರು ಕೇಳುವ ಮೊದಲ ಪ್ರಶ್ನೆ. ಊರಿನದ್ದಾದರೆ ದರದಲ್ಲಿ ಚೌಕಾಶಿ ಮಾಡದೆ ತಮಗೆ ಬೇಕಾದ್ದಕ್ಕಿಂತ ಒಂದರ್ಧ ಕಿಲೋ ಹೆಚ್ಚೇ ಒಯ್ಯುತ್ತಾರೆ. ಉಣ್ಣುವವನಿಗೆ ಗೊತ್ತಿದೆ, ಇಂದು ಎಲ್ಲಾ ತರಕಾರಿಗಳು ರಾಸಾಯನಿಕದಿಂದ ಮಿಂದು 'ಶುದ್ಧ'ವಾಗಿ ಬರುತ್ತದೆ. ಸ್ಥಳೀಯವಾಗಿ ಬೆಳೆಯುವ ತರಕಾರಿಯಲ್ಲಿ ಹೇಳುವಂತಹ ರಾಸಾಯನಿಕಗಳಿಲ್ಲ ಎನ್ನುವುದು ನಂಬುಗೆ. ಆದರೆ ವಾಸ್ತವ ಮಾತ್ರ ಭಿನ್ನ. ಮಾರುಕಟ್ಟೆಗಾಗಿ ವಿವಿಧ ಸಿಂಪಡಣೆಗಳಿಂದ ತೋಯ್ದ ಹೊಲದಲ್ಲೇ ಮನೆಗೆ ಬೇಕಾದಷ್ಟು ವಿಷ ರಹಿತವಾಗಿ ಪ್ರತ್ಯೇಕವಾಗಿ ಬೆಳೆಯುವವರೂ ಇದ್ದಾರೆ!
              ರಾಸಾಯನಿಕ ಗೊಬ್ಬರ ಹಾಕದೆ, ವಿಷ ಸಿಂಪಡಿಸದೆ ತರಕಾರಿಯನ್ನು ಬೆಳೆಯಲು ಸಾಧ್ಯವೇ ಇಲ್ಲ ಎನ್ನುವುದು ಒಂದು ವಾದ ಮತ್ತು ಸಮರ್ಥನೆ. ಈ ಗುಲ್ಲುಗಳ ಮಧ್ಯೆ ಸದ್ದಿಲ್ಲದೆ ಯಾವುದೇ ರಾಸಾಯನಿಕ ಒಳಸುರಿಗಳನ್ನು ಬಳಸದೆ, ದೇಸಿ ಜ್ಞಾನದ ವಿವಿಧ ಸಾವಯವ ಒಳಸುರಿಗಳನ್ನು ಸಿದ್ಧಪಡಿಸಿ ವರುಷಪೂರ್ತಿ ಬೆಳೆಯುವ ಕೃಷಿಕರ ಅನುಭವವೇ ಭಿನ್ನ. ಬೆಳ್ತಂಗಡಿಯ ಅಮೈ ದೇವರಾವ್, ಪೆರ್ಲದ ವರ್ಮುುಡಿ ಶಿವಪ್ರಸಾದ್, ಪುತ್ತೂರು ಮರಿಕೆಯ ಎ.ಪಿ.ಸದಾಶಿವ, ಮುಳಿಯ ವೆಂಕಟಕೃಷ್ಣ ಶರ್ಮ.. ಹೀಗೆ ಹಲವು ಮಂದಿ ಕೃಷಿಕರು  ವಿಷರಹಿತ ಕೃಷಿಗೆ ವಿದಾಯ ಹೇಳಿದ ಅನುಭವಿಗಳ ತರಕಾರಿ ಕೃಷಿ ಅನುಭವವು ಅಧುನಿಕ ಕೃಷಿಯನ್ನು ಅಣಕಿಸುತ್ತದೆ.
              "ನಾವು ಅಂಗಡಿಯಿಂದ ತರಕಾರಿ ತರುವುದೇ ಇಲ್ಲ. ನಮ್ಮ ಊಟಕ್ಕೆ ನಾವೇ ಬೆಳೆದ ತರಕಾರಿ. ಕೃಷಿಕನಾದವನು ಅಂಗಡಿಯಿಂದ ತರಕಾರಿ ತರುವುದೆಂದರೆ ನಮಗೆ ನಾವೇ ಅವಮಾನ ಮಾಡಿಕೊಂಡ ಹಾಗೆ," ಹೀಗೆನ್ನುತ್ತಾರೆ ಅಮೈ ದೇವರಾವ್. ಅವರಿಗೀಗ ಎಪ್ಪತ್ತೆರಡು ವರುಷ. ಬೆಳ್ತಂಗಡಿ ತಾಲೂಕಿನ ಮಿತ್ತಬಾಗಿಲಿನ ಕಿಲ್ಲೂರಿನವರು. ಭತ್ತದ ತಳಿ ಸಂರಕ್ಷಕರು. ಇವರಿಗೆ ತರಕಾರಿ ಕೃಷಿಗೆ ರಜೆಯಿಲ್ಲ. ಇದಕ್ಕಾಗಿ ಪ್ರತ್ಯೇಕ ಶ್ರಮ ವ್ಯಯಿಸುವುದಿಲ್ಲ.  ಅಡಿಕೆ, ಭತ್ತದ ಕೃಷಿಯ ಮಧ್ಯೆ ಸ್ವಲ್ಪ ಹೆಚ್ಚು ಗಮನ ಕೊಡುತ್ತಾರೆ. ತರಕಾರಿ ಕೃಷಿಯಲ್ಲಿ ಇವರದ್ದೇ ಆದ ಕ್ರಮ, ವಿಧಾನ.
              ಜನವರಿ ತಿಂಗಳಿನಲ್ಲಿ ಸೌತೆಕಾಯಿ ಕೃಷಿ. ಮೊದಲು ಸಾಲನ್ನು ಸಿದ್ಧ ಮಾಡಿಕೊಳ್ಳುತ್ತಾರೆ. ಸಾಲಿನ ಮೇಲೆ ಭತ್ತದ ಹೊಟ್ಟು ಸುರಿದು, ಬೆಂಕಿ ಹಾಕಿ ಸುಡುತ್ತಾರೆ. ಮಣ್ಣಿನಲ್ಲಿರುವ ಚಿಕ್ಕಪುಟ್ಟ ಕೀಟ, ಬ್ಯಾಕ್ಟೀರಿಯಾಗಳ ನಾಶಕ್ಕೆ ಈ ಉಪಾಯ. ಸುಟ್ಟ ಜಾಗದ ಮಣ್ಣನ್ನು ಹಾರೆಯಿಂದ ಕೊಚ್ಚಿ ಬೀಜ ಪ್ರದಾನ. ಮೊಳಕೆಯೊಡೆದು ಸಸಿಯಾದಂತೆ ಹಟ್ಟಿಗೊಬ್ಬರ, ಸುಡುಮಣ್ಣು ಉಣಿಕೆ. ಒಂದೂವರೆ ತಿಂಗಳ ಬಳಿಕ ಪುನಃ ಗೊಬ್ಬರ ಹಾಕಿ ಮಣ್ಣನ್ನು ಪೇರಿಸಿ ಮಡಿಯಂತೆ ಮಾಡುತ್ತಾರೆ.
               ಬಿಸಿಲ ಕಾಲವಾದ್ದರಿಂದ ಸಸಿಗಳಿಗೆ ನಿರಂತರ ತೇವಕ್ಕಾಗಿ ಎರಡು ಸಾಲುಗಳ ಮಧ್ಯದಲ್ಲಿ ನೀರು ನಿಲ್ಲಿಸುತ್ತಾರೆ. ಮುಂಜಾವು ಕೊಡದಲ್ಲಿ ನೀರನ್ನು ಚಿಮುಕಿಸುವುದು ಹಳೆಯ ಪದ್ಧತಿ. ಎಲೆಗಳ ಮೇಲೆ ಕುಳಿತ ಮಂಜಿನ ನೀರನ್ನು ಹೊರ ಹಾಕುವುದೂ ಉದ್ದೇಶ. ಹತ್ತು ಸಾಲಿನಲ್ಲಿ ಸೌತೆ, ಎರಡು ಸಾಲು ಬೆಂಡೆ, ಎರಡು ಸಾಲು ಅಲಸಂಡೆ ಬೀಜಗಳನ್ನು ಏಕಕಾಲದಲ್ಲಿ ಹಾಕುತ್ತಾರೆ.
              "ಕುಂಬಳ ಮತ್ತು ಸಿಹಿಗುಂಬಳ (ಚೀನಿಕಾಯಿ) ಗಳ ಬೀಜಗಳನ್ನು ಜತೆಯಲ್ಲಿ ಹಾಕಬೇಡಿ.  ಹಾಕುವಾಗಲೇ ಸ್ವಲ್ಪ ಹೆಚ್ಚೇ ಬೀಜಗಳನ್ನು ಊರಿ. ಮೊಳಕೆಯೊಡೆದು ಸಸಿಯಾದಾಗ ಆರೋಗ್ಯವಂತ ಸಸಿಗಳನ್ನು ಬಿಟ್ಟುಬಿಡಿ. ಉಳಿದುದನ್ನು ಕಿತ್ತು ಬಿಡಿ. ಚೀನಿಕಾಯಿಗೆ ಕೃತಕ ಪರಾಗಸ್ಪರ್ಶ ಬೇಕು" ಎನ್ನುತ್ತಾರೆ. ಎಪ್ರಿಲ್, ಮೇ, ಜೂನ್ ತಿಂಗಳು ಮಾವು, ಹಲಸಿನ ಋತು. ಒಂದೇ ಒಂದು ಮಾವಿನಹಣ್ಣು, ಹಲಸಿನ ಕಾಯಿ ದೇವರಾಯರಲ್ಲಿ ವ್ಯರ್ಥವಾಗುವುದಿಲ್ಲ. ಹಲಸಿನ ಕಾಯಿಯ ಹಪ್ಪಳ, ಸಾಂಬಾರು, ಪಲ್ಯ. ಮಾವಿನ ಮಾಂಬಳ, ರಸಾಯನ, ಪಲ್ಯ, ಸಾಂಬಾರು.. ಹೀಗೆ ಊಟದ ಬಟ್ಟಲಿನಲ್ಲಿ ರುಚಿ ವೈವಿಧ್ಯ. ಇದೇ ಸಮಯಕ್ಕೆ ದೀವಿಹಲಸು, ಕಣಿಲೆ, ಎಲೆ ತರಕಾರಿಗಳೂ ಕಾಯುತ್ತಿರುತ್ತವೆ.
                 "ನಮ್ಮಲ್ಲಿ ಸೌತೆ, ಚೀನಿಕಾಯಿ, ಕುಂಬಳಕಾಯಿಗಳನ್ನು ಸ್ಟಾಕ್ ಮಾಡಿಡುತ್ತೇವೆ. ಮಳೆಗಾಲಕ್ಕೆ ಬೇಕಲ್ವಾ. ಆಟಿ ತಿಂಗಳಲ್ಲಿ - ಆಗಸ್ಟ್ - ಹಣ್ಣಾದ ಸೌತೆಕಾಯಿಯನ್ನು ಹೆರೆದು ಬೆಲ್ಲ ಹಾಕಿ ತಿಂದರೆ ಅಮೃತ ಸದೃಶವಾದ ರುಚಿ. ಆರೋಗ್ಯಕ್ಕೂ ಒಳ್ಳೆಯದು. ಸೌತೆ ಬೀಜದ ಸಾರು, ಸೌತೆ ಮತ್ತು ಹಲಸಿನ ಬೀಜ ಸೇರಿಸಿದ ಪಲ್ಯ ಇದ್ದರೆ ಒಂದೆರಡು ತುತ್ತು ಅನ್ನ ಹೆಚ್ಚೇ ಹೊಟ್ಟೆಸೇರುತ್ತದೆ" ಎನ್ನುತ್ತಾರೆ. ಅಲಸಂಡೆಗೆ ಬಂಬುಚ್ಚಿ ಬಾಧೆಯಿದೆ. ಕೆಂಪಿರುವೆಯನ್ನು ಸಾಲಿನಲ್ಲಿ ಬಿಟ್ಟರೆ ಬಂಬುಚ್ಚಿ ಕಾಟ ನಿಯಂತ್ರಣ. ಜೂನ್ ತಿಂಗಳಿನಲ್ಲಿ ಕೆಸು, ತುಪ್ಪಗೆಣಸು, ಸಾಂಬ್ರಾಣಿ ಗಡ್ಡೆ ನಾಟಿ ಮಾಡಿದರೆ ದಶಂಬರಕ್ಕೆ ಅಗೆಯಬಹುದು. 
               ಮುಳ್ಳುಸೌತೆ ಬೀಜ ಹಾಕಲು ಜುಲೈ ತಿಂಗಳು ಪ್ರಶಸ್ತ. ಗೋಬರ್ ಗ್ಯಾಸ್ ಘಟಕದ ತ್ಯಾಜ್ಯದ ಹುಡಿಯನ್ನು ಸಾಲಿನಲ್ಲಿ ಉದ್ದಕ್ಕೆ ಸ್ವಲ್ಪ ದಪ್ಪಕ್ಕೆ ಹಾಕಿ. ಅದರ ಮೇಲೆ ಸುಡುಮಣ್ಣನ್ನು ಸೇರಿಸಿ ಬೀಜವನ್ನು ಊರಿ. ಚೆನ್ನಾಗಿ ಬೆಳೆಯುತ್ತದೆ. ಮುಳ್ಳುಸೌತೆಯ ಬಳ್ಳಿ ಹಬ್ಬಿಸಲು ಚಪ್ಪರ ಬೇಡ. ನೆಲದಲ್ಲಿ ಹಬ್ಬಲು ಬಿಡಿ. ನೆಲದಲ್ಲಾದರೆ ಫಸಲು ಜಾಸ್ತಿ ಎಂಬ ಅನುಭವ ರಾಯರದು.
                   ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿ ಯಥೇಷ್ಟ ಮುಳ್ಳುಸೌತೆ ಫಸಲು. ಎಳತರಲ್ಲಿ ತಿನ್ನಲು ರುಚಿ. ತಿಂದಷ್ಟೂ ಮತ್ತೂ ತಿನ್ನಿಸುವ ಸ್ವಾದ. ತಿಂದು ತಿಂದು ಸಾಕಾಗಿ ಹೋಯಿತು ಅನ್ನಿಸಿದಾಗ ಕಡುಬು, ದೋಸೆ, ಪಾಯಸ ಮಾಡಿ ಮೌಲ್ಯವರ್ಧನೆ ಮಾಡುತ್ತೇವೆ, ಎಂದು ಬಾಯ್ತುಂಬಾ ನಗುತ್ತಾರೆ. ನವಂಬರ ಮಧ್ಯ ಭಾಗದಲ್ಲಿ ಹಲಸಿನ ಎಳೆ ಗುಜ್ಜೆ ಲಭ್ಯ. ದಶಂಬರಕ್ಕೆ ಹೇಗೂ ಗೆಡ್ಡೆ ತರಕಾರಿಗಳು ಭೂಒಡಲಲ್ಲಿ ಕಾಯುತ್ತಿರುತ್ತವೆ.
                 ಇವರದು ಸೊಪ್ಪಿನ ಹಟ್ಟಿ. ಗೊಬ್ಬರದಿಂದ ಹೊರಬರುವ ದ್ರಾವಣವನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ.. ತರಕಾರಿಗಳು ಹೂ ಬಿಡುವ ಹೊತ್ತಿಗೆ ಈ ದ್ರಾವಣವನ್ನು 1:2 ಪ್ರಮಾಣದಲ್ಲಿ ನೀರಿನೊಂದಿಗೆ ಬೆರಕೆ ಮಾಡಿ ಎರೆಯುತ್ತಾರೆ.  ಗಿಡಗಳು ಸದೃಢವಾಗಿ ಬೆಳೆಯುತ್ತವೆ. ತರಕಾರಿ ಬೀಜಗಳು ಪ್ರತೀವರುಷವೂ ಮರುಬಳಕೆಯಾಗುತ್ತದೆ. ತರಕಾರಿ ಬೀಜಗಳ ಸಂಗ್ರಹವು ಕೃಷಿಕರಲ್ಲಿರಬೇಕು. ಬೀಜಕ್ಕಾಗಿ ಅಲೆಯಬಾರದು. ನಾವೇ ಬೆಳೆದದ್ದನ್ನು ತಿನ್ನುವುದು ಹೆಮ್ಮೆ ಅಲ್ವಾ - ದೇವರಾಯರ ಬದ್ಧತೆ.
               ಕಾಸರಗೋಡು ಜಿಲ್ಲೆಯ ಪೆರ್ಲ ಸನಿಹದ ವರ್ಮುುಡಿ ಶಿವಪ್ರಸಾದ್ ಅವರ ಅನುಭವ ನೋಡಿ - ಮನೆಗೆಂದು ಸೀಮಿತವಾಗಿ ತರಕಾರಿ ಬೆಳೆಸುವ ಬದಲು ಮಾರುಕಟ್ಟೆಯ ಲಕ್ಷ್ಯವೂ ಇದ್ದರೆ ನಿರ್ವಹಣೆ ಸುಲಭ. ತರಕಾರಿಯಲ್ಲಿ ಸ್ವಾವಲಂಬಿಯೂ ಆಗಬಹುದು ಎನ್ನುತ್ತಾರೆ. " ಮೂರು ದಶಕದ ಹಿಂದೆ ಇವರ ತೀರ್ಥರೂಪರಿಗೆ ಮಧುಮೇಹ ಬಾಧಿಸಿತು. ವೈದ್ಯರು 'ಹೆಚ್ಚು ತರಕಾರಿ ತಿನ್ನಿ' ಎಂದು ಸಲಹೆ ಮಾಡಿದ್ದರು. ಕೊಂಡು ತರುವುದಕ್ಕಿಂತ ತಾವೇ ಬೆಳೆಯುವ ಛಲ.. ಇವರಿಗೆ ವರುಷಪೂರ್ತಿ ತಾಜಾ, ನಿರ್ವಿಷ ಮನೆ ತರಕಾರಿ. ಮನೆ ತರಕಾರಿ ತಿಂದು ಒಗ್ಗಿಹೋಗಿದೆ. ಹಾಗಾಗಿ ರಾಸಾಯನಿಕ ತರಕಾರಿಯ ಒಂದು ಹೋಳು ಬಾಯಿಗಿಟ್ಟರೂ ಗೊತ್ತಾಗಿಬಿಡುತ್ತದೆ" ಎಂದು ನಗುತ್ತಾರೆ.
               ಮಂಗಳೂರಿನ ಹೆಸರಾಂತ ವೈದ್ಯರಾದ ಡಾ.ಕೆ.ಸುಂದರ ಭಟ್ ಕೆಲವು ವರುಷಗಳಿಂದ ಪ್ಲಾಸ್ಟಿಕ್ ಗ್ರೋಬ್ಯಾಗ್ ಮತ್ತಿತರ ಚೀಲಗಳಲ್ಲಿ ತಾರಸಿಯಲ್ಲಿ ತರಕಾರಿ ಕೃಷಿ ಮಾಡುತ್ತಿದ್ದಾರೆ. "ನಾನು ಕೃಷಿ ಕುಟುಂಬದಿಂದ ಬಂದವ. ಚಿಕ್ಕವನಾಗಿದ್ದಾಗಲಿಂದಲೂ ಕೃಷಿ ಚಟುವಟಿಕೆಗಳಲ್ಲಿ ತೊಡಗಿದ್ದೆ. ಹೀಗೆ ಹವ್ಯಾಸವಾಗಿ ಆರಂಭಿಸಿದ ತರಕಾರಿ ಕೃಷಿಯಲ್ಲಿ ಆಸಕ್ತಿ ಹೆಚ್ಚಾಗುತ್ತಾ ಬಂತು," ಎನ್ನುತ್ತಾರೆ. ಇನ್ನೋರ್ವ ಸಾಧಕ ಕಲ್ಲಡ್ಕ ಕರಿಂಗಾಣದ ಡಾ.ಕೆ.ಎಸ್.ಕಾಮತ್ ಅನುಭವ, ತರಕಾರಿ ಕೃಷಿಯು ಅವಲಂಬನಾ ಕೆಲಸವಲ್ಲ. ನಾವೇ ದುಡಿದರೆ ವರುಷಪೂರ್ತಿ ತಾಜಾ ತರಕಾರಿ ಪಡೆಯಬಹುದು.
                 ನಾವು ಬೆಳೆದ ತರಕಾರಿಯನ್ನು ನಾವೇ ತಿನ್ನಬೇಕು ಎನ್ನುವ ಮನಃಸ್ಥಿತಿಗೆ ಒಗ್ಗಿದ, ಅದರಲ್ಲೂ ಸಾವಯವದಲ್ಲೇ ಬೆಳೆದದ್ದಾಗಿರಬೇಕು ಎನ್ನುವ ಅಪ್ಪಟ ವಿಷರಹಿತ ಆಹಾರದ ಮೈಂಡ್ಸೆಟ್ ಹೊಂದಿದ ಮನಸ್ಸುಗಳು ಕನ್ನಾಡಿನಾದ್ಯಂತ ಹಬ್ಬುತ್ತಿದೆ. ಹಾಗಾಗಿ ನೋಡಿ, ತರಕಾರಿ ಅಂಗಡಿಯಲ್ಲಿ 'ಊರಿನ ತರಕಾರಿ ಇದೆಯಾ' ಎಂದು ವಿಚಾರಿಸುವ ಗ್ರಾಹಕರು ನಗರದಲ್ಲಿ ಮಾತಿಗೆ ಸಿಗುತ್ತಾರೆ. ಊರಿನ ತರಕಾರಿಯ ಹುಡುಕಾಟ ನಿತ್ಯ ನಡೆಯುತ್ತಿದೆ.

0 comments:

Post a Comment