

ಸಾರಿಗೆ ವ್ಯವಸ್ಥೆಯನ್ನು ಹಳ್ಳಿಹಳ್ಳಿಗಳಿಗೆ ವಿಸ್ತರಿಸುವ ಮೂಲಕ ಗ್ರಾಮೀಣರ ಮುಖದಲ್ಲಿ ನಗುವನ್ನು ಚೆಲ್ಲಿಸಿ, ಬದುಕನ್ನು ಕಟ್ಟಿಕೊಡುವಲ್ಲಿ ಸಫಲವಾಗಿದೆ ಕೊಪ್ಪದ 'ಸಹಕಾರಿ ಸಾರಿಗೆ'. ಹೃಸ್ವವಾಗಿ 'ಸಸಾ' ಅನ್ನೋಣ.
ಎಲ್ಲಿಯ ಟೋನಿ! ಎಲ್ಲಿಯ ಕೊಪ್ಪ! ಇಬ್ಬರದೂ 'ಬೆಸೆಯುವ' ಕೆಲಸ. ಸ್ವರೂಪ ಬೇರೆಬೇರೆ. ಟೋನಿಯ ಕೆಲಸ ದಡ-ದಡವನ್ನು ಬೆಸೆದರೆ; ಮನ-ಮನವನ್ನು, ಹಳ್ಳಿ-ಹಳ್ಳಿಗಳನ್ನು ಬೆಸೆದಿದೆ ಸಸಾ.
ದೇಶದುದ್ದದ ವಿದ್ಯಮಾನಗಳನ್ನು ಅವಲೋಕಿಸಿದಾಗ ಪ್ರತಿನಿತ್ಯ ಒಂದಲ್ಲ ಒಂದು ಮುಷ್ಕರ, ಧರಣಿ, ಗಲಾಟೆ, ದೊಂಬಿ....ಕಾಣುತ್ತೇವೆ. ಇದುವೇ 'ಸಮಸ್ಯೆಗೆ ಪರಿಹಾರ'ವೆಂದು ಸ್ವೀಕರಿಸುತ್ತಿದ್ದೇವೆ. ಕೊಪ್ಪದ ಸಹಕಾರ ಸಾರಿಗೆ ಉದಯದ ಹಿಂದಿದ್ದದ್ದು ಇಂತಹುದೇ ಸಮಸ್ಯೆ! ತಾವು ದುಡಿಯುತ್ತಿದ್ದ ಸಾರಿಗೆ ಸಂಸ್ಥೆ ಮುಚ್ಚಿದಾಗ, ಅತಂತ್ರಗೊಂಡ ಕಾರ್ಮಿಕ ವರ್ಗ, ಪರಿಸ್ಥಿತಿಯನ್ನು ಸವಾಲಾಗಿ ಸ್ವೀಕರಿಸಿದರು. 'ಹೋರಾಟದ ಬದಲು ದುಡಿಮೆ' ಎಂಬ ತತ್ವಕ್ಕೆ ಅಂಟಿಕೊಂಡಿತು. ತಾವೇ ಬಸ್ ಓಡಿಸುವ ನಿರ್ಧಾರ ಮಾಡಿ, ಹೊಸ ಸಂಸ್ಥೆ ಕಟ್ಟಿದರು. ಕೈಯಲ್ಲಿದ್ದ ಅಷ್ಟಿಷ್ಟು ಮೊತ್ತವನ್ನು ಸೇರಿಸಿ ಹಿಂದೆ ದುಡಿಯುತ್ತಿದ್ದ ಕಂಪೆನಿಯಿಂದಲೇ ಬಸ್ ಖರೀದಿಸಿದರು! ಆರು ಬಸ್ನೊಂದಿಗೆ ಶುರುವಾದ ಸಸಾದಲ್ಲೀಗ ಎಪ್ಪತ್ತೈದಕ್ಕೂ ಮಿಕ್ಕಿ ಬಸ್ಗಳಿವೆ.
ಸಾಗಿ ಬಂದ ದಾರಿಯುದ್ದಕ್ಕೂ ಕಲ್ಲುಮುಳ್ಳುಗಳು! ಕಷ್ಟವನ್ನು ಎದುರಿಸುವ ಛಲ ಎಲ್ಲರಲ್ಲಿದ್ದುದರಿಂದ ದಾರಿ ಸುಗಮವಾಗಿತ್ತು. ಪ್ರಕೃತ 300ಕ್ಕೂ ಅಧಿಕ ಸಿಬ್ಬಂದಿಯಿದ್ದು, ಅವರ ಸಾವಿರಕ್ಕೂ ಮಿಕ್ಕಿ ಸದಸ್ಯರಿರುವ ಕುಟುಂಬವನ್ನು ಆಧರಿಸಿದೆ. ಇಷ್ಟು ಮಾಹಿತಿ ಸಸಾದ ಚಿಕ್ಕ ಚಿತ್ರಣಕ್ಕೆ ಸಾಕು. ಇದು ಒಂದು ಮುಖ. ಆದರ ಮತ್ತೊಂದು ಮುಖ ನೋಡೋಣ.
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ ಬಹುತೇಕ ಹಳ್ಳಿಗಳಲ್ಲೀಗ ಮೌನವಿಲ್ಲ! ಸೈಕಲ್ ತುಳಿಯುವುದನ್ನು ಕಂಡರೂ ಸಾಕು, ವಿಸ್ಮಯದಿಂದ ಕಾಣುವ ಕಣ್ಣುಗಳಿಲ್ಲ! ವರ್ತಮಾನ ಪತ್ರಿಕೆಗಳು ಬಂದಿವೆ. ರೇಡಿಯೋ ಬಂದಿವೆ. ಎಲ್ಲಕ್ಕಿಂತ ಮುಖ್ಯವಾಗಿ ಹೊರಲೋಕದ ಎಲ್ಲಾ ವಿದ್ಯಾಮಾನಗಳು ಸೂರಿನಡಿ ಚರ್ಚಿತವಾಗುತ್ತಿವೆ. ಇದಕ್ಕೆ ಕಾರಣ ಸಸಾ.
ಹಳ್ಳಿಯ ಮಾರ್ಗವೆಂದರೆ ಗೊತ್ತಲ್ಲ! ಡಾಮರು ಬಿಡಿ, ಹೊಂಡಗುಂಡಿಗಳನ್ನು ಮುಚ್ಚಲೂ ವ್ಯವಸ್ಥೆಯಿಲ್ಲ! ಇದ್ದರೂ 'ತಮಗೇನು ಲಾಭ' ಎಂದು ಆಕಳಿಸುವ ಸರಕಾರಿ ಮಂದಿ!
ಫೋರ್ವೀಲ್ ಜೀಪುಗಳು ಕಷ್ಟಪಟ್ಟು ಓಡುತ್ತವೆ. ಎಸ್ಟೇಟ್ ಮಾಲಿಕರಲ್ಲಿ ಅವಿವೆ. ಅಲ್ಲಿ ದುಡಿಯುವ, ಮನೆಮಾಡಿಕೊಂಡಿರುವ ಮಂದಿಗೆ ಹತ್ತೋ, ಹದಿನೈದು ಕಿಲೋಮೀಟರ್ ದೂರದ ಪೇಟೆಗೆ ಸಾಗಲು ಕಾಲ್ನಡಿಗೆಯೇ ಗತಿ. ಆಗಲೋ ಈಗಲೋ ಅತ್ತಿತ್ತ ಸಾಗುವ ಎಸ್ಟೇಟ್ ಮಾಲಿಕರು ತಮ್ಮ ಜೀಪಿಗೆ ಹತ್ತಿಸಿಕೊಂಡರೆ ಅದೇ ಸ್ವರ್ಗ!
ಸಸಾದಲ್ಲಿರುವ ಎಲ್ಲರೂ ಹಳ್ಳಿಗಳಿಂದ ಬಂದವರಾಗಿದ್ದು, ಹಳ್ಳಿ ಜೀವನದ ಕಷ್ಟ-ಸುಖ ಗೊತ್ತು. 'ಹಳ್ಳಿಯ ಅಭಿವೃದ್ಧಿ ತಮ್ಮ ಸಂಸ್ಥೆಯ ಮುಖ್ಯ ಧ್ಯೇಯ. ಹಾಗಾಗಿ ನಮ್ಮ ಹೆಚ್ಚಿನ ಬಸ್ಗಳು ಓಡಾಡುವುದು ಹಳ್ಳಿಗಳಲ್ಲೇ. ಮೂವತ್ತೈದು ಹಳ್ಳಿಗಳಿಗೆ ಹೋಗಿ, ರಾತ್ರಿ ತಂಗಿ, ಮರುದಿನ ಬೆಳಗ್ಗೆ ಬರುತ್ತದೆ' ಸಸಾದ ಅಧ್ಯಕ್ಷ ಬಿ.ಎನ್.ಮಹೇಶ್ ಹೇಳುತ್ತಾರೆ.
'ಪೇಟೆ ನೋಡದ ನಮ್ಮ ಮಕ್ಕಳು ಈಗ ಪೇಟೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ' ಎನ್ನುತ್ತಾರೆ ಕಳಸಾಪುರದ ಕಾರ್ಮಿಕ ಸಿದ್ದಪ್ಪ. 'ಬೇರ್ಯಾವುದೇ ಬಸ್ ಬರಲು ಒಪ್ಪದ ಕೊಂಡದಕಾನ, ಮಕ್ಕಿಮನೆ, ಮೇಗೂರು, ಶಿರ್ವಾಸೆ ಹಳ್ಳಿಗಳಿಗೆ ನಮ್ಮ ಬಸ್ ಓಡುತ್ತಿದೆ' ಎನ್ನಲು ಖುಷಿ ಸಸಾದ ತಾಂತ್ರಿಕ ವ್ಯವಸ್ಥಾಪಕ್ಷ ಇ.ಎಸ್.ಧರ್ಮಪ್ಪರಿಗೆ.
ಶೇ.90 ವಿದ್ಯಾರ್ಥಿಗಳಿಗೆ ಸಹಕಾರ ಸಾರಿಗೆಯೊಂದು 'ಐರಾವತ!'. ಅದೇ ಬದುಕು. ಇವರಿಗೆ ಬಸ್ ಶುಲ್ಕದಲ್ಲಿ ವಿನಾಯಿತಿ. ಸುತ್ತುಮುತ್ತಲಿನ ಇಪ್ಪತ್ತೇಳು ಹಳ್ಳಿಗಳಿಂದ ವಿದ್ಯಾರ್ಥಿಗಳನ್ನು ಹೊತ್ತ ಬಸ್ ಕೊಪ್ಪಕ್ಕೆ ಬೆಳಿಗ್ಗೆ ಹತ್ತು ಗಂಟೆಗೆ ತಲಪುವಂತೆ ಸಮಯವನ್ನು ನಿಗದಿ ಮಾಡಿಕೊಂಡಿದೆ ಸಸಾ.
ಮೊದಲು ಹಳ್ಳಿಯ ಕೃಷಿ ಉತ್ಪನ್ನಗಳಿಗೆ ಮಧ್ಯವರ್ತಿಗಳೇ ದೊರೆಗಳು! ಕಡಿಮೆ ಕ್ರಯಕ್ಕೆ ಕೊಂಡು, ಹೆಚ್ಚು ದರಕ್ಕೆ ಮಾರಿ ಇವರ ಕಿಸೆ ದಪ್ಪವಾಗುತ್ತಿತ್ತು. ಹಳ್ಳಿಗರಿಗೂ ಅನಿವಾರ್ಯ. ತಲೆಹೊರೆಯಲ್ಲೇ ಸಾಗಬೇಕು. ಅದು ತ್ರಾಸ. ಹಾಗಾಗಿ 'ಸಿಕ್ಕಿದಷ್ಟು ಆಯಿತು. ಕೊಟ್ಟುಬಿಡೋಣ.' ಈಗಿನ ಬಸ್ ವ್ಯವಸ್ಥೆ ಎಷ್ಟೊಂದು ಅನುಕೂಲ ನೋಡಿ - ಹತ್ತು ಕಿಲೋ ಅಡಿಕೆಯೋ, ಶುಂಠಿಯೋ ಅಥವಾ ಬಾಳೆಗೊನೆಯನ್ನೋ ಪೇಟೆಯಲ್ಲಿ ಮಾರಿ ಅಷ್ಟಿಷ್ಟು ಜೀನಸಿಯನ್ನು ಮನೆಗೆ ಒಯ್ಯಬಹುದು.
ಕೊಪ್ಪದ ಕೃಷಿಕ ವಸಂತಕುಮಾರ್ ಹರ್ಡೀಕರ್ ಹೇಳುತ್ತಾರೆ -`ಸಾರಿಗೆ ಶುರುವಾದ ಮೇಲೆ ಹಳ್ಳಿಗಳು ಅಭಿವೃದ್ಧಿಯಾಗಿವೆ. ಮಾರುಕಟ್ಟೆಯಿಲ್ಲವಲ್ಲಾ, ಯಾಕೆ ಬೆಳೆಯಬೇಕು ಎಂದಿದ್ದ ಕೃಷಿಕರಲ್ಲಿ ಆತ್ಮವಿಶ್ವಾಸ ತುಂಬಿದೆ. ತರಕಾರಿ ಬೆಳೆಯುತ್ತಿದ್ದಾರೆ. ಹಳ್ಳಿಗಳಲ್ಲಿ ಬೆಳೆದ ತಾಜಾ ತರಕಾರಿ ಸೂರ್ಯೋದಯದ ಹೊತ್ತಿಗೆ ಕೊಪ್ಪದಲ್ಲಿ ಸಿಗುತ್ತಿದೆ.'
ಕೃಷ್ಯುತ್ಪನ್ನಗಳನ್ನು ಒಯ್ಯಲು ಸಸಾದ ತಕರಾರಿಲ್ಲ! ಅದಕ್ಕಾಗಿಯೇ ಹಳ್ಳಿಗಳಿಗೆ ಹೋಗುವ ಬಸ್ಸುಗಳಿಗೆ ಹಿಂದಿನ ಆಸನ ಅಳವಡಿಸಿಲ್ಲ! ಕಾರಣ-ಅದು ಅಡಿಕೆ, ಬಾಳೆಗೊನೆ..ಮೊದಲಾದ ಕೃಷ್ಯುತ್ಪನ್ನಗಳನ್ನಿಡಲು. 'ಯಾವುದೇ ಬಸ್ನಲ್ಲಿ ಗೊಬ್ಬರದ ಚೀಲವನ್ನು ಸಾಗಿಸಲು ಬಿಡುವುದಿಲ್ಲ. ನಾವು ಅದಕ್ಕೆ ಅನುವು ಮಾಡಿಕೊಟ್ಟಿದ್ದೇವೆ.' ಕನಿಷ್ಠ ದರ. ಸಾಮಗ್ರಿಗಳನ್ನು ಮೇಲೇರಿಸಲು, ಇಳಿಸಲು ಕಂಡಕ್ಟರ್ ಸಹಾಯ.
ಚಿಕ್ಕ ಕೃಷಿಕ ಮಾರಾಟಗಾರರು ಬೆಳೆದಿದ್ದಾರೆ. ತಮ್ಮ ಹರಿವೆ, ತರಕಾರಿಗಳನ್ನು ಅಂಗಡಿಗೆ ಮಾರದೆ, ತಾವೇ ಸ್ವತಃ ಸಂತೆಯಲ್ಲಿ ಖುದ್ದಾಗಿ ಮಾರುತ್ತಾರೆ. ಸಾರಿಗೆ ಸಂಪರ್ಕವಾದ ಮೇಲೆ ನಾಲ್ಕು ಕಾಸು ಓಡಾಡುತ್ತಿದೆ. ಈಗ ಜಯಪುರದ ಹುಸೇನ್ಸಾಬ್ ಅವರಿಗೆ 'ಮಳೆಗಾಲದಲ್ಲಿ ಹಲಸಿನ ಹಣ್ಣಿನ ವ್ಯವಹಾರ. ತುಂಬಾ ಬ್ಯುಸಿ.' ಅಂತೆಯೇ ಶೆಟ್ಟಿಕೊಪ್ಪದ ವರ್ಗೀಸ್ ಅವರ ಮರಗೆಣಸು, ಬಾಳೆಕಾಯಿ, ಶುಂಠಿ ಈಗ ನಗರಕ್ಕೆ ಬರುತ್ತಿದೆ.'
ಎಲ್ಲಾ ಹಳ್ಳಿಗಳಲ್ಲಿ ಚಿಕ್ಕಚಿಕ್ಕ ಅಂಗಡಿ, ಗೂಡಂಗಡಿಗಳು ತಲೆಎತ್ತಿವೆ. `ಹೇಗೂ ಬಸ್ ಇದೆ. ಐಟಂ ಮುಗಿದಾಗ ಬಸ್ನ ಚಾಲಕರಿಗೋ, ನಿರ್ವಾಹಕರಿಗೋ ಸಣ್ಣ ಶುಲ್ಕ ನೀಡಿದರಾಯಿತು. ಇನ್ನೊಂದು ಟ್ರಿಪ್ನಲ್ಲಿ ರೆಡಿ.' ದೂರವಾಣಿ ಜಾಲ ವಿಸ್ತೃತವಾಗಿರುವುದಿರಂದ ಒಂದು ದೂರವಾಣಿ ಕರೆಯಲ್ಲಿ ಸಾಮಗ್ರಿಗಳನ್ನು ತರಿಸಲು ಸಾಧ್ಯ. ಪೇಟೆ ದರದಲ್ಲೇ ಹಳ್ಳಿಯಲ್ಲೂ ಪೂರೈಕೆ.
ಸಹಕಾರಿ ಸಾರಿಗೆ ಬಸ್ ಮತ್ತು ಹಳ್ಳಿ ಬದುಕು - ಇವೆರಡು ಒಂದೇ ಗಾಡಿಯ ಜೋಡೆತ್ತುಗಳು! ಒಂದನ್ನು ಬಿಟ್ಟು ಒಂದಿಲ್ಲ. ಅಷ್ಟು ಅನ್ಯೋನ್ಯತೆ, ವಿಶ್ವಾಸ. 'ಇದು ನಮ್ಮ ಬಸ್ ಕಣ್ರೀ' 80ರ ಅಜ್ಜ ಮಹಾದೇವ ಬಾಯಿತುಂಬಾ ವೀಳ್ಯ ಜಗಿಯುತ್ತಾ ಅಂದಾಗ ಅವರ ಕಣ್ಣುಗಳಲ್ಲಿ ಹೊಳಪು! ಒಂದು ವೇಳೆ ಬಸ್ ಅರ್ಧ ದಾರಿಯಲ್ಲಿ ಹಾಳಾಗಿ ಕೈಕೊಟ್ಟಿತೆನ್ನಿ. 'ಆಗ ಸುತ್ತುಮುತ್ತಲಿನ ಜನರ ನೆರವು-ಸಹಕಾರ ಮರೆಯುವಂತಿಲ್ಲ. ಊಟ-ತಿಂಡಿ ಅಲ್ಲೇ. ನಮ್ಮನ್ನು ಅಷ್ಟು ಗೌರವದಿಂದ ನೋಡಿಕೊಳ್ಳುತ್ತಾರೆ' ಎಂದು ನೆನೆಯುತ್ತಾರೆ ಮಹೇಶ್.
ಹೊಸ ಊರಿಗೆ ಬಸ್ ಶುರು ಮಾಡುವಲ್ಲಿ ಸಸಾದ ಹಳ್ಳಿಕಾಳಜಿ ಗುರುತರ. ಜನಗಳಿಗೆ ಯಾವ ಸಮಯ ಪೇಟೆಗೆ ಬರಲು ಅನುಕೂಲ ಎಂಬ ಸರ್ವೆ. ಊರಿನ ಜನಸಂಖ್ಯೆ, ಜನರ ಆವಶ್ಯಕತೆಯ ದಾಖಲಾತಿ. ಸಂಬಂಧಿತ ಸರಕಾರಿ ವರಿಷ್ಠರಿದ್ದೇ ಕ್ಷೇತ್ರಭೇಟಿ. ನಂತರವಷ್ಟೇ ಬಸ್ ಓಡಾಟ. ಮಧ್ಯಮವರ್ಗದವರೇ ಹೆಚ್ಚು ಪ್ರಯಾಣಿಸುವ ಕಾರಣ ಕನಿಷ್ಠ ದರ. 'ಇತ್ತೀಚೆಗೆ ಎರಡು ಬಾರಿ ಡೀಸಿಲ್ ದರವನ್ನು ಸರಕಾರ ಹೆಚ್ಚಿಸಿದರೂ ನಾವು ಟಿಕೇಟ್ ದರವನ್ನು ಹೆಚ್ಚಿಸಿಲ್ಲ.' ಎನ್ನುತ್ತಾರೆ ಜಿ.ಆರ್.ವಿಶ್ವನಾಥ್.
'ಸರಕಾರ ಈಗಾಗಲೇ ನಮ್ಮ ಕೆಲಸಗಳನ್ನು ಮೆಚ್ಚಿ ಅನುದಾನಗಳನ್ನು ಕೊಟ್ಟಿದೆ. ಕೆಎಸ್ಆರ್ಟಿಸಿಗೆ ನೀಡುವ ಸಬ್ಸಿಡಿ ವ್ಯವಸ್ಥೆಯ ಶೇ.10ನ್ನು ನಮಗೂ ನೀಡಿದರೆ ಈಗಿನ ದರಕ್ಕಿಂತಲೂ ಕಡಿಮೆ ದರ ನಿಗದಿಪಡಿಸಬಹುದು' ಎಂಬ ಅಭಿಪ್ರಾಯ ಅಧ್ಯಕ್ಷರದು.
ಹಳ್ಳಿ ಅಭಿವೃದ್ಧಿಗೆ ಅಂಚೆಯೂ ಮುಖ್ಯ. ಬಸ್ ಓಡುವಲ್ಲೆಲ್ಲಾ ಅಂಚೆ ಚೀಲ ಹೊತ್ತೊಯ್ಯುತ್ತದೆ. ಅಷ್ಟೇ ಕಾಳಜಿಯಿಂದ ಅಂಚೆ ಕಚೇರಿಗೆ ನೀಡುತ್ತದೆ, ಪಡೆಯುತ್ತದೆ.
ಗ್ಯಾರೇಜ್ನಲ್ಲಿ ಕಬ್ಬಿಣ ತ್ಯಾಜ್ಯಗಳು ಧಾರಾಳ. ಇದನ್ನು ಉಪಯೋಗಿಸಿ ಕತ್ತಿ, ನೇಗಿಲು....ಗಳನ್ನು ತಯಾರಿಸುವುದು, ಹಳೆ ಟಯರ್ನಿಂದ ಬುಟ್ಟಿ ತಯಾರಿಕೆ - ನಿಕಟ ಯೋಜನೆಗಳು. ಅದಕ್ಕಾಗಿ ಪ್ರತ್ಯೇಕ ವ್ಯವಸ್ಥೆಗೆ ಸಜ್ಜು. ಈ ಸಂದರ್ಭದಲ್ಲಿ - ನಮ್ಮ ಹಳ್ಳಿಯಲ್ಲಿ ಓಡುವ ಸರಕಾರಿ ಬಸ್ಸನ್ನು ಒಮ್ಮೆ ಜ್ಞಾಪಿಸಿಕೊಳ್ಳಿ. 'ಬಂದರೆ ಬಂತು, ಇಲ್ಲದಿದ್ದರೆ ಇಲ್ಲ' ಎಂಬಂತಹ ಸ್ಥಿತಿ. ಅರ್ಧದಲ್ಲಿ ಕೈಕೊಟ್ಟರೆ ವಾರಗಟ್ಟಲೆ ಕೊಕ್! ಒಂದೆರಡು ವಾರ ಕಳೆದಾಗ ಜನ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ! ನಂತರ ಬಸ್ಸೇ ನಾಪತ್ತೆ!
ಗ್ರಾಮಾಭಿವೃದ್ಧಿ, ಹಳ್ಳಿಯ ಏಳಿಗೆ ಅಂದರೆ ಕೋಟಿಗಟ್ಟಲೆ ಸುರಿಯಬೇಕಾಗಿಲ್ಲ. ಕಟ್ಟಡಗಳನ್ನು ಕಟ್ಟಬೇಕಾಗಿಲ್ಲ. ಸಾಲ ಕೊಡಬೇಕಾಗಿಲ್ಲ. ಕನಿಷ್ಠ ಸೌಕರ್ಯಗಳನ್ನು ಜನರಿಗೆ ಕೊಡಿ. ಅವರ ಬದುಕನ್ನು ಅವರೇ ರೂಪಿಸಿಕೊಳ್ಳುತ್ತಾರೆ. ಸಸಾ ಮಾಡಿದ್ದು ಕೂಡಾ ಅದನ್ನೇ. 'ಕಾಳಜಿ, ವಿಶ್ವಾಸ' ಶಬ್ದಕ್ಕೆ ಸಸಾದ 'ಸೇವೆ'ಗಿಂತ ಹೆಚ್ಚಿನ ದೃಷ್ಟಾಂತ ಬೇಕಾ?
ಯೂನಿಯನ್-ಡಿಮ್ಯಾಂಡ್ ಇಲ್ಲಿಲ್ಲ.
ಸಸಾದಲ್ಲಿ ಕಾರ್ಮಿಕರೇ ಮಾಲಿಕರು. ಇವರ ಪರಿಶ್ರಮ-ನಿಷ್ಠೆಯೇ ಮೂಲ ಬಂಡವಾಳ. ಕಾರ್ಮಿಕ ನಾಯಕ ಕೆ.ಸುಂದರೇಶ್ (ದಿ.) ಮುಂದಾಳ್ತನದಲ್ಲಿ ಶುರುವಾದ ಸಂಸ್ಥೆಯ ಕಲ್ಪನೆ ಸಾಕಾರಗೊಂಡುದು 1991 ಮಾರ್ಚಿನಲ್ಲಿ. ಹನ್ನೊಂದು ಮಂದಿಯ ಆಡಳಿತ ಮಂಡಳಿ. ಯಾರು ನೌಕರರೋ ಅವರೆಲ್ಲಾ ಸದಸ್ಯರು. ಶಾಲೆಗೆ ಹೋಗುವ ವಿಕಲಚೇತನ ಮಕ್ಕಳಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಪ್ರಯಾಣ. ಚಿಕ್ಕಮಕ್ಕಳಿಗೆ ರಿಯಾಯಿತಿ. ತನ್ನ ನೌಕರರಿಗೆ, ನೌಕರ ಕುಟುಂಬದವರಿಗೆ ಉಚಿತ. ಕೊಪ್ಪ, ಶೃಂಗೇರಿ, ಎನ್.ಆರ್.ಪುರ ತಾಲೂಕುಗಳ 50 ಶಾಲೆಗಳಲ್ಲಿ ಎಸ್.ಎಸ್.ಎಲ್.ಸಿ.ಯಲ್ಲಿ ಪ್ರಥಮ ಬಂದ ವಿದಾರ್ಥಿಗಳಿಗೆ ಪುರಸ್ಕಾರ...ಹೀಗೆ ಹತ್ತು ಹಲವು ಕೊಡುಗೆಗಳು. ತನ್ನ ನೌಕರರಿಗೆ ಉತ್ತಮ ವೇತನ, ಶಾಸನಬದ್ಧ ಸೌಲಭ್ಯ, ಸಾಮೂಹಿಕ ವಿಮಾಯೋಜನೆ, ಪಿಂಚಣಿ ನೀಡಿದೆ. ಕವಚ ನಿರ್ಮಾಣ ಹೊರತುಪಡಿಸಿ ಮಿಕ್ಕಲ್ಲಾ ಸರ್ವಸೌಲಭ್ಯ ಹೊಂದಿದ ಸಸಾ ಸ್ವಂತ ಕಟ್ಟಡ ಹೊಂದಿದೆ. ಯೂನಿಯನ್-ಡಿಮ್ಯಾಂಡ್ ಇಲ್ಲದ ಸಂಸ್ಥೆ. ಶ್ರೀಗಳಾದ ಎ.ಎಸ್.ದಿವಾಕರ್, ಸಿ,ಎಚ್.ಕಮಲಾಕ್ಷ, ಬಿ.ಬಿ.ಬಳ್ಳೂರು, ಚಿಕ್ಕೇಗೌಡ, ಎಸ್.ಸಿ.ತಮ್ಮಪ್ಪ ಗೌಡ - ಸೇವೆಗೈದ ಹಿಂದಿನ ಅಧ್ಯಕ್ಷರುಗಳು. ಈಗಿನ ಅಧ್ಯಕ್ಷ ಬಿ.ಎನ್.ಮಹೇಶ್.
( ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ೨೦೦೮ರ ಪ್ರಶಸ್ತಿ ಪಡೆದ ಬರೆಹ-
೨೦೦೮ರಲ್ಲಿ ವಿಜಯಕರ್ನಾಟಕದ ಸಾಪ್ತಾಹಿಕದಲ್ಲಿ ಪ್ರಕಟವಾಗಿತ್ತು.)
0 comments:
Post a Comment