Saturday, July 24, 2010

ಕೃಷಿಕನು ಸಮಾಜದ ಜೀತದಾಳೇ!

'ರೈತ ಜೀತದಾಳು. ಬೆಳೆ ತೆಗೆದು ಸಮಾಜಕ್ಕೆ ನೀಡುವುದು ಆತನ ಕರ್ತವ್ಯ ಎಂಬಂತೆ ಸಮಾಜ ಅವನನ್ನು ನಡೆಸಿಕೊಳ್ಳುತ್ತಿದೆ' - ಹಾಸನದ ಜೈವಿಕ ಮೇಳದ ವೇದಿಕೆಯಿಂದ ಹಿರಿಯ ಕೃಷಿಕರೊಬ್ಬರ ಮನದಾಳದ ಮಾತು.

ದುಡಿಮೆ - ರೈತನ ಮಂತ್ರ. ದುಡಿಯುವುದು ಅವನ ಕರ್ಮ. ಭಗವದ್ಗೀತೆಯಲ್ಲಿ ಶ್ರೀಕೃಷ್ಣನೇ ಆದೇಶ ಕೊಡುತ್ತಾನೆ - ಕರ್ಮ ಮಾಡು, ಫಲಾಪೇಕ್ಷೆ ಬಯಸಬೇಡ'. ಪ್ರಸ್ತುತ ಕಾಲಘಟ್ಟದಲ್ಲಿ ರೈತನಿಗೆ ಹೆಚ್ಚು ಅನ್ವಯವಾಗುತ್ತದೆ! ರೈತ ಅನುಭವಿಸುತ್ತಿದ್ದಾನೆ ಕೂಡಾ! ಶೋಷಣೆ, ಅವಮಾನ, ಅನ್ಯಾಯಗಳನ್ನು 'ಮನಸಾ ಸ್ವೀಕರಿಸಿ' ದುಡಿಯುತ್ತಲೇ ಇದ್ದಾನೆ. ಬೆಳೆದ ಬೆಲೆಯನ್ನು ಸಿಕ್ಕ ಬೆಲೆಗೆ ಮಾರಿ 'ನನ್ನದು ಸಂತೃಪ್ತ' ಜೀವನದ ಬಲವಂತದ ನಗು ಚೆಲ್ಲಿದಲ್ಲಿಗೆ 'ಕೃಷಿ ಬದುಕಿನ ಅನಾವರಣ'!

ನಾಡಿನ ದೊರೆಗಳಿಗೂ ಇದೇ ಬೇಕಾಗಿರುವುದು. ಹೆಜ್ಜೆ ಹೆಜ್ಜೆಗೂ ರೈತನ ಜಪ ಮಾಡುತ್ತಾ, 'ನಾನೂ ನಿಮ್ಮೊಂದಿಗಿದ್ದೇನೆ' ಎಂಬ ತೋರಿಕೆಯ ಮುಖವನ್ನು ಪ್ರದರ್ಶಿಸುತ್ತಿರುವುದು ರಾಜಕಾರಣ. ರೈತನೆಂಬುದು ಚಲಾವಣೆಯ ನಾಣ್ಯ. ಅಸ್ತಿತ್ವ ಉಳಿಸಿಕೊಳ್ಳುವ ಜಾಣ್ಮೆ.

ದ್ರಾಕ್ಷಿ, ಟೊಮೆಟೋ, ಆಲೂಗೆಡ್ಡೆಗಳ ದರಗಳು ಅಲುಗಾಡಿದಾಗ ಮಾರ್ಗಕ್ಕೆ ಚೆಲ್ಲಿ ತಲೆಮೇಲೆ ಕೈಹೊತ್ತು ಕುಳಿತಾಗ ಯಾರೂ ರೈತನಾಸರೆಗೆ ಬರುವುದಿಲ್ಲ ಬಿಡಿ. ಅನುಕಂಪದ ಬಿನ್ನಾಣದ ನುಡಿಗಳಲ್ಲಿ ಆತನನ್ನು ಕಟ್ಟಿ, ಕಣ್ಣೀರೊರೆಸುವ ಪ್ರಹಸನ. ಹುನ್ನಾರಗಳ ಜಾಡಿನಲ್ಲಿ ಸಾಗುವ ಆಡಳಿತ ಯಂತ್ರಕ್ಕೆ ರೈತನ ಜೀವವೆಂಬುದು ದಾಳ.

ಮಾತೆತ್ತಿದರೆ ಕೋಟಿಗಟ್ಟಲೆ ಅಂಕಿಅಂಶಗಳನ್ನು ತೋರಿಸುವ ತಃಖ್ತೆಗಳು ಇಲಾಖೆಗಳ ಕಡತದಲ್ಲಿರುತ್ತದೆ. ಇದರೊಳಗೆ ಇಣುಕಿದರೆ 'ರೈತನ ಬದುಕು' ಸಮೃದ್ಧವಾಗಿದೆ! ಕೋಟಿ ಕೋಟಿಗಳ ಬ್ಯಾಲೆನ್ಸ್ಶೀಟ್ 'ಟ್ಯಾಲಿ'ಯಾಗಿರುತ್ತವೆ!

ಕಚೇರಿಗಳಿಗೆ ರೈತ ಪ್ರವೇಶಿಸಿದರೆ ಸಾಕು, - 'ನಾಳೆ ಬಾ' ಸಂಸ್ಕೃತಿ ಎದುರಾಗುತ್ತದೆ. ದುಡಿದ ಹಣವೆಲ್ಲಾ ಬಸ್ಸಿಗೋ, ಕಾಣದ ಕೈಗೊ? ತಿಂಗಳುಗಟ್ಟಲೆ ಕಾದರೂ, ಕೆಲಸವನ್ನು ಪೂರೈಸಲಾಗದ ಅಸಹಾಯಕತೆ. ಹಾಗೆಂತ ಕೃಷಿಕನ ನಾಡೀಮಿಡಿತವನ್ನು ಅರಿತು, ರೈತರೊಂದಿಗೆ ವ್ಯವಹರಿಸುವ ಅಧಿಕಾರಿಗಳೂ ಇದ್ದಾರೆನ್ನಿ. ಇಂತವರ ಸೇವೆ ಎಲ್ಲೂ ದಾಖಲಾಗುವುದಿಲ್ಲ, ಪ್ರಕಟವಾಗುವುದೂ ಇಲ್ಲ.

ಒಂದು ದಿವಸ ಹಳ್ಳಿಯಿಂದ ಕೊತ್ತಂಬರಿ ಸೊಪ್ಪಾಗಲೀ, ಟೊಮೆಟೋ, ಆಲೂಗೆಡ್ಡೆ ಬಾರದಿದ್ದರೆ ನಗರದ ಹೋಟೇಲುಗಳು, ಅಡುಗೆ ಮನೆಗಳ ಒಲೆ ಉರಿಯುವುದಿಲ್ಲ. ಭತ್ತ, ರಾಗಿಗಳು ನಗರ ಪ್ರವೇಶಿಸದಿದ್ದರೆ ಹಸಿದ ಹೊಟ್ಟೆಗೆ ತಂಪು ಬಟ್ಟೆಯೇ ಗತಿ.

ಕೃಷಿಕರ ಮನೆಯನ್ನು, ಬದುಕನ್ನು ಜೆಸಿಬಿ ತಂದು ನೆಲಸಮ ಮಾಡಿದಾಗಲೂ ಆತ ಮಾತನಾಡಬಾರದು, ಪ್ರತಿಭಟಿಸಬಾರದು? ಅಭಿವೃದ್ಧಿಯ ಹೆಸರಿನಲ್ಲಿ ಕನ್ನಾಡಿಗೆ ಕೋಟಿಗಟ್ಟಲೆ ಹರಿದುಬರುತ್ತಿರುವಾಗ, ಅದರಲ್ಲಿ ರೈತನ ಉದ್ದಾರದ ಪಾಲೆಷ್ಟು? ಹೊಸ ಹೊಸ ಯೋಜನೆಗಳಿಗೆ ಅಂಕಿತ ಬೀಳುತ್ತಿರುವ ಹೊತ್ತಿಗೆ; ಇತ್ತ ರೈತ ತನ್ನ ಅಸ್ತಿತ್ವದ ಉಳಿವಿಗಾಗಿ, ಮನೆಮಂದಿಯ ರಕ್ಷಣೆಗಾಗಿ ಸಿದ್ಧತೆ ಮಾಡಬೇಕಾಗುತ್ತದೆ. ಯಾಕೆಂದರೆ ಬೆಳಗಾಗುವುದರೊಳಗೆ ದೈತ್ಯ ಯಂತ್ರ ಅಂಗಳದಲ್ಲಿ ಪ್ರತ್ಯಕ್ಷವಾದೀತು ಎಂಬ ಭಯ!

ಇದನ್ನೆಲ್ಲಾ ಚಿಂತಿಸಿದರೆ ನನಗನ್ನಿಸುತ್ತದೆ, ಕೃಷಿಕನು ಸಮಾಜದ ಜೀತದಾಳೇ? ಅವನು ಕೃಷಿ ಉತ್ಪನ್ನಗಳನ್ನು ಬೆಳೆಯುತ್ತಿರಲೇ ಬೇಕು, ಸಮಾಜಕ್ಕೆ ಅದನ್ನು ಪೂರೈಸುತ್ತಿರಲೇ ಬೇಕು. ಬೆಲೆ ಮಾತ್ರ ಹೆಚ್ಚು ಕೊಡಿ ಅಂತ ಕೇಳಬಾರದು. ಹಾಗಿದ್ದಾಗ ಮಾತ್ರ ಆತ ದೇಶದ ಬೆನ್ನೆಲುಬು!

ಅಡಿಕೆ, ತೆಂಗು, ಕಬ್ಬು.. ರೈತನನ್ನು ಸಾಕುವ ಬೆಳೆಗಳಿಗೆ ಉತ್ತಮ ಬೆಲೆ ಕೊಡಿ - ಇದು ರೈತನ ಬೇಡಿಕೆ. ಆದರೆ ದುರಂತ ನೋಡಿ, ಕೇಳಿದ್ದನ್ನು ನಮ್ಮ ದೊರೆಗಳು ಕೊಡರು, ಕೇಳದೇ ಇದ್ದಂತಹ 'ಬಿಟಿ ಬದನೆ'ಯನ್ನು ಬಲವಂತದಿಂದ ಕಿಟಕಿಯೊಳಗೆ ಹಾಕಿಯಾರು!
ವಿಜ್ಞಾನಿಗಳು ಸಂಶೋಧನೆ ಮಾಡಿದ್ದಾರಲ್ಲಾ. ಮತ್ಯಾಕೆ ವಿರೋಧ - ಫಕ್ಕನೆ ಮೂಡುವ ಪ್ರಶ್ನೆ. ನಮ್ಮ ಸಂಶೋಧನೆಗಳೆಲ್ಲಾ ಹೀಗೇನೆ. ಲ್ಯಾಬ್ ಟು ಲ್ಯಾಂಡ್ ಆಗುವುದೇ ಇಲ್ಲ. ರೈತರ ಹೊಲದಲ್ಲೇ ಪ್ರಾತ್ಯಕ್ಷಿಕೆ ನಡೆಯಲಿ. ವ್ಯವಹಾರಗಳೆಲ್ಲವೂ ಪಾರದರ್ಶಕವಾಗಿರಲಿ. ಆಗ ರೈತರಿಗೂ ನಂಬುಗೆ ಬರುತ್ತದೆ.


ಕೃಷಿಕರ ಕುರಿತು ಮಾತನಾಡುವುದು ಈಗೊಂದು 'ಫ್ಯಾಶನ್' ಆಗಿಬಿಟ್ಟಿದೆ. ಮಳೆ ಹೆಚ್ಚು ಬಂತೆನ್ನಿ, 'ರೈತರೀಗ ಖುಷ್' ಅಂತ ಹೇಳಿಕೆ, ಉತ್ಪನ್ನವೊಂದಕ್ಕೆ ಎರಡ್ಮೂರು ರೂಪಾಯಿ ಏರಿಕೆಯಾಯಿತೆನ್ನಿ, 'ರೈತರ ಮುಖದಲ್ಲಿ ಮಂದಹಾಸ' ಎಂಬ ಶೀರ್ಷಿಕೆಯ ಹೇಳಿಕೆ. ಮಾತೆತ್ತಿದರೆ 'ನಾವೂ ರೈತ ಪರ' ಎಂಬ ಫೋಸ್!

ರೈತ ಕೇಳುವುದಿಷ್ಟೇ - ನಮ್ಮ ಮಟ್ಟಿಗೆ ನಾವು ನೆಮ್ಮದಿಯಾಗಿದ್ದೇವೆ. ಭಯ ಹುಟ್ಟಿಸುವ ಯಾವುದೇ 'ಗುಮ್ಮ'ಗಳು ನಮ್ಮ ಅಂಗಳ ಪ್ರವೇಶಿಸದಂತೆ ನೋಡಿಕೊಂಡರೆ ಸಾಕು. ಇದು ನಾವು ಕೇಳುವ ಏಕೈಕ ಬೇಡಿಕೆ! ಹಾಗೆಂತ ನಾವೇನೂ ಅಭಿವೃದ್ಧಿಯ ವಿರೋಧಿಗಳಲ್ಲ.

2 comments:

ವೆಂಕಟಕೃಷ್ಣ ಕೆ ಕೆ ಪುತ್ತೂರು said...

ಕಾರಂತರೇ...
ನೂರಕ್ಕೆ ನೂರು ನಿಮ್ಮ ಮಾತು ನಿಜ.
ಆದರೆ ಕೇಳಬೇಕಾದವರು ಕೇಳಬೇಕಲ್ಲ!
ಓದಬೇಕಾದವರು ಓದುವಂತೆ,
ಕೇಳಬೇಕಾದವರು ಕೇಳುವಂತೆ..
ಮಾಡುವಲ್ಲಿ ನಾವು ಸೋತಿದ್ದೇವೆ,
ಸೊರಗಿ ಜೀತದಾಳಾಗಿದ್ದೇವೆ.
ಜಗತ್ತು ಮತ್ತು ಮನುಷ್ಯನ ಸ್ವಭಾವ ಇದು.
ಲಾಗಾಯ್ತಿಂದ ಹೀಗೇ ನಡೆದಿದೆ.

ವಿಜಯ್ ಜೋಶಿ said...

ನೂರಕ್ಕೆ ನೂರು ಸತ್ಯವಾದ ಮಾತು ಕಾರಂತರೆ.

Post a Comment