ಜೂನ್ 19-20. ಕೇರಳದ ವಯನಾಡಿನ ಕಲ್ಪೆಟ್ಟಾದ ಜೈನ್ ಸ್ಕೂಲ್ ಪೂರ್ತಿ ಹಲಸಿನ ಪರಿಮಳ. ನಿರ್ಲಕ್ಷಿತ ಹಣ್ಣಿಗೆ ಉತ್ಸವದ ಥಳಕು. ಇದು ಕಳೆದೆರಡು ವರ್ಷಗಳ 22ನೇ ಹಲಸು ಮೇಳದ ಸಂಪನ್ನತೆ. 'ಉರವು' ಸಂಸ್ಥೆಯ ಸಾರಥ್ಯ.
ಹಲಸಿನ ಎಲೆಯಿಂದ ತಯಾರಿಸಿದ 'ಕಿರೀಟ'ಗಳನ್ನು ಧರಿಸಿದ ಮಕ್ಕಳ ಸಂಭ್ರಮ. ಹಲಸಿನ ಹಣ್ಣಿಗೆ ಅರಶಿನದ, ಹಿಂಗಾರ-ಹೂವಿನ ಅಲಂಕಾರ. ಉದ್ಘಾಟನೆ ಮಾಡುವ ಕೇರಳದ ಸಚಿವರು ಆಗಮಿಸುತ್ತಿದ್ದಂತೆ ಅವರಿಗೂ 'ಕಿರೀಟ'ದ ತೊಡಿಕೆ. ಹಲಸಿನ ಮೆರವಣಿಗೆ. ಸಾಂಕೇತಿಕ ಉದ್ಘಾಟನೆ. ಅಲ್ಲೇ ಹಿತನುಡಿ-ಆಶ್ವಾಸನೆ. ಢಾಂ-ಢೂಂ ಇಲ್ಲದ ಕಾರ್ಯಕ್ರಮ.
ಎರಡೂ ದಿವಸಗಳಲ್ಲಿ ಕೇವಲ ಒಂದು 'ಸಂವಾದ'. ಸಭಾಕಾರ್ಯಕ್ರಮಗಳಿಲ್ಲ. ಕರ್ಣಕೊರೆತವಿರಲಿಲ್ಲ. ಹಿರಿಯ ಪತ್ರಕರ್ತ 'ಶ್ರೀ' ಪಡ್ರೆಯವರ ಸಾರಥ್ಯದಲ್ಲಿ ಹಲಸಿನ ಮೌಲ್ಯವರ್ಧಿತ ಉತ್ಪನ್ನ ಮತ್ತು ಭವಿಷ್ಯದ ಸಾಧ್ಯತೆ ಕುರಿತಾದ ತಾಜಾ ಮಾಹಿತಿ ಮತ್ತು ಮಾತುಕತೆ. ಆಗಾಗ್ಗೆ ಸೂಚನೆಗಳನ್ನು ನೀಡುವ ನಿರ್ವಾಹಕ ಎಲ್ಲೋ ಅಜ್ಞಾತವಾಗಿದ್ದುಕೊಂಡು ಧ್ವನಿವರ್ಧಕದ ಮೂಲಕ ಕಾರ್ಯಕ್ರಮವನ್ನು ನಿಯಂತ್ರಿಸುತ್ತಿದ್ದ! ಎರಡೂ ದಿವಸಗಳಲ್ಲಿ ಕಲ್ಪೆಟ್ಟ ನಗರಾದ್ಯಂತ ಹಲಸು ಮೇಳದ ಉದ್ಘೋಷಣೆಯ ವ್ಯವಸ್ಥೆ ಮಾಡಿದ್ದರು.
ಉರವು ಸಂಸ್ಥೆಯು ನಾಲ್ಕು ವರುಷದ ಹಿಂದೆ ಹಲಸಿನ ಮೇಳವನ್ನು ಪ್ರಪ್ರಥಮವಾಗಿ ನಡೆಸಿತ್ತು. ನಂತರ ಕನ್ನಾಡಿನಾದ್ಯಂತ ವಿವಿಧ-ವೈವಿಧ್ಯ ಮೇಳಗಳನ್ನು ಕಂಡಿತ್ತು. ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯದ ಕದವನ್ನು ತಟ್ಟುವಷ್ಟು ಮೇಳಗಳು ಪರಿಣಾಮ ಬೀರಿದುವು.
ಮೇಳವೆಂದಾಗ ಒಂದಷ್ಟು ಫ್ಲೆಕ್ಸಿಗಳು, ಮೇಜಿನ ಮೇಲೆ ಮಗುಮ್ಮಾಗಿ ಕುಳಿತ ಹಲಸಿನ ಹಣ್ಣುಗಳು, ಗಿಡಗಳು. ಹೋಂಮೇಡ್ ಹಪ್ಪಳ-ಸೆಂಡಿಗೆಗಳು. ಕಲ್ಪೆಟ್ಟಾದ ಮೇಳ ಭಿನ್ನ. ಹಲಸಿಗೆ ಸಂಬಂಧಪಟ್ಟಂತೆ ಐವತ್ತರಷ್ಟು ಮಳಿಗೆಗಳು. ಎಲ್ಲವೂ 'ಲೈವ್'!
ಮಳಿಗೆಗಳ ಒಂದು ಪಾಶ್ರ್ವ ತಾಜಾ ಬಿಸಿಬಿಸಿ ತಿಂಡಿಗಳ ತಯಾರಿ ಮತ್ತು ಮಾರಾಟ. ನೈಯಪ್ಪಮ್, ಪಕ್ಕವಡ, ದೋಸೆ, ಪಪ್ಸ್.. ಗಳು ತಯಾರಾಗಿ ನೇರ ಪ್ಲೇಟಿಗೆ ಬೀಳುತ್ತಿದ್ದುವು. ಮಿತ ಬೆಲೆ. ಹೊಟ್ಟೆಗೂ ಇಳಿಸಿಕೊಂಡು, ಮನೆಗೂ ಕಟ್ಟಿಸಿಕೊಂಡು, ಮಳಿಗೆಯೆಲ್ಲಾ ಸುತ್ತಿ, ಬಸ್ಸನ್ನೇರುವ ನಗರದ ಅಪ್ಪಟ ಹಲಸು ಪ್ರಿಯರು ಮೇಳವನ್ನು ಮಿಸ್ ಮಾಡಿಕೊಂಡಿಲ್ಲ.
'ಫುಟ್ಬಾಲ್ ಸೀಸನ್ ಅಲ್ವಾ ಸಾರ್. ಹಾಗಾಗಿ ಅರ್ಧಕ್ಕರ್ಧ ಜನ ಟಿವಿ ಮುಂದೆಯೇ ಠಿಕಾಣಿ ಹೂಡಿದ್ದಾರೆ. ಬಹುಶಃ ನಾವೇ ಇಲ್ಲಿ ಟಿವಿ ಇಡುತ್ತಿದ್ದರೆ ಇನ್ನಷ್ಟು ಜನ ಬರುತ್ತಿದ್ದರೇನೋ' ಎಂದು ನಗೆಯಾಡುತ್ತಾರೆ ಸಂಘಟಕರಲ್ಲೊಬ್ಬರಾದ ಹರಿಹರನ್.
ಹಲಸಿನ ಬೇಳೆಯ, ಸೊಳೆಯ ವಿವಿಧ ಖಾದ್ಯಗಳು, ಉಪ್ಪಿನಕಾಯಿ, ವರಟ್ಟಿ, ಮಿಠಾಯಿ, ಜೆಲ್ಲಿ, ಜ್ಯಾಂ, ಸಿಪ್ಅಪ್, ಜ್ಯೂಸ್, ಕಟ್ಲೆಟ್, ಹಪ್ಪಳ, ಕ್ಯಾಂಡಿ.. ಎಲ್ಲವೂ ಹಲಸೇ. ಉರವು ಸಂಸ್ಥೆ ತರಬೇತಿ ನೀಡಿದ ಹೆಣ್ಮಕ್ಕಳದೇ ಕಾರುಬಾರು. ಪಾಳಿಯಂತೆ ಗೊಣಗಾಟವಿಲ್ಲದ ಮಳಿಗೆ ನಿರ್ವಹಣೆ. ಜಾಣ್ಮೆಯ ವ್ಯವಹಾರ. ಮೊದಲ ದಿನವೇ ಶೇ.50 ಉತ್ಪನ್ನಗಳ ಬಿಕರಿ.
ವಯನಾಡು ಜಿಲ್ಲೆಯಲ್ಲಿ ಶೇ.90ರಷ್ಟು ಹಲಸು ನಿರ್ಲಕ್ಷಿತ. ಬಹುತೇಕ ಅಂಬಲಿ (ತುಳುವ) ಹಲಸು. ಬಕ್ಕೆ ಹಲಸಿನ ಸೊಳೆ ತೆಗೆದು, ಪ್ಲಾಸ್ಟಿಕ್ನೊಳಗಿಟ್ಟು ಮಾರಾಟಕ್ಕಿಟ್ಟರೆ ಹತ್ತೋ ಹದಿನೈದೋ ರೂಪಾಯಿ ತೆತ್ತು ಕೊಳ್ಳುವವರಿದ್ದಾರೆ. ಪ್ಯಾಕ್ ಮಾಡಿದ ಒಂದೆರಡು ಗಂಟೆಯಲ್ಲೇ ಎಲ್ಲವೂ ಮಾರಾಟ! 'ಇಲ್ಲಿ ಹಲಸು ತಿನ್ನುವುದು ನಾಚಿಕೆ. ಪ್ರತಿಷ್ಠೆಯ ವಿಚಾರ. ಅದರ ಸಿಹಿ-ಖಾರ ತಿಂಡಿ ಮಾಡಿ ಕೈಗಿಡಿ. ಜನ ತಿನ್ನುತ್ತಾರೆ. ಮನೆಗೂ ಒಯ್ಯುತ್ತಾರೆ' - ವಾಸ್ತವದತ್ತ ಬೆರಳು ತೋರುತ್ತಾರೆ ಕೃಷಿಕ ಪ್ರಕಾಶ್.
ಐದು ರೂಪಾಯಿ ತೆತ್ತು ಒಂದು ಹಲಸಿನ ಹಣ್ಣನ್ನು ಕೊಳ್ಳಲು ಆಚೀಚೆ ನೋಡುವ ಮಂದಿ, ಮೇಳದಲ್ಲಿ ಐವತ್ತು ತೆತ್ತು ಹೊತ್ತೊಯ್ಯುವ ದೃಶ್ಯ ಮೇಳದ ಇಂಪ್ಯಾಕ್ಟ್. ಮಳಿಗೆಯೊಳಗೆ ಬಾಯಿ ಸ್ವಾದ ಮಾಡಿ ಹೊರಬಂದಾಗ ಹಣ್ಣು ಒಯ್ಯುವ ಹಂಬಲ.
'ಇವೆಲ್ಲಾ ಬಕ್ಕೆ ಜಾತಿಯವು. ಹುಡುಕಿ ತರಲು ತ್ರಾಸ ಬೇಕು. ಮೇಳಕ್ಕಾಗಿಯೇ ಬಕ್ಕೆ ಯನ್ನು ಆಯ್ದು ತಂದಿದ್ದೇವೆ' ಎನ್ನುತ್ತಾರೆ ಹಲವು ವ್ಯಾಪಾರಿಗಳಾದ ಸತೀಶ್ ಮತ್ತು ಪ್ರದೀಪ್.
ಕಲ್ಲಿಕೋಟೆ ಸನಿಹದ ತಾಮರಶ್ಶೇರಿಯ ಜೋಸ್ ಸೆಬಾಸ್ಟಿಯನ್ ಅವರ ಹಲಸಿನ ಹಣ್ಣಿನ ವೈನ್ ಮೇಳದ ಹೈಲೈಟ್! ವರುಷಕ್ಕೆ ಸಾವಿರ ಲೀಟರಿನಷ್ಟು ವೈನ್ ತಯಾರಿಸುತ್ತಾರೆ.
ಉರವು ನಾಲ್ಕು ವರುಷದ ಹಿಂದೆ ಹಲಸಿನ ಮೇಳ ಮಾಡಿದಾಗ ಹೇಳುವಂತಹ ಪ್ರತಿಕ್ರಿಯೆ ಇದ್ದಿರಲಿಲ್ಲ. ಹಲಸಿಗೂ ಮೇಳ ಯಾಕಪ್ಪಾ ಅಂತ ಗೇಲಿ ಮಾಡಿದವರೇ ಹೆಚ್ಚು. ಆದರೆ ಹಲಸಿನ ಮೌಲ್ಯವರ್ಧಿತ ಉತ್ಪನ್ನಗಳು ಜನರನ್ನು ಆಕರ್ಶಿಸಿತು. ಉರವು ಸಂಸ್ಥೆಯ ಹೆಣ್ಮಕ್ಕಳಿಗೆ ತರಬೇತಿ ನೀಡಿ ಇನ್ನಷ್ಟು ಉತ್ಪನ್ನಗಳನ್ನು ತಯಾರಿಸಿತು.
'ಇದರಿಂದಾಗಿ ಹೆಣ್ಮಕ್ಕಳೊಳಗೆ ತಾವೂ ಮನೆಯಲ್ಲಿ ಉತ್ಪನ್ನಗಳನ್ನು ತಯಾರಿಸಬೇಕು ಎಂಬ ಭಾವನೆ ಬಂದುಬಿಟ್ಟಿದೆ. ಅವರೊಳಗೆ ಪರಸ್ಪರ ಸಂಪರ್ಕ ಕೊಂಡಿ ಏರ್ಪಟ್ಟಿದೆ' ಎನ್ನುತ್ತಾರೆ ಉರವಿನ ಶಿವರಾಜ್. ಆರಂಭದ ಮೇಳಗಳಲ್ಲಿ ಉತ್ಪನ್ನಗಳಿಗೆ ಪ್ಯಾಕಿಂಗ್ ಇರಲಿಲ್ಲ. ಈ ವರುಷ ಆಕರ್ಷಕವಾದ ಪ್ಯಾಕಿಂಗ್. ಅದಕ್ಕೆ ವೃತ್ತಿಪರ ಟಚ್. ಇದು ಗಿರಾಕಿಗಳನ್ನು ಹೆಚ್ಚು ಆಕರ್ಷಿಸುತ್ತಿತ್ತು.
'ವಯನಾಡ್ ಟೂರಿಸಂ ಜಿಲ್ಲೆಯಾದರೆ ಹಲಸಿಗೆ ಮತ್ತು ಅದರ ಉತ್ಪನ್ನಗಳಿಗೆ ಚೆನ್ನಾದ ಅವಕಾಶವಿದೆ. ಕೊನೆ ಪಕ್ಷ ಪೇಟೆಯ ಜನ ಬಳಕೆದಾರರಾದರೆ ಸಾಕು' ಎಂಬ ಆಶಯ ವ್ಯಕ್ತಪಡಿಸುತ್ತಾರೆ ಬಾಬುರಾಜ್.
ಬರೋಬ್ಬರಿ ನಲವತ್ತೆರಡು ಕಿಲೋದ ಹಲಸಿನ ಹಣ್ಣು ಮೇಳದ ಕಿಂಗ್! ಕಲ್ಪೆಟ್ಟಾದ ಫೈಜಲ್ ಅವರ ತೋಟದ್ದು. ಕಳೆದ ಮೇಳದಲ್ಲಿ ಕಿಂಗ್ ಪಟ್ಟ ಲಭಿಸಿದ ಹಣ್ಣಿನ ತೂಕ 47.5 ಕಿಲೋ. ಈ ವರೆಗೆ ಗಿನ್ನಿಸ್ ದಾಖಲೆಗೆ ಸೇರಿದ ಜಗತ್ತಿನ ಗರಿಷ್ಠ ತೂಕದ ಹಲಸು 34.6ಕಿಲೋ. ಹವಾಯಿಯ ಕೆನ್ ಲವ್ ಅವರ ಪ್ರಯತ್ನ. ಒಂದಷ್ಟು ಪ್ರಯತ್ನಪಟ್ಟರೆ ವಯನಾಡಿನ ಹಣ್ಣೇಕೆ, ನಮ್ಮೂರಿನದ್ದೂ ಸೇರಬಹುದು. 'ನಮ್ಮೂರಿನ ದಾಖಲೆಯ ಹಿಂದಿಕ್ಕಿ' - ಕೆನ್ ಅವರ ಆಶಯ.
'ಹಲಸಿನ ಬಗ್ಗೆ ಜನರಲ್ಲಿ ಮಾನಸಿಕ ತಡೆ ಇದೆ. ಹಿರಿಯರಲ್ಲಿ ಈ ಕುರಿತು ಒಲವು ಇದ್ದರೂ, ಮಕ್ಕಳಲ್ಲಿ ಫಾಸ್ಟ್ಫುಡ್ ಮೋಹ ಹೆಚ್ಚಾಗಿ ಹಲಸಿನ ಸೊಳೆಗಳು ಮೇಜು ಸೇರುವುದೇ ಇಲ್ಲ' ಎನ್ನುತ್ತಾರೆ ಕೃಷಿಕ ರತ್ನಾಕರನ್.
ತಂತಮ್ಮಲ್ಲಿದ್ದ ಯಾವುದೇ ಹಣ್ಣುಗಳನ್ನು ತರುವಂತೆ ಜೈನ್ ಶಾಲೆಯ ವಿದ್ಯಾರ್ಥಿಗಳಿಗೆ ಸಂಘಟಕರು ಮನವಿ ಮಾಡಿದ್ದರು. ಸುಮಾರು ಅರುವತ್ತು ವಿಧಧ ಹಣ್ಣುಗಳ ಸಂಗ್ರಹವಾಗಿತ್ತು. ಅದರಲ್ಲಿ ಪ್ಯಾಶನ್ಫ್ರುಟ್ನದೇ ಸಿಂಹಪಾಲು. 'ವಯನಾಡಿನಲ್ಲಿ ಹಲಸಿನಂತೆ ಪ್ಯಾಶನ್ಫ್ರುಟ್ ಕೂಡಾ ಮೌಲ್ಯವರ್ಧನೆ ಮಾಡುವ ಆಲೋಚನೆಯಿದೆ' ಹೊಸ ಸುಳಿವನ್ನು ಬಿಚ್ಚಿದರು ಉರವಿನ ಸುನೀಶ್.
ಹಲಸಿನ ಬಗ್ಗೆ ಆಲೋಚಿಸುವ ಮನಸ್ಸುಗಳು ವಯನಾಡಿನಲ್ಲಿ ಒಂದೇ ಸೂರಿನಲ್ಲಿ ಸೇರುತ್ತಿವೆ. ಅದನ್ನು 'ರೆಡೆ ಟು ಸರ್ವ್' ಆಗಿಸುವ ಪ್ರಯತ್ನಗಳು ನಡೆಯುತ್ತಿವೆ. ಹಲಸನ್ನು 'ಟೇಬಲ್ ಫ್ರುಟ್' ಆಗಿ ಸ್ವೀಕರಿಸುವಂತಹ ಯೋಜನೆ-ಯೋಚನೆಗಳು ಉರವಿನ ಸ್ನೇಹಿತರಲ್ಲಿದೆ.
ಉರವಿನಲ್ಲಿ ಹುಟ್ಟಿದ ಹಲಸಿನ ಮೇಳದ ಕಲ್ಪನೆಯ ಬೀಜ ಈಗ ಮೊಳಕೆಯೊಡೆದಿದೆ. ಕನ್ನಾಡಿನಲ್ಲೂ ಬೇರೂರಿದೆ. ಮುಂದೆ ತಮಿಳುನಾಡಿನಲ್ಲೂ ಮೇಳ ನಡೆಯುವ ಸೂಚನೆ ಸಿಕ್ಕಿದೆ!
1 comments:
ಮೇಳದ ಬಗ್ಗೆ ಪೂರ್ವ ಮಾಹಿತಿ ನೀಡಿದಲ್ಲಿ ಆಸಕ್ತರಿಗೆ ಭಾಗವಹಿಸಬದುದಲ್ಲ?
ಅಡಿಕೆ ಪತ್ರಿಕೆನಲ್ಲಿ ಪ್ರಕಟಿಸಬಹುದೇ?
Post a Comment