Tuesday, August 22, 2017

ಸದ್ದಿಲ್ಲದ ಪರಿಸ್ನೇಹಿ ಆಂದೋಳನ - ಗಣೇಶನ ಪೂಜೆಗೆ 'ಇಷ್ಟಫಲ'ದ ವಿಗ್ರಹ

ತೆಂಗಿನ ಗಣೇಶ ವಿಗ್ರಹ ರಚನಾ ಸೈನ್ಯ
 ಕುಸುರಿ ಕೆಲಸ
 ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ
'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥೆ ಪ್ರಿಯಾ ಖೋದನಾಪುರ (ಬಲ)

              "ನೈಸರ್ಗಿಕವಲ್ಲದ ವಸ್ತುಗಳಿಂದ ತಯಾರಿಸುವ ಗಣಪನ ಮೂರ್ತಿಯನ್ನು ಸಾರ್ವಜನಿಕವಾಗಿ ಇಲ್ಲವೇ ಮನೆಗಳಲ್ಲಿ ಪ್ರತಿಷ್ಠಾಪಿಸಬಾರದು" ಧಾರವಾಡ ಜಿಲ್ಲಾಧಿಕಾರಿಗಳ ಆದೇಶ.
            ಗಣೇಶ ಚತುರ್ಥಿ ಸಂದರ್ಭದ ಆರಾಧನೆಯಲ್ಲಿ ಮಣ್ಣಿನ ಮೂರ್ತಿಗಳ ಬಳಕೆ ಅಪೇಕ್ಷಣೀಯ. ಮೂರ್ತಿಗೆ ಬಳಸಿದ ನೈಸರ್ಗಿಕ ಬಣ್ಣವೂ ಸೇರಿ ಎಲ್ಲವೂ ನೀರಿನಲ್ಲಿ ಕರಗುತ್ತದೆ. ಇದರಿಂದ ಪರಿಸರ, ಆರೋಗ್ಯಕ್ಕೆ ಯಾವುದೇ ಹಾನಿಯಿಲ್ಲ.
ನೀರಿನಲ್ಲಿ ಕರಗದ ಪ್ಲಾಸ್ಟರ್ ಆಪ್ ಪ್ಯಾರೀಸ್(ಪಿಒಪಿ)ನಿಂದ ತಯಾರಿಸಿದ ವಿಗ್ರಹಗಳು ಮತ್ತು ರಾಸಾಯನಿಕ ಬಣ್ಣಗಳು ಹಾನಿಕಾರಕ. ಈ ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಆದೇಶವು ವರ್ತಮಾನದ ಅನಿವಾರ್ಯತೆ. ಆರಾಧನೆಯ ಬಳಿಕ ವಿಗ್ರಹವನ್ನು ವಿಸರ್ಜಿಸುವ ಜಲಮೂಲಗಳ ರಕ್ಷಣೆಯ ಕಾಳಜಿಯ ನೋಟವು ಆದೇಶದ ಹಿಂದಿರುವುದು ಗಮನೀಯ.
              ಮೂರ್ತಿ ರಚನೆಯ ಕಾಯಕವನ್ನು ನೆಚ್ಚಿಕೊಂಡ ಅನೇಕರಿಗೆ ಜಿಲ್ಲಾಧಿಕಾರಿಗಳ ಆದೇಶ ಸಂತೋಷ ನೀಡದು. ಅವರೆಲ್ಲರೂ ಅನಿವಾರ್ಯವಾಗಿ ನೈಸರ್ಗಿಕ ಒಳಸುರಿಯತ್ತ ವಾಲಲೇಬೇಕಾಗಿದೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಪಿಒಪಿಗೆ ಪರ್ಯಾಯ ವ್ಯವಸ್ಥೆಯತ್ತ ಯೋಚಿಸಿದೆ.
              ತೆಂಗಿನ ಕಾಯಿಯಿಂದ ಕೆತ್ತಲ್ಪಟ್ಟ ಗಣಪನ ವಿಗ್ರಹಗಳನ್ನು ಜನರ ಮುಂದೆ ಪ್ರಸ್ತುತಪಡಿಸುತ್ತಿದೆ. ಮನೆಮನೆ ಭೇಟಿ ಮಾಡಿ ಜನರಲ್ಲಿ ಅರಿವನ್ನು ಬಿತ್ತುವ ಕೆಲಸ ಮಾಡುತ್ತಿದೆ. ಪಿಒಪಿ, ರಾಸಾಯನಿಕಗಳ ಬಳಕೆಯ ಮಾರಕವನ್ನು ತಿಳಿಸುತ್ತಿದೆ. ಪರಿಣಾಮವಾಗಿ ಈಗಾಗಲೇ ಐನೂರಕ್ಕೂ ಮಿಕ್ಕಿ ಮಂದಿ ತೆಂಗಿನ ಕಾಯಿಯಲ್ಲಿ ಮೂಡಿಸಿದ ಗಣಪನ ವಿಗ್ರಹವನ್ನು ಮನೆ ಆಚರಣೆಗಾಗಿ ಆಯ್ದುಕೊಂಡಿದ್ದಾರೆ. ಇದೊಂದು ಸದ್ದಿಲ್ಲದ ಬದಲಾವಣೆಯ ಮೆಟ್ಟಿಲು.
             ಧಾರವಾಡ ಇಂಜಿನಿಯರಿಂಗ್ ಕಾಲೇಜಿನ ನಿರ್ವಹಣಾ ಮೇಲ್ವಿಚಾರಕ ಜಗದೀಶ ಗೌಡ ಬಾವಿಕಟ್ಟಿ ಮತ್ತು ಅವರ ಸಹೋದರ ವೀರನಗೌಡರು ತೆಂಗಿನಿಂದ ಕಲಾತ್ಮಕ ಕುಸುರಿಗಳನ್ನು ಮಾಡಿ ಆಸಕ್ತರಿಗೆ, ಸ್ನೇಹಿತರಿಗೆ ಹಂಚುತ್ತಿದ್ದರು. ಅವರ ಸಂಗ್ರಹದ ತೆಂಗಿನ ಗಣಪನ ಕಲಾಕೃತಿಯ ವಿನ್ಯಾಸವನ್ನು ಪಿಒಪಿಗೆ ಪರ್ಯಾಯವಾಗಿ ನೀಡಬಹುದೆಂಬ ಯೋಜನೆಯ ಯೋಚನೆ ಅನುಷ್ಠಾನದ ಹೆಜ್ಜೆಯೂರಿದೆ.
             ಗ್ರಾಮಾಭಿವೃದ್ಧಿ ಯೋಜನೆಯ 'ಕೌಶಲ್ಯ ಅಭಿವೃದ್ಧಿ ತರಬೇತಿ'ಯಡಿ ಸ್ವ-ಸಹಾಯ ಸಂಘದ ಐವತ್ತು ಮಹಿಳೆಯರಿಗೆ ಜಗದೀಶರಿಂದ ತರಬೇತಿ. ಇಪ್ಪತ್ತೈದು ಮಂದಿಯ ಎರಡು ತಂಡಕ್ಕೆ ಏಳೇಳು ದಿವಸಗಳ ಕಲಿಕೆ. ಫಲವಾಗಿ ಐನೂರಕ್ಕೂ ಮಿಕ್ಕಿ ತೆಂಗಿನಕಾಯಿಯಲ್ಲಿ ಮೂಡಿದ ಗಣೇಶ ಪೂಜೆಗೆ ಸಿದ್ಧನಾಗಿದ್ದಾನೆ. ಬೇಡಿಕೆಯಂತೆ ಎಲ್ಲವೂ ನಡೆದುಹೋದರೆ ಚೌತಿಯ ಸಂದಭಕ್ಕೆ ಸಾವಿರದ ದಾಟಿದರೂ ಆಶ್ಚರ್ಯಪಡಬೇಕಿಲ್ಲ.
               "ಗಣೇಶನ ಮೂರ್ತಿ ಅಂದಾಗ ನೀರಿನಲ್ಲಿ ವಿಸರ್ಜಿಸಬೇಕೆನ್ನುವ ಮನಃಸ್ಥಿತಿ ಸಹಜವಾಗಿ ಬದುಕಿಗಂಟಿಕೊಂಡಿದೆ. ತೆಂಗಿನ ಗಣಪನನ್ನು ನೀರಿನಲ್ಲಿ ವಿಸರ್ಜನೆ ಮಾಡಿ ನಂತರ ಮಣ್ಣಿಗೆ ಸೇರಿಸಿ. ಅದು ಮೊಳಕೆ ಬಂದು ಸಸಿಯಾಗುತ್ತದೆ, ಕಲ್ಪವೃಕ್ಷವಾಗುತ್ತದೆ. ಅಥವಾ ಅಂದಕ್ಕಾಗಿ ಶೋಕೇಸಿನಲ್ಲಿಡಬಹುದು. ನಮ್ಮ ವಿಚಾರಗಳಿಗೆ ಮಹಿಳೆಯರು ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ" ಎನ್ನುವ ಮಾಹಿತಿ ನೀಡಿದರು ಪ್ರಿಯಾ ಖೋದಾನಪುರ.  ಇವರು ಧಾರವಾಡದ ಕೆಲ್ಕೇರಿಯಲ್ಲಿ ರೂಪುಗೊಂಡ 'ತೆಂಗಿನಕಾಯಿ ಗಣೇಶನ ಮೂರ್ತಿ ಕೆತ್ತನೆಗಾರರ ಸಮಿತಿ'ಯ ಮುಖ್ಯಸ್ಥರು.
                ತರಬೇತಿ ಪಡೆದ ಸಮಿತಿಯ ಸದಸ್ಯೆಯರು ಸಂತೋಷದಿಂದ ಕಾರ್ಯರಂಗಕ್ಕೆ ಧುಮುಕಿದರು. ಆರಂಭದಲ್ಲಿ ಎಡವಿದರೂ, ಮಾಡುತ್ತಾ ಸುಲಭವಾಯಿತು. ಈಗ ಒಬ್ಬರು ದಿವಸಕ್ಕೆ ನಾಲ್ಕು ಮೂರ್ತಿಗಳನ್ನು ರಚಿಸುವಷ್ಟು ಪಳಗಿದ್ದಾರೆ. ಉರುಟಾಗಿರುವ ಸುಲಿಯದ ಕಾಯಿಯು ಹೆಚ್ಚು ಎಳೆಯದಾಗಿರಬಾರದು, ಕೊಬ್ಬರಿಯ ಹಂತಕ್ಕೂ ತಲುಪಿರಬಾರದು - ಇಂತಹ ಕಾಯಿಗಳನ್ನು ಮೂರ್ತಿಯ ರಚನೆಗೆ ಆಯ್ಕೆ ಮಾಡುತ್ತಾರೆ.
                  ಯಲ್ಲಾಪುರದಿಂದ ಕುಸುರಿಗೆ ಬೇಕಾದ ಆಕಾರಗಳ ಕಾಯಿಗಳ ಖರೀದಿ. ಅದರ ಮೇಲೆ ಸ್ಕೆಚ್ ಹಾಕುವುದು ಮೊದಲ ಕೆಲಸ. ಮತ್ತೆಲ್ಲಾ ಚಾಕುವಿನ ಚಮತ್ಕೃತಿ. ಮನದೊಳಗಿನ ಕಲೆಯು ಚಕಚಕನೆ ತೆಂಗಿಗೆ ಆಕಾರ ಕೊಡುತ್ತದೆ. ಗಣಪನನ್ನು ಕೂರಿಸುವುದಕ್ಕೆ ಚಿಕ್ಕ ಪೀಠ. ಒಂದು ಮೂರ್ತಿಗೆ ನಾಲ್ಕು ನೂರಒಂದು ರೂಪಾಯಿ.
               ಹೀಗೆ ಸಿದ್ಧವಾದ ಮೂರ್ತಿಗೆ ಕಿರೀಟ, ಕಿವಿ ಆಭರಣ, ಕಣ್ಣುಗಳನ್ನು ಪ್ರತ್ಯೇಕವಾಗಿ ಫಿಕ್ಸ್ ಮಾಡುತ್ತಾರೆ. ಬಹುಕಾಲ ಕೆಡದಿರುವಂತೆ ಟಚ್ವುಡ್ಡಿನ ಲೇಪ. ಹೀಗೆ ಮಾಡಿದ್ದರಿಂದ  ತಾಳಿಕೆ ಹೆಚ್ಚು. ಅಲಂಕಾರಕ್ಕಾಗಿ ಕಾಪಿಡಬಹುದು. ಪರಿಸರಕ್ಕೆ ಹಾನಿಯಿಲ್ಲ. "ತೆಂಗು ನೈಸರ್ಗಿಕ ಉತ್ಪನ್ನ. ಬದಲಾದ ಕಾಲಘಟ್ಟದಲ್ಲಿ ಇಂತಹ ಬದಲಾವಣೆಯ ಮನಃಸ್ಥಿತಿಯನ್ನೂ ರೂಢಿಸುವುದು ಅನಿವಾರ್ಯವಿದೆ. ಬಹುಕಾಲ ಇದನ್ನೇ ವೃತ್ತಿಯನ್ನಾಗಿ ಸ್ವೀಕರಿಸಿದವರು ಪಕ್ಕನೆ ಒಪ್ಪಲಾರರು ಎಂದೂ ಗೊತ್ತಿದೆ. ಗಣೇಶನಿಗೆ ತೆಂಗು ಇಷ್ಟಫಲವಾದ್ದರಿಂದ ಗಣೇಶನಿಗೂ ಪ್ರಿಯವಾದೀತು. ಜನರೂ ಒಪ್ಪುತ್ತಿದ್ದಾರೆ" ಎನ್ನುವ ಮಾಹಿತಿ ನೀಡುತ್ತಾರೆ, ಗ್ರಾಮಾಭಿವೃದ್ಧಿ ಯೋಜನೆಯ ವಲಯ ನಿರ್ದೇಶಕ ಜಯಶಂಕರ ಶರ್ಮ.
              ಈಗಾಗಲೇ ಸಾವಿರದಷ್ಟು ಗಣೇಶನ ಮೂರ್ತಿಗಳು ಸಿದ್ಧವಾಗಿದೆ.  ಅಂದವನ್ನು ಕೊಡುವಲ್ಲಿ ಸುಧಾರಣೆಯಾಗುತ್ತಿವೆ. ಯಾವುದೇ ಮೂರ್ತಿಗಳನ್ನು ತೆಂಗಿನಲ್ಲಿ ಮೂಡಿಸಬಹುದೆಂಬ ಧೈರ್ಯ ಬಂದಿದೆ. ಮುಂದಿನ ದಿನಗಳಲ್ಲಿ ಗುಣಮಟ್ಟವನ್ನು ವೃದ್ಧಿಸುವ ಸಂಕಲ್ಪವಿದೆ. ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರು ತೆಂಗಿನ ಗಣೇಶನ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ಧಾರವಾಡದ ಕೆಲಕೇರಿಯ ಮಂಜುನಾಥ ಹಿರೇಮಠ ಮತ್ತು ಅವರ ತಂಡವು ಬಹುಕಾಲದಿಂದ ಇಂತಹ ನೈಸರ್ಗಿಕ ವಿಚಾರಗಳನ್ನು ಜನರ ಮುಂದಿಡುತ್ತ ಬಂದಿದ್ದಾರೆ.
              ಫಕ್ಕನೆ ಒಂದು ವ್ಯವಸ್ಥೆಯ ಬದಲಾವಣೆಗೆ ಮನಸ್ಸು ಹಿಂಜರಿಯುವುದು ಸಹಜ. ಪರಿಸರ, ಆರೋಗ್ಯ ಮೊದಲಾದ ವಿಚಾರಗಳು ಮುಂದೆ ಬಂದಾಗ ಬದಲಾಗಬೇಕಾದುದು ಅನಿವಾರ್ಯ ಕೂಡಾ. ಗ್ರಾಮಾಭಿವೃದ್ಧಿ ಯೋಜನೆಯು ನೈಸರ್ಗಿಕ ಗಣೇಶ ವಿಗ್ರಹದ ಮಾದರಿಯೊಂದನ್ನು ಜನರ ಮುಂದಿಟ್ಟಿದೆ. ಜನಸ್ವೀಕೃತಿಯೂ ಪಡೆಯುತ್ತಿದೆ. ನಿಜಾರ್ಥದಲ್ಲಿ ಇದೊಂದು ಸದ್ದಿಲ್ಲದ ಪರಿಸ್ನೇಹಿ ಆಂದೋಳನ.
(ಪ್ರಜಾವಾಣಿಯ ಕರ್ನಾಟಕ ದರ್ಶನ ಪುರವಣಿಯಲ್ಲಿ ಪ್ರಕಟ -: 22-8-2017 )

0 comments:

Post a Comment