Wednesday, August 2, 2017

ಹೂಳಿನೊಳಗೆ ಅವಿತ ಜೀವನಿಧಿಗೆ ಮರು ಉಸಿರು

ಉದಯವಾಣಿಯ 'ನೆಲದ ನಾಡಿ' ಅಂಕಣ / 2-3-2017

                "ಕನ್ನಾಡಿನಾದ್ಯಂತ  ನೀರು ಬಿಸಿಯಾಗುತ್ತಿದೆ! ಇನ್ನೊಂದೇ ತಿಂಗಳು, ಮತ್ತೆ ದೇವ್ರೇ ಗತಿ. ಕಳೆದ ವರ್ಷಕ್ಕಿಂತಲೂ ಈ ಬಾರಿ ನೀರು ಕೈಕೊಡುತ್ತೆ. ಕೃಷಿ ಕೈಬಿಡುತ್ತೆ. ಕುಡಿಯಲು ನೀರಿಲ್ಲ. ಬದುಕು ಹೇಂಗಪ್ಪಾ.." ದೂರದ ಕೊಪ್ಪಳದಿಂದ ಮಹಂತೇಶ ಸುಖ-ದುಃಖದ ಮಧ್ಯೆ ವರ್ತಮಾನದ ವಿಷಾದವನ್ನು ಉಸುರಿದರು. ಅವರ ವಿಷಾದದ ಉಸಿರಿನಲ್ಲಿ ಬಿಸಿಯ ಅನುಭವವಾಗುತ್ತಿತ್ತು. ಭವಿಷ್ಯದ ಕಷ್ಟದ ದಿನಗಳ ಚಿತ್ರಣ ಎದುರಿದ್ದು ಅಸಹಾಯಕರಾಗಿ ಅದನ್ನು ಒಪ್ಪಿಕೊಳ್ಳಬೇಕಾದ ದಿನಗಳಿಗೆ ಅಣಿಯಾಗುತ್ತಿದ್ದಾರೆ.
              ಕೊಪ್ಪಳ ಯಾಕೆ, ಕನ್ನಾಡಿನ ಬಹುತೇಕ ಜಿಲ್ಲೆಗಳ ನೀರಿನ ಕತೆಗಳಲ್ಲಿ ವಿಷಾದಗಳೇ ತುಂಬಿವೆ. ಬಾವಿಗಳಲ್ಲಿ ನೀರು ಕೆಳಕೆಳಗೆ ಇಳಿಯುತ್ತಿವೆ. ಕೆರೆಗಳಲ್ಲಿ ಇನ್ನೇನು ಕ್ಷಣಗಣನೆ. ಕೊಳವೆ ಬಾವಿಗಳಲ್ಲಿ ಜಲ ಪಾತಾಳಕ್ಕಿಳಿದಿವೆ. ನದಿಗಳು ಹರಿವನ್ನು ನಿಧಾನವಾಗಿಸುತ್ತಿವೆ. ಕೊಪ್ಪಳದ ಮಿತ್ರ ಹೇಳಿದಂತೆ ಒಂದೇ ತಿಂಗಳು! ಮತ್ತೇನು ಎನ್ನುವ ಪ್ರಶ್ನೆಗೆ ಉತ್ತರಿಸಲು ಕಷ್ಟವಾಗುತ್ತಿದೆ. ಕೆಲವು ವರುಷಗಳಿಂದ ಇಂತಹ ಸ್ಥಿತಿಗಳು ಮರುಕಳಿಸುತ್ತಿದ್ದರೂ ಮಳೆ ಬಂದಾಗ ಖುಷ್ ಆಗಿರುತ್ತೇವೆ. ಬೇಸಿಗೆ ಬಂದಾಗ ಅದೇ ಹಾಡು, ಅದೇ ಕೂಗು.
              ಜಲಸಂರಕ್ಷಣೆಯ ತಿಳುವಳಿಕೆಯು ಕನ್ನಾಡಿನಲ್ಲಿ ಹೊಸತೇನಲ್ಲ. ದಶಕಕ್ಕೂ ಆಚೆ ನೀರೆಚ್ಚರದ ಅರಿವನ್ನು ಮೂಡಿಸುವ ಕೆಲಸಗಳು ನಡೆಯುತ್ತಲೇ ಇವೆ. ಜಲಯೋಧರು ಕನ್ನಾಡಿನಾದ್ಯಂತ ಓಡಾಡಿ ಜಲಸಂರಕ್ಷಣೆಯ ಮಾದರಿ, ಅರಿವನ್ನು ಮೂಡಿಸುತ್ತಲೇ ಬಂದಿದ್ದಾರೆ, ಬರುತ್ತಿದ್ದಾರೆ. ಬರದ ನೋವಿನ ಮಧ್ಯೆ ಜಲಸಂರಕ್ಷಣೆಯ ಮಾದರಿಗಳು ರೂಪುಗೊಳ್ಳುತ್ತಿವೆ. ನೀರಿಲ್ಲ ಎಂದವರಿಗೆ 'ನೀರು ನಾವು ಕೊಡುತ್ತೇವೆ' ಎಂದು ನಗುನಗುತ್ತಾ ಸ್ವಾಗತಿಸುವ ಮನಸ್ಸುಗಳು ಅಲ್ಲೋ ಇಲ್ಲೋ ರೂಪುಗೊಳ್ಳುತ್ತಿವೆ.
              ಇಂತಹ ಮಾದರಿಗಳನ್ನು, ಅರಿವನ್ನು ಬಿತ್ತುವ ಕೆಲಸಗಳನ್ನು ನಮ್ಮ ಸ್ಥಳೀಯಾಡಳಿತಗಳು ಗಂಭೀರವಾಗಿ ಪರಿಗಣಿಸಿಲ್ಲ. ಜನರನ್ನು ಈ ದಿಸೆಯಲ್ಲಿ ವಿಶ್ವಾಸಕ್ಕೆ ತೆಗೆದುಕೊಂಡು ಅದನ್ನು ಸಾಮೂಹಿಕ ಜಾಗೃತಿಯನ್ನಾಗಿ ಮಾಡುವತ್ತ ಹೆಜ್ಜೆ ಊರಿಲ್ಲ. ವಿವಿಧ ಸ್ತರಗಳಲ್ಲಿ ರಾಜಕೀಯದ ಅವತಾರಗಳು ಮೇಳೈಸುತ್ತಿರುವ ಮಧ್ಯೆ  ಮಾಡಬೇಕಾದವರಿಗೆ ಉತ್ಸಾಹವಿಲ್ಲ. ಉತ್ಸಾಹವಿದ್ದವರಿಗೆ ಆಡಳಿತ ವ್ಯವಸ್ಥೆಗಳು ರಸ್ತೆಉಬ್ಬುಗಳಾಗಿವೆ. ವೈಯಕ್ತಿಕವಾಗಿ, ಕೆಲವು ಸ್ಥಳೀಯ ಖಾಸಗಿ ಸಂಸ್ಥೆಗಳಿಂದ ಅಲ್ಲಿಲ್ಲಿ ನೀರೆಚ್ಚರದ ಪಾಠಗಳಾಗುತ್ತಿವೆ. ಶಾಲೆಗಳಲ್ಲಿ ಅರಿವು ಮೂಡಿಸುವ ಯತ್ನಗಳಾಗುತ್ತಿವೆ. ಇಷ್ಟೆಲ್ಲಾ ವಿಷಾದಗಳ ಮಧ್ಯೆ ಕನ್ನಾಡಿನ ಕೆಲವೆಡೆ ನೀರಿನ ಬರವನ್ನು ಲಕ್ಷಿಸಿ ಕೆರೆಗಳ ಹೂಳು ತೆಗೆಯುವ, ಅಭಿವೃದ್ಧಿ ಮಾಡುವ ಕಾರ್ಯಗಳು ಸದ್ದು ಮಾಡುತ್ತಿವೆ. ನೀರನ್ನು ಹಿಡಿದಿಡುವ ಕೆರೆಗಳಲ್ಲಿ ಕೆಲವು ಬಹುಮಹಡಿ ಕಟ್ಟಡದ ಅಡಿಪಾಯಗಳಾಗಿವೆ! ಅಳಿದುಳಿದ ಕೆರೆಗಳ ಅಭಿವೃದ್ಧಿಗೆ ನೀರಿನ ಮನಸ್ಸುಗಳು ಟೊಂಕಕಟ್ಟಿದ ಸುದ್ದಿಗಳು ಮಹತ್ವ ಪಡೆಯುತ್ತಿವೆ.
              ನಟ ಯಶ್ ನಟನೆಯಿಂದ ಒಂದು ಕ್ಷಣ ದೂರ ನಿಂತು ಘೋಷಣೆಯನ್ನೇ ಮಾಡಿಬಿಟ್ಟರು - 'ರಾಜ್ಯಾದ್ಯಂತ ಕೆರೆಗಳಿಗೆ ಕಾಯಕಲ್ಪ'. ಫೆಬ್ರವರಿ 28ರಂದು ಚಾಲನೆ. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ತಲ್ಲೂರು ಗ್ರಾಮದಲ್ಲಿರುವ ಕೆರೆ ಅಭಿವೃದ್ಧಿಗೆ ಮೊದಲ ಶ್ರೀಕಾರ. ಅವರ 'ಯಶೋಮಾರ್ಗ' ಸಂಸ್ಥೆಯ ಹೊಣೆ. ನಾಲ್ಕು ಕೋಟಿ ರೂಪಾಯಿ ವೆಚ್ಚದ ಯೋಜನೆ. ಯಶ್ ಅವರ ಸಂಕಲ್ಪದಂತೆ ಕೆರೆ ಅಭಿವೃದ್ಧಿಯಾದರೆ ನಲವತ್ತು ಗ್ರಾಮಗಳಿಗೆ ಕುಡಿಯುವ ನೀರಿಗೆ ತೊಂದರೆಯಾಗದು. ಸುಮಾರು ಇಪ್ಪತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಅಂತರ್ಜಲ ವೃದ್ಧಿಯಾಗುತ್ತದೆ. ಇದೆಲ್ಲಾ ಅಂಕಿಅಂಶಗಳಷ್ಟೇ. ಇದು ಘೋಷಣೆಗಳ ಕಾಲ. ಜನ ನಂಬುವ ಸ್ಥಿತಿಯಲ್ಲಿಲ್ಲ. ಘೋಷಣೆ, ಆಶ್ವಾಸನೆಗಳನ್ನು ಕೇಳಿ ಕೇಳಿ ಜನ ರೋಸಿಹೋಗದ್ದಾರೆ. ಯಶ್ ಅವರ ಈ ಘೋಷಣೆ ಶೀಘ್ರ ಅನುಷ್ಠಾನ ಆಗಬೇಕಾದುದು ಮುಖ್ಯ. ಆದೀತೆಂದು ಆಶಿಸೋಣ.
                ಕಳೆದ ವರುಷ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಧಾರವಾಡ ತಾಲೂಕಿನ ಐದು ಕೆರೆಗಳಿಗೆ ಕಾಯಕಲ್ಪ ನೀಡಿತ್ತು. ನೂರಾರು ವರುಷಗಳ ಇತಿಹಾಸವಿರುವ ಹೆಬ್ಬಳ್ಳಿ ಗ್ರಾಮದ ಕೆಂಗಳಮ್ಮನ ಕೆರೆಯಿಂದ ನೀರು ಬಳಸದೆ ಅರ್ಧ ಶತಮಾನವಾಗಿತ್ತು. ಈ ಗ್ರಾಮದ ಜನಸಂಖ್ಯೆ ಸುಮಾರು ಮೂರುವರೆ ಸಾವಿರ. ಕಾಲಗರ್ಭಕ್ಕೆ ಸೇರಿಹೋದ ಕೆರೆಯು ಜನರ ಮನಸ್ಸಿನಿಂದಲೂ ದೂರವಾಯಿತು. ಜಾಲಿಮರಗಳು ಹುಟ್ಟಿ ಕಾಡಾಯಿತು. ಜತೆಗೆ ಕೆರೆ ಒತ್ತುವರಿಯಾಯಿತು. ದನಕರುಗಳ ಮೇವು, ಸೌದೆ ಸಂಗ್ರಹಗಳಿಗೆ ಆಶ್ರಯವಾಗಿತ್ತು. ಪುಂಡಾಡಿಕೆಯ ತಾಣವಾಯಿತು. 2012ರಲ್ಲಿ ಒತ್ತುವರಿಯನ್ನು ತೆರವುಗೊಳಿಸಿದರೂ ಅಭಿವೃದ್ಧಿ ಕಾರ್ಯ ಆರಂಭವಾಗಿರಲಿಲ್ಲ. ಹೆಬ್ಬಳ್ಳಿಯ ಕೆರೆಯದ್ದು ಒಂದು ಮಾದರಿಯಷ್ಟೇ. ರಾಜ್ಯದ್ಯಂತ ಇಂತಹ ಕೆರೆಗಳು ಸಾವಿರಾರಿವೆ.
              ಯೋಜನೆಯ ನಿರ್ದೇಶಕ ಜಯಶಂಕರ ಶರ್ಮ ಕೆರೆಗಳ ಸ್ಥಿತಿಗತಿ ವಿವರಿಸುತ್ತಾರೆ, "ಮಹಾರಾಜರ ಆಡಳಿತದಲ್ಲಿ ಅಂತರ್ಜಲ ವೃದ್ಧಿ, ಜನ-ಜಾನುವಾರು, ಪ್ರಾಣಿ-ಪಕ್ಷಿಗಳಿಗೆ ಕುಡಿಯಲು ನೀರು ಮತ್ತು ಕೃಷಿ ಉದ್ದೇಶಗಳಿಗೆ ನೀರಿನ ಬಳಕೆಯನ್ನು ಲಕ್ಷಿಸಿ ಕೆರೆ-ಕಟ್ಟೆಗಳನ್ನು ನಿರ್ಮಿಸುತ್ತಿದ್ದರು. ಪ್ರಸ್ತುತ ಇರುವ ಕೆರೆಗಳು ನಿರ್ವಹಣೆಯ ಕೊರತೆಯಿಂದ ಹೂಳು ತುಂಬಿ ಆಟದ ಮೈದಾನಗಳಾಗಿವೆ. ಕೆಲವು ಉಳ್ಳವರ ಆಸ್ತಿಗಳಾಗಿವೆ! ಒಂದು ಅಂಕಿಅಂಶದ ಪ್ರಕಾರ ರಾಜ್ಯದಲ್ಲಿ ಮೂರುವರೆ ಸಾವಿರಕ್ಕೂ ಮಿಕ್ಕಿ ಸಣ್ಣ ನೀರಾವರಿ ಕೆರೆಗಳಿವೆ. ಧಾರವಾಡ ಜಿಲ್ಲೆಯೊಂದರಲ್ಲೇ ನೂರಕ್ಕೂ ಹೆಚ್ಚು ಕೆರೆಗಳಿವೆ. ಇವುಗಳೆಲ್ಲಾ ಮಳೆಗಾಲದಲ್ಲಿ  ನೀರು ತುಂಬಿಕೊಂಡು ಅಂತರ್ಜಲ ವೃದ್ಧಿ ಕಾರ್ಯವನ್ನು ಸಹಜವಾಗಿ ಮಾಡುತ್ತಿದ್ದುವು."
              ಧಾರವಾಡ ತಾಲೂಕಿನ ಹೆಬ್ಬಳ್ಳಿ, ಮುಗುದ, ಹಳ್ಳಿಕೆರೆ, ಕೊಟಬಾಗಿ ಹಾಗೂ ತಿಮ್ಮಾಪುರ ಗ್ರಾಮದ ಐದು ಕೆರೆಗಳ ಹೂಳು ತೆಗೆದು ವರುಷವಾಗುತ್ತಾ ಬಂತು. ಕೆಲವು ಕೆರೆಗಳ ಸುತ್ತ ಹಣ್ಣು, ಹೂವು ಸಸಿಗಳ ನಾಟಿ. ಹೆಬ್ಬಳ್ಳಿಯ ಒಂದು ಕೆರೆ ತುಂಬಿತೆಂದರೆ ಸುತ್ತಲಿನ ನಲವತ್ತೊಂದು ಕೊಳವೆ ಬಾವಿಗಳು ಮರುಪೂರಣವಾದಂತೆ. ಮುಗುದ ಕೆರೆಯು ಆರುವತ್ತು ಕುಟುಂಬದ ಮೀನುಗಾರಿಕೆಗೆ ಆಸರೆ. ಹಳ್ಳಿಗೆರೆಯ ಕೆರೆಯಿಂದ ಸುತ್ತಲಿನ ಮೂವತ್ತೆಂಟು ಬೋರ್ವೆಲ್ಗಳು,. ಕೊಟಬಾಗಿ ಕೆರೆಯು ಇಪ್ಪತ್ತೆರಡು ಮತ್ತು ತಿಮ್ಮಾಪುರದ ಮೂವತ್ತು ಕೊಳವೆ ಬಾವಿಗಳಿಗೆ ಅಂತರ್ಜಲ ಪೂರೈಕೆಗೆ ಸಹಕಾರಿ. ಏನಿದ್ದರೂ ನಿರೀಕ್ಷಿತ ಫಲಿತಾಂಶಕ್ಕಾಗಿ ಒಂದೆರಡು ವರುಷ ಕಾಯಬೇಕು.
               ನಲವತ್ತು ವರುಷಗಳಿಂದ ಜನಪ್ರತಿನಿಧಿಗಳು ಹೆಬ್ಬಳ್ಳಿಯ ಕೆರೆ ಕಾರ್ಯವನ್ನು ಮುಂದೂಡುತ್ತಾ ಬಂದಿದ್ದಾರೆ. ಯೋಜನೆಯ ಪ್ರವೇಶದಿಂದ ಮತ್ತು ಕೆಲವು ಸಂಸ್ಥೆಗಳ ಸಹಕಾರದಿಂದ ಕೆರೆ ಪುನರುಜ್ಜೀವನ ಗೊಂಡಿತು. ಒಂದು ಕೆರೆ ಅಭಿವೃದ್ಧಿ ಅಂದರೆ ಒಂದು ದೇವಾಲಯ ಕಟ್ಟಿದಂತೆ., ಹೆಬ್ಬಳ್ಳಿ ಶ್ರೀ ಶಿವಾನಂದ ಮಠದ ಶ್ರೀ ಬ್ರಹ್ಮಾನಂದ ಸ್ವಾಮಿಗಳ ಅಭಿಮತ. ಯೋಜನೆಯು ಕನ್ನಾಡಿನ ವಿವಿಧ ಜಿಲ್ಲೆಗಳಲ್ಲಿ ಕೆರೆಗಳ ಹೂಳೆತ್ತುವ ಕಾರ್ಯಕ್ಕೆ ಸ್ಥಳೀಯರೊಂದಿಗೆ ಕೈ ಜೋಡಿಸುತ್ತಾ ಬಂದಿದೆ. ಈ ಹೂಳೆತ್ತುವ ಕೆಲಸಗಳ ಪ್ರಯೋಜನಗಳ ವಸ್ತುಸ್ಥಿತಿ ಅರಿಯಲು ರಾಜರ್ಶಿ ಡಾ. ವೀರೇಂದ್ರ ಹೆಗ್ಗಡೆಯವರು ಸ್ವತಃ ಕ್ಷೇತ್ರ ಸಂದರ್ಶನ ಮಾಡುತ್ತಿರುವುದರಿಂದ ಈ ಕುರಿತ ಅರಿವಿಗೆ ವೇಗ ಹೆಚ್ಚಿದೆ. ವೈಯಕ್ತಿಕವಾಗಿ ಜಲಮೂಲಗಳನ್ನು ಸಂರಕ್ಷಿಸುವ ನೈತಿಕ ಹೊಣೆಗಾರಿಕೆಯನ್ನು ಪ್ರತಿಯೊಬ್ಬ ಹೊರಬೇಕು.
               ಗ್ರಾಮಾಭಿವೃದ್ಧಿ ಯೋಜನೆಯಂತೆ ಜಲಕಾಯಕವನ್ನು ತಪಸ್ಸಿನಂತೆ ಮಾಡುವ ಖಾಸಗಿ ಸಂಸ್ಥೆಗಳ ಕೆಲಸಗಳು ಸದ್ದಾಗುವುದಿಲ್ಲ. ಸರಕಾರಿ ಮಟ್ಟದ ಜಲ ಕಾಯಕಗಳು ಪತ್ರಿಕೆಗಳಲ್ಲಿ ಮಾತ್ರ ಸದ್ದಾಗುತ್ತಿವೆ. ಅದು ಜನರ ಮನಸ್ಸಿನಲ್ಲಿ ಸದ್ದಾಗಬೇಕು. ಅವರು ಅದಕ್ಕೆ ಸ್ಪಂದಿಸಬೇಕು. ಅರಿವನ್ನು ಮೂಡಿಸಬೇಕು. ಆದರೆ ಹಾಗಾಗುತ್ತಿಲ್ಲ. ಕೆರೆಗಳ ಹೂಳು ತುಂಬಿದಷ್ಟೂ ತಮ್ಮ ಜನನಾಯಕರಿಗೆ ಖುಷಿ! ಯಾಕೆ ಹೇಳಿ? ದಾಖಲೆಗಳಲ್ಲಿ ಪ್ರತೀವರುಷ ಹೂಳು ತೆಗೆಯುತ್ತಲೇ ಇರುತ್ತಾರೆ!
               ಐದು ವರುಷದ ಹಿಂದೆ ಹಿರಿಯ ಪರ್ತಕರ್ತ ನಾಗೇಶ ಹೆಗಡೆಯವರು ಆಡಳಿತ ವ್ಯವಸ್ಥೆಯ ಹೂಳಿನ ಚಿತ್ರಣವನ್ನು ಒಂದೆಡೆ ಉಲ್ಲೇಖಿಸಿದ್ದರು - ನಮ್ಮ ಪಂಚಾಯತ್ಗಳಲ್ಲಿ ಚೆಕ್ಡ್ಯಾಮ್ ಕಟ್ಟಲು, ಹೂಳೆತ್ತಲು ಹಣ ಎಲ್ಲಿದೆ? ಈ ಪ್ರಶ್ನೆಗೆ ಉತ್ತರ ಬೇಕಿದ್ದರೆ ನಮ್ಮ ದೊಡ್ಡ 'ಜಲಾಶಯ'ಗಳತ್ತ ನೋಡೋಣ. ಕೇಂದ್ರ ಬಜೆಟ್ ದಾಖಲೆಗಳ ಪ್ರಕಾರ, ಹಿಂದಿನ ವರುಷ ದೊಡ್ಡ ಕಂಪೆನಿಗಳಿಂದ ಬರಬೇಕಿದ್ದ - ಆದರೆ ಸಂಗ್ರಹಿಸಲಾಗದೆ ಕೈಬಿಡಲಾದ ವರಮಾನ ತೆರಿಗೆ, ಅಬಕಾರಿ ಸುಂಕದ ಮೊತ್ತ 4,87,112 ಕೋಟಿ ರೂಪಾಯಿ. ಅದೂ ಒಂಥರಾ ಹೂಳು ತಾನೆ? ಹೀಗೆ ಆರೇಳು ವರುಷಗಳ ಲೆಕ್ಕ ನೋಡಿದಾಗ ಹೀಗೆ ಕೈಬಿಟ್ಟ ಹಣದ ಮೊತ್ತ ಇಪ್ಪತ್ತೈದು ಲಕ್ಷ ಕೋಟಿಗೂ ಮಿಕ್ಕಿ! ಈಗಂತೂ ಈ ಸಂಖ್ಯೆ ದುಪ್ಪಟ್ಟಾಗಿರಬಹುದು. ಆ ಹೂಳನ್ನು ಮೇಲಕ್ಕೆತ್ತಿ ಸಂಗ್ರಹಿಸಿ ಪಂಚಾಯ್ತಿಗಳಿಗೆ ವಿತರಿಸಿದರೆ ದೇಶದ ಎಲ್ಲಾ ಕೆರೆಕಟ್ಟೆಗಳೂ ಸದಾ ತುಂಬಿರುತ್ತವೆ. ಬರ ಅಥವಾ ಮಹಾಪೂರದ ಸಮಸ್ಯೆಯೇ ಇರುವುದಿಲ್ಲ.

0 comments:

Post a Comment