ಹೊಸದಿಂಗತದ 'ಮಾಂಬಳ' / 3-5-2017
ಎಪ್ರಿಲ್ ಮೂರನೇ ವಾರ ಗೋವಾದ ಪಣಜಿಯಲ್ಲಿ 'ಕೊಂಕಣ್ ಫ್ರುಟ್ ಫೆಸ್ಟ್' ಜರುಗಿತು. ವಿವಿಧ ತಳಿಗಳ ಮಾವುಗಳದ್ದೇ ಕಾರುಬಾರು! ಪುನರ್ಪುಳಿ(ಕೋಕಂ, ಮುರುಗಲು)ಯ ತಳಿಗಳು, ಗಿಡಗಳು, ಮೌಲ್ಯವರ್ಧಿತ ಉತ್ಪನ್ನಗಳು ಹಣ್ಣಿನ ಹಬ್ಬದಲ್ಲಿ ಎದ್ದು ಕಾಣಬೇಕಿತ್ತು. ಸಾಕಷ್ಟು ಮಂದಿ ವಿಚಾರಿಸುತ್ತಲೂ ಇದ್ದರು. ಗಿಡಗಳನ್ನು ಒಯ್ಯುವುದಕ್ಕಾಗಿಯೇ ಆಗಮಿಸಿದ ಕೃಷಿಕರಿಗೆ ನಿರಾಸೆಯಾದುದಂತೂ ಖಂಡಿತ.
ಮಹಾರಾಷ್ಟ್ರ ರತ್ನಗಿರಿ ಜಿಲ್ಲೆಯ ದಾಪೋಲಿಯ ಡಾ.ಬಾಳಾಸಾಹೇಬ್ ಸಾವಂತ್ ಕೊಂಕಣ್ ಕೃಷಿ ವಿದ್ಯಾಪೀಠವು ಪುನರ್ಪುಳಿಯ ಬಗ್ಗೆ ಅಧ್ಯಯನವನ್ನು ಮಾಡಿದ ಸಂಸ್ಥೆ. ಇದರ ಹೊರತು ಮುರುಗಲಿನ ಬಗ್ಗೆ ಕೃಷಿ ವಿದ್ಯಾಲಯಗಳು ಮಾಡಿರುವ ಅಧ್ಯಯನ ಅತ್ಯಲ್ಪ. ಹಣ್ಣಿನ ಹಬ್ಬದಲ್ಲಿ ವಿದ್ಯಾಪೀಠದ ಮಳಿಗೆಯಿದ್ದರೂ ಕೋಕಂನ ಗಿಡಗಳು, ಉತ್ಪನ್ನಗಳು ಇದ್ದಿರಲಿಲ್ಲ. ಆದರೆ ಮಾಹಿತಿ ಅಪೇಕ್ಷಿಸಿದವರಿಗೆ ಉತ್ತಮವಾದ ಮಾಹಿತಿ ನೀಡುವ ಸಿಬ್ಬಂದಿಗಳಿದ್ದರು.
ಕೋಕಮ್ ಫೌಂಡೇಶನ್ನಿನ ಮುಖ್ಯಸ್ಥ ಅಜಿತ್ ಶಿರೋಡ್ಕರ್ ಮಾತಿಗೆ ಸಿಕ್ಕರು. ಕೊಂಕಣ್ ಕೃಷಿ ವಿದ್ಯಾಪೀಠವು ಈಗಾಗಲೇ ಪುನರ್ಪುಳಿಯ್ ಎರಡು ತಳಿಗಳನ್ನು ಅಭಿವೃದ್ಧಿ ಪಡಿಸಿದ್ದು ಕೃಷಿಕ ಸ್ವೀಕೃತಿ ಪಡೆದಿದೆ. ಎರಡು ದಶಕದ ಹಿಂದೆ 'ಕೊಂಕಣ್ ಅಮೃತ್' ತಳಿಯನ್ನು ಅಭಿವೃದ್ಧಿ ಪಡಿಸಿತ್ತು. ಇದಾದ ಏಳು ವರುಷಗಳ ಬಳಿಕ 'ಕೊಂಕಣ್ ಹಾತಿಸ್' ಎನ್ನುವ ತಳಿಯನ್ನು ಅಭಿವೃದ್ಧಿ ಪಡಿಸಿದ್ದಾರೆ. ಎಂದರು.
ಕೊಂಕಣ್ ಅಮೃತ್ ತಳಿಯ ತಾಯಿ ಮರವು ಶಿರ್ಗಾಂವ್ ಎಂಬ ಹಳ್ಳಿಯಲ್ಲಿದ್ದರೆ, ಹಾತಿಸ್ ತಳಿಯದ್ದು ರತ್ನಾಗಿರಿಯ ನಾಗ್ವೇಕರ್ ಎಂಬ ಕೃಷಿಕರ ಜಮೀನಿನಲ್ಲಿದೆ, ಪತ್ರಕರ್ತ ಶ್ರೀ ಪಡ್ರೆಯವರು ಈ ಎರಡೂ ತಳಿಗಳ ಅಪರೂಪದ ಮಾಹಿತಿಗಳನ್ನು ಹಂಚಿಕೊಂಡರು. ಮುರುಗಲು ಹಣ್ಣಿನಲ್ಲಿ ತಳಿಯ ಆಯ್ಕೆ, ಪ್ರತ್ಯುತ್ಪಾದನೆ, ಗಂಡುಗಿಡ ಎಷ್ಟು ಬೇಕು ಇತ್ಯಾದಿಗಳ ಬಗ್ಗೆ ಅಧ್ಯಯನ ನಡೆದಿರುವುದು ಅತ್ಯಲ್ಪ.
ಕೊಂಕಣ್ ಅಮೃತ್ ಹಣ್ಣಿನ ಸರಾಸರಿ ತೂಕ ಸುಮಾರು ಮೂವತ್ತೈದು ಗ್ರಾಮ್. ಹಾತಿಸ್ನದು ತೊಂಭತ್ತು ಗ್ರಾಮಿಗಿಂತಲೂ ಅಧಿಕ! ಒಂದು ಕಿಲೋಗೆ ಹನ್ನೊಂದು, ಹನ್ನೆರಡು ಹಣ್ಣುಗಳು ಸಾಕು. ಅಮೃತ್ ಹಣ್ಣಿನ ಸಿಪ್ಪೆಯೇ ಹದಿನೇಳು ಗ್ರಾಮಿಗಿಂತ ಅಧಿಕವಾಗಿದೆ. ಹಾತಿಸ್ನದು ಸಿಪ್ಪೆ ದಪ್ಪ. ಆಜೂಬಾಜು ಐವತ್ತು ಗ್ರಾಮ್. ಇದು ಎಪ್ರಿಲ್-ಮೇ ತಿಂಗಳಿನಲ್ಲಿ ಇಳುವರಿಗೆ ಬರುತ್ತದೆ.
ಸ್ವಲ್ಪ ನಮ್ಮ ಸುತ್ತ ಮುತ್ತ ಹುಡುಕಿದರೆ ಈ ಎರಡು ತಳಿಗಳನ್ನು ಹಿಂದಿಕ್ಕುವ ಸ್ಥಳೀಯ ತಳಿಗಳು ಇರಬಹುದೇನೋ? ತಾಜಾ ಹಣ್ಣಿನ ಮಾರಾಟ ಸಾಧ್ಯತೆಯ ಹಿನ್ನೆಲೆಯಲ್ಲಿ ದೊಡ್ಡ ಗಾತ್ರ, ಆಕರ್ಷಕ ಬಣ್ಣ, ಕಡಿಮೆ ಹುಳಿಯ ತಳಿಗಳನ್ನು ಆಯ್ಕೆ ಮಾಡಿ ಬೆಳೆಸುವ ಕೆಲಸ ಆಗಬೇಕಾಗಿದೆ. ಇದಕ್ಕಾಗಿ ಸಂಶೋಧನಾ ಕೇಂದ್ರಗಳತ್ತ ಕತ್ತು ತಿರುಗಿಸಬೇಕಾಗಿಲ್ಲ. ಸ್ವಲ್ಪ ಸಮಯ ಕೊಟ್ಟು, ಸಂಶೋಧನಾ ಮನಸ್ಸನ್ನು ತೆರೆದಿಟ್ಟರೆ ಕೃಷಿಕರಿಗೂ ಈ ಕೆಲಸ ಸಾಧ್ಯ.
ದಶಕಕ್ಕಿಂತಲೂ ಹಿಂದೆಯೇ ಮಂಗಳೂರು ಕೇಂದ್ರ ಮಾರುಕಟ್ಟೆಯಲ್ಲಿರುವ ಹಣ್ಣಿನ ವ್ಯಾಪಾರಿ ಡೇವಿಡ್ ತಾಜಾ ಪುನರ್ಪುಳಿ ಹಣ್ಣುಗಳಿಗೆ ಗ್ರಾಹಕರನ್ನು ರೂಪಿಸಿದವರು. "ಮಂಗಳೂರಿನ ಒಂದೆರಡು ಕ್ರೀಮ್ ಪಾರ್ಲರಿನಲ್ಲಿ ಗ್ರಾಹಕರೆದುರೇ ಪುನರ್ಪುಳಿ ಹಣ್ಣನ್ನು ಮಿಕ್ಸಿಯಲ್ಲಿ ಕ್ರಷ್ ಮಾಡಿ ಜ್ಯೂಸ್ ಮಾಡಿಕೊಡುತ್ತಿದ್ದರು. ಈ ಜ್ಯೂಸ್ ಕುಡಿಯಲು ಬರುವ ಗ್ರಾಹಕರು ಸಾಕಷ್ಟಿದ್ದರು" ಎಂದು ಡೇವಿಡ್ ನೆನಪು ಮಾಡಿಕೊಳ್ಳುತ್ತಾರೆ.
ಹವಾಯಿಯ ಹಣ್ಣು ಕೃಷಿಕ, ತಜ್ಞ ಕೆನ್ ಲವ್ ಐದು ವರುಷದ ಹಿಂದೊಮ್ಮೆ ಕರಾವಳಿಗೆ ಬಂದಿದ್ದರು. 'ಕೋಕಮ್ ತಾಜಾ ಹಣ್ಣಾಗಿ ಮಾರಿಹೋಗಬಲ್ಲುದು' ಎನ್ನುವ ಕಣಿಯನ್ನೂ ಹೇಳಿದ್ದರು. ಇದರ ಹುಳಿ ರುಚಿ, ಗಾತ್ರಕ್ಕೆ ಆಕರ್ಶಿತರಾದ ಕೆನ್ ಹೇಳುತ್ತಾರೆ, ಕೋಕಮ್ ಹಣ್ಣು ಮ್ಯಾಂಗೋಸ್ಟೀನಿಗಿಂತಲೂ ಹೆಚ್ಚು ಇಷ್ಟ. ಇದು ನಮ್ಮ ಹವಾಯ್ ದ್ವೀಪದಲ್ಲಿ ಖಂಡಿತ ತಾಜಾ ಹಣ್ಣಾಗಿ, ತಿನ್ನಲೆಂದೇ ಮಾರಿ ಹೋಗಬಲ್ಲುದು. ಮ್ಯಾಂಗೋಸ್ಟೀನ್ನಲ್ಲಿ ತಿನ್ನಬಹುದಾದ ಅಂಶ ಹೆಚ್ಚಿದೆ. ಬೀಜ ಕಡಿಮೆ. ಆದರದು ಸಿಹಿ. ನಾನು ಮ್ಯಾಂಗೋಸ್ಟೀನ್ ತಿಂದ ನಂತರ ಅದರ ಸಿಹಿಯ ಪ್ರಮಾಣವನ್ನು ಕಡಿಮೆ ಮಾಡಲು ನಿಂಬೆ ಶರಬತ್ತು ಕುಡಿಯುವುದಿದೆ. ಆದರೆ ಕೋಕಮ್ಮಿನದು ಹುಳಿ ಮಿಶ್ರಿತ ಸಿಹಿ. ಈ ರುಚಿ ಬಾಯಿಯಲ್ಲೇ ಉಳಿಯಲೆಂದು ಹಾರೈಸುತ್ತೇನೆ.
ಪುನರ್ಪುಳಿಯ ಗುಳವನ್ನು ಬಾಯಲ್ಲಿಟ್ಟು ಚೀಪುತ್ತಾ ಕೋಕಂನ ಪರವಾಗಿ ಮಾತನಾಡುತ್ತಾರೆ, ಒಂದು ಮ್ಯಾಂಗೋಸ್ಟೀನಿಗೆ ಬದಲು ನಾನು ಎರಡು ಕೋಕಮ್ ತಿಂದೇನು. ತಾಜ್ನಂತಹ ಪಂಚತಾರಾ ಹೋಟೇಲುಗಲ್ಲಿ ಹಣ್ಣನ್ನು ಅರ್ಧ ಬಿಡಿಸಿ ಇಡಬಹುದು. ಕೋಕಮ್ಮಿನಿಂದ ಮಾಡಿದ ವೈನ್, ಸಿಪ್ಪೆಯ ಜೆಲ್ಲಿ ಜಪಾನೀಯರೂ ಸೇರಿದ ಹಾಗೆ ವಿದೇಶಿಯರಿಗೆ ಇಷ್ಟವಾಗಬಹುದು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮುರುಗಲಿನ ಮಂದಸಾರವನ್ನು ತೆಗೆಯುವ ಮನೆ ಉದ್ದಿಮೆಗಳು ಜನಪ್ರಿಯ. ಈಚೆಗಂತೂ ಶಿರಸಿಯ ನವೀನ್ ಹೆಗಡೆಯವರು ಆಕರ್ಷಕ ಪ್ಯಾಕೆಟ್ಟಿನಲ್ಲಿ ಕೋಕಂನ ಕುಡಿಯಲು ಸಿದ್ಧ ಪೇಯವನ್ನು ಮಾರುಕಟ್ಟೆಗಿಳಿಸಿದ್ದಾರೆ. ಗೋವಾ, ಮಹಾರಾಷ್ಟ್ರಗಳಲ್ಲಿ ಹತ್ತಾರು ಕಂಪೆನಿಗಳು 'ರೆಡಿ ಟು ಡ್ರಿಂಕ್' ಪೇಯವನ್ನು ಸಿದ್ಧಪಡಿಸುತ್ತಿವೆ. ಮಹಾರಾಷ್ಟ್ರೀಯರು ರುಚಿಗಾಗಿ ಕೋಕಮ್ಮಿನ ಪೇಯಕ್ಕೆ ಜೀರಿಗೆ ಮತ್ತು ಉಪ್ಪು ಸೇರಿಸುತ್ತಾರೆ.
ಪಶ್ಚಿಮ ಘಟ್ಟ ಕೋಕಂ ಫೌಂಡೇಶನ್ ಈ ಹಿಂದೆ ಪುನರ್ಪುಳಿಯ ಕುರಿತು ರಾಷ್ಟ್ರ ಮಟ್ಟದ ಕಾರ್ಯಾಗಾರಗಳನ್ನು ನಡೆಸಿತ್ತು. ಪರಿಣಾಮವಾಗಿ ಕೋಕಮ್ಮಿನ ಸಿಪ್ಪೆಯಿಂದು ಮಿತ ಪ್ರಮಾಣದಲ್ಲಿ ರಫ್ತು ಆಗುತ್ತಿದೆ. ಪುನರ್ಪುಳಿಯ ಸವಿಸ್ತಾರವಾದ ಪುಸ್ತಕವನ್ನು ಹೊರ ತಂದಿತ್ತು. ಪುನರ್ಪುಳಿಯ ವಿಚಾರದಲ್ಲಿ, ಅದರಲ್ಲೂ ರಫ್ತು ಮಾಡುವ ಉತ್ಪನ್ನಗಳ ಗುಣಮಟ್ಟ ವೃದ್ಧಿಗಾಗಿ ಕೊಯ್ಲೋತ್ತರ ಸಂಸ್ಕರಣೆಯ ಜ್ಞಾನವು ಇನ್ನೂ ಅಭಿವೃದ್ಧಿಯಾಗಬೇಕಿದೆ.
ಬಿಳಿ ಮುರುಗಲು ಗಿಡಗಳನ್ನು ದೊಡ್ಡ ಪ್ರಮಾಣದಲ್ಲಿ ನೆಟ್ಟು ಬೆಳೆಸಿದವರು ತೀರಾ ಕಡಿಮೆ. ಶಿರಸಿಯ ಬೆಂಗಳಿ ವೆಂಕಟೇಶ ಮತ್ತು ಗೋಕರ್ಣದ ವೇದಶ್ರವ ಶರ್ಮ ಬಿಳಿ ಮುರುಗಲನ್ನು ಬೆಳೆಸಿದ ಕೃಷಿಕರು. ಬೆಂಗಳಿ ವೆಂಕಟೇಶರು ಬೆಳೆಯುವುದಲ್ಲದೆ, ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸಿ, ತಮ್ಮದೇ ಮಾರುಕಟ್ಟೆ ಜಾಲವನ್ನು ಹೊಂದಿದ್ದಾರೆ. ಕೆಂಪು ಮುರುಗಲಿನ ತೋಟವನ್ನು ಎಬ್ಬಿಸಿದವರಲ್ಲಿ ಇಬ್ಬರು ಮುಂಚೂಣಿಯಲ್ಲಿದ್ದಾರೆ. ಒಬ್ಬರು ಗೋವಾದ ಶ್ರೀಹರಿ ಕುರಾಡೆ. ಇಪ್ಪತ್ತೈದು ಎಕ್ರೆಯಲ್ಲಿ ಕೋಕಂ ಬೆಳೆದಿದ್ದಾರೆ. ಇನ್ನೊಬ್ಬರು ಪುಣೆ ಸನಿಹದ ವಿಕಾಸ್ ರಾಯ್ಕರ್. ತೆಂಗು, ನೆಲ್ಲಿಗಳ ಮಧ್ಯೆ ಮತ್ತು ಮಾರ್ಗದ ಇಕ್ಕೆಡೆಗಳಲ್ಲಿ ಬೆಳೆಸಿದ್ದಾರೆ.
ಈ ಎಲ್ಲಾ ಸ್ಫೂರ್ತಿಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜರುಗಿದ ಪ್ರಥಮ ಬಾರಿ ಎನ್ನಬಹುದಾದ ಪುನರ್ಪುಳಿ ಹಣ್ಣಿನ ಕಾರ್ಯಾಗಾರವು ಕೃಷಿಕರಲ್ಲಿ ಒಲವನ್ನು ಮೂಡಿಸಲು ಸಹಕಾರಿಯಾಗಿದೆ.
0 comments:
Post a Comment