Tuesday, August 22, 2017

ಹಲಸು ಸಾಕ್ಷರತೆಗೆ ಶ್ರೀಕಾರ ಬರೆದ ಪುಟ್ಟಪ್ಪ


ಹೊಸದಿಗಂತ ’ಮಾಂಬಳ’ ಅಂಕಣ / 31-5-2017

             ಶಿಗ್ಗಾಂವ್ ತಾಲೂಕು ಬಯಲು ಸೀಮೆಯ ಅಂಚಿನಲ್ಲಿದೆ. ಇಲ್ಲಿ ಹಲಸಿನ ಬಳಕೆ, ಕೃಷಿ ತೀರಾ ವಿರಳ. ಬಳಕೆಯ ಅರಿವಿಲ್ಲದೆ ಹಲಸಿನ ಹಣ್ಣುಗಳಿಗೆ ಕೊಳೆಯುವ ದೌರ್ಭಾಗ್ಯ! 'ಹಲಸೆಂದರೆ ಹೊಲಸು' ಎನ್ನುವ ಮನಃಸ್ಥಿತಿ.
             ಇಲ್ಲೊಬ್ಬರು ಹಲಸು ಪ್ರಿಯರಿದ್ದಾರೆ. ಅವರ ಜಮೀನಿನಲ್ಲಿ ಸಾಲು ಸಾಲು ಹಲಸಿನ ಮರಗಳು. ಬರಡು ನೆಲವು ಹಲಸಿಗೆ ಒಗ್ಗಿಕೊಂಡಿದೆ. "ನನ್ನ ಹಲಸಿನ ಕೃಷಿ ನೋಡಿದವರು 'ಇವನಿಗೆ ಹುಚ್ಚು' ಎಂದರು. ಟೀಕೆಯನ್ನು ಸವಾಲಾಗಿ ಸ್ವೀಕರಿಸಿದೆ. ಈಗ ನನ್ನ ಹೊಲದಲ್ಲಿ ಸಾಲು ಸಾಲು ಹಲಸಿನ ಮರಗಳು ಬೆಳೆದಿವೆ," ಎನ್ನುವ ಖುಷಿಯನ್ನು ಹಂಚಿಕೊಳ್ಳುತ್ತಾರೆ ಪುಟ್ಟಪ್ಪ ಕಲ್ಲಪ್ಪ ಕುಂದಗೋಳ. ಇವರು ಶಿಗ್ಗಾಂವ್ ತಾಲೂಕಿನ ರಾಜೀವ ನಗರ ಗ್ರಾಮದವರು. ಇವರ ಹೊಲದ ಸಸ್ಯ ವೈವಿಧ್ಯಗಳಲ್ಲಿ ಹಲಸಿಗೆ ಮಣೆ.
               ಎರಡು ದಶಕದ ಹಿಂದೆ ಇಪ್ಪತ್ತನಾಲ್ಕು ಎಕ್ರೆ ಕೃಷಿ ಭೂಮಿ ಖರೀದಿ. ಐದಾರು ವರುಷ ಭೂಮಿ ಹಡಿಲು ಬಿದ್ದು ಕೃಷಿ ಕಾಯಕಗಳು ಸೊರಗಿದ್ದುವು. ಹದಿನೈದು ವರುಷದ ಹಿಂದೆ ಜಿ-9 ತಳಿಯ ಬಾಳೆ ಕೃಷಿ ಮೂಲಕ ಕೃಷಿಗೆ ಬೀಸುಹೆಜ್ಜೆ. ಈ ಭಾಗದಲ್ಲಿ 'ಬಾಳೆ ಬೆಳೆದವನ ಬಾಳು ಹಾಳು' ಎನ್ನುವುದು ನಾಣ್ಣುಡಿ. ಈ ಮನಃಸ್ಥಿತಿಯ ಮಧ್ಯೆ ಪುಟ್ಟಪ್ಪ ಎಂಟು ಎಕ್ರೆಯಲ್ಲಿ ಬಾಳೆ ಬೆಳೆದು ಆಡಿಕೊಳ್ಳುವವರ ಬಾಯಿ ಮುಚ್ಚಿಸಿದ್ದರು!
                   ಆರಂಭದಲ್ಲಿ ಅನುಭವದ ಕೊರತೆಯಿಂದ ಶ್ರಮ ಕೆಲಸಗಳು ಹಗುರವಾಗಲಿಲ್ಲ. ನಿರ್ವಹಣೆಯ ಸಮಸ್ಯೆಯಿಂದ ನಿರೀಕ್ಷಿತ ಆದಾಯ ಪಡೆಯಲಾಗಲಿಲ್ಲ.  ಬಾವಿಯಿಂದ ಸಣ್ಣ ಕಾಲುವೆಗಳ ಮೂಲಕ ನೀರುಣಿಸುವ ಸಾಂಪ್ರದಾಯಿಕ ಪದ್ಧತಿಯ ರೂಢನೆ. ತುಂಬಾ ನಷ್ಟವಾಗದೆ ಬಾಳೆ ಕೃಷಿ ಸ್ವಲ್ಪ ಮಟ್ಟಿನ ಬದುಕನ್ನು ಆಧರಿಸಿತು.
                  ಹಿಂದೊಮ್ಮೆ ಶಿಗ್ಗಾಂವ್ ಸನಿಹದ ಹಾದಿಮನೆ ಹರಿಕೊಂಡರ ಮನೆಗೆ ಪುಟ್ಟಪ್ಪ ಭೇಟಿ ನೀಡಿದ್ದರು ಅವರ ಜಮೀನಿನಲ್ಲಿ ಮೂರು ದಶಕ ಪ್ರಾಯದ ಹಲಸಿನ ಮರವು ಸೆಳೆಯಿತು. 'ಮೂರಡಿ ವ್ಯಾಸ, ನೂರಡಿ ಎತ್ತರ' ಬೆಳೆದ ಹಲಸು ಪುಟ್ಟಪ್ಪರ ಮನಸ್ಸನ್ನು ಆವರಿಸಿತು. ಮೇಲ್ನೋಟಕ್ಕೆ ಲೆಕ್ಕಹಾಕಿದಾಗ ಮರದ ಬೆಲೆ ಎರಡು ಲಕ್ಷ ರೂಪಾಯಿ! ಅದೇ ಸಮಯಕ್ಕೆ ಹಲಸಿನ ಕುರಿತು ಪತ್ರಿಕೆಯಲ್ಲಿ ಬಂದ ಲೇಖನವು ಪುಟ್ಟಪ್ಪರ ಕೃಷಿ ಬದುಕಿಗೆ ಹೊಸ ತಿರುವು ನೀಡಿತು.
                ಹಲಸಿನ ಗಿಡವನ್ನು ನರ್ಸರಿಯಿಂದ ತಂದು ನೆಡುವುದರಲ್ಲಿ ನನಗೆ ಆಸಕ್ತಿಯಿರಲಿಲ್ಲ. ಹರಿಕೊಂಡರಲ್ಲಿಂದ ಹಣ್ಣನ್ನು ತಂದು ಅದರ ಬೀಜದಿಂದ ನಾಲ್ಕುನೂರ ಐವತ್ತು ಗಿಡಗಳನ್ನು ತಯಾರಿಸಿದೆ. ಗಿಡಳು ಒಂದಡಿ ಎತ್ತರಕ್ಕೆ ಬೆಳೆದಾಗ ನಾಟಿ ಮಾಡಿದೆ. ಎಂದು ನೆನಪು ಮಾಡಿಕೊಂಡರು. ಗಿಡದಿಂದ ಗಿಡಕ್ಕೆ ಮತ್ತು ಸಾಲಿಂದ ಸಾಲಿಗೆ ಮೂವತ್ತಡಿ ಅಂತರದಲ್ಲಿ ಗಿಡಗಳ ನಾಟಿ.
               ಒಂದು ದಿನ ಹಲಸಿನ ಗುಂಗಿನಲ್ಲೇ ಇದ್ದ ಪುಟ್ಟಪ್ಪರಿಗೊಂದು ಆಘಾತದ ಸುದ್ದಿ! ತಾನು ಪ್ರೀತಿಯಿಟ್ಟು ನೆಟ್ಟ ಹಲಸಿನ ಗಿಡಗಳೆಲ್ಲಾ ಬೆಂಕಿ ಆಕಸ್ಮಿಕದಿಂದ ಭಸ್ಮವಾಗಿದ್ದುವು. ಜತೆಗೆ ಹಲಸಿನ ಮಧ್ಯೆ ನಾಟಿ ಮಾಡಿದ ನಾಲ್ಕುನೂರಕ್ಕೂ ಮಿಕ್ಕಿದ ಮಾವಿನ ಗಿಡಗಳು ಕೂಡಾ. "ಕೆಲವು ದಿವಸ ಅಧೀರನಾಗಿದ್ದೆ. ಹತ್ತು ಹಲಸಿನ ಗಿಡಗಳು ಮತ್ತು ಅರುವತ್ತು ಮಾವಿನ ಗಿಡಗಳು ಕರಟಿದರೂ ಮತ್ತೆ ಚಿಗುರಿದ್ದುವು," ಎನ್ನುತ್ತಾರೆ.
                 ಪುನಃ ವಿವಿಧ ತಳಿಯ ಹಲಸು, ಮಾವಿನ ಗಿಡಗಳ ನಾಟಿ. ಅದೃಷ್ಟಕ್ಕೆ ಕೊರೆದ ಕೊಳವೆ ಬಾವಿಯಲ್ಲಿ ಸಮೃದ್ಧ ನೀರು. ಕೃಷಿಗೆ ಹನಿ ನೀರಾವರಿ ಅಳವಡಿಕೆ. ನಾಲ್ಕೇ ವರುಷದಲ್ಲಿ ಹಲಸಿನ ಗಿಡಗಳಲ್ಲಿ ಇಳುವರಿ. ಕಾಯಿಯ ಭಾರಕ್ಕೆ ಎಳೆಯ ಮರಗಳು ಬಿದ್ದು ಮತ್ತೆ ಚಿಗುರಿದ್ದುವು. ’ನಾವು ಅವುಗಳನ್ನು ಪ್ರೀತಿಸಿದರೆ ಅವುಗಳು ಕೂಡಾ ನಮ್ಮನ್ನು ಪ್ರೀತಿಸುತ್ತವೆ” ಎನ್ನುವ ಪುಟ್ಟಪ್ಪ, "ಹಲಸಿನ ಹಣ್ಣಿನ ಮಾರಾಟದಿಂದ ಬಂದ ಆದಾಯವೇ ಅರುವತ್ತು ಸಾವಿರ ರೂಪಾಯಿಯಾಗಬಹುದು" ಎನ್ನುವ ಲೆಕ್ಕಾಚಾರ ಮುಂದಿಡುತ್ತಾರೆ.
                ಹುಬ್ಬಳ್ಳಿಯಲ್ಲಿರುವ ಅಳಿಯನ ಕಿರಾಣಿ ಅಂಗಡಿಯ ಪಕ್ಕದಲ್ಲಿ ಹಲಸಿನ ಹಣ್ಣನ್ನು ಮಾರಾಟ ಮಾಡಿದ್ದರು. ಉತ್ಕೃಷ್ಟ ತಳಿಯ ಹಲಸಿನ ರುಚಿಗೆ ಆಕರ್ಶಿತರಾದವರು ಅಧಿಕ. ತಂದ ಹಲಸಿನ ಹಣ್ಣೆಲ್ಲಾ ಮಾರಿ ಹೋದಾಗ ಸಂತೃಪ್ತಿ. ಅದುವರೆಗೆ ಹಲಸಿನ ಮೋಪಿನ ಕುರಿತು ಯೋಚಿಸುತ್ತಿದ್ದ ಪುಟ್ಟಪ್ಪರ ಮೈಂಡ್ ಸೆಟ್ ಬದಲಾಯಿತು!
               ಮಹಾರಾಷ್ಟ್ರದ ಹಲಸು ಉದ್ದಿಮೆದಾರರಿಂದ ಎಳೆ ಕಾಯಿಗೆ (ಗುಜ್ಜೆ) ಬೇಡಿಕೆ ಬಂದಾಗ ಪುಟ್ಟಪ್ಪ ಖುಷ್. ಆಸುಪಾಸಿನ ರೈತರಿಂದಲೂ ಎಳೆಕಾಯಿ ಖರೀದಿಸಿ ಬೇಡಿಕೆಯನ್ನು ಪೂರೈಸುವ ಯೋಚನೆಯಿದೆ. ಈ ಕುರಿತು ಮಾತುಕತೆ ನಡೆಯುತ್ತಿದೆ. ಎಲ್ಲವೂ ಸರಿಹೋದರೆ ಈ ಸೀಸನ್ನಿನಲ್ಲಿ ಯೋಚನೆಯು ಸಾಕಾರವಾಗಲಿದೆ. "ರೈತರನ್ನು ಹೊಸತನಕ್ಕೆ ಒಡ್ಡುವುದು ಸುಲಭದ ಮಾತಲ್ಲ. ಮನವೊಲಿಸುವ ಕೆಲಸ ದೊಡ್ಡದು," ಎನ್ನುತ್ತಾರೆ. ಎರಡು ವರುಷದ ಹಿಂದೆ ಗಿಡಗಳನ್ನು ಪ್ರೂನಿಂಗ್ ಮಾಡಿದ್ದಾರೆ. ಇದರಿಂದಾಗಿ ಹಿಂದಿನ ವರುಷ ಇಳುವರಿ ಕಡಿಮೆ. ಈ ವರುಷವೂ ನಿರೀಕ್ಷಿತ ಫಸಲು ಬಂದಿಲ್ಲ. ತಾಲೂಕಿನಲ್ಲಿ 'ಹಲಸಿನ ಸಾಕ್ಷರತೆ'ಗೆ ಶ್ರೀಕಾರ.
                 ಕಳೆದ ವರುಷ ಅಡಿಕೆ ಗಿಡಗಳ ಮಧ್ಯೆ ಮತ್ತು ಎರಡು ಸಾವಿರ ಹಲಸಿನ ಗಿಡಗಳ ನಾಟಿ! ನೀರು, ಗೊಬ್ಬರ ಕೊಟ್ಟು ಆರೈಕೆ. ಈ ಬಾರಿ ಬೆಂಗಳೂರಿನ ತೂಬುಗೆರೆ, ಸಖರಾಯಪಟ್ಟಣದಿಂದ ರುಚಿಕರವಾದ ಹಣ್ಣನ್ನು ತಂದು ಅದರ ಬೀಜದಿಂದ ಗಿಡ ತಯಾರಿ. ಬಹುಶಃ ಇನ್ನು ಮೂರೇ ವರುಷದಲ್ಲಿ ಹಣ್ಣು ಸಿಗಬಹುದು. ಹಲಸಿನ ತೋಟ ಮಾಡುವವರು ಹತ್ತಡಿ ಅಂತರದಲ್ಲಿ ನೆಡಬಹುದು, ಎನ್ನುವುದು ಇವರ ಅನುಭವ.
              ಪುಟ್ಟಪ್ಪರದು ಬಹುವಿಧದ ಆಸಕ್ತಿ. ಅಡಿಕೆ, ಹಲಸಿನ ಮಧ್ಯೆ ಶ್ರೀಗಂಧದ ಗಿಡಗಳನ್ನು ನಾಟಿ ಮಾಡಿದ್ದಾರೆ. ಬೇಲಿ ಬದಿಯಲ್ಲಿ ಸಂಪಿಗೆ, ಸುವಾಸಿತ ಕರಿಬೇವಿನ ಗಿಡಗಳು, ನುಗ್ಗೆ ಗಿಡಗಳು, ಚಿಕ್ಕು.. ಹೀಗೆ ವಿವಿಧ ವೈವಿಧ್ಯ ಬೆಳೆಗಳಿವೆ. "ಈ ವರುಷ ಎರಡು ನುಗ್ಗೆಗೆ ಹತ್ತು ರೂಪಾಯಿಯಂತೆ ಮಾರಾಟ ಮಾಡಿದ್ದೇನೆ. ಚಿಕ್ಕಿನ ಹಣ್ಣಿನ ಮಾರಾಟದಿಂದ ಸ್ವಲ್ಪಾಂಶ ಆದಾಯ. ಸಾವಯವ ಗೊಬ್ಬರ ತಯಾರಿಸಲು ಇಪ್ಪತ್ತು ಬರಡು ಎಮ್ಮೆಗಳನ್ನು ಆರೈಕೆ ಮಾಡುತ್ತಿದ್ದೇನೆ. ಜತೆಗೆ ಐವತ್ತು ಕುರಿಗಳಿವೆ,"ಎನ್ನುವ ಮಾಹಿತಿ ನೀಡುವ ಪುಟ್ಟಪ್ಪರಿಗೆ ತನ್ನ ಹೊಲಕ್ಕೆ ತನ್ನದೇ ಗೊಬ್ಬರವಾಗಬೇಕೆನ್ನುವ ಬದ್ಧತೆ.
    .            "ಮಣ್ಣಿನಲ್ಲಿ ಪೊಟೇಶ್ ಅಂಶ ಕಡಿಮೆಯಿದ್ದಲ್ಲಿ ಹಲಸಿನ ಹಣ್ಣಿಗೆ ರುಚಿ ಕಡಿಮೆ. ಬಿಸಿಲು ಚೆನ್ನಾಗಿ ಬೀಳುವಂತಿರಬೇಕು. ಮೊದಲ ವರುಷ ನೀರು ಉಣಿಸಿದರೆ ಸಾಕು," ಎನ್ನುವ ಪುಟ್ಟಪ್ಪರು, ಇನ್ನೆರಡು ವರುಷದಲ್ಲಿ ಸ್ವಂತದ್ದಾದ ಹಲಸು ಸಂಸ್ಕರಣಾ ಘಟಕವನ್ನು ಸ್ಥಾಪಿಸುವ ಯೋಚನೆಯನ್ನು ಮಾಡಿದ್ದಾರೆ. ಈ ಕುರಿತ ಯೋಜನೆಯು ರೂಪುಗೊಳ್ಳುತ್ತಿದೆ.

0 comments:

Post a Comment