Saturday, June 5, 2010

ಅಂಬಲಿ ಹಲಸಿಗೆ ಮಾನವರ್ಧನೆ

ಈಗ ಹಲಸಿನ ಋತು. ಹಲಸಿನ ಹಪ್ಪಳವನ್ನು ಮಾಡುವ ಹಳ್ಳಿ ಸಡಗರಕ್ಕೆ ಇಳಿಲೆಕ್ಕವಾದರೂ, ಕೆಲವು ಮನೆಗಳಲ್ಲಿ ಈಗಲೂ ಅದೇ ಸಂಭ್ರಮ. ಈ ಸಾರಿಯ ಅಕಾಲ ಮಳೆಯಿಂದಾಗಿ ಹಪ್ಪಳ ಸಡಗರಕ್ಕೆ ಮಸುಕು. ಕಳೆದ ವಾರ ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಹಲಸಿನ ರಾಷ್ಟ್ರೀಯ ಕಾರ್ಯಾಗಾರ ಏರ್ಪಡಿಸಿತ್ತು. ಹಲಸನ್ನು ಕೂಡಾ ರಾಷ್ಟ್ರೀಯ ಮಟ್ಟಕ್ಕೇರಿಸುವ ವಿವಿಯ ಪ್ರಯತ್ನ ಶ್ಲಾಘನೀಯ.

ಹಲಸು ಉದ್ಯಮ ಬೆಳೆಯುತ್ತಿದೆ. ಸೊಳೆ ಮಾರಾಟದಿಂದ ತೊಡಗಿ, ವಿವಿಧ ಮೌಲ್ಯವರ್ಧಿತ ಉತ್ಪನ್ನಗಳಿಗೆ ಸಾಗರದಾಚೆಗೂ ಹಲಸಿನ ರುಚಿ ಗೊತ್ತಿದ್ದ ಗ್ರಾಹಕರಿದ್ದಾರೆ. ಹಪ್ಪಳ, ಚಿಪ್ಸ್ಗಳಿಗೆ ಈ ಋತುವಿನಲ್ಲಿ ಬೇಡಿಕೆ. ಕೆಲವರು ತಮ್ಮ ಕೈಗುಣದಿಂದಾಗಿ ಹುಡುಕಿ ಬರುವ ಗ್ರ್ರಾಹಕರನ್ನು ಸೃಷ್ಟಿಸಿದ್ದಾರೆ ! ಅಂತಹವರಲ್ಲಿ ತೀರ್ಥಹಳ್ಳಿಯ ರಮೇಶ್ ಒಬ್ಬರು.

ತೀರ್ಥಹಳ್ಳಿಯ ಟಿಎಪಿಸಿಎಂಎಸ್ ಬಳಿ ರಮೇಶರಿಗೆ ಚಿಕ್ಕ ಕ್ಯಾಂಟೀನ್. ಗಿರಾಕಿಗಳು ಇಲ್ಲದೆ ಇದ್ದಾಗಲೂ ಇವರಿಗೆ ಕೈ ತುಂಬಾ ಕೆಲಸ. ಮಧ್ಯಾಹ್ನ ಊಟದ ಬಿಡುವಿನಲ್ಲಿ ರಮೇಶ್ ನಾಲ್ಕೈದು ಹಲಸಿನ ಕಾಯಿ ತಂದು, ಮನೆಯಲ್ಲಿ ತುಂಡರಿಸಿಕೊಳ್ಳುತ್ತಾರೆ. ಒಂದು ಕಾಯನ್ನು ಕ್ಯಾಂಟೀನಿಗೆ ತರುತ್ತಾರೆ. ಬಿಡುವಿದ್ದಾಗ ಸೊಳೆ ಆಯುತ್ತಾರೆ. ಮನೆಯಲ್ಲಿ ಮಡದಿ ರಾಧಿಕಾರಿಗೂ ಇದೇ ಕೆಲಸ. ರಾತ್ರಿ ಹತ್ತರ ನಂತರ ಚಿಪ್ಸ್ ತಯಾರಿ.

ದಿನಕ್ಕೆ ಐದು ಕಿಲೋ ಮಾತ್ರ ಚಿಪ್ಸನ್ನು ತಯಾರಿಸುತ್ತಾರೆ. ಅಂದಂದಿನ ಉತ್ಪನ್ನ ಅಂದದೇ ಖಾಲಿ! ಹೆಚ್ಚು ಬೇಡಿಕೆಯಿದ್ದರೂ ತಯಾರಿಯ ಪ್ರಮಾಣದಲ್ಲಿ ವ್ಯತ್ಯಾಸವಾಗುವುದಿಲ್ಲ. 'ಸದ್ಯದ ಸ್ಥಿತಿಯಲ್ಲಿ ನಮ್ಮಿಂದಾಗುವುದು ಇಷ್ಟೇ. ಇದು ಸಹಾಯಕರನ್ನು ನಂಬಿ ಮಾಡುವ ಕೆಲಸವಲ್ಲ' ಎನ್ನುತ್ತಾರೆ ರಮೇಶ್.

ಹಲಸಿನ ಕಾಯಿ ತರುವುದು ಪರಿಚಯದ ನಾಲ್ಕೈದು ಮಂದಿಯ ಹಿತ್ತಿಲಿಂದ. ಒಂದಕ್ಕೆ ಹತ್ತು ರೂಪಾಯಿ ವರೆಗೂ ಪಾವತಿ. 'ಕಾಯಿ ಖಾಲಿ ಮಾಡಿ ಮಾರಾಯ್ರೆ. ಫ್ರೀಯಾಗಿ ಕೊಂಡೋಗಿ' ಎಂದು ಒತ್ತಾಯಿಸುವವರೂ ಇದ್ದಾರೆ. 'ಉಚಿತ ಅಂದರೆ ಒಂದೆರಡು ದಿನ ಒಯ್ಯಬಹುದು. ನಂತರ ಕಾಯಿ ಕೀಳುವಾಗೆಲ್ಲಾ ಸೌಜನ್ಯಕ್ಕಾಗಿಯಾದರೂ ಕಾಲೋ, ಆರ್ಧ ಕಿಲೋ ಚಿಪ್ಸ್ ಉಡುಗೊರೆ ಕೊಡಬೇಕು. ಕಾಲು ಕಿಲೋಗೆ 30 ರೂಪಾಯಿ ವೆಚ್ಚವಾಗುತ್ತದೆ. ಹೀಗೆ ನಷ್ಟ ಮಾಡಿಕೊಳ್ಳುವುದಕ್ಕಿಂತ ಕಾಯಿಗೆ ಹಣ ಕೊಟ್ಟೇ ತರುವುದು ಒಳ್ಳೆದಲ್ವಾ.'

ಚಿಪ್ಸ್ಗೆ ಅಂಬಲಿ ಹಲಸೇ ಬೇಕು. ಬಕ್ಕೆಯಾದರೆ ಚಿಪ್ಸ್ ಗಡುಸಾಗುತ್ತದೆ. ಕೊಯಿದಂದೇ ಚಿಪ್ಸ್ ಮಾಡಬೇಕು. ಹುರಿಯಲು ತೆಂಗಿನೆಣ್ಣೆ. ಹದ ಬಲಿತ ನಾಲ್ಕು ಕಾಯಿಂದ ಐದು ಕಿಲೋ ತಯಾರಾಗುತ್ತದೆ. ''ಚಿಪ್ಸ್ ತಿನ್ನುವಾಗ ಹೆಚ್ಚು ಗಟ್ಟಿಯಾಗಲೂ ಬಾರದು, ಮೆತ್ತಗಾಗಲೂ ಬಾರದು. ಗರಿಗರಿ ಇರಬೇಕು, ಜನ ಇದನ್ನು ಹೆಚ್ಚು ಇಷ್ಟ ಪಡುತ್ತಾರೆ'' ರಾಧಿಕಾ ಹೇಳುತ್ತಾರೆ. ತೆಂಗಿನೆಣ್ಣೆಯಲ್ಲಿ ಹುರಿದ ಚಿಪ್ಸ್ ಒಂದೂವರೆ ತಿಂಗಳು ಉಳಿಯುತ್ತದಂತೆ.

''ಗುಣಮಟ್ಟವೆಂಬುದು ದೊಡ್ಡ 'ಹೇಳಲಾರದ' ವಿದ್ಯೆಯಲ್ಲ. ಬೆಂಕಿ ಹದವಾಗಿರಬೇಕು. ಎಣ್ಣೆಯಲ್ಲಿರುವ ಸೊಳೆಯನ್ನು ಆಗಾಗ್ಗೆ ಅಲ್ಲಾಡಿಸುತ್ತಾ ಇರಬೇಕು. ಉಪ್ಪುನೀರು ಹಾಕಿ, ಸೌಟಿನಲ್ಲಿ ತಿರುಗಿಸದಿದ್ದರೆ ಚಿಪ್ಸ್ ಗಟ್ಟಿಯಾಗುತ್ತದೆ. ತುಂಬಾ ನಿಗಾ ಬೇಕು. ಮಾಡುತ್ತಾ ಮಾಡುತ್ತಾ ಪಾಕ ಕೈವಶವಾಗುತ್ತದೆ'' ದನಗೂಡಿಸಿದರು ರಮೇಶ್.

ಹಲಸಿನ ಸೊಳೆಯನ್ನು ಆಯ್ದು ಕತ್ತರಿಸುವಾಗ ಒಂದೇ ಆಕಾರ, ಉದ್ದಳತೆ ಬರುವಂತೆ ಎಚ್ಚರ. ಹುರಿದಿಟ್ಟ ಚಿಪ್ಸ್ ನೋಡಲು ಒಂದೇ ಥರ. ಗುಣಮಟ್ಟದ ಜತೆ ಇದೂ ಗಿರಾಕಿಗಳನ್ನು ಆಕರ್ಷಿಸುತ್ತದೆ.

ಕಿಲೋಗೆ ನೂರಿಪ್ಪತ್ತು ರೂಪಾಯಿ ಬೆಲೆ. ಕಚ್ಚಾವಸ್ತುಗಳ ದರ ಏರಿದಾಗ ನೂರ ಐವತ್ತರ ತನಕವೂ ಆದದ್ದಿದೆ. ಕಾಲು, ಅರ್ಧ ಮತ್ತು ಒಂದು ಕಿಲೋದ ಪ್ಯಾಕೆಟ್. ಸುಮಾರು 15-20 ಮಂದಿ ಖಾಯಂ ಗಿರಾಕಿಗಳು. ಬಹುತೇಕ ಸಾರಸ್ವತರು. ಅವರು ತಾವೂ ಬಳಸುವುದಲ್ಲದೆ ದೂರದ ಬಂಧುಗಳಿಗೆ ಚಿಪ್ಸ್ನ್ನು ಕಳುಹಿಸುತ್ತಾರಂತೆ. ಅದಕ್ಕಾಗಿ ಮುಂದಾಗಿ ಆರ್ಡರ್ ಕೊಟ್ಟು ಮಾಡಿಸುತ್ತಾರೆ. ಕೆಲವೊಮ್ಮೆ ಒಂದು ವಾರದ ಮುಂಚೆ ಚಿಪ್ಸನ್ನು ಆರ್ಡರ್ ಕೊಡಬೇಕಾಗುತ್ತದೆ! 'ತಕ್ಷಣಕ್ಕಾಗಿ ಅಂತ ಒಂದು ಕಿಲೋ ಸ್ಟಾಕ್ ಇರುತ್ತದೆ' ಗುಟ್ಟಿನಲ್ಲಿ ಹೇಳಿದರು.

ರಮೇಶ-ರಾಧಿಕಾರ 'ಎನ್. ಆರ್. ಹೋಮ್ ಪ್ರಾಡಕ್ತ್ಸ್'ನ ಚಿಪ್ಸ್ ದೂರದ ಮುಂಬಯಿ, ಹೈದರಾಬಾದ್, ದೆಹಲಿ, ದುಬಾಯಿ ಸೇರುತ್ತದೆ. ವಾರಕ್ಕೊಮ್ಮೆ ಸ್ಥಳೀಯ ಬೇಕರಿಗೆ ಐದು ಕಿಲೋ ಪೂರೈಕೆ. ಮಾರ್ಚಿನಿಂದ ಜೂನ್ ತನಕ ಬಿಡುವಿಲ್ಲದ ಕೈಕೆಲಸ.
ಇಪ್ಪತ್ಮೂರು ವರುಷಗಳಿಂದ ಕ್ಯಾಂಟೀನ್ ವೃತ್ತಿ. ತಿಂಡಿಯ ರುಚಿಗೆ ಹುಡುಕಿ ಬರುವ ಗಿರಾಕಿಗಳು. ಚಿಪ್ಸ್ ಉದ್ಯಮಕ್ಕೆ ಹತ್ತು ವರುಷವಾಗಿದೆ. 'ಮುಖ್ಯ ವೃತ್ತಿ ಕ್ಯಾಂಟೀನ್. ಇದು ಸೈಡ್ ಐಟಂ ಅಷ್ಟೇ' ಎಂದರೂ ನಾಲ್ಕು ತಿಂಗಳ ಕಾಲ ಇವರನ್ನು ಹಲಸು ಆಧರಿಸುತ್ತದೆ. ಏನಿಲ್ಲವೆಂದರೂ ಅರ್ಧ ಲಕ್ಷ ಗಳಿಸಿಕೊಡುತ್ತದೆ.


'ಹಲಸಿನ ಉತ್ಪನ್ನಗಳಿಗೆ ಅವಕಾಶಗಳು ಇವೆ. ಮಾಡುವ ಜನರಿಲ್ಲ ಅಷ್ಟೇ' ಜತೆಗಿದ್ದ ಸುಳುಗೋಡಿನ ಉಮೇಶ್ ವಸ್ತುಸ್ಥಿತಿಯನ್ನು ಹೇಳುತ್ತಾರೆ. ಬಿದ್ದು ಕೊಳೆತು ಮಣ್ಣಾಗಿ ಹೋಗುವ ಅಂಬಲಿ ಹಲಸು ಹೇಗೆ ತನ್ನ ಮಾನ ಉಳಿಸಿಕೊಳ್ಳಬಹುದು ಎಂಬುದಕ್ಕೆ ಈ ಉದ್ಯಮ ಚಿಕ್ಕ ಉದಾಹರಣೆ.

1 comments:

Saaranga said...

ಪೆರಾಜೆಯವರೇ,

ಅತಿ ಉತ್ತಮ ಲೇಖನ. ಒಂದು ಚಿಕ್ಕ ಸಂಶಯ. "ಅಂಬಲಿ" ಹಲಸು ಅಂದರೆ "ತುಳುವೆ" ಹಲಸೇ?

ಧನ್ಯವಾದಗಳು,
ಸಾರಂಗ (ಶಿವಪ್ರಕಾಶ್)

Post a Comment