Wednesday, June 9, 2010

ನಾಗರಾಜ್ ಕೈಹಿಡಿದ ಕಾಕಡ

ತುಮಕೂರು ಜಿಲ್ಲೆಯ ತೋವಿನಕೆರೆಯ ನಾಗನಾಯಕನಪಾಳ್ಯದ ನಾಗರಾಜ್ ಮೂಲತಃ ತೆಂಗು ಕೃಷಿಕರು. ನಾಲ್ಕೆಕರೆಯಲ್ಲಿ ಮೂರೂವರೆ ಎಕರೆ ತೆಂಗಿನ ತೋಟ. ಚಳಿಗಾಲದ ನಂತರ ಮುಂಗಾರು ತನಕ ಗಿಡಗಳಿಗೆ ಬಿಸಿಲ ಸ್ನಾನ! ಕುಡಿ ನೀರಿಗೂ ತತ್ವಾರ. ಇಳುವರಿ ತೀರಾ ಕಡಿಮೆ.

ಪರ್ಯಾಯ ಕೃಷಿಯೊಂದರ ಅಗತ್ಯ ಎದುರಾದಾಗ ಮಲ್ಲಿಗೆ ಕೃಷಿಯತ್ತ (ಕಾಕಡ ಹೂ) ಗಮನ. ಸುತ್ತುಮುತ್ತಲಿನ ಬಹುತೇಕ ಮಂದಿ ಕಾಕಡ ಬೆಳೆಯುತ್ತಿದ್ದರು. ಹಾಗಾಗಿ ಅರ್ಧ ಎಕರೆಯಲ್ಲಿ ಕಾಕಡ ಹೂ ಕೃಷಿ ಆರಂಭ. ಪ್ರಸ್ತುತ ನಾಗರಾಜ್ ಕುಟುಂಬವನ್ನು ಕಾಕಡವೊಂದೇ ಆಧರಿಸುತ್ತದೆ. ವರುಷಕ್ಕೆ ಒಂದೂವರೆ ಲಕ್ಷಕ್ಕೂ ಮಿಕ್ಕಿ ರೊಕ್ಕವನ್ನು ಕೈಗಿಡುತ್ತಿದೆ!

ಅರ್ಧ ಎಕರೆಯಲ್ಲಿ ನಾಲ್ಕು ವರುಷ ಪ್ರಾಯದ ಮುನ್ನೂರು ಕಾಕಡ ಗಿಡಗಳಿವೆ. ಕೊಳವೆಬಾವಿಯ ನೀರಿನಿಂದ ನೀರಾವರಿ. ಹಾಯಿ ಪದ್ಧತಿ ಮೂಲಕ ಹತ್ತು ದಿನಕ್ಕೊಮ್ಮೆ ನೀರುಣಿಕೆ. ವರುಷಕ್ಕೊಮ್ಮೆ ಹಟ್ಟಿಗೊಬ್ಬರದ ಜತೆ ರಾಸಾಯನಿಕ ಗೊಬ್ಬರ ಉಣಿಕೆ. 'ಮಳೆಗಾಲದಲ್ಲಿ ಹುಳ ಬರುತ್ತೆ. ಹಾಗಾಗಿ ತಿಂಗಳಿಗೊಮ್ಮೆ ವಿಷ ಸಿಂಪಡಣೆ ಅನಿವಾರ್ಯ' ಎನ್ನುವ ನಾಗರಾಜ್, ಉಳಿದ ಋತುವಿನಲ್ಲಿ ಹುಳಗಳ ನಿಯಂತ್ರಣಕ್ಕಾಗಿ ಕಾಕಡ ಹೂವಿನ ಎಲೆಗಳ ಮೇಲೆ ಹೊಗೆಸೊಪ್ಪು ಹುಡಿಗಳನ್ನು ಉದುರಿಸುತ್ತಾರೆ. ಇವುಗಳ ಘಾಟು ವಾಸನೆಗೆ ಹುಳಗಳು ಅಷ್ಟಾಗಿ ಬರುವುದಿಲ್ಲ ಎನ್ನುತ್ತಾರೆ.

ಮೊದಲ ವರುಷ ಕಾಕಡ ಗಿಡಗಳ ನಾಟಿ. ಅದರ ಮಧ್ಯದಲ್ಲಿ ಬದನೆ ಬೆಳೆದರು. 'ಕಾಕಡಕ್ಕೆ ಹೂಡಿದ ಬಂಡವಾಳ ಬದನೆ ಭರಿಸಿತು' ಎನ್ನುತ್ತಾರೆ. ಎರಡನೇ ವರುಷದಿಂದ ಮೊಗ್ಗು ಬಿರಿಯಲು ಶುರು. ಮೂರನೇ ವರುಷದಿಂದ ಇಳುವರಿ. ಕಾಕಡಕ್ಕೆ ನೆರಳು ಬೀಳುವ ಪ್ರದೇಶವಾದರೆ ಗಿಡ ಮತ್ತು ಹೂ ಚೆನ್ನಾಗಿ ಬರುವುದಿಲ್ಲ.

ಬೆಳಿಗ್ಗೆ ಏಳು ಗಂಟೆಗೆ ನಾಗರಾಜ್ ದಂಪತಿ ಹೂ ತೋಟದಲ್ಲಿರುತ್ತಾರೆ. ಹನ್ನೊಂದುವರೆಗೆಲ್ಲಾ ಹೂವನ್ನು ಆಯ್ದು ತೋವಿನಕೆರೆಯ ಕಾಕಡ ಮಾರುಕಟ್ಟೆಗೆ ನೀಡಿಕೆ. 'ದೂರದ ತುಮಕೂರಿಗೆ ಬೆಳ್ಳಂಬೆಳಿಗ್ಗೆ ಹೂ ಒಯ್ದರೆ ದರ ಚೆನ್ನಾಗಿ ಬರುತ್ತದೆ. ಬಿಸಿಲೇರಿದಂತೆ ಸುತ್ತಲಿನ ಹಳ್ಳಿಗಳಿಂದ ಹೂ ಬರಲಾರಂಭಿಸುತ್ತಿದ್ದಂತೆ ದರ ಇಳಿಯುತ್ತದೆ. ಈ ಏರಿಳಿಕೆಯನ್ನು ಸ್ಥಳದಲ್ಲಿದ್ದುಕೊಂಡೇ ಗಮನಿಸಬೇಕಾಗುತ್ತದೆ. ಹಳ್ಳಿಯ ನಮಗದು ತ್ರಾಸ. ಹಾಗಾಗಿ ಲೋಕಲ್ ಮಾರ್ಕೆಟ್ ಹೆಚ್ಚು ಸೂಕ್ತ' ಎಂದು ಅನುಭವ ಹಂಚಿಕೊಳ್ಳುತ್ತಾರೆ.

ಒಂದೂವರೆ ಕಿಲೋ ಕಾಕಡ ಹೂವೆಂದರೆ ಮೂರೂವರೆ ಸೇರು. ಸೇರು ಲೆಕ್ಕದಲ್ಲಿ ಮೊಗ್ಗನ್ನು ಖರೀದಿ ಮಾಡುತ್ತಿದ್ದ ದಿನಗಳಿದ್ದುವು. ಆದರೆ ಮಾರುಕಟ್ಟೆಯಲ್ಲಿ ಕಿಲೋ ಲೆಕ್ಕದಲ್ಲಿ ಮಾರಾಟ. ಕಿಲೋಗೆ 60ರಿಂದ 70 ರೂಪಾಯಿ ದರ. ಆಯುಧ ಪೂಜೆಯ ಸಮಯದಲ್ಲಿ ಕಿಲೋಗೆ ನಾಲ್ಕುನೂರು ರೂಪಾಯಿ ಆದುದೂ ಇದೆ! ಮಕರ ಸಂಕ್ರಾಂತಿಯ ನಂತರ ದರ ಕಡಿಮೆಯಾಗುತ್ತದೆ.

'ಸೀಸನ್ ಸಮಯದಲ್ಲಿ ಒಂದು ದಿವಸಕ್ಕೆ ಹದಿನೆಂಟು ಕಿಲೋದವರೆಗೂ ಮಾರುಕಟ್ಟೆಗೆ ಕೊಟ್ಟಿದ್ದೀವಿ. ಕಳೆದ ಜನವರಿ-ಮಾರ್ಚ್ ತಿಂಗಳುಗಳಲ್ಲಿ ಮೂವತ್ತು ಸಾವಿರ ಹೂ ಗಳಿಸಿಕೊಟ್ಟಿದೆ' ಎಂಬ ಸಂತಸ ಹಂಚಿಕೊಳ್ಳುತ್ತಾರೆ ಸುಧಾ ನಾಗರಾಜ್. ಇಂತಹ ಸಮಯದಲ್ಲಿ ಹೂವನ್ನು ಆಯಲು ಹೆಚ್ಚು ಮಂದಿ ಸಹಾಯಕರು ಬೇಕಾಗುತ್ತದೆ.

ತೋವಿನಕೆರೆ ಮಾರುಕಟ್ಟೆ ಮಧ್ಯಾಹ್ನ ಒಂದೂವರೆ ಗಂಟೆಗೆ ಬಾಗಿಲು ಮುಚ್ಚುತ್ತದೆ. ನಂತರ ಆಯ್ದ ಹೆಚ್ಚಿನ ಹೂವಿದ್ದರೆ ತುಮಕೂರು ಮಾರುಕಟ್ಟೆಗೆ. 'ಬೇಡಿಕೆ ಋತುವಿನಲ್ಲಿ ಕನಿಷ್ಠ ಹತ್ತು ಮಂದಿಯಾದರೂ ಸಹಾಯಕರು ಬೇಕೇ ಬೇಕು. ಒಬ್ಬರಿಗೆ ದಿವಸಕ್ಕೆ 30-40 ರೂಪಾಯಿ ವೇತನ. ಹೂವಿನಿಂದ ಸಿಕ್ಕ ರೊಕ್ಕದಲ್ಲಿ ಶೇ.25-30ರಷ್ಟು ಗೊಬ್ಬರ, ವೇತನ, ನಿರ್ವಹಣಾ ವೆಚ್ಚಕ್ಕೆ ಬೇಕು' ಎಂಬ ಅಂಕಿಅಂಶವನ್ನು ಮುಂದಿಡುತ್ತಾರೆ.

ನಾಗರಾಜ್ಗೆ ಬೇರೆ ಆದಾಯ ಮೂಲವಿಲ್ಲ. ಪೂರಿ ಕಾಕಡ ಹೂವಿನ ಕೃಷಿಯೇ ವೃತ್ತಿ. 'ಹೂ ಕೃಷಿಗೆ ತೊಡಗುವಾಗ ಕೃಷಿ ಇಲಾಖೆಯು ಎಕರೆಗೆ ಹದಿನೈದು ಸಾವಿರ ಸಹಾಯಧನ ಕೊಡ್ತೇವೆ ಅಂತ ಮುಂದೆ ಬಂದ್ರು. ನಾನು ತೆಕ್ಕೊಂಡಿಲ್ಲ' ಎಂದು ನಾಗರಾಜ್ ಹೇಳುವಾಗ ಅವರ ಸ್ವಾಭಿಮಾನದ ಬದುಕಿನ ಅನಾವರಣವಾಗುತ್ತದೆ. ಸ್ವಂತ ಕಾಲ ಮೇಲೆ ನಿಲ್ಲುವ ಛಲ.

'ವರುಷ ಪೂರಿ ಕಾಕಡಕ್ಕೆ ಬೇಡಿಕೆಯಿದೆ. ಈಗ ಸುತ್ತಮುತ್ತಲಿನ ಕೃಷಿಕರು ಹೂ ಬೆಳೆಯಲು ಆರಂಭಿಸಿದ್ದಾರೆ. ಆದರೆ ನಾವು ಹೂಗಳೊಂದಿಗೆ ಎಷ್ಟು ಹೊತ್ತು ಇರ್ತೀವೋ ಅಷ್ಟು ಪ್ರತಿಫಲ ಕೊಡ್ತದೆ' ಎಂಬ ವಿಶ್ವಾಸ ಅವರದು. ಕೆಲವೊಂದು ಸಲ ದರ ಕುಸಿದು ಕಿಲೋಗೆ ಐದು ರೂಪಾಯಿ ಆದುದೂ ಇದೆ. ಹಾಗೆಂತ ಹೂವನ್ನು ಕೊಯ್ಯದೆ ಗಿಡದಲ್ಲೇ ಬಿಟ್ಟರೆ ರೋಗ ಆಹ್ವಾನಿಸಿದಂತೆ.

'ಕಾಕಡಕ್ಕೆ ಚೆನ್ನಾದ ಮಾರುಕಟ್ಟೆಯಿದೆ. ಹೂವನ್ನೇ ನಂಬಿ ಬದುಕಬಹುದು ಎಂಬುದಕ್ಕೆ ನಾನೇ ಸಾಕ್ಷಿ' ಎನ್ನುತ್ತಾರೆ. ತನ್ನ ತೋಟದ ಪಕ್ಕದಲ್ಲಿ ಒಂದೆಕರೆ ಜಾಗವನ್ನು ನಾಗರಾಜ್ ಖರೀದಿಸಿ, ಅದರಲ್ಲಿ ಹೂವಿನ ಕೃಷಿಯನ್ನು ವಿಸ್ತರಿಸಲಿದ್ದಾರೆ. ಈಗಾಗಲೇ ಬೆಳೆವ ಹಂತದಲ್ಲಿರುವ ಮುನ್ನೂರೈವತ್ತು ಗಿಡಗಳು ಮುಂದಿನ ಋತುವಿನಲ್ಲಿ ಇಳುವರಿ ಪ್ರಾರಂಭಿಸಲಿದೆ. ಬೆಲೆ, ಬೆಳೆ ಎಲ್ಲವೂ ಸರಿಹೋದರೆ ನಾಗರಾಜ್ ಖುಷ್! ಅದೃಷ್ಟ ಬೇಕಷ್ಟೇ.

0 comments:

Post a Comment