Wednesday, July 17, 2013

ಗುಡ್ಡದ ನೆತ್ತಿ ತಂಪಾಯಿತು, ಹಸಿರು ಉಸಿರಾಡಿತು





           ಬಂಟ್ವಾಳ ತಾಲೂಕಿನ ಅಳಿಕೆಗಂಟಿದ ಮಾಯಿಲರಕೋಟೆ ಇತಿಹಾಸ ಉಲ್ಲೇಖವಿರುವ ಗುಡ್ಡ. ಇದರ ಉತ್ತರ ಭಾಗದ ತಪ್ಪಲಿನಲ್ಲಿ ಮಿತ್ತಳಿಕೆ ಊರು. ದಕ್ಷಿಣದಲ್ಲಿ ಮುಳಿಯದ ಅಡಿಕೆ, ಭತ್ತದ ಕೃಷಿಯ ಪ್ರದೇಶಗಳು. ಬೇಸಿಗೆಯಲ್ಲಿ ನೀರಿಲ್ಲದೆ ಗಿಡಗಳೆಲ್ಲಾ ಕಂಗಾಲಾಗುತ್ತಿರುವ ದಿವಸಗಳಿದ್ದುವು.

              ಮಾಯಿಲರಕೋಟೆಗೆ ತಾಗಿದ ಚಿಕ್ಕ ಗುಡ್ಡದಲ್ಲಿ ಮರಗಳು ವಿರಳ. ಹನ್ನೆರಡು ಎಕ್ರೆ ಜಾಗವು ಅಮೃತಧಾರಾ ಗೋಶಾಲೆಯ ಸುಪರ್ದಿಯಲ್ಲಿದೆ. ಪೂರ್ತಿ ಕುರುಚಲು ಗಿಡಗಳು. ತೇವವನ್ನು ಹಿಡಿದಿಡುವ ಶಕ್ತಿಯಿಲ್ಲದ ಮಣ್ಣು. ಮಳೆನೀರಿನೊಂದಿಗೆ ಮೇಲ್ಮಣ್ಣು ಕೊಚ್ಚಿಹೋಗಿ ಮಣ್ಣಿನ ಫಲವತ್ತತೆಯೂ ನಾಶವಾಗುತ್ತಿತ್ತು. 

           2005ರಲ್ಲಿ ಸ್ಥಳೀಯ ಮುಳಿಯ ತಿಮ್ಮಪ್ಪಯ್ಯ ಸ್ಮಾರಕ ವಿದ್ಯಾಲಯದ ವಿದ್ಯಾರ್ಥಿಗಳಿಂದ ಕಾಡುಗಿಡಗಳನ್ನು ನೆಡುವ ವನಮಹೋತ್ಸವ. ಗುಡ್ಡಕ್ಕೆ ಹಸಿರು ಹೊದೆಸಲು ನಾಂದಿ. ಉಪನ್ಯಾಸಕ ವದ್ವ ವೆಂಕಟ್ರಮಣ ಭಟ್ಟರ ಸಾರಥ್ಯದಲ್ಲಿ ವಿಟ್ಲ ಜ್ಯೂನಿಯರ್ ಕಾಲೇಜಿನ ಎನ್.ಎಸ್.ಎಸ್. ವಿದ್ಯಾರ್ಥಿಗಳಿಂದ ಗುಡ್ಡದ ನೆತ್ತಿಯ ಮೇಲೆ ಮದಕ ನಿರ್ಮಾಣ. ಜತೆಜತೆಗೆ ಗೇರು ಸಸಿಗಳ ನಾಟಿ.
              ಹರಿದು ಹೋಗುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳುವುದು ಮೊದಲಾದ್ಯತೆ. ಮದಕದಲ್ಲಿ ಸಣ್ಣಪ್ರಮಾಣದಲ್ಲಿ ನೀರು ಸಂಗ್ರಹವಾಗುತ್ತಿತ್ತು. ಇದನ್ನು ಹಿರಿದಾಗಿಸುವತ್ತ ಲಕ್ಷ್ಯ. 2006ರಲ್ಲಿ ಬಂಟ್ವಾಳ ರೋಟರಿ ಕ್ಲಬ್ಬಿನ ಆರ್ಥಿಕ ನೆರವಿನೊಂದಿಗೆ ಮದಕವು ಕೆರೆಯಾಗಿ ರೂಪಾಂತರವಾಯಿತು. ಐವತ್ತಡಿ ಅಗಲ ಮತ್ತು ಉದ್ದ, ಹತ್ತಡಿ ಆಳದ ಕೆರೆಯು ಸುಮಾರು ಏಳು ಲಕ್ಷ ನೀರನ್ನು ಹಿಡಿದಿಡುತ್ತದೆ.

                   ಆ ವರುಷದ ಮಳೆಗಾಲದಲ್ಲಿ ನೀರು ತುಂಬಿತು. ಮಳೆ ಅಧಿಕವಾದಾಗ ಕೆರೆಯಿಂದ ನೀರು ತುಂಬಿ ಹೊರಗೆ ಹರಿಯಿತು. ನೀರು ಇಂಗಲಿಲ್ಲ. ಮುಂದಿನ ಮಳೆಗಾಲಕ್ಕಾಗುವಾಗ ಎನ್.ಎಸ್.ಎಸ್.ವಿದ್ಯಾರ್ಥಿಗಳು ಈಗಿರುವ ಕೆರೆಗಿಂತ ನೂರು ಮೀಟರ್ ಕೆಳಗಡೆ ಇನ್ನೊಂದು ಕೆರೆಯನ್ನು ನಿರ್ಮಾಣ ಮಾಡಿದರು. ದೊಡ್ಡದರಲ್ಲಿ ಹೆಚ್ಚುವರಿಯಾದ ನೀರು ಮತ್ತು ಮಣ್ಣಿನಡಿಯಿಂದ ಹೊರಗೆ ತೆವಳುವ ನೀರನ್ನು ಎರಡನೇ ಕೆರೆಯಲ್ಲಿ ಹಿಡಿದಿಟ್ಟರು.

                 ಈ ಕೆರೆಯ ಕೆಳಭಾಗದಲ್ಲಿ ಸಹಜವಾಗಿ ಮಳೆಗಾಲದಲ್ಲಿ ಚಿಕ್ಕ ಪಳ್ಳ ನಿರ್ಮಾಣವಾಗುತ್ತಿತ್ತು. ಜಲಾನಯನ ಇಲಾಖೆಯ ನೆರವಿನಿಂದ ಮತ್ತೊಂದು ಕೆರೆಯ ರಚನೆ. ಸರಣಿ ಕೆರೆಗಳಿಂದಾಗಿ ನೀರು ಹರಿದು ಹೋಗುವುದು ನಿಂತಿತು. ನೀರಿನೊಂದಿಗೆ ಮಣ್ಣು ಕೊಚ್ಚಿಹೋಗುವುದಕ್ಕೂ ತಡೆಯಾಯಿತು. ಒರತೆಯ ಪ್ರಮಾಣ ಹೆಚ್ಚಾಯಿತು. ಕಳೆದ ನಾಲ್ಕೈದು ವರುಷಗಳಿಂದ ಎಷ್ಟೇ ಮಳೆ ಬರಲಿ, ದೊಡ್ಡ ಕೆರೆಯಲ್ಲಿ ನೀರು ಹೆಚ್ಚಾಗಿ ಹೊರಗೆ ಹರಿದು ಹೋಗದೆ ಇಂಗುತ್ತದೆ.

               ಗುಡ್ಡದ ತಪ್ಪಲಿನಲ್ಲಿ ಹೇಮಾವತಿ ಅಮ್ಮನವರ ತೋಟ. ಮೊದಲು ಬೇಸಿಗೆಯಲ್ಲಿ ತೋಟದ ಅಡಿಕೆ ಗಿಡಗಳು ನೀರಿನ ಅಭಾವದಿಂದಾಗಿ ಹಳದಿಯಾಗುತ್ತಿದ್ದವು. ಯಾವಾಗ ಗುಡ್ಡದ ನೆತ್ತಿಯಲ್ಲಿ ನೀರಿಂಗಿಸುವ ಪ್ರಕ್ರಿಯೆ ಶುರುವಾಯಿತೋ, ಅಲ್ಲಿಂದ ಎರಡೇ ವರುಷದಲ್ಲಿ ತೇವಾಂಶ ಹೆಚ್ಚಾಯಿತು. ಬೇಸಿಗೆಯಲ್ಲಿ ಗಿಡಗಳು ಹಳದಿ ವರ್ಣಕ್ಕೆ ತಿರುಗುವುದು ನಿಂತಿತು, ಎನ್ನುತ್ತಾರೆ.

               ಇವರ ತೋಟದ ಪಕ್ಕದಲ್ಲಿ ಕೆರೆಯಿದೆ. ಸದಾ ಒರತೆ. ಬೇಸಿಗೆಯಲ್ಲೂ ಶುದ್ಧ ನೀರು. ಅಡಿಕೆ ತೋಟ, ಗೋಶಾಲೆ, ಹುಲ್ಲುಗಾವಲಿಗೆ ಬೇಕಾದಷ್ಟು ನೀರಿನ ಸಂಪನ್ಮೂಲ. ನೀರಿಂಗಿಸುವ ಕೆಲಸದಿಂದಾಗಿ ಸುಮಾರು ಐವತ್ತು ಎಕ್ರೆ ಕೃಷಿ ಭೂಮಿಗೆ ಪ್ರಯೋಜನವಾಗಿದೆ. ಅಂತರ್ಜಲ ವೃದ್ಧಿಯಾಗಿದೆ. ಮಣ್ಣಿನಲ್ಲಿ ತೇವದ ಅಂಶ ಗಣನೀಯವಾಗಿ ಏರಿರುವುದು ಕಾಣಬಹುದು, ಎಂದು ಒಟ್ಟೂ ಫಲಿತಾಂಶವನ್ನು ಕಟ್ಟಿಕೊಡುತ್ತಾರೆ, ಜಲಯೋಧ ಮುಳಿಯ ವೆಂಕಟಕೃಷ್ಣ ಶರ್ಮ.

                  ಗುಡ್ಡದ ಮಣ್ಣು ಗೇರು ಕೃಷಿಗೆ ಸೂಕ್ತ. ಗೇರು ಗಿಡಗಳ ನಾಟಿ ನಡೆದಿದೆ. ಕೆಲವು ಫಲ ನೀಡುತ್ತಿದೆ. ಮಾವು, ಹಲಸು, ಸಾಗುವಾನಿ ಗಿಡ ನೆಟ್ಟರೂ ಗಿಡಗಳ ಬೆಳವಣಿಗೆಯಿಲ್ಲ. ಮುಳಿಯ ಶಾಲಾ ವಿದ್ಯಾರ್ಥಿಗಳು ಕಿರಾಲ್ ಬೋಗಿ ಗಿಡಗಳನ್ನು ನೆಟ್ಟಿದ್ದು ಸದೃಢವಾಗಿ ಬೆಳೆದಿವೆ. ಈ ಮಣ್ಣಿಗೆ ಕಿರಾಲ್ಬೋಗಿ ಕಾಡು ಗಿಡಗಳು ಸೂಕ್ತ. ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಕೆಲಸಗಳಿಗೆ ಕಿರಾಲ್ಬೋಗಿ ಮರಗಳನ್ನು ಬಳಸಲಾಗಿತ್ತು. ಮರ ಕಡಿದುದಕ್ಕಾಗಿ ವಿಟ್ಲ ಸೀಮೆಯಲ್ಲಿ ಸುಮಾರು ಐದುಸಾವಿರ ಕಿರಾಲ್ಬೋಗಿ ಗಿಡಗಳನ್ನು ನೆಡುವ ಕಾರ್ಯವನ್ನು ದೇವಳದ ಆಡಳಿತವು ಇಲಾಖೆಯ ಸಹಕಾರದಿಂದ ನಿರ್ವಹಿಸಿದೆ ಎಂಬ ಮಾಹಿತಿಯನ್ನು ಶರ್ಮ ನೀಡುತ್ತಾರೆ. 

                     ಕಿರಾಲ್ಬೋಗಿ ಬರವನ್ನು ಎದುರಿಸುವ ಶಕ್ತಿ ಹೊಂದಿದ ಮರ. ಒಂದು ವರುಷ ನೀರಿಗೆ ತೊಂದರೆಯಾದರೂ ತಾಳಿಕೊಳ್ಳುವ ಸಾಮಥ್ರ್ಯವಿದೆ. ಹಾಗಾಗಿ ಗುಡ್ಡದಲ್ಲಿನ್ನು ಕಿರಾಲ್ಬೋಗಿಗೆ ಮಣೆ.  ಕಾಡುಹಂದಿಯ ಸಂಚಾರ ಹೊರತು ಪಡಿಸಿ ಈ ಗುಡ್ಡಕ್ಕೆ ಮಾನವನ ಹಸ್ತಕ್ಷೇಪವಿಲ್ಲ. ಕತ್ತಿಯ ಕುತ್ತಿಲ್ಲ. ಗರಗಸದ ಸದ್ದಿಲ್ಲ. ಆರಂಭದ ದಿವಸಗಳಲ್ಲಿ ನೆಟ್ಟ ಅಕೇಶಿಯಾ ಮರಗಳನ್ನು ತೆಗೆದು ಅಲ್ಲೆಲ್ಲಾ ಕಿರಾಲ್ಬೋಗಿಯನ್ನು ನೆಡುವ ಯೋಚನೆ, ಯೋಜನೆ ರೂಪಿತವಾಗುತ್ತಿದೆ.

                  ಗುಡ್ಡದ ನೆತ್ತಿ ತಂಪಾದರೆ ಕೆಳಗಿನ ಕೃಷಿ, ಗದ್ದೆ, ಕುಡಿ ನೀರು ಎಲ್ಲವೂ ಸಮೃದ್ಧಿಯಾಗುತ್ತದೆ ಎನ್ನುವುದಕ್ಕೆ ಮಾಯಿಲರಕೋಟೆಯ ನೀರಿನ ಕೆಲಸಗಳೇ ಸಾಕ್ಷಿ. ಈ ಗುಡ್ಡದಲ್ಲಿ ಬಿದ್ದ ಮಳೆನೀರು ಭೂಒಡಲಿಗೆ ಪುನಃ ಸೇರಿಕೊಳ್ಳುತ್ತವೆ. ಇದಕ್ಕೇನೂ ಲಕ್ಷ, ಕೋಟಿ ರೂಪಾಯಿಗಳು ವ್ಯಯವಾಗಿಲ್ಲ.

                     ದೇವಳದ ಕಾಮಗಾರಿಗೆ ಕಿರಾಲ್ಬೋಗಿ ಮರ ಕಡಿದುದಕ್ಕಾಗಿ ಸಾವಿರಗಟ್ಟಲೆ ಗಿಡಗಳನ್ನು ನೆಡುವ ಮನಸ್ಸು ರೂಪಿತವಾಗಿರುವುದು ಆದರ್ಶ. ದೇವಸ್ಥಾನ, ಭೂತಸ್ಥಾನ, ಭಜನಾ ಮಂದಿರ.. ಹೀಗೆ ಶ್ರದ್ಧಾಕೇಂದ್ರಗಳ ರಚನೆಗಳ ಸಂದರ್ಭಗಳಲ್ಲಿ ಕಾಡು ಬೆಳೆಸುವ ಉತ್ತಮ ಮನಸ್ಸುಗಳನ್ನು ರೂಪಿಸಬೇಕಾದುದು ಭವಿಷ್ಯ ಭಾರತದ ಅಗತ್ಯ.

0 comments:

Post a Comment