Thursday, July 18, 2013

ಉತ್ಪನ್ನಗಳಿಗೆ ಬೇಕು, ಇರುನೆಲೆಯ ಮಾರುಕಟ್ಟೆ


          "ನಾನು ಮೀಯಪದವಿನ ಅಂಗಡಿಗೆ ಎಳನೀರು ಮಾರಾಟ ಮಾಡಿದಾಗ ಹಲವರು ನಕ್ಕರು, ಗೇಲಿ ಮಾಡಿದರು. ಅವರೇ ಇಂದು ಅಂಗಡಿಯಿಂದ ಎಳನೀರನ್ನು ಖರೀದಿಸಿ ಒಯ್ಯುತ್ತಾರೆ," ಹದಿನೈದು ವರುಷದ ಹಿಂದಿನ ನೆನಪನ್ನು ಡಾ.ಚಂದ್ರಶೇಖರ ಚೌಟರು ಜ್ಞಾಪಿಸಿಕೊಂಡರು. 

           ಹೊಸಂಗಡಿಯಿಂದ ಮೀಯಪದವಿಗೆ ಒಂಭತ್ತು ಕಿಲೋಮೀಟರ್ ದೂರ. ಕಾಸರಗೋಡು ಜಿಲ್ಲೆಯ ಚಿಕ್ಕ ಹಳ್ಳಿ. ಸುಮಾರು ಎರಡು ಸಾವಿರ ಜನಸಂಖ್ಯೆಯಿರುವ ಪಂಚಾಯತ್ ಕೇಂದ್ರ. ಬಹುತೇಕ ಶ್ರಮಿಕ ವರ್ಗ. ಹಿತ್ತಿಲಲ್ಲಿ ತೆಂಗಿನ ಮರಗಳಿದ್ದರೂ ಅಂಗಡಿಯಿಂದ ಖರೀದಿಸುತ್ತಾರಲ್ಲಾ? ಚೌಟರು ಹೇಳುತ್ತಾರೆ," ಒಬ್ಬರಿಗೆ ಐದು ಎಳನೀರು (ಬೊಂಡ, ಸೀಯಾಳ) ಅಗತ್ಯವಿದೆ ಎಂದಿಟ್ಟುಕೊಳ್ಳೋಣ. ಅಂಗಡಿಯಲ್ಲಾದರೆ ಐದಕ್ಕೆ ನೂರು ರೂಪಾಯಿ. ಆದರೆ ಒಬ್ಬರನ್ನು ಮರಹತ್ತಿಸಿ ಕೊಯಿಸಲು ನೂರೈವತ್ತು ರೂಪಾಯಿ ಸಂಭಾವನೆ ಬೇಕು." 

            ಕಾರ್ಮಿಕ ಸಮಸ್ಯೆ ಕೃಷಿಯಲ್ಲಿ ನೇರ ಪರಿಣಾಮ ಬೀರಿದೆ. ಬದುಕನ್ನು ನಲುಗಿಸಿದೆ.   ಹಿತ್ತಿಲಿನಲ್ಲಿ ತೆಂಗಿನ, ಹಲಸಿನ ಮರವಿದ್ದರೂ ಅಂಗಡಿಯನ್ನು ಅವಲಂಬಿಸಬೇಕಾದ ಸ್ಥಿತಿಯು ಮೀಯಪದವು ಹಳ್ಳಿ ಒಂದರ ಕತೆಯಲ್ಲ, ಬಹುತೇಕ ಹಳ್ಳಿಗಳ ಕತೆ-ವ್ಯಥೆ. ನಗರದ ಅಂಗಡಿಗಳಿಗಾದರೆ ದೂರದೂರಿನ ಸರಬರಾಜು ಸರಪಣಿಯಿದೆ. ಮೀಯಪದವಿಗೆ ಹೊರಗಿನಿಂದ ಎಳನೀರು ಬರುವುದಿಲ್ಲ. ನಿತ್ಯ ಕಾಣುತ್ತಿರುವ ಮರಗಳೇ ಒದಗಿಸುತ್ತವೆ. 

          ಮೀಯಪದವು ಅಂಗಡಿಗಳಲ್ಲಿ ಸಿಗುವ ಎಳನೀರು ಇದೆಯಲ್ಲಾ, ಅದರಲ್ಲಿ ಚೌಟರ ತೋಟದ್ದು ಸಿಂಹಪಾಲು. ದೇಹಾಯಾಸದಿಂದ ಬಳಲಿದ್ದ ದೇಹಕ್ಕೆ ಎಳನೀರು ಸೇವನೆ ಟಾನಿಕ್. ಅಂಗಡಿಯಲ್ಲಿ ಕುಡಿಯುವುದಲ್ಲದೆ ಮನೆಗೆ ಒಂದೋ ಎರಡೋ ಕಟ್ಟಿಸಿಕೊಂಡು ಒಯ್ಯುವವರಿದ್ದಾರೆ.  ರಾಜಾನಂದ ಶೆಟ್ಟರ ಅಂಗಡಿಯೊಂದರಲ್ಲೇ ಚೌಟರ ತೋಟದ ಇನ್ನೂರು ಎಳನೀರು ದಿನವಹಿ ಮಾರಾಟವಾಗುತ್ತಿದೆ! ಇತರ ಅಂಗಡಿಗಳಿಗೆ ಸರಬರಾಜು ಮಾಡುವ ಕೃಷಿಕರು ರೂಪುಗೊಂಡಿದ್ದಾರೆ. 

         ಕೃಷಿ ಖುಷಿಯಾಗಲು ಹುಲುಸಾದ ಬೆಳೆ, ಉತ್ತಮ ಬೆಲೆ ಮಾನದಂಡ. ಬೆಲೆ ಸಾಕಷ್ಟಿದ್ದು ಬೆಳೆಯೇ ಇಲ್ಲದಿದ್ದರೆ? ಅಥವಾ ಬೆಳೆ ಯಥೇಷ್ಟವಿದ್ದು ಬೆಲೆಯೇ ಇಲ್ಲದಿದ್ದರೆ? ಡೋಲಾಯಮಾನ ಸ್ಥಿತಿ. ಎಲ್ಲಿಯೋ ಬೆಳೆದ ಕೃಷ್ಯುತ್ಪನ್ನ ಮತ್ತೊಂದು ಊರಿಗೆ ತಲಪುವಾಗ ಗುಣಮಟ್ಟ ಕುಸಿದಿರುತ್ತದೆ. ಆದರೆ ಸಾರಿಗೆ, ಕೂಲಿ ಎನ್ನುತ್ತಾ ಬೆಲೆ ವೃದ್ಧಿಯಾಗಿರುತ್ತದೆ. ಗ್ರಾಹಕನಿಗೆ ಅಧಿಕ ಹೊರೆ.

          ಒಂದೂರಿನ ಕೃಷಿ ಉತ್ಪನ್ನಗಳಿಗೆ ಆಯಾ ಊರಿನ ಹತ್ತು ಕಿಲೋಮೀಟರ್ ವ್ಯಾಪ್ತಿಯಲ್ಲಿ ಮಾರುಕಟ್ಟೆ ಸೃಷ್ಟಿಯಾಗಬೇಕು. ಆಗ ಕೃಷಿಕನಿಗೂ ಲಾಭ, ಗ್ರಾಹಕನಿಗೂ ಸಂತೃಪ್ತಿ ಎನ್ನುವುದು ಚೌಟರ ಅನುಭವ. 'ಇದು ಸಾಧ್ಯವಿಲ್ಲವಪ್ಪಾ, ನಮ್ಮಿಂದಾಗದು' ಎಂದು ಶೈಶವದಲ್ಲೇ ಮಾರಾಟ ಆಸಕ್ತಿಯನ್ನು ಮುರಿಟಿಸಿಲ್ಲ. ತನ್ನ ತೋಟದ ಉತ್ಪನ್ನಗಳನ್ನು ಊರಲ್ಲೇ ಮಾರುವತ್ತ ಮಾಡಿದ ಯತ್ನಗಳಲ್ಲಾ ಫಲಕಾರಿಯಾಗಿವೆ. ಇತರ ಕೃಷಿಕರಿಗೂ ಪ್ರೇರಣೆಯಾಗಿವೆ.

             ಎರಡು ವರುಷದ ಹಿಂದೆ ತರಕಾರಿ ಋತುವಿನಲ್ಲಿ ಮನೆ ಬಳಕೆಗಾಗಿ ಮಿಕ್ಕಿದ ಬೆಂಡೆಕಾಯಿಯನ್ನು ಸ್ಥಳೀಯ ಅಂಗಡಿಗಳಿಗೆ ಮಾರಿದ್ದಾರೆ. ಕಿಲೋಗೆ ಅರುವತ್ತು ರೂಪಾಯಿ. ಹಳ್ಳಿಯಲ್ಲಿ ಇಷ್ಟು ದುಬಾರಿ ಹಣ ತೆತ್ತು ಖರೀದಿಸುವವರು ಯಾರು? ಚೌಟರು ಹೇಳುತ್ತಾರೆ, ಕೂಲಿ ಮಾಡುವ ಶ್ರಮಿಕರು ದೊಡ್ಡ ಮಟ್ಟದ ಮಾರುಕಟ್ಟೆಗೆ ಕಾರಣರಾಗಿದ್ದಾರೆ. ಸ್ವತಃ ಬೆಳೆಯಲು ಜಮೀನಿನ ಕೊರತೆ. ಜಮೀನಿದ್ದವರಿಗೆ ದುಡಿಯಲು ಪುರುಸೊತ್ತಿಲ್ಲ. ಮನೆಗೆ ತಲಪುವಾಗ ರಾತ್ರಿಯಾಗಿರುತ್ತದೆ. ಹಾಗಾಗಿ ಬೇರೆಡೆ ದುಡಿದು ಸಿಕ್ಕ ಸಂಪಾದನೆಯಲ್ಲಿ ಉತ್ಪನ್ನಗಳನ್ನು ಖರೀದಿಸುತ್ತಾರೆ. 

          ತೊಂಡೆಕಾಯಿ, ಸೊರೆಕಾಯಿ, ಹೀರೆಕಾಯಿ..ಗಳು ಅಂಗಡಿಗೆ ಬಂದ ತಕ್ಷಣ ಖಾಲಿಯಾಗಿ ಬಿಡುತ್ತವೆ. ದುಡಿವ ಹಳ್ಳಿಯಲ್ಲೇ ತನಗೆ ಬೇಕಾದ ವಸ್ತುಗಳು ಸಿಗುತ್ತವೆ ಎಂದಾದರೆ ಸಮೀಪದ ಪೇಟೆಯನ್ನು ಆಶ್ರಯಿಸಬೇಕಾಗಿಲ್ಲವಲ್ಲ. ಸಂಜೆ ಮನೆ ಸೇರುವಾಗ ತಾಜಾ ತರಕಾರಿ ಅಂಗಡಿಯಲ್ಲಿ ಸಿಕ್ಕರೆ ಆಯಿತು. ಒಂದು ಕಿಲೋ, ಎರಡು ಕಿಲೋದಂತೆ ಮನೆಗೆ ಒಯ್ಯುತ್ತಾರೆ. ಬೆಳಿಗ್ಗೆ ಕೆಲಸಕ್ಕೆ ಹೋಗುವಾಗ ತಾಜಾ ತರಕಾರಿಗೆ ಮೊದಲೇ ಬುಕ್ ಮಾಡಿಡುತ್ತಾರಂತೆ.

            ರಂಬುಟಾನ್ ಹಣ್ಣನ್ನು ಮೀಯಪದವು ಸನಿಹ ಹೆದ್ದಾರಿಗೆ ತಾಗಿಕೊಂಡ ಉಪ್ಪಳದಲ್ಲಿ ಮಾರುಕಟ್ಟೆ ಕುದುರಿಸಿದ್ದಾರೆ. ಉಪ್ಪಳ ಚಿಕ್ಕ ಪೇಟೆ. ನಿತ್ಯ ಬ್ಯುಸಿ. ದ್ರಾಕ್ಷಿಯಿಂದ ಸೀಬೆ ತನಕ ರಂಗುರಂಗಿನ ಹಣ್ಣುಗಳು ಲಭ್ಯ. ರಂಬುಟಾನ್ ಹಣ್ಣು ಹೊಸತು. ಜನರಿಗೆ ಕೇಳಿ ಗೊತ್ತಿದೆ. ತಿಂದು ಗೊತ್ತಿಲ್ಲ. ಇಲ್ಲಿಗೆ ತೀರಾ ಹೊಸತಾದ ಹಣ್ಣನ್ನು ಮೊದಲು ಯಾರೂ ಮೆಚ್ಚಿಕೊಂಡಿಲ್ಲವಂತೆ. ಈಗ ಎಷ್ಟಿದ್ದರೂ ಬೇಕು! 

               ಚೌಟರು ಶುರುವಿಗೆ ಹತ್ತು ಕಿಲೋ ಹಣ್ಣು ಒಯ್ದರು. ಅಂಗಡಿಯವರಿಗೆ ಹಣ್ಣಿನ ಪರಿಚಯವಿಲ್ಲದೆ ಒಲವು ತೋರಲಿಲ್ಲ. ಕೊನೆಗೆ ರಿಕ್ಷಾ ಚಾಲಕರಿಗೆ, ಮಕ್ಕಳಿಗೆ, ಸುತ್ತುಮುತ್ತಲಿನ ಅಂಗಡಿಯವರಿಗೆ ಉಚಿತವಾಗಿ ನೀಡಿ ತಿನ್ನುವಂತೆ ಪ್ರೇರೇಪಿಸಿರು. ಪರಿಣಾಮ, ರುಚಿನೋಡಿದ ಅನೇಕರು ಅಂಗಡಿಯವರಲ್ಲಿ ಹಣ್ಣಿಗೆ ಬೇಡಿಕೆ ಮುಂದಿಟ್ಟರು. ಗ್ರಾಹಕರ ಒಲವು ಹೆಚ್ಚಾಯಿತು. ಯಾರು ಬೇಡ ಅಂತ ಹೇಳಿದ್ದರೋ; ಅವರೇ ಐದು, ಹತ್ತು ಕಿಲೋಗೆ ಆರ್ಡರ್ ಮಾಡಿದರು. ದರ ನಿಗದಿ ಮಾತ್ರ ಮಾಡಿಲ್ಲ. ಕೊಟ್ಟಷ್ಟು ಸಾಕು ಅಂದಿದ್ದರು. ಮೊದಲು ಕಿಲೋಗೆ ಎಂಭತ್ತು ರೂಪಾಯಿಯಂತೆ, ಬಳಿಕ ನೂರು ರೂಪಾಯಿಯಂತೆ ಮಾರಾಟ. ಈಗ ಚೌಟರ ತೋಟದ ರಂಬುಟಾನಿಗೆ ಉಪ್ಪಳ ದೊಡ್ಡ ಮಾರುಕಟ್ಟೆ. 

           ಈ ವರುಷದಿಂದ ಮೀಯಪದವಿನಲ್ಲೇ ರಂಬುಟಾನ್ ಹಣ್ಣಿನ ಮಾರಾಟಕ್ಕೆ ಯತ್ನ. ಉಪ್ಪಳದ ಉಪಾಯವನ್ನೇ ಇಲ್ಲೂ ಮಾಡಿದರು. ರುಚಿ ತೋರಿಸಲು ಉಚಿತ ಹಂಚಿದರು. ಹಳ್ಳಿಯಲ್ಲೂ ತಿನ್ನುವ ಗ್ರಾಹಕರು ರೂಪುಗೊಂಡರು. 'ನೀವೇನೋ ಕೊಟ್ಟಿರಿ. ಇದನ್ನು ಹೇಗೆ ಸಾರ್ ತಿನ್ನುವುದು' ಎಂದವರೂ ಇದ್ದಾರೆ! ಅಂದರೆ ರಂಬುಟಾನ್ ಹಣ್ಣಿನ ಹೊರ ಮೈಯಲ್ಲಿ ಮುಳ್ಳಿನಂತರಹ ರಚನೆಯಿದೆ. ಹಣ್ಣನ್ನು ಇಬ್ಬಾಗ ಮಾಡಿ ಅದರೊಳಗಿನ ಗುಳವನ್ನು ತಿನ್ನಬೇಕೆಂಬುದು ಬಹುತೇಕರಿಗೆ ಗೊತ್ತಿಲ್ಲ. ಹಾಗಾಗಿ ಕೆಲವೆಡೆ ಚೌಟರು ರಂಬುಟಾನ್ ಹಣ್ಣನ್ನು ತಿನ್ನುವ ಡೆಮೋ ಕೊಡಬೇಕಾಯಿತು.

            ಮಾರುಕಟ್ಟೆ ದೃಷ್ಟಿಯಿಂದ ಪಪ್ಪಾಯಿ ಬೆಳೆದ ಚೌಟರಿಗೆ ಮಂಗಳೂರು ಮಾರುಕಟ್ಟೆ ನಿರಾಶೆ ಮೂಡಿಸಿತು. ಆದರೂ ಕೆಲವೆಡೆ ವ್ಯಾಪಾರ ಕುದುರಿತು. ಈ ವರುಷದಿಂದ ತನ್ನೂರು ಮತ್ತು ಸನಿಹದ ಉಪ್ಪಳ ಮಾರುಕಟ್ಟೆಯಲ್ಲಿ ಪಪ್ಪಾಯಿಗೆ ಬೇಡಿಕೆ ಹೆಚ್ಚಿದೆ. ದೂರದ ಊರಿನಿಂದ ಲಾರಿಯೇರಿ ಪಪ್ಪಾಯಿ ಮಾರುಕಟ್ಟೆಗೆ, ಕ್ರೀಂಪಾರ್ಲರಿಗೆ ಬರುತ್ತದೆ. ಇಲ್ಲಿಗೆ ತಲಪುವಾಗ ಗುಣಮಟ್ಟ ಕೆಟ್ಟಿರುತ್ತದೆ. ಒಂದಷ್ಟು ಕೊಳೆತು ಹೋಗಿರುತ್ತದೆ. ಹಾಗಾಗಿ ಊರಿನ ತಾಜಾ ಪಪ್ಪಾಯಿಯನ್ನು ಅಂಗಡಿಯವರು ಅಪೇಕ್ಷೆ ಪಡುತ್ತಾರೆ. 

             ತಾವೇ ರೂಪಿಸಿದ ಸಾಂಸ್ಕೃತಿಕ ವೇದಿಕೆ 'ಚೌಟರ ಚಾವಡಿ' ಮೂಲಕ ಕಳೆದ ವರುಷ ಹಲಸಿನ 'ಅಡುಗೆಗೆ ಸಿದ್ಧ' (ರೆಡಿ ಟು ಕುಕ್) ಸೊಳೆಗಳನ್ನು ಊರಲ್ಲೇ ಮಾರಾಟ ಮಾಡುವ ಮೊದಲ ಹೆಜ್ಜೆ ಆಶಾದಾಯಕ ದಾರಿ ತೋರಿತು. ಹಳ್ಳಿಯಲ್ಲಿ ಬೇಕಾದಷ್ಟು ಹಲಸು ಇರುವಾಗ ಸೊಳೆಗಳನ್ನು ಯಾರು ಖರೀದಿಸುತ್ತಾರೆ ಎಂಬ ಶಂಕೆ ದೂರವಾಗಿದೆ. ಮೀಯಪದವು ಸರಹದ್ದಿನಲ್ಲಿ ಇನ್ನೂರಕ್ಕೂ ಮಿಕ್ಕಿ ಉದ್ಯೋಗಿಗಳು ಬಾಡಿಗೆ ಮನೆಗಳಲ್ಲಿ ವಾಸ ಮಾಡುತ್ತಾರೆ. ದೊಡ್ಡದಾದ ಶ್ರಮಿಕ ವರ್ಗವಿದೆ. ಮರವಿದ್ದೂ ಮರವೇರದ ಅಸಹಾಯಕತೆ. ಕೃಷಿ ಸಹಾಯಕರ ಅಲಭ್ಯತೆ. ಈ ಎಲ್ಲಾ 'ಸಮಸ್ಯೆ'ಗಳಿಂದಾಗಿ ಕೃಷಿ ಉತ್ಪನ್ನಗಳಿಗೆ ಸ್ಥಳೀಯ ಬೇಡಿಕೆ ಅಧಿಕ. ಎರಡು ಬಾರಿ ಹಲಸಿನ ಹಬ್ಬವನ್ನು ಏರ್ಪಡಿಸಿದ್ದರು. 

           ಜುಲೈ ಮೊದಲ ವಾರ ಮಂಗಳೂರು ಪಡೀಲಿನ ಸರೋಶ್ ಇನ್ಸ್ಟಿಟ್ಯೂಟ್ ಆಪ್ ಹೋಟೆಲ್ ಅಡ್ಮಿನಿಸ್ಟ್ರೇಶನ್ ಶಿಕ್ಷಣ ಸಂಸ್ಥೆಯಲ್ಲಿ ಚೌಟರ ನೇತೃತ್ವದಲ್ಲಿ ಒಂದು ದಿವಸದ ಕಾರ್ಯಾಗಾರ. ಇಲ್ಲಿನ ಮತ್ತು ಇತರ, ಹೋಟೆಲಿನ ಚೆಫ್ಗಳಿಗೆ ಹಲಸಿನ ಖಾದ್ಯಗಳ ಪ್ರಾತ್ಯಕ್ಷಿಕೆ ಮತ್ತು ಅರಿವನ್ನು ಮೂಡಿಸುವ ಪ್ರಯತ್ನ. ಕಾಲೇಜಿನ ಸೂಪಜ್ಞರು ಹಲಸಿನ ಹಣ್ಣನ್ನು ಬಳಸಿ ಪಿಜ್ಜಾ, ಬರ್ಗರ್, ಕಾಕ್ಟೈಲ್, ಮೂಸ್.. ಹೀಗೆ ವಿದೇಶಿ ತಿಂಡಿಗೆ ದೇಸಿ ಸ್ಪರ್ಶ ನೀಡಿದ್ದರು. 

           ಚೌಟರು ಮಾರುಕಟ್ಟೆಯತ್ತ ನಿತ್ಯ ಆಸಕ್ತ. ಎಲ್ಲೆಲ್ಲಿ ಯಾವುದಕ್ಕೆ ಬೇಡಿಕೆಯಿದೆ ಎಂಬ ಅವರ ಮೂರನೇ ಕಣ್ಣು ಸದಾ ಜಾಗೃತ. ತನ್ನ ಯಶಸ್ಸನ್ನು ಸ್ನೇಹಿತರೊಂದಿಗೆ ಹಂಚಿಕೊಂಡು 'ನೀವೂ ನಿಮ್ಮೂರಲ್ಲಿ ಮಾರುಕಟ್ಟೆ ಸೃಷ್ಟಿಸಿ' ಎಂಬ ಅನುಭವವನ್ನು ಹೇಳಲು ಖುಷಿ. ಅವರ ಯೋಚನೆ-ಯೋಜನೆಗಳಿಗೆ ಸ್ಪಂದಿಸುವ ಹಸುರು ಮನಸ್ಸಿನ ಕೃಷಿಕರ ಗಡಣವಿದೆ. 
           ಚೌಟರು ಮಾತ್ರವಲ್ಲ ಇತರ ಕೃಷಿಕರು ಕೂಡಾ ಉತ್ಪನ್ನಗಳನ್ನು ಮಾರುಕಟ್ಟೆ ಮಾಡಲು ಉತ್ಸುಕರಾಗಿದ್ದಾರೆ.
 ಗ್ರಾಹಕರ ಆಸಕ್ತಿಯಂತೆ ಉತ್ಪನ್ನಗಳು ಸ್ಥಳೀಯವಾಗಿಯೇ ಪೂರೈಕೆಯಾದರೆ ಮಾರುಕಟ್ಟೆ ಸುಲಭ. ಎಲ್ಲೆಡೆ ಇಂತಹ ಪ್ರಯತ್ನಗಳಾಗಬೇಕು.  ಮನಸ್ಸು ಮಾಡಿದರೆ ಕಷ್ಟವೇನಲ್ಲ. ಕೃಷಿ ಉತ್ಪನ್ನಗಳ ಮಾರುಕಟ್ಟೆಗೆ ಮೆಗಾ ಸಿಟಿಯೇ ಆಗಬೇಕಿಂದಲ್ಲ. ಇರುನೆಲೆಯಲ್ಲೇ ಮಾರುಕಟ್ಟೆ ಮಾಡಬಹುದು ಎಂಬುದಕ್ಕೆ ಚೌಟರ ತೋಟ ನಿದರ್ಶನ.
(09447193984)


0 comments:

Post a Comment