Sunday, July 12, 2009

ಬಾಲ್ಯ 'ಸಂಸ್ಕಾರ' : ಬದುಕಿನ ಅಡಿಗಟ್ಟು


ಮಕ್ಕಳಿಗೆ ರಜಾದ ಮಜಾ! 'ಬೇಸಿಗೆ ಶಿಬಿರ'ಗಳ ಭರಾಟೆ! ನಿಜವಾದ ಆಸಕ್ತಿಯಿಂದ ಭಾಗವಹಿಸುವ ಮಕ್ಕಳು ಒಂದೆಡೆ. 'ಅಯ್ಯೋ, ರಜೆಯಲ್ಲಿ ಉಪದ್ರ ತಡೆಯಲಾಗುತ್ತಿಲ್ಲವಲ್ಲಾ' ಎನ್ನುತ್ತಾ ಮಕ್ಕಳನ್ನು ಅಟ್ಟುವುದು(!) ಮತ್ತೊಂದೆಡೆ. ಒಟ್ಟಿನಲ್ಲಿ ರಜಾವೂ ಮುಗಿಯುತ್ತದೆ, ಶಿಬಿರವೂ ಮುಗಿಯುತ್ತದೆ!
ಇಲ್ನೋಡಿ. ಇಲ್ಲೊಂದು ಶಿಬಿರ. ಪ್ರಕೃತಿಮಧ್ಯೆ ಮಕ್ಕಳು ಶುಚಿರ್ಭೂತರಾಗಿ ಗುರುಗಳಿಗೆ ಅಭಿಮುಖವಾಗಿ ಭಕ್ತಿಯಿಂದ ಕುಳಿತಿದ್ದಾರೆ. ಇಲ್ಲಿ ಜಾತಿಯ ಸೋಂಕಿಲ್ಲ. ಅಂತಸ್ತಿನ ಛಾಯೆಯಿಲ್ಲ. ಹಣೆಯಲ್ಲಿ ತಿಲಕ. ಕೈಯಲ್ಲಿ ಮಂತ್ರ ಪುಸ್ತಕಗಳು. ಶ್ಲೋಕಗಳನ್ನು ಹೇಳುತ್ತಿದ್ದಾರೆ. ಶ್ಲೋಕಗಳ ಆರ್ಥಗಳನ್ನು ಮನನಿಸುತ್ತಿದ್ದಾರೆ...ಇದರಲ್ಲೇನು ಹೊಸತು? ಮಾಮೂಲಿ 'ಬೇಸಿಗೆ ಶಿಬಿರ'ಕ್ಕಿಂತ ಭಿನ್ನ. ಅಷ್ಟೇ ಕ್ಲಿಷ್ಟ. ಇದು 'ಸಂಸ್ಕಾರ ವಾಹಿನಿ'.
ಬದುಕಿನಲ್ಲಿ ಮರೆತು ಹೋದ ಸಂಗತಿಗಳನ್ನು ಮಕ್ಕಳಿಗೆ ತಿಳಿಸುವುದು, ಕಲಿಸುವುದು ಉದ್ದೇಶ. 'ಮೌಢ್ಯದ ಮಡಿವಂತಿಕೆಯನ್ನು ದೂರವಿಟ್ಟ ಶಿಬಿರ' ಎನ್ನುತ್ತಾರೆ ಸಾರಥ್ಯ ವಹಿಸಿದ ಸುಳ್ಯ ಹಳೆಗೇಟಿನ 'ಶ್ರೀ ಕೇಶವ ಕೃಪಾ'ದ ಪುರೋಹಿತ ನಾಗರಾಜ ಭಟ್. ಎಂಟು ದಿವಸದ ಶಿಬಿರ. ಬೆಳಿಗ್ಗೆ ಯೋಗಾಭ್ಯಾಸದಿಂದ ಆರಂಭ. ನಂತರ ಗುರುವಂದನೆ. ದೇವರ ಸಹಸ್ರನಾಮಾವಳಿ, ಮಂತ್ರಗಳ ಅಭ್ಯಾಸ. ಮುಖ್ಯವಾಗಿ ಲಲಿತಾಸಹಸ್ರನಾಮ, ಭೋಜನ ಮಂತ್ರ, ಶಾಂತಿಮಂತ್ರ, ಸುಭಾಷಿತಗಳು; ತುಳಸಿಗೆ, ದೇವರಿಗೆ, ಗುರುಹಿರಿಯರಿಗೆ, ಶಾಲೆಗೆ ಹೋಗುವಾಗ, ರಾತ್ರಿ ಮಲಗುವಾಗ..ಹೀಗೆ ಬೇರೆ ಬೇರೆ ಸಂದರ್ಭಗಳಲ್ಲಿ ಹೇಳುವ ಮಂತ್ರಗಳ ಕಲಿಕೆ. 'ಹೇಳಿಕೊಟ್ಟಷ್ಟನ್ನು ಮಕ್ಕಳು ಬಹುಬೇಗ ಕಲಿತುಕೊಂಡರು' ಎನ್ನುತ್ತಾರೆ ನಾಗರಾಜ ಭಟ್.
ಮಂತ್ರಗಳೊಂದಿಗೆ 'ಭೋಜನ'ಕ್ಕೂ ಮಹತ್ವ. ಇಂದಿನ 'ಫಾಸ್ಟ್ ಫುಡ್' ಕಾಲದಲ್ಲಿ ನಾವು ಉಣ್ಣುವುದಲ್ಲ, ಮುಕ್ಕುವುದು! ಅದರಲ್ಲೂ 'ಎಲೆಯೂಟ' ಎಲ್ಲಿದೆ? ಅಲ್ಲೋ ಇಲ್ಲೋ ಮದುವೆ, ಉಪನಯನ ಹೊರತುಪಡಿಸಿ, ಮಿಕ್ಕಂತೆ ಬಫೆಯ ಓಟ! ಅನಿವಾರ್ಯವೆಂಬ ಹಣೆಪಟ್ಟಿ! 'ಇಲ್ಲಿ ಬಾಳೆಲೆ ಊಟ ಲಭ್ಯ' ಅಂತ ಫಲಕ ತೂಗಾಡಿಸಿದ ಹೋಟೇಲುಗಳಲ್ಲಂತೂ ಬಾಳೆಲೆ ಊಟ ಖಚಿತ! ಇದು ಸ್ಥಿತಿ.ಬಾಳೆಎಲೆ ಮುಂದೆ ಹೇಗೆ ಕುಳಿತುಕೊಳ್ಳಬೇಕು, ಎಲೆಯನ್ನು ಹೇಗೆ ತೊಳೆಯಬೇಕು. ಯಾವ್ಯಾವ ಖಾದ್ಯ ಎಲ್ಲೆಲ್ಲಿ? ಉಪ್ಪು, ಉಪ್ಪಿನಕಾಯಿ, ಕೋಸಂಬರಿಗಳ ಸ್ಥಾನ ಎಲ್ಲಿ? ಮೊದಲು ಯಾವುದನ್ನು ಉಣ್ಣಬೇಕು ಎಂಬ ಪ್ರತ್ಯಕ್ಷ ಪಾಠ.
ಮೊದಲಿಗೆ ಅನ್ನಕ್ಕೆ ತುಪ್ಪ-ಅನ್ನನಾಳದ ಶುದ್ಧಿಗೆ. ನಂತರ 'ಕಡೆಬಾಳೆ'ಯಲ್ಲಿನ ಪಾಯಸದ ಸವಿ. ನಂತರ 'ಸಾರು'. ಮತ್ತೆ ಸಾಂಬಾರು, ಹುಳಿಇತ್ಯಾದಿ. ಕೊನೆಗೆ ಮಜ್ಜಿಗೆ. ಇದು ಜೀರ್ಣಶಕ್ತಿಗೆ. ಒಂದೊಂದು ಖಾದ್ಯಕ್ಕೂ ವೈಜ್ಞಾನಿಕ ವಿವರಣೆ.ಬುದ್ಧಿಶಕ್ತಿ ವೃದ್ಧಿಗೆ ನಿತ್ಯ 'ತಂಬುಳಿ' ಕಡ್ಡಾಯ. ಭೋಜನ ಕಲಿಕೆಗಾಗಿ ಐಟಂಗಳ ಸಂಖ್ಯೆ ದಿನೇದಿನೇ ವೃದ್ಧಿಸುತ್ತಿತ್ತು. ಮಕ್ಕಳಿಗಿದು 'ಬೋನಸ್'! ನಾಗರಾಜ ಭಟ್ ಹೇಳುತ್ತಾರೆ - 'ಅನುಭವಿಗಳೆಂದು ಕರೆಸಿಕೊಳ್ಳುವ ನಮ್ಮಿಂದಲೂ ಚೆನ್ನಾಗಿ ಊಟ ಮಾಡಿದರು. ಪರಸ್ಪರ ಎಲೆ ತಾಗದಂತೆ, ಅನ್ನದ ಒಂದಗುಳೂ ನೆಲಕ್ಕೆ ಬೀಳದ ಜಾಗೃತಿ ಮಕ್ಕಳಲ್ಲಿ ಮೂಡಿಸಿದೆ'.
ನಿತ್ಯ ಒಂದವಧಿ ಪುರಾಣದ ಕಥೆ, ಐತಿಹಾಸಿಕ ಘಟನೆಗಳು, ಆದರ್ಶ ಪುರುಷರ ಕಥೆಗಳಿಗೆ ಸೀಮಿತ. ಎಷ್ಟಾದರೂ ಮಕ್ಕಳ ಮನಸ್ಸು ತಾನೆ. ಆಟದತ್ತ ಹೊರಳುತ್ತದೆ. ಅದಕ್ಕಾಗಿ ಕೊನೆಗೆ ರಂಗಪಾಠಗಳು, ಜಾದೂ, ಮಿಮಿಕ್ರಿ, ಪೇಪರ್ ಕ್ರಾಪ್ಟ್. ಕೊನೆ ದಿವಸ 'ಲಲಿತಾಸಹಸ್ರನಾಮ ಹವನ'. ಉಚ್ಚಕಂಠದಿಂದ ಸಹಸ್ರನಾಮ ಪಠಣ. ಎಲ್ಲರಿಗೂ ಸಾಂಪ್ರದಾಯಿಕ ಉಡುಗೆ. 'ಮಕ್ಕಳಲ್ಲಿನ ಉತ್ಸಾಹ, ಕಲಿವ ದಾಹ ಕಂಡು ಬೆರಗಾದೆ' ಎನ್ನುತ್ತಾರೆ ಶ್ರೀಕೃಷ್ಣ ಉಪಾಧ್ಯಾಯ. ಮಕ್ಕಳಿಗಾಗಿ ಶಿಬಿರ ನಡೆದುದಾದರೂ, ಅದು ಹಿರಿಯರಲ್ಲಿ ಪರಿಣಾಮ ಬೀರಿತು ಎಂಬುದಕ್ಕೆ ಒಂದು ಉದಾಹರಣೆ. ಬಾಳೆಹಣ್ಣು ತಿನ್ನುವುದು ಹೇಗೆ? ಹಣ್ಣನ್ನು ಸುಲಿದು, ಕಚ್ಚಿಕಚ್ಚಿ ತಿನ್ನುವುದು, ಕೆಲವರಂತೂ ಇಡೀ ಹಣ್ಣನ್ನೇ 'ಗುಳುಂ'!. - ಹಾಗಲ್ಲ, ಸಿಪ್ಪೆಸುಲಿದು, ಅದನ್ನು ಕೈಯಿಂದ ಮುರಿದು ತಿನ್ನಬೇಕು. ಮಕ್ಕಳಿಗೆ ಈ ಪಾಠ ಹೇಳುತ್ತಿದ್ದಂತೆ ಅಲ್ಲೇ ಇದ್ದ ಹಿರಿಯರು 'ಹೌದಲ್ಲಾ' ಅಂತ ಉದ್ಘರಿಸಿದ್ದರಂತೆ. 'ನಾವೂ ಮಾಂಸಾಹಾರವನ್ನು ಬಿಡಬಹುದಲ್ವಾ ಅಂತ ಎಳೆಯ ಮಕ್ಕಳಿಬ್ಬರು ಕೇಳಿದಾಗ ನನಗೆ ಮಾತೇ ಬರಲಿಲ್ಲ' ನಾಗರಾಜ ಭಟ್ ಭಾವುಕರಾಗುತ್ತಾರೆ.
ಶಿಬಿರದ ಪರಿಣಾಮ ಇಷ್ಟು ಸಾಕಲ್ವಾ. ಎಂಟು ದಿವಸ ಜರುಗಿದ ಶಿಬಿರ 'ಪೂರ್ತಿ ಉಚಿತ.' ಹರೀಶ ಭಟ್, ನಟರಾಜ ಶರ್ಮ, ಕುಮಾರ ಭಟ್, ಆಶ್ವಿನಿಕುಮಾರ್.. ವಿದ್ವಾಂಸರು ಸಂಪನ್ಮೂಲ ವ್ಯಕ್ತಿಗಳಾಗಿದ್ದರು. ಶ್ರೀದೇವಿ ನಾಗರಾಜ ಭಟ್ ಶಿಬಿರಾಥರ್ಿಗಳಿಗೆ 'ತಾಯಿ'. ಮಕ್ಕಳ ಆರೋಗ್ಯದ ಹೊಣೆ ಇವರದು. ತನ್ನ ಮಕ್ಕಳಂತೆ - ಅಲ್ಲ - ಅದಕ್ಕಿಂತ ಹೆಚ್ಚು ಪ್ರೀತಿಸುವ ಇವರು ನಿಜಕ್ಕೂ 'ಅಮ್ಮ'. 'ಈ ರೀತಿಯ ಶಿಬಿರ ಕೆಲವು ವರುಷದ ಕನಸು. ರೂಪುರೇಷೆಯಲ್ಲೇ ಒಂದಷ್ಟು ವರುಷಗಳು ಸಾಗಿತ್ತು. ಎಷ್ಟಾದರೂ ಪ್ರವಾಹದ ವಿರುದ್ಧ ಈಜು ತಾನೆ' - ಶಿಬಿರ ಹಿಂದಿನ ತ್ರಾಸಗಳನ್ನು ಭಟ್ ಸೂಚ್ಯವಾಗಿ ಹೇಳುತ್ತಾರೆ.
ಇನ್ನೂರಕ್ಕೂ ಮಿಕ್ಕಿ ಅರ್ಜಿಗಳು ಬಂದಿತ್ತು. ನೂರು ಮಂದಿಗೆ ಮಾತ್ರ ಅವಕಾಶ. 'ನಮ್ಮ ಮಕ್ಕಳು ಸಂಸ್ಕಾರದಿಂದ ವಂಚಿತರಾಗುತ್ತಾರೆ' ಎಂಬ ಹಿರಿಯರ ಕಾಳಜಿ ಇದೆಯಲ್ಲಾ, ಅದು ಶಿಬಿರ ಯಶಸ್ಸಿನ ಗುಟ್ಟು.ಎಂಟು ದಿವಸದಲ್ಲಿ ಇಷ್ಟೆಲ್ಲಾ ಸಾಧ್ಯವಾ? 'ಪ್ರಶ್ನೆ ಸಹಜ. ನಿತ್ಯ ಬದುಕಿನಲ್ಲಿ ಸಿಗದ ವಿಚಾರಗಳಿವು. ಬೆರಗುಕಂಗಳ ಮಕ್ಕಳಿಗೆ ತೋರಿಸಿಕೊಟ್ಟರೆ ಸಾಕು, ತಕ್ಷಣ ಗ್ರಹಿಸಿಕೊಳ್ಳುತ್ತಾರೆ. ಒಮ್ಮೆ ಮನದೊಳಗೆ ಹೊಕ್ಕರೆ ಸಾಕು, ಮತ್ತೆ ಅಭ್ಯಾಸದಿಂದ ಕರಗತವಾಗುತ್ತದೆ. ನಿತ್ಯಾಭ್ಯಾಸದಿಂದ ಕಂಠಸ್ತವಾಗುತ್ತದೆ. ಈ ಹೇಳುವ ಪ್ರಕ್ರಿಯೆ ಇದೆಯಲ್ಲಾ ಕಾಲದ ಆವಶ್ಯಕತೆ' - ನಾಗರಾಜ ಭಟ್ ಹೇಳುತ್ತಾರೆ.
ಬದುಕಿಗೆ ಸಂಸ್ಕಾರವನ್ನು ನೀಡುವ ಇಂತಹ ಶಿಬಿರವೊಂದಕ್ಕೆ ನಾಗರಾಜ ಭಟ್ಟರು ನಾಂದಿ ಹಾಡಿದ್ದಾರೆ. ನಿಜಾರ್ಥದಲ್ಲಿ 'ಸಂಸ್ಕಾರ ಶಿಬಿರ' ಮಕ್ಕಳ ಮನಸ್ಸನ್ನು ಅರಳಿಸಿದೆ. 'ಇನ್ನೂ ಸ್ವಲ್ಪ ಹೆಚ್ಚು ದಿವಸ ಬೇಕಿತ್ತು' ಹಲವು ಹೆತ್ತವರ ಒತ್ತಾಯ. ಬದುಕಿನಲ್ಲಿ ಕಳೆದು ಹೋಗುವ ಮೌಲ್ಯ, ಸಂಸ್ಕಾರಗಳನ್ನು ಪುನಃ ಹಳಿಗೆ ತರುವ ಪ್ರಯತ್ನವನ್ನು ನಾಗರಾಜ ಭಟ್ ಸಂಗಡಿಗರು 'ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನ'ದ ಮೂಲಕ ಮಾಡುತ್ತಿದ್ದಾರೆ.

1 comments:

Manu bhat said...

chennagide

Post a Comment