'ಪೇಟೆಯಿಂದ ತರುವ ಹಣ್ಣು ಯಾವಾಗಲೂ ರುಚಿ! ಯಾಕೆಂದರೆ ರೊಕ್ಕ ಕೊಟ್ಟಿರುತ್ತೇವೆಲ್ಲಾ! ಆದರೆ ನಾವೇ ಬೆಳೆದ ಹಣ್ಣನ್ನು ತಿಂದಾಗ ಅದರ ರುಚಿ ಯಾವುದಕ್ಕೂ ಸಾಟಿಯಿಲ್ಲ. ಅದನ್ನು ತಿನ್ನುವುದು ಅಭಿಮಾನ-ಸ್ವಾಭಿಮಾನ' ಎನ್ನುತ್ತಾ ತಟ್ಟೆ ತುಂಬಾ ಚಿಕ್ಕು ಹಣ್ಣನ್ನು ತಂದಿಟ್ಟರು ಹಂಜ್ಹಾ . ಜೊತೆಗೆ 'ಇದನ್ನು ಕುಡಿಯಿರಿ. ನಿಂಬೆ ನಾವೇ ಬೆಳೆದದ್ದು' ಹಂಜ್ಹಾ ಅವರ ಮಡದಿ ಆಯಿಶಾ ದೊಡ್ಡ ಗ್ಲಾಸಲ್ಲಿ ಶರಬತ್ತು ತಂದಿಟ್ಟಾಗ-ದಂಪತಿಗಳ ಸಸ್ಯ, ಹಣ್ಣಿನ ಪ್ರೀತಿಗೆ ಮಾರು ಹೋದೆ.
ಹಂಜ್ಹಾರದು ಐದು ಸೆಂಟ್ಸಿನ ಜಾಗ. ಮೊದಲು ಬೋಳು ಗುಡ್ಡ. ನೀರಿಗೆ ತತ್ವಾರ. ಪುರಸಭೆಯ ಪೈಪುನೀರು ಅವರಿಗೆ ಕುಡಿನೀರು. ಐದು ಸೆಂಟ್ಸಲ್ಲಿ ಮೂರೂವರೆ ಸೆಂಟ್ಸ್ ಮನೆಯಿದೆ. ಉಳಿದ ಜಾಗ ಪೂರ್ತಿ ಹಣ್ಣಿನ ಗಿಡಗಳು. ಏನಿಲ್ಲವೆಂದರೂ ಮೂವತ್ತಕ್ಕೂ ಮಿಕ್ಕಿ ವಿವಿಧ ಜಾತಿಯ ಹಣ್ಣುಗಳಿರಬಹುದು. ಇನ್ನು ಒಂದೆರಡು ವರುಷದಲ್ಲಿ ಫಲನೀಡುತ್ತವೆ.
ಹಂಜ್ಹಾ ಅವರ ಒಂದೂವರೆ ಸೆಂಟ್ಸ್ನಲ್ಲಿ ಏನೂ ವಿಶೇಷವಿಲ್ಲದಿರಬಹುದು. ಆದರೆ 'ನಾವೇ ಬೆಳೆದ ಹಣ್ಣನ್ನು ತಿನ್ನುವುದು ಅಭಿಮಾನ' ಎನ್ನುವ ಅವರ ನಿಲುವು ಇದೆಯಲ್ಲಾ, ಇದನ್ನು ಗೌರವಿಸಬೇಕು. ಒಂದು ಕಿಲೋ ಚಿಕ್ಕು ಹಣ್ಣಿಗೆ ಮೂವತ್ತೋ ನಲವತ್ತೋ ತೆತ್ತು, ಅದನ್ನು ಪ್ಲಾಸ್ಟಿಕ್ ತೊಟ್ಟೆಯಲ್ಲಿ ತುಂಬಿ ತೂಗಿಸಿಕೊಂಡು ಬರುವುದರಲ್ಲೇ ಅಭಿಮಾನ ಪಡುವ ನಾವು, ನಮ್ಮನ್ನೊಮ್ಮೆ ಹಂಜ್ಹಾರೊಂದಿಗೆ ಹೋಲಿಸೋಣ! 'ಹೆಚ್ಚು ಹಣ ಇದ್ದವರು ಕೃಷಿ ಮಾಡುವುದು ದೊಡ್ಡದಲ್ಲ' ಜತೆಗಿದ್ದ ಬಾಬು ಶೆಟ್ರು ಪಿಸುಗುಟ್ಟಿದರು.
ಹೌದು. ಹೇಳುವಂತಹ ಕೃಷಿ ಅನುಭವ ಇಲ್ಲದ, ದೊಡ್ಡ ಆರ್ಥಿಕ ಸಂಪನ್ಮೂಲ ಇಲ್ಲದೆ ಹಂಜ್ಹಾ, ಇದ್ದ ಮಣ್ಣಿನಲ್ಲಿ ಒಂಚೂರು ಹಾಳು ಮಾಡದೆ, ಅಲ್ಲೆಲ್ಲಾ ಹೂವಿನ-ಹಣ್ಣಿನ ಗಿಡಗಳನ್ನು ಬೆಳೆಸಿರುವುದು ಗ್ರೇಟ್ ಅಲ್ವಾ. ಮನೆಯೆದುರಿನ ಚಿಕ್ಕು, ಮನೆ ಹಿಂಬದಿಯಲ್ಲಿರುವ ನಿಂಬೆಯೀಗ ಅತಿಥಿ ಸತ್ಕಾರಕ್ಕೆ ಮೀಸಲು!
ಒಮ್ಮೆ ಅತೀ ಹೆಚ್ಚು ಮಾವು ಬೆಳೆವ ಕೃಷಿಕರಲ್ಲಿಗೆ ಹೋಗಿದ್ದೆ. ಗಿಡ ತುಂಬಾ ತೂಗಿ-ತೊನೆವ ಫಲಗಳು. ನೋಟದಲ್ಲೇ ಮುಕ್ಕಿ ಬಿಡುವಾ ಎನ್ನುವಷ್ಟು ಅವುಗಳ ಬಿಂಕ-ಬಿನ್ನಾಣ! ಸರಿ, ತೋಟ ಸುತ್ತಿಯಾಯಿತು. ಇನ್ನೇನು ಹೊರಡುವ ಕ್ಷಣ ಬಂತು. ಕಾಫಿ-ಬೇಕರಿ ಚಿಪ್ಸ್ ಸೇವೆ. ಜತೆಗೆ ಮಾವಿನ ಹಣ್ಣು ಬರುತ್ತದೋ ಅಂತ ಕಾದದ್ದೇ ಬಂತು. ಆಸೆ ನಿರಾಸೆ. ಗಿಡಗಳಲ್ಲಿ ಲೋಡ್ಗಟ್ಟಲೆ ಫಲವಿದ್ದರೂ, 'ಕೊಟ್ಟು ಸಂತೋಷ ಪಡುವ' ಮನಸ್ಸಿಲ್ಲದಿದ್ದರೆ ಹೇಗೆ?
ಹಂಜ್ಹಾ ಅವರ ಆತಿಥ್ಯಕ್ಕೆ ಈ ಘಟನೆ ನೆನಪಾಯಿತಷ್ಟೇ. ಮನೆಗೆ ತಾಗಿ ಅವರ ಅತ್ತೆ ಮನೆ. ಅಲ್ಲೂ ಗಿಡಗಳು. ಮೊದಲು ಅಂಗಳವೇ ಇಲ್ಲವಂತೆ. ಪತ್ನಿಯ ಒತ್ತಾಯಕ್ಕೆ ಮಣಿದು, ಅಂಗಳಕ್ಕೆ ಕಾಂಕ್ರಿಟ್ ಹಾಕಿದ್ದಾರೆ. 'ಅವಳಿಗೆ ಹಾವಿನ ಭಯ' ಆಯಿಶಾರನ್ನು ಛೇಡಿಸುತ್ತಾರೆ. ತಾನು ಎಲ್ಲೇ ಹೋಗಲಿ, ಬರುವಾಗ ಯಾವುದಾದರೊಂದು ಹಣ್ಣಿನ ಗಿಡ ಅವರ ಬತ್ತಳಿಕೆಯಲ್ಲಿರುತ್ತದೆ. ಇಷ್ಟು ಹೇಳುವಾಗ ಆರೈಕೆ ಬಗ್ಗೆ ಹೇಳದಿದ್ದರೆ ಅಪೂರ್ಣ. ಯಾವುದೇ ಸರಕಾರಿ ಗೊಬ್ಬರ ಇವರ ಕಂಪೌಂಡ್ ಪ್ರವೇಶಿಸಿಲ್ಲ. ಕಂಪೆನಿ ಗೊಬ್ಬರ ಉಹೂಂ.
ಮನೆಯೆದುರೇ ಸಾಗುವ ಮಾರ್ಗದುದ್ದಕ್ಕೂ ಹಂಜ್ಹಾ ಬೆಳಿಗ್ಗೆ ವಾಕಿಂಗ್ ಹೋಗ್ತಾರೆ. ಹೋಗುವಾಗ ಪ್ಲಾಸ್ಟಿಕ್ ಚೀಲ ಜತೆಗಿರುತ್ತದೆ. ಬರುವಾಗ ಸೆಗಣಿಯಿಂದ ಅದು ತುಂಬಿರುತ್ತದೆ! 'ದಾರಿಯುದ್ದಕ್ಕೂ ಬಿದ್ದಿರುವ ಸೆಗಣಿಯನ್ನು ಆಯುವುದು ಕಷ್ಟದ ಕೆಲಸವಲ್ಲ. ಇದು ನನಗೆ ಅವಮಾನವೂ ಅಲ್ಲ' ಎನ್ನುತ್ತಾರೆ ಹಂಜ್ಹಾ. ಪರಿಚಿತರಲ್ಲಿಂದ ಆಡಿನ ಹಿಕ್ಕೆಯನ್ನೂ ತರುತ್ತಾರೆ. ಲಭ್ಯ ನೀರುಣಿಕೆ. ಇವಿಷ್ಟು ಬಿಟ್ಟರೆ ಬೇರ್ಯಾವ ಆರೈಕೆಯೂ ಇಲ್ಲ. ಫಲ ಬಿಡುವ ಚಿಕ್ಕು, ನಿಂಬೆ ಸ್ನೇಹಿತರಿಗೆ, ಬಂಧುಗಳಿಗೆ ಹಂಚುತ್ತಾರೆ. 'ಇಷ್ಟು ಸಾಲದು' ಎಂಬ ಅತೃಪ್ತಿ. ಅದಕ್ಕಾಗಿ ಸನಿಹದಲ್ಲೇ ನಲವತ್ತು ಸೆಂಟ್ಸ್ ಜಾಗ ಖರೀದಿಸಿದ್ದಾರೆ. '
ಎಲ್ಲವೂ ಸಾಲದ ಹಣದಿಂದ ನಿಭಾಯಿಸಿದ್ದೆ. ಅದನ್ನು ತೀರಿಸುವುದು ಹೇಗೆ? ದುಡಿದು ಸಂಪಾದಿಸಲು ಕಡಲಾಚೆ ಹಾರಲು ಸಿದ್ಧರಾಗಿದ್ದಾರೆ ಹಂಜ್ಹಾ. 'ಐದು ವರುಷ ಕಳೆದು ಬನ್ನಿ. ಎಂತೆಂತಾ ಹಣ್ಣು ನಿಮಗೆ ಕೊಡುತ್ತೇನೆ ನೋಡಿ' - ಅವರ ಆತ್ಮವಿಶ್ವಾಸಕ್ಕೆ ಜೈ. ಬೆಳೆಸಿ ತಿನ್ನುವ ರುಚಿಯನ್ನು ಸವಿಯಲು, ಆ ಸವಿಯನ್ನು ಉಳಿದವರಿಗೆ ಹಂಚುವ ಹಂಜ್ಹಾ ನೆನಪಾದಾಗಲೆಲ್ಲಾ ಕಾಡುತ್ತಿರುತ್ತಾರೆ! ಬೊಗಸೆಯಗಲದ ಜಾಗದಲ್ಲಿ ಇವಿಷ್ಟಲ್ಲದೆ- ಚಿಕ್ಕ ತಾವರೆ ಕೊಳ, ಅದರಲ್ಲೊಂದಿಷ್ಟು ಮೀನುಗಳು, ಗೂಡಿನೊಳಗೆ ಲೊಚಗುಟ್ಟುವ ಐದಾರು ಬಣ್ಣಬಣ್ಣದ ಪಕ್ಷಿಗಳು, ಅಂಗಳ ತುಂಬಿಕೊಂಡ ನೈಸರ್ಗಿಕ ನೆರಳು.
Home › Unlabelled › ಬೆಳೆಸಿ ತಿನ್ನುವ 'ರುಚಿ'
0 comments:
Post a Comment