ಶಂಕರರಾಯರ ಜೀನಸು ಅಂಗಡಿ ಸೀಗೋಡು ಪರಿಸರದಲ್ಲಿ ಹೆಸರು ಮಾಡಿತ್ತು. ಒಳ್ಳೆಯ ವ್ಯಾಪಾರ. ಗಿರಾಕಿಗಳಲ್ಲಿ ಹೆಚ್ಚಿನವರೂ ಕೂಲಿಕಾರ್ಮಿಕರು. ಹಳ್ಳಿ ಅಂಗಡಿಯಲ್ಲಿ ಸಾಲ ಇಲ್ಲದಿದ್ದರೆ ಹೇಗೆ? ಈ ಸಾಲವೇ ರಾಯರನ್ನು ಸೋಲಿಸಿತು.
ಹದಿನೆಂಟು ವರುಷದ ನಂತರ ವ್ಯಾಪಾರ ವಿದಾಯ ಅನಿವಾರ್ಯವಾಯಿತು.ಬದುಕಿಗೊಂದು ವೃತ್ತಿ ಬೇಕಿತ್ತು. ಇಳಿ ವಯಸ್ಸಿನಲ್ಲಿ ಏನು ಮಾಡೋಣ? ಬಾಲ್ಯದ ಹಪ್ಪಳ ತಯಾರಿ ನೆನಪಿಗೆ ಬಂತು. ಅಪ್ಪನ ಯೋಚನೆಗೆ ಮಗ ರಾಘವೇಂದ್ರರ ಸಮ್ಮತಿ. ಮನೆಯ ಒಂದು ಭಾಗದಲ್ಲೇ ಸುರುವಾಯಿತು ಹಪ್ಪಳ ಉದ್ದಿಮೆ. ಉತ್ಪಾದನೆ ಶಂಕರರಾಯರದು; ಮಗನಿಗೆ ಮಾರುಕಟ್ಟೆ. 'ಗುಣಮಟ್ಟ ಚೆನ್ನಾಗಿರಬೇಕು' ಎಂಬುದು ಮೂಲಮಂತ್ರ.
ಮೊದಲಿಗೆ ರಾಗಿ, ಗೋಧಿ ಹಪ್ಪಳ ಮಾಡಿದ್ದರು. 'ಅದನ್ನು ಮಾರುಕಟ್ಟೆಯಲ್ಲಿ ಕೇಳುವವರೇ ಇಲ್ಲ. ಮಾಡಿದಷ್ಟು ಉಚಿತ ಕೊಟ್ಟದ್ದೇ ಬಂತು.' ನಂತರ ಹಲಸು, ಕೋಲುಗೆಣಸಿನ ಹಪ್ಪಳ ಸುರು.'ಜೀನಸು ಅಂಗಡಿಯಿದ್ದಾಗ ಜನಸಂಪರ್ಕವಿತ್ತು. ಮೊದಮೊದಲು ರುಚಿ ಹಿಡಿಸಲು ಉಚಿತವಾಗಿ ಕೊಟ್ಟರು. ಹಲವರಿಗೆ ಹಿಡಿಸಿತು. 'ನಮ್ಮಲ್ಲಿ ನಂಬಿಕೆ ಇತ್ತು. ತೆಕ್ಕೊಂಡ್ರು.'ಹಲಸಿನ ಹಪ್ಪಳಕ್ಕೆ ಮೊದಲ ಆದ್ಯತೆ. ಉಳಿದ ಋತುವಿನಲ್ಲಿ ಕೋಲುಗೆಣಸಿನದು.
ಹಲಸಿನ ಕಾಯಿಯ ಸೊಳೆ ದಪ್ಪ ಬೇಕು, ಸಿಹಿಯಾಗಿರಬೇಕು. ಇಂಥ ಗುಣದವನ್ನು ಮೊದಲೇ ಗೊತ್ತುಮಾಡಿಟ್ಟು ಕೊಳ್ಳುತ್ತಾರೆ. ತಾವೇ ಹೋಗಿ ಕೊಯಿದು ತರುತ್ತಾರೆ. ಒಂದು ಹಲಸಿಗೆ 3 - 3.50 ರೂಪಾಯಿ ಪಾವತಿ. ಮನೆ ತಲಪುವಾಗ ಐದು ರೂಪಾಯಿ ಆಗುತ್ತದೆ. ಬೇಯಿಸಿ ಗ್ರೈಂಡರ್ನಲ್ಲಿ ಅರೆದು, ಉಂಡೆ ಮಾಡಿ, ಚಪಾತಿ ಮಣೆಯಲ್ಲಿಟ್ಟು ಒತ್ತಿ ಹಪ್ಪಳ ತಯಾರಿ. ಎರಡು ಬಿಸಿಲು ಒಣಗಬೇಕು. ಮಳೆಗಾಲದಲ್ಲಿ ಡ್ರೈಯರ್ ಬಳಕೆ. ಒಂದು ದಿನ ಸಾಕು. ಒಂದು ಹಲಸಿನಕಾಯಿಯಿಂದ 150 ಹಪ್ಪಳ.ಹಲಸಿಗೆ ಜೂನ್, ಜುಲಾಯಿ, ಆಗಸ್ಟ್ ಋತು.
ಉಳಿದ ಸಮಯದಲ್ಲಿ ಸನಿಹದ ಎನ್.ಆರ್.ಪುರದಿಂದ ತರುವ ಕೋಲುಗೆಣಸಿನದು (ಮಲೆಯಾಳದಲ್ಲಿ 'ಕಪ್ಪ'). 'ಕಪ್ಪ'ಕ್ಕೆ ಕಿಲೋಗೆ 7 ರೂಪಾಯಿಯಂತೆ ಖರೀದಿ. ಒಂದು ಕಿಲೋ ಗೆಣಸಿನಿಂದ 25-30 ಹಪ್ಪಳ ತಯಾರಿ. 3 - 4ದಿವಸಗಳಿಗೆ 50 ಕಿಲೋ ಬೇಕು. 'ಹಲಸಿನಲ್ಲಿ ಗೆಣಸಿಗಿಂತ ಕೆಲಸ ಜಾಸ್ತಿ. ಗೆಣಸಿನ ಸಿಪ್ಪೆ ತೆಗೆದು ಬೇಯಿಸಿ ಪುನಃ ಅದರಲ್ಲಿದ್ದ ದೊಡ್ಡ ನಾರನ್ನು ತೆಗೆಯಬೇಕು. ಮತ್ತೆಲ್ಲಾ ಹಲಸಿನ ಹಪ್ಪಳದಂತೆಯೇ ತಯಾರಿ.ಇಪ್ಪತ್ತೈದು ಹಪ್ಪಳಗಳ ಪ್ಯಾಕೆಟ್. ಬೆಲೆ ಇಪ್ಪತ್ತು ರೂಪಾಯಿ. ' 'ಸುರು ಮಾಡಿದ ಕಾಲದಿಂದ ಐದು ವರ್ಷಗಳಲ್ಲಿ ದರ ವ್ಯತ್ಯಾಸ ಮಾಡಿಲ್ಲ.' ಎನ್ನುತ್ತಾ, 'ಮಾರುಕಟ್ಟೆಯಲ್ಲಿ ಸಿಗುವ ಹಪ್ಪಳಗಳಿಂತ ನಮ್ಮದರ ದರ ಜಾಸ್ತಿ.ಆದರೆ ಶುಚಿರುಚಿಗಳಿಂದಾಗಿ ಬೇಡಿಕೆ ಹೆಚ್ಚು.' ಎನ್ನುತ್ತಾರೆ.
'ಮಾರುಕಟ್ಟೆಯಲ್ಲಿ ಗೆಣಸಿನ ಹುಡಿಯ ಹಪ್ಪಳ ಸಿಗ್ತದೆ. ಅದು ಹುರಿದಾಗ ಬೇಗನೆ ಮೆದು ಆಗುತ್ತದೆ. ನಮ್ಮ ಹಪ್ಪಳ ಎಣ್ಣೆ ಕುಡಿಯುವುದಿಲ್ಲ. ಕಾರಣ, ಹುಡಿಯ ಹಪ್ಪಳದಲ್ಲಿ ನಾರಿರುವುದಿಲ್ಲ. ಗೆಣಸಿನಿಂದಲೇ ಮಾಡುವುದರಲ್ಲಿ ನಾರಿನಂಶ ಹೆಚ್ಚು.'ಅಪ್ಪ-ಮಗ ಸೇರಿ ದಿನಕ್ಕೆ 500-700 ಹಪ್ಪಳ ತಯಾರಿ. 'ಮದುವೆ ಸಮಾರಂಭಗಳಿಗೆ ವಿಶೇಷವಾಗಿ ಆರ್ಡರ್ ಬರುತ್ತದೆ. ಮದುವೆ ಊಟಕ್ಕೆ ಚಿಕ್ಕ ಹಪ್ಪಳ ಬೇಕು. ತಯಾರಿಗೆ ಹೆಚ್ಚು ಸಮಯ ಹಿಡಿಯುತ್ತದೆ. 'ಕಳೆದ ಮದುವೆ ಋತುವಿನಲ್ಲಿ ಪೂರೈಸಲು ಸಾಧ್ಯವಾಗದೆ ಐವತ್ತು ಸಾವಿರ ರೂಪಾಯಿಯ ಆರ್ಡರ್ ಬಿಟ್ಟಿದ್ದೇವೆ!' ಎನ್ನುತ್ತಾರೆ.
ಮದುವೆ ಹಪ್ಪಳದ ವ್ಯಾಸ ನಾಲ್ಕಿಂಚಾದರೆ ಮಾಮೂಲಿಯದಕ್ಕೆ ಆರಿಂಚು. ಹಲಸಿನ ಹಪ್ಪಳಕ್ಕೆ ಬೇಡಿಕೆ ಹೆಚ್ಚು. ಪ್ರವಾಸಿ ತಾಣಗಳಲ್ಲಿ ಹಲಸಿನ ರುಚಿ ಗೊತ್ತಿರುವ ದೂರದವರು ಒಯ್ಯುತ್ತಾರೆ. ಮಾರುಕಟ್ಟೆಗೆ ತಮ್ಮದೇ ಆದ ಬ್ರಾಂಡ್ ಹೆಸರಲ್ಲಿ ಸ್ಟಿಕ್ಕರ್ ಹಾಕಿ ಕೊಡುತ್ತಾರೆ. ಕೆಲವು ಅಂಗಡಿಯವರು ಇವರ ಸ್ಟಿಕರ್ ತೆಗೆದು ತಮ್ಮದನ್ನು ಅಂಟಿಸಿ ಹೆಚ್ಚು ದರಕ್ಕೆ ಮಾರುವುದೂ ಇದೆಯಂತೆ. ಮನೆಯಿಂದಲೇ ಒಯ್ಯುವವರೂ ಇದ್ದಾರೆ.
'ಈಗ ಹಣಕ್ಕೆ ಅಡಚಣೆಯಾದರೆ, ಐದಾರು ಪ್ಯಾಕೆಟ್ ಹಪ್ಪಳವನ್ನು ಪೇಟೆಗೆ ಒಯ್ದರೆ ಆಯಿತು' ಎನ್ನುವಷ್ಟು ಬೇಡಿಕೆ ಇವರ ಹಪ್ಪಳಕ್ಕೆ. ಕಳೆದ ಐದು ವರುಷಗಳಲ್ಲಿ ಕಚ್ಚಾವಸ್ತು ಸಿಕ್ಕದೆ ಅಪರೂಪಕ್ಕೊಮ್ಮೆ ಹಪ್ಪಳ ಕೆಲಸ ರಜಾ ಪಡೆದುದೂ ಇದೆ.'ಮನೆಬಾಡಿಗೆ, ಕೂಲಿ, ಕಚ್ಚಾವಸ್ತುಗಳ ವಿಪರೀತ ಏರಿಕೆಯಿಂದಾಗಿ ಹಪ್ಪಳ ಪ್ಯಾಕೆಟಿನ ದರ ಭವಿಷ್ಯದಲ್ಲಿ ಏರಿಸದೆ ನಿರ್ವಾಹವಿಲ್ಲ' ಜತೆಗಿದ್ದ ವಸಂತಕುಮಾರ್ ಹರ್ಡೀಕರ್ ಕಿವಿಯಲ್ಲಿ ರಾಘವೇಂದ್ರ ಉಸುರಿದರು!.
(ವಿ.ಎಂ.ಶಂಕರ ರಾವ್, ಸೀಗೋಡು, ಅಂಚೆ : ದೇವಗೋಡು, ಕೊಪ್ಪ ತಾಲೂಕು - 577 112, ದೂರವಾಣಿ: 08266-251937, ಮೊ: ೯೪೪೮೫೨೪೬೩೭)
Home › Unlabelled › ಬದುಕು ಹಸನಾಗಿಸಿದ ಹಪ್ಪಳ ಉದ್ದಿಮೆ
0 comments:
Post a Comment