Saturday, October 13, 2012

'ಪೇಸ್ಬುಕ್ನ ಎಗ್ರಿಕಲ್ವರಿಸ್ಟ್' - ಸದಸ್ಯರ ಮುಖಾಮುಖಿ


                 ಮಿತ್ರ ಮಹೇಶ್ 'ಪೇಸ್ಬುಕ್ನ ಎಗ್ರಿಕಲ್ವರಿಸ್ಟ್' ವಿಚಾರಗಳನ್ನು ಆಗಾಗ್ಗೆ ಹೇಳುತ್ತಲೇ ಇದ್ದರು. ಪೇಸ್ ಬುಕ್ ನಿರಕ್ಷರಿಯಾಗಿದ್ದ ನನಗದು ಯಾಕೋ ಮನದೊಳಗೆ ಹೊಕ್ಕಿರಲಿಲ್ಲ. ಅಲ್ಲಿ ನಡೆವ ಚರ್ಚೆ, ವಿಚಾರಗಳನ್ನು ವಿವರಿಸುತ್ತಿದ್ದರು. ಸ್ನೇಹಿತ ಕಲಾವಿದ ಎಸ್ಸಾರ್ ಪುತ್ತೂರು ಇವರ ಒತ್ತಾಸೆಯಂತೆ ಫೇಸ್ ಬುಕ್ಕಿನಲ್ಲಿ ನನ್ನ ವಿಳಾಸವೂ ಹೊಕ್ಕಿತು. ಅಪರೂಪಕ್ಕೊಮ್ಮೆ 'ಒಳಗೆ ಹೋಗಿ ಹೊರಗೆ ಬರುವುದು' ಬಿಟ್ಟರೆ ಅನುಸರಿಸಿದವನಲ್ಲ. ಅಷ್ಟು ಪುರುಸೊತ್ತು ಇಲ್ಲವೆನ್ನಿ!

                 ಅಕ್ಟೋಬರ್ 12, ಅಪರಾಹ್ನ 3-30ಕ್ಕೆ ಪುತ್ತೂರಿನ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಕಚೇರಿಯಲ್ಲಿ ಜರುಗಿದ 'ಎಗ್ರಿಕಲ್ವರಿಸ್ಟ್' ಗುಂಪಿನ ಸದಸ್ಯರ ಮುಖಾಮುಖಿ ನಡೆಯಿತು. ಅಪರಿಚಿತ ಮುಖಗಳ ಉಪಸ್ಥಿತಿ. ಎಲ್ಲರಲ್ಲೂ ಸಶಕ್ತ ಮಾಧ್ಯಮವೊಂದರ ಸದಸ್ಯರೆನ್ನುವ ಖುಷಿಯಿತ್ತು. ಮಾತುಕತೆಯೂ ಕೂಡಾ. ಕೃಷಿಯ ಈಗಿನ ಸಂಕಟದ ಕಾಲದಲ್ಲಿ ಅದಕ್ಕೆ ಪರಿಹಾರವನ್ನು ಸಂವಹನದ ಮೂಲಕ ಕಂಡುಕೊಳ್ಳುವ ಆಶಯವೂ ಎದ್ದು ಕಾಣುತ್ತಿತ್ತು.

                 ಎಲ್ಲರೂ ತಂತಮ್ಮ ಕಂಪ್ಯೂ ಜ್ಞಾನದ ಮಿತಿಯಲ್ಲಿ ಸಂವಹನ ಮಾಡಿದ್ದಾರೆ. ಇದಕ್ಕಾಗಿಯೇ ಕಂಪ್ಯೂ ಕಲಿತವರೂ ಇದ್ದಾರೆ. ತಮ್ಮಲ್ಲಿರುವ ಜ್ಞಾನವನ್ನು ಒಂದಷ್ಟು ಮಂದಿಗೆ ಹರಡಿಸುವ ಹಪಹಪಿಕೆಯೂ ಇತ್ತು. ಉತ್ತಮ ಬೆಳವಣಿಗೆ. ಗುಂಪಿಗೆ ಒಂದು ವರುಷವಾದ ಖುಷಿಯಲ್ಲಿ ಅದರ ನಿರ್ವಹಣೆ ಮಾಡುವ ಮಹೇಶ್ ಪುಚ್ಚಪ್ಪಾಡಿ ಸಭೆಯನ್ನು ಆಯೋಜಿಸಿದ್ದರು. ಸಭೆಯ ಕಲಾಪವನ್ನು ಕುತೂಹಲ ಕಣ್ಣಿನಿಂದ ನೋಡಿ, ಕೊನೆಗೆ 'ನಾನೂ ಕೂಡಾ ಗುಂಪಿನ ಸದಸ್ಯನಾಗಬೇಕು' ಎನ್ನುವ ನಿರ್ದಾರಕ್ಕೆ ಬಂದೆ!
                   ಮಹೇಶ್ ಕಾರ್ಯನಿರತ ಪತ್ರಕರ್ತ. ವಿಜಯವಾಣಿಯ ಹಿರಿಯ ವರದಿಗಾರರು. 'ಕಾರ್ಯನಿರತ ಪತ್ರಕರ್ತನೊಬ್ಬ ಋಣಾತ್ಮಕ ಮನಸ್ಸಿನಿಂದ ಹೊರ ಬಂದು ಸಮಾಜಮುಖಿಯಾಗಿಯೂ ಕೆಲಸ ಮಾಡಬಹುದು' ಎಂಬುದನ್ನು ಮಹೇಶ್ ಪುಚ್ಚಪ್ಪಾಡಿ ಕೃತಿಯ ಮೂಲಕ ತೋರಿಸಿದ್ದಾರೆ. ಇದೊಂದು ಮಾದರಿ ಗುಣ. ಎಲ್ಲರಿಗೂ ಇದು ಬರುವಂತಹುದಲ್ಲ.
ಮಹೇಶ್ ಮತ್ತು ನಾನು ಪುತ್ತೂರಿನ 'ಭಟ್ ಬಿಲ್ಡಿಂಗ್'ನಲ್ಲಿರುವವರು. ದಿವಸಕ್ಕೆ ಮೂರ್ನಾಲ್ಕು ಬಾರಿಯಾದರೂ ಮುಖದರ್ಶನ ಆಗಿಯೇ ಆಗುತ್ತದೆ. ನಿತ್ಯ ಮುಖಾಮುಖಿಯಾಗುತ್ತಾ ಇರುವವರು ಹೊಗಳುವುದೇನನ್ನು? ಹೊಗಳಿದರೂ ಮುಜುಗರ! 'ಇದರಲ್ಲಿ ಏನೋ ಕರಾಮತ್ತು ಇರಬೇಕು' ಎಂದು ಅನ್ನಿಸದೆ ಇರಲಾರದು. ಹಾಗಾಗಿ ಅವರ ಬಗ್ಗೆ ಬ್ಲಾಗಿನಲ್ಲಿ ನಾಲ್ಕು ಮಾತು ಹೇಳೋಣ ಅನ್ನಿಸಿತು. ಏನಂತೀರಿ?

ಅತಿಥಿಗಳ ಹಿತೋಕ್ತಿ
                   "ಕೃಷಿಕರ ಬಳಿ ಅನೇಕ ಮಾಹಿತಿಗಳು ಇವೆ. ಇಂದಿನ ಆಧುನಿಕ ಯುಗದಲ್ಲಿ ಇಂತಹ ಅಪರೂಪದ ಕೃಷಿ ಮಾಹಿತಿಗಳ ವಿನಿಮಯ ಅಗತ್ಯವಿದೆ. ಈ ನಿಟ್ಟಿನಲ್ಲಿ ಕೃಷಿಪರ ಮಾಧ್ಯಮಗಳ ಅನಿವಾರ್ಯತೆ ಇದೆ" ಎಂದು ಪತ್ರಕರ್ತ 'ಶ್ರೀ' ಪಡ್ರೆ ಹೇಳಿದರು. ಅವರು 'ಪೇಸ್ಬುಕ್ನ ಎಗ್ರಿಕಲ್ವರಿಸ್ಟ್' ಗುಂಪಿನ ಮೊದಲ ಸಭೆಯಲ್ಲಿ ಅತಿಥಿಯಾಗಿ ಮಾತನಾಡಿದರು. ಕೃಷಿಯ ಕಡೆಗೆ ಎಷ್ಟು ಜನ ಆಕರ್ಷಿತರಾಗುತ್ತಾರೋ ಎಂಬುದು ಎಷ್ಟು ಮುಖ್ಯವಾಗುತ್ತದೋ ಅಷ್ಟೇ ಮುಖ್ಯವಾಗಿ ಮಾಹಿತಿಗಳ ವಿನಿಯಮವೂ ಅಗತ್ಯವಾಗುತ್ತದೆ. ಮೌಲಿಕವಾದ ಮಾಹಿತಿಗಳು ಕೃಷಿಕರಿಗೆ ವಿವಿಧ ಮೂಲಗಳ ಮೂಲಕ ಸಿಕ್ಕಾಗ ಅನುಭವಗಳ ಮೂಟೆ ದೊಡ್ಡದಾಗುತ್ತದೆ. ಎಲ್ಲಾ ಮಾಧ್ಯಮಗಳಲ್ಲೂ ಜಳ್ಳು ಇರುತ್ತದೆ, ಅದೇ ರೀತಿ ಪೇಸ್ಬುಕ್ನ ಗುಂಪಿನಲ್ಲೂ ಇರಬಹುದು, ಅದಕ್ಕೆ ಹೆಚ್ಚು ಮಹತ್ವ ನೀಡದೆ ಪ್ರಯೋಜನಕರವಾದ ಮಾಹಿತಿಗಳನ್ನು ಪಡೆಯಬಹುದು" ಎನ್ನುತ್ತಾ, "ಅನೇಕ ಗುಂಪುಗಳು ಸಮಾಜದಲ್ಲಿ ಗುಂಪುಗಾರಿಕೆ ಮಾಡುತ್ತಲೇ ಇವೆ! ಆದರೆ ಪೇಸ್ಬುಕ್ನ ಈ ಗುಂಪುಗಾರಿಕೆ ನಿಜಕ್ಕೂ ಉತ್ತಮ ಬೆಳವಣಿಗೆ" ಎಂದರು.

                    ಸಭೆಯ ಅಧ್ಯಕ್ಷತೆಯನ್ನು ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಮಂಚಿ ಶ್ರೀನಿವಾಸ ಆಚಾರ್ ವಹಿಸಿ, 'ಕೃಷಿಕರಿಗೆ ವಿವಿಧ ರೀತಿಯ ಸಂವಹನಗಳು ತೀರಾ ಅಗತ್ಯ ಇದೆ.ಕೃಷಿಕರು ಕೃಷಿಯ ಜೊತೆಗೆ ಮಾತನಾಡುವುದು ಮತ್ತು ಬರೆಯಲು ಕೂಡಾ ಕಲಿಯಬೇಕು. ಇದಕ್ಕೆ ಹಿಂಜರಿಕೆ ಇರಬಾರದು, ಹೀಗಾದಾಗ ಮಾತ್ರ ಮಾಹಿತಿ ಸಿಗಲು ಸಾಧ್ಯ' ಎಂದರು.
                     ಸಭೆಯಲ್ಲಿ ಗುಂಪಿನ ಅನೇಕ ಸದಸ್ಯರು ಭಾಗವಹಿಸಿದ್ದರು. ಎಗ್ರಿಕಲ್ಚರಿಸ್ಟ್ ಗುಂಪಿನಿಂದಾಗ ಪ್ರಯೋಜನ ಹಾಗೂ ಬೆಳವಣಿಗೆಯ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಯಿತು. ಪತ್ರಕರ್ತ ಮಹೇಶ್ ಪುಚ್ಚಪ್ಪಾಡಿ ಸ್ವಾಗತಿಸಿ, ವಂದಿಸಿದರು.

(link : http://www.facebook.com/groups/Agriculturist/

0 comments:

Post a Comment