ನೆಂಟರು ದಿಢೀರ್ ಬಂದಾಗ ಚಹಾ ಮಾಡಲು ಮನೆಯೊಳಗೆ ಹಾಲಿಲ್ಲ. ಕರೆಯಲು ಹಟ್ಟಿಯಲ್ಲಿ ದನಗಳಿಲ್ಲ. ಹಾಲಿನ ಹುಡಿಗೆ ಅಂಗಡಿಗೆ ಓಟ. ನೂರು ಗ್ರಾಮ್ ಹುಡಿಯನ್ನು ಚಿನ್ನ ತೂಗುವಂತೆ ತೂಗಿಕೊಡುವ ಅಂಗಡಿಯಾತನ ಕರಾಮತ್ತು ಎಂಭತ್ತು ಗ್ರಾಮಿಗೆ ಸೀಮಿತ! ಹಾಲಿನ ಹುಡಿಗೆ ಬಿಸಿನೀರು ಸೇರಿಸಿ ಕಲಕಿದಾಗ ದಪ್ಪದ ಹಾಲು ರೆಡಿ. ಅಮ್ಮನಿಗೆ ಗೊತ್ತಾಗದಂತೆ ಒಂದೆರಡು ಚಮಚ ಬಾಯಿಗೆ ಸುರಿದುಕೊಂಡಾಗ ಆಹಾ.. ಸ್ವಾದ..! ಒಂದೈದು ನಿಮಿಷದಲ್ಲಿ ಬಿಸಿಬಿಸಿ ಚಹಾ ಹೀರಲು ಸಿದ್ಧ.
ಬಿಳಿ ಡಬ್ಬ. ಅದರಲ್ಲಿ 'ಮಿಲ್ಕ್ ಬೇಬಿ' ಚಿತ್ರ. ಹಾಲು ಕುಡಿಯುವಾಗ ಮಗುವಾಗಬೇಕೆನ್ನುವ ಸಂದೇಶ. ಡಬ್ಬದೊಳಗೆ ಉರುಟಾದ ದೊಡ್ಡ ಚಮಚ. ತಿಂಡಿ ಡಬ್ಬ ಖಾಲಿಯಾದಾಗ ಹಾಲಿನ ಡಬ್ಬ ಹುಡುಕಿ, ಹುಡಿಯನ್ನು ಬಾಯೊಳಗೆ ಇಳಿಸಿಕೊಂಡ ದಿನಗಳು ಮರೆಯದು. ಮೋರೆಗಂಟಿದ ಶೇಷ ಕಳ್ಳತನಕ್ಕೆ ಸಾಕ್ಷಿ. ಅಂಟಂಟಾಗಿ ಬಾಯೊಳಗೆ ರಸ ಬಿಟ್ಟುಕೊಟ್ಟಾಗ ಉಂಟಾದ ಸ್ವಾದವು ಇನ್ನೊಂದು ಚಮಚ ಹುಡಿಗಾಗಿ ಹಪಹಪಿಸುತ್ತಿದ್ದುವು. ಬಡವರ ಪಾಲಿಗೆ 'ಹಾಲಿನ ಹುಡಿ'ಯು ಪಂಚಾಮೃತವಾದ ದಿನಮಾನಗಳಿವು. ಈ ಹಾಲಿನ ಹುಡಿಯ ಹಿಂದೆ 'ಅಮುಲ್ ಜನಕ ಡಾ. ವರ್ಗೀಸ್ ಕುರಿಯನ್' ಇದ್ದಾರೆಂಬುದು ಆಗ ಗೊತ್ತಿರಲಿಲ್ಲ.
ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ, ಆನಂದ್ - ಇವರ ಹಾಲು ಉತ್ಪನ್ನಗಳ ಬ್ರಾಂಡ್ 'ಅಮುಲ್'. 'ಅಮುಲ್' ಅಂದರೆ ಸಾಕು, ಹಾಲಿನ ಉತ್ಪನ್ನಗಳು ಸಾಲು ಸಾಲು ಕಣ್ಮುಂದೆ ಬಂದುಬಿಡುತ್ತದೆ. ಒಕ್ಕೂಟದ ಪರಿಚಯ ಪ್ರತ್ಯೇಕ ಹೇಳಬೇಕಾಗಿಲ್ಲ. ಈ ಯಶದ ಹಿಂದಿರುವುದು ಕುರಿಯನ್ ಅವರ ದೂರದೃಷ್ಟಿ. ಹಾಗಾಗಿಯೇ ಅಮುಲ್ ಬ್ರಾಂಡಿನ ಹಾಲಿನ ಉತ್ಪನ್ನಗಳನ್ನು ಭಾರತ ಮಾತ್ರವಲ್ಲ, ಕಡಲಾಚೆಯ ದೇಶಗಳೂ ಸ್ವಾಗತಿಸುತ್ತಿವೆ.
ಗುಜರಾತಿನ ಕೈರಾ ಜಿಲ್ಲೆಯ ಆನಂದ್ ಚಿಕ್ಕ ಪಟ್ಟಣ. ಹೈನುಗಾರಿಕೆಯಿದೆ, ಹಾಲು ಮಾರಾಟಕ್ಕೆ ಸರಿಯಾದ ವ್ಯವಸ್ಥೆಯಿರಲಿಲ್ಲ. ಆನಂದ್ನ ಹೊರವಲಯದಲ್ಲಿ ಡೈರಿಯೊಂದಿತ್ತು. ಇದರ ಏಜೆಂಟರು, ವ್ಯಾಪಾರಿಗಳು ಹಾಲು ಉತ್ಪಾದಕರಿಗೆ ಸರಿಯಾದ ಬೆಲೆ ಕೊಡದೆ ಸತಾಯಿಸುತ್ತಿದ್ದರು. ಹೆಚ್ಚು ಹಾಲು ಬಂದರೆ ಬಾಯಿಗೆ ಬಂದ ದರ. ಅನಿವಾರ್ಯವಾಗಿ ಉತ್ಪಾದಕರು ಸಿಕ್ಕಿದ ದರಕ್ಕೆ ಹಾಲು ಪೂರೈಸುತ್ತಿದ್ದರು. ಉತ್ಪಾದಕರೇ ನೇರವಾಗಿ ಡೈರಿಗೆ ಹಾಲು ಒದಗಿಸೋಣವೆಂದರೆ ಸಾರಿಗೆ ಸಮಸ್ಯೆ. ಹೆಚ್ಚಿನ ದಿವಸಗಳಲ್ಲಿ ಹಾಲು ಹಾಳಾಗುತ್ತಿದ್ದುದೇ ಹೆಚ್ಚು.
ಆಗ ಕೇಂದ್ರದಲ್ಲಿ ಉಪಪ್ರಧಾನ ಮಂತ್ರಿಗಳೂ, ಗೃಹ ಸಚಿವರಾಗಿ ಸರ್ದಾರ್ ವಲ್ಲಭಭಾಯಿ ಪಟೇಲರಿದ್ದರು. ಹಾಲು ಉತ್ಪಾದಕರಿಗೆ ಆಗುತ್ತಿರುವ ಅನ್ಯಾಯವನ್ನು ಮನದಟ್ಟು ಮಾಡಲು ರೈತರಿಂದ ನಿಯೋಗ ಭೇಟಿ. ಮಾತುಕತೆ. ಸಾಂತ್ವನದ ಪರಿಹಾರ! ಬೇಡಿಕೆಯನ್ನು ಮನದಟ್ಟು ಮಾಡಲು ರೈತರ ಮುಷ್ಕರ. ಹೀಗೆ ಹಾಲು ಉತ್ಪಾದಕರಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಗಳು. ಪರಿಣಾಮ, 1946ರಲ್ಲಿ ಕೈರಾ ಜಿಲ್ಲೆಯಲ್ಲಿ ಸಹಕಾರಿ ಹಾಲು ಸಂಘದ ಸ್ಥಾಪನೆ.
ಪ್ರತಿದಿನ ಎರಡರಿಂದ ಐದು ಲೀಟರ್ ಹಾಲು ಹೊಂದಿರುವ ಸಣ್ಣ ಉತ್ಪಾದಕರು. ಇವರನ್ನು ಒಂದೇ ಸೂರಿನಡಿ ತರಲು ಗ್ರಾಮ ಮಟ್ಟದ ಸಹಕಾರಿ ಸಂಘಗಳ ರೂಪೀಕರಣ. ಅದೇ ಹೊತ್ತಿಗೆ ಡಾ. ಕುರಿಯನ್ ಎಂಟ್ರಿ. ಅನಂದ್ನಲ್ಲಿ ಆಧುನಿಕ ಡೈರಿ ಸ್ಥಾಪನೆ. ದೇಶೀಯ ತಂತ್ರಜ್ಞಾನ ಅಭಿವೃದ್ಧಿಯ ಅನುಷ್ಠಾನ. ಎಮ್ಮೆಯ ಹಾಲಿನಿಂದ ಕೆನೆತೆಗೆದ ಹಾಲಿನ ಪುಡಿಯ ಯಶಸ್ವಿ ಉತ್ಪಾದನೆ. 'ಅಮುಲ್' ಬ್ರಾಂಡಿನಲ್ಲಿ ಮಾರಾಟ.
'ಅಮುಲ್' ಅಂದರೆ 'ಬೆಲೆ ಕಟ್ಟಲಾಗದ್ದು' ಎಂದರ್ಥ. 'ಅಮೂಲ್ಯ' ಅಂದರೆ ಬೆಲೆಬಾಳುವಂತಾದ್ದು. ಈ ಪದಗಳ ಅರ್ಥವ್ಯಾಪ್ತಿಯಲ್ಲಿ ಉತ್ಪನ್ನಗಳಿಗೆ 'ಅಮುಲ್' ಹೆಸರಿನ ಬ್ರಾಂಡ್. ಗುಜರಾತಿನಲ್ಲಿ ಡೈರಿ ಸಹಕಾರ ಆಂದೋಳನಕ್ಕೆ ವೇಗದ ಚಾಲನೆ ದೊರಕಿತು. ನಾಲ್ಕೈದು ಜಿಲ್ಲೆಗಳಲ್ಲಿ ಸಂಘಗಳ ಸ್ಥಾಪನೆ. ಹಾಲು ಉತ್ಪಾದಕರನ್ನು ಒಗ್ಗೂಡಿಸಿ, ಮಾರುಕಟ್ಟೆ ವಿಸ್ತರಿಸುವ ದೃಷ್ಟಿಯಿಂದ 'ಗುಜರಾತ್ ಸಹಕಾರ ಹಾಲು ಮಾರಾಟ ಒಕ್ಕೂಟ' ರೂಪೀಕರಣ.
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಸುಮಾರು ಮೂರು ದಶಲಕ್ಷ ಹಾಲು ಉತ್ಪಾದಕ ಸದಸ್ಯ ಕುಟುಂಬವಿದೆ. ಹದಿನಾಲ್ಕು ಸಾವಿರಕ್ಕೂ ಅಧಿಕ ಗ್ರಾಮ ಸೊಸೈಟಿಗಳು. ಹದಿಮೂರು ಜಿಲ್ಲಾ ಸಂಘಗಳು. ಪ್ರತಿದಿನ ಸುಮಾರು ಒಂಭತ್ತು ದಶಲಕ್ಷ ಲೀಟರ್ ಹಾಲು ಖರೀದಿ. ಏಷ್ಯಾದಲ್ಲೇ ಅತೀ ದೊಡ್ಡ ಹಾಲನ್ನು ನಿರ್ವಹಿಸುವ ಸಾಮಥ್ರ್ಯ, ಅತಿ ದೊಡ್ಡ ಶೀತಲ ಸರಪಳಿ ಜಾಲ. ಸುಮಾರು ಐವತ್ತು ಮಾರಾಟ ಕಚೇರಿಗಳು, ಮೂರು ಸಾವಿರಕ್ಕೂ ಮಿಕ್ಕಿ ಸಗಟು ವ್ಯಾಪಾರಿಗಳು. ಮೂವತ್ತೇಳಕ್ಕೂ ಅಧಿಕ ರಾಷ್ಟ್ರಗಳಿಗೆ ಉತ್ಪನ್ನಗಳ ರಫ್ತು.. ಹೀಗೆ ಒಕ್ಕೂಟದ ಸಾಧನೆಗಳು ಹಲವು. ಈ ಎಲ್ಲಾ ಸಾಧನೆಗಳ ಹಿಂದೆ ಕುರಿಯನ್ ಅವರ ಅವಿರತ ದುಡಿಮೆಯು 'ಜೇನುನೊಣ'ದಂತೆ.
ಗುಜರಾತಿನ ಹಾಲು ವ್ಯವಸ್ಥೆಗಳು ರಾಷ್ಟ್ರ ಮಟ್ಟದಲ್ಲಿ ಮಾದರಿಯಾದುವು. ಕರ್ನಾಟಕದ 'ಕೆ.ಎಂ.ಎಫ್', ಪಂಜಾಬಿನ 'ವರ್ಕಾ', ಆಂಧ್ರದ 'ವಿಜಯ', ಕೇರಳದ 'ಮಿಲ್ಮಾ', ತಮಿಳುನಾಡಿನ 'ಅವಿನ್', ಬಿಹಾರದ 'ಸುಧಾ', ಒರಿಸ್ಸಾದ 'ಓಮ್ಫೆಡ್', ರಾಜಸ್ತಾನದ 'ಸರಸ್', ಉತ್ತರಪ್ರದೇಶದ 'ಪರಗ್', ಉತ್ತರಖಂಡದ 'ಅಂಚಲ್', ಹರಿಯಾಣದ 'ವೀಟಾ'..ಗಳು ಅಮುಲ್ ಮಾದರಿಯಲ್ಲಿ ಹುಟ್ಟಿಕೊಂಡವು.
ಹಾಲಿನ ಪುಡಿ, ಬೆಣ್ಣೆ, ಹಾಲು, ತುಪ್ಪ, ಗಿಣ್ಣು, ಮೊಸರು, ಮಜ್ಜಿಗೆ, ಚಾಕೊಲೇಟ್, ಐಸ್ಕ್ರೀಂ, ಶ್ರೀಖಂಡ್, ಪನೀರ್, ಗುಲಾಬ್ ಜಾಮೂನು, ಸುವಾಸನೆ ಹಾಲು.. ಹೀಗೆ ಉತ್ಪನ್ನಗಳ ಪಟ್ಟಿ ದೀರ್ಘ. ಕೆನೆ ತೆಗೆಯದ ಮತ್ತು ಕೆನೆ ತೆಗೆದ ಹಾಲಿನ ಪುಡಿ, ಖೋವಾ, ತುಪ್ಪ, ದೇಸೀಯ ತಿಂಡಿಗಳು ರಫ್ತಾಗುತ್ತವೆ. ಅಮೇರಿಕ, ವೆಸ್ಟ್ಇಂಡೀಸ್, ಆಫ್ರಿಕ, ಕೊಲ್ಲಿ, ಸಿಂಗಾಪುರ, ಫಿಲಿಪೈನ್ಸ್, ಥಾಯ್ಲೆಂಡ್, ಜಪಾನ್, ಚೀನಾ ದೇಶಗಳ ಗ್ರಾಹಕರಿಗೆ ಅಮುಲ್ ಪರಿಚಿತ.
ಅಮುಲ್ ಸ್ಥಾಪನೆಯು ಭಾರತದಲ್ಲಿ 'ಶ್ವೇತ ಕ್ರಾಂತಿ'ಯೆಂದೇ ಖ್ಯಾತಿ ಪಡೆಯಿತು. ಕುರಿಯನ್ ಅವರ ಬೆವರಿನ ಕಥೆಯು ಚಿತ್ರನಿರ್ಮಾಪಕ ಶ್ಯಾಂ ಬೆನಗಲ್ ಅವರಿಗೆ ಸ್ಫೂರ್ತಿ ನೀಡಿತಂತೆ. ಸ್ಮಿತಾ ಪಾಟೀಲ್, ಗಿರೀಶ್ ಕಾರ್ನಾ, ನಾಸಿರುದ್ದೀನ್ ಷಾ, ಅಮರೀಶ್ ಪುರಿ.. ಕಲಾವಿದರ ನಟನೆಯಿಂದ 'ಮಂಥನ್' ಚಿತ್ರ ತಯಾರಿ. ಸುಮಾರು ಐದು ಲಕ್ಷಕ್ಕೂ ಮಿಕ್ಕಿ ಗುಜರಾತಿನ ಗ್ರಾಮೀಣ ರೈತರು ಆರ್ಥಿಕ ನೆರವು ನೀಡಿದ್ದಾರಂತೆ. ಈ ಚಿತ್ರಕ್ಕೆ 1977ರಲ್ಲಿ ಅತ್ಯುತ್ತಮ ಹಿಂದಿ ಚಲನಚಿತ್ರ ಪ್ರಶಸ್ತಿ. ಚಿತ್ರದ ತಾರಾಗಣದಲ್ಲಿ ವೃತ್ತಿಪರ ಕಲಾವಿದರಿದ್ದರೆ, ನೇಪಥ್ಯದಲ್ಲಿ ಗುಜರಾತಿಯ ಅಸಂಖ್ಯಾತ ಹಾಲು ಉತ್ಪಾದಕರೂ ಇದ್ದಾರೆಂಬುದು ಮರೆಯುವಂತಿಲ್ಲ.
ಡಾ.ಕುರಿಯನ್ ಅವರ ಹಳ್ಳಿ ಮಿಡಿತ, ಹಾಲು ಉತ್ಪಾದಕರ ಕುರಿತಾದ ಕಳಕಳಿಯಿಂದಾಗಿ ಭಾರತದ ಹಾಲಿಗೆ ವಿಶ್ವಮಟ್ಟದ ಸ್ಥಾನಮಾನ ಪ್ರಾಪ್ತವಾಯಿತು. 'ಭಾರತದ ಹಾಲಿನ ಮನುಷ್ಯ' ಎಂದು ವಿದೇಶಿ ಮಾಧ್ಯಮಗಳು ಹೊಗಳಿದುವು. ಗುಜರಾತಿನ ಅಮುಲಿನ ಯಶಸ್ಸಿನಿಂದ ಪ್ರೇರಿತರಾದ ಆಗಿನ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿಯವರು 'ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿ' ಸ್ಥಾಪನೆಗೆ ಹಸಿರು ನಿಶಾನೆ ನೀಡಿದ್ದರು. ಅದಕ್ಕೆ ಡಾ.ಕುರಿಯನ್ ಅಧ್ಯಕ್ಷರಾಗಿ ನಿಯುಕ್ತಿ ಹೊಂದಿದರು. ಸುಮಾರು ಮೂವತ್ತ ಮೂರು ವರುಷಗಳ ಅವಿರತ ಸೇವೆಯ ಫಲವಾಗಿ 'ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಹಾಲು ಉತ್ಪಾದಕ ರಾಷ್ಟ್ರ' ಎಂಬ ಗೌರವವನ್ನು ತಂದುಕೊಟ್ಟರು.
ಪದ್ಮಭೂಷಣ, ಮ್ಯಾಗ್ಸೆಸೆ, ವಿಶ್ವಶಾಂತಿ ಪ್ರಶಸ್ತಿ ಗೌರವಗಳು ಡಾ. ಕುರಿಯನ್ ಅವರಿಗೆ ಪ್ರಾಪ್ತವಾಗಿದೆ. ಮೂರು ದಶಕಕ್ಕೂ ಹೆಚ್ಚು ಕಾಲ ಬೆವರಿನಿಂದ ಮೇಲೆಬ್ಬಿಸಿದ ಅಮುಲ್ ಸಂಸ್ಥೆಯ ವ್ಯವಸ್ಥೆಗಳು ತನ್ನ ವಿರುದ್ಧ ಅವಿಶ್ವಾಸ ವ್ಯಕ್ತಪಡಿಸಿದಾಗ ಆ ತ್ಯಾಗಿಗೆ ಎಷ್ಟೊಂದು ನೋವಾಗಿರಬೇಡ!
ಮಂಗಳೂರಿನ ಕ್ಯಾಂಪ್ಕೋ ಸಂಸ್ಥೆಗೊಮ್ಮೆ ಡಾ. ಕುರಿಯನ್ ಆಗಮಿಸಿದ್ದರು. ತಮ್ಮ ಅನುಭವಗಳನ್ನು ಪ್ರಸ್ತುತಪಡಿಸುತ್ತಾ ಕುರಿಯನ್ ಹೇಳಿದ್ದರು - 'ವಾಟ್ ಇಸ್ ಅರೆಕಾ, ವಾಟ್ ಫಾರ್ ಅರೆಕಾ' ಎಂದಿದ್ದರು. ಅಂದರೆ ಅಡಿಕೆ ತಿನ್ನುವ ವಸ್ತು. ಅಮುಲಿನಂತೆ ಅದಕ್ಕೂ 'ಬ್ರಾಂಡ್ ನೇಮ್' ಮಾಡಿ. ಹಾಲಿಗೆ ಮಾನ ತಂದುಕೊಟ್ಟ 90ರ ಡಾ. ಕುರಿಯನ್ ಸೆಪ್ಟೆಂಬರ್ 9ರಂದು ದೂರವಾದರು. ಅಮುಲ್ ಉತ್ಪನ್ನಗಳಲ್ಲಿ ನಿತ್ಯ ನಗುತ್ತಿದ್ದ 'ಅಮುಲ್ ಬೇಬಿ' ಅಂದು ಅತ್ತುಬಿಟ್ಟಳು!
0 comments:
Post a Comment