ಪುಣಚ (ಬಂಟ್ವಾಳ ತಾಲೂಕು) ಮಲ್ಯದ ಶಂಕರನಾರಾಯಣ ಭಟ್ಟರ ಮನೆಯಂಗಳ. ಹಲಸು ಸ್ನೇಹಿ ಕೂಟದ ಸಾರಥ್ಯದಲ್ಲಿ 'ತರಕಾರಿ ಹಬ್ಬ'. ಅಂಗಳದಲ್ಲಿ ಹಸುರು ವೇದಿಕೆ. ಕೂವೆ ಗಿಡಗಳು, ಹೂವಿನ ಗಿಡಗಳು, ತರಕಾರಿಗಳಲ್ಲಿ ಅಲಂಕೃತ. ಪುಣಚ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಪವಿತ್ರಾ ಅವರಿಂದ ದೀಪಜ್ವಲನದ ಮೂಲಕ ಹಬ್ಬಕ್ಕೆ ಶುಭಚಾಲನೆ. ಮುಳ್ಳುಸೌತೆಯನ್ನು ತುಂಡರಿಸುವ ಮೂಲಕ ಮತ್ತು ಗಿಡದಲ್ಲಿದ್ದ ಬೆಂಡೆಕಾಯಿಯನ್ನು ಕೊಯ್ಯುವ ಮೂಲಕ ಹಬ್ಬಕ್ಕೆ ಅಧಿಕೃತ ಚಾಲನೆ. ಇದೇ ಸಮಯಕ್ಕೆ ಸಭಾಸದರಿಗೆ ಮುಳ್ಳುಸೌತೆ ತುಂಡುಗಳ ವಿತರಣೆ. ಮಲ್ಯ ಮನೆಯ ತರಕಾರಿ ಬೀಜಗಳ ಪ್ಯಾಕೆಟ್ ಉಡುಗೊರೆ.
ಜಿಲ್ಲೆಯ ಎಲ್ಲಾ ದೇವಸ್ಥಾನಗಳು, ಹಾಪ್ಕಾಮ್ಸ್ ಮೂಲಕ ತರಕಾರಿ ಖರೀದಿ ಮಾಡಿದಾಗ ತರಕಾರಿಗೆ ಉತ್ತಮ ಮಾರುಕಟ್ಟೆ ಸೃಷ್ಟಿಯಗುತ್ತದೆ. ತರಕಾರಿ ಬೆಳೆಯಲು ಪ್ರೋತ್ಸಾಹ ಸಿಕ್ಕಂತಾಗುತ್ತದೆ. ಈ ನೆಲೆಯಲ್ಲಿ ಕಾರ್ಯಯೋಜನೆಗೆ ರೂಪಿಸಬೇಕು' ಎಂದವರು ದ.ಕ. ಮತ್ತು ಉಡುಪಿ ಜಿಲ್ಲಾ ಹಾಪ್ಕಾಮ್ಸ್ ಅಧ್ಯಕ್ಷ ಲಕ್ಷ್ಮೀನಾರಾಯಣ ಉಡುಪರು. ಹಬ್ಬದಲ್ಲಿ ಹಾಪ್ ಕಾಮ್ಸಿನಿಂದಲೂ ಬೀಜದ ಇನಾಮು ನೀಡಿಕೆ.
ಹಲಸು ಸ್ನೇಹಿ ಕೂಟದ ಮುಖವಾಣಿಯಾದ ವಾರ್ತಾಪತ್ರವನ್ನು ಮಂಗಳೂರಿನ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ರೊನಾಲ್ಡ್ ಅನಿಲ್ ಫೆರ್ನಾಂಡಿಸ್ ಬಿಡುಗಡೆಗೊಳಿಸಿದರು. ಪತ್ರಕರ್ತ ನಾ. ಕಾರಂತ ಪೆರಾಜೆ ವಾರ್ತಾಪತ್ರವನ್ನು ನಿರ್ವಹಿಸಿದ್ದರು. ಸಮಾರಂಭದಲ್ಲಿ ಮಾಣಿ ಕ್ಷೇತ್ರದ ಜಿಲ್ಲಾ ಪಂಚಾಯತ್ ಸದಸ್ಯ ಚೆನ್ನಪ್ಪ ಕೋಟ್ಯಾನ್, ಪುಣಚ ತಾಲೂಕು ಪಂಚಾಯತ್ ಸದಸ್ಯ ಎಂ.ಹರಿಕೃಷ್ಣ ಶೆಟಿ, ಬಂಟ್ವಾಳ ತಾಲೂಕು ತೋಟಗಾರಿಕಾ ಸಹಾಯಕ ನಿರ್ದೇಶಕ ಸಂಜೀವ ನಾಯಕ್ ಉಪಸ್ಥಿತಿ.
ಉದ್ಘಾಟನಾ ಸಮಾರಂಭವನ್ನು ಪ್ರಾಧಾಪಕ ಅಜಕ್ಕಳ ಗಿರೀಶ್ ಭಟ್ ನಿರ್ವಹಿಸಿದ್ದರು. ನಯನಾ ಅಶೋಕ್ ಭಟ್ ಪ್ರಾರ್ಥನೆ. ರಂಜನ್ ಭಟ್ ಸ್ವಾಗತ. ಹಲಸು ಸ್ನೇಹಿ ಕೂಟದ ವೆಂಕಟಕೃಷ್ಣ ಶರ್ಮ ಪ್ರಸ್ತಾವನೆ. ಸುಮಾ ಶಂಕರ ಭಟ್ ವಂದನಾರ್ಪಣೆ.
ಸಮಾರೋಪ
"ನಿರ್ವಿಷ ತರಕಾರಿಯ ಕುರಿತು ಬಹುಶಃ ಪೂರ್ತಿ ಕಲಾಪ ನಡೆದುದು ಇದೇ ಮೊದಲು. ತರಕಾರಿಯ ಕೃಷಿ ಜಾಣ್ಮೆಗಳು, ಕಾಲಕ್ಕೆ ಸರಿಯಾದ ಬೀಜೋಪಚಾರ, ಆರೈಕೆಯಲ್ಲಿ ತಮ್ಮದೇ ಉಪಾಯಗಳು, ಕೀಟನಿಯಂತ್ರಣದಲ್ಲಿ ಹೊಸ ಪ್ರಯೋಗಳು ಕೃಷಿಕರ ಅನುಭವದಲ್ಲಿ ದಾಖಲಾಗಿದೆ. ಆದರೆ ಮುಂದಿನ ಪೀಳಿಗೆಗೆ ದಾಟಿಸುವ ದೃಷ್ಟಿಯಿಂದ ದಾಖಲೀಕರಣ ಅಗತ್ಯ" ಎಂದು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ 'ಶ್ರೀ' ಪಡ್ರೆ ಹೇಳಿದರು.
ಅವರು ಶನಿವಾರ ಬಂಟ್ವಾಳ ತಾಲೂಕು ಪುಣಚ ಮಲ್ಯ ಶಂಕರನಾರಾಯಣ ಭಟ್ಟರ ಮನೆಯಂಗಳದಲ್ಲಿ, 'ಹಲಸು ಸ್ನೇಹಿ ಕೂಟ' ಆಯೋಜಿಸಿದ 'ವರ್ಷವಿಡೀ ತರಕಾರಿ' ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ, ಪ್ರತೀಯೊಂದು ಪಂಚಾಯತ್ನಲ್ಲೂ ತರಕಾರಿ ಕೃಷಿಯ ಅನುಭವವನ್ನು ಹಂಚಿಕೊಳ್ಳುವ ಸಂವಾದಗಳು ನಡೆಯಬೇಕು. ಕೃಷಿಕರನ್ನು ಕೃಷಿಯಲ್ಲಿ ಉಳಿಯುವಂತೆ ಮಾಡುವ, ಆಹಾರ ಸುರಕ್ಷೆಗೆ ಒತ್ತು ನೀಡಲು ದಾರಿ ತೋರುವ ಹೊಸ ಕಲ್ಪನೆಯ ಸಮಾರಂಭ ಕಾಲದ ಆವಶ್ಯಕತೆ' ಎಂದು ಹೇಳಿದರು.
ಸಮಾರೋಪದ ಅಧ್ಯಕ್ಷತೆಯನ್ನು ವಾರಣಾಶಿ ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥ ಡಾ. ವಾರಣಾಶಿ ಕೃಷ್ಣಮೂರ್ತಿ ವಹಿಸಿ, ಈಚೆಗೆ ಐಸ್ಕ್ರೀಮ್ ಘಟಕವೊಂದಕ್ಕೆ ಇಪ್ಪತ್ತೇಳು ಟನ್ ಹಲಸು ಮಾರುಕಟ್ಟೆ ಮಾಡಿದ ಹಿನ್ನೆಲೆಯ ಕೆಲಸಗಳ ಪೂರ್ತಿ ಚಿತ್ರಣವನ್ನು ಪ್ರಸ್ತುತಪಡಿಸುತ್ತಾ, 'ಇಲ್ಲಿ ಪ್ರಸ್ತುತವಾಗಿರುವ ಮಾಹಿತಿಗಳಲ್ಲದೆ ಇನ್ನಿತರ ಅನುಭವಗಳೂ ಸೇರಿಕೊಂಡು, ತರಕಾರಿ ಕೃಷಿಯ ಕೃಷಿಕರ ಅನುಭವಗಳನ್ನು ಪುಸ್ತಕ ರೂಪದಲ್ಲಿ ಹೊರ ತರುವ ಯೋಜನೆಯಿದೆ' ಎಂದರು.
ಸಮಾರೋಪದ ಕಲಾಪದಲ್ಲಿ 'ತರಕಾರಿ ಹಬ್ಬ'ವನ್ನು ಮನೆಯಂಗಳಲ್ಲಿ ಆಯೋಜಿಸಿದ ಮಲ್ಯ ಶಂಕರನಾರಾಯಣ ಭಟ್ಟರ ಕುಟುಂಬವನ್ನು ಗೌರವಿಸಲಾಯಿತು. ಹಲಸು ಸ್ನೇಹಿ ಕೂಟದ ಉಬರು ರಾಜಗೋಪಾಲ ಭಟ್, ಮುಳಿಯ ವೆಂಕಟಕೃಷ್ಣ ಶರ್ಮ, ಕೃಷಿಕ ವಿ.ಮ.ಭಟ್ ಅತಿಥಿಗಳಿಗೆ ಸ್ಮರಣಿಕೆ ನೀಡಿದರು.
ಪತ್ರಕರ್ತ ನಾ. ಕಾರಂತ ಪೆರಾಜೆ ಸಂವಾದವನ್ನು ನಿರೂಪಿಸಿದ್ದರು. ಬೈಂಕ್ರೋಡು ವೆಂಕಟಕೃಷ್ಣ, ಅಶೋಕ ಅಜಕ್ಕಳ ಸ್ವಾಗತಿಸಿ, ವಂದಿಸಿದರು. ಯು.ಎಸ್.ಚಂದ್ರಶೇಖರ ಭಟ್ ನಿರ್ವಹಿಸಿದರು.
ತರಕಾರಿ ಸಂವಾದ
'ನಿರ್ವಿಷ ತರಕಾರಿ' - ಈ ವಿಚಾರ ಸುತ್ತ ಹಮ್ಮಿಕೊಂಡ ಮಾತುಕತೆಯ ಸಾರಥ್ಯ ವಹಿಸಿದವರು ಕೃಷಿಕ ಪಡಾರು ರಾಮಕೃಷ್ಣ ಶಾಸ್ತ್ರಿ. ವರ್ಮುಡಿ ಶಿವಪ್ರಸಾದ್ ಪೆರ್ಲ, ಡಾ.ಕೆ.ಎಸ್.ಕಾಮತ್ ಕರಿಂಗಾಣ, ಎ.ಪಿ.ಸದಾಶಿವ ಮರಿಕೆ, ಡಾ.ರಘುರಾಮ ಹಾಸನಡ್ಕ, ಲ್ಯಾನ್ಸಿ ಕ್ರಾಸ್ತಾ ತಾಕೊಡೆ ಮತ್ತು ಮೈಸೂರಿನ ಎ.ಪಿ.ಚಂದ್ರಶೇಖರ - ಇವರಿಂದ ವಿಷರಹಿತವಾಗಿ ತರಕಾರಿ ಬೆಳೆಯುವ ಅನುಭವಗಳ ಪ್ರಸ್ತುತಿ. ತರಕಾರಿ ಪ್ರಿಯರ ಆರೋಗ್ಯಕರ ಸಂವಾದ-ಮಾಹಿತಿ ವಿನಿಮಯ.
ಮಡಿಕೇರಿಯ ಇಂಜಿನಿಯರ್, ಕೃಷಿಕ ಶಿವಕುಮಾರ್ ಅವರು 'ಗೆಡ್ಡೆ ಮತ್ತು ಕಾಡು ತರಕಾರಿ'ಗಳ ವೈವಿಧ್ಯ ಮತ್ತು ಅಡುಗೆಯಲ್ಲಿ ಅವುಗಳ ಬಳಕೆ ಕುರಿತು ಮಾಹಿತಿ ನೀಡಿದ್ದರು. ಕೃಷಿಕ ಶಿರಂಕಲ್ಲು ನಾರಾಯಣ ಭಟ್ ಗೆಡ್ಡೆಗಳ ಪಾಕವೈವಿಧ್ಯವನ್ನು ನಿರೂಪಿಸಿದರು.
ವರುಷಪೂರ್ತಿ ತರಕಾರಿಯನ್ನು ಹೇಗೆ ಪಡೆಯಬಹುದು ಎಂಬ ವಿಚಾರದ ಕುರಿತು ಕೃಷಿಕರಾದ ಸುರೇಶ ಗೌಡ ಪುಣಚ, ಪೆರ್ಲ ವರ್ಮು ಶಿವಪ್ರಸಾದ್, ಬೈಂಕ್ರೋಡು ಗಿರೀಶ ಮತ್ತು ಕೂಸಪ್ಪ ಪೂಜಾರಿ ಮೂಡಂಬೈಲು ತಮ್ಮ ಅನುಭವಗಳನ್ನು ತೆರೆದಿಟ್ಟರು. ಋತುಮಾನಕ್ಕನುಗುಣವಾಗಿ ಯಾವ್ಯಾವ ತರಕಾರಿ ಬೆಳೆಯಬಹುದೆನ್ನುವ ವಿಚಾರಗಳು ಸಂವಾದದಲ್ಲಿ ಪ್ರಸ್ತುತವಾದುವು. ಅಂಗಳದ ಹೀರೆಕಾಯಿ ಚಪ್ಪರದ ನೆರಳಿನಡಿಯಲ್ಲಿ ತರಕಾರಿ ಪ್ರದರ್ಶನ. ಮುನ್ನೂರಕ್ಕೂ ಅಧಿಕ ಮಂದಿ ಹಬ್ಬಕ್ಕೆ ಆಗಮಿಸಿದ್ದರು.
0 comments:
Post a Comment