ಗಣೇಶ ಚತುರ್ಥಿ ಕಳೆದು ಮೂರ್ನಾಲ್ಕು ದಿವಸದಲ್ಲಿ ಹುಬ್ಬಳ್ಳಿ-ಧಾರವಾಡದ ಅವಳಿ ನಗರದಲ್ಲಿದ್ದೆ. ಗಣೇಶ ಹಬ್ಬದ ಗೌಜಿ. ಮನೆಮನೆಗಳಲ್ಲಿ ಗಣೇಶನ ವಿಗ್ರಹಗಳನ್ನು ಪ್ರತಿಷ್ಠಾಪಿಸಿ ಪೂಜಿಸುವುದು ವಾಡಿಕೆ. ನೆಂಟರಿಷ್ಟರನ್ನು ಬರಹೇಳುವುದು, ಸಿಹಿ ಹಂಚುವುದು ಸಂಭ್ರಮ.
'ಬನ್ರಿ, ಚಲೋ ಅಯ್ತು. ಗಣೇಶನ್ನ ಕಳ್ಸೋ ದಿವ್ಸ. ಬಾಯಿ ಸಿಹಿ ಮಾಡ್ರಿ' ಎನ್ನುತ್ತಾ ಹುಬ್ಬಳ್ಳಿಯ ಸನಿಹದ ಹಳ್ಳಿಯ ಚನ್ನಮಲ್ಲಯ್ಯ ಪಾಟೀಲರು ಸ್ವಾಗತಿಸಿದರು. ತಟ್ಟೆ ತುಂಬಾ ಬಣ್ಣ ಬಣ್ಣದ ಬೇಕರಿ ಸಿಹಿ ಐಟಂಗಳು. ಮನೆಯಲ್ಲೇ ಮಾಡಿದ ಗೋಧಿ ಹುಗ್ಗಿ. 'ತಿನ್ರಿ..ಎಲ್ಲಾ ತಿನ್ಬೇಕ್ರಿ' ಎಂಬ ತಾಕೀತು. ಬೇಕರಿ ತಿಂಡಿಯ ನೇಪಥ್ಯದ ಕಹಿಸತ್ಯಗಳ ಪರಿಚಯವಿದ್ದುರಿಂದ ಸಿಹಿಯಂದು ಸಿಹಿಯಾಗಲಿಲ್ಲ!
ಗಣೇಶನ ಅಲಂಕೃತ ಕಿರು ಮೂರ್ತಿ. ಬಣ್ಣ ಬಣ್ಣದ ಕೃತಕ ಹೂಗಳ ಅಲಂಕಾರ. ಜತೆಗೆ 'ಚಿಗುಬುಗ್' ಲೈಟ್! ಗಣೇಶನ ಎದುರು ಐದಾರು ಪ್ಲೇಟ್ಗಳಲ್ಲಿ ಬೇಕರಿ ತಿಂಡಿಗಳು. ಬಾಳೆಹಣ್ಣು-ಲಡ್ಡುಗಳು. 'ಇಪ್ಪತ್ತ ವರ್ಸದಿಂದ ಗಣೇಶನ್ನ ಕೂರಿಸ್ತೀರಿ. ನಮ್ಮ ತಾತ್ನ ಕಾಲದಿಂದ ಐತ್ರಿ' ಎಂದರು. ಇಲ್ಲಿನ ಬಹುತೇಕ ಮನೆಗಳಲ್ಲಿ ಗಣೇಶನ ಪೂಜೆ ಪಾರಂಪರಿಕ. ಕೂಡುಕುಟುಂಬ ವ್ಯವಸ್ಥೆಯಿಂದ ಹೊರಗೆ ಹೋದ ಕುಟುಂಬಗಳೂ ಈ ವ್ಯವಸ್ಥೆಯನ್ನು ಮುಂದುವರಿಸುತ್ತವೆ.
'ಕೆಲವು ಮನೇಲಿ ಇಲಿ ಪೂಜೆ ಐತ್ರಿ,' ಹೊಸ ಸುದ್ದಿಯನ್ನು ಹೇಳಿ ನಕ್ಕರು, ಜತೆಗಿದ್ದ ಮಲ್ಲಪ್ಪ ಸುಣ್ಣದಪುಡಿ. ಏನಿದು ಇಲಿ ಪೂಜೆ? ಗಣೇಶ ಸಸ್ಯಾಹಾರಿ. ಆತನ ವಾಹನ ಶುದ್ಧ ಮಾಂಸಾಹಾರಿ! ಗಣೇಶ ಚತುರ್ಥಿಯ ಮರುದಿವಸ ಆತನಿಗೆ ಮಾಂಸದ ನೈವೇದ್ಯ. ಗಣೇಶದ ಎದುರು ಮಾಂಸದಡುಗೆಯನ್ನು ಇರಿಸಿ ಗಣೇಶನ ಪೂಜೆ. ಮೂಷಕ ಸಂತೃಪ್ತ. ಬಳಿಕ ಮನೆಮಂದಿಗೆ ನೈವೇದ್ಯದ ಸಂತರ್ಪಣೆ. ಹೀಗಾಗಿ ಗಣೇಶ ಹಬ್ಬಕ್ಕಿಂತಲೂ ಇಲಿ ಹಬ್ಬಕ್ಕೆ ಆದ್ಯತೆ ಮತ್ತು ಆಸಕ್ತಿ. ಮನೆಯಲ್ಲಿ ಮಾಂಸದಡುಗೆ ಇದ್ದಂದು 'ಇಲಿ ಪೂಜೆ ಐತ್ರಿ' ಎನ್ನುವ ಗುಪ್ತ ಸಂದೇಶ ಈ ಆಚರಣೆಯ ಹಿಂದಿನಿಂದ ಚಲಾವಣೆಗೆ ಬಂದಿರಬೇಕು.
ಮೂರು, ಐದು, ಏಳು ದಿವಸಗಳ ಆರಾಧನೆಯ ನಂತರ ಗಣೇಶನ ವಿಸರ್ಜನೆ. ಮನೆ ಮಂದಿ ಮಾತ್ರ 'ಗಣೇಶ ಬಪ್ಪ ಮೋರ್ಯ' ಎನ್ನುತ್ತಾ ಮೆರವಣಿಗೆಗೆ ಸಾಥ್ ನೀಡುತ್ತಾರೆ. ಯಜಮಾನನ ಹೆಗಲಿನಲ್ಲಿ ಗಣೇಶನ ಮೂರ್ತಿ. ಜತೆಗೆ ಗಂಟಾನಾದ. ಮಕ್ಕಳು, ಹಿರಿಯರು ಹಿಂದಿನಿಂದ ಘೋಷಣೆ ಕೂಗುತ್ತಿರುತ್ತಾರೆ. ಹದಿನೈದು ನಿಮಿಷದಲ್ಲಿ ವಿಸರ್ಜನೆ ಮುಗಿದುಹೋಗುತ್ತದೆ.
ಗಣೇಶನ ಮುಂಭಾಗದಲ್ಲಿ ಪಟಾಕಿಗಳ ಸಿಡಿತ. ನೈವೇದ್ಯ ಇಲ್ಲದಿದ್ದರೂ ನಡೆಯುತ್ತದೆ, ಪಟಾಕಿ ಇಲ್ಲದೆ ಗಣೇಶೋತ್ಸವ ನಡೆಯದು! ಎಷ್ಟೇ ಬಡವರಾದರೂ ಕನಿಷ್ಠ ಐನೂರು ರೂಪಾಯಿಗಳನ್ನು ಪಟಾಕಿಯಲ್ಲಿ ಸುಡುತ್ತಾರೆ! ಪಟಾಕಿ ಇಲ್ಲದ ಹಬ್ಬ ನಿರ್ಜೀವ! ಕೆಲವು ಮನೆಗಳಲ್ಲಿ ಸದಸ್ಯರ ಸಂಖ್ಯೆ ತೀರಾ ವಿರಳವಿರುತ್ತದೆ. ಅಂತಹ ಮನೆಗಳಲ್ಲಿ ಗಣೇಶನನ್ನು ಪೂಜಿಸುತ್ತಾರೆ. ಕೊನೆಗೆ ಮನೆಯ ಸದಸ್ಯರೋರ್ವರೇ ಗಣೇಶನನ್ನು ಹೆಗಲಲ್ಲಿ ಕೂರಿಸಿ 'ಒಬ್ಬರೇ' ಮೆರವಣಿಗೆ ಮಾಡಿ ವಿಸರ್ಜನೆ ಮಾಡುತ್ತಾರೆ.
ವಿಸರ್ಜನಾ ಮೆರವಣಿಗೆಯಲ್ಲಿ ಕಟ್ಟುಪಾಡುಗಳಿಲ್ಲ. ಪ್ಯಾಂಟ್, ಅಂಗಿ, ಮುಂಡಾಸು ಧರಿಸಿದ ವ್ಯಕ್ತಿಯ ಹೆಗಲಲ್ಲಿ ಗಣಪ ರಾರಾಜಿಸುತ್ತಾನೆ! ಕೆಲವರ ಪಾದದಲ್ಲಿ ಪಾದುಕೆಗಳೂ ಇದ್ದುವು! ಪಾಪ, ಕಾಲಿನಲ್ಲಿ ಆಣಿ ಇದ್ದರೆ ಏನು ಮಾಡೋದು ಅಲ್ವಾ! ಗಣಪ ಸುಧಾರಿಸಿಕೊಳ್ಳುತ್ತಾನೆ, ಬಿಡಿ.
ಉಳ್ಳವರ ಮನೆಯ ಗಣಪನಿಗೆ 'ಹೆಗಲ ಭಾಗ್ಯ'ವಿಲ್ಲ. ಕಾರಿನೊಳಗೆ 'ಎಸಿ' ಸೌಭಾಗ್ಯ. ಕಾರಿಗೆ ಬರೋಬ್ಬರಿ ಅಲಂಕಾರ. ಗಣೇಶ ಮಾತ್ರ ತನ್ನ ಕೊರಳನ್ನು ಆಗಾಗ್ಗೆ ತಟ್ಟಿ, ಮುಟ್ಟಿ ನೋಡುವಂತಹ ಪರಿಸ್ಥಿತಿ. ಎರಡು ದಿವಸದ ಮೊದಲು ಹಾಕಿದ್ದ ಹಾರ ಬಾಡಿತ್ತು. ಜತೆಗೆ ಗಣೇಶನ ಮೋರೆಯೂ!
ಅಲಂಕೃತ ಕಾರಿನ ಹಿಂದೆ ಶ್ರೀಮಂತಿಕೆಗೆ ತಕ್ಕಂತೆ ಹತ್ತಿಪ್ಪತ್ತು ಮಂದಿಗಳು. ಒಬ್ಬರ ಕೈಯಲ್ಲಿ ಚಿಕ್ಕ ಘಂಟಾಮಣಿ! ಜತೆಗೆ ಧ್ವನಿವರ್ಧಕ. ಹಾಡಿಗೆ ತಾಳ ಹಾಕಿ ಮೈಮರೆವ ಯುವ ಮಂದಿ. ಲೋಕಾಭಿರಾಮ ಮಾತನಾಡುತ್ತಾ ಹೆಜ್ಜೆಹಾಕುವ ಅಮ್ಮಂದಿರು. ಕಾರಿನ ಮುಂದೆ ಪಟಾಕಿಗಳ ಭೋರ್ಗರೆತ. ಬಣ್ಣ ಬಣ್ಣದ ಬೆಳಕಿನ, ಕಿವಿಗಡಚಿಕ್ಕುವ, ಬಡಿದೆಬ್ಬಿಸುವ ಸದ್ದಿನ ಪಟಾಕಿಗಳು. ಇವೆಲ್ಲಾ ನಡೆಯುವುದು ಯಾವಾಗ ಹೇಳಿ, ರಾತ್ರಿ ಹನ್ನೆರಡರ ಬಳಿಕ!
ವಿಸರ್ಜನೆಯ ಒಂದೆರಡು ದಿವಸಗಳಲ್ಲಿ ಇಡೀ ಪರಿಸರವು ಪಟಾಕಿಯ ಹೊಗೆಯಿಂದ ಮಂಜಿನ ಮಳೆಯಂತೆ ಭಾಸವಾಗುತ್ತಿತ್ತು. ರಸ್ತೆಯಿಡೀ ಕಾಗದದ ಚೂರುಗಳು. ವಿಸರ್ಜನೆ ಮಾಡಿದ ಕೆರೆಗಳ ಅವಸ್ಥೆ ಹೇಳಬೇಕಾಗಿಲ್ಲ. 'ನೀರಿನಲ್ಲಿ ಗಣೇಶನ ಮೂರ್ತಿಗಳು ಕರಗಿಲ್ಲ' ಎನ್ನುವ ವರದಿಯೂ ನಿನ್ನೆ ಬಂತು. ಮಳೆಯೇ ಬಾರದಿದ್ದರೆ ಕೆರೆಯಲ್ಲಿ ನೀರೆಲ್ಲಿಂದ ಬರಬೇಕು?
ಬಡಿಗೇರ ಎನ್ನುವ ಕಲಾವಿದರೊಬ್ಬರ ಮನೆಗೆ ಭೇಟಿ ನೀಡುವ ಸಂದರ್ಭ ಬಂತು. ಗಣೇಶನನ್ನು ಪ್ರತಿಷ್ಠಾಪಿಸಿದ್ದರು. ಜತೆಯಲ್ಲಿ ಮುಂಭಾಗದಲ್ಲಿ ಇನ್ನೊಂದು ಗಣಪತಿಯ ವಿಗ್ರಹವೂ ಅಲಂಕೃತವಾಗಿತ್ತು. ಅದು ಕಳೆದ ವರುಷ ಪ್ರತಿಷ್ಠಾಪಿಸಲ್ಪಟ್ಟ ಗಣಪ. ಅವನಿಗೆ ಈ ವರುಷ ವಿಸರ್ಜನೆಯ ಯೋಗ. ಈ ವರುಷದ ಗಣಪನಿಗೆ ಮುಂದಿನ ವರುಷ. ಇದೊಂದು ಹೊಸ ಸಂಪ್ರದಾಯ. ಬಹಳ ಚೆನ್ನಾಗಿ ಉತ್ಸವವನ್ನು ಆಚರಿಸುತ್ತಾರೆ.
ವರುಷದಿಂದ ವರುಷಕ್ಕೆ ಪಟಾಕಿಗಳ ಅಬ್ಬರದಲ್ಲಿ ಮೇಲಾಟ. ಸಾರ್ವಜನಿಕ ಸ್ಥಳಗಳಲ್ಲಿ ಗಣೇಶೋತ್ಸವಕ್ಕಾಗಿ ತಾತ್ಕಾಲಿಕ ಟೆಂಟ್ಗಳು ಎದ್ದಿದ್ದುವು. ಹಗಲು ಹೊತ್ತಲ್ಲಿ ಪಾಪ, ಗಣೇಶ ಅನಾಥ! ಕೆಲವೆಡೆ ಗಣೇಶನಿಗೆ 'ಬೋರ್' ಆಗಬಾರದಲ್ವಾ, ಯುವಕರೆಲ್ಲಾ ಸೇರಿ ಆತನ ಮುಂದೆ 'ಇಸ್ಪೀಟ್' ಆಡುತ್ತಿದ್ದರು!
'ಇಲ್ಲಾ ಸಾರ್, ಇಲ್ಲಿ ಮಾಮೂಲಿ. ಹದಿನೈದು ವರುಷದಿಂದ ನೋಡುತ್ತಿದ್ದೇನೆ. ರಾತ್ರಿ ಆರ್ಕೆಸ್ಟ್ರಾವೋ, ಡ್ಯಾನ್ಸ್ ಇರುತ್ತೆ. ಹಗಲು ಈ ರೀತಿ ಗಣೇಶನನ್ನು ಕಾಯುತ್ತಿದ್ದಾರೆ' ಕರಾವಳಿ ಮೂಲದ ಪತ್ರಕರ್ತ ವೆಂಕಟೇಶ್ ಹೇಳುತ್ತಾರೆ. ಸರಿ ಇಸ್ಪೀಟ್ ಆಡಲಿ, ಆದರೆ ಗಣೇಶನ ಎದುರು ಒಂದು ದೀಪವಾದ್ರೂ ಇಡಬಾರದೇ? ಚಂದವಾಗಿ ಅಲಂಕಾರವಾದ್ರೂ ಮಾಡಬಾರದೇ?
ಇದನ್ನೆಲ್ಲಾ ಪ್ರಶ್ನಿಸುವಂತಿಲ್ಲ. ಯಾಕೆಂದರೆ 'ಅವರವರ ಭಾವಕ್ಕೆ, ಅವರವರ ಭಕುತಿಗೆ..'! ಇಂತಹ ಸಾರ್ವಜನಿಕ ಉತ್ಸವಗಳ ಆಶಯವೇ ಜನರನ್ನು ಒಂದು ಮಾಡುವಂತಾದ್ದು. ಜನರಲ್ಲಿ ಧಾರ್ಮಿಕವಾದ ವಿಚಾರಗಳನ್ನು, ಸನಾತನೀಯವಾದ ವಿಷಯವನ್ನು, ರಾಷ್ಟ್ರೀಯ ಸಿದ್ಧಾಂತಗಳ ಅರಿವು ಮೂಡಿಸುವುದು ಲೋಕಮಾನ್ಯ ತಿಲಕರ ಆಶಯ. ಕೆಲವಡೆ ಆಶಯದ ಹತ್ತಿರಕ್ಕೆ ಉತ್ಸಗಳು ಬರುತ್ತವೆ.
ಭಕ್ತಿ, ಶೃದ್ಧೆ, ನಂಬುಗೆಗಳು ಪರಸ್ಪರ ಒಂದೇ ಸರಳರೇಖೆಯಲ್ಲಿ ಬರುವಂತಹುಗಳು. ಇವೆಲ್ಲಾ ಮೇಳೈಸಿದ್ದರೆ ಮಾತ್ರ ಉತ್ಸವ ಅರ್ಥಪೂರ್ಣ. ಸಮಯವನ್ನು ಕೊಲ್ಲಲು, ಗೌಜಿ ಅನುಭವಿಸಲು, ಮಜಾ ಮಾಡಲು ಇಂತಹ ಉತ್ಸವಗಳು ಉಪಾಧಿಯಾದರೆ ಉದ್ದೇಶಕ್ಕೆ ಮಸುಕು. ಸಾವಿರಾರು ರೂಪಾಯಿಗಳ ಪಟಾಕಿ ಸಿಡಿಸದಿದ್ದರೆ ಗಣೇಶ ಮುನಿಯಲಾರ. ಶಾಪ ಕೊಡಲಾರ. ಆರಾಧನೆಯಲ್ಲಿ ಶಿಸ್ತಿನ ಸೋಂಕಿಲ್ಲದಿದ್ದರೆ ದೇವರನ್ನು ಕಾಣುವುದಾದರೂ ಹೇಗೆ? ಇದರರ್ಥ ಎಲ್ಲರಿಗೂ ಕಾಣುತ್ತಾನೆ ಎಂದಲ್ಲ.
ನಮ್ಮದು ಪ್ರಜಾಪ್ರಭುತ್ವ ದೇಶ. ಎಲ್ಲರಿಗೂ ಸ್ವಾತಂತ್ರ್ಯ. ಏನೂ ಮಾಡಬಹುದು, ಏನಕ್ಕೇನೂ ಮಾಡಬಹುದು! ಪ್ರಶ್ನಿಸುವಂತಿಲ್ಲ. ಗಣಪತಿಯನ್ನು ಹೆಗಲಿನಲ್ಲಿಟ್ಟು ಮೆರವಣಿಗೆ ಹೋಗುವಾಗ ಪ್ಯಾಂಟ್, ಅಂಗಿ ಇದ್ದರೆ ಏನು? ಎಂದು ಪ್ರಶ್ನಿಸಿದರೆ ಉತ್ತರ ಇಲ್ಲ. ಆದರೆ ಬದುಕಿನ ಸುಭಗತೆಗೆ 'ಸ್ವಯಂ ಶಿಸ್ತು' ಅನಿವಾರ್ಯ. ಇವಿಲ್ಲದಿದ್ದಲ್ಲಿ ಸಂಬಂಧಗಳು, ಬದುಕಿನ ಸತ್ಯಗಳು, ಸನಾತನೀಯವಾದ ವಿಚಾರಗಳು, ಕೊನೆಗೆ ಬದುಕೇ ಢಾಳುಢಾಳು.
0 comments:
Post a Comment