Saturday, December 31, 2011

ಭವಿಷ್ಯದ ಆಪತ್ತುಗಳಿಗೆ ವರ್ತಮಾನದ ಬೆಳಕಿಂಡಿ

ಅಂದು ಅಡಿಕೆ ಕೊಯ್ಲು ದಿನ. ಕಷ್ಟಪಟ್ಟು 'ಹುಡುಕಿ ತಂದ' ನಾಲ್ಕೈದು ಮಂದಿ ಅಡಿಕೆ ಕೊಯ್ಯುವವರು ಮರ ಏರಿದ್ದಾರೆ. ಉಳಿದ ಸಹಾಯಕರು ಗೊನೆ ಕೀಳುತ್ತಿದ್ದಾರೆ. ಬಿದ್ದ ಅಡಿಕೆ ಗೊನೆಯನ್ನು ಹೆಕ್ಕಿ ಕೈಗಾಡಿಗಳಿಗೆ ತುಂಬಿ, ಅಂಗಳಕ್ಕೆ ಸಾಗಾಟ. ಅಲ್ಲಿ ಗೊನೆಯಿಂದ ಅಡಿಕೆಯನ್ನು ಕಿತ್ತು ಗೋಣಿಗಳಿಗೆ ತುಂಬುವ ಕೆಲಸ ನಡೆಯುತ್ತಿದೆ. ಮತ್ತೊಂದೆಡೆ ಗೋಣಿಗಳು ಲಾರಿಗೆ ಲೋಡ್ ಆಗಿ 'ಅಡಿಕೆ ಮಿಲ್' ಸೇರುತ್ತಿವೆ.

ದೊಡ್ಡ ಶಾಖ ಪೆಟ್ಟಿಗೆಯ (ಡ್ರೈಯರ್) ಬಾಯೊಳಗೆ ಅಡಿಕೆ ತೂರುತ್ತಿದ್ದಾರೆ. ಮತ್ತೊಂದೆಡೆ ಈಗಾಗಲೇ ನಾಲ್ಕೈದು ದಿವಸದ ಹಿಂದೆ ತೂರಿದ ಅಡಿಕೆಯನ್ನು ಹೊರ ತೆಗೆಯುತ್ತಿದ್ದಾರೆ. ಅದನ್ನು ಅಡಿಕೆ ಸುಲಿ ಯಂತ್ರದ ಹಾಪರ್ಗೆ ಹಾಕುತ್ತಿದ್ದಾರೆ. ಸುಲಿದ ಅಡಿಕೆ ಮತ್ತು ಸಿಪ್ಪೆ ಬೇರೆ ಬೇರೆಯಾಗಿ ಸಂಗ್ರಹವಾಗುತ್ತಿದೆ. ಸುಲಿದ ಅಡಿಕೆ ಜೀಪ್ಗೆ ಲೋಡ್ ಆಗುತ್ತಿದೆ. ಚಾಲಕನ ಆಸನದಲ್ಲಿ ಕುಳಿತ ಯಜಮಾನನ ಮುಖದಲ್ಲಿ ನಗು. ಸುಲಿದ ಅಡಿಕೆಯ ಗೋಣಿಗಳು ಜಗಲಿಯಲ್ಲಿ ಪೇರಿಸಲ್ಪಡುತ್ತಿವೆ. 'ಹೋ.. ಇಂದು ಕಿಲೋಗೆ ನೂರೈವತ್ತು ಅಲ್ವಾ. ಒಂದು ವಾರ ಕಾಯೋಣ, ಇನ್ನೂರಾಗಬಹುದು' ಎನ್ನುತ್ತಾ ವೀಳ್ಯತಟ್ಟೆಯನ್ನು ಎಳೆದುಕೊಳ್ಳುತ್ತಾನೆ ಆ ಯಜಮಾನ.

ಸದ್ಯಕ್ಕೆ ಮೇಲಿನದು ಒಂದು ಸುಂದರ ಕಲ್ಪನೆ ಮಾತ್ರ. ಅಡಿಕೆ ಕೃಷಿರಂಗದಲ್ಲಿ ಇಂತಹ ಒಂದಷ್ಟು 'ಶ್ರಮ ಉಳಿಸುವ ವ್ಯವಸ್ಥೆ ಬಂದರೆ ಅದೆಷ್ಟು ಅನುಕೂಲ. ಏನಂತೀರಿ? ಮಿಲ್ನಲ್ಲಿ ಬೇಕಾದಾಗ ಭತ್ತವನ್ನು ಅಕ್ಕಿ ಮಾಡಬಹುದು. ಕಿರುಧಾನ್ಯಗಳನ್ನು ಸಂಸ್ಕರಿಸಬಹುದು. ಧಾನ್ಯಗಳನ್ನು ಪುಡಿಗಟ್ಟಬಹುದು. ಅಡಿಕೆಗೂ 'ಮಿಲ್' ಇರುತ್ತಿದ್ದರೆ? ಸಂಸ್ಕರಣೆ ಎಷ್ಟು ಸುಲಭವಲ್ವಾ. ಅಡಿಕೆ ಒಣಗಿಸಲು ಅಂಗಳ ಸಿದ್ಧವಾಗಬೇಕಾಗಿಲ್ಲ, ಐವತ್ತು ದಿನ ಅಡಿಕೆಗೆ ಬಿಸಿಲು ಸ್ನಾನದ ಆವಶ್ಯತೆಯಿರಲಿಲ್ಲ..

ಇಂತಹ ಒಂದು ವ್ಯವಸ್ಥೆಯ ಅಗತ್ಯವನ್ನು ಕೃಷಿಕ ಮಂಚಿ ಶ್ರೀನಿವಾಸ ಆಚಾರ್, ಈಚೆಗೆ ಮಂಗಳೂರಿನಲ್ಲಿ ಕ್ಯಾಂಪ್ಕೋ ಆಯೋಜಿಸಿದ 'ಅಡಿಕೆ ಕೃಷಿ ಯಾಂತ್ರೀಕರಣ' ಕಾರ್ಯಾಗಾರದಲ್ಲಿ ಮುಂದಿಟ್ಟಾಗ ಎಲ್ಲರೂ ತಲೆತೂಗಿದವರೇ!

ಬದುಕಿನ ಒಂದು ಹಂತದಲ್ಲಿ ಕೃಷಿಯು ಸಮಸ್ಯೆಯಾಗಿಲ್ಲ. ಬದಲಾದ ಕಾಲಘಟ್ಟದಲ್ಲಿ 'ಕೃಷಿಯೇ ಒಂದು ಸಮಸ್ಯೆ' ಅಂತ ನಮ್ಮ ಮಾತುಕತೆಗಳಲ್ಲಿ, ಸಭೆಗಳಲ್ಲಿ ಬಿಂಬಿಸಲಾಗುತ್ತಿದೆ. ವಾಸ್ತವ ಹೌದಾದರೂ ಸಮಸ್ಯೆಗೆ 'ಸಮಸ್ಯೆಯ ವೈಭವೀಕರಣ' ಪರಿಹಾರವಲ್ಲ. ಪರ್ಯಾಯವಾಗಿ ಯೋಚಿಸುವ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಜರುಗಿದ ಕಾರ್ಯಾಗಾರ ಹೊಸ ಹೊಳಹುಗಳನ್ನು ತೆರೆದಿಟ್ಟಿತು.

ಇಂದೆಲ್ಲಾ ಸಣ್ಣ ಕುಟುಂಬ. ದೊಡ್ಡ ಮನೆಗಳಿದ್ದರೂ ಒಳಗಿರುವವರು ಇಬ್ಬರೋ, ಮೂವರೋ. ಮನೆಯಿಂದ ಪಂಪುಮನೆಗೆ ಕಿಲೋಮೀಟರ್ ದೂರ. ಕೈಕೊಡುವ ವಿದ್ಯುತ್ನಿಂದಾಗಿ ಆಗಾಗ್ಗೆ ಪುಂಪು ಮನೆಗೆ ಓಡುವ ಯೋಗ! ಇದನ್ನು ಸಮಸ್ಯೆ ಅಂತ ಸ್ವೀಕರಿಸುವ ಬದಲು ಮನೆಯಿಂದಲೇ ಮೊಬೈಲ್ ಮೂಲಕ ಪಂಪನ್ನು ಚಾಲೂ ಮಾಡುವ, ನಿಲ್ಲಿಸುವ ವ್ಯವಸ್ಥೆ ಇರುತ್ತಿದ್ದರೆ? ಈಗಾಗಲೇ ಪ್ರಾಯೋಗಿಕವಾಗಿ ಮೊಬೈನಿಂದ ಚಾಲೂ ಮಾಡುವ ವ್ಯವಸ್ಥೆಗಳಿದ್ದರೂ ಕೃಷಿಕರಿಗಿನ್ನೂ ತಲುಪಬೇಕಷ್ಟೇ.
ವಿದ್ಯುತ್ ಇದೆ, ಕೆರೆಯಲ್ಲಿ ಬೇಕಾದಷ್ಟು ನೀರಿದೆ. ಪಂಪ್ ಆನ್ ಮಾಡಿದರೆ ಆಯಿತು. ದಿನವಿಡೀ ತೋಟ ಒದ್ದೆಯಾಗುತ್ತಿದೆ. ಯಜಮಾನನಿಗೆ ಖುಷಿಯೋ ಖುಷಿ. ಆದರೆ ದಿನವಿಡೀ ಪಂಪ್ ಆನ್ ಮಾಡಿ ನೀರು ಹಾಯಿಸುವುದು ಅಡಿಕೆ, ತೆಂಗು ಕೃಷಿಗೆ ಅನಿವಾರ್ಯವೇ? ಯಾವುದಕ್ಕೆ ಎಷ್ಟೆಷ್ಟು ಪ್ರಮಾಣದಲ್ಲಿ ನೀರು ಬೇಕು ಎಂಬ ಲೆಕ್ಕಾಚಾರ ಬೇಕಾಗಿದೆ.

ಅಡಿಕೆಗೆ ಬಾಧಿಸುವ ಕೊಳೆರೋಗ ನಿಯಂತ್ರಣಕ್ಕೆ ಬೋರ್ಡೋ ದ್ರಾವಣವನ್ನು ಹೇಗೆ ತಯಾರಿಸುವುದು? ಎಷ್ಟು ದಿವಸದ ಅಂತರದಲ್ಲಿ ಸಿಂಪಡಣೆ ಮಾಡುವುದು? ಖಚಿತವಾದ ಮಾಹಿತಿ ಅಲಭ್ಯ. ಅವರವರ ಅನುಭವದಂತೆ ಈ ಕೆಲಸ ನಿರಂತರ ನಡೆಯುತ್ತಲೇ ಇದೆ. ಬೋರ್ಡೋ ದ್ರಾವಣಕ್ಕೆ ಬಳಸುವ ಮೈಲುತುತ್ತು ಎಷ್ಟು ಸಾಚಾ? 'ಮೈಲುತುತ್ತಿಗೆ ಇರುವೆ ಮುತ್ತಿದ್ದಿದೆ,' ಡಾ.ಡಿ.ಸಿ.ಚೌಟರು ಮಾತಿನ ಮಧ್ಯೆ ಹೇಳಿದರು.

' ದಿನವಿಡೀ ಮರ ಏರಿ ಗೊನೆ ಕೊಯ್ಯುವ, ಮದ್ದು ಸಿಂಪಡಿಸುವವರು ಕೆಲವೆಡೆ ಐದು-ಆರು ಎಂಟು ನೂರು ರೂಪಾಯಿ ಸಂಬಳ ಕೇಳಿದ್ದೂ ಇದೆ ’ - ಚೌಟರೆಂದಾಗ ಎಲ್ಲರ ಹುಬ್ಬು ಮೇಲೇರಿತು. 'ಈಗಿನ ಕಾಲಮಾನದಲ್ಲಿ ಈ ವೇತನ ಸರಿ. ಅವರಿಗೆ ಆರೋಗ್ಯ ಭದ್ರತೆ, ಭವಿಷ್ಯ ಭದ್ರತೆ, ಕುಟುಂಬ ಭದ್ರತೆಯಿದೆಯೇ' ಎಂದು ಪ್ರಶ್ನಿಸಿದರು. ಇಂತಹ ವಿಶೇಷಜ್ಞರನ್ನು 'ತಾಂತ್ರಿಕ ತಜ್ಞ'ರೆಂದು ನಾವು ಯಾಕೆ ಸ್ವೀಕರಿಸಬಾರದು. ವಿಶ್ವವಿದ್ಯಾಲಯಗಳಲ್ಲಿ ಕಲಿತು ಕೆಲವು ತಂತ್ರಜ್ಞರಾಗುತ್ತಾರೆ. ಇವರಿಗೆ ಅನುಭವವೇ 'ತಂತ್ರಜ್ಞ' ಪದವಿ.

ಅಡಿಕೆ ಒಣಗಿಸಲು ಬಿಸಿಲು ಮನೆಗೆ ಈಚೆಗೆ ಬೇಡಿಕೆ ಹೆಚ್ಚು. ಇಲಾಖೆಯ ಸಹಾಯಧನ 'ಪ್ರಸಾದ'ವೂ ಸಿಗುತ್ತಿದೆ. ಎರಡು ಎಕ್ರೆ ತೋಟವಿರುವ ಕೃಷಿಕರೂ ಬಿಸಿಲು ಮನೆಯನ್ನು ಹೊಂದುವಂತಾಗಬೇಕು.

'ಕಳೆಕೀಳುವ, ಅಡಿಕೆ ಸುಲಿಯುವ ಯಂತ್ರ, ಪಂಪುಗಳು.. ಹಾಳಾದರೆ ಫೋನ್ ಮಾಡಿದರೆ ಸಾಕು, ಮನೆಬಾಗಿಲಿಗೆ ಬಂದು ರಿಪೇರಿ ಮಾಡಿ ಕೊಡುವ ಸಂಚಾರಿ ಕ್ಲಿನಿಕ್ ಬೇಕಾಗಿದೆ' ಎಂದವರು ಕೃಷಿ ಪತ್ರಕರ್ತ ಪಡಾರು ರಾಮಕೃಷ್ಣ ಶಾಸ್ತ್ರಿ. ಅವರವರ ಅನುಕೂಲಕ್ಕೆ ತಕ್ಕಂತೆ ಯಂತ್ರವನ್ನು ಬಳಸುವ ಕೃಷಿಕರಿಗೆ ರೀಪೇರಿ ಸಮಸ್ಯೆ ತಲೆನೋವು. ದೂರದ ಪೇಟೆಗೆ ಒಯ್ಯುವುದರಿಂದ ಖರ್ಚು ಹೆಚ್ಚು. ಸಮಯ ಹಾಳು. ಇಂತಹ ಸಂಚಾರಿ ಕ್ಲಿನಿಕ್ ಅಗತ್ಯ.

ವಿದೇಶದಲ್ಲಿ ದ್ರಾಕ್ಷಿ, ಮಾವು, ಕಿತ್ತಳೆ ಹಣ್ಣುಗಳನ್ನು ಕೊಯ್ಯುವ ಸಲಕರಣೆಗಳಿವೆ. ಚಿಕ್ಕಪುಟ್ಟ ಸಲಕರಣೆಗಳು ನಮ್ಮಲ್ಲಿದ್ದರೂ ಅವುಗಳ ಕಾರ್ಯಕ್ಷಮತೆ ಹೆಚ್ಚಿಸಬೇಕಾಗಿದೆ. ಚಹಾದ ಚಿಗುರೆಲೆ ಕೀಳಲು, ಕಾಫಿಯ ಹಣ್ಣುಗಳನ್ನು ಕೊಯ್ಯಲು ಇರುವಂತಹ ವಿದೇಶಿ ಯಂತ್ರಗಳ ಮಾದರಿಯಲ್ಲಿ ಕಾಳುಮೆಣಸನ್ನು ಕೊಯ್ಯುವ ಸಲಕರಣೆಯನ್ನು ರೂಪಿಸುವುದು ಅಗತ್ಯ.

'ಕೃಷಿಯಲ್ಲಿ ಅಂತರ್ಸಾಗಾಟಕ್ಕೆ ಒತ್ತುಕೊಡಬೇಕಾದ ಅಗತ್ಯವಿದೆ' ಎಂದವರು ಹಿರಿಯ ಪತ್ರಕರ್ತ ಶ್ರೀ ಪಡ್ರೆ. ಫಿಲಿಪೈನ್ಸ್ನಲ್ಲಿ ದ್ವಿಚಕ್ರಗಾಡಿಗಳಿಗೆ ಪ್ರತ್ಯೇಕವಾದ ಫಿಟ್ಟಿಂಗ್ ಮಾಡಿ ಅವನ್ನು ಗಾಡಿಯಂತೆ ಬಳಸುತ್ತಾರೆ. ಅಲ್ಲಿಂದ ಪ್ರಭಾವಿತರಾದ ಶಿರಸಿಯ ಕೃಷಿಕರು ತಮ್ಮೂರಿನ ದ್ವಿಚಕ್ರ ವಾಹನವನ್ನು ಗಾಡಿಯನ್ನಾಗಿ ಪರಿವರ್ತಿಸಿದ್ದಾರೆ. ಇದಕ್ಕೆ 'ಟುಕ್ಟುಕ್' ಅಂದು ಹೆಸರು. ಇಂತಹ ಏಳೆಂಟು ಟುಕ್ಟುಕ್ಗಳು ತಯಾರಾಗಿ ಕೆಲಸ ಮಾಡುತ್ತಿದ್ದರೂ ಕೃಷಿಕರಿಂದ ಉತ್ತಮ ಸ್ವೀಕೃತಿ ಬರಲಿಲ್ಲ. ಇದರ ವಿನ್ಯಾಸದಲ್ಲಿ ಸುಧಾರಣೆಯಾಗಬೇಕು.

ಕೇರಳದಲ್ಲಿ ತೆಂಗಿನ ಮರವೇರುವ ತರಬೇತಿ ಆಕರ್ಷಕವಾಗುತ್ತಿದೆ. ಮಹಿಳೆಯರೂ ಆಸಕ್ತರಾಗುತ್ತಿದ್ದಾರೆ. ನಮ್ಮಲ್ಲೂ 'ಮ್ಯಾನ್ ಪವರ್ ಡೆವಲಪ್ಮೆಂಟ್' ಮಾಡುವ ಕುರಿತು ಯೋಚನೆ ಅಗತ್ಯ. 'ನಮ್ಮ ನಡುವೆ ಇರುವ ಅಂತರ್ಸಾಗಾಟ ವಾಹನಗಳನ್ನು ಒಂದೇ ಸೂರಿನಡಿ ತರಬೇಕಾಗಿದೆ' ಎಂದರು ಶ್ರೀ ಪಡ್ರೆ.

ಕೆಂಪಡಿಕೆಯನ್ನು ಒಣಗಿಸುವ, ಅದಕ್ಕೆ ಬಣ್ಣ ಹಾಕುವ ವಿಧಾನದಲ್ಲಿ ಏಕತಾನತೆ ಬೇಕು. 'ಅಡಿಕೆಯನ್ನು ಒಣಗಿಸಲು ಸ್ಟೀಲ್ ಹಂಡೆಯೇ ಆಗಬೇಕಾ, ತಾಮ್ರದ ಹಂಡೆ ನಡೆಯುತ್ತದಾ' ಈ ವಿಚಾರದಲ್ಲಿ ಗೊಂದಲವಿದೆ. ಅದಕ್ಕೆ ಏಕಸೂತ್ರತೆ ಬೇಕು.
ಕಾರ್ಯಾಗಾರದಲ್ಲಿ ಮರ ಏರುವ ರೊಬೋಟ್, ರಿಮೋಟ್ ಕಂಟ್ರೋಲ್ ಟಿಲ್ಲರ್, ಅಡಿಕೆ ಸುಲಿ ಉಪಕರಣ, ಶ್ರಮ ಹಗುರ ಮಾಡುವ ಕೃಷಿ ಆವಿಷ್ಕಾರ'ಗಳ ಕುರಿತು ತಜ್ಞ ಕೃಷಿಕರಿಂದ, ತಂತ್ರಜ್ಞರಿಂದ ಪವರ್ಪಾಯಿಂಟ್ ಪ್ರಸ್ತುತಿ. ಶ್ರಮ ಹಗುರ ಮಾಡುವ ಉಪಕರಣಗಳು, ಯಂತ್ರಗಳು ಕಾಲದ ಅವಶ್ಯಕತೆ.

ಕೃಷಿಯ ಬಹುಪಾಲು 'ಬೇಕು'ಗಳನ್ನು ಮುಂದಿಟ್ಟಿದ್ದೀರಿ. ಆದರೆ ಹೈನುಗಾರಿಕೆ ವಿಚಾರಗಳನ್ನು ಯಾರೂ ಟಚ್ ಮಾಡಿಲ್ಲವಲ್ಲಾ.. ಸೋಲಾರ್ ಕುರಿತು ಮಾತನಾಡಿಲ್ಲವಲ್ಲಾ ಎಂದು ಕ್ಯಾಂಪ್ಕೋ ಅಧ್ಯಕ್ಷ ಕೊಂಕೋಡಿ ಪದ್ಮನಾಭ ವಿಶ್ಲೇಷಿಸುತ್ತಾ, 'ಒಂದು ದಿವಸದಲ್ಲಿ ಕೃಷಿಯ ಎಲ್ಲಾ ಸಮಸ್ಯೆಗಳನ್ನು ಬಿಡಿಸುವುದು ಕಷ್ಟಸಾಧ್ಯವಲ್ವಾ' ಎಂಬ ಸಮಾಧಾನದ ಉತ್ತರವನ್ನೂ ನೀಡಿದರು.

'ಅಡಿಕೆ ಸುಲಿ ಯಂತ್ರಗಳು ರೈತನಿಗೆ ಬೇಕಾದ ಹಾಗೆ ವಿನ್ಯಾಸವಾಗಿಲ್ಲ. ಆ ದಿಸೆಯಲ್ಲಿ ಪ್ರಯತ್ನವಾಗಬೇಕು. ಸಣ್ಣ ರೈತರಿಗೂ ಯಂತ್ರ ಸಿಗುವಂತಿರಬೇಕು' - ಕ್ಯಾಂಪ್ಕೋ ಅಧ್ಯಕ್ಷರು ಸಮಸ್ಯೆಗಳ ಪಟ್ಟಿಗೆ ಇನ್ನೊಂದನ್ನು ಸೇರಿಸಿದರು. ಮರ ಏರುವ ವ್ಯವಸ್ಥೆ, ನೆಲದಿಂದಲೇ ಸಿಂಪಡಣೆ, ಗಾಳಿಯಂತ್ರದ ಮೂಲಕ ವಿದ್ಯುತ್ನಲ್ಲಿ ಸ್ವಾವಲಂಬನೆ, ಅಡಿಕೆಯ ಪರ್ಯಾಯ ಉಪಯೋಗಗಳು, ಹಾಲು ಕರೆಯುವ ಯಂತ್ರಗಳ ಸರಳೀಕರಣ, ಕೃಷಿಯ ವಿವಿಧ ವಿಚಾರಗಳಿಗೆ ಪ್ರತ್ಯಪ್ರತ್ಯೇಕ ವಿಚಾರ ಸಂಕಿರಣಗಳ ಅಗತ್ಯವನ್ನು ಹೇಳುತ್ತಾ, 'ಮುಂದಿನ ಮಾರ್ಚ್ ತಿಂಗಳಲ್ಲಿ ನಡೆಯುವ ಎರಡನೇ ಅಡಿಕೆ ಯಂತ್ರ ಮೇಳ'ದ ಸುಳಿವಿತ್ತರು ಕ್ಯಾಂಪ್ಕೋ ಅಧ್ಯಕ್ಷರು.

ಜರುಗಿದ ಕಾರ್ಯಾಗಾರಕ್ಕೆ (15-12-2011) ಅಡಿಕೆ ಸಂಶೋಧನೆ ಮತ್ತು ಅಭಿವೃದ್ಧಿ ಪ್ರತಿಷ್ಠಾನದ ಹೆಗಲೆಣೆ. ಕಾರ್ಮಿಕರ ಅಭಾವದಿಂದಾಗಿ ಭವಿಷ್ಯದಲ್ಲಿ ಎರಗಬಹುದಾದ ಆಪತ್ತುಗಳಿಗೆ ವರ್ತಮಾನದಲ್ಲಿ ಹುಟ್ಟಿದ ಜಾಗೃತಿ ಕೃಷಿ ರಂಗಕ್ಕೊಂದು ಆಶಾದಾಯಕ ಬೆಳಕಿಂಡಿ. ಕಾರ್ಯಾಗಾರದಲ್ಲಿ ಕೃಷಿಕರಿಂದ ಪ್ರಸ್ತುತವಾದ ವಿಚಾರಗಳ ಅನುಷ್ಠಾನಕ್ಕೆ ಹೆಗಲು ನೀಡಲಿದೆ, ನಮ್ಮ 'ಕ್ಯಾಂಪ್ಕೋ'.

0 comments:

Post a Comment