Thursday, December 1, 2011

ಅಡವಿ ಕಲಿಸಿದ ಬದುಕಿನ ಜ್ಞಾನ

ಉತ್ತರ ಕನ್ನಡ ಜಿಲ್ಲೆಯ ಶಿರಸ್ಗಾಂವ್ ಅರಣ್ಯದಂಚಿನ ಊರು. ಕಾಡನ್ನೆ ನಂಬಿದ ಸಿದ್ದಿ ಕುಟುಂಬಗಳು. ಆಧುನಿಕ ವಿದ್ಯಮಾನಗಳು ಗೊತ್ತಿದ್ದೂ, ನಿರ್ಲಿಪ್ತರಾಗಿ ಬದುಕುವ ಸಿದ್ದಿಗಳ ಜೀವನ ಅಪ್ಪಟ ದೇಸಿ.

ಶಿರಸಿಯ ಎಂ.ಆರ್.ಹೆಗಡೆ, 'ಪ್ರಕೃತಿ' ಸಂಸ್ಥೆಯಡಿ ಸಿದ್ದಿಗಳ ಬದುಕನ್ನು ಓದಿದವರು. ಸಿಕ್ಕಾಗಲೆಲ್ಲಾ ಕಾಡಿನ ಸಹವಾಸಗಳನ್ನು ರೋಚಕವಾಗಿ ಹೇಳುತ್ತಿದ್ದರು. 'ಮರದ ಪೊಟರೆಯೊಳಗಿಂದ ಜೇನು ಸಂಸಾರವನ್ನು ತೆಗೆಯುವ ವಿಧಾನ ನೋಡಬೇಕಿತ್ತಲ್ವಾ,' ಎಂದಿದ್ದೆ.

ಮಧ್ಯಾಹ್ನದ ಹೊತ್ತು. ಹೆಗಡೆಯವರ ದ್ವಿಚಕ್ರದಲ್ಲಿ ಶಿರಸ್ಗಾಂವ್ ಪ್ರಯಣ. ನಗರ ಬಿಟ್ಟು, ಗ್ರಾಮ ಹಿಂದಿಕ್ಕಿ, ಹಳ್ಳಿ ಸೇರಿದಾಗ 'ಜೇನು ಕುತೂಹಲ' ತಣಿದಿತ್ತು! ಆಗಷ್ಟೇ ಊಟ ಮುಗಿಸಿ, ನಿದ್ದೆಗೆ ಜಾರುತ್ತಿದ್ದ ವೆಂಕಟ್ರಮಣ ಸಿದ್ದಿಯ ಮನೆಯ ಕದ ತಟ್ಟಿದಾಗ, ಆಕಳಿಸುತ್ತಾ ಬಾಗಿಲು ತೆರೆದರು.

ಹೆಗಡೆಯವರಿಂದ ಪರಿಚಯ. 'ಕರಾವಳಿಯಿಂದ ಬಂದಿದ್ದಾರೆ. ಆಗಷ್ಟೇ ತೆಗೆದ ಜೇನನ್ನು ತಿನ್ನಬೇಕಂತೆ. ನೀವು ಹೇಗೆ ತೆಗೀತೀರಿ ಎಂಬುದನ್ನೂ ನೋಡಬೇಕಂತೆ' ಎಂಬ ಬೇಡಿಕೆಯ ಪಟ್ಟಿ ಮುಂದಿಟ್ಟಾಗ, 'ಈಗೆಲ್ಲಿ, ಸೀಸನ್ ಮುಗಿದೋಯಿತು' ಎಂಬ ಉತ್ತರದಲ್ಲಿ ಜಾಗ ಖಾಲಿ ಮಾಡಬೇಕೆಂಬ ಸೂಚನೆಯಿತ್ತು.

ಹೆಗಡೆಯವರ ಒತ್ತಾಯದ ಮೇರೆಗೆ ವೆಂಕಟ್ರಮಣ ಹಸಿರು ನಿಶಾನೆ. ಮಗ ಪ್ರಕಾಶ ಹೆಜ್ಜೆ ಹಾಕಿದ. ಎಳೇ ವಯಸ್ಸಿನಲ್ಲೇ ಕಾಡನ್ನು ಪಿಎಚ್ಡಿಗಿಂತಲೂ ಹೆಚ್ಚು ಓದಿದ್ದ, ಅಭ್ಯಾಸ ಮಾಡಿದ್ದ. ಎರಡು ತಾಸು ನಡೆದಿರಬಹುದು. ನಡೆದಷ್ಟೂ ಕಾಡು ಆವರಿಸಿಕೊಳ್ಳುತ್ತಿತ್ತು.
'ಜೇನು ಹುಳ ಹಾರುವ ಸದ್ದು ಕೇಳುತ್ತೆ,' ಪ್ರಕಾಶನ ಅವ್ಯಕ್ತ ವಾಣಿ. ವೆಂಕಟ್ರಮಣ ಒಂದು ಕ್ಷಣ ಸುಮ್ಮನಿದ್ದು, ಧ್ಯಾನಸ್ಥನಾಗಿ ಮೇಲೆ ದಿಟ್ಟಿಸಿ, 'ಹೌದು ಕಣೋ' ಮಗನಿಗೆ ಸ್ಪಂದಿಸಿದರು. ಏನೆಂದು ಅರ್ಥವಾಗಲಿಲ್ಲ. ದಟ್ಟ ಕಾಡಿನ ಮಧ್ಯೆ ತರಗಲೆ ಸದ್ದು, ಗಾಳಿ ಬೀಸುವ ದನಿ, ಅದರ ಮಧ್ಯೆ 'ಒಂದು ಜೇನು ನೋಣ' ಹಾರುವ ಸದ್ದು ವೆಂಕಟ್ರಮಣನಿಗೆ ಕೇಳಿಸಿತು! ಪುರಾಣ ಕಾಲದ 'ಶಬ್ದವೇಧಿ' ಸಿದ್ಧಿಸಿರಬೇಕು. ತೊಂಭತ್ತು ಡಿಗ್ರಿಗೆ ಹತ್ತಿರವಿದ್ದ ಗುಡ್ಡದ ಮೇಲೆ ಪ್ರಕಾಶ ನಿಂತಿದ್ದ. ಆತ ಹೇಗೆ ಏರಿರಬಹುದು. ರಾಮಾಯಣ ನೆನಪಾಯಿತು.

ಹೊಟ್ಟೆ ಖಾಲಿಯಾಗಿತ್ತು. ಬಾಟಲ್ ನೀರು ತಳ ಸೇರಿತ್ತು. ಸರಿ, ಗುಡ್ಡ ಏರಲು ಶುರು. ದಾರಿ ಮಾಡಿಕೊಂಡು, ಬಳ್ಳಿಗಳ ಎಡೆಯಲ್ಲಿ ಹರಿದಾಡಿ, ತರಗೆಲೆಗಳ ಮೇಲೆ ಕಾಲಿಟ್ಟು ಜಾರಿ - ಬಿದ್ದು, ಪುನಃ ಎದ್ದು ಏರಿದ್ದೇ ಏರಿದ್ದು! ಅತ ಐದು ನಿಮಿಷದಲ್ಲಿ ಏರಿದ ಗುಡ್ಡವನ್ನು ನನಗೆ, ಹೆಗಡೆಯವರಿಗೆ ಏರಲು ಬರೋಬ್ಬರಿ ಮೂವತ್ತು ನಿಮಿಷ! ನಮ್ಮೊಂದಿಗಿದ್ದ ವೆಂಕಟ್ರಮಣ ಆಗಲೇ ತುದಿ ಮುಟ್ಟಿದ್ದ.

ಗುಡ್ಡದ ತುದಿ ತಲುಪಿದಾಗ ಸ್ವರ್ಗದಲ್ಲಿದ್ದ ನನ್ನ ಹಿರಿಯರೆಲ್ಲಾ ಕೈಬೀಸಿ ಕರೆಯುತ್ತಿದ್ದರು! ಮಂಪರು ಸ್ಥಿತಿ. ಬಾಯಿ ಒಣಗಿ ಮಾತು ಮುಷ್ಕರ ಹೂಡಿತ್ತು. 'ದೊಡ್ಡ ಸಂಸಾರವಿದೆ. ಬನ್ನಿ. ಅಂತೂ ಸಿಕ್ಕಿತಲ್ವಾ..' ಮೊದಲಾದ ಮಾತುಗಳು ಕೇಳುತ್ತಿತ್ತೇ ವಿನಾ, ದೃಶ್ಯ ಗೋಚರಿಸುತ್ತಿರಲಿಲ್ಲ. ನನ್ನ ಅವಸ್ಥೆಯನ್ನು ನೋಡಿ ಹೆಗಡೆಯವರು 'ಸ್ವಲ್ಪ ನೀರಾದರೂ ಕೊಡೋಣ' ಎಂದರು.

ಅಷ್ಟರಲ್ಲಿ ವೆಂಕಟ್ರಮಣ ತಡೆದು, 'ಇಷ್ಟು ಸುಸ್ತಾಗಿದ್ದಾಗ ನೀರು ಕೊಟ್ಟರೆ ಅವರನ್ನು ಪುನಃ ಊರಿಗೆ ಕಳುಹಿಸಲು ಕಷ್ಟ. ನಮಗೂ ಅಪವಾದ. ಬಾಯಿಗೆ ಜೇನು ಹಾಕಿ' ಎನ್ನುತ್ತಿದ್ದಾಗ ಪ್ರಕಾಶ ಆಗಷ್ಟೇ ಪೊಟರೆಯೊಳಗಿಂದ ತೆಗೆದ ಜೇನಿನ ಎರಿಯಲ್ಲಿದ್ದ ಜೇನನ್ನು ಬಾಯಿಗೆ ಹಿಂಡಿದ. ಸುಸ್ತು ಜರ್ರನೆ ಇಳಿದ ಅನುಭವ.

ಆಶ್ಚರ್ಯವಾಯಿತು. ಪ್ರಾಣೋತ್ಕ್ರಮಣ ಸ್ಥಿತಿಯಲ್ಲಿದ್ದಾಗ ಯಾವುದು ಕೊಡಬೇಕು, ಯಾವುದು ಕೊಡಬಾರದು ಎಂಬ ಜ್ಞಾನವನ್ನು ಹೇಗೆ ಕಲಿತರು? ಯಾವುದೇ ಪದವಿ ಪಡೆದಿಲ್ಲ. ಅಬ್ಬಬ್ಬಾ ಅಂದರೆ ಮೂರೋ, ನಾಲ್ಕೋ ಓದಿರಬಹುದಷ್ಟೇ. ಅದು ಅಡವಿ ಕಲಿಸಿದ ಜ್ಞಾನ. ಬದುಕಿನ ಜ್ಞಾನ. ಪಾರಂಪರಿಕ ಜ್ಞಾನ.

ಗುಡ್ಡದ ತುದಿಯಲ್ಲಿದ್ದೇವೆ. ಮರದ ಪೊಟರೆಯೊಳಗೆ ವೆಂಕಟ್ರಮಣ ತನ್ನ ಇಡೀ ಕೈಯನ್ನು ವೆಂಕಟ್ರಮಣ ತೂರಿದ್ದಾನೆ. ಕೈಯಲ್ಲಿ ಚಿಕ್ಕ ಚೂರಿಯಿದೆ. ಒಂದೊಂದೇ ಎರಿಯನ್ನು ತೆಗೆಯುತ್ತಿದ್ದಾನೆ. ಜೇನು ನೊಣಗಳು ರೋಷಗೊಂಡು ಮುತ್ತುತ್ತಿವೆ, ಆದರೆ ಕಚ್ಚುತ್ತಿಲ್ಲ. 'ಅವು ಯಾಕೆ ಕಚ್ಚುತ್ತವೆ. ಏನೂ ಮಾಡೊಲ್ಲ. ಅವಕ್ಕೂ ಮಾತು ಬರ್ತಾವೆ ಸಾರ್,' ಎಂದ. ಜೇನು ನೊಣಗಳೊಂದಿಗೆ ಎಂತಹ ನಿಕಟ ಸಂಬಂಧ!

ತೆಗೆದಷ್ಟೂ ಹೊರ ಬರುವ ಜೇನು ತುಂಬಿದ ಎರಿಗಳು. ಎಲ್ಲವನ್ನೂ ಅಡಿಕೆ ಮರದ ಹಾಳೆಯಲ್ಲಿ ಗಂಟು ಕಟ್ಟಿದ. ಒಂದೊಂದು ಎರಿಯನ್ನು ನಮ್ಮ ಕೈಗೆ ಹಾಕಿದ. ತಾನೂ ತಿಂದ. ಅಲ್ಲ, ತಿನ್ನುತ್ತಲೇ ಇದ್ದ. ನಾವು ಎರಿಯನ್ನು ಎಲೆಯಲ್ಲಿ ಹಿಂಡಿ, ಬಾಯಿಗೆ ಎರೆದುಕೊಳ್ಳುತ್ತಿದ್ದಾಗ ವೆಂಕಟ್ರಮಣ ಗೇಲಿ ಮಾಡಿದ. ಹಾಗಲ್ಲರೀ ಜೇನುತುಪ್ಪ ತಿನ್ನೋದು - ಎನ್ನುತ್ತಾ ಕಚಕಚನೆ ಎರಿಯನ್ನು ಅಗಿದು, ತ್ಯಾಜ್ಯವನ್ನು ಉಗಿದಾಗ ಮುಖ ನೋಡಬೇಕಿತ್ತು!

'ಜೇನು ತಿನ್ನುವುದೆಂದರೆ ಅನ್ನ ತಿಂದಂತೆ ಅಲ್ಲ, ತಿನ್ನುತ್ತಾ ಇದ್ದಾಗ ಅದು ಬಾಯಲ್ಲಿ ಇಳಿದು, ಹೊಟ್ಟೆಯ ಮೇಲೆ ಇಳಿಯಬೇಕು. ಒಂದು ರೀತಿಯಲ್ಲಿ ಬಾಯಿ ಕೆಸರಾಗಬೇಕು'! ಹೀಗೆ ತಿಂದಾಗಲೇ ಜೇನಿನ ನಿಜವಾದ ಸವಿ, ಸ್ವಾದ.

ಇದನ್ನು ಕೇಳುವಾಗ ವೆಂಕಟ್ರಮಣ ಅಸಂಸ್ಕೃತ ಎಂಬ ನಿರ್ಧಾರಕ್ಕೆ ಬಂದರೆ ನಾವೇ ಅಜ್ಞಾನಿಗಳು. ಯಾವ ವಸ್ತುವನ್ನು ಹೇಗೆ ಅನುಭವಿಸಿ ತಿನ್ನಬೇಕು ಎಂಬ ಅರಿವು ಅವರಲ್ಲಿದೆ. ನಾವು ಒಂದು ದಿನವಾದರೂ ಆಹಾರವನ್ನು ಅನುಭವಿಸಿ ತಿನ್ನುತ್ತೇವೆಯೇ? ಟಿವಿ ನೋಡುತ್ತಾ, ಮೊಬೈಲಲ್ಲಿ ಮಾತನಾಡುತ್ತಾ ಆಹಾರವನ್ನು ಮುಕ್ಕುತ್ತೇವೆ ಹೊಟ್ಟೆಗೆ ತಳ್ಳುತ್ತೇವೆ. ನಮ್ಮ ಪಾಲಿಗೆ ಹೊಟ್ಟೆಯೆಂಬುದು ತ್ಯಾಜ್ಯ ತುಂಬುವ ಚೀಲ.

ಇರಲಿ, ಅಂದು ವೆಂಕಟ್ರಮಣರಿಗೆ ಎಂಟು ಕಿಲೋದಷ್ಟು ಜೇನು ಸಿಕ್ಕಿರಬಹುದು. ಹೊರಡುವಾಗ ತೋರಿದ ಉದಾಸೀನವು ಬರುವಾಗ ಮಾಯವಾಗಿತ್ತು. ಆತನ ಮನೆ ಸೇರಿದಾಗ ಕತ್ತಲಾಗಿತ್ತು. ಮನೆಯಲ್ಲೂ ಜೇನಿನ ಸಮಾರಾಧನೆ. 'ಹೇಂಗಿದೆ, ನಮ್ಮ ಕಾಡು' ಎಂದು ಛೇಡಿಸಿ, ನನ್ನ ಅವಸ್ಥೆಯನ್ನು ಮನೆಯಲ್ಲಿ ಹೇಳುತ್ತಾ ನಕ್ಕಿದ್ದೇ ನಕ್ಕಿದ್ದು.

ಇದು ಸಿದ್ದಿಗಳ ಬದುಕಿನಲ್ಲಿ ಕಾಡಿನ ಜ್ಞಾನ ಹೊಸೆದ ಒಂದು ಎಳೆ. 'ಅಪರೂಪಕ್ಕೆ ಪೇಟೆಗೆ ಬರ್ತೇವೆ. ಅಲ್ಲಿ ಉಸಿರುಗಟ್ಟುತ್ತೆ. ಹೆಚ್ಚು ಹೊತ್ತು ನಿಲ್ಲೊಲ್ಲ. ಕೂಡಲೇ ಬಂದುಬಿಡ್ತೀವಿ', ವೆಂಕಟ್ರಮಣ ಅಂದಾಗ, ನಗರದ ಬದುಕಿನ ಜಂಜಾಟದ ಸೆಳೆಯೊಂದು ಮಿಂಚಿ ಮರೆಯಾಯಿತು.

ಹಣೆಯಲ್ಲಿ ಬೆವರಿಳಿಸದೆ ಗುಡ್ಡವನ್ನು ಹತ್ತುತ್ತಾರೆ, ಹೊಳೆಯನ್ನು ನಿರಾಯಾಸವಾಗಿ ಈಜುತ್ತಾರೆ, ಸರಸರನೆ ಮರವನ್ನು ಏರುತ್ತಾರೆ. ಕಾಡುತ್ಪತ್ತಿಗಾಗಿ ಮೂರ್ನಾಲ್ಕು ದಿವಸ ಮನೆ ಬಿಟ್ಟು ಕಾಡಿನಲ್ಲೇ ಐಕ್ಯವಾಗುತ್ತಾರೆ. ಪ್ರಕೃತಿಯೇ ಬಯಲು. ಕಾಡೇ ಜೀವನ. ಅದರಲ್ಲಿ ಸಂತೋಷವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಶುದ್ಧವಾದ ಆಹಾರವಿದೆ, ಆರೋಗ್ಯವಿದೆ. ಸುಖವಾಗಿ ಬದುಕುವ ಜಾಣ್ಮೆ ಗೊತ್ತಿದೆ.

ಪ್ರಕೃತಿ ಸಂಸ್ಥೆಯು ಶಿರಸ್ಗಾಂವ್ನಲ್ಲಿ ಬೇಸಿಗೆಯಲ್ಲಿ ಮಕ್ಕಳ ಶಿಬಿರವನ್ನು ಏರ್ಪಡಿಸುತ್ತಿದೆ. ಅದಕ್ಕೆ ನಗರದಿಂದ ಟೈ ಕಟ್ಟಿದ ಸಂಪನ್ಮೂಲ ವ್ಯಕ್ತಿಗಳು ಬರುವುದಿಲ್ಲ. ವೆಂಕಟ್ರಮಣ ಸಿದ್ದಿ, ಪ್ರಕಾಶನಂತಹ ಹಳ್ಳಿ ಮಂದಿ ಸಂಪನ್ಮೂಲ ವ್ಯಕ್ತಿಗಳು. ಅಲ್ಲಿನ ಆಹಾರ, ಕಲೆ, ಬದುಕಿನ ಸಮೀಪ ದರ್ಶನ. ಪೇಟೆ ಮಂದಿಯ ಹಳ್ಳಿ ವಾಸ.

ಇಲ್ಲಿ ನಡೆವ ಶಿಬಿರದಲ್ಲಿ ಮಸಿ ಚಿತ್ರಗಳಿಲ್ಲ, ಮುಖವಾಡಗಳ ರಚನೆಗಳಿಲ್ಲ. ಈಜುವುದು, ಮರಗಳನ್ನು ಗುರುತು ಹಿಡಿಯುವುದು, ಸಸ್ಯಗಳ ಔಷಧೀಯ ಗುಣಗಳ ಕಲಿಕೆ, ಚಾರಣ.. ಮೊದಲಾದ ಅಪ್ಪಟ ಹಳ್ಳಿ ವಿಚಾರಗಳ ಕಲಿಕೆ.

ನಗರದ ಮಧ್ಯೆ ನಿಂತು ಹಳ್ಳಿಯನ್ನು ಓದುತ್ತೇವೆ. ಹಳ್ಳಿಗರ ಜ್ಞಾನವನ್ನು ವೈಜ್ಞಾನಿಕ ಕಣ್ಣಿನಲ್ಲಿ ನೋಡಿ ಗೇಲಿ ಮಾಡುತ್ತೇವೆ. ಆದರೆ ಶುದ್ಧ ಆಹಾರಕ್ಕಾಗಿ ಹಳ್ಳಿಯತ್ತ ಮುಖ ಮಾಡುತ್ತೇವೆ. ಹಳ್ಳಿಯನ್ನು, ಹಳ್ಳಿಜ್ಞಾನವನ್ನು ಮರೆತ 'ಅಭಿವೃದ್ಧಿ'ಯ ಹಿಂದೆ ಇರುವ ಕೋಟಿಗಳ ಲೆಕ್ಕಗಳು ಗ್ರಾಮೀಣ ಭಾರತವನ್ನು ಅಣಕಿಸುತ್ತದೆ.

2 comments:

G S Srinatha said...

ಉತ್ತಮ ಮಾಹಿತಿ ಸರ್, ಧನ್ಯವಾದಗಳು.
ಬೇಸಿಗೆ ಶಿಬಿರದಲ್ಲಿ, ವೆಂಕಟರಮಣಸಿದ್ಧಿ ಹಾಗು ಪ್ರಕಾಶನಂತಹವರ ಅನುಭವಗಳನ್ನು video ಮಾಡಿಸಿ ನಿಮ್ಮ ಬ್ಲಾಗಿನಲ್ಲಿ ಹಾಕಿ, ಬಹಳಷ್ಟು ಜನಕ್ಕೆ ಅನುಕೋಲವಾಗುತ್ತದೆ.

PaLa said...

sundara baraha sir

Post a Comment