Tuesday, December 20, 2011

'ಮಂಚೂರಿ' ಲೋಕದೊಳಗೊಂದು ಸುತ್ತು!ಜಾತ್ರೆಯೊಂದರ ಸಂತೆಯಲ್ಲಿ ತಿರುಗಾಡುತ್ತಿದ್ದೆ. ಗೋಬಿ ಮಂಚೂರಿ(ಯನ್) ಮಳಿಗೆಯಿಂದ 'ಬನ್ನಿ, ರುಚಿ ರುಚಿಯಾದ ಮಂಚೂರಿ ರೆಡಿ. ಸವಿಯಿರಿ. ಖುಷಿ ಪಡೆಯಿರಿ' ಎಂಬ ನಿಲುಗಡೆಯಿಲ್ಲದ ಘೋಷಣೆ. ಅಲ್ಲ ಬೊಬ್ಬೆ! ಹತ್ತಾರು ಪುಟಾಣಿಗಳು ಮಳಿಗೆಗೆ ಲಗ್ಗೆ ಇಟ್ಟರು. ಗೋಬಿಯನ್ನು ಆರ್ಡರ್ ಮಾಡಿದರು. ಪ್ಲೇಟ್ನಲ್ಲಿ ಹೊಗೆಯೇಳುತ್ತಿದ್ದ, ಕೆಂಪು ವರ್ಣದ 'ಗೋಬಿ' ನಿಧಾನಕ್ಕೆ ಹೊಟ್ಟೆಗಿಳಿಯುತ್ತಿದ್ದಂತೆ ಮಕ್ಕಳ ಮುಖ ಅರಳಿತ್ತು. ಒಂದಿಬ್ಬರು ಇನ್ನೊಂದು ಪ್ಲೇಟ್ಗೆ ಆರ್ಡರ್ ಮಾಡಿಯೂ ಆಗಿತ್ತು.
'ಛೆ.. ಇವರೆಲ್ಲಾ ಕಣ್ಣೆದುರೇ ವಿಷವನ್ನು ತಿನ್ನುತ್ತಿದ್ದಾರಲ್ಲಾ' ಅಂತ ಕೊರಗಿದೆ. ಫೋಟೋ ಕ್ಲಿಕ್ಲಿಸಲು ಕ್ಯಾಮೆರಾ ತೆಗೆಯುತ್ತಿದ್ದಂತೆ ಕೈ ಜಾರಿತು! ಮನಸ್ಸೂ ಕೂಡಾ. 'ಬನ್ನಿ ಸ್ವಾಮಿ, ಮಕ್ಕಳೊಂದಿಗೆ ತಿನ್ನಲು ನಿಮಗೆ ಸಂಕೋಚವಾ' ಎನ್ನಬೇಕೆ. ಅಲ್ಲಿಂದ ಕಾಲ್ಕಿತ್ತೆ.


ಜಾತ್ರೆಯಿರಲಿ, ಸಮಾರಂಭವಿರಲಿ ಗೋಬಿ ಮಂಚೂರಿಗೆ ದೊಡ್ಡ ಮಣೆ. ಹೆಸರು ಕೇಳಿದಾಗಲೇ ಜೊಲ್ಲು ಸೃಷ್ಟಿಯಾಗುತ್ತದೆ. ಪ್ಲೇಟ್, ಚಮಚ ಬಿಟ್ಟರೆ ಬಳಸುವ ಒಳಸುರಿಗಳು ಪೂರ್ತಿ 'ರಾಸಾಯನಿಕ' ಎಂದು ಮಕ್ಕಳಿಗೇನು ಗೊತ್ತು? ಯಾವುದೇ ಪಾಠ ಅವರಿಗೆ ಹೇಳಿಲ್ಲ. ಹಿರಿಯರಿಗೆ ಹೇಳಲು ಗೊತ್ತಿಲ್ಲ. ಗೊತ್ತಿದ್ದರೂ ಪುರುಸೊತ್ತಿಲ್ಲ. ಸಂದರ್ಭ ಸಿಕ್ಕರೆ ಮಕ್ಕಳೊಂದಿಗೇ ತಾವೂ ಗೋಬಿಯನ್ನು ಮೆದ್ದಾರು!


ಗೋಬಿ ಮಂಚೂರಿಗೆ ಬಳಸುವ ಮುಖ್ಯ ಕಚ್ಚಾವಸ್ತು ಕಾಲಿಫ್ಲವರ್ ಯಾ ಹೂಕೋಸು. ಬಯಲು ಸೀಮೆಯ ನೆಲಕ್ಕೆ ಸೂಕ್ತ. ಎಲೆಯೊಡೆದು ಕೊಯಿಲು ಮಾಡುವ ಹಂತದ ತನಕ ಕೀಟಬಾಧೆಗಾಗಿ ಹಲವು ಸಲ ವಿಷದ (ರಾಸಾಯನಿಕ) ಸ್ನಾನ. ಕೊಯಿದ ಬಳಿಕವೂ ವಿಷದ ನೀರಿನಲ್ಲಿ ಮಿಂದೆದ್ದು ಲಾರಿಗೆ ಲೋಡ್ ಆಗುತ್ತದೆ. ನಮ್ಮೂರಿಗೆ ಬರುತ್ತದೆ. ಅಂಗಡಿ ಸೇರುತ್ತದೆ. ಅಲ್ಲಿಂದ ಗೋಬಿ ಮಳಿಗೆಗೆ. ಬಳಿಕ ನೇರವಾಗಿ ಹೊಟ್ಟೆಗೆ. ಮಂಚೂರಿಯನ್ ಎಂಬ ಹೆಸರಿನ 'ಬಣ್ಣದ ವೇಷ'ವಾಗುವಾಗ ಇನ್ನೂ ನಾಲ್ಕೈದು 'ಬಣ್ಣದ ವಿಷಗಳು' ಸಾಥ್ ನೀಡುತ್ತವೆ. ಬಿಳಿಯ ಪ್ಲೇಟ್ನಲ್ಲಿ ಮಂಚೂರಿಯ ಮೇಲೆ ತಂತಿಕಂಬದ ಹಾಗೆ ಕಡ್ಡಿಗಳನ್ನು ಪೋಣಿಸಿ, ಟೇಬಲ್ ಮೇಲೆ ಸಪ್ಲೈಯರ್ ತಂದಿಟ್ಟಾಗ ಆನಂದ ಅಲ್ಲ, ಪರಮಾನಂದ. ಮನೆಗೊಂದಿಷ್ಟು ಕಟ್ಟಿಸಿಕೊಂಡೂ ಹೋಗುತ್ತೇವೆ.


ಹೂಕೋಸು ಕೊಯಿಲು ಆಗುವ ತನಕ ಒಂದಷ್ಟು ಸಿಂಪಡಣೆ ಕಂಡಿತಲ್ವಾ, ಆಗ ಅದರೊಳಗೆ ಸೇರಿದ್ದ ಕೀಟಗಳು ವಿಷದಿಂದಾಗಿ ಅಲ್ಲೇ ಢಮಾರ್ ಆಗಿರುತ್ತವೆ. ಅವುಗಳು ಮಂಚೂರಿ ಮೂಲಕ 'ಬೋನಸ್' ಆಗಿ ಹೊಟ್ಟೆ ಸೇರುತ್ತವೆ.


'ಛೆ.. ಜನಪ್ರಿಯವಾದ ಮಂಚೂರಿಯನ್ ಕುರಿತು ಹೀಗೆಲ್ಲಾ ಬರೆಯುವುದಾ' ಎಂದು ನೀವು ಆಶ್ಚರ್ಯಪಟ್ಟರೆ ಅದರಲ್ಲಿ ಆಶ್ಚರ್ಯವಿಲ್ಲ. ಕಾರಣ, ಇಂತಹ ಕಟು ಸತ್ಯಗಳು ಯಾವಾಗಲೂ ತೆರೆಯ ಮರೆಯಲ್ಲೇ ಇರುತ್ತದೆ. ವಾಹಿನಿಗಳಲ್ಲಿ ಸಾಕಷ್ಟು ಬಾರಿ ಪ್ರಸಾರವಾದಾಗಲೂ ವೀಕ್ಷಕರಾದ ನಮ್ಮೆಲ್ಲರದು 'ದಿವ್ಯಮೌನ'! 'ಆ ವಿಚಾರ ನಮಗಲ್ಲ, ನೆರೆಯವನಿಗೆ' ಎಂಬ ಭಾವ!
ರಾಸಾಯನಿಕ ಯಾ ವಿಷಗಳು ಬದುಕಿನೊಂದಿಗೆ ಆಟವಾಡುತ್ತಿವೆ. ಇಪ್ಪತ್ತರ ತಾರುಣ್ಯದಲ್ಲೇ ಐವತ್ತರಂತೆ ಕಾಣಿಸಿಕೊಳ್ಳುತ್ತೇವೆ. ಚಿಕೂನ್ ಗುನ್ಯಾವೋ, ಹಂದಿಜ್ವರವೋ ಕಾಣಿಸಿಕೊಂಡಾಗ ಅದನ್ನು ತಾಳಿಕೊಳ್ಳುವಂತಹ ಧಾರಣ ಶಕ್ತಿಯನ್ನೇ ಕಳೆದುಕೊಂಡಿದ್ದೇವೆ. ಆಸ್ಪತ್ರೆಗಳಲ್ಲಿ ಡ್ರಿಪ್ ಹಾಕಿಸಿಕೊಂಡು, ಸೂರು ನೋಡುತ್ತಾ ನಿರ್ಲಿಪ್ತರಾಗತ್ತೇವೆ.


ಎಂಡೋಸಲ್ಫಾನ್ ಘೋರ ವಿಷಗಳ ಪರಿಣಾಮದಿಂದ ಸಾವಿರಗಟ್ಟಲೆ ಮಂದಿ ಜೀವಚ್ಛವವಾಗಿರುವ ಸತ್ಯ ಕಣ್ಣೆದುರಿಗಿದೆ. ಸದ್ಯಕ್ಕೆ ಸರಕಾರವು 'ಎಂಡೋ ನಿಷೇಧ' ನಾಟಕ ಕಂಪನಿ ಸೃಷ್ಟಿಸಿದೆ. ಆದರೆ ಭವಿಷ್ಯದಲ್ಲಿ ಹೊಸ ಡಬ್ಬದಲ್ಲಿ ಇದೇ ವಿಷ ಪುನಃ ಭಾರತ ಪ್ರವೇಶಿಸಿದಾಗ, ರತ್ನಗಂಬಳಿ ಹಾಸಿ ಸ್ವಾಗತಿಸುತ್ತೇವೆ. ನಮ್ಮದು ಉದಾರ ಮನಸ್ಸಲ್ವಾ..!


ಉಪ್ಪಿನಂಗಡಿ ಸನಿಹದ ಪಂಜಳ 'ಸುಧಾಮ' ಮನೆಯಲ್ಲಿ 'ವಸುಧಾ ಪ್ರತಿಷ್ಠಾನ' ಏರ್ಪಡಿಸಿದ 'ಹೇಮಂತ ಹಬ್ಬ'ದಲ್ಲಿ ಮಂಚೂರಿಯನ್ 'ಸಮಾರಾಧನೆ'ಯಿತ್ತು! ಆದರೆ ಹೊಟ್ಟೆಗಲ್ಲ, ಬುದ್ಧಿಗೆ. ಐವತ್ತಕ್ಕೂ ಮಿಕ್ಕಿ ವಿದ್ಯಾರ್ಥಿಗಳು ಮಂಚೂರಿಯನ್ನು ಮನಸಾ ಸವಿದರು. 'ಇಷ್ಟೊಂದು ರಾಸಾಯನಿಕ ಬಳಸುತ್ತಾರೆ ಅಂತ ಗೊತ್ತಿಲ್ಲ' ಅಂತ ವಿದ್ಯಾರ್ಥಿನಿಯೋರ್ವಳ ವಿಸ್ಮಯ.


ಹೂಕೋಸಿನ ಸಾಲಿಗೆ ಸೇಬು, ದ್ರಾಕ್ಷಿಗಳು, ಹೂಗಳು, ತರಕಾರಿಗಳು, ಬೇಳೆ ಕಾಳುಗಳು, ಎಣ್ಣೆ.. ಹೀಗೆ ಒಂದೇ ಎರಡೇ.. 'ಹಾಗಿದ್ದರೆ ಬದುಕುವುದು ಹೇಗೆ?', 'ನಾವು ಕುಡಿಯುವ ನೀರೇ ವಿಷವಾದರೆ ಮುಂದಿನ ಗತಿ', 'ಡಾಕ್ಟರ್ ದಿನಕ್ಕೊಂದು ಸೇಬು ತಿನ್ನಿ ಅನ್ತಾರಲ್ಲಾ, ಅದು ಸುಳ್ಳಾ', 'ವಿಷದಿಂದ ಪಾರಾಗುವುದು ಹೇಗೆ'.. ಮುಂತಾದ ಪ್ರಶ್ನೆಗಳು ವಿದ್ಯಾರ್ಥಿಗಳಲ್ಲಿ ಗಿರಕಿ ಹೊಡೆಯಲಾರಂಭಿಸಿತು. 'ನಮ್ಮ ಆಹಾರವನ್ನು ನಾವೇ ಬೆಳೆದುಕೊಳ್ಳುವುದು' ಈಗಿರುವ ಮುಂದಿನ ದಾರಿ. ಸಾಧ್ಯವಾ? ನಂನಮ್ಮ ವಿವೇಚನೆಗೆ ಬಿಟ್ಟ ವಿಚಾರ.


ವಸುಧಾ ಪ್ರತಿಷ್ಠಾನದ ಮುಖ್ಯಸ್ಥ, ಮನೆಯ ಯಜಮಾನರಾದ ಡಾ.ತಾಳ್ತಜೆ ವಸಂತ ಕುಮಾರ್ ಇಂತಹುದೊಂದು ಅರಿವನ್ನು ಬಿತ್ತುವ ಹೂರಣವನ್ನು ಹೇಮಂತ ಹಬ್ಬದಲ್ಲಿ ಆಯೋಜಿಸಿದ್ದು ಆರ್ಥಪೂರ್ಣ. 'ಪರಿಸರ ಹಾಳಾಯಿತು. ಇದನ್ನು ಸರಿ ಮಾಡೋದು ಹೇಗೆ. ವೇದಿಕೆಯ ಭಾಷಣದಿಂದ ಆಗದು. ಮಕ್ಕಳಲ್ಲಿ ಪರಿಸರ ನಾಶದ ಕುರಿತು ಅರಿವು ಬಿತ್ತುವುದೊಂದೇ ದಾರಿ' - ಇಡೀ ಕಾರ್ಯಕ್ರಮದ ಆಶಯವನ್ನು ಕಟ್ಟಿಕೊಟ್ಟರು ಪ್ರೊ: ವೇದವ್ಯಾಸರು.


ಪಂಜಳದ 'ಸುಧಾಮ' ಮನೆಯಂಗಳದಲ್ಲಿ ಜರುಗಿದ ಪ್ರಕೃತಿ ಪಾಠ ಒಂದು ಉತ್ತಮ ಆಂದೋಳನಕ್ಕೆ ನಾಂದಿ. ಪಠ್ಯಗಳಲ್ಲಿ ಸಿಗದ, ನಿತ್ಯ ಬದುಕಿನಲ್ಲಿ ಕಾಣಿಸಿದ, ಅಣುಅಣುವಾಗಿ ನಮ್ಮ ಜೀವವನ್ನು ಹಿಂಡುತ್ತಿರುವ 'ಕಾಣದ ಸತ್ಯಗಳನ್ನು' ವಿದ್ಯಾರ್ಥಿಗಳಿಗೆ ತಿಳಿಹೇಳುವುದು ಕಾಲದ ಆವಶ್ಯಕತೆ.


'ಜೀವಾಯನ' ಎಂಬ ಶೀರ್ಷಿಕೆಯಡಿಯಲ್ಲಿ ಜರುಗಿದ ಪರಿಸರ ಮಾತುಕತೆಯಲ್ಲಿ ವಿವೇಕಾನಂದ ಕಾಲೇಜಿನ ಉಪನ್ಯಾಸಕಿ ಕು: ಮಿರ್ಲಾಂ ಬೇಗಂ ಅವರು ಪಕ್ಷಿಗಳ, ಜೇನ್ನೊಣಗಳ, ಪ್ರಾಣಿಗಳ ಜೀವನ ಕ್ರಮವನ್ನು ಚಿತ್ರ ಸಮೇತ ವಿವರಿಸಿರುವುದು ಮಕ್ಕಳಲ್ಲಿ ಕುತೂಹಲ ಮೂಡಿಸಿತ್ತು.


ತಾಳ್ತಜೆಯವರ ಪತ್ನಿ ಮಣಿಮಾಲಿನಿ ಪ್ರಕೃತಿ ಪ್ರಿಯೆ. ಅವರ ಸ್ಮೃತಿಗಾಗಿ ಅವರ ಮನೆಯಂಗಳದಲ್ಲಿ ನಡೆದ ಈ ಹಬ್ಬವು ಆ ಚೇತನಕ್ಕೆ ಗೌರವ ಸಲ್ಲಿಸಿದಂತಾಗಿದೆ. ಸಂಜೆ ನೆಲ್ಯಾಡಿಯ ಅಬ್ರಹಾಂ ವರ್ಗೀಸರಿಂದ 'ಠಾಗೋರ್ ನೆನಪು', ಹಿರಿಯ ಸಾಹಿತಿ ಕೆ.ಟಿ.ಗಟ್ಟಿ ಮತ್ತು ಹಿರಿಯ ನಾಟಿ ವೈದ್ಯೆ ಪುತ್ತೂರಿನ ಮುತ್ತಮ್ಮ ಅವರಿಗೆ ಸಂಮಾನ. ಹಿರಿಯ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿಯವರ ಅಧ್ಯಕ್ಷತೆ. ಬಳಿಕ ಯಕ್ಷಗಾನ.

1 comments:

PaLa said...

ವಸುಧಾ ಸಂಸ್ಥೆಯ ಕೆಲಸದ ಬಗ್ಗೆ ಕೇಳಿ ನಲಿವಾಯ್ತು...

Post a Comment