ಅಳಿಕೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ. ಪುಸ್ತಕದ ಮಳಿಗೆಗಳು ಭರ್ತಿ. ಎರಡೂ ದಿನಗಳಲ್ಲಿ ಪುಸ್ತಕ ಪ್ರಿಯರಿಗೆ ಸುಗ್ಗಿ. ಅತ್ತ ಸಭಾವೇದಿಕೆಯಲ್ಲಿ ಕನ್ನಡ ಮಂತ್ರ.
ಮತ್ತೊಂದೆಡೆ ವಸ್ತುಪ್ರದರ್ಶನದಲ್ಲಿ ಔಷಧೀಯ ಸಸ್ಯಗಳು, ಪಾರಂಪರಿಕ ವಸ್ತುಗಳು. ಪತ್ರಿಕೆಗಳ ಪ್ರದರ್ಶನ. ಈ ಮಧ್ಯೆ ಅಡುಗೆಗಳಲ್ಲಿ ಬಳಸುವ ಹದಿನೈದಕ್ಕೂ ಮಿಕ್ಕಿ ವಿವಿಧ ಗಡ್ಡೆಗಳನ್ನು ಪ್ಲೇಟ್ನಲ್ಲಿಟ್ಟಿದ್ದರು. ಪ್ರತಿಯೊಂದರಲ್ಲೂ ಅವುಗಳ ನಾಮ ಬರಹ.
ಸಮ್ಮೇಳನಕ್ಕೆ ಆಗಮಿಸಿದ ವಿದ್ಯಾರ್ಥಿಗಳನ್ನು ಗಡ್ಡೆಗಳು ಆಕರ್ಶಿಸಿದ್ದುವು. ಅದರಲ್ಲೂ ಹೆಣ್ಮಕ್ಕಳು 'ಇದು ನಮ್ಮಲ್ಲಿದೆ, ಇದು ಚಿಕ್ಕಪ್ಪನಲ್ಲಿವೆ', 'ಓ. ಇದನ್ನು ನೋಡಿಯೇ ಇಲ್ಲ' - ಎಂಬ ಸಂಭಾಷಣೆ. ಪರಸ್ಪರ ಮಾತುಕತೆ ಮೂಲಕ ಗುರುತು ಹಿಡಿವ ಪ್ರಯತ್ನ.
ಒಂದು ಕಾಲಘಟ್ಟದ ಬದುಕಿನಲ್ಲಿ ಊಟದ ಬಟ್ಟಲಿನಲ್ಲಿ ಗಡ್ಡೆಗಳು ಬಳಸದ ಪಾಕವಿಲ್ಲ. ಈಗಿನ ಟೊಮೆಟೋ ಯುಗದಲ್ಲಿ ಆಲೂಗಡ್ಡೆ ಹೊರತು ಪಡಿಸಿದರೆ ಮಿಕ್ಕೆಲ್ಲಾ ಗಡ್ಡೆಗಳು ಅಜ್ಞಾತ. ಹೊಟೇಲುಗಳಲ್ಲಿ ಆಲೂಗೆಡ್ಡೆ ಖಾದ್ಯಗಳ ಸಾಲು ಸಾಲು ಮೆನುಗಳು ಈಗಲೂ ಜೀವಂತವಿರುವುದರಂದ ಆಲೂ ಗಡ್ಡೆ ಜನರ ಬಾಯಲ್ಲಿ ನಿತ್ಯ ಓಡುತ್ತಿದೆಯಷ್ಟೇ.
ಅಳಿಕೆಯಲ್ಲಿ ಪ್ರದರ್ಶಿಸಲ್ಪಟ್ಟ ಗಡ್ಡೆಗಳು: ಬಿಳಿ ಕೆಸು - ಇದರ ಬಳಕೆ ಅಡುಗೆ ಮನೆಯಲ್ಲಿ ಸಾಂಪ್ರದಾಯಿಕ. ಎಲೆ, ದಂಟು, ಗಡ್ಡೆ - ಹೀಗೆ ಸರ್ವಸ್ವ ಬಳಕೆ. ಚಳ್ಳಿಚೇವು - ಇದರ ದಂಟನ್ನು ಹಸಿಯಾಗಿ ಸಲಾಡ್ನಂತೆ ಬಳಕೆ. ಹೀಗೆ ಪ್ರತೀ ಗಡ್ಡೆಗೆ ಒಂದೊಂದು ಮೆನು.
ನರೆಗೆಡ್ಡೆ, ಬೇರು ಕೆಸು, ಕಾಡುಕೇನೆ, ಬಾರಿಗೆಣಸು, (ದೊಡ್ಡದು) ಸುವರ್ಣಗೆಡ್ಡೆ, ಸಿಹಿಗೆಣಸು, ಕೆಂಪುಕೂವೆ, ತುಪ್ಪೆಗೆಣಸು, ತಗ್ಗೆಣಸು, ಸೂಣಕೆರೆಂಗ್, ಮರಗೆಣಸು, ಕೆಸುವಿನಗೆಡ್ಡೆ, ಸಾಂಬ್ರಾಣಿ ಗೆಡ್ಡೆ.. ಪ್ರದರ್ಶನಕ್ಕೆ ಬಾರದವು ಇನ್ನೆಷ್ಟೋ. ಇವುಗಳಲ್ಲಿ ಕೆಲವು ಹೆಸರುಗಳು ಪ್ರಾದೇಶಿಕವಾಗಿ ಭಿನ್ನವಾಗಿರುವ ಸಾಧ್ಯತೆ ಹೆಚ್ಚು.
ಕೆಸುವಿನಲ್ಲೇ ಎಷ್ಟೊಂದು ವಿಧ. ಮುಂಡಿಕೆಸು, ಬಿಳಿಕೆಸು, ಕಪ್ಪುಕೆಸು, ನೇರಳೆಬಣ್ಣದ ಕೆಸು, ಕಾಡುಕೆಸು, ಮರಕೆಸು.. ಕರಾವಳಿಯಲ್ಲಿ ಹೊಸಕ್ಕಿ ಊಟಕ್ಕೆ ಕರಿ-ನೇರಳೆ ಕೆಸುವಿನ ದಂಟಿನ ಪದಾರ್ಥ ಬೇಕೇ ಬೇಕು. ಮರದ ಮೇಲೆ ಬೆಳೆಯುವುದು ಮರ ಕೆಸು. ಇದರ ಎಲೆಗಳಿಗೆ ಬಹು ಬೇಡಿಕೆ. ಪತ್ರೊಡೆ ಋತುವಿನಲ್ಲಿ ಮಾರುಕಟ್ಟೆಯಲ್ಲಿ ಒಂದು ಎಲೆಗೆ ಮೂರರಿಂದ ಐದು ರೂಪಾಯಿ.
ಸುವರ್ಣಗೆಡ್ಡೆಗೆ ಆಂಗ್ಲ ಭಾಷೆಯಲ್ಲಿ ಎಲಿಫೆಂಟ್ ಫೂಟ್. ಗಡ್ಡೆ ಉರುಟು. ಹೊರಸಿಪ್ಪೆ ಕಂದುಬಣ್ಣ. ಕೆಂಪು-ಕಿತ್ತಳೆ ವರ್ಣದ ತಿರುಳು. ಕೈಂತಜೆ ವಿಷ್ಣು ಭಟ್ಟರು ತಮ್ಮ 'ಕೃಷಿ ಲೋಕ ಪ್ರವೇಶ ಪುಸ್ತಕ'ದಲ್ಲಿ ಸುವರ್ಣಗಡ್ಡೆಯ ಬಗ್ಗೆ ಉಲ್ಲೇಖಿಸುತ್ತಾರೆ. 'ಸುವರ್ಣಗಡ್ಡೆಯಲ್ಲಿ ಬಿಳಿ-ಅರಸಿನ ತಿರುಳಿನದ್ದಿದೆ. ಇದು ಉತ್ತಮ. ಹೆಚ್ಚು ರುಚಿ. ಬೇಗ ಬೇಯುತ್ತದೆ.'
ಸಿಹಿಗೆಣಸು - ಅಂದಾಗ ಬಾಲ್ಯದಲ್ಲಿ ಶಾಲೆಬಿಟ್ಟು ಮನೆಗೆ ಬಂದಾಗ ಅಮ್ಮ ಸಿಹಿಗೆಣಸನ್ನು ಬೇಯಿಸಿ ತಿನ್ನಲು ಕೊಡುತ್ತಿದ್ದ ದಿನಗಳು ನೆನಪಾಗುತ್ತವೆ. ಅಡುಗೆಗೆ ಎಲ್ಲರೂ ಇಷ್ಟ ಪಡುವ ಗಡ್ಡೆ. ಸಲಾಡ್ನಂತೆ ಕುರುಕುರು ತಿನ್ನಲು ರುಚಿ. ಗಡ್ಡೆಗಳನ್ನು ಕೆಂಡದಲ್ಲಿ ಸುಟ್ಟು ತಿನ್ನುತ್ತಿದ್ದಂತೆ 'ಮತ್ತೂಮತ್ತೂ' ತಿನ್ನಿಸುವ ಸ್ವಾದ-ರುಚಿ ಅದಕ್ಕಿದೆ. ಅಕ್ಕಿಗೆ ತತ್ವಾರವಿದ್ದಾಗ ಹಲಸು ಅಣ್ಣನಾಗಿ ಹೇಗೆ ಬದುಕನ್ನು ಆಧರಿಸಿತ್ತೋ, ತಮ್ಮನಾಗಿ ಗೆಣಸು ಹೊಟ್ಟೆಗಿಳಿದು ಹಸಿವನ್ನು ಅಡಗಿಸುತ್ತಿತ್ತು.
ಮರಗೆಣಸಿಗೆ 'ಕಪ್ಪ' ಎಂಬ ಹೆಸರಿದೆ. ಈಚೆಗೆ ಅಪರೂಪವಾಗುತ್ತಿರುವ ಗಡ್ಡೆ ತರಕಾರಿ. ಇದನ್ನು ಬೇಯಿಸಿ ಅಡುಗೆಯಲ್ಲಿ ಬಳಕೆ. ಕಹಿ ರುಚಿ. ಜಾನುವಾರುಗಳ ಮೇವಿಗೆ ಒಳಸುರಿ. ಮಲೆನಾಡಿನ ಇಳಿಜಾರು ಪ್ರದೇಶದ ಮೇಲ್ಮಣ್ಣು ಮರಗೆಣಸು ಕೃಷಿಗೆ ಉತ್ತಮ. ಯಾವುದೇ ಆರೈಕೆ ಬೇಡುವುದಿಲ್ಲ.
ಗಡ್ಡೆಗಳೆಲ್ಲಾ ಬಹುತೇಕ ಚಳಿ ಸಮಯದ ತರಕಾರಿ. ನವೆಂಬರ್ ನಿಂದ ಜನವರಿ ತನಕ. ಆಲೂ, ಸುವರ್ಣಗಡ್ಡೆ ಬಿಟ್ಟರೆ ಮಿಕ್ಕ ಗಡ್ಡೆಗಳು ಮಾರುಕಟ್ಟೆಯಲ್ಲಿ ಅಪರೂಪ. ಕೆಲವೊಂದು ಮರೆತೇ ಹೋಗಿದೆ. ಉಪಯೋಗವೂ ಕಡಿಮೆ. ಮಳೆಗಾಲ ಕಳೆದು ಬೇಸಿಗೆ ತರಕಾರಿ ಆರಂಭವಾಗುವ ಮೊದಲು ಗಡ್ಡೆ ತರಕಾರಿಗಳ ಬಳಕೆ ಕುರಿತು ಹಿರಿಯರು ಜ್ಞಾಪಿಸಿಕೊಳ್ಳುತ್ತಾರೆ.
ಮರೆತುಹೋಗುತ್ತಿರುವ ಗೆಡ್ಡೆ ತರಕಾರಿಗಳನ್ನು ಹುಡುಕಿ, ಸಂಗ್ರಹಿಸಿ ಸಾಹಿತ್ಯ ಸಮ್ಮೇಳನದಲ್ಲಿ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಿದವರು ಕೃಷಿಕ ಎಂ.ವೆಂಕಟಕೃಷ್ಣ ಶರ್ಮ. ಇದರ ಜತೆಗೆ ಕುಕ್ಕುಶುಂಠಿ, ಕಲ್ಲುಶುಂಠಿ, ಸಿಂಗಾಪುರ ಅಡಿಕೆ, ಕೊಕ್ಕೊ, ಜಾಯಿಕಾಯಿ, ಲವಂಗ, ಕಾನಕಲ್ಲಟೆ, ಕಸ್ತೂರಿಬೆಂಡೆ, ಇಪ್ಪಿಲಿ, ಬೀಂಬುಳಿ, ಖಾರಮೆಣಸು, ಗೊಂಚಲುಹೀರೆ, ಸಿಹಿಬದನೆ, ಬಹುವಾರ್ಶಿಕ ಬದನೆ, ನಿತ್ಯ ಬದನೆ, ಗೊಂಚಲುಬದನೆ..ಗಳ ಸಂಗ್ರಹ.
ಮಕ್ಕಳೊಂದಿಗೆ ಹಿರಿಯರೂ ಪ್ರದರ್ಶನಕ್ಕೆ ಬಂದಿದ್ದರು. 'ಗೊಂಚಲು ಬದನೆಯ ಬೀಜ ಸಿಗುತ್ತಾ?', 'ತುಪ್ಪೆಗೆಣಸಿನ ಗಡ್ಡೆಯೊಂದು ಬೇಕಿತ್ತು?', ಕಸ್ತೂರಿ ಬೆಂಡೆಯ ಬಳಕೆ ಹೇಗೆ?'.. ಹೀಗೆ ವಿವಿಧ ಪ್ರಶ್ನೆಗಳು ರಾಚಿರುವುದು, ಪ್ರದರ್ಶನ ಪರಿಣಾಮಕಾರಿ ಎಂಬುದರ ದ್ಯೋತಕ.
0 comments:
Post a Comment