Wednesday, October 19, 2011

ಚಿಣ್ಣರ ಓದಿಗೆ ಸೂರ್ಯಂಗೆ ಲಾಳಿಕೆ

'ಮಕ್ಕಳ ವಿದ್ಯಾಭ್ಯಾಸ ಸುಧಾರಿಸಿದೆ. ರಾತ್ರಿ ಹತ್ತು ಗಂಟೆಯ ತನಕವೂ ಅಭ್ಯಾಸ ಮಾಡಬಹುದು. ಮೊದಲೆಲ್ಲಾ ಸೂರ್ಯಾಸ್ತಕ್ಕಾಗುವಾಗ ಹೋಂವರ್ಕ್ ಮುಗಿಸಬೇಕು. ಸೀಮೆಎಣ್ಣೆ ಬುಡ್ಡಿ ಉರಿಸೋಣವೆಂದರೆ ಎಣ್ಣೆನೂ ಇಲ್ಲ. ಮಕ್ಕಳು ಓದುತ್ತಿದ್ದಾಗ ಕಣ್ಣು ತೂಗಿ ಬುಡ್ಡಿ ಮೇಲೆ ಬೀಳದಂತೆ ಕಾಯುವ ಕೆಲಸ ಕೂಡಾ ಇಲ್ಲ' - ಧಾರವಾಡದ ದೇವಗರಿ ಹಳ್ಳಿಯಲ್ಲಿ ಸುತ್ತಾಡುತ್ತಿದ್ದಾಗ ಕಲ್ಮೇಶ ಕಬ್ಬೂರ ಅಭಿಮಾನದಿಂದ ಸೋಲಾರ್ ಕುರಿತು ಹೇಳಿದ ಮಾತು, ಈಚೆಗೆ ಬೆಳ್ತಂಗಡಿಯ ಸವಣಾಲಿಗೆ ಹೋದಾಗ ನೆನಪಾಯಿತು.

ಸವಣಾಲಿನ ನೇತಾಜಿ ಸುಭಾಸ್ಚಂದ್ರ ಭೋಸ್ ಸರಕಾರಿ ಸಂಯುಕ್ತ ಪ್ರೌಢ ಶಾಲೆಯ ಒಂಭತ್ತರ ವಿದ್ಯಾರ್ಥಿನಿಯರಾದ ಪ್ರಜ್ಞಾ ಮತ್ತು ಪಲ್ಲವಿಯ ಅಭಿಪ್ರಾಯ ಮತ್ತು ಕಲ್ಮೇಶರ ಹೇಳಿಕೆ ಹೇಗೆ ಹೊಂದುತ್ತದೆ ನೋಡಿ - 'ಬುಡ್ಡಿಗೆ ಸೀಮೆಎಣ್ಣೆ ಸಿಗದೆ ಓದು ತ್ರಾಸವಾಗುತ್ತಿತ್ತು. ಸೋಲಾರ್ ಲ್ಯಾಂಪ್ ಮನೆಯಲ್ಲಿ ಉರಿದ ಮೇಲೆ ಓದಿನಲ್ಲೂ, ಅಂಕದಲ್ಲೂ ಅಭಿವೃದ್ಧಿಯಾಗಿದೆ'.

ಅಭಿವೃದ್ಧಿಯ ಹರಿಕಾರರು ನಗರದ ಮಧ್ಯೆ ನಿಂತು ಹಳ್ಳಿಗಳ ವಿಶ್ಲೇಷಣೆ ಮಾಡುತ್ತಾರೆ. ರೂಪುರೇಷೆಗಳನ್ನು ಸಿದ್ಧಪಡಿಸುತ್ತಾರೆ. ಕಂಪ್ಯೂಟರ್ ಮೇಲೆ ಯೋಜನೆಗಳ ನಕ್ಷೆಗಳನ್ನು ಬಿಡಿಸುತ್ತಾರೆ. ಇಂತಹವರು ಒಮ್ಮೆ ಹಳ್ಳಿಗಳಿಗೆ ಪ್ರವಾಸ ಹೋಗಿ. ನಾಲ್ಕು ದಿನ ತಂಗಿ. ಆಗ ತಿಳಿಯುತ್ತದೆ - ಒಂದೇ ಕೋಣೆಯಲ್ಲಿ ಎಲ್ಲವನ್ನೂ ನಿಭಾಯಿಸುವ ಕುಟುಂಬಗಳು, ಚಿಮಿಣಿ ದೀಪ ಇಲ್ಲದೆ ಸೂರ್ಯಾಸ್ತದ ಮೊದಲೇ ದೈನಂದಿನ ಬದುಕನ್ನು ಮುಗಿಸುವ ಕುಟುಂಬಗಳ ಕಾಯ-ಕಷ್ಟ. ಬೀಡಿಯ ಸುರುಳಿಯಲ್ಲಿ ಬದುಕನ್ನು ರೂಪಿಸುವ ಕುಟುಂಬದ ಕೂಗು ಬೇಲಿಯಾಚೆ ಕೇಳಿಸದು.

ಇಂತಹ ಕುಟುಂಬದ ಬದುಕಿನಲ್ಲಿ ವಿಷಾದವಿದೆ. 'ತಮ್ಮ ಮಕ್ಕಳು ವಿದ್ಯಾವಂತರಾಗಬೇಕು' ಎಂಬ ಭವಿಷ್ಯದ ದಿನಗಳ ಲೆಕ್ಕಣಿಕೆಯಲ್ಲಿ ಸಂತೋಷವೂ ಇದೆ. ಪ್ರಜ್ಞಾಳ ಅಮ್ಮ, 'ಅವಳು ಚೆನ್ನಾಗಿ ಓದುತ್ತಾಳೆ' ಎನ್ನುವ ವಿಶ್ವಾಸದಲ್ಲಿ ಬದುಕಿನ ನಾಳೆಗಳಿವೆ.

ಶಿಕ್ಷಣವೇ ಬೆಳಕು, ಶಿಕ್ಷಣಕ್ಕಾಗಿ ಬೆಳಕು

ವಿದ್ಯುತ್ ಸಂಪರ್ಕ ಇಲ್ಲದ, ನಿಯಮಿತವಾಗಿ ಪವರ್ ಕಟ್ನಿಂದ ಕತ್ತಲೆಯಾದ ಹಳ್ಳಿಗಳ ಮಕ್ಕಳ ಶೈಕ್ಷಣಿಕ ಬದುಕನ್ನು ಬೆಳಗಿಸುವುದು ಸೆಲ್ಕೋ ಯೋಜನೆಗಳ ಒಂದೆಸಳು. ಕನ್ನಾಡಿನಾದ್ಯಂತ ನಲವತ್ತು ಶಾಲೆಗಳ ಎರಡು ಸಾವಿರ ವಿದ್ಯಾರ್ಥಿಗಳಿಗೆ ಆಸರೆಯಾಗುವುದು ಗುರಿ. ಈಗಲೇ ಅರ್ಧದಷ್ಟು ಸಫಲ. 'ಶಿಕ್ಷಣಕ್ಕಾಗಿ ಬೆಳಕು' ಯೋಜನೆ ರಾಮನ್ ಮ್ಯಾಗ್ಸೆಸ್ಸೆ ಪ್ರಶಸ್ತಿ ಪುರಸ್ಕೃತ ಹರೀಶ್ ಹಂದೆಯವರ ಮಿದುಳ ಮರಿ.

ಕೊಡಗಿನ ಕರಿಕೆಯಲ್ಲಿ ಪ್ರಾಯೋಗಿಕವಾಗಿ ಆರಂಭ. ಕಳೆದ ನವೆಂಬರ್ನಲ್ಲಿ ಆರಂಭವಾದ ಸವಣಾಲು ಶಾಲೆಯ ಯೂನಿಟ್ ಮಾರ್ಚ್ ಗೆ ಮುಕ್ತಾಯವಾಗಬೇಕಿತ್ತು. ಹೆತ್ತವರ, ಮಕ್ಕಳ ಕೋರಿಕೆಯಿಂದಾಗಿ ಈ 'ಡೆಮೋ ಯೂನಿಟ್' ಈಗಲೂ ಚಾಲೂ. ಪ್ರಸ್ತುತ ಅರಂತೋಡು, ನೆರಿಯಾ, ಉಡುಪಿ ಜಿಲ್ಲೆ, ಶಿವಮೊಗ್ಗ, ಬಿಜಾಪುರ, ಗುಲ್ಬರ್ಗಾ..ಗಳ ಆಯ್ದ ವಿದ್ಯಾರರ್ಥಿಗಳ ರಾತ್ರಿ ಓದಿನಲ್ಲಿ ಈಗ ಕತ್ತಲೆಯಿಲ್ಲ.

ಶಾಲೆಗಳಲ್ಲಿ ಪವರ್ ಚಾರ್ಜ್ ಯೂನಿಟ್ ಸ್ಥಾಪನೆ. ಹೆಚ್ಚು ಬ್ಯಾಕ್ಅಪ್ಪಿನ ಬಾಟರಿ. ಮೂರು ಪ್ಯಾನೆಲ್ಗಳು. ಎಲ್.ಇ.ಡಿ.ಬಲ್ಬ್ ಇರುವ, ಕಳಚಿ ಜೋಡಿಸಬಹುದಾದ ಬ್ಯಾಟರಿ ಹೊಂದಿರುವ ಲ್ಯಾಂಪ್. ಸುಮಾರು ಒಂದುಸಾವಿರದ ಆರುನೂರು ರೂಪಾಯಿ ಮೌಲ್ಯದ ಇವಿಷ್ಟನ್ನು ವಿದ್ಯಾರ್ಥಿಗೆ ನೀಡಲಾಗುತ್ತದೆ. ಯೂನಿಟ್ನಲ್ಲಿ ವಿದ್ಯಾರ್ಥಿ ದಿನ ಬಿಟ್ಟು ದಿನ ಬ್ಯಾಟರಿಯನ್ನು ಚಾರ್ಜ್ ಮಾಡುವ ವ್ಯವಸ್ಥೆ. ಚಾರ್ಜರಿಗೆ ಬ್ಯಾಟರಿಯನ್ನು ಮಾತ್ರ ತಂದರಾಯಿತು.

ಒಮ್ಮೆ ಚಾರ್ಜ್ ಮಾಡಿದರೆ ಎಂಟು ಗಂಟೆ ಲ್ಯಾಂಪ್ ಉರಿಯಬಲ್ಲುದು. ಕೆಲವೊಮ್ಮೆ ವಯರ್ ಸರಿಯಾಗಿ ಸಂಪರ್ಕವಾಗದೆ ಚಾರ್ಜ್ ಆಗದಿರುವುದೂ ಇದೆ. 'ಲ್ಯಾಂಪ್ ಸರಿಯಿಲ್ಲ' ಎಂದು ಮಕ್ಕಳ ಹೆತ್ತವರು ತಕ್ಷಣದ ತೀರ್ಮಾನಕ್ಕೆ ಬರುತ್ತಾರೆ. 'ಇಂತಹ ಸಂದರ್ಭಗಳಲ್ಲಿ ಅಧ್ಯಾಪಕರು ಸಹಕರಿಸಿದರೆ ಸಮಸ್ಯೆ ಪರಿಹರಿಸಬಹುದು' ಎನ್ನುತ್ತಾರೆ ಘಟಕ ನಿರ್ವಹಣೆ ಮಾಡುವ ಸೆಲ್ಕೋದ ಸಂದೀಪ್.

ಒಂದು ಯೂನಿಟ್ ಸ್ಥಾಪನೆಗೆ ಒಂದರಿಂದ ಒಂದೂವರೆ ಲಕ್ಷ ರೂಪಾಯಿ ವೆಚ್ಚ. ಬಹುತೇಕ ದಾನಿಗಳಿಂದ ಮೊತ್ತವನ್ನು ಭರಿಸಲಾಗುತ್ತದೆ. ವಿದ್ಯಾರ್ಥಿಗೆ ನೀಡುವ ಲ್ಯಾಂಪ್, ಚಾರ್ಜರ್ಗಳ ನಿರ್ವಹಣೆಗೆ ವರುಷಕ್ಕೆ ನೂರ ಐವತ್ತು ರೂಪಾಯಿ ಶುಲ್ಕ. ಉಚಿತ ಅಂದರೆ ಸಸಾರ ಅಲ್ವಾ! ಶುಲ್ಕ ಕೊಟ್ಟಾಗ 'ಇದು ನಮ್ಮದು' ಅಂತ ಭಾವ ಬಂದುಬಿಡುತ್ತದೆ. ಸಕಾರಣವಾಗಿ ಲ್ಯಾಂಪ್ ಹಾಳಾದರೆ ಹೊಸತನ್ನು ನೀಡುತ್ತಾರೆ.

'ಸೀಮೆಎಣ್ಣೆ, ಕ್ಯಾಂಡಲ್ಗಳಿಗೆ ವೆಚ್ಚ ಮಾಡುವುದಕ್ಕಿಂತ ವರುಷಕ್ಕೆ ಇಷ್ಟು ಸಣ್ಣ ಮೊತ್ತ ಹೊರೆಯಾಗದು. ರಜಾ ದಿನಗಳನ್ನು ಹೊರತು ಪಡಿಸಿದರೆ ದಿನಕ್ಕೆ ಐವತ್ತು ಪೈಸೆ ಕೂಡಾ ಬೀಳದು. ಮಕ್ಕಳ ಪಾಲಕರು ಇದಕ್ಕೆ ತಕರಾರು ಮಾಡದಿದ್ದರೂ, ತಕರಾರು ಮಾಡುವವರೇ ಒಂದಷ್ಟು ಮಂದಿ ಸಮಾಜದಲ್ಲಿ ಇದ್ದಾರಲ್ಲ..' ಜತೆಗಿದ್ದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನಿರ್ದೇಶಕ ಜಯಶಂಕರ ಶರ್ಮ ದನಿಗೂಡಿಸಿದರು.

'ಸವಣಾಲು ಶಾಲೆಯದು ಪ್ರಾತ್ಯಕ್ಷಿಕಾ ಘಟಕ. ಹಾಗಾಗಿ ವಿದ್ಯಾರ್ಥಿಗಳಿಗೆ ಶುಲ್ಕ ವಿಧಿಸುತ್ತಿಲ್ಲ' ಎನ್ನುತ್ತಾರೆ ಸೆಲ್ಕೋ ಪೌಂಡೇಶನ್ನಿನ ಆನಂದ ನಾರಾಯಣ. ಲ್ಯಾಂಪನ್ನು ಬಳಸುವ ವಿದ್ಯಾರ್ಥಿಗಳಾದ ಶಿವರಾಂ, ತಸ್ರೀಫಾ, ಪಲ್ಲವಿ, ಪ್ರಜ್ಞಾ ಇವರನ್ನೆಲ್ಲಾ ಮಾತನಾಡಿಸಿದಾಗ 'ಈ ವರುಷ ನಮಗೆ ಮಾರ್ಕ್ ಹೆಚ್ಚು ಸಾರ್' ಎನ್ನುವಾಗ ಅವರ ಮುಖವರಳುತ್ತದೆ.

ಬಯಲು ಸೀಮೆಯಲ್ಲಿ ಸೋಲಾರ್ ಘಟಕಕ್ಕೆ ಉತ್ತಮ ಪ್ರತಿಕ್ರಿಯೆ. ವಿದ್ಯುತ್ತಿನಿಂದ ದೂರವಾದ ಹಳ್ಳಿಗಳೇ ಅಧಿಕ. ದೂರದೂರ ಹಂಚಿಹೋಗಿರುವ ಮನೆಗಳಿಂದಾಗಿ ನಿರ್ವಹಣೆ ತ್ರಾಸ. ಕೆಲವೆಡೆ ದುರ್ಬಳಕೆಯೂ ಆಗುತ್ತಿದೆ. ಲ್ಯಾಂಪ್ ಮಕ್ಕಳಿಗೆ ಸಿಗುವುದೇ ಇಲ್ಲ! ಪಾಲಕರು ಶೌಚಕ್ಕೆ, ಬೆಳಿಗ್ಗೆ ದನದ ಹಾಲು ಹಿಂಡಲು, ಅಡುಗೆ ಮಾಡಲು ಬಳಸುವವರೂ ಇದ್ದಾರೆ!

ಹಳ್ಳಿಗಳಲ್ಲಿದೆ, ಅಭಿವೃದ್ಧಿಯ 'ಬೀಜ'

ಅಭಿವೃದ್ಧಿ ಎಂದಾಕ್ಷಣ ಜೆಸಿಬಿ ಯಂತ್ರಗಳು ಕಣ್ಣ ಮುಂದೆ ಬರುತ್ತವೆ. ಜಲ್ಲಿ, ಸರಳುಗಳು, ಸಿಮೆಂಟ್.. ಇವೆಲ್ಲಾ ಅಭಿವೃದ್ಧಿಯ ಸರಕುಗಳು ಎಂದು ನಂಬುವ ದಿನಗಳು. ನಿಜಕ್ಕೂ ಗ್ರಾಮೀಣ ಭಾರತದ ಬದುಕಿನ ಕತ್ತಲೆಯನ್ನು ದೂರಮಾಡುವ 'ಶೈಕ್ಷಣಿಕ ಆಭಿವೃದ್ಧಿ'ಯತ್ತ ಲಕ್ಷ್ಯವಿಟ್ಟ ಸೆಲ್ಕೋ ಅಭಿನಂದನಾರ್ಹ ಅಂತ ಕಾಣುವುದಿಲ್ವೇ? ಎರಡು ಸಾವಿರ ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಕತ್ತಲನ್ನು ದೂರಮಾಡುವಂತಹ ಯೋಜನೆಗಳಲ್ಲೇ ಗ್ರಾಮೀಣ ಅಭಿವೃದ್ಧಿಯ ಬೀಜವಿದೆ.

ಸೀಮೆಎಣ್ಣೆ ದೀಪದ ಹೊಗೆಯನ್ನು ನಿತ್ಯ ನುಂಗುವ ಬೀದಿ ವ್ಯಾಪಾರಿಗಳಿಗೆ ಸೂರ್ಯನ ಬೆಳಕನ್ನು ಹಿಡಿದಿಟ್ಟು ಸೆಲ್ಕೋ ನೀಡುತ್ತಿದೆ. ಊರಲ್ಲೊಂದು ಯೂನಿಟ್. ಗಾಡಿ ವ್ಯಾಪಾರಸ್ಥರಿಗೆ ಲ್ಯಾಂಪ್. ಯೂನಿಟನ್ನು ನಿರ್ವಹಿಸುವ ವ್ಯಕ್ತಿ ಬ್ಯಾಟರಿಯನ್ನು ಚಾರ್ಜರ್ ಮಾಡಿ ಸಂಜೆ ವ್ಯಾಪಾರಸ್ಥರಿಗೆ ತಲಪಿಸಿದರೆ ಇಂತಿಷ್ಟು ಶುಲ್ಕ. ಇದರಿಂದಾಗಿ ಒಬ್ಬ ವ್ಯಕ್ತಿಗೆ ಉದ್ಯೋಗವೂ ಆಯಿತು, ಅಷ್ಟೂ ಬೀದಿ ವ್ಯಾಪಾರಸ್ಥರಿಗೆ ಬೆಳಕೂ ಆಯಿತು. ಜತೆಗೆ ಆರೋಗ್ಯವೂ ಕೂಡಾ. 'ಈಗಾಗಲೇ ಹಾಸನದಲ್ಲಿ ನೂರ ಇಪ್ಪತ್ತು ಮಂದಿ, ಕುಂದಾಪುರದಲ್ಲಿ ಎಪ್ಪತ್ತು, ಧಾರವಾಡದಲ್ಲಿ ಮೂವತ್ತು ಮಂದಿ ಬೀದಿ ವ್ಯಾಪಾರಸ್ಥರು ಸೀಮೆಎಣ್ಣೆ ಬುಡ್ಡಿ ಇಡದೆ ವರ್ಷಗಳೇ ಕಳೆಯಿತು' ಎನ್ನುತ್ತಾರೆ ಸಂದೀಪ್.

ಗ್ರಾಮೀಣ ಅಭಿವೃದ್ಧಿಯ ಕ್ರಾಂತಿಕಾರಿ ಹೆಜ್ಜೆಯಿಟ್ಟ ಕಾರಣದಿಂದಲೇ ಸೆಲ್ಕೋದ ಹರೀಶ್ ಹಂದೆಯವರಿಗೆ ಪ್ರಶಸ್ತಿ ಅರಸಿ ಬಂದಿದೆ. ಗ್ರಾಮೀಣ ಪ್ರದೇಶದವರಾದ ಅವರಿಗೆ ಗ್ರಾಮೀಣ ಭಾರತದ ಬದುಕಿನ ಸ್ಪಷ್ಟ ಚಿತ್ರಣವಿದೆ. ಹದಿನಾರು ವರುಷದ ಹಿಂದೆ ಶುರುವಾದ ಸೆಲ್ಕೋ ಆರಂಭದಲ್ಲಿ ಒಂದು ಸಾವಿರ ಮನೆಗಳಿಗೆ ಸೌರ ವಿದ್ಯುತ್ ಘಟಕವನ್ನು ಅಳವಡಿಸಿದ್ದರು. ಪ್ರಕೃತ ಕರ್ನಾಟಕ, ಕೇರಳ, ಗುಜರಾತ್.. ರಾಜ್ಯಗಳಲ್ಲಿ ಒಂದೂಕಾಲು ಲಕ್ಷ ಮನೆಗಳನ್ನು, ಮನಗಳನ್ನು ಸೂರ್ಯನ ಬೆಳಕು ಬೆಳಗಿಸುತ್ತದೆ.

ಸೆಲ್ಕೋದ 'ಕ್ರಿಯಾತ್ಮಕ ಸಂಶೋಧನಾ ವಿಭಾಗ'ವು ಹಳ್ಳಿಗಳತ್ತ ಮುಖ ಮಾಡಿದೆ. ಪರಿಣಾಮವಾಗಿ ಸೌರ ಶಕ್ತಿಯಿಂದ ಶುದ್ಧೀಕರಿಸಿದ ಕುಡಿನೀರು, ಡ್ರೈಯರ್, ಸುಧಾರಿತ ಅಡುಗೆ ಒಲೆ, ಗೃಹ ಬಳಕೆಯ ಉತ್ಪನ್ನಗಳ ಬಳಕೆ. 'ನಾನು ಸಂಸ್ಥೆ ಕಟ್ಟಿರುವುದು ಹಣ ಮಾಡಿ ಶ್ರೀಮಂತನಾಗುವ ಉದ್ದೇಶದಲ್ಲಲ್ಲ. ಹಣ ಮಾಡಲು ಬೇಕಾದಷ್ಟು ದಾರಿಗಳಿಲ್ವಾ. ನೈಸರ್ಗಿಕ ಬೆಳಕನ್ನು ಬಳಸಿ ಬದುಕಿನ ಕತ್ತಲೆಯಿಂದ ಬಡವರನ್ನು ಹೊರತರುವುದೇ ನನ್ನ ಉದ್ದೇಶ' ಅಂತಾರಾಷ್ಟ್ರೀಯ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದ ಹರೀಶ್ ಹಂದೆಯವರ ಮನದ ಮಾತು.

'ಕೋಟಿಗಳಲ್ಲಿ ಬದುಕನ್ನು ಅಳೆಯುವ' ಕಾಲಮಾನದ ಪ್ರಸ್ತುತ ಕಾಲಘಟ್ಟದಲ್ಲಿ ಹಂದೆಯವರ ಮಾತು ಕ್ಲೀಷೆಯಾಗಿ ಕಂಡರೆ ಅದಕ್ಕೆ ಅವರ ಮಾತು ಕಾರಣವಲ್ಲ, ಗ್ರಾಮೀಣ ಭಾರತವನ್ನು ಕಾಣುವ, ಓದುವ ನಮ್ಮ ಬೌದ್ಧಿಕ ದಾರಿದ್ರ್ಯವೇ ಕಾರಣವಾಗಬಹುದು.

0 comments:

Post a Comment