Tuesday, October 4, 2011

ನವರಾತ್ರಿಯ 'ಸುಂದರ'ನ ವೇಷ

ಸಂಜೆ ಆರರ ಸಮಯ. ಕಚೇರಿಯಲ್ಲಿದ್ದೆ. ಅಸಹ್ಯ ಉಡುಪಿನ 'ಪುರುಷ-ಪ್ರಕೃತಿ' ವೇಷಗಳ ಆಗಮನ. ಆಶ್ಲೀಲವಾದ ಮಾತುಗಳು. ಕಣ್ಣು ಮುಚ್ಚಿಕೊಳ್ಳುವ ವರ್ತನೆಗಳು. ವಾಕರಿಕೆ ತರುವ ಭಂಗಿಗಳು. ಐದು ರೂಪಾಯಿ ಕೈಗೆ ಕುಕ್ಕಿದೆ. ಟಾ ಟಾ ಮಾಡಿಕ್ಕೊಂಡು ಹೊರಟು ಹೋದುವು. ಇದು ನವರಾತ್ರಿ ವೇಷಗಳ ಸುಲಿಗೆಯ ಒಂದು ರೂಪ.

'ನಿಮ್ಮ ಪುಣ್ಯ ಮಾರಾಯ್ರೆ. ಆ ವೇಷಗಳು ಮೈಮೇಲೆ ಬಿದ್ದು ಕಿಸೆಗೆ ಕೈಹಾಕಿ ದೋಚುತ್ತವೆ' ಎಂದು ನೆರೆಯವರು ಅಂದಾಗ 'ಆ ಪ್ರಾರಬ್ಧ ನನಗಾಗಲಿಲ್ಲ, ಬದುಕಿದೆ' ಎಂದು ಸಮಾಧಾನ ಪಟ್ಟುಕೊಂಡೆ. ನವರಾತ್ರಿಯಲ್ಲಿ ಪ್ರತ್ಯಕ್ಷವಾಗುವ 'ದೋಚುವ ಪ್ರವೃತ್ತಿಯ ವೇಷಗಳಿಗೆ ಕಡಿವಾಣ ಹಾಕುವವರಿಲ್ಲವೇ' ಎಂಬ ಮಾಮೂಲಿ 'ಒಣಭಾಷೆ'ಯಲ್ಲಿ ಪತ್ರಿಕೆಗಳ 'ಸಂಪಾದಕರಿಗೆ ಪತ್ರ' ವಿಭಾಗಕ್ಕೆ ಬರೆಯಬಹುದಿತ್ತು. ಪ್ರಯೋಜನ?

ಈ ರೀತಿಯ ವೇಷಗಳ ಉದ್ದೇಶ ಹೊಟ್ಟೆಪಾಡು. ಸಮಯ ಕೊಲ್ಲುವ ಪ್ರಕ್ರಿಯೆ. ದೇವ-ದೇವತೆಯರ ವೇಷ ಹಾಕಿ ಅಸಹ್ಯ ಹುಟ್ಟಿಸುವ ವರ್ತನೆಗಳು ಎಷ್ಟು ಬೇಕು? ರಾಮ, ಕೃಷ್ಣ ವೇಷತೊಟ್ಟು ರಾಜಾರೋಷವಾಗಿ 'ಬೀಡಿ ಸೇದಿ ನಿರುಮ್ಮಳ'ವಾಗಿರುವವರು ಎಷ್ಟು ಬೇಕು? ಪುತ್ತೂರು ಪೇಟೆಯಲ್ಲಿ ಮೂರ್ನಾಲ್ಕು ದಿನಗಳಿಂದ ಮಹಿಷಾಸುರ, ಚಂಡ ಮುಂಡರ ಪ್ರವೇಶವಾಗಿದೆ! ಹುಲಿ, ಸಿಂಹ, ಕರಡಿಗಳು ಆರ್ಭಟಿಸುತ್ತಿವೆ! ಅವುಗಳಲ್ಲಿ ಕೆಲವು ಶಾಂತ, ಕೆಲವು ಘೋರ. ಇನ್ನೂ ಕೆಲವು ಭೀಭತ್ಸ!

ಇರಲಿ, ನವರಾತ್ರಿಯ ವೇಷ ಅಂದಾಗ ನನ್ನ ಹುಟ್ಟೂರಿನ ಸಮಾನ ಪ್ರಾಯದ ಸುಂದರ ನೆನಪಾಗುತ್ತಾನೆ. ನಾಲ್ಕನೇ ತರಗತಿಯ ತನಕ ಒಂದೇ ಅಧ್ಯಾಪಕರಲ್ಲಿ ಓದಿದವರು. ನಂತರ ಅವನು ಯಾಕೋ ಶಾಲೆಗೆ ಕೊಕ್. ಕೂಲಿ ಮಾಡಿ ಜೀವನ. ಅವನ ತಂದೆ ಮಾಂಕು. ನಮ್ಮಲ್ಲಿಗೆ ಆತ್ಮೀಯ. ಸೀಸನ್ನಿನಲ್ಲಿ ಕಾಡುಹಣ್ಣುಗಳನ್ನು ಎಲೆಯಲ್ಲಿ ಕಟ್ಟಿ ತಂದುಕೊಡುವಷ್ಟು, ಜೇನು ತುಪ್ಪವನ್ನು ಎಲೆಯ ದೊನ್ನೆಯಲ್ಲಿ ಹಿಡಿದು ತರುವಷ್ಟು ಆತ್ಮೀಯ.

ಮಾಂಕು ಮನೆಯಿಂದ ಹೊರಟರೆ ಸಾಕು, ಅವರನ್ನು ಕಾದು ಕುಳಿತುಕೊಳ್ಳುವ ಮಕ್ಕಳು ಅನೇಕ. ತೆಂಗಿನ ಹಸಿ ಮಡಲಿನಿಂದ ಗಾಳಿಪಟ, ಗಿಳಿಗಳನ್ನು ಸ್ಥಳದಲ್ಲೇ ತಯಾರು ಮಾಡಿ, ಡೆಮೋ ಕೊಟ್ಟು ಮಕ್ಕಳಿಗೆ ಫ್ರೀಯಾಗಿ ಹಂಚುತ್ತಿದ್ದರು. ದೊಡ್ಡ ಮರದಲ್ಲಿದ್ದ ಹಕ್ಕಿಗಳನ್ನೋ, ಹಣ್ಣನ್ನೋ ಹೊಡೆದುರುಳಿಸಲು ಸಲಕೆಯಿಂದ ಬಿಲ್ಲು-ಬಾಣಗಳನ್ನು ತಯಾರಿಸುತ್ತಿದ್ದರು.

ಸುಂದರ ಹಾಗಲ್ಲ. ಬಾಲ್ಯದಿಂದಲೇ ಕಲಾಪ್ರಿಯ. ಯಕ್ಷಗಾನದ ನಂಟೂ ಇತ್ತು. 'ಅವ ಸುಂದರನ ವೇಷ ಬತ್ತ್ಂಡ್ (ಸುಂದರ ವೇಷ ಪ್ರವೇಶವಾಯಿತು) ಎಂದು ಅವನ ಆಪ್ತರು ಮಲಗಿದ್ದವರನ್ನು ಎಬ್ಬಿಸುತ್ತಿದ್ದ ದೃಶ್ಯ ನೆನಪಾಗುತ್ತದೆ.

ದಿನಗಳು ಉರುಳುತ್ತಿತ್ತು. ನವರಾತ್ರಿ ಸಮಯ. 'ಇನಿ ಸುಂದರನ ಕೊರಗ ವೇಷ ಬರ್ಪುಂಡ್' (ಸುಂದರನ ಕೊರಗ ವೇಷ ಬರುತ್ತದೆ) ಮಕ್ಕಳಾಡಿಕೊಳ್ಳುತ್ತಿದ್ದರು. ಮಾಂಕು, ಸುಂದರ ಸನಿಹದ ಐದಾರು ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಳ್ಳೆಯ ಸಂಬಂಧ ಹೊಂದಿದ್ದರಿಂದಲೇ ಸುಂದರನ ಕೊರಗ ವೇಷಕ್ಕೆ ಅಷ್ಟೊಂದು ನಿರೀಕ್ಷೆ, ಜನಪ್ರಿಯತೆ.

ಅಂದು ಬೆಳಿಗ್ಗೆ ಸನಿಹದ ಪಯಸ್ವಿನಿ ನದಿಯಲ್ಲಿ ಮಿಂದು, ಶುಚಿರ್ಭೂತನಾಗಿ, ದೇವಾಲಯಕ್ಕೆ ಹೋಗಿ ಪ್ರಸಾದ ಸ್ವೀಕರಿಸಿದ ಬಳಿದ 'ಕೊರಗ ವೇಷಕ್ಕೆ ತಯಾರಿ' ಮಾಡುತ್ತಿದ್ದ. ಅವನ ಪಾಲಿಗೆ ಅದು ವೇಷವಲ್ಲ, ಹರಕೆ. ಅಲ್ಲಿರುವುದು ಭಯ-ಭಕ್ತಿ. ಮೈಯಲ್ಲೊಂದು ತುಂಡು ಬಟ್ಟೆ, ಕಾಯ ಪೂರ್ತಿ ಕೃಷ್ಣವರ್ಣ. ಶಿರದಲ್ಲೊಂದು ಪೂಗದ ಹಾಳೆಯ ಮುಟ್ಟಾಳೆ, ಅದರ ಎರಡೂ ಬದಿಗೆ ಹೂವಿನ ಗೊಂಚಲು, ಕೊರಳಲ್ಲಿ ಹೂವಿನ ಮಾಲೆ, ಕೈಯಲ್ಲೊಂದು ಕೊಳಲು, ಕಾಲಿಗೆ ಗೆಜ್ಜೆ.. ಇವಿಷ್ಟು ವೇಷದ ಪರಿಕರಗಳು.

ಆರಂಭದಲ್ಲಿ ದೇವಸ್ಥಾನದಲ್ಲಿ ಸೇವೆ. ನಂತರ ಆಪ್ತರ ಮನೆಗಳಿಗೆ ಭೇಟಿ. ಜೊತೆಗೆ ಮಾಂಕೂ ಇರುತ್ತಿದ್ದ. ಒಂದೈದು ನಿಮಿಷ ಕುಣಿದು, ಮನೆಯವರು ಕೊಟ್ಟ ಬಾಯಾರಿಕೆ-ತಿಂಡಿ ತಿನ್ನುತ್ತಾನೆ. ಜತೆಗೆ ಊರಿನ ಸುದ್ದಿಗಳ ವಿನಿಮಯ ಹಣ, ಭತ್ತ, ತರಕಾರಿಗಳನ್ನು ಚೀಲಕ್ಕೆ ಸೇರಿಸುತ್ತಿದ್ದಂತೆ ಸುಖ ದುಃಖ ವಿನಿಮಯ. ಮತ್ತೊಂದು ಮನೆಗೆ ಪ್ರಯಾಣ. ಹೀಗೆ ಸುಮಾರು ಐವತ್ತಕ್ಕೂ ಮಿಕ್ಕಿ ಮನೆಗಳ ಭೇಟಿ.

ಸುಂದರನ ವೇಷ ಬರುವಾಗ ನಮ್ಮ ನಗರದ ಮನೆಗಳಂತೆ ಯಾರೂ ಬಾಗಿಲು ಹಾಕುವುದಿಲ್ಲ. 'ಮನೆಯಲ್ಲಿ ಯಾರೂ ಇಲ್ಲ' ಅಂತ ಮಕ್ಕಳಲ್ಲಿ ಹೇಳಿಸುವುದಿಲ್ಲ. ನಾಣ್ಯವನ್ನು ಬಿಸಾಡುವುದಿಲ್ಲ. ಮುಕ್ತ ಸ್ವಾಗತ. ಒಂದು ವಾರದ ಕುಣಿತದ ನಂತರ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳಿ ವೇಷ ಕಳಚಿ ಊರಿಗೆ ಮರಳಿದಲ್ಲಿಗೆ 'ಹರಕೆ' ಮುಗಿಯುತ್ತದೆ.

ನಮ್ಮ ತಾತನ ಕಾಲದಿಂದಲೇ 'ಕೊರಗ ವೇಷದ ಹರಕೆ' ಇದೆ. ನನಗೆ ಪ್ರಾಯವಾಯಿತು. ಈಗ ನನ್ನ ಮಗ ಮಾಡ್ತಾನೆ. ಅವನ ನಂತರ ಯಾರೆಂಬುದು ಅವನೇ ನಿರ್ಧಾರ ಮಾಡ್ತಾನೆ' ಎಂದು ಇಳಿ ವಯಸ್ಸಿನ ಮಾಂಕು ಹೇಳಿದ್ದರು.
ಮಾಂಕು ಇದನ್ನೆಂದೂ ಹೊಟ್ಟೆಪಾಡಿನ ವೃತ್ತಿಯನ್ನಾಗಿ ಮಾಡಿಕೊಂಡಿಲ್ಲ. ನಂತರದ ದಿನಗಳಲ್ಲಿ ಸುಂದರ 'ಕರಡಿ, ಹುಲಿ' ಅಂತ ವೇಷಾಂತರವಾಗಿದ್ದ. ಆಗಲೂ 'ಸುಂದರನ ಕೊರಗ' ವೇಷದ ಬದಲಿಗೆ 'ಸುಂದರನ ಕರಡಿ' ಎಂದು ಜನರೇ ಹೆಸರನ್ನು ಬದಲಾಯಿಸಿದ್ದರು.

ಈಚೆಗೊಮ್ಮೆ ಸಿಕ್ಕಿದ್ದ. 'ನವರಾತ್ರಿ ಬಂತಲ್ವಾ ಮಾರಾಯ. ವೇಷ ಇಲ್ವಾ' ಕೇಳಿದೆ. 'ತಂದೆಯವರ ನೆನಪಿಗಾಗಿ ಒಂದು ದಿವಸ ಕೊರಗ ವೇಷ ಹಾಕ್ತೇನೆ' ಎಂದಿದ್ದ. ನಂತರ ಹೊಟ್ಟೆಪಾಡಿಗಾಗಿ ಕರಡಿಯನ್ನು ಆವಾಹಿಸಿಕೊಳ್ಳುತ್ತಾ ಪುತ್ತೂರಿಗೂ ಬರುವುದುಂಟಂತೆ. ಅವನ ವೇಷವನ್ನು ನೋಡಲು ಕಾಯುತ್ತಿದ್ದೇನೆ!

ಸುಂದರನಂತೆ ಮತ್ತೂ ಒಂದಿಬ್ಬರು ಹಿರಿಯರು ಕೊರಗ ವೇಷ ಧರಿಸುತ್ತಿದ್ದರು. ಹರಕೆಯ ಭಯ-ಭಕ್ತಿಯ ಹಿನ್ನೆಲೆಯಲ್ಲಿ ಇವು ರೂಪುಗೊಳ್ಳುತ್ತವೆ. ಇದರಲ್ಲಿ ಆರಾಧನೆಯ ಉದ್ದೇಶವಿದೆ. ಸಾಮಾಜಿಕವಾದ ಸ್ಪಂದನವಿದೆ. ಯಾರೂ ಕೂಡಾ ಜಾತಿ ಎತ್ತಿ ಮಾತನಾಡಿದ್ದನ್ನು ನಾನು ನೋಡಿಲ್ಲ. ಗೇಲಿ ಮಾಡಿದ್ದಿಲ್ಲ. ಬದುಕಿನ ಪಥದಲ್ಲಿ ಹಾದುಹೋಗುವ ಇಂತಹ ಕ್ಷಣಗಳನ್ನು ಪ್ರಶ್ನಿಸುವ, ಪೋಸ್ಟ್ಮಾರ್ಟಂ ಮಾಡುವ, ಅಡ್ಡಮಾತುಗಳಿಂದ ವಿಮರ್ಶಿಸುವ ಪ್ರವೃತ್ತಿ ಎಲ್ಲಿಂದ ಆರಂಭವಾಯಿತೋ; ಅಲ್ಲಿಂದ ವೇಷಗಳ, ಬದುಕಿನ ಅರ್ಥಗಳಿಗೆ ಕ್ಷೀಣನೆ. ಇದನ್ನೇ 'ಬೌದ್ಧಿಕ ಅಭಿವೃದ್ಧಿ' ಎಂದು ನಂಬಿದ್ದೇವೆ.

ಈಗಿನ ಸ್ಥಿತಿಗೆ ಅಂದಿನ ಬದುಕನ್ನು ಸಮೀಕರಿಸೋಣ. ಯಾವುದೇ ವೇಷ ತೊಡಿ. ಅಲ್ಲೆಲ್ಲಾ ಜಾತಿ, ಧರ್ಮದ ಲೇಪ ಅಂಟಿಕೊಳ್ಳುತ್ತದೆ. ರಾಜಕೀಯ ಸ್ಪರ್ಶವಿರುವ ಮಂದಿಯ ಪ್ರವೇಶವಾಗುತ್ತದೆ. ದಿಢೀರ್ ಸಮಾಜ ಸುಧಾರಕರು ಸೃಷ್ಟಿಯಾಗುತ್ತಾರೆ. 'ಜಾತಿ ನಿಂದನೆ, ವ್ಯಕ್ತಿ ನಿಂದನೆ' ಎನ್ನುವ ಹೊಸ ಅವತಾರದ ಆರೋಪಗಳು ರಾಚುತ್ತವೆ. ಇವುಗಳ ಮಧ್ಯೆ ನಿಜವಾದ 'ನವರಾತ್ರಿ ವೇಷ'ದ ಹಿಂದಿನ ಭಾವನೆಗಳು, ಭಕ್ತಿಗಳು ನುಣುಚಿಹೋಗುತ್ತವೆ. ಇದಕ್ಕೆ ಕಾಲದ ಬದಲಾವಣೆ ಎನ್ನಬೇಕೋ, ಕಾಲವೇ ನಮ್ಮನ್ನು ಬದಲಿಸಿತು ಎಂದು ನಂಬೋಣವೋ?

0 comments:

Post a Comment