Monday, October 10, 2011

ಮಾಂಬಳದ ನೂರನೇ ಹೆಜ್ಜೆ

ನೋಡ್ತಾ.. ನೋಡ್ತಾ ಇದ್ದಂತೆ ನೂರು ವಾರ ಕಳೆಯಿತು. ಇದು ಮಾಂಬಳ ಅಂಕಣದ ನೂರನೇ ಕಂತು. 22 ನವೆಂಬರ್ 2009ರಂದು ಅಂಕಣದ ಆರಂಭ. ದಿಗಂತದ ಮಂಗಳೂರಿನ ವರಿಷ್ಠರು ಅಂಕಣದ ಪ್ರಸ್ತಾಪ ಮುಂದಿಟ್ಟಾಗ ಅಂಜುತ್ತಂಜುತ್ತಲೇ ಒಪ್ಪಿಕೊಂಡಿದ್ದೆ.


ಅಂಕಣ ಆರಂಭವಾಯಿತು. ಒಂದು ಬರೆಹ ಕಳುಹಿಸಿದಾಕ್ಷಣ ಮತ್ತೊಂದರ ಹುಡುಕಾಟ. ಒಂದು ವಾರವೂ ಬರೆಹ ತಪ್ಪಬಾರದು ಎಂಬ ಬದ್ಧತೆ ಹುಸಿಯಾಗಲಿಲ್ಲ. ಮಾಂಬಳದ ಲೇಖನ ಓದಿ ಸಾಕಷ್ಟು ಮಂದಿ ದೂರವಾಣಿ, ಮಿಂಚಂಚೆ ಪ್ರತಿಕ್ರಿಯೆ ನೀಡಿದ್ದಾರೆ. ದಿಗಂತದ ಶಿವಮೊಗ್ಗ ಆವೃತ್ತಿ ಆರಂಭವಾದ ಮೇಲಂತೂ ಮಿಂಚಂಚೆಗಳ ಸಂಖ್ಯೆ ಇಮ್ಮಡಿ. ಇದು ಹೊಸದಿಗಂತದ ಜನಪ್ರಿಯತೆ.


ಕನ್ನಡದ ಬೇರೆ ಬೇರೆ ಪತ್ರಿಕೆಗಳಲ್ಲಿ ವಿವಿಧ, ವೈವಿಧ್ಯ ಅಂಕಣಗಳಿವೆ. ಕೃಷಿ/ಗ್ರಾಮೀಣ ಬರೆಹಗಳೂ ಅಚ್ಚಾಗುತ್ತಿವೆ. ಆದರೆ ಕೃಷಿಗೇ ಸೀಮಿತವಾದ, ಸಾಪ್ತಾಹಿಕ ಕೃಷಿ ಅಂಕಣ ಆರಂಭಿಸಿ ಮುಂದುವರಿಸುತ್ತಿರುವುದು ದಿಗಂತದ ಹೆಮ್ಮೆ. ಅವಕಾಶ ಕೊಟ್ಟ ದಿಗಂತದ ಸಂಪಾದಕರಿಗೆ, ಎಲ್ಲಾ ಉಪಸಂಪಾದಕರಿಗೆ, ಓದುಗರಿಗೆ ಅಭಿನಂದನೆಗಳು.


ಮಾಂಬಳ - ಎಂದರೇನು? ಅಂಕಣಾರಂಭಕ್ಕೆ ಬಹುತೇಕರ ಪ್ರಶ್ನೆ. ಇದು ಹಳ್ಳಿ ಬದುಕಿನಲ್ಲಿ ಮರೆಯಾದ, ಮರೆಯಾಗುತ್ತಿರುವ ರುಚಿ. ಧಾವಂತದ ಬದುಕಿನಲ್ಲಿ ಈ ರುಚಿ ಮರೀಚಿಕೆ. ಹಳ್ಳಿಯ ಹಿರಿಯ ಅಮ್ಮಂದಿರ ಕೈಚಳಕದಲ್ಲಿ ಅಲ್ಲೋ ಇಲ್ಲೋ ಮಾಂಬಳ ಸಿದ್ಧವಾಗುತ್ತಿದೆ. ವಾರವಾರವೂ ಅಂಕಣದಲ್ಲಿ ಮಾಂಬಳ ಕಾಣಿಸಿಕೊಂಡಾಗ ರುಚಿಗೊತ್ತಿದ್ದ ಹಲವರಿಗೆ ನೆನಪಾಗದೆ ಇರದು.


ಮಾಂಬಳ ಅಂದರೆ ಕಾಡುಮಾವಿನ ಹಣ್ಣಿನ ರಸದ ಘನ ರೂಪ. ಮಾಡುವ ವಿಧಾನ : ಕಾಡು ಮಾವಿನ ಹಣ್ಣನ್ನು ತೊಳೆದು, ರಸವನ್ನು ಹಿಂಡಿ, ಅದನ್ನು ಬಿಸಿಲಿನಲ್ಲಿ ಒಣಗಿಸುವುದು. ಗೆರಸೆಯ (ಭತ್ತ, ಧಾನ್ಯ ಗೇರುವ) ಮೇಲೆ ಹತ್ತಿ ವಸ್ತ್ರವನ್ನು ಹಾಸಿ ಅದರ ಮೇಲೆ ರಸ ಎರೆಯಬೇಕು. ಮರುದಿವಸ ಹಣ್ಣಿನ ರಸವನ್ನು ಒಣಗಿದ ರಸದ ಮೇಲೆ ಪುನಃ ಎರೆಯುವುದು. ಹೀಗೆ ಹದಿನೈದು ದಿವಸದ ಲೇಯರ್. ಬಿಸಿಲಿನ ಸ್ನಾನದೊಂದಿಗೆ ಹದವಾದ ಘನ ವಸ್ತುವೇ ಮಾಂಬಳ.


ಪ್ರತಿ ಸಲ ಎರೆಯುವಾಗಲೂ ರುಚಿಗೆ ಸ್ವಲ್ಪ ಉಪ್ಪು ಸೇರಿಸಿ. ಬಿಸಿಲಿನಲ್ಲಿ ಒಣಗಿದಷ್ಟೂ ತಾಳಿಕೆ ಹೆಚ್ಚು. ಕೊನೆಗೆ ಮಾಂಬಳವನ್ನು ಕಟ್ ಮಾಡಿ. ಪುನಃ ಐದಾರು ದಿವಸದ ಬಿಸಿಲಿನ ಸ್ನಾನ. ನಂತರ ರೋಲ್ ಮಾಡಿ ಭದ್ರವಾಗಿ ತೆಗೆದಿಡಿ. ರೋಲ್ ಮಾಡುವ ಹೊತ್ತಿಗೆ ಉಪ್ಪಿನ ಹುಡಿಯನ್ನು ತೆಳುವಾಗಿ ಲೇಪಿಸಲು ಮರೆಯದಿರಿ - ಎಂಬ ಅನುಭವ ಹಂಚಿಕೊಳ್ಳುತ್ತಾರೆ ಸಜಂಕಬೆಟ್ಟಿನ (ದ.ಕ.) ಶಾರದಾ ಶರ್ಮ. ಮಾವಿನ ರುಚಿ ಸಿಹಿ-ಹುಳಿಯನ್ನು ಹೊಂದಿಕೊಂಡು ಮಾಂಬಳದ ರುಚಿ.


ಹದಿನೈದು ಲೇಯರ್ನಲ್ಲಿ ಸಿದ್ಧಗೊಂಡ ಮಾಂಬಳವು ಅರ್ಧ ಇಂಚು ದಪ್ಪವಾಗಿರುತ್ತದೆ. ಸರಿಯಾದ ಬಿಸಿಲಿನ ಸ್ನಾನದೊಂದಿಗೆ ಸಿದ್ಧವಾದ ಮಾಂಬಳವು ಒಂದು ವರುಷವಾದರೂ ಕೆಡದು. ತಂಪು ಪೆಟ್ಟಿಗೆಯಲ್ಲಿಟ್ಟರೆ ಬಾಳ್ವಿಕೆ ಹೆಚ್ಚು. ಕಾಡು ಮಾವಿನ ಹಣ್ಣಿನ ರಸ ದಪ್ಪವಾದಷ್ಟು ಒಳ್ಳೆಯದು. ತೆಳುವಾಗಿದ್ದರೆ ಒಣಗುವುದಿಲ್ಲ. ಗುಣಮಟ್ಟವೂ ಸಿಗುವುದಿಲ್ಲ. ಹೈಬ್ರಿಡ್ ಮಾವಿನ ಹಣ್ಣು ಕಾಡು ಮಾವಿನಷ್ಟು ರಸ ಬಿಟ್ಟುಕೊಡದ ಕಾರಣ ಮಾಂಬಳಕ್ಕೆ ಅಷ್ಟಕ್ಕಷ್ಟೇ.


ಐವತ್ತು ವರುಷದ ಹಿಂದೆ ಸೊಸೈಟಿಗೆ ಅಡಿಕೆ ಹಾಕುವ ಮಂದಿ ತಂತಮ್ಮ ಮನೆಯಲ್ಲಿ ಮಾಡಿದ ಮಾಂಬಳವನ್ನು ತಂದು ಅಲ್ಲಿನ ಸಿಬ್ಬಂದಿಗಳಿಗೆ ಮಾರಾಟ ಮಾಡುತ್ತಿದ್ದರು ಎಂದು ಹಳೆಯ ನೆನಪನ್ನು ಕೆದಕಿದರು ಸಜಂಕಬೆಟ್ಟು ಕೃಷ್ಣ ಶರ್ಮ.


ಶಾರದಾ ಶರ್ಮರು ಪ್ರತೀ ವರುಷ ಮಾಂಬಳ ಮಾಡುತ್ತಾರೆ. ಆಪ್ತೇಷ್ಟರಿಗೆ ಹಂಚುತ್ತಾರೆ. ಚಿಕ್ಕಚಿಕ್ಕ ಚೂರುಗಳನ್ನಾಗಿ ಮಾಡಿಟ್ಟುಕೊಂಡರೆ ಮಕ್ಕಳಿಗೆ ಚಾಕೊಲೆಟ್ನಂತೆ ಕೊಡಬಹುದು. ಮಕ್ಕಳು ಇಷ್ಟಪಡುತ್ತಾರೆ. ತೆಂಗಿನಕಾಯಿ ಹಾಕಿದ್ದು ಮತ್ತು ಹಾಕದೇ ಮಾಡುವ ಮಾಂಬಳದ ಗೊಜ್ಜು ಬಹಳ ರುಚಿ. ಬೆಳ್ತಿಗೆ ಅನ್ನಕ್ಕೆ ಒಳ್ಳೆಯ ಕಾಂಬಿನೇಶನ್.


ಕಾಡು ಮಾವಿನ ಹಣ್ಣಿನ ರಸದಿಂದ ಮಾಡಿದ ಕಾರಣ ಮಾಂಬಳ. ಹಲಸಿನ ಹಣ್ಣಿನದ್ದಾದರೆ ಅದು ಹಂಬಳ - ಎಂಬ ಹೊಸ ರುಚಿಯನ್ನು ಪರಿಚಯಿಸುತ್ತಾರೆ ಪಾಕತಜ್ಞೆ ದೈತೋಟದ ಜಯಕ್ಕ.

0 comments:

Post a Comment