
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾದ ಪುಟ್ಟ ಹಳ್ಳಿ ಶಿವಪುರ. ದಶಕದ ಹಿಂದೆ ಕೊಡಸಳ್ಳಿ ಜಲವಿದ್ಯುತ್ ಯೋಜನೆಗಾಗಿ ಕಾಳೀ ನದಿಗೆ ಕಟ್ಟಿದ ಅಣೆಕಟ್ಟಿನಿಂದಾಗಿ ಕೊಡಸಳ್ಳಿಯನ್ನು ನೀರು ನುಂಗಿತು. ಶಿವಪುರವನ್ನು ಸಂಪರ್ಕಿಸುವ ಎಲ್ಲಾ ದಾರಿಗಳನ್ನು ಹಿನ್ನೀರು ಆಪೋಶನ ಮಾಡಿತು. ಮಿಕ್ಕ ಸುತ್ತಲಿನ ದಾರಿಗಳೆಲ್ಲಾ ಸುತ್ತುಬಳಸು.
ಯಲ್ಲಾಪುರ ಶಿವಪುರಕ್ಕೆ ಹತ್ತಿರ. ಕುಂಬ್ರಾಳದವರೆಗೆ ರಸ್ತೆ. ಹಿನ್ನೀರು ದಾಟಿದ ಬಳಿಕ ಆರೇಳು ಕಿಲೋಮೀಟರ್ ಕಾಡು ಹಳ್ಳಿಯೊಳಗೆ ಎಳೆದೊಯ್ಯುತ್ತದೆ. ನಂತರ ಸಿಗುವುದೇ ಐವತ್ತು ಮನೆಗಳಿರುವ ಶಿವಪುರ. ಒಂದು ಕಾಲಘಟ್ಟದಲ್ಲಿ ಕಾರ್ಮಿಕರು ಕೆಲಸ ಹುಡುಕಿ ಬರುವ ಊರಿದು.
ಹಿನ್ನೀರು ದಾಟಲು ದೇಸೀ ತೆಪ್ಪ. ಆಧಾರ ಹಲಗೆಯಲ್ಲಿ ನಿಂತು ನದಿದಂಡೆಗೆ ಕಟ್ಟಿದ ಹಗ್ಗವನ್ನು ಜಗ್ಗುತ್ತಿದ್ದಂತೆ ತೆಪ್ಪ ಚಾಲೂ. ಮಿತ್ರ ಶಿವಾನಂದ ಕಳವೆ ಹಗ್ಗ ಜಗ್ಗುತ್ತಿದ್ದರು. ತೆಪ್ಪ ಚಲಿಸುತ್ತಿತ್ತು. ನದಿಯ ಮಧ್ಯಕ್ಕೆ ಬಂದಾಗ ಕಳವೆ, 'ಇನ್ನೂರು ಅಡಿ ಆಳವಿದೆ ಗೊತ್ತಾ, ಜಾಗ್ರತೆ' ಅಂದರು. ಅಷ್ಟರಲ್ಲಿ ಕೈನಡುಗಿ ಹಲಗೆ ಮೇಲೆ ಮೊಬೈಲ್ ಬಿತ್ತು. 'ಬಾಗಬೇಡಿ. ಮೊಬೈಲ್ ಬೇಕಾ, ಜೀವ ಬೇಕಾ' ನಿರ್ಧರಿಸಿ ಅಂದರು! ಜೀವ ಕೈಯಲ್ಲಿ ಹಿಡಿದು ಕಾಣದ ದೇವರನ್ನು ಜ್ಞಾಪಿಸಿಕೊಳ್ಳುವುದೊಂದೇ ದಾರಿ! 'ಛೇ, ಇದಕ್ಕೊಂದು ತೂಗುಸೇತುವೆಯಾದರೂ ಆಗಿರುತ್ತಿದ್ದರೆ, ಈ ಕಷ್ಟವಿಲ್ಲ' ಅಂದೆ.
ತೂಗುಸೇತುವೆ ಬಿಡಿ, ಊರಿನ ಚಿಕ್ಕ ತೋಡುಗಳಿಗೆ ಸಂಕವಿಲ್ಲ. ಅಡಿಕೆ ಮರವನ್ನು ಅಡ್ಡಲಾಗಿ ಮಲಗಿಸಿದರೆ ಅದೇ ಸೇತುವೆ. ಅದರ ಮೇಲೆ ಸಾಹಸದ ಬೈಕ್ ಸವಾರಿ. ಅಲ್ಲಿನವರಿಗೆ ಸಲೀಸು. ಕಾಳಿ ನದಿ ತಂದೊಡ್ಡಿದ ಹಿನ್ನೀರು ಸವಾಲಿಗೆ ಆರು ವರುಷದ ಹಿಂದೆ ಮಾಡಿದ ತೂಗುಸೇತುವೆಯ ಪ್ರಸ್ತಾಪ ತುಕ್ಕು ಹಿಡಿದು ಕರಟಲೊಂದೇ ಬಾಕಿ.
ಒಂದಲ್ಲ, ಶತಸೇತು
ಸ್ವಲ್ಪ ಸಮಯದ ನಂತರ ತೂಗುಸೇತುವೆಯ ಹರಿಕಾರ ಗಿರೀಶ್ ಭಾರದ್ವಾಜರಿಗೆ ರಿಂಗಿಸಿದೆ. ಅವರಾಗ ಆಗಷ್ಟೇ ಮುಗಿಸಿದ ಪಂಜಿಕಲ್ಲಿನ 'ಶತಸೇತು'ವೆಯ ಫೈಲನ್ನು ಮುಚ್ಚುತ್ತಿದ್ದರು! ನಾಡಿನ ದೊರೆಯಿಂದ ಲೋಕಾರ್ಪಣೆಗಾಗಿ ಸಿದ್ಧತೆ ನಡೆಯುತ್ತಿತ್ತು.
ನೂರನೇ ಸೇತುವೆ ಅಂದಾಗ ಒಂದನೇ ಸೇತುವೆಯನ್ನು ಮರೆಯಲುಂಟೇ? ಒಂದು 'ನೂರು' ಆಗಲು ಬರೋಬ್ಬರಿ ಇಪ್ಪತ್ತೆರಡು ವರುಷಗಳ ಅವಿರತ ದುಡಿಮೆ. ಒಂದೊಂದು ಸೇತುವೆಯು ಹೊಸ ಹೊಸ ಅನುಭವಗಳನ್ನು ಕಟ್ಟಿಕೊಡುತ್ತಿತ್ತು. ಅದರ ಹಿಂದೆ ರಾಜಕೀಯ ವ್ಯವಸ್ಥೆಯ ಗಬ್ಬಿನ ಅನುಭವಗಳಿವೆ. ಸಾಮಾಜಿಕ ಬದುಕಿನ ಮಧ್ಯದಿಂದೆದ್ದ ಸತ್ಯದ ಅನುಭವಗಳಿವೆ. ಮೊಗೆದಷ್ಟೂ ರೋಚಕ.
ಶಿವಪುರದಂತೆ ಅಸಂಖ್ಯಾತ ಹಳ್ಳಿಗಳಿಂದು ಕತ್ತಲೆಯ ಕೂಪದಲ್ಲಿವೆ. 'ಅಭಿವೃದ್ಧಿ' ಎಂಬುದು ಕನಸು. ಮೂಲಭೂತ ಆವಶ್ಯತೆಗಳಿಗಾಗಿ ಪರದಾಟ. ಮಳೆಗಾಲದಲ್ಲಂತೂ ಪೂರ್ತಿ ದ್ವೀಪ. ಇಂತಹ ಹಳ್ಳಿಗಳಿಂದು ಗಿರೀಶ ಭಾರದ್ವಾಜರನ್ನು ಜ್ಞಾಪಿಸಿಕೊಳ್ಳುತ್ತವೆ. ಅವರ ಮಿದುಳ ಮರಿಯಾದ ತೂಗುಸೇತುವೆ ದಡ ದಡಗಳನ್ನು ಬೆಸೆದಿವೆ. ಮನ-ಮನಗಳನ್ನು ಒಗ್ಗೂಡಿಸಿವೆ. ಹೊಸ ಬದುಕಿಗೆ ದಾರಿ ಮಾಡಿಕೊಟ್ಟಿದೆ.
ನದಿಯ ಆಚೀಚೆ ದಡದಲ್ಲಿ ಎರಡು ಪೈಲಾನ್(ಗೋಪುರ)ಗಳು, ಇವಕ್ಕೆ ಬಂಧಿಸಲ್ಪಟ್ಟ ರೋಪ್ಗಳು ಸೇತುವೆಗೆ ಮೂಲಾಧಾರ. ಎರಡೂ ತುದಿಯಿರುವುದು ದಡದಾಚೆಗಿನ ಕಾಂಕ್ರಿಟ್ ರೂಪಿತ 'ಆಂಕರ್'ನಲ್ಲಿ. ಕೇಬಲ್ಗಳಿಗೆ ಸಸ್ಪೆಂಡರ್ಸ್ ತೂಗಿಸಿ, ಅದಕ್ಕೆ ಚ್ಯಾನೆಲ್ನ್ನು ಬಂಧಿಸುತ್ತಾರೆ. ಇದರ ಮೇಲೆ ಫೆರೋಸಿಮೆಂಟ್ ಸ್ಲಾಬ್ಗಳನ್ನು ಜೋಡಿಸಿದರೆ ತೂಗುಸೇತುವೆ ಸಿದ್ಧ.
'ಸುಳ್ಯ ಸನಿಹದ ಅಮಚೂರು ಶ್ರೀಧರ ಭಟ್ಟರು ಮಳೆಗಾಲದಲ್ಲಿ ಅತ್ತಿತ್ತ ಸಂಚರಿಸಲು ಮರದಿಂದ ಮರಕ್ಕೆ ಕೇಬಲ್ಗಳನ್ನು ಜೋಡಿಸಿ ಸೇತುವೆ (ಪಾಲ, ಕೈತಾಂಗು) ರಚಿಸಿದ್ದರು. ಇದು ಭವಿಷ್ಯದ ನನ್ನೆಲ್ಲಾ ಸೇತುವೆಗಳಿಗೆ ಮೂಲ' ಎನ್ನುತ್ತಾರೆ. ಆರಂಭದ ದಿನಗಳಲ್ಲಿ ತಾಂತ್ರಿಕ ಕಾಲೇಜುಗಳ ಭೇಟಿ, ವರಿಷ್ಠರೊಂದಿಗೆ ಸಂಪರ್ಕ. ಪುಸ್ತಕಗಳ ಅಧ್ಯಯನ, ತಾಂತ್ರಿಕಾಂಶಗಳ ಅಭ್ಯಾಸಗಳ ಪರಿಣಾಮವಾಗಿ ಊರಿನ ಸನಿಹದ ಅರಂಬೂರು ತೂಗುಸೇತುವೆ ರಚನೆಯಾಯಿತು. ಈ ಯಶಸ್ಸನ್ನು ನೂರನೇ ಸೇತುವೆಯ ಖುಷಿಯಲ್ಲಿದ್ದ ಸಂದರ್ಭದಲ್ಲಿ ಗಿರೀಶರು ನೆನಪಿಸಿಕೊಂಡರು.
ಒಂದು ಸೇತುವೆ ಬಿಡಿ, ಚಿಕ್ಕ 'ಮೋರಿ' ರಚನೆಯಾಗಲು ಎಷ್ಟು ಸಮಯ ಬೇಕು? ಮಾಣಿಯಿಂದ ಮಡಿಕೇರಿ ತನಕ ಸಂಚರಿಸಿದರೆ ಸತ್ಯ ಗೋಚರಿಸುತ್ತದೆ. ಇನ್ನೂ ಮುಗಿಯದ ಅರ್ಧಂಬರ್ಧ ಸ್ಮಾರಕಗಳು ಎಷ್ಟು ಬೇಕು? ಸರಕಾರ ನಂಬಿದ 'ಪ್ರಾಮಾಣಿಕ ಗುತ್ತಿಗೆದಾರ' ಸಿಕ್ಕರೆ ಅಬ್ಬಬ್ಬಾ ಅಂದರೂ ನಾಲ್ಕೈದು ವರುಷ ಬೇಕೇ ಬೇಕು.
ವರುಷವಲ್ಲ, ಮೂರೇ ತಿಂಗಳು
ಗಿರೀಶರ ತೂಗುಸೇತುವೆ ನಿರ್ಮಾಣಕ್ಕೆ ವರುಷವಲ್ಲ, ಕೇವಲ ಮೂರು ತಿಂಗಳು. ಕಾಂಕ್ರಿಟ್ ಸೇತುವೆ ವೆಚ್ಚದ ಐದನೇ ಒಂದು ಪಾಲು. ಸಕಾಲಕ್ಕೆ ಮೊತ್ತ ಸಿಕ್ಕರೆ ಮಾತ್ರ! ಸೇತುವೆ ಪೂರ್ತಿಯಾದರೂ ಹಣ ನೀಡದೆ ಸತಾಯಿಸಿದ, 'ಇಂದು-ನಾಳೆ' ಎಂದು ಗೋಳುಹೊಯ್ಸಿದ ಅಧಿಕಾರಿಗಳ ಪರಿಚಯ ಗಿರೀಶರಿಗೆ ಮಾಸಿಲ್ಲ!
'ಸರಕಾರದ ಹಣವಲ್ವಾ, ನಾಳೆ ಸಿಕ್ಕೇ ಸಿಗುತ್ತದೆ,' ಗಿರೀಶರ ಆರಂಭದ ದಿನಗಳ ನಂಬುಗೆಯನ್ನು 'ಯಶಸ್ಸಿಯಾಗಿ' ತಳಮಟ್ಟದ ಆಡಳಿತ ವ್ಯವಸ್ಥೆಗಳು ಹುಸಿಮಾಡಿವೆ. 'ತೊಂದರೆಯಿಲ್ಲ, ಕೊಟ್ಟಾರು' ಎನ್ನುತ್ತಾ ಸಾಲ ಮಾಡಿ, ಸೇತುವೆಗೆ ಹಣವನ್ನು ಸುರಿದು, ಬಳಿಕ ಕೈಕೈ ಹಿಸುಕಿಕೊಂಡ ಆ ದಿನಗಳು ಇನ್ನೂ ಹಸಿಯಾಗಿವೆ. ಅಲ್ಲಿಂದೀಚೆಗೆ ರೊಕ್ಕ ಸಿಕ್ಕರೆ ಮಾತ್ರ ಕೆಲಸ.
ಖಾಸಗಿ ಸಹಭಾಗಿತ್ವದಲ್ಲಿ ಎಂದೂ ಕಹಿ ಅನುಭವ ಆದದ್ದಿಲ್ಲ ಎನ್ನುತ್ತಾರೆ. 'ನಾನು ಸೇತುವೆಯ ಕಂಟ್ರಾಕ್ಟರ್ ಎಂದು ಎಷ್ಟೋ ಜನರಲ್ಲಿ ತಪ್ಪು ಕಲ್ಪನೆಯಿದೆ. ಹಾಗಲ್ಲ. ನನ್ನಲ್ಲಿ ಸೇತುವೆ ಪರಿಕಲ್ಪನೆಯಿದೆ. ಹಣ ಕೊಟ್ಟರೆ ಮಾಡಿಕೊಡುತ್ತೇನೆ. ಅಷ್ಟೇ'.
ಕೇರಳದಲ್ಲಿ ಜನಬೆಂಬಲ ಹೆಚ್ಚಂತೆ. ಕೆಲಸ ಆಗುವಲ್ಲೆಲ್ಲಾ ಕುತೂಹಲಿಗರ ದಂಡು ಅಧಿಕ. ಸೇತುವೆ ಕೆಲಸ ಪೂರ್ತಿಯಾಗುವಾಗ ಹಲವರು ಸ್ನೇಹಿತರಾಗಿಬಿಡುತ್ತಾರೆ. ಆದರೆ ಕನ್ನಾಡಿನಲ್ಲಿ..? ಒಂದೊಂದು ಸೇತುವೆ ಆಗುತ್ತಿದ್ದಂತೆ, ಇಲ್ಲಿ ನೈತಿಕತೆಯ ಒಂದೊಂದೇ ಮೆಟ್ಟಿಲು ಕುಸಿಯುವ ಅನುಭವವಾಗುತ್ತದೆ!
ಶತಕ ಸಂಭ್ರಮದ ಗಿರೀಶ್ ಭಾರದ್ವಾಜರ ಖುಷಿಯ ಹಿಂದೆ ಮೂವತ್ತು ಮಂದಿಯ 'ಸೇನಾ ಪಡೆ'ಯ ಶ್ರಮವಿದೆ. ಅಹೋರಾತ್ರಿ ದುಡಿತ. 'ಯಜಮಾನ ಇವರನ್ನು ನಂಬಿದ್ದಾರೆ, ಇವರು ಯಜಮಾನರನ್ನು ನಂಬಿದ್ದಾರೆ,' ಇದೇ ಯಶಸ್ಸಿನ ಗುಟ್ಟು. ಒಮ್ಮೆ ಮನೆಬಿಟ್ಟರೆ ವಾರವಲ್ಲ, ತಿಂಗಳುಗಟ್ಟಲೆ ಒಂದೆಡೆ ಟೆಂಟ್. ಅಲ್ಲೇ ಊಟ, ವಸತಿ. ಸಹಾಯಕರಿಗೆ ಟೆಂಟ್ನಲ್ಲಿ ವ್ಯವಸ್ಥೆ ಮಾಡಿಕೊಟ್ಟು, ತಾನು ಹತ್ತಿರದ ನಗರದ ಐಷರಾಮಿ ಹೋಟೆಲಿನಲ್ಲಿ ವಿಶ್ರಾಂತಿ ಮಾಡಬಹುದಿತ್ತು. ಆದರೆ ಗಿರೀಶ್ ಎಂದೂ ಆ ತಪ್ಪು ಮಾಡಿಲ್ಲ. 'ದನಿ-ಆಳು' ಸಂಬಂಧ ಇಲ್ಲಿಲ್ಲ. 'ನಮ್ಮ ಸಮಾಜದ ಮಧ್ಯೆ ಇರುವ ಎಲ್ಲಾ ಸಮಸ್ಯೆಗಳು ಈ ರೀತಿಯ ಅಂತರದಿಂದ ಉದ್ಭವವಾಗುತ್ತದೆ' ಎನ್ನುತ್ತಾರೆ.
ಕಳೆದ ವಾರವಷ್ಟೇ ಫೋನಿಸಿದ್ದೆ. ಕುದುರೆಮುಖದ ಹತ್ತಿರ ಸೇತುವೆ ಕೆಲಸ ನಡೆಯುತ್ತಿತ್ತು. 'ನೂರ ಮೂರನೇ ಸೇತುವೆ ನಡೀತಿದೆ, ನೋಡಲು ಬರ್ತೀರಾ' ಅಂತ ಆಹ್ವಾನಿಸಿದರು. ಏನೇ ಸಿಹಿ-ಕಹಿ ಬಂದರೂ ಹೊಸ ಸೇತುವೆಗೆ ಅಡಿಗಲ್ಲನ್ನು ಹಾಕುವಾಗ ಹಿಂದಿನ ಎಲ್ಲವನ್ನೂ ಮರೆತುಬಿಡುತ್ತಾರೆ. ಅದು ಮುಗಿಯುತಾ ಬರುವಾಗ ಮತ್ತೊಂದಕ್ಕೆ ನೀಲನಕ್ಷೆ ತಯಾರಾಗಿ ಬಿಡುತ್ತದೆ.
ನೀರಿಗೆ ಅಡ್ಡವಾಗಿ ಸೇತುವೆ. ನೀರು ಹರಿಯುತ್ತಾ ಇರುತ್ತದೆ. ಜೀವನವೂ ಹಾಗೆ. ಗಿರೀಶರ ಸೇತುವೆ ನಿರ್ಮಾಣವೂ ಹಾಗೆ. ಒಂದು ಸೇತುವೆ ನಿರ್ಮಾಣವಾಗಿ ಸಂಚಾರಕ್ಕೆ ಮುಕ್ತವಾಯಿತೆಂದರೆ ಹಳ್ಳಿಯು ಅಭಿವೃದ್ಧಿಯತ್ತ ಹೆಜ್ಜೆಯಿಟ್ಟಂತೆ. ಈ ಜೀವಮಾನದಲ್ಲಿ ಸೇತುವೆ ಆಗದ ಎಷ್ಟೋ ಹಳ್ಳಿಗಳಲ್ಲಿ 'ಅ' ಅಕ್ಷರದೊಳಗೇ ಸುತ್ತುತ್ತಿದ್ದ ಕಂದಮ್ಮಗಳು 'ಎಬಿಸಿಡಿ' ಕಲಿತದ್ದಿದ್ದರೆ ಅದು ಗಿರೀಶರಿಂದ. ಶತಸೇತುವಿನ 'ಅಧಿಪತಿ'ಗೆ ಅಭಿನಂದನೆ. ಅಭಿವಂದನೆ.
ಹಾ.. ಮರೆತುಬಿಟ್ಟೆ. 'ಶಿವಪುರದ ಸೇತುವೆ ಫೈಲ್ ಏನಾಯಿತು?' ಸಾರ್. ಆ ಕಡೆಯಿಂದ ಗಿರೀಶರ ಉತ್ತರ. 'ಆರು ವರುಷದ ಹಿಂದೆ ಯೋಜನೆ ಮಾಡಿಕೊಟ್ಟಿದ್ದೆ. ಈಗ ಪುನಃ ನವೀಕರಣ ಮಾಡಿ ಕೊಟ್ಟಿದ್ದೇನೆ. ಫೈಲ್ ಚಾಲೂ ಆಗುವುದಕ್ಕೆ ಶುರುವಾಗಿದೆಯಂತೆ. ಬಹುಬೇಗನೆ ಸೇತುವೆ ಆಗುವ ಲಕ್ಷಣ ಕಾಣುತ್ತದೆ' ಎಂದರು. ಅಬ್ಬಾ.. ಅಂತೂ ಶಿವಪುರದ ಸಮಸ್ಯೆಯ ಮೋಕ್ಷಕ್ಕಿನ್ನು ಇಳಿಲೆಕ್ಕ ಅಂತ ಊಹಿಸಬಹುದೋ ಏನೋ.
0 comments:
Post a Comment