Sunday, November 20, 2011

'ಬನ್ನಿ, ತೆಕ್ಕೊಳ್ಳಿ.. ಹತ್ತು ರೂಪಾಯಿಗೆ ಪುಸ್ತಕ'!

ಆಳ್ವಾಸ್ ನುಡಿಸಿರಿಗೆ ನಿನ್ನೆ (13-11-2011) ತೆರೆ. ಕನ್ನಡ ನಾಡು-ನುಡಿಯ ನಿಜಾರ್ಥದ ಹಬ್ಬ. ಪುಸ್ತಕ ಮಳಿಗೆಗಳನ್ನು ಸುತ್ತುತ್ತಿದ್ದೆ. ಅಬ್ಬಾ.. ಒಂದೇ ಕಡೆ ಎಷ್ಟೊಂದು ಪುಸ್ತಕಗಳು. ಆಯ್ಕೆಗೆ ಉತ್ತಮ ಅವಕಾಶ.

ಪುಸ್ತಕ ಖರೀದಿಸಲೆಂದೇ ದೂರದೂರಿನಿಂದ ಆಗಮಿಸಿದ ಅಕ್ಷರ ಪ್ರಿಯರು ಮುಖತಃ ಸಿಕ್ಕಾಗಲೆಲ್ಲಾ, 'ವಾ.. ಎಷ್ಟೊತ್ತಿಗೆ ಬಂದ್ರಿ.. ಇವತ್ತು ಇರ್ತೀರಾ' ಎಂಬ ಉಭಯಕುಶಲೋಪರಿ. 'ಅಬ್ಬಾ.. ಎಷ್ಟೋ ಸಮಯದಿಂದ ಹುಡುಕುತ್ತಿದ್ದ ಪುಸ್ತಕ ಸಿಕ್ತು,' ಎಂಬ ಖುಷಿ. 'ಐದು ಸಾವಿರದ್ದು ತೆಕ್ಕೊಂಡೆ. ಇನ್ನೂ ಬೇಕಿತ್ತು. ಹಣ ತಂದಿಲ್ಲ', ಎಂಬ ನಿರಾಶೆ ಪ್ರಕಟಿತ ಸಂತೋಷ. 'ನೀವು ಎಷ್ಟು ರೂಪಾಯಿಯದ್ದು ತೆಕ್ಕೊಂಡ್ರಿ', ಮರುಪ್ರಶ್ನೆ. 'ವಾ.. ಸೂಪರ್.. ಮೋರ್ ಬುಕ್ಸ್.. ವೆರೈಟಿ ಟೈಟಲ್..', ಕನ್ನಡ ಹಬ್ಬದಲ್ಲಿ ಆಂಗ್ಲದಲ್ಲೇ ಹಠದಿಂದ ಮಾತನಾಡುವ ಟಿಪ್ಟಾಪ್ ಮಂದಿ... ಹೀಗೆ ಒಂದೇ ಸೂರಿನಡಿ ಹಲವು ರುಚಿಯ, ಆಸಕ್ತಿಯ ಸಾಕಾರ.

'ಬನ್ನಿ ಸಾರ್, ಕೇವಲ ಹತ್ತು ರೂಪಾಯಿಗೆ ಪುಸ್ತಕ. ಯಾವುದು ಬೇಕಾದ್ರೂ ತೆಕ್ಕೊಳ್ಳಿ,' ಮಳಿಗೆಯೊಂದರಿಂದ ಕೂಗು. ಒಂದೆಡೆ ಹಳೆ ಪುಸ್ತಕಗಳನ್ನು ಪೇರಿಸಿಟ್ಟಿದ್ದರು. ಮತ್ತೊಂದೆಡೆ ಹುಡುಕುವ ಭರದಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ರಾಶಿ. ತರಕಾರಿಯಂತೆ. 'ಎಂತದ್ದೋ ಹುಡುಕುತ್ತಾರೆ ಸಾರ್, ಹತ್ತು ರೂಪಾಯಿಯಲ್ವಾ. ಒಂದಾದ್ರೂ ಪುಸ್ತಕ ಒಯ್ದರೆ ಇಷ್ಟು ಹೊತ್ತಿಗೆ ಪುಸ್ತಕವೆಲ್ಲಾ ಖಾಲಿಯಾಗಿರುತ್ತಿತ್ತು,' ಹುಬ್ಬು ಗಂಟಿಕ್ಕಿದ ನಿಟ್ಟುಸಿರು.

ಪುಸ್ತಕಗಳಲ್ಲಿ ಕಾದಂಬರಿಗಳದ್ದು ಸಿಂಹಪಾಲು. ಅವರಿಗೆ ಹೊಟ್ಟೆಪಾಡೋ ಇನ್ನೊಂದೋ.. ಹತ್ತು ರೂಪಾಯಿಗೆ ಕೊಡಲು ಮುಂದಾದ ಆ ವ್ಯಾಪಾರಿಯ ಕುರಿತು ಮರುಕವಾದುದಲ್ಲ, ಗೌರವ ಉಂಟಾಯಿತು. 'ಹೌದು ಸಾರ್, ಹೊಸ ಪುಸ್ತಕ ಅಂದ್ರೆ ದರ ಜಾಸ್ತಿ. ಒಂದೊಂದು ಕಾದಂಬರಿಯ ಬೆಲೆ ನೂರು ರೂಪಾಯಿಯಿಂದ ಆರಂಭವಾಗುತ್ತೆ. ಐನೂರೋ, ಆರುನೂರು ತನಕ ಇದೆ. ಇಲ್ಲಿ ಹೊಸ ಕಾದಂಬರಿಗಳು ಸಿಗದಿದ್ದರೂ ಮಾರುಕಟ್ಟೆಯಲ್ಲಿ ಸಿಗದವುಗಳು ಸಿಗುತ್ತೆ,' ಎನ್ನುತ್ತಾ, 'ಹತ್ತು ರೂಪಾಯಿಗೆ ಪುಸ್ತಕ, ಬನ್ನಿ.' ಆತನ ಮಾಮೂಲಿ ವೃತ್ತಿ ಖಯಾಲಿಗೆ ಬಿದ್ದ.

ಹಳೆಯ ಕಾದಂಬರಿಗಳು, ವೈಚಾರಿಕ ಪುಸ್ತಕಗಳು 'ಕಡಿಮೆ ಬೆಲೆ' ಎಂಬ ಕಾರಣಕ್ಕೆ ಸಾಕಷ್ಟು ಅಕ್ಷರ ಪ್ರಿಯರ ಮನೆ ತಲುಪಿವೆ. 'ಒಳ್ಳೆಯ ಯೋಚನೆ ಅಲ್ವಾ, ನನ್ನಲ್ಲೂ ತುಂಬಾ ಪುಸ್ತಕ ಇದೆ. ಒಮ್ಮೆ ಓದಿ ಆಗಿದೆ. ಇನ್ನಾರೂ ಓದುವವರಿಲ್ಲ. ಮಗಳು ಆಂಗ್ಲ ಮಾಧ್ಯಮದಲ್ಲಿ ಓದುತ್ತಿದ್ದಾಳೆ. ಮಗ ಈಗಷ್ಟೇ ಇಂಜಿನಿಯರ್. ಹಾಗಾಗಿ ಇದ್ದ ಪುಸ್ತಕಗಳನ್ನು ಇಂತಹ ಮೇಳದಲ್ಲಿ ಕಡಿಮೆ ಬೆಲೆಗೆ ಮಾರಿದರೆ ಹೇಗೆ,' ಜತೆಗಿದ್ದ ಶಂಕರ ವಿನೋದಕ್ಕೆ ಹೇಳಿದರೂ, ಕಾಲದ ವಿಷಾದ ಅದರಲ್ಲಿದೆ.

ಮನೆಯಲ್ಲಿ ಚಿಕ್ಕದಾದರೂ ಪುಸ್ತಕ ಭಂಡಾರ ಬೇಕು ಎಂದು ಊರು ಸೂರಿನಲ್ಲಿ ಪ್ರತಿಪಾದಿಸಿದ್ದೆ. ಪುಸ್ತಕ ಭಂಡಾರದ ಬಾಗಿಲನ್ನು ತೆಗೆಯಲು ಹರಸಾಹಸ ಪಡುವ ದಿನಮಾನಗಳಿವು. ಶಂಕರನ ಮಾತನ್ನು 'ಶೂನ್ಯವೇಳೆ'ಯಲ್ಲಿ ಯೋಚಿಸಲು ಇರುವುದಲ್ಲ, ಖಂಡಿತ. ಮಗನಿಗೆ, ಮಗಳಿಗೆ ಬೇಡ. ತನಗೆ ವಯಸ್ಸಾಯಿತು. ಇದ್ದ ಪುಸ್ತಕಗಳು ಗೆದ್ದಲು ನುಂಗುವ ಮೊದಲು ಆಸಕ್ತರ ಕೈಗೆ ಇಡುವುದೇ ಪುಣ್ಯದ ಕೆಲಸ ಎಂಬ ನಿಧರ್ಾರ ಶಂಕರನ ಮಾತಿನ ಹಿಂದಿನ ದನಿ.

ಅವನ ವಿಚಾರ ಏನಿದೆಯೋ, ಇಳಿ ಬಿಸಿರಕ್ತದ ಬಹುತೇಕರ ವಿಚಾರವೂ ಭಿನ್ನವಾಗಿಲ್ಲ. 'ಹೊಸ ಪುಸ್ತಕ ಬಿಡಿ, ಇರುವುದನ್ನು ಏನು ಮಾಡುವುದು' ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ. ಪ್ರಶ್ನೆ ಕೇಳಿದವನನ್ನು ಜಾಣ್ಮೆಯ ಉತ್ತರದಿಂದ ಬಾಯಿ ಮುಚ್ಚಿಸಬಹುದು. ಆದು ಸಮಸ್ಯೆಗೆ ಪರಿಹಾರವಲ್ಲ.

'ಮಕ್ಕಳಲ್ಲಿ ಓದುವ ಪ್ರವೃತ್ತಿ ಇಲ್ಲ,' ಎಂದು ಗೊಣಗುವ ಹೆತ್ತವರಾದ ನಾವು ಎಷ್ಟು ಓದುತ್ತೇವೆ ಹೇಳಿ? ಶಾಲೆಗಳಲ್ಲಿ ಓದುವ 'ಹುಚ್ಚನ್ನು' ಹಿಡಿಸುವ ಎಷ್ಟು ವ್ಯವಸ್ಥೆಗಳಿವೆ? ಪುಸ್ತಕದ ಕಪಾಟಿನ ಬೀಗವನ್ನು ತೆರೆಯದ ಎಷ್ಟು ಶಾಲೆಗಳು ಬೇಕು? ಅಧ್ಯಾಪಕರಿಗೆ ಓದುವ ಗೀಳು ಇದೆಯೇ? ಸಮಾರಂಭದಲ್ಲಿ ಹಾರದ ಬದಲು ಪುಸ್ತಕವನ್ನು ನೀಡಿದಾಗ ಮುಖ ಯಾಕೆ ಹುಳಿಹಿಂಡಿದಂತಾಗುತ್ತದೆ?.. ಹೀಗೆ ಪ್ರಶ್ನೆಗಳನ್ನು ಒಂದರ ಕೆಳಗೆ ಇನ್ನೊಂದನ್ನು ಬರೆಯುತ್ತಾ ಹೋದಂತೆ ಪುಟ ಭರ್ತಿಯಾಗುತ್ತದೆ. ದಿಗಿಲಾಗುತ್ತದೆ.

ಬಾಲ್ಯದಿಂದಲೇ ಓದುವ ಗೀಳು ಹುಟ್ಟಿದರೆ, ಪ್ರೌಢರಾದಾಗ ಕೊನೇಪಕ್ಷ ದಿನಪತ್ರಿಕೆಯನ್ನು ಓದುವಷ್ಟಾದರೂ ರೂಪುಗೊಳ್ಳಬಹುದು. 'ಯಾರಿಗೆ ಪುರುಸೊತ್ತುಂಟು ಮಾರಾಯ್ರೆ. ಪೇಪರ್ ಓದಲೇ ಸಮಯವಿಲ್ಲ' ಎನ್ನುತ್ತಾ ಟಿವಿ ಮುಂದೆ ಜಪ್ಪೆಂದು ಕುಳಿತುಕೊಳ್ಳುತ್ತೇವಲ್ಲಾ. ನಾವೇ ಹೀಗಿರುತ್ತಾ ನಮ್ಮ ಮಕ್ಕಳು ಎಷ್ಟು ಪುಸ್ತಕ ಓದಬಹುದು ಹೇಳಿ?

'ನನ್ನ ಮಗನಿಗೆ ಟಿವಿ ಅಂದರೆ ಆಯಿತು' ಎಂದು ಬೀಗುತ್ತೇವೆ. 'ಅವನಿಗೆ ಶಾಲೆ ಪುಸ್ತಕ ಓದಿಯೇ ಆಗುವುದಿಲ್ಲ. ಮತ್ತೆ ಬೇರೆ ಪುಸ್ತಕ ಓದಲು ಎಲ್ಲಿ ಸಮಯವಿದೆ, ಪಾಪ' ಎಂದು ಮಕ್ಕಳ ಎದುರೇ ಪ್ರಶಂಸಿಸುತ್ತೇವೆ. 'ಏನೋ.. ಶಾಲೆ ಪುಸ್ತಕ ಓದಿಯಾಯಿತಾ.. ಅದನ್ನು ಬಿಟ್ಟು ಬೇರೆ ಪುಸ್ತಕ ಓದುತ್ತಿಯೋ' ಎಂದು ಗದರುವ ಅಮ್ಮ. ಮಕ್ಕಳ ಬೌದ್ಧಿಕ ವೃದ್ಧಿಗೆ ಮನೆಮನೆಯಲ್ಲಿ ಕಾವಲು ಪಡೆ.
'ಇಡೀ ದಿನ ಶಾಲೆ ಪುಸ್ತಕವನ್ನು ಎಷ್ಟೂಂತ ಓದುತ್ತಿಯೋ.. ಒಂದರ್ಧ ಗಂಟೆ ತೇಜಸ್ವಿಯವರ ಪರಿಸರ ಕತೆ ಓದೂ' ಎಂದು ಪ್ರೀತಿಯಿಂದ, ಅಭಿಮಾನದಿಂದ ಮಗನ/ಮಗಳ ಕೈಗೆ ಪುಸ್ತಕವನ್ನು ಕೊಡುವ ಅಮ್ಮ/ಅಪ್ಪನನ್ನು ತೋರಿಸ್ತೀರಾ?
ಯಾವಾಗ ಮಕ್ಕಳ ಕೈಗೆ ಪುಸ್ತಕವನ್ನು ಕೊಡುವ ಅಪ್ಪನೋ, ಅಮ್ಮನೋ ರೂಪುಗೊಳ್ಳುತ್ತಾರೋ, ಆ ಮನೆಯಲ್ಲಿ ಪುಸ್ತಕ ಸಂಸ್ಕೃತಿ ಬೆಳೆಯುತ್ತದೆ. ಅಕ್ಷರ ಗೌರವ ಉಂಟಾಗುತ್ತದೆ. ಒಂದೊಂದೇ ಪುಸ್ತಕ ಸೇರಿ ಚಿಕ್ಕ ಗ್ರಂಥಾಲಯವಾದಾಗ ಅಭಿಮಾನವಾಗುತ್ತದೆ. ಆಗ ಸಾಹಿತ್ಯ ಸಮ್ಮೇಳನದ ಪುಸ್ತಕ ಮಳಿಗೆಗಳಿಗೆ ಸುತ್ತಾಡಲು ಅರ್ಹತೆ ಬರುತ್ತದೆ! ಹೀಗಾದಾಗ ಶಂಕರನಂತಹ 'ಅಕ್ಷರಪ್ರೀತಿಯ ಸಾಹಿತಿ'ಗೆ ಬಂದ ವಿಷಾದದ ಕ್ಷಣಿಕ ಎಳೆ ನಮ್ಮ ಭವಿಷ್ಯದಲ್ಲಿ ಖಂಡಿತಾ ಬಾರದು, ಬರಬಾರದು. ಬರಲಾರದು.

0 comments:

Post a Comment