Thursday, August 11, 2011

ಬದುಕಿಗೆ ಶಾಪವಾದ ಭತ್ತದ ಮರೆವು

ದೇಶದಲ್ಲೇ ಏಕದಳ ಧಾನ್ಯಗಳ ಉತ್ಪಾದನೆಯಲ್ಲಿ ಕರ್ನಾಟಕ ಮುಂದು. ಕೇಂದ್ರದಿಂದ ಒಂದು ಕೋಟಿ ರೂಪಾಯಿ ಮೊತ್ತದೊಂದಿಗೆ 'ಕೃಷಿ ಕರ್ಮಣ' ಪ್ರಶಸ್ತಿ ಪ್ರಾಪ್ತಿ. ಈ ಹಿರಿಮೆಯನ್ನು ರಾಜ್ಯದ ಅನ್ನದಾತರಿಗೆ ಮಾಜಿ ಸಿಎಂ ಅರ್ಪಿಸಿದ್ದರು! ಏನೇ ಆಗಲಿ, ಕೋಟಿ ಬಂತಲ್ವಾ, ಸಂತೋಷ! ಸಮ್ಮಾನಕ್ಕೆ ಹಿಗ್ಗು!

ಒಂದೆಡೆ ಪುರಸ್ಕಾರದ ಹಿರಿಮೆ. ಮತ್ತೊಂದೆಡೆ 'ಅಭಿವೃದ್ಧಿ'ಗಾಗಿ ಸಾವಿರಗಟ್ಟಲೆ ಕೃಷಿ ಭೂಮಿಗಳ ಸ್ವಾಧೀನತೆ. ಕೃಷಿಕನಿಗೆ ಮುನ್ಸೂಚನೆ ನೀಡದೆ ಕಂಪನಿಗಳು ಮನೆಯಂಗಳಕ್ಕೆ ನುಗ್ಗುತ್ತಿರುವಾಗ ಪರಿಹಾರ ಬಿಡಿ, ಯಾವ 'ಅರ್ಪಣೆ'ಗಳೂ ನೆರವಿಗೆ ಬರುತ್ತಿಲ್ಲ ಎಂಬುದು ಸ್ಥಾಪಿತವಾದ ಸತ್ಯ.

ಏಕದಳ ಧಾನ್ಯದ ಉತ್ಪಾದನೆ ಕನ್ನಾಡಿನಲ್ಲಿ ಸಾಕಷ್ಟು ಆಗಿದೆ ಎಂಬುದಕ್ಕೆ ಪುರಾವೆ - ಪ್ರಶಸ್ತಿ. ಏಕದಳದಲ್ಲಿ ಭತ್ತವೂ ಸೇರಿತಲ್ವಾ. ಒಂದು ಕಾಲಘಟ್ಟದಲ್ಲಿ ಕರಾವಳಿ ಭತ್ತದ ಕಣಜ. ಬದುಕಿನಲ್ಲಿ ಸಮ್ಮಿಳಿತವಾಗಿದ್ದ ಸಂಸ್ಕೃತಿ. ವಸ್ತುಗಳ ವಿನಿಮಯಕ್ಕೆ ರೂಪಾಯಿಯ ಬದಲಿಗೆ ಭತ್ತ, ಅಕ್ಕಿ ಬಳಕೆ. 'ಯಾವಾಗ ಕೈಗೆ ಕ್ಯಾಲುಕ್ಯುಲೇಟರ್ ಬಂತೋ, ಅಂದಿನಿಂದ ಭತ್ತದ ಕೃಷಿ ಹಿಂದೆ ಸರಿಯಲು ಶುರುವಾಯಿತು. ಲಾಭ ನಷ್ಟದ ಲೆಕ್ಕಾಚಾರಗಳು ಆರಂಭವಾದುವು. ಉಣ್ಣಲು ಅಂಗಡಿಯಿಂದ ಅಕ್ಕಿ ತರುವ ಸ್ಥಿತಿ,' ತಳಿ ತಪಸ್ವಿ ಅಮೈ ದೇವರಾಯರಿಂದ ಕಾಲದ ಕಥನ.

ಮೌನವಾಯಿತು, ಭತ್ತದ ಮಾತು

ಭತ್ತದ ಬೇಸಾಯ ಬದುಕಿನಿಂದ 'ಉದ್ಯಮ'ದತ್ತ ವಾಲಿತು. ಅಡಿಕೆ ಧಾರಣೆ ಇನ್ನೂರು ರೂಪಾಯಿಯ ಗಡಿ ದಾಟಿದ ಒಂದು ಹಂತದಲ್ಲಿ 'ಅರಿವಿಲ್ಲದೆ' ಗದ್ದೆ ಸಂಸ್ಕೃತಿಯ ಪುಟಗಳು ಮುಚ್ಚಿದುವು. ಗದ್ದೆಗಳಲ್ಲಿ ತೋಟಗಳೆದ್ದು ವಿಸ್ತಾರವಾದುವು. ಚಿಕ್ಕಪುಟ್ಟ ಗುಡ್ಡಗಳನ್ನೆಲ್ಲಾ ಮಣ್ಣುಮಾಂದಿ (ಜೆಸಿಬಿ) ನುಂಗಿತು. ಹೆಚ್ಚು ಇಳುವರಿ ನೀಡುವ ಗಿಡಗಳಿಗೆ ಬೇಡಿಕೆ, ನೀಡಿಕೆ. ಹೊಸ ತೋಟಗಳದ್ದೇ ಸುದ್ದಿ. ನಂತರದ ದಿವಸಗಳ ಕತೆ ನಿತ್ಯಾನುಭವ. ಧಾರಣೆ ಇಳಿದು ಇನ್ನೇನು 'ತೋಟವೇ ಬೇಡ' ಎನ್ನುವ ಸ್ಥಿತಿಯಿಲ್ಲಿದ್ದಾಗ, 'ಧಾರಣೆ ಏರಿ' ಸದ್ಯಕ್ಕೆ ನಿರುಮ್ಮಳ.

ಯಾವಾಗ ಗದ್ದೆಗಳು ತೋಟಗಳಾದುವೋ ಅಲ್ಲಿಂದ ಬೇಸಾಯಕ್ಕೆ ಇಳಿಲೆಕ್ಕ. ಕಾರ್ಮಿಕ ಅವಲಂಬನೆಯನ್ನು ಹೆಚ್ಚು ಬೇಡುತ್ತಿದ್ದ ಭತ್ತದ ಕೃಷಿಗೆ ಕಾರ್ಮಿಕ ಅಭಾವವೂ ಥಳಕು ಹಾಕಿತು. 'ಗದ್ದೆ ಬೇಸಾಯ ಪ್ರಯೋಜನವಿಲ್ಲ ಮಾರಾಯ್ರೆ' ಎನ್ನುವ ಮಾತು ನಿತ್ಯ ಮಂತ್ರವಾಯಿತು. 'ಆರ್ಡರ್ ಮಾಡಿದರೆ ಅಕ್ಕಿಯ ಮೂಟೆ ಅಂಗಡಿಯಿಂದ ಬರುತ್ತದೆ' ಎನ್ನುತ್ತಾ, ಕೃಷಿ ಪರಿಕರಗಳು ಅಟ್ಟ ಸೇರಿದುವು. 'ಸಂಸ್ಕೃತಿ' ಎಂಬುದು ನೆನಪಾದಾಗ ಆಡುವ ಮಾತಿನ ಸರಕಾಗಿ ಬದಲಾಯಿತು.

ಸರಿ, ಅಕ್ಕಿ ಅಂಗಡಿಯಿಂದ ಬರುತ್ತದಲ್ವ. ಅಂಗಡಿಗೆ ಎಲ್ಲಿಂದ ಬರಬೇಕು? ಈಚೆಗೆ ಈ ಪ್ರಶ್ನೆಯನ್ನು ಒಂದು ಸಭೆಯಲ್ಲಿ ಮುಂದಿಟ್ಟಾಗ ಒಂದು ಕ್ಷಣ ಮೌನ. 'ಭತ್ತದ ವಿಷಯ ಬಂದಾಗ ಯಾಕೆ ನಾವು ಮೌನವಾಗ್ತೇವೆ' ಎಂದು ಛೇಡಿಸಿದೆ. 'ಭತ್ತ ಬೆಳೆದು ಯಾಕೆ ನಷ್ಟ ಹೊಂದಬೇಕು?, ಉತ್ಪತ್ತಿಗಿಂತ ದುಪ್ಪಟ್ಟು ಖರ್ಚು ಬರುತ್ತದೆ? ಕೆಲಸಕ್ಕೆ ಜನ ಸಿಗುವುದಿಲ್ಲ..' ಇವೇ ಮುಂತಾದ ಅಡ್ಡ ಮಾತುಗಳು ಹಾದು ಹೋದುವು.

ಸಂದು ಹೋದ ಬದುಕಿನಲ್ಲಿ ಭತ್ತದ ಕೃಷಿ ಎಂದೂ ಮೌನವಾಗಲೇ ಇಲ್ಲ. 'ನಾನೀಗ ಕೋಟ್ಯಾಧಿಪತಿ. ನನ್ನಷ್ಟು ಶ್ರೀಮಂತ ಯಾರೂ ಇಲ್ಲ. ಕಾರಣ, ನನ್ನಲ್ಲಿ ವರ್ಷ ಪೂರ್ತಿ ಉಣ್ಣುವಷ್ಟು ಅಕ್ಕಿಯಿದೆ,' ದೇವರಾಯರ ಮನದ ಮಾತಿದು. ಇದು ಭತ್ತದ ಮಾತು. ಅವರಲ್ಲಿ ಎಂದೂ ಭತ್ತ ಮೌನವಾದುದೇ ಇಲ್ಲ. ಅರುವತ್ತಕ್ಕೂ ಮಿಕ್ಕಿ ತಳಿಗಳನ್ನು ಉಳಿಸುತ್ತಲೇ ಇದ್ದಾರೆ.
ರಾಜಧಾನಿಯಲ್ಲಿ ಅಕ್ಕಿಯ ಉತ್ಸವ ನಡೆದಾಗ, 'ಅಕ್ಕಿಯನ್ನು ಹುಡುಕಿಕೊಂಡು' ಬರುವ ಅಮ್ಮಂದಿರ ತುಮುಲ ಅರ್ಥವಾಗುತ್ತದೆ. 'ಅಕ್ಕಿಯನ್ನು ಹುಡುಕಬೇಕೇ? ಅಂಗಡಿಯಲ್ಲಿ ಸಿಗುವುದಿಲ್ವಾ,' ಫಕ್ಕನೆ ರಾಚುವ ಅಡ್ಡ ಮಾತು. ದೋಸೆ, ಕಡುಬು, ಪಾಯಸಗಳಿಗೆ ಹೊಂದುವ; ಔಷಧಿ ಮತ್ತು ಆರೋಗ್ಯದ ಕುರಿತಾಗಿಯೇ ಬೆಳೆಯುತ್ತಿದ್ದ ತಳಿಗಳು ಒಕ್ಕಲೆದ್ದಿವೆ. ಗದ್ದೆಗಳೇ ಇಲ್ಲವೆಂದ ಮೇಲೆ ಭತ್ತವಾದರೂ ಎಲ್ಲಿಂದ ಬರಬೇಕು?

ಗದ್ದೆಗಳು ಮಾಯವಾಗುತ್ತಿವೆ! ಸರಿ, ಅಲ್ಲೆಲ್ಲಾ ಕಟ್ಟಡಗಳು ತಲೆಯೆತ್ತುತ್ತಿವೆ. ಇಂಚಿಂಚು ಅಳೆದು ತೂಗಿ ಮಾರಲಾಗುತ್ತಿವೆ. ಎಲ್ಲೆಲ್ಲಿಂದೋ ಮೇಲ್ಮಣ್ಣು ತಂದು ಗದ್ದೆಯನ್ನು ಎತ್ತರಿಸುವ ಕೆಲಸ ಕಣ್ಣೆದುರೇ ನಡೆಯುತ್ತಿದೆ. ಮುಡಿಗಟ್ಟಲೆ ಅಕ್ಕಿಯನ್ನು ಕೊಡುತ್ತಿದ್ದ ಗದ್ದೆಯಲ್ಲಿ ಹತ್ತಾರು ಮಹಡಿ ಕಾಂಪ್ಲೆಕ್ಸ್ನ ಅಡಿಪಾಯಗಳಿವೆ. ರಸ್ತೆ ಅಗಲೀಕರಣವೂ ಒಂದಷ್ಟು ಗದ್ದೆಗಳನ್ನು ಒಡಲಿಗೆ ಸೇರಿಸಿಕೊಂಡಿವೆ.

ಬೆಂಗಳೂರಿನ ಸಹಜ ಸಮೃದ್ಧವು ಈಚೆಗಿನ ಕೆಲವು ವರುಷಗಳಿಂದ 'ಭತ್ತ ಉಳಿಸೋಣ' ಆಂದೋಳನವನ್ನು ಹಮ್ಮಿಕೊಂಡಿದೆ. ಸಾಕಷ್ಟು ರೈತರು ಮರಳಿ ಗದ್ದೆಗಿಳಿದಿದ್ದಾರೆ. ಜನಪ್ರಿಯ ತಳಿಗಳನ್ನು ಪುನಃ ತಂದು ಅಭಿವೃದ್ಧಿ ಮಾಡುತ್ತಿದ್ದಾರೆ. ಮರೆತುಹೋದ ತಳಿಗಳ ಹುಡುಕಾಟ ಆರಂಭಿಸಿದ್ದಾರೆ. ಆದರೆ ಕರಾವಳಿಯಲ್ಲಿ ಭತ್ತ ಉಳಿಸೋಣ ಅಭಿಯಾನಕ್ಕಿಂತ 'ಗದ್ದೆ ಉಳಿಸೋಣ' ಚಳುವಳಿ ರೂಪುಗೊಳ್ಳಬೇಕೇನೋ? ಆಕಳಿಸಿ ಎದ್ದು ಹೊರಡುವ ಹೊತ್ತಿಗೆ ಗದ್ದೆಗಳನ್ನು ಚಿತ್ರಗಳಲ್ಲಿ ಮಾತ್ರ ನೋಡಬಹುದಷ್ಟೇ.

ಗದ್ದೆಯಾಗಿ ಬದಲಾದ ತೋಟ

ಒಮ್ಮೆ ತೋಟವಾಗಿ ಮಾರ್ಪಟ್ಟ ಗದ್ದೆಗಳು, ಮರಳಿ ಗದ್ದೆಗಳಾಗಲು ಸಾಧ್ಯವಿದೆಯೇ? ಸುಳ್ಯ ತಾಲೂಕು ಮಣಿಕ್ಕಾರದ ಲೋಕೇಶ್ ಪೂಜಾರಿ ಹೊಸ ಸಾಹಸದಲ್ಲಿ ಯಶ ಕಾಣುತ್ತಿದ್ದಾರೆ. ತಾವು ಜಾಗ ಖರೀದಿಸಿ ಎರಡೂವರೆ ವರ್ಷವಾಯಿತು. ಮಳೆಗಾಲದಲ್ಲಿ ಸ್ವಲ್ಪ ಹೆಚ್ಚು ನೀರು ನಿಲ್ಲುವ ಜಾಗದಲ್ಲಿ ತೆಂಗು ಗಿಡಗಳಿದ್ದುವು. ಇಳುವರಿ ಅಷ್ಟಕ್ಕಷ್ಟೇ. ಹಾಗಾಗಿ ಹಡಿಲು ಬಿದ್ದಿತ್ತು.

'ಇಪ್ಪತ್ತೈದು ವರುಷಕ್ಕಿಂತಲೂ ಹಿಂದೆ ಇದು ಭತ್ತದ ಗದ್ದೆಯಾಗಿತ್ತು. ನಂತರ ತೆಂಗಿನ ತೋಟ ಎದ್ದಿತ್ತು' ಎಂದು ಹಿರಿಯರು ಜ್ಞಾಪಿಸುತ್ತಾರಂತೆ. ಲೋಕೇಶರ ಕೈಗೆ ಈ ಜಾಗ ಬಂದಾಗ, 'ಪುನಃ ಗದ್ದೆಯನ್ನಾಗಿ ಮಾರ್ಪಡಿಸಿದರೆ ಹೇಗೆ' ಎಂಬ ಯೋಚನೆ ಬಂದದ್ದೇ ತಡ, ಸೊರಗಿದ ತೆಂಗಿನ ಮರಗಳೆಲ್ಲವನ್ನೂ ಕಡಿದರು. ಗದ್ದೆಯಾಗಿ ಮಾರ್ಪಡಿಸಿದರು.

ಮಳೆಗಾಲದಲ್ಲಿ ನೀರು ಹರಿದು ಹೋಗುವಂತೆ ವ್ಯವಸ್ಥೆ ಮಾಡಿ, ಬೇಸಾಯ ಶುರು ಮಾಡಿದರು. 'ನಿಮಗೆ ಈ ಸಾಹಸ ಬೇಡ. ಅಡಿಕೆಯೋ, ಕೊಕ್ಕೋ ಹಾಕಿ' ಎಂದು ಸಲಹೆ ನೀಡಿದವರೇ ಅಧಿಕ. 'ನಾನು ಬೆಳೆದ ಅಕ್ಕಿಯನ್ನು ನಾನು ಉಣ್ಣಬೇಕು' ಎನ್ನುವ ಛಲದಿಂದ ಬೇಸಾಯ ಆರಂಭಿಸಿದ ಲೋಕೇಶರಿಗೆ ಮೊದಲನೇ ಬೆಳೆಯಲ್ಲೇ ಹಡಿಲು ಗದ್ದೆಯಲ್ಲಿ ಎರಡು ಕ್ವಿಂಟಾಲ್ ಭತ್ತ ಸಿಕ್ಕಿತು. ನಂತರದ ಬೆಳೆಯಲ್ಲಿ ಹನ್ನೆರಡು ಕ್ವಿಂಟಾಲ್. ಈ ವರುಷ ಮೂರನೇ ಬೆಳೆ. ದುಪ್ಪಟ್ಟು ನಿರೀಕ್ಷೆ.

'ಎಷ್ಟೋ ವರುಷದಿಂದ ಹಡಿಲು ಬಿದ್ದ ಗದ್ದೆಯಲ್ವಾ. ಸೆಟ್ ಆಗಲು ಮೂರ್ನಾಲ್ಕು ವರ್ಷ ಬೇಕು' ಎನ್ನುತ್ತಾರೆ ಲೋಕೇಶ್. ಕಳೆದ ವರುಷ ಎಂಟೂವರೆ ಕ್ವಿಂಟಾಲ್ ಅಕ್ಕಿ. 'ವರ್ಷಪೂರ್ತಿ ಉಣ್ಣುವುದಕ್ಕೂ ಸಾಕಾಗಿ, ಸ್ನೇಹಿತರಿಗೆ ಹಂಚಿದ್ದೇನೆ' ಎನ್ನುತ್ತಾರೆ. ದೇವರಾಯರ ಮಾತು ಲೋಕೇಶರ ಗದ್ದೆ ಸಹವಾಸದಲ್ಲಿ ರಿಫ್ಲೆಕ್ಟ್ ಆಗಿ ಕಾಣುತ್ತದೆ.

'ಆರ್ಥಿಕವಾಗಿ ನಷ್ಟವೆಂದೇ ಲೆಕ್ಕ ಹಾಕೋಣ. ಆದರೆ ನಾವು ಬದುಕುವುದು ಯಾಕೆ? ಹೊಟ್ಟೆಪಾಡಲ್ವಾ. ಹೊಟ್ಟೆ ತುಂಬಿದ ಬಳಿಕವೆ ಇತರ ಉದ್ಯಮವೋ, ಕೈಗಾರಿಕೆಯೋ..' ಲೋಕೇಶ್ ಪ್ರತಿಪಾದಿಸುತ್ತಾರೆ. ಭತ್ತದ ವಿಚಾರದಲ್ಲಿ ಇತರರಿಂದ ಬರುವ ಯಾವುದೇ ಅಡ್ಡ ಮಾತುಗಳನ್ನು ಲೋಕೇಶ್ ಕೇಳಿಲ್ಲ. ಅಡಿಕೆ ಮತ್ತು ಇತರ ಆದಾಯಗಳಿದ್ದರೂ, 'ಭತ್ತ ಬೆಳೆಯಬೇಕು, ಉಣ್ಣಬೇಕು' ಎಂಬ ಅರಿವು ಅವರಲ್ಲಿ ಮೂಡಿತ್ತಲ್ವಾ, ಅದರಲ್ಲಿ ನಮಗೂ ಸಂದೇಶ ಉಂಟಲ್ವಾ!


ಹಡಿಲು ಗದ್ದೆಗೆ ಮರುಹುಟ್ಟು

ಸುಳ್ಯ ಸನಿಹದ ಅರಂಬೂರಿನ ತ್ರಯಂಬಕಾಶ್ರಮದ ನಿತ್ಯಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಬೂಡು ವಾಲಸರಿ ಗದ್ದೆಯಲ್ಲಿ ಸಾಮೂಹಿಕ ನಾಟಿ ಮಾಡುವ ಕೆಲಸ ಕಳೆದ ವರುಷದಿಂದ ಆರಂಭವಾಗಿದ್ದು, ಈ ವರ್ಷವೂ ಮುಂದುವರಿದೆ. 'ಅನ್ನದ ಕಾರಣದಿಂದ ನಾವು ದಾಸ್ಯದ ಕಡೆಗೆ ವಾಲುತ್ತಿದ್ದೇವೆ. ನಾವೂ ಅನ್ನ ಬೆಳೆದು ಸ್ವಾವಲಂಬಿಯಾಗಬೇಕು' ಎನ್ನುವುದು ಸ್ವಾಮೀಜಿ ಸಂದೇಶವೂ ಹೌದು, ಭತ್ತ ಕೊಡುವ ಎಚ್ಚರಿಕೆಯೂ ಹೌದು. ಕುಮಟಾ ತಾಲೂಕಿನ ಮದ್ಗುಣಿಯಲ್ಲೂ ಪಾಳು ಬಿದ್ದಿದ್ದ ಗದ್ದೆಗಳು ಕಾಯಕಲ್ಪಗೊಂಡು, ಸಾಮೂಹಿಕ ನಾಟಿಯಾದ ಸುದ್ದಿ ಬಂದಿದೆ.

ಹಡಿಲು ಬಿದ್ದ ಗದ್ದೆಗೆ ಮರುಹುಟ್ಟು ಕೊಡುವ ಕೆಲಸ ಸದ್ದಿಲ್ಲದೆ ನಡೆಯುತ್ತಿದೆ. ಬದುಕಿನಿಂದ ಕಳಚಿಕೊಂಡ ಭತ್ತದ ಸಹವಾಸ ನಿಧಾನಕ್ಕೆ ಬೆಸೆಯುತ್ತಿದೆ. ಕಾಂಚಾಣದ ಝಣಝಣ ಸದ್ದಿನಬ್ಬರ ಹೆಚ್ಚಾದರೂ, ಹೊಟ್ಟೆಗೆ ಬೇಕಾದುದು ಅನ್ನ ತಾನೆ. 'ಭತ್ತದ ಮರೆವು ಭವಿಷ್ಯಕ್ಕೊಂದು ಕರಾಳ ಕರೆಗಂಟೆ' ಎಂದ ನಾಡೋಜ ಡಾ. ನಾರಾಯಣ ರೆಡ್ಡಿಯವರ ಮಾತು, ನಾಡಿನ ದೊರೆಗಳಿಗೆ ಢಾಳಾಗಿ ಕಂಡರೂ, ಹೊಟ್ಟೆ ಹಸಿವಿನ ಮಂದಿ ಮರೆಯುವಂತಹುದಲ್ಲ.

ಎಸ್ಸೆಮ್ಮೆಸ್: 'ಇನ್ನಾರು ತಿಂಗಳಲ್ಲಿ ಮತ್ತೆ ಬರ್ತೆನೆ'-ಮಾಜಿ ಸಿಎಂ ಹೇಳಿಕೆ. 'ಭ್ರಷ್ಠಾಚಾರ ಸಹಿಸಲ್ಲ' ಎಂದಿದ್ದ ಲೋಕಾಯುಕ್ತರ ಮಾತು ಹುಸಿಯಾಗಬಹುದೇ?

(೯-೮-೨೦೧೧, ಉದಯವಾಣಿಯಲ್ಲಿ ಪ್ರಕಟವಾದ "ನೆಲದ ನಾಡಿ-೩" ಅಂಕಣ)

0 comments:

Post a Comment