ಮಂಡ್ಯ ಶಿವಳ್ಳಿಯ ಬೋರೇಗೌಡರು ಎಂಟು ವರುಷದ ಹಿಂದೆ ಭತ್ತದ ತಳಿ ಸಂರಕ್ಷಕ ಅಮೈ ದೇವರಾವ್ ಅವರಲ್ಲಿಗೆ ಬಂದಿದ್ದರು. ಎರಡು ಎಕ್ರೆಯಲ್ಲಿ ಮೂವತ್ತಕ್ಕೂ ಅಧಿಕ ತಳಿಗಳನ್ನು ನೋಡಿದ್ದರು. ಭತ್ತದ ಸಂಸ್ಕೃತಿ, ಕೃಷಿಕ್ರಮಗಳನ್ನು ತಿಳಿಸಿದ ರಾಯರು ನಾಲ್ಕು ವಿಧದ ಭತ್ತದ ಬೀಜಗಳನ್ನು ನೀಡಿ ಗೌಡರನ್ನು ಉತ್ತೇಜಿಸಿದ್ದರು.
ಫಲಶ್ರುತಿಯಾಗಿ, ಶಿವಳ್ಳಿಯ ಗದ್ದೆಯಲ್ಲೀಗ ವಿವಿಧ ತಳಿಗಳ ಸಮೃದ್ಧತೆ. ನಾಲ್ಕು ಎಕರೆ ಗದ್ದೆಯಲ್ಲಿ ಸುಮಾರು 144 ಕ್ವಿಂಟಾಲ್ ಭತ್ತ ಉತ್ಪಾದನೆ. ಅದರಲ್ಲಿ 20 ಕ್ವಿಂಟಾಲ್ ಭತ್ತವನ್ನು ಬೀಜವಾಗಿ ಮಾರುತ್ತಾರೆ. ಹದಿಮೂರು ಕ್ವಿಂಟಾಲ್ ಮನೆಬಳಕೆಗೆ ಉಪಯೋಗ. ಮಿಕ್ಕಿದ್ದನ್ನು ಅಕ್ಕಿ ಮಾಡಿಸಿ ಗ್ರಾಹಕರಿಗೆ ವಿತರಣೆ.
ಬೋರೇಗೌಡರ ಎಂಟು ವರ್ಷದ ಸಾಧನೆಯ ಹಿಂದೆ ಅಚಲ ನಿರ್ಧಾರವಿದೆ. ಭತ್ತದ ಸಂಸ್ಕೃತಿಯನ್ನು ಪುನಃ ಸ್ಥಾಪಿಸುವ ಮನಸ್ಸಿದೆ. ಭವಷ್ಯದ ಆಹಾರ ಸುರಕ್ಷತೆಯ ನೋಟವಿದೆ.
ಗೌಡರಿಗೆ ಹನ್ನೆರಡು ಎಕ್ರೆ ಜಮೀನು. ಕೃಷಿಯೇ ಮುಖ್ಯ ಕಾಯಕ. ತಂದೆ ಸಿದ್ದೇಗೌಡ, ತಾಯಿ ಸಣ್ಣಮ್ಮ. ಮೂರು ಮಂದಿ ಗಂಡು. ನಾಲ್ಕು ಮಂದಿ ಹೆಣ್ಣುಮಕ್ಕಳು. ರಾಗಿ, ಜೋಳ ಬೆಳೆವ ಜಮೀನು. ಯಾವಾಗ ಕನ್ನಂಬಾಡಿ ನೀರು ಶಿವಳ್ಳಿಗೆ ಹರಿಯಿತೋ, ಅಲ್ಲಿಂದ ಭತ್ತದೊಲವು.
ಆರಂಭದಲ್ಲಿ ರಾಸಾಯನಿಕ ಬಳಕೆ. ನಿತ್ಯ ಒಂದಲ್ಲ ಒಂದು ಅನಾರೋಗ್ಯ. ರಾಸಾಯನಿಕ ಪರಿಣಾಮ ಅರಿವಾದಂತೆ ಸಾವಯವಕ್ಕೆ ಒತ್ತು. ಕನ್ನಾಡಿನಾದ್ಯಂತ ಕೃಷಿಕರ ಭೇಟಿ. ನೈಸರ್ಗಿಕ ಕೃಷಿಯತ್ತ ಅಧ್ಯಯನ. ಬೆಂಗಳೂರಿನ ಸಹಜ ಸಮೃದ್ಧದ ಸಂಪರ್ಕ. ಅವರಿಂದ ನಾಟೀ ಬೀಜದ ಲಭ್ಯತೆ. ಈಗ ಎಪ್ಪತ್ತು ವೆರೈಟಿ ಭತ್ತದ ಒಡೆಯ. ಪೂರ್ತಿ ಸಾವಯವ.
ಸಹಜ ಸಮೃದ್ಧದ ಮೂಲಕ ಮುನ್ನೂರು ವಿಧದ ಭತ್ತವನ್ನು ಬೆಳೆಸಿ ಸಂರಕ್ಷಿಸುತ್ತಿರುವ ಒರಿಸ್ಸಾದ ನಟವರ ಸಾರಂಗಿಯವರ ಸಾಧನೆ ವೀಕ್ಷಣೆ. ಭತ್ತ ಸಂರಕ್ಷಣೆಯ ನಿರ್ಧಾರ ಮತ್ತಷ್ಟು ಗಟ್ಟಿಯಾಯಿತು. 'ಭತ್ತ ಉಳಿಸಿ ಆಂದೋಳನ'ದತ್ತ ಹೆಚ್ಚು ಆಸಕ್ತರಾದ ಗೌಡರು, ತನ್ನ ಹೊಲದಲ್ಲೂ ಕ್ಷೇತ್ರೋತ್ಸವ ಏರ್ಪಡಿಸಿದರು.
ಭತ್ತದ ಬೀಜದ ಕೊರತೆಯನ್ನು ಮನಗಂಡ ಬೋರೇಗೌಡರು, ಉತ್ತಮ ಬೀಜದ ಉತ್ಪಾದನೆಗಾಗಿ ಕಾಳಜಿ ವಹಿಸಿದರು. ನಾಟಿ ಭತ್ತದ ತಳಿಗಳಿಗೆ ಜೀವಾಮೃತವೇ ಗೊಬ್ಬರ. ಕೃಷಿ ಇಲಾಖೆ ಪೋಷಿತ 'ಕಾಮಧೇನು ಕೃಷಿಕರ ಸಂಘ'ದಿಂದ ಬೀಜ ಹಂಚುವಿಕೆ.
ಒಂದಿನ ಹೊಲದಲ್ಲಿ ಓಡಾಡುವಾಗ ಎರಡು ತೆನೆಗಳ ಬಣ್ಣ, ಗಾತ್ರ, ಪ್ರಮಾಣ ಉಳಿದವುಗಳಿಗಿಂತ ಭಿನ್ನವಾಗಿರುವುದನ್ನು ಕಂಡರು. ಅವರೆಡನ್ನು ಕಟಾವಿನ ವೇಳೆ ತೆಗೆದಿಟ್ಟು, ಮುಂದೆ ಪ್ರತ್ಯೇಕ ಮಡಿಯಲ್ಲಿ ಬಿತ್ತಿದರು. ಬಣ್ಣ, ಆಕಾರದಲ್ಲಿ ಭಿನ್ನವಾಗಿ ಬೆಳೆದ ಎರಡು ತೆನೆಯಿಂದ ಅರ್ಧ ಸೇರು ಕಾಳು ಸಿಕ್ಕಿತ್ತು. ಮುಂದಿನ ಋತುವಿನಲ್ಲಿ ಪುನಃ ಬಿತ್ತಿ ಅಭಿವೃದ್ಧಿ. 'ಕಣದ ತುಂಬ' ಎಂಬ ನಾಮಕರಣ. ಇಂತಹುದೇ ಅನುಭವದಲ್ಲಿ ಇನ್ನೆರಡು ತೆನೆ ಸಿಕ್ಕಿ ಅವಕ್ಕೆ 'ಸಿದ್ದಸಣ್ಣ' ಎಂಬ ಹೆಸರಾಯಿತು.
ಭತ್ತ ಬೆಳೆವ ಋತುವಿನಲ್ಲಾದರೆ ನೋಡಲು ಸಿಗುತ್ತದೆ. ಉಳಿದ ಸಮಯದಲ್ಲಿ? ಅದಕ್ಕಾಗಿ 'ಭತ್ತ ಮ್ಯೂಸಿಯಂ' ರೂಪೀಕರಣ. ಭತ್ತದ ಕುರಿತಾದ ಗೋಡೆ ಬರೆಹಗಳು. ವಿವಿಧ ಫಲಕಗಳು. ಮೂಲೆಗುಂಪಾಗುತ್ತಿರುವ ನಲವತ್ತು ಜಾತಿಯ ರಾಗಿ ಹಾಗೂ ಸಿರಿಧಾನ್ಯಗಳು ಕೂಡಾ. ಇದು ದೇಶದ ಮೊಟ್ಟ ಮೊದಲ ರೈತರೊಬ್ಬರ 'ಭತ್ತ ಮ್ಯೂಸಿಯಂ'.
ಬೋರೇಗೌಡರ ಭತ್ತದ ಸಾಧನೆಯನ್ನು ಧಾರವಾಡದ ಕೃಷಿ ಮಾಧ್ಯಮ ಕೇಂದ್ರವು 'ಬೀಜಸ್ವಾತಂತ್ರ್ಯದ ಕಲ್ಪನೆಯನ್ನು ಸಾಕಾರಗೊಳಿಸಿದ ಭತ್ತದ ಬೋರೇಗೌಡರು' ಎಂಬ ಪುಸ್ತಿಕೆಯೊಂದರಲ್ಲಿ ಹಿಡಿದಿಟ್ಟಿದೆ. ಬೆಂಗಳೂರಿನ ಸೀಮ ಜಿ.ಪ್ರಸಾದ್ ಅಕ್ಷರ ರೂಪ ನೀಡಿದ್ದಾರೆ. ಒಂದೇ ಟೇಕ್ನಲ್ಲಿ ಓದಬಹುದಾದ ಪುಸ್ತಕ. ಬೆಲೆ ಇಪ್ಪತ್ತು ರೂಪಾಯಿ.
ಪುಸ್ತಕ ಆಸಕ್ತರಿಗೆ ವಿಳಾಸ: ಕೃಷಿ ಮಾಧ್ಯಮ ಕೇಂದ್ರ, 119, 1ನೇ ಮುಖ್ಯರಸ್ತೆ, 4ನೇ ಅಡ್ಡರಸ್ತೆ, ನಾರಾಯಣಪುರ, ಧಾರವಾಡ 580 008 - ದೂರವಾಣಿ 0836-2444736.
0 comments:
Post a Comment