Tuesday, July 26, 2011

ಅನ್ನ ಕೊಡುವ ನೆಲದ ಕೂಗು

'ಸರಕಾರಕ್ಕೆ ಕೃಷಿ ಭೂಮಿ ನೀಡದೆ ವಿರೋಧಿಸಿದರೆ ಅಭಿವೃದ್ಧಿ ಹೇಗೆ ಸಾಧ್ಯ,' ಪುಟ್ಟಕ್ಕನ ಹೈವೇ ಸಿನೆಮಾ ವೀಕ್ಷಿಸಿದ ಬಳಿಕ ವಿದ್ಯಾರ್ಥಿನಿಯೋರ್ವಳ ಪ್ರಶ್ನೆ. ಈ ಪ್ರಶ್ನೆಗೆ ಪೂರಕವಾಗಿ ಕೃಷಿ ಸಚಿವರ ಹೇಳಿಕೆಯನ್ನು ಗಮನಿಸಿ - 'ರಾಜ್ಯದ ಅಭಿವೃದ್ಧಿಗೆ ಕೈಗಾರಿಕೆಗಳು ಬರಬೇಕು. ರೈತರಿಂದ ಭೂಮಿ ವಶಪಡಿಸಿಕೊಳ್ಳುವುದು ಅನಿವಾರ್ಯ. ಕೈಗಾರಿಕೆಗಳು ಬರುವುದರಿಂದ ರಾಜ್ಯದ ಅಭಿವೃದ್ಧಿ ಸಾಧ್ಯ.'

ವಿದ್ಯಾರ್ಥಿನಿಯ ಪ್ರಶ್ನೆಯಲ್ಲಿ ಲೋಕಜ್ಞಾನದ ಕೊರತೆ. ಸಚಿವರ ಮಾತಲ್ಲಿ ಶೀಘ್ರಲಾಭದ ಭ್ರಮೆ. ಅಭಿವೃದ್ಧಿಯ ವಿಚಾರ ಬಂದಾಗ, ಒಂದೋ ಕೃಷಿ ಭೂಮಿಯ ಸ್ವಾಧೀನತೆ; ಇಲ್ಲ, ರೈತರನ್ನು ಒಕ್ಕಲೆಬ್ಬಿಸುವ ಪ್ರಕ್ರಿಯೆ. ಸಾರ್ವಜನಿಕ ವಿರೋಧವು ಕುರ್ಚಿಗೆ ಕುತ್ತು ತಂದಾಗ ಯೋಜನೆಯ ಪೈಲ್ ಮುಚ್ಚುತ್ತದೆ. ಸಮರ್ಥನೆಗಳ ಮಹಾಪೂರ ಹರಿಯುತ್ತದೆ.

ಬದುಕು ಹಸನಾಗುತ್ತದೆ ಅಂದಾಗ ಅಭಿವೃದ್ಧಿ ಯಾರಿಗೆ ಬೇಡ? ಕನ್ನಾಡು ಕಾಣುವ 'ಅಭಿವೃದ್ಧಿ' ಎಂತಹುದು? ಯೋಚನೆಗಳ ಹಿಂದೆ ಬಂಡವಾಳದ ಆಳ್ತನವಿದೆ, ಕಾಣದ ಮುಖಗಳ ಬಿಗಿಗಳಿವೆ, ಕಣ್ಣೀರಿಗೂ ಕರಗದ ಹೃದಯಗಳಿವೆ, ರಾಜಕಾರಣದ ಕಟಾಕ್ಷವಿದೆ. ಹೊರಪ್ರಪಂಚಕ್ಕೆ ಕಾಣದೇ ಇರುವ, ಮಾಧ್ಯಮಗಳ ಅರಿವಿಗೆ ಬಾರದ ಮಾತುಗಳಿವೆ. ಹಾಗಾಗಿ ವಿದ್ಯಾರ್ಥಿನಿಯ ಪ್ರಶ್ನೆ ಸಹಜ. ಪಾಠದಲ್ಲಿ ಉರುಹೊಡೆದ ಅಭಿವೃದ್ಧಿಯ ವ್ಯಾಖ್ಯೆಯೇ ಬೇರೆ, ಪ್ರಸ್ತುತ ಆಗುತ್ತಿರುವ ಸ್ಥಿತಿಯೇ ಬೇರೆ.

ರೈತ ಹಿತದ ಮಂತ್ರದೊಂದಿಗೆ ಅಭಿವೃದ್ಧಿಗಾಗಿ ಭೂಸ್ವಾಧೀನತೆ. ತಾನು ನಂಬಿದ, ಬದುಕನ್ನು ಕಟ್ಟಿಕೊಟ್ಟ ಭೂಮಿಯನ್ನು 'ಪುಡಿಗಾಸಿ'ಗೆ ಮಾರಿ ಅಲೆಮಾರಿ ಬದುಕನ್ನು ಅಪ್ಪಿಕೊಳ್ಳುವ ರೈತಕುಟುಂಬ. ಸೊಂಟತ್ರಾಣ, ಕಂಠತ್ರಾಣವುಳ್ಳವರ ಕಿಸೆಯೇನೋ ಭದ್ರ. ಸೋಗಿಲ್ಲದ ಅಪ್ಪಟ ಪ್ರಾಮಾಣಿಕ ಮನಸ್ಸುಗಳಿಗೆ ಹುನ್ನಾರಗಳು 'ಆಭಿವೃದ್ಧಿ'ಯಾಗಿಯೇ ಕಾಣುತ್ತದೆ. ಕಾಣುವ ವ್ಯವಸ್ಥೆ ರೂಪಿತವಾಗುತ್ತದೆ. ಕಳೆದುಕೊಂಡ ನೆಲಕ್ಕೆ ಸಮನಾಗಿ ಪರಿಹಾರವೋ, ಪುನರ್ವಸತಿಯೋ ಸಿಕ್ಕರೆ ಓಕೆ. ಇಲ್ಲದಿದ್ದರೆ ಉಟ್ಟ ಬಟ್ಟೆ, ಹೋದದ್ದೇ ಊರು.

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಸಿನೆಮಾ 'ಪುಟ್ಟಕ್ಕನ ಹೈವೇ'ಯು 'ಅಭಿವೃದ್ಧಿ'ಯ ಹಿಂದಿನ ವ್ಯವಸ್ಥಿತ ಮುಖಗಳನ್ನು ಬಯಲು ಮಾಡುತ್ತದೆ. ಸುತ್ತಲಿನ ವಿದ್ಯಮಾನಗಳ ಕುರಿತು ಅಪ್ಡೇಟ್ ಆಗದೆ ಸಿನಿಮಾ ನೋಡಿದರೆ ವಿದ್ಯಾರ್ಥಿನಿಯ ಪ್ರಶ್ನೆ ನಮ್ಮಲ್ಲೂ ಹೊಳೆದೀತು.

ಪುಟ್ಟಕ್ಕ ಸಿನಿಮಾ ನಾಯಕಿ. ಬಿಸಲಳ್ಳಿಯ ರೈತ ಮಹಿಳೆ. ಸರಕಾರದ 'ಹೈವೇ' ಯೋಜನೆಗೆ ನೆಲ ಕಳೆದುಕೊಂಡ ನಿರ್ಭಾಗ್ಯೆ. ಅವಳ ಪಾಲಿಗೆ ಸರಕಾರಿ ಕಚೇರಿಗಳೂ ಮುಚ್ಚಿದ ಬಾಗಿಲು. ಜತೆಯಲ್ಲಿರುವ ನಂಬಿಗಸ್ಥರೆಲ್ಲರೂ ಸಮಯಸಾಧಕರಾಗಿ ಆಕೆಯ ಸಂಪಾದನೆಯನ್ನು ಬಾಚಿಕೊಳ್ಳುತ್ತಾರೆ. ಎಷ್ಟೋ ವರ್ಷಗಳಿಂದ ತಾನು ವಾಸಿಸುವ ಭೂಮಿಗೆ ಹಕ್ಕುಪತ್ರವಿಲ್ಲದ ಕಾರಣ ಪರಿಹಾರ ವಂಚಿತೆಯಾಗಿ, ದೊರೆಗಳಲ್ಲಿ ನಿವೇದಿಸಲು ರಾಜಧಾನಿ ಸೇರಿದಾಗ ಸರಕಾರವೇ ಬದಲಾಗುತ್ತದೆ. ಎರಡ್ಮೂರು ತಿಂಗಳು ಕಳೆದು ಪುನಃ ಹಳ್ಳಿ ಸೇರಿದಾಗ ಪುಟ್ಟಕ್ಕನ ಮನೆಯಿದ್ದಲ್ಲಿ ಡಾಬಾ ತೆರೆದಿತ್ತು. ಮಗಳು ಅಡ್ಡದಾರಿ ಹಿಡಿದಿದ್ದಳು. ಈಚೆ ನೆಲವೂ ಇಲ್ಲ, ಆಚೆ ಬದುಕೂ ಇಲ್ಲ.

ಇದು ಪುಟ್ಟಕ್ಕ ಒಬ್ಬಳ ಕತೆಯಲ್ಲ. ನಮ್ಮೆಲ್ಲರ ಕತೆ, ವ್ಯಥೆ. ನೆಮ್ಮದಿಯಿಂದಿದ್ದ ಹಳ್ಳಿಯಲ್ಲಿ ಸರ್ವೇ ಕಾರ್ಯ ಮಾಡುವಾಗ 'ಹೈವೇ ಬರುತ್ತೆ' ಖುಷಿ ಪಟ್ಟವರೆಷ್ಟೋ? 'ವ್ಯವಸಾಯ ಮಾಡುವುದಕ್ಕಿಂತ ವ್ಯಾಪಾರ ಮಾಡುವುದೇ ಲೇಸು' ಎನ್ನುವವರೆಷ್ಟೋ? ಅಮಾಯಕರನ್ನು ಹಿಂಡುವ ಮಧ್ಯವರ್ತಿಗಳು ಹುಟ್ಟಿಕೊಂಡವರೆಷ್ಟೋ? ಇವರ ಹೊಟ್ಟಗಿಳಿದು ಕರಗಿದ ನಂತರವೇ ಶೇಷ ಇತರರ ಪಾಲು. ನೆಲ ಕಳೆದುಕೊಂಡವರಿಗೆ ಪುಡಿಗಾಸು. ಪುಟ್ಟಕ್ಕನಂತಹ ಅಮ್ಮಂದಿರ ನೆಲೆಯಿಲ್ಲದ ಬದುಕು ದಾಖಲಾಗುವುದಿಲ್ಲ. ಗಮನಕ್ಕೂ ಬರುವುದಿಲ್ಲ.

ಇರಲಿ. ಸಿನೆಮಾಕ್ಕೆ ಬರೋಣ. ಪ್ರಕೃತ ಕನ್ನಾಡಿನಲ್ಲಿ ಕೃಷಿ ನೆಲದ ಮೇಲೆ ನಡೆಯುವ ಕಾಂಚಾಣದ ಕುಣಿತದ ಫ್ಲ್ಯಾಶ್ಬ್ಯಾಕ್. ನೆಲ ನುಂಗುವ ಮಂದಿಯ ಪ್ರತಿನಿಧಿಯಾಗಿ ಇಲ್ಲಿ ನಟರಿದ್ದಾರೆ ಅಷ್ಟೆ. ವಾಸ್ತವದಲ್ಲಿ ಮಾತುಗಳೆಲ್ಲಾ ಮೌನಗಳಾದರೆ, ಸಿನೆಮಾದಲ್ಲಿ ಅವಕ್ಕೆ ಮಾತು ಕೊಟ್ಟಿದ್ದಾರೆ.

ಇನ್ನೊಬ್ಬಳು ವಿದ್ಯಾರ್ಥಿನಿಯ ಚೋದ್ಯ. - 'ಸಿನೆಮಾದ ಎಂಡಿಂಗ್ ಪಾಸಿಟಿವ್ ಮಾಡಬಹುದಿತ್ತಲ್ವಾ?'. ನಿರ್ಮಾಪಕ ಬಿ. ಸುರೇಶ್ ಹೇಳುತ್ತಾರೆ, 'ಚಿತ್ರದಲ್ಲಿ ಸಮಸ್ಯೆಗೆ ಉತ್ತರ ಕೊಟ್ಟರೆ ಪ್ರೇಕ್ಷಕ ಸಂತೋಷಪಡುತ್ತಾನೆ. ಮರೆತುಬಿಡುತ್ತಾನೆ. ಈ ಚಿತ್ರದ ಹೂರಣ ಮರೆತುಬಿಡುವಂತಹುದಲ್ಲ. ನಾನೇ ಉತ್ತರ ಹೇಳಿದ್ರೆ ಒಂದು ಪಕ್ಷ (ರಾಜಕೀಯ ಅಲ್ಲ!) ಆಗಿ ಬಿಡ್ತೇನೆ. ಪಕ್ಷ ವಹಿಸಿದರೆ ಬ್ರಾಂಡ್ ಆಗ್ತೇನೆ. ಹಾಗಾಗಕೂಡದು ಎಂಬುದಕ್ಕಾಗಿ ಪುಟ್ಟಕ್ಕನ ಸಮಸ್ಯೆಗೆ ನೀವೇ ಉತ್ತರ ಕಂಡುಕೊಳ್ಳಿ. ಇದು ನಿಮ್ಮೆಲ್ಲರ ಸಮಸ್ಯೆ' ಎಂದರು.

ಈ ಪ್ರಶ್ನೆಗೆ 'ಕೇಳಿದಷ್ಟು ಕ್ರಯಕ್ಕೆ ಭೂಮಿಯನ್ನು ಕೋಡೋದು, ಮಧ್ಯವರ್ತಿಗಳ ಕೈಗೊಂಬೆಯಾಗುವುದು, ಸಿಕ್ಕ ಹಣದಲ್ಲಿ ಹೊಸ ಬದುಕನ್ನು ರೂಪಿಸುವುದು. ಕೊನೆಗೆ ವ್ಯವಸ್ಥೆಯೊಂದಿಗೆ ರಾಜಿ ಮಾಡಿಕೊಂಡು ಹೇಗೇಗೋ ಬದುಕುವುದು' ಇವೇ ಮುಂತಾದ ಉತ್ತರಗಳು ಧುತ್ತೆಂದು ಹಾದುಬಿಡುತ್ತವೆ. ಅಷ್ಟೇ ಅಲ್ವಲ್ಲ. ಕೃಷಿ ನೆಲವನ್ನು ನುಂಗುವ ಅಭಿವೃದ್ಧಿ ಅನಿವಾರ್ಯವೇ? ಇದರಿಂದ ಊರು ಉದ್ದಾರವಾಗುವುದೇ? ಅಭಿವೃದ್ಧಿ ಅನಿವಾರ್ಯ ಎಂದಿಟ್ಟುಕೊಳ್ಳೋಣ, ಆಗ ಭೂರಹಿತರಿಗೆ ನ್ಯಾಯ ಸಿಕ್ಕಿದೆಯೇ? ಇವೇ ಮುಂತಾದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತದೆ. ಪ್ರಕೃತ ಹಾಗಿಲ್ಲ. ವಾಸ್ತವ ಸಮಸ್ಯೆಯ ಪ್ರತಿನಿಧಿಯಾಗಿ ಪುಟ್ಟಕ್ಕ ನಮ್ಮೆದುರಿಗಿದ್ದಾಳೆ. ಉತ್ತರ ನಾವೇ ಕಂಡುಕೊಳ್ಳಬೇಕೆಂಬುದು ನಿರ್ಮಾಪಕರ ಆಶಯ.

ಕಳೆದೊಂದು ದಶಕದಲ್ಲಿ ಹೈವೇ ನಿರ್ಮಾಣದಂತಹ ಕೆಲಸಗಳಿಗೆ ಮೊದಲ ಮಣೆ. ಗಜಗರ್ಭ ಗಾತ್ರದ ಬಂಡವಾಳ ಬೇಡುವ ವ್ಯವಸ್ಥೆ. ಹಳ್ಳಿಯ ಮಂದಿ ನೋಡದೇ ಇದ್ದಂತಹ ಯಂತ್ರಗಳು, ಸೇತುವೆಗಳು, ರಸ್ತೆಗಳು, ಅದರ ಮೇಲೆ ವೇಗವಾಗಿ ಸಾಗುವ ವಾಹನಗಳನ್ನು ರಸ್ತೆಯಂಚಿನ ಬೇಲಿಯ ಹೊರಗೆ ನೋಡಿ ನಿಬ್ಬೆರಗಾಗುವ 'ಸುಖ'! ಹೊಟ್ಟೆಪಾಡಿಗಾಗಿ ಇದ್ದ ಕಾಸಿನಲ್ಲಿ ಡಾಬವೋ, ಬೀಡಾಬೀಡಿ ಅಂಗಡಿಯನ್ನು ತೆರೆದರೆ ನೈಸಾದ ರಸ್ತೆಯಲ್ಲಿ ಸಾಗುವ ವಾಹನಗಳ ವೇಗಕ್ಕವು ಮಸುಕಾಗಿ ಕಾಣಿಸುತ್ತವೆ.
ಒಂದು ವಾಕ್ಯ ಹೀಗಿದೆ -'ಹೊಸ ರೋಡ್ನಲ್ಲಿ ದಿಕ್ಕೇ ತೋರುವುದಿಲ್ಲ. ಇದು ಮನುಷ್ಯರಿಗಲ್ಲ...' ಈಗಿನ ಹೈವೇಯಲ್ಲಿ ಸಾಗಲು ಅನಕ್ಷರಸ್ಥರಿಗೆ ಅಸಾಧ್ಯ. ಯಾರಲ್ಲಾದರೂ ಕೇಳೋಣವೋ ಜನಸಂಚಾರವೇ ಇಲ್ಲ. ಭದ್ರತೆ, ಜತೆಗೆ ವಾಹನಗಳ ಭರಾಟೆ. ರಸ್ತೆಯ ಬದಿಯಲ್ಲಿ ಚೂರುಪಾರು ಭೂಮಿಯಲ್ಲಿ ಏನೋ ಜೀವನ ಸಾಗಿಸೋಣ ಅಂದರೆ, ಹತ್ತಿಪ್ಪತ್ತು ಕಿಲೋಮೀಟರ್ ಸುತ್ತು ಬಳಸಿ ಬರಬೇಕಾದ ಸ್ಥಿತಿ.

'ಎಸ್ಈಝಡ್ ನಮ್ಮೂರಿಗೂ ಬಂದರೆ?,' ಇನ್ನೋರ್ವ ವಿದ್ಯಾರ್ಥಿಯ ಪ್ರಶ್ನೆ. ಹೌದಲ್ವಾ. ಯಾಕೆ ಬರಬಾರದು? ನಮ್ಮೂರು, ನಮ್ಮ ನೆಲ, ಜಲ, ಹಸಿರು ಎನ್ನುತ್ತಾ ಸಂತೋಷದಲ್ಲಿ ನಿದ್ರಿಸಿ, ಬೆಳಗ್ಗೆ ಏಳುವಾಗ ದೈತ್ಯ ಯಂತ್ರ ಮನೆಯಂಗಳದಲ್ಲಿ ಕಂಡರೂ ನೀವು ವಿರೋಧಿಸುವಂತಿಲ್ಲ. ಯಂತ್ರದ ಬಾಚುಬಾಯಿಯ ಹಲ್ಲುಗಳಿಗೆ ಸಿಗದಂತೆ ನಿಮ್ಮನ್ನು ನೀವೇ ಕಾಪಾಡಿಕೊಳ್ಳಬೇಕು.

ಈಚೆಗೆ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನಲ್ಲಿ 'ಪುಟ್ಟಕ್ಕನ ಹೈವೆ' ಪ್ರದರ್ಶನವಿತ್ತು. ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸಹಸಂಸ್ಥೆ 'ಬೆಳ್ಳಿ ಸಾಕ್ಷಿ'ಯ ಸಂಚಾಲಕ ಡಾ.ರಾಘವೇಂದ್ರ ಪ್ರಸಾದ್ರ ಆಯೋಜನೆ. ಅರಂಭಕ್ಕೆ ಸುರೇಶ್ 'ಸಿನೆಮಾ ನೋಡಲು ಜನ ಇದ್ದಾರೆ. ಆದರೆ ಸಿನೆಮಾ ಓದುವ ಜನವಿಲ್ಲ. ಓದುವ ಪ್ರಯತ್ನ ಮಾಡಿ' ಎಂದು ವಿದ್ಯಾರ್ಥಿಗಳಲ್ಲಿ ವಿನಂತಿಸಿದರು.

ಚಲನಚಿತ್ರವೆಂದರೆ ಶಾರೂಕ್ ಖಾನ್, ಅಭಿಷೇಕ್ ಬಚ್ಚನ್, ಐಶ್ವರ್ಯ ರೈ, ರಮ್ಯಾ... ಇಂತಹ ತಾರೆಯರೇ ಆವರಿಸಿದ ಮನಸ್ಸುಗಳಿಗೆ ಪುಟ್ಟಕ್ಕ ಢಾಳಾಗಿ ಕಂಡರೆ ಅದಕ್ಕೆ ವ್ಯವಸ್ಥೆಗಳು ಕಾರಣ ಹೊರತು, ಮನಸ್ಸುಗಳಲ್ಲ.
ಚಿತ್ರವನ್ನು ಒಂದಷ್ಟು ವಿದ್ಯಾರ್ಥಿಗಳು ಓದಿದ್ದರಿಂದಲೇ 'ಪುಟ್ಟಕ್ಕನ ಹೈವೇ ನಮ್ಮೂರಿಗೂ ಬಂದರೆ?' ಎಂಬ ಪ್ರಶ್ನೆಯನ್ನೂ ಮೂಡಿಸಿತ್ತು. ಅಭಿವೃದ್ಧಿಯ ಹೆಸರಿನಲ್ಲಿ ನಡೆಯುವ ಆಟವನ್ನು ಸಿನೆಮಾ ಚೆನ್ನಾಗಿ ಪ್ರತಿಬಿಂಬಿಸಿದೆ. ನಾಗತಿಹಳ್ಳಿ ಚಂದ್ರಶೇಖರ್ ಅವರ 'ಪುಟ್ಟಕ್ಕನ ಮೆಡಿಕಲ್ ಕಾಲೇಜು' ಕಥೆ ಚಿತ್ರದ ಮೂಲವಸ್ತು. 'ಸರಿಯಾಗಿ ಆರ್ಥವಾಗಬೇಕಿದ್ದರೆ ಎರಡೋ ಮೂರೋ ಸಲ ನೋಡಿ' ಎನ್ನಲು ಸುರೇಶ್ ಮರೆಯಲಿಲ್ಲ.

ಅನ್ನ ಕೊಡುವ ಕೃಷಿ ನೆಲದ ಕೂಗು ಯೋಜನೆ ತಯಾರಿಸುವ ತಂಪುಕೋಣೆಗೆ ಕೇಳಿಸದು. ಒಂದು ಕಿಲೋ ಅಕ್ಕಿಗೆ ಪರದಾಡುವ ಮಂದಿಯ ನೋವು ಅಭಿವೃದ್ಧಿ ಹರಿಕಾರರಿಗೆ ಬೇಕಿಲ್ಲ. ಕಣ್ಣೀರನ್ನು ಒರೆಸುವ, ಬದುಕಿಗೆ ಆಸರೆ ನೀಡುವ, ಬದುಕನ್ನು ಹೈರಾಣ ಮಾಡದ ಅಭಿವೃದ್ಧಿಯನ್ನು ರೈತನೇ ಸ್ವಾಗತಿಸುತ್ತಾನೆ. ಅದಕ್ಕೆ ಯಾರ ಒತ್ತಡವೂ ಬೇಡ. ರೈತ ಕೇಳುವುದಿಷ್ಟೇ - ನಮ್ಮನ್ನು ನಮ್ಮ ಪಾಡಿಗೆ ಬಿಟ್ಟುಬಿಡಿ.

ಎಸ್ಸೆಮ್ಮೆಸ್: 'ಸಿಎಂ ಸಾಹೇಬ್ರು ಚಿತ್ರ ನೋಡಿ ಮೌನವಾಗಿ ಬಿಟ್ರಂತೆ.' ವಾ.. ಈ ವಿಚಾರದಲ್ಲಿ ಅವರು ಮೌನ ವಹಿಸುವುದೇ ಲೇಸು. ಮಾತಾದರೆ ಆಣೆ-ಪ್ರಮಾಣ!

(ಜು.೨೬ರಂದು ಉದಯವಾಣಿಯಲ್ಲಿ ಪ್ರಕಟವಾದ ಬರೆಹ - "ನೆಲದ ನಾಡ" ಕಾಲಂ)

0 comments:

Post a Comment