Tuesday, July 12, 2011

ಮಾಯವಾಗಿದೆ, ಹಲಸಿನ ರುಚಿ

'ಒಂದು ಹಣ್ಣು ತಂದ್ವಿ. ದೋಸೆ, ಮುಳುಕ, ಗಟ್ಟಿ ಮಾಡಿದ್ವಿ. ಮಕ್ಕಳಿಗಂತೂ ಹೊಸ ರುಚಿ. ಖುಷಿ ಪಟ್ಟರು. ಊರಲ್ಲಿದ್ದಾಗ ಮರದಿಂದ ಬಿದ್ದು ಕೊಳೆತು ಹೋದರೂ ಬೇಡ. ಇಲ್ಲಿ ಮಾತ್ರ ಕಾರು ತೆಕ್ಕೊಂಡು ಹೋಗಿ, ದುಬಾರಿ ಹಣ ಕೊಟ್ಟು ಒಂದು ಹಲಸನ್ನು ಮನೆಗೆ ತರುವಾಗ ಏನಿಲ್ಲವೆಂದರೂ ಇಂಡಿಯಾದ ಎರಡು ಸಾವಿರ ರೂಪಾಯಿ ಮೀರಬಹುದು ಮಾರಾಯ,' ಸದ್ಯ ಲಂಡನ್ನಲ್ಲಿರುವ ಬಾಲ್ಯಸ್ನೇಹಿತ ರವಿ ದೂರವಾಣಿಯಲ್ಲಿ ಬಾಲ್ಯದ ಹಲಸಿನ ನಂಟನ್ನು ಜ್ಞಾಪಿಸಿದ.

ನನಗಿನ್ನೂ ನೆನಪಿದೆ. ಬಡತನದ ದಿವಸಗಳು. ಒಂದು ಹೊತ್ತಿನ ತುತ್ತಿಗೂ ಆಗಸ ನೋಡುವ ದಿನಗಳು. ಹಿತ್ತಿಲಲ್ಲಿದ್ದ ಹಲಸಿನ ಮರಗಳು ಫಲ ಕೊಡಲು ಶುರು ಮಾಡಿಲ್ಲ. ಅವರಿವರು ನೀಡಿದ ಹಲಸು ಅಡುಗೆ ಮನೆ ಸೇರುತ್ತಿತ್ತು. ಸೊಳೆ ತೆಗೆದು, ಬೇಯಿಸಿ ಮಾಡಿದ ಪಲ್ಯದಂತಹ ಖಾದ್ಯ 'ಚಂಗುಳಿ' ಹಸಿವನ್ನು ಇಂಗಿಸುತ್ತಿತ್ತು.

ಚಂಗುಳಿ ಬೆಳಿಗ್ಗೆ ತಯಾರಾದರೆ ಆಯಿತು - ಬೆಳಗ್ಗಿನ ಉಪಾಹಾರ ಮುಗಿಯುತ್ತದೆ, ಮಧ್ಯಾಹ್ನ ಊಟದ ಪಲ್ಯದ ಸ್ಥಾನಕ್ಕೂ ಸೈ. ಸಂಜೆ ಚಹದೊಂದಿಗೆ ಬಾಯಿ ಚಪ್ಪರಿಸಲೂ ಓಕೆ. ಮತ್ತೂ ಉಳಿದರೆ ಸ್ವಲ್ಪ ಬಿಸಿ ಮಾಡಿ ರಾತ್ರಿ ಊಟದ ವರೆಗೂ ಬರೋಬ್ಬರಿ.
ತಂದೆಯವರನ್ನು ಕಾಣಲು ಆಗಾಗ್ಗೆ ಬಂದು ಹೋಗುವ ಅತಿಥಿಗಳು ಧಾರಾಳ. ಹಾಗೆ ಬರುವಾಗಲೆಲ್ಲಾ ತರಕಾರಿ, ಹಲಸು, ಮಾವು, ಪಪ್ಪಾಯಿ.. ತರುತ್ತಿದ್ದರು. ಇದು ಗೌರವದ ಪ್ರತೀಕ. ಹಲಸಿನ ಹಣ್ಣು ಯಾರು ತರ್ತಾರೆ ಅಂತ ಕಾಯೋ ದಿವಸಗಳು ಇದ್ದವು. ಅದನ್ನು ಪೋಸ್ಟ್ಮಾರ್ಟಂ ಮಾಡಿ, ಸೊಳೆ ಬಿಡಿಸಿ, ಬಾಯೊಳಗಿಟ್ಟರೆ ಅಮೃತವೇ ಒಡಲೊಳಗೆ ಇಳಿದ ಅನುಭವ! ಶಾಲೆಗೆ ಹೋಗುವಾಗ ಬುತ್ತಿ ಪಾತ್ರ್ರೆದಲ್ಲಿದ್ದ ಹಲಸಿನ ಸೊಳೆಗಳಿಂದ ಮಧ್ಯಾಹ್ನದ ಊಟದ ತೃಪ್ತಿ.

ಆಗೆಲ್ಲಾ ಗದ್ದೆ ಬೇಸಾಯದ ಭರಾಟೆ. ಮಳೆ ಬಿದ್ದೊಡನೆ ಕೃಷಿ ಚಟುವಟಿಕೆ ಚುರುಕಾಗುತ್ತದೆ. ಆ ಹೊತ್ತಲ್ಲಿ ಸುತ್ತಲಿನ ಹಲಸಿನ ಮರಗಳಲ್ಲಿದ್ದ ಕಾಯಿಗಳೆಲ್ಲಾ ಮಾಯ! ಚಂಗುಳಿ, ದೋಸೆಯ ರೂಪದಲ್ಲಿ ಹೊಟ್ಟೆ ಗಟ್ಟಿ ಮಾಡಿಕೊಳ್ಳುತ್ತಿದ್ದವರ ಮುಖಪರಿಚಯ ಮಾಸಿಲ್ಲ. ಕೆಲವು ಉಳ್ಳವರ ಮನೆಯಟ್ಟದಲ್ಲಿ ಕ್ವಿಂಟಾಲ್ಗಟ್ಟಲೆ ಅಕ್ಕಿಯಿರುತ್ತಿತ್ತೇ ವಿನಾ, ಒಂದು ಕಿಲೋ ಅಕ್ಕಿ ಕೇಳಿದರೂ ಕೊಡರು. ಬದಲಿಗೆ ಉಪಯೋಗಕ್ಕಿಲ್ಲದ ಶುಷ್ಕ 'ಅನುಕಂಪ' ಧಾರಾಳ!

ಮಳೆ ಹೆಚ್ಚು ಬೀಳುವ ಪ್ರದೇಶದಲ್ಲಿ ತುಳುವ (ಅಂಬಲಿ) ಹಲಸಿನದ್ದೇ ಕಾರುಬಾರು. ಮಳೆಗಾಲದಲ್ಲಿ ಮರದ ಮೇಲೇರಿ ಕೊಯ್ಯಲು ಅಸಾಧ್ಯ. ಮರದ ತುದಿಯಲ್ಲಿ ಹಣ್ಣು ಕೊಳೆತು ಹೋದರೂ ಅದನ್ನು ತೊಟ್ಟು ಬಿಟ್ಟು ಕೊಡುವುದಿಲ್ಲ. 'ಕೆಳಗೂ ಬೀಳುವುದಿಲ್ಲ, ಕೊಯ್ಯಲೂ ಆಗುವುದಿಲ್ಲ. ಪಿಶಾಚಿಯಂತೆ ನೇತುಕೊಂಡಿರುತ್ತದೆ,' ಮೀಯಪದವಿನ ಡಾ.ಡಿ.ಸಿ.ಚೌಟರು ವಿನೋದಕ್ಕೆ ಹೇಳುವುದುಂಟು. ತುಳುವ ಹಣ್ಣಾಗಿ ಬಿದ್ದಾಗ ಅದರಲ್ಲಿರುವ ಬೇಳೆಗಾಗಿ ನೆರೆಕರೆ ಮಂದಿಯ ಪೈಪೋಟಿ. ಹೀಗೆ ಸಂಗ್ರಹವಾದ ಬೇಳೆ ಮಳೆಗಾಲಕ್ಕೆ ತರಕಾರಿ.

ಮನೆಯ ಹಿತ್ತಿಲಲ್ಲಿದ್ದ ಹಲಸಿನ ಮರಕ್ಕೆ ಹೆರಿಗೆಯಾಗಲು ಶುರುವಾದ ಬಳಿಕ ಹಪ್ಪಳ ಮಾಡುವ ಕೆಲಸ ಅಂಟಿಕೊಂಡಿತು. ಅಪ್ಪ ಹಲಸನ್ನು ತುಂಡು ಮಾಡಿದರೆ, ಅಮ್ಮನಿಗೆ ಸೀಳುವುದು ಕೆಲಸ. ಶಾಲೆ ಬಿಟ್ಟು ಮನೆಗೆ ಬಂದ ಕೂಡಲೇ ತಂಗಿಯೊಂದಿಗೆ ಸೊಳೆ ಬಿಡಿಸುವ ಕೆಲಸ. ಬಿಡಿಸುತ್ತಿದ್ದಂತೆ ಒಂದಷ್ಟು ಹೊಟ್ಟೆ ಸೇರಿ ಸಂಜೆಯ ಉಪಾಹಾರವೂ ಜತೆಗೆ ಮುಗಿಯುತ್ತಿತ್ತು! ಬಿಸಿಲಲ್ಲಿ ಒಣಗಿದ ಹಪ್ಪಳ, ಕೆಂಡದಲ್ಲಿ ಸುಟ್ಟು, ತೆಂಗಿನೆಣ್ಣೆಯ ಲೇಪದೊಂದಿಗೆ ಬಾಯಿ ಸೇರುವಾಗ ಎಂತಹ ಸ್ವಾದ. ಜತೆಗೆ ಬಲಿತ ತೆಂಗಿನ ಕಾಯಿ ಚೂರುಗಳು ಸೇರಿದರಂತೂ ಮುಗಿಯಿತು!

ಉಪ್ಪಿನ ನೀರಿನಲ್ಲಿ ಮುಳುಗಿಸಿಟ್ಟು ಕಾಪಿಟ್ಟ ಹಲಸಿನ ಸೊಳೆಯ (ಉಪ್ಪಾಡ್ ಪಚ್ಚಿಲ್) ಪಲ್ಯ, ಉಂಡ್ಲುಕಗಳು ಹಲಸು ಸಿಗದ ಸಮಯದಲ್ಲಿ ಬಂಧು. ಕೆಮ್ಮಣ್ಣು ಗಾಳಿಸಿ, ಅದನ್ನು ನೀರಿನಲ್ಲಿ ಕಲಸಿ, ಬೀಜವನ್ನು ಅದರಲ್ಲಿ ಹೊರಳಾಡಿಸಿ ಸಂಗ್ರಹಿಸಿದ ಬೀಜ ವರುಷಪೂರ್ತಿ ತರಕಾರಿ. ಇದನ್ನು ಸಂಗ್ರಹ ಕೋಣೆಗೆ 'ಬೇಳೆ ಉಗ್ರಾಣ' ಎಂಬ ಹೆಸರೂ ಇತ್ತು.

ಹಲಸಿನ ಬೀಜವನ್ನು ಬೇಯಿಸಿ, ಬಿಸಿಲಲ್ಲಿ ಒಣಗಿಸಿದ 'ಸಾಂತಾಣಿ' ಮಳೆಗಾಲದ ಥಂಡಿಗೆ 'ಕಟುಕುಟು' ತಿಂಡಿ. 'ಶಾಲಾ ವಿದ್ಯಾರ್ಥಿಗಳ ಜೇಬಲ್ಲಿ ಸಾಂತಾಣಿ ಇದ್ದರೆ, ವಿದ್ಯಾರ್ಥಿನಿಯರ ಕಂಪಾಸ್ ಬಾಕ್ಸ್ನಲ್ಲಿ ಹುರಿದ ಹುಣಸೇ ಹಣ್ಣಿನ ಬೀಜ ಇದ್ದೇ ಇರುತ್ತಿತ್ತು,'!

ಆಟಿ ತಿಂಗಳಲ್ಲಿ ಕೆಸುವಿನ ದಂಟು ಮತ್ತು ಹಲಸಿನ ಬೀಜ ಹಾಕಿದ ಪದಾರ್ಥ (ತೆಂಗಿನ ಕಾಯಿ ಹಾಕದ್ದು) ತಿನ್ನಲೇಬೇಕು. 'ಈ ತಿಂಗಳಲ್ಲಿ ನಮ್ಮ ದೇಹದ ಉಷ್ಣತೆ ಜಾಸ್ತಿಯಾಗುತ್ತದೆ. ಇದಕ್ಕೆ ಪ್ರತಿವಿಧಿ ಇದು. ಹಲಸಿನ ಬಹುತೇಕ ಖಾದ್ಯಕ್ಕೆ ಕೊಬ್ಬರಿ ಎಣ್ಣೆ ಬಳಕೆ ಒಳ್ಳೆಯದು' ಎನ್ನುತ್ತಾರೆ ಪಾಣಾಜೆ ವೆಂಕಟ್ರಾಮ ದೈತೋಟ. ಹಸಿದು ಹಲಸು ತಿಂದರೆ ಅದನ್ನು ಮೀರಿಸುವ ಇನ್ನೊಂದು ರುಚಿ ಹುಡುಕಿದರೂ ಸಿಗದು.

ಈಚೆಗೆ ತಿರುವನಂತಪುರದಲ್ಲಿ ಜರುಗಿದ ರಾಷ್ಟ್ರೀಯ ಮಟ್ಟದ ಹಲಸು ಮೇಳದಲ್ಲಿ ಹಲಸಿನ ಅಡುಗೆ ಪ್ರಾತ್ಯಕ್ಷಿಕೆಯಿತ್ತು. ರಸರುಚಿಗಳ ಸ್ಪರ್ಧೆಯಿತ್ತು. ಅಬ್ಬಾ.. ಎಷ್ಟೊಂದು ವೈವಿಧ್ಯಗಳು. ಬೇಳೆ, ಸೊಳೆಯಿಂದ ಮಾಡಿದ ಖಾದ್ಯಗಳು. ಇಡ್ಲಿ, ಕೇಕ್, ಚಾಕೋಲೇಟ್, ಹಲ್ವಾ, ಪುಲಾವ್.. ಒಂದೇ ಎರಡೇ. ಒಂದೆಡೆ ವೈನ್ ಕೂಡಾ ಸ್ಪರ್ಧೆಗೆ ಕುಳಿತಿತ್ತು. ಸ್ಪರ್ಧೆಯಲ್ವಾ, ಅವಕ್ಕೆಲ್ಲಾ ಅಲಂಕಾರದ ಭಾಗ್ಯ. ಒಬ್ಬರಂತೂ ತಮ್ಮ ಉತ್ಪನ್ನಕ್ಕೆ ಪ್ರಾಣಿಯ ಆಕಾರವನ್ನು ನೀಡಿದ್ದರು. ಮೂವರು ತೀರ್ಪುಗಾರರು ತಿಂದು ನೋಡಿ ಅಂಕವನ್ನು ಕೂಡಿಸಿ, ಕಳೆದು ತೀರ್ಪು ತೀಡಲು ಒದ್ದಾಡುತ್ತಿದ್ದರು. ಕಾರಣ, ಎಲ್ಲಾ ತಿಂಡಿಗಳಲ್ಲೂ ರುಚಿಯಲ್ಲಿ ಪೈಪೋಟಿ!

ಹಲಸಿನ ಬಳಕೆ ಸ್ಥಳೀಯ ಆಹಾರ ಸುರಕ್ಷೆಗೊಂದು ಕೀಲಿಕೈ. ಜತೆಗೆ ಕೃಷಿಕರ ಸುರಕ್ಷೆಯೂ ಕೂಡಾ. ಅಂದಿನ ಆಹಾರದ ಅಭದ್ರತೆ ಈಗಿಲ್ಲ. ಕಾಸು ಕೊಟ್ಟರೆ ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುತ್ತದೆ. ಐದು ರೂಪಾಯಿ ತೆತ್ತು ಸೊಳೆ ಖರೀದಿಸಿ, ಅದನ್ನು ಬಾಯಿಗಿಟ್ಟಾಗ ಎಂತಹ ರುಚಿಯಲ್ವಾ. ಕಾರಣ, ಐದು ರೂಪಾಯಿಯ ಮಹಿಮೆ! ಹಲಸಿನ ಸಂಸ್ಕರಣೆ 'ಹೇಸಿಗೆ'ಯಲ್ಲ. ಈಗ ಮೇಣ ಕೈಗೆ ತಾಗಿದರೆ ಸಾಕು, ವೈರಸ್ ಅಂಟಿದಂತೆ ಬೆಚ್ಚಿಕೊಳ್ಳುವ ಭಾವೀ ಅಮ್ಮಂದಿರು! ಹಲಸಿನ ರುಚಿಗಳನ್ನು ಫಾಸ್ಟ್ ಫುಡ್ ಗಳು ಆಕ್ರಮಿಸಿವೆ. ರುಚಿಗಳು ಅಡುಗೆ ಮನೆಯಿಂದ ಮಾಯವಾಗಿದೆ.

ಹಲಸನ್ನು ಮೌಲ್ಯವರ್ಧಿಸಿ ಕಾಪಿಡುತ್ತಿದ್ದುದು ಹಿರಿಯರ ದೂರಗಾಮಿ ದೃಷ್ಟಿ. ಆಗ ಮಾರುಕಟ್ಟೆಯಲ್ಲಿ ಅಕ್ಕಿ ಸಿಗದೇ ಇದ್ದಾಗ ಯಾರೂ ಅಧೀರರಾಗುತ್ತಿರಲಿಲ್ಲ. ಈಗ? ಅಕ್ಕಿಗೆ ತತ್ವಾರ ಬರಲಿ. ಬದುಕೇ ಭಾರವಾಗುತ್ತದೆ. ಅತಂತ್ರವಾಗುತ್ತದೆ, ಅಸ್ಥಿರವಾಗುತ್ತದೆ. ಯಾಕೆಂದರೆ ಆಹಾರ ಸುರಕ್ಷೆಯ ಪರ್ಯಾಯ ದಾರಿಗಳು ನಮ್ಮ ಮುಂದಿಲ್ಲ.

ಇಂತಹ ಸ್ಥಿತಿಯ ಅರಿವಿದ್ದ ಒಂದಷ್ಟು ಮಂದಿ ಹಲಸಿಗೆ ಮಾರುಹೋಗುತ್ತಿರುವುದು ಒಳ್ಳೆಯ ಬೆಳವಣಿಗೆ. ಕಾಲದ ಬದಲಾವಣೆ.
ಎಸ್ಸೆಮ್ಮೆಸ್: 'ವರುಷಕ್ಕೇ ನಾಲ್ಕೇ ಗ್ಯಾಸ್ ಸಿಲಿಂಡರ್,' ಕೇಂದ್ರ ಸರಕಾರದ ಯೋಚನೆ. ಹೀಗಾದರೆ ಹಲಸಿನಹಣ್ಣೇ ಗತಿ!

(ಉದಯವಾಣಿಯ ‘ಮಣ್ಣಿನ ನಾಡಿ’ಅಂಕಣದಲ್ಲಿ ಪ್ರಕಟಿತ ಬರೆಹ. ಇಂದಿನಿಂದ ೧೫ ದಿನಕ್ಕೊಮ್ಮೆ ಈ ಅಂಕಣ. ಲಿಂಕ್ : http://epaper.udayavani.com/Display.aspx?Pg=H&Edn=MN&DispDate=7/12/2011

1 comments:

PaLa said...

very nice article... enjoyed reading it :)

Post a Comment